ಮನೆಸುತ್ತ, ಅದೇ ಹಳೆಯ ಬಿದಿರು ಮೆಳೆಗಳ ತೋಪು;
ಮನೆಯೊಳಗೆ ಅಸ್ತವ್ಯಸ್ತ ಪುಸ್ತಕಗಳು.
ಈ ಬಿದಿರ ನೆರಳಲಿ ಕೂತು ದೊಡ್ಡವರ ಕವಿತೆಗಳ
ಓದುವುದು ನನಗೆ ತುಂಬಾ ಇಷ್ಟ.

ಸಂಜೆಯಲ್ಲಿ ಪಂಚತಾರೀ ವಾದ್ಯವನ್ನು ನುಡಿಸು-
ವಂಬಿಗನ ಮೋಹಕ ನೆನಪು ಕಾಡುತ್ತದೆ.
ಹಗಲೆಲ್ಲ, ನದಿ-ಸರೋವರದ ನೀರಿನ ಮೇಲೆ
ಪುಟ್ಟ ದೋಣಿಯಲಿ ಕೂತು ಬಲೆ ಬೀಸಿ ಹಾಡುತ್ತಾನೆ.

ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ
ನನ್ನ ಪ್ರೀತಿಯ ಹುಡುಗ ಹೊರಟೇ ಹೋದ
ನನ್ನ ಬಿಟ್ಟು, ನಾನಿರುವೆನೇಕಾಂಗಿ, ನದಿಯ ಸೆಳವಿನ ಮೇಲೆ
ಹೊಯ್ದಾಡುತ್ತಿರುವ ಪುಟ್ಟ ದೋಣಿಯ ಹಾಗೆ.

-ಅನಾಮಿಕ (ಥಾಯ್ ಕವಿತೆ)