ಉತ್ತರಪೂರ್ವ ದೇಶಗಳಲ್ಲಿ ಇದು ಆಗಾಗ ಉಂಟಾಗುವ ಕ್ಷಾಮ.  ನೈಸರ್ಗಿಕ ಪರಿಣಾಮಗಳಿಂದ ಉಂಟಾಗುವ ಈ ಕ್ಷಾಮದ ನಿರ್ವಹಣೆ ಬಹುಮುಖ್ಯ.  ಜಪಾನ್, ಮಯನ್ಮಾರ್‌ಗಳಂತಹ ಪೂರ್ವದೇಶಗಳಲ್ಲಿ ಈ ಕ್ಷಾಮ ಕಾಣಿಸುತ್ತಿರುತ್ತದೆ.    ದಕ್ಷಿಣಾ ಆಫ್ರಿಕಾ ಹಾಗೂ ಭಾರತದ ಅರುಣಾಚಲಪ್ರದೇಶ, ಮಿಜೋರಾಂಗಳಲ್ಲೂ ಇದು ಕಂಡುಬರುತ್ತದೆ.

ಈ ಕ್ಷಾಮವೊಂದು ಕುತೂಹಲಕಾರಿ ಹಾಗೂ ಆಶ್ಚರ್ಯಕರ ವಿಷಯ.  ಮಿಜೋ ಬೆಟ್ಟಗಳ ತುಂಬಾ ಕೇವಲ ಬಿದಿರೇ ತುಂಬಿದೆ.  ಕೇವಲ ಎರಡು ಪ್ರಭೇದಗಳು ಮಾತ್ರ ಇವೆ.  ಒಂದು ಪ್ರಭೇದವು ೩೦ ವರ್ಷಗಳಿಗೊಮ್ಮೆ ಹೂಬಿಟ್ಟು ಬೀಜವಾಗುತ್ತದೆ.  ಮತ್ತೊಂದು ೫೦ ವರ್ಷಗಳಿಗೊಮ್ಮೆ ಹೂ ಬಿಡುತ್ತದೆ.  ಹೀಗೆ ಬಿದಿರು ಹೂ ಬಿಟ್ಟಾಗಲೆಲ್ಲಾ ಕ್ವಿಂಟಾಲ್‌ಗಟ್ಟಲೆ ಬಿದಿರು ಬೀಜ ಉದುರುತ್ತದೆ.  ಅದನ್ನು ತಿನ್ನಲು ಇಲಿಗಳು.  ಆಹಾರ ಹೆಚ್ಚು ಸಿಕ್ಕಂತೆ ಇಲಿಗಳ ಸಂಖ್ಯೆಯೂ ಹೆಚ್ಚುತ್ತದೆ.  ಹೀಗೆ ವಿಪರೀತ ಪ್ರಮಾಣದಲ್ಲಿ ಹೆಚ್ಚಾದ ಇಲಿಗಳು ಮುಂದೆ ಕೃಷಿಕ್ಷೇತ್ರಕ್ಕೆ ದಾಳಿಯಿಡುತ್ತವೆ.  ಭತ್ತ, ಜೋಳ ಹೀಗೆ ಬೆಳೆದ ಬೆಳೆಗಳನ್ನೆಲ್ಲಾ ಸರ್ವಭಕ್ಷಕರಾಗಿ ತಿನ್ನುತ್ತವೆ.  ಇದರಿಂದ ಮಿಜೋಜನರ ಬದುಕು ಸಂಪೂರ್ಣ ವಿನಾಶ.  ಇಲಿಗಳನ್ನು ನಿಯಂತ್ರಿಸಲಾಗದೆ ತಾವೇ ಉಪವಾಸ ಮಾಡಬೇಕಾದ ಸ್ಥಿತಿ.  ಇಲಿಗಳಿಂದ ಬರುವ ಬೇರೆ ಬೇರೆ ರೋಗಗಳಿಗೆ ಬಲಿಯಾಗುವ ಸಂಭವ.

ಇದು ಇಂದಿನ ಕ್ಷಾಮವಲ್ಲ.  ತಲೆತಲಾಂತರಗಳಿಂದ ಬರುತ್ತಿರುವುದು.  ಅವರು ಮುಂದೆ ಯಾವಾಗ ಬರುತ್ತದೆ ಎಂಬುದನ್ನು ಊಹೆ ಮಾಡಬಲ್ಲರು.  ಹೀಗೆ ಇಸವಿ ೨೦೦೭ರಲ್ಲಿಯೂ ಇಲಿ-ಕ್ಷಾಮ ಪ್ರಾರಂಭವಾಯಿತು.  ಅದಕ್ಕೂ ಮೊದಲೇ ಮಿಜೋ ಸರ್ಕಾರ ತನ್ನ ಕ್ಷಾಮ ಪರಿಹಾರ ಕಾರ್ಯಗಳಿಗೆ ಯೋಜನೆಯನ್ನು ರೂಪಿಸತೊಡಗಿತ್ತು.  ಬಿದಿರಿನ ಹೂಗಳನ್ನು ನೋಡಿ ಯುದ್ಧದೋಪಾದಿಯಲ್ಲಿ ತನ್ನ ಕಾರ್ಯಚಟುವಟಿಕೆಗಳಿಗೆ ನಾಂದಿ ಹಾಡಿತು.  ಇಲಿಗಳ ಸಂಖ್ಯೆಯ ಹೆಚ್ಚಳ ತಡೆಯಲು ಮನೆಗಳಳ್ಲಿ ಹಾಗೂ ಭತ್ತದ ಗದ್ದೆಗಳಲ್ಲಿರುವ ಇಲಿಗಳನ್ನು ಕೊಲ್ಲಲು ಪ್ರೋತ್ಸಾಹ ನೀಡತೊಡಗಿತು.  ಒಂದು ಇಲಿಯ ಬಾಲಕ್ಕೆ ಒಂದು  ರೂಪಾಯಿ ಭತ್ಯೆ ಎಂದು ಪ್ರಚಾರ ಮಾಡಿತು.  ಹೀಗೆ ಒಂದು ವರ್ಷದೊಳಗೆ ಎಂಟು ಸಾವಿರ ಇಲಿಗಳು ನಾಮಾವಶೇಷವಾದವು.  ಇಲಿಗಳ ನಿರ್ನಾಮಕ್ಕೆ ಅಲ್ಲಿನ ಕೃಷಿ ಇಲಾಖೆಯು ದೆಹಲಿ ಹಾಗೂ ಹೈದರಾಬಾದ್‌ಗಳಿಂದ ತಜ್ಞರನ್ನು ಕರೆಸಿದರು.  ಉತ್ತರಪೂರ್ವ ಬೆಟ್ಟಗಳ ವಿಶ್ವವಿದ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರ, ಪ್ರಾಣಿಶಾಸ್ತ್ರ ಸಂಶೋಧನಾ ಕೇಂದ್ರಗಳಿಂದಲೂ ತಜ್ಞರನ್ನು ಆಹ್ವಾನಿಸಿತು.

ಸರ್ಕಾರವು ಇವರೆಲ್ಲರನ್ನೂ ಒಗ್ಗೂಡಿಸಿ ಎರಡು ನಿರ್ಣಯಗಳನ್ನು ತೆಗೆದುಕೊಂಡವು.  ಒಂದು ಇಲಿಗಳ ನಿಯಂತ್ರಣ.  ಎರಡು ಸೂಕ್ತಪ್ರಮಾಣದ ಆಹಾರಧಾನ್ಯಗಳ ಸಂಗ್ರಹ.  ಇದರಿಂದ ಒಂದೊಮ್ಮೆ ಇಲಿಗಳಿಂದ ಆಹಾರಧಾನ್ಯಗಳು ಲೂಟಿಯಾದರೂ ಅಗತ್ಯ ಬಿದ್ದವರಿಗೆ ಸಂಗ್ರಹಾಗಾರದಿಂದ ಹಂಚಲು ಸಹಕಾರಿಯಾಗುತ್ತದೆ.  ಸರ್ಕಾರದ ಈ ನಿರ್ಧಾರವು ಇತಿಹಾಸದಲ್ಲೇ ಮೊದಲ ಪೂರ್ವತಯಾರಿ ಕಾರ್ಯಕ್ರಮವೆಂದು ಸುದ್ದಿಯಾಯಿತು.  ಕಾರಣ ೧೯೫೯ರಲ್ಲಿ ಇದೇ ರೀತಿ ಕ್ಷಾಮ ಬಂದಾಗ ಸರ್ಕಾರ ಸಂಪೂರ್ಣ ಅಸಹಾಯಕತೆಯಿಂದ ಕೈಚೆಲ್ಲಿತ್ತು.

ಗೆಜ಼ೆಟಿಯರ್‌ನಲ್ಲಿ ಉಲ್ಲೇಖಿಸಿದಂತೆ; ಇಲಿಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಹೆಚ್ಚಿದೆ.  ಈಗಿನ್ನೂ ಬಿದಿರು ಹೂ ಬಿಡುತ್ತಿದೆ.  ಬೀಜಗಳೆಲ್ಲಾ ತಿಂದ ಇಲಿಗಳು ಭತ್ತದ ಗದ್ದೆಗೆ ದಾಳಿ ಮಾಡದೇ ಇರದು.  ಹೀಗಾಗಿ ಪರಿಹಾರಾರ್ಥವಾಗಿ ಕನಿಷ್ಠ ೧೫ಲಕ್ಷ ರೂಪಾಯಿಗಳ ಅಗತ್ಯ ಕೇವಲ ಮಿಜೋ ಜಿಲ್ಲೆಗೆ ಬೇಕು.  ಆಗ ಮಿಜೋರಾಂ ಅಸ್ಸಾಂನ ಒಂದು ಭಾಗವಾಗಿತ್ತು.  ಅಂದಿನ ಮುಖ್ಯಮಂತ್ರಿ ಬಿಮೋಲಪ್ರಸಾದ್ ಚಾಲಿಹ ಈ ತೀರ್ಮಾನವನ್ನು ತಿರಸ್ಕರಿಸಿದರು.  ಇದು ಅವೈಜ್ಞಾನಿಕ; ಕ್ಷಾಮವನ್ನು ಊಹಿಸಲಾಗದು.  ಅದರಲ್ಲೂ ಬಿದಿರು ಹೂ ಬಿಡುವುದಕ್ಕೂ, ಇಲಿಗಳು ಹೆಚ್ಚುವುದಕ್ಕೂ, ಕ್ಷಾಮ ಬರುವುದಕ್ಕೂ  ಯಾವುದೇ ಸಂಬಂಧವೇ ಇಲ್ಲ.  ಇದೆಲ್ಲಾ ವನವಾಸಿಗಳ ಮೂಢನಂಬಿಕೆ ಎಂದು ಸರ್ಕಾರವು ತಳ್ಳಿಹಾಕಿತು.

ಅಸ್ಸಾಂ ಸರ್ಕಾರವು ತನ್ನ ಸಮಾಜ ಹಾಗೂ ಪರಿಸರವನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿತ್ತು.  ಅದರಲ್ಲೂ ವನವಾಸಿಗಳ ನಂಬಿಕೆ ಹಾಗೂ ಅನುಭವಗಳನ್ನು ಅರಿತುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿತ್ತು.

ಮಿಜೋ ಆದಿವಾಸಿಗಳು ಮೊದಲಿನಿಂದಲೂ ಭಾರತದ ಜೊತೆ ಸೇರಲು ಸಿದ್ಧರಿರಲಿಲ್ಲ.  ಕಾರಣ ಅವರನ್ನು ಭಾರತ ತನ್ನವರೆಂದು ಪರಿಗಣಿಸಿಲ್ಲ ಎಂಬ ಆರೋಪ ಅವರದು.  ತಮಗೆ ಸಂಪೂರ್ಣ ಸ್ವಾಯತ್ತತೆ ಕೊಡಬೇಕು ಎನ್ನುವ ಶರತ್ತನ್ನು ವಿಧಿಸಿಯೇ ಅದು ಭಾರತದೊಂದಿಗೆ ಸೇರಿತ್ತು.  ಈಗ ಅಸ್ಸಾಂ ಸರ್ಕಾರದ ಈ ನಿರ್ಧಾರ ಅದಕ್ಕೊಂದು ಅಪಘಾತ ನೀಡಿತ್ತು.

ಮಿಜೋ ಆದಿವಾಸಿಗಳು ಊಹಿಸಿದಂತೆ ಕೆಲವೇ ದಿನಗಳಲ್ಲಿ ಎಲ್ಲವೂ ನಡೆದುಹೋಯಿತು.  ಬಿದಿರಿನ ಹೂ, ಬಿದಿರು ಅಕ್ಕಿ, ಇಲಿಗಳ ಸಂಖ್ಯಾಸ್ಫೋಟ, ಹೊಲಗಳಿಗೆ ದಾಳಿ, ಸಂಗ್ರಹಾಗಾರಗಳ ಧ್ವಂಸ.  ಒಟ್ಟಾರೆ ಕ್ಷಾಮ ಇದೆಲ್ಲಾ ಸರ್ಕಾರ ನೋಡ ನೋಡುತ್ತಿದ್ದಂತೆಯೇ ಸಿನಿಮೀಯವಾಗಿ ನಡೆಯಿತು.  ಆಹಾರದ ಅಭಾವದಿಂದ ಜನರು ಸಾಯತೊಡಗಿದರು.  ಸರ್ಕಾರ ಎಚ್ಚೆತ್ತು ಪರಿಹಾರಕಾರ್ಯ ಕೈಗೊಳ್ಳುವ ವೇಳೆಗೆ ಎಲ್ಲಾ ಮುಗಿದುಹೋಗಿತ್ತು.

ಆಹಾರಧಾನ್ಯಗಳನ್ನು ಕಳಿಸುವ ವ್ಯವಸ್ಥೆ ಮಾಡಲಾಯಿತು.  ಆದರೆ ಮಿಜೋ ಆದಿವಾಸಿಗಳ ಹಳ್ಳಿಗಳಿಗೆ ರಸ್ತೆಗಳೇ ಇರಲಿಲ್ಲ.  ಇರುವ ಹೆದ್ದಾರಿಯಲ್ಲಿ ಕೇವಲ ಜೀಪುಗಳು ಮಾತ್ರ ಓಡಾಡಬಲ್ಲವಾಗಿದ್ದವು.  ಹೀಗಾಗಿ ಮಿಜೋ ಹಳ್ಳಿಗಳಿಗೆ ಪರಿಹಾರಗಳು ತಲುಪಲೇ ಇಲ್ಲ.

ಆಗಲೇ ಮಿಜೋ ರಾಷ್ಟ್ರೀಯ ಕ್ಷಾಮ ವೇದಿಕೆ ಅಸ್ತಿತ್ವಕ್ಕೆ ಬಂತು.  ಜಿಲ್ಲಾ ಕೇಂದ್ರಕಛೇರಿಯಲ್ಲಿ ಗುಮಾಸ್ತನಾಗಿದ್ದ ಲಾಲ್‌ಡೆಂಗ ಎಂಬುವ ವ್ಯಕ್ತಿ ವೇದಿಕೆಯ ಮುಂದಾಳತ್ವ ವಹಿಸಿಕೊಂಡನು.  ಅತ್ಯುತ್ತಮವಾಗಿ ಇಡೀ ಅನಾಹುತದ ಪರಿಹಾರಕಾರ್ಯ ಕೈಗೊಂಡನು.

ಮಿಜೋಗಳು ಸಾಯುತ್ತಿರುವುದನ್ನು ನೋಡಿಯೂ ನೋಡದಂತಿದ್ದ ಅಸ್ಸಾಂ ಸರ್ಕಾರದ ಮೇಲೆ ಅವರೆಲ್ಲಾ ಆಕ್ರೋಶಗೊಂಡಿದ್ದರು.  ಭಾರತದ ನಿಲುವು, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಇವೆಲ್ಲಾ ಮಿಜೋಗಳನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿತು.  ಮುಂದೆ ಅದೇ ಮಿಜೋ ರಾಷ್ಟ್ರೀಯ ವೇದಿಕೆಯಾಗಿ ಬದಲಾಯಿತು.  ೧೯೬೫ರಲ್ಲಿ ರಾಜಕೀಯ ಪಕ್ಷವಾಗಿ ಮಾರ್ಪಟ್ಟಿತು.

ನಾವು ಭಾರತದೇಶವನ್ನು ನಮ್ಮದೆಂದುಕೊಂಡಿಲ್ಲ.  ಭಾರತವೂ ಸಹ ನಮ್ಮನ್ನು ತನ್ನ ಪ್ರಜೆಗಳೆಂದು ಭಾವಿಸಿಲ್ಲ.  ಹೀಗಾಗಿ ನಮಗಿದು ನಮ್ಮ ದೇಶವೆಂದು ಅನ್ನಿಸದು.  ದೇಶದ ರಾಷ್ಟ್ರೀಯ ಗೌರವಕ್ಕೆ ಅಥವಾ ಮುಂದಿನ ಪೀಳಿಗೆಗೆ ವಿನಾಶಕಾರಿಯಾಗಿರಲು ನಾವು ಸಿದ್ಧರಿಲ್ಲ.  ಮಿಜೋರಾಂನ್ನು ತನ್ನನ್ನು ತಾನೇ ಆಳಬಲ್ಲ ಪ್ರತ್ಯೇಕರಾಜ್ಯವನ್ನಾಗಿ ಪರಿಗಣಿಸಿ ನಮಗೆ ಉಸಿರಾಡಲು, ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮ್ಮದೇ ವಿದೇಶಿ ನೀತಿಯನ್ನು ಹೊಂದಲು ಅನುವು ಮಾಡಿಕೊಡಬೇಕೆಂದು ಪತ್ರ ಬರೆಯಿತು.  ೧೯೬೬ ಮಾರ್ಚ್ ಒಂದರಂದು ತಾನು ಭಾರತದಿಂದ ಸ್ವತಂತ್ರ ಎಂದು ಘೋಷಿಸಿಕೊಂಡಿತು.  ಇದು ೧೯೮೬ರವರೆಗೆ ಮುಂದುವರೆಯಿತು.  ಅನೇಕ ಹಿಂಸಾಚಾರಗಳು ನಡೆದವು.  ದೌರ್ಜನ್ಯ  ತಾಂಡವವಾಡಿತು.  ಅಂತೂ ಮಿಜೋ ರಾಷ್ಟ್ರೀಯ ವೇದಿಕೆ ಅಧಿಕಾರ ವಹಿಸಿಕೊಂಡಿತು.  ಹೀಗೆ ಮೊದಲ ಬಾರಿಗೆ ಬಂದ ಕ್ಷಾಮವನ್ನು ಸಮಗ್ರವಾಗಿ ನಿರ್ವಹಿಸುವ ಯೋಜನೆ ರೂಪಿಸಿತು.

ಬ್ರಿಟಿಷರು ಮೊದಲೇ ಗುರುತಿಸಿದ್ದರೆ?

ಈ ಪಾರಿಸರಿಕ ಪ್ರಕ್ರಿಯೆಯು ಬ್ರಿಟಿಷರಿಗೆ ಅಚ್ಚರಿಯ ವಿಷಯವಾಗಿತ್ತು.  ಬ್ರಿಟಿಷರು ಕುಕಿ ಲುಶಾಯ್ ಆದಿವಾಸಿಗಳ ಬೇಟೆಯಲ್ಲಿದ್ದರು.  ಅನೇಕ ಹಿಂಸೆ ಹಾಗೂ ರಕ್ತಪಾತದ ನಂತರ ಯುದ್ಧ ನಡೆದು ಬ್ರಿಟಿಷರು ಮಿಜೋಬೆಟ್ಟಗಳನ್ನು ಆಕ್ರಮಿಸಿಕೊಂಡರು.  ಆದಿವಾಸಿಗಳನ್ನು ಆಳಲು ತೊಡಗಿದರು.  ೧೮೬೨ರಲ್ಲಿ ಬ್ರಿಟಿಷರು ದಾಖಲಿಸುತ್ತಾರೆ; ಈ ಸಾರಿಯ ಕ್ಷಾಮದಿಂದ ಮಿಜೋಗಳು ಆಹಾರವಿಲ್ಲದೆ ಸಾಯುತ್ತಿದ್ದಾರೆ.  ಉಳಿಯಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.  ೧೮೮೧ರಲ್ಲಿ ೧೫,೦೦೦ಮಿಜೋಗಳು ಸತ್ತಿರುವ ಅಂಕಿಸಂಖ್ಯೆಗಳನ್ನೂ ದಾಖಲಿಸಿದರು.  ಇದರಿಂದ ಆಳ್ವಿಕೆಗೊಳಪಡದೇ ದೂರವಿದ್ದ ಮಿಜೋಗಳು ಸುಲಭವಾಗಿ ಬ್ರಿಟಿಷರಿಗೆ ಶರಣಾದರು.  ಮಿಜೋಗಳು ತಾವು ಸಂಗ್ರಹಿಸಿದ ಆನೆದಂತಗಳು, ಆಭರಣಗಳು ಹೀಗೆ ಏನೆಲ್ಲಾವನ್ನು ಕೇವಲ ಆಹಾರಕ್ಕಾಗಿ ಮಾರಿದರು.  ತಮ್ಮ ಬಂದೂಕುಗಳು ಹಾಗೂ ಇನ್ನಿತರ ಯುದ್ಧೋಪಕರಣಗಳನ್ನು ಸಹ ಆಹಾರಕ್ಕಾಗಿ ಅಡವಿಟ್ಟರು.  ಮುಂದೆ ಪ್ಲೇಗ್ ಹಾಗೂ ಇನ್ನಿತರ ಪೀಡೆಗಳ ಹಾವಳಿಯಿಂದಲೂ ಸಾಯತೊಡಗಿದರು.  ಇಡೀ ರಾಜ್ಯವೇ ನಿರ್ಮಾನುಷ್ಯವಾಗುತ್ತಿತ್ತು.  ಉಪ್ಪು, ತಂಬಾಕು ಅಥವಾ ಇನ್ನಾವುದೇ ವ್ಯಾಪಾರವೂ ಇರಲಿಲ್ಲ.  ಹೀಗೆ ಬ್ರಿಟಿಷರಿಗೆ ಮಿಜೋರಾಂ ಅನ್ನು ಸಂಪೂರ್ಣ ಆಕ್ರಮಿಸಿಕೊಳ್ಳಲು ಸಾಧ್ಯವಾಯಿತು.

ಅಗಾಧ ಪ್ರಮಾಣದ ಕಾಡುನಾಶದೊಂದಿಗೆ ವಿದೇಶಿ ಚಹಾ ತೋಟಗಳು ತಲೆ ಎತ್ತಿದವು.  ಹೇಗಿದ್ದರೂ ಮಿಜೋಗುಡ್ಡಗಳು ಬಿದಿರು ಹೂ ಬಿಟ್ಟು ಬೀಜ ಸುರಿಸಿ ಸತ್ತುಹೋಗಿದ್ದವು.  ಸತ್ತ ಬಿದಿರನ್ನೆಲ್ಲಾ ಬೆಂಕಿ ಹಾಕಿ ಸುಡಲಾಯಿತು.  ಬೋಳುಗುಡ್ಡ-ಫಲವತ್ತಾದ ನೆಲ. ಚಹಾತೋಟಗಳ ಆಕ್ರಮಣ ಪ್ರಾರಂಭವಾಯಿತು.  ಆದಿವಾಸಿಗಳು ಸಂಪೂರ್ಣ ಶರಣಾಗತರಾಗಿದ್ದರು.  ಅನ್ನಕ್ಕಾಗಿ ಅವರೇನು ಹೇಳಿದರೂ ಮಾಡುತ್ತಿದ್ದರು.  ೧೯೧೧-೧೨ರಲ್ಲಿ ಮತ್ತೊಂದು ಕ್ಷಾಮ ಬಂತು.

ಮೊದಲೇ ಕ್ರಿಶ್ಚಿಯನ್ ಮಿಷನರಿಗಳು ಮಿಜೋರಾಂಗೆ ಬಂದಿದ್ದರು.  ವಿದೇಶಿಗರ ಪೋಷಣೆಯಲ್ಲಿ ಮಿಜೋಗಳು ಸುರಕ್ಷಿತವಾಗಿ ಉಳಿದರು.  ಯುರೋಪಿನ ಚಹಾ ಪ್ಲಾಂಟರ್‌ಗಳು ಕ್ಷಾಮದ ಪರಿಣಾಮಗಳನ್ನು ಮೆಟ್ಟಿ ನಿಂತರು.  ಅಷ್ಟೇ ಅಲ್ಲಾ, ತಮ್ಮ ಚಹಾ ತೋಟಗಳನ್ನು ಇನ್ನಷ್ಟು ವಿಸ್ತರಿಸಿದರು.

ಪ್ರತಿ ಕ್ಷಾಮವು ಮಿಜೋಗಳ ಸರ್ವನಾಶಕ್ಕೆ ಕಾರಣವಾದರೆ ಯುರೋಪಿಯನ್ನರ, ಕ್ರಿಶ್ಚಿಯನ್ ಮಿಷನರಿಗಳ ವಿಸ್ತರಣೆಗೆ ಕಾರಣವಾಗುತ್ತಿತ್ತು.  ಬಿದಿರು ಸತ್ತ ನೆಲವೆಲ್ಲಾ ಚಹಾತೋಟಗಳು.  ಮಿಷನರಿಗಳ ಆಶ್ರಯ ತಾಣಗಳೂ ಆಗುತ್ತಿದ್ದವು.  [ಆಧಾರ; ಸುಹಾಸ್ ಚಟರ್ಚಿ. ೧೯೮೫-೯೬ ಇತಿಹಾಸ].   ಆದಿವಾಸಿಗಳು ಪ್ರತಿ ಸಾರಿಯೂ ಕ್ಷಾಮದ ವೇಳೆಯನ್ನು ಸರಿಯಾಗಿ ಊಹಿಸುತ್ತಿದ್ದಾರೆ ಎಂಬುದನ್ನು ಬ್ರಿಟಿಷರು ಕಂಡುಕೊಂಡರು.  ಅವರು ಬಿದಿರಿನೊಂದಿಗೆ ಬದುಕುವವರು.  ಅವರಿಗೆ ಬಿದಿರಿನ ಬದುಕು ತಿಳಿಯದ್ದೇನಲ್ಲ.  ಅವರ ಜ್ಞಾವನ್ನು ಬ್ರಿಟಿಷರು ದಾಖಲಿಸತೊಡಗಿದರು.  ಮಿಜೋ ಬಿದಿರಿನಲ್ಲಿ ಎರಡು ಪ್ರಭೇದಗಳಿವೆ.  ಒಂದು ಮಾವ್ [Melocarma bamboo soidef] ಮತ್ತೊಂದು ಥಿಂಗ್ [Bambusa tulda] ಇವುಗಳಿಗೊಂದು ವಂಶಾಭಿವೃದ್ಧಿ ಚಕ್ರವಿದೆ.  ಇವು ಪ್ರತಿ ೩೦ ಹಾಗೂ ೫೦ ವರ್ಷಗಳಿಗೊಮ್ಮೆ ಹೂಬಿಟ್ಟು ಬೀಜ ಸುರಿಸಿ ಸಾಯುತ್ತವೆ.  ಕ್ಷಾಮವನ್ನು ಮಿಜೋಗಳೂ ಟಾಮ್ ಎನ್ನುತ್ತಾರೆ.  ಮಾವ್ ಪ್ರಭೇದವು ಹೂಬಿಟ್ಟರೆ ಮಾವ್‌ಟಾಮ್.  ಥಿಂಗ್ ಪ್ರಭೇದ ಹೂಬಿಟ್ಟರೆ ಥಿಂಗ್‌ಟಾಮ್ ಎನ್ನುತ್ತಾರೆ. ಹೀಗೆ ಅವರದೇ ಒಂದು ಕ್ಷಾಮದ ಕ್ಯಾಲೆಂಡರನ್ನು ರೂಪಿಸಿದರು ಹಾಗೂ ಮೊದಲೇ ಕ್ಷಾಮ ಎದುರಿಸುವ ಮಾವ್ಟಾಮ್ : ೧೮೬೧೬೨             ಥಿಂಗ್ ಟಾಮ್; ೧೮೮೧೮೨; ೧೯೧೧-೧೨ ; ೧೯೨೯-೩೦; ೧೯೫೯-೬೦; ೧೯೭೭-೭೮ ; ೨೦೦೭-೦೮ ಊಹೆ; ೨೦೧೮-೧೯ ಯೋಜನೆಯನ್ನು ಸಿದ್ಧಪಡಿಸಿಕೊಂಡರು.

೧೯೧೨ರಲ್ಲಿ ಮಿಜೋ ಬೆಟ್ಟಗಳು, ಚಿನ್‌ಬೆಟ್ಟಗಳು, ಚಿತ್ತಗಾಂಗ್ ಬೆಟ್ಟಗಳಲ್ಲಿ ಮಾವ್‌ತಾಂಗ್ ಬಂತು.  ಅಂದಿನ ಕಣ್ಣಾರೆ ನೋಡಿ ಬರೆದ ಬ್ರಿಟಿಷ್ ದಾಖಲಾತಿ ಹೀಗಿದೆ.

ಚಿತ್ತಗಾಂಗ್ ಬೆಟ್ಟವೆಲ್ಲಾ ಬಿದಿರು ಹೂವಿನಿಂದ ಕಂಗೊಳಿಸುತ್ತಿತ್ತು.  ಕಾಡಿನ ಇಲಿಗಳ ಸಂಖ್ಯೆ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿತ್ತು.  ನವೆಂಬರ್-ಡಿಸೆಂಬರ್‌ನ ಬೆಳೆಯೆಲ್ಲಾ ಇಲಿಗಳ ದಾಳಿಗೆ ಸಿಕ್ಕು ಸರ್ವನಾಶವಾಯಿತು.  ಲುಶಾಯಿಬೆಟ್ಟದ ಪ್ರಾಂತ್ಯವಂತೂ ಇಲಿಗಳ ಆಳ್ವಿಕೆಗೆ ಒಳಪಟ್ಟಿತ್ತು.  ಅವರಿಗೆ ಎಷ್ಟು ಭತ್ತ ನೀಡಿದರೂ ಸಾಕಾಗದು ಎನ್ನುವ ಪರಿಸ್ಥಿತಿ.

ಕಾಡು ಯಾಮ್ ಹಾಗೂ ಸಾಗೋಪಾಮ್ ಗಡ್ಡೆಗಳೇ ಮಿಜೋಗಳ ಆಹಾರ.  ಸಾಗೋಪಾಮ್ ಕೆಲವೇ ಪ್ರದೇಶಗಳಲ್ಲಿ ಬೆಳೆಯುತ್ತದೆ.  ಯಾಮ್‌ನ್ನು ಒಮ್ಮೆ ಕಿತ್ತಮೇಲೆ ಚಳಿಗಾಲದವರೆಗೆ ಉಳಿಯದು.  ಕೆಲವು ತಿಂಗಳುಗಳ ಕಾಲ ನಮಗೆಲ್ಲಾ ಕಾತುರ ಹೆಚ್ಚಾಗಿತ್ತು.  ಇಲಿಗಳು ಬೆಳೆಗಳನ್ನೊಂದೇ ಅಲ್ಲ, ಏನನ್ನು ಬೇಕಾದರೂ ತಿನ್ನುತ್ತಿದ್ದವು.  ಎಲ್ಲಿ ಬೇಕಾದರೂ ದಾಳಿ ಇಡುತ್ತಿದ್ದವು.  ಹಸಿವಿನಿಂದ ಸತ್ತ ಆದಿವಾಸಿಗಳನ್ನು ಮಣ್ಣು ಮಾಡಿದರೆ ಮರುದಿನ ಗುಂಡಿಯಲ್ಲಿ ಶವವೇ ಇರುತ್ತಿರಲಿಲ್ಲ.  ಹೀಗಿರುವಾಗ ಅವರು ಮುಂದಿನ ಬೆಳೆಯನ್ನು ಬೆಳೆಯುವುದಾದರೂ ಹೇಗೆ?  ಮಳೆ ಬಂದು ಭೂಮಿ ಹಸುರಾದರೂ ಕೃಷಿ ಮಾಡಲು ಜನರೇ ಇರುತ್ತಿರಲಿಲ್ಲ.  ಇದ್ದರೂ ಮತ್ತೆ ಇಲಿಗಳು ದಾಳಿ ಮಾಡದು ಎಂದು ಹೇಗೆ ಹೇಳಲು ಸಾಧ್ಯ?  ಮತ್ತೆ ಬಿತ್ತಲು ಬೀಜಗಳೆಲ್ಲಿಂದ ಬರಲು ಸಾಧ್ಯ?  ಹೊಟ್ಟೆಗಿಲ್ಲದವರು ದುಡಿಯಲು ಹೇಗೆ ಸಾಧ್ಯ?

ಮಿಜೋಗಳು ಪರಂಪರಾಗತವಾಗಿ ಇಲಿ ತಿನ್ನುವವರು.  ಹಿಡಿದ ಇಲಿಗಳನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದು ಪದ್ಧತಿ.  ಈ ಮಾವ್‌ಟಾಮ್‌ನಲ್ಲಿ ಬೇಕಾದಷ್ಟು ಇಲಿಗಳು.  ಮಿಜೋಗಳೂ ತಮ್ಮ ಹೊಲಗಳಲ್ಲಿ ಇಲಿಬೋನುಗಳನ್ನು ಸಿದ್ಧಪಡಿಸಿಕೊಂಡರು.   ಒಬ್ಬೊಬ್ಬ ರೈತನೂ ರಾತ್ರಿ ಕಳೆಯುವುದರಲ್ಲಿ ೫೦೦ ಇಲಿಗಳನ್ನು ಹಿಡಿದಿದ್ದನು.  ಕುಟುಂಬಗಳು ಎಷ್ಟು ತಿನ್ನಲು ಸಾಧ್ಯ.  ಕೇವಲ ಅದನ್ನೊಂದೇ ತಿಂದರೆ ಜೀರ್ಣವಾಗಬೇಕಲ್ಲ.  ಅಕ್ಕಿ ಇಲ್ಲದ ಕೊರತೆಯನ್ನು ಇದು ನೀಗಿಸಲು ಸಾಧ್ಯವಾಗಲಿಲ್ಲ.  ಕೇವಲ ಇಲಿಯನ್ನೊಂದೇ ತಿನ್ನುತ್ತಾ ಇರಲು ಆಗದು ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.  ಕೆಲವರು ಉಳಿದ ಧಾನ್ಯಗಳು-ಕಾಳುಗಳನ್ನು ಇಲಿಗಳಿಂದ ರಕ್ಷಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದರು.  ಅದರೆ ಅವುಗಳ ದಾಳಿಯನ್ನು ನಿಗ್ರಹಿಸಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ.

ಸಾಗುಪಾಮ್‌ಗಳನ್ನು ಕಾಡಿನಲ್ಲಿ ಸಂಗ್ರಹಿಸಿ ತರುವುದು.  ಅದನ್ನು ಕುಟ್ಟಿ ಪುಡಿ ಮಾಡಿ ಒಣಗಿಸಿಕೊಳ್ಳುವುದು.  ಪುಡಿಯನ್ನು ನೀರಿನಲ್ಲಿ ಬೆರೆಸಿ ಹಿಟ್ಟು ಮಾಡಿಕೊಂಡು ಒಂದು ಅಗಲ ಎಲೆಗೆ ಹಚ್ಚುವುದು.  ಅದನ್ನು ಬೇಯಿಸಿದಾಗ ಅದು ಅಂಟುಅಂಟಾದ ಹಲ್ವಾ ತರಹದ ಆಹಾರವಾಗಿರುತ್ತದೆ.

ಕೆಲವರು ಕಾಡುಯಾಮ್ ತಿನ್ನುತ್ತಿದ್ದರು.  ಇದೊಂದು ಬಳ್ಳಿ.  ಮೇಲ್ಭಾಗ ತಿನ್ನಲಾಗದು.  ಅಡಿಯಲ್ಲಿ ಉದ್ದನೆಯ ಗಡ್ಡೆಯಿರುತ್ತದೆ.  ಅದನ್ನು ಬೇಯಿಸಿ ತಿನ್ನುತ್ತಾರೆ.  ಆಲೂಗಡ್ಡೆಯ ರುಚಿ.  ವಿಪರೀತ ಪ್ರಮಾಣದ ಪೌಷ್ಠಿಕಾಂಶವಿದೆ.  ಈ ಯಾಮ್‌ಗಡ್ಡೆಯು ನೆಲದಲ್ಲಿ ನೇರವಾಗಿ ಉದ್ದಕ್ಕೆ ಬೆಳೆದಿರುತ್ತದೆ.  ಅತ್ಯಂತ ಆಳವಾದ ಗುಂಡಿ ತೋಡಿ ಇದನ್ನು ತೆಗೆಯಬೇಕು.  ಹೀಗೆ ತೆಗೆಯುವಾಗ ಏನೆಲ್ಲಾ ಅನಾಹುತಗಳಾಗುವುದೂ ಇದೆ.  ಗಡ್ಡೆ ಕೀಳುವ ಏಕೈಕ ಯೋಚನೆಯಲ್ಲಿ ಕಾಡಿನ ಯಾವುದೋ ಕ್ರೂರಪ್ರಾಣಿಗಳಿಗೆ ಬಲಿಯಾದವರೂ ಇದ್ದಾರೆ.  ಗಡ್ಡೆ ಕೀಳುವುದನ್ನು ನೋಡುತ್ತಾ ನಿಂತ ತಾಯಿಮಗುವಿಬ್ಬರು ಒಮ್ಮೆ ಯಾವುದೋ ಕೀಟಗಳ ದಾಳಿಗೆ ತುತ್ತಾಗಿ ಅದೇ ಗುಂಡಿಯಲ್ಲೇ ಹುಗಿದದ್ದೂ ಇದೆ.  ಒಮ್ಮೆ ಓರ್ವ ಯುವಕ ಗಡ್ಡೆಗಾಗಿ ಗುಂಡಿ ತೆಗೆದು ತೆಗೆದು ತಾನು ಬಂದ ದಾರಿಯನ್ನೇ ಮುಚ್ಚಿ ಹಾಕಿ ಸೋತುಹೋದದ್ದು.  ಹೀಗೆ ಮನಕಲಕುವ ನೂರಾರು ಘಟನೆಗಳನ್ನು ಬ್ರಿಟಿಷರು ದಾಖಲಿಸಿದ್ದಾರೆ.

ಮಯನ್ಮಾರ್‌ನಲ್ಲಿದ್ದ ಬ್ರಿಟಿಷ್ ಸರ್ಕಾರವು ಇಲ್ಲಿನ ಆದಿವಾಸಿಗಳಿಗೆ ೧೮,೦೦೦ ಚೀಲ ಅಕ್ಕಿಯನ್ನು ಆಮದು ಮಾಡಿಕೊಂಡು ಅವರಿಗೆ ಸಾಲದ ರೂಪದಲ್ಲಿ ನೀಡಿತು.

ಏನಿದು ಇಲಿಬಿದಿರು ಸಂಬಂಧ

ಬಿದಿರು ಹೂಬಿಟ್ಟು ಬೀಜವಾದಾಗಲೆಲ್ಲಾ ಇಲಿಗಳ ಸಂಖ್ಯೆ ಊಹಿಸಲಾಗದಷ್ಟು ಪ್ರಮಾಣದಲ್ಲಿ ಏರುವುದು ಹೇಗೆ?  ಕೇವಲ ಬಿದಿರು ಬೀಜಗಳನ್ನು ತಿಂದು ಅದರ ಸಂತಾನಾಭಿವೃದ್ಧಿ ಶಕ್ತಿ ಹೆಚ್ಚುವುದೇ?  ಅಥವಾ ಪ್ರಕೃತಿಯ ಅರ್ಥವಾಗದ ಲೆಖ್ಖಾಚಾರವೇ?  ಬಿದಿರಿನ ಬೀಜ ಬೇಕಾದಷ್ಟು ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಇಷ್ಟೆಲ್ಲಾ ಇಲಿಸಂಖ್ಯೆ ಹೆಚ್ಚುತ್ತದೆಯೇ?  ಪರೋಕ್ಷವಾಗಿ ಬಿದಿರು ತಳಿಯನ್ನು ಇವು ಉಳಿಸುತ್ತವೆಯೇ?  ಅಥವಾ ನಾಶಕ್ಕೆ              ಕಾರಣವಾಗುತ್ತದೆಯೇ?  ಒಮ್ಮೆ ಹೂಬಿಟ್ಟು ಬೀಜ ಉದುರಿಸಿ ಸತ್ತುಹೋದ ಬಿದಿರಿನ ಸಮೂಹ ಮತ್ತೆ ಏಳುವುದು ಹೇU?  ಇಲಿಗಳು ಬೀಜಗಳನ್ನೆಲ್ಲಾ ತಿಂದರೂ ಅಲ್ಲಿ ಇಷ್ಟೆಲ್ಲಾ ಉಳಿದಿರುತ್ತದೆಯೇ ಅಥವಾ ಬಿದಿರಿನ ಅತಿ ಆಕ್ರಮಣವನ್ನು ನಿಲ್ಲಿಸಲು-ನಿಯಂತ್ರಿಸಲು ಪ್ರಕೃತಿಯೇ ಇಲಿಗಳನ್ನೂ ಹೆಚ್ಚಿಸುವುದೇ?

ರೆವರೆಂಡ್ ಲೋರಿಯನ್ ಬರೆಯುತ್ತಾರೆ. ಯಾವುದೇ ಮಾನವಶಕ್ತಿಯಿಂದಲೂ ಇಲಿಗಳ ದಾಳಿಯನ್ನು ತಡೆದು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.  ಇಸವಿ ೧೯೨೪ರಲ್ಲಿ ತಮ್ಮದೇ ನೇತೃತ್ವದಲ್ಲಿ ೫೦ಸಾವಿರ ಇಲಿಗಳನ್ನು ಕೊಂದರೂ ಬೆಳೆ ಉಳಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ವಿವರಿಸುತ್ತಾರೆ.

ಬಿದಿರಿನ ಬೀಜಗಳಲ್ಲಿ ಶೇಕಡಾ ೫೦ ಪಿಷ್ಠ, ಶೇಕಡಾ ೧೨ರಷ್ಟು ಪ್ರೋಟೀನ್ ಹಾಗೂ ವಿಟಮಿನ್ ಎ ಇದೆ.  ಇದು ಇಲಿಗಳ ಸಂತಾನಶಕ್ತಿಯನ್ನು ಹೆಚ್ಚಿಸುತ್ತದೆ.  ಇಲಿಗಳಲ್ಲಿ ಬಿದಿರು ಬೀಜ ತಿಂದು ಹಾರ್ಮೋನ್ ವ್ಯತ್ಯಾಸಗಳಾಗುತ್ತವೆ.  ಅವಧಿಗೆ ಮುಂಚೆಯೇ ಪ್ರಬುದ್ಧವಾಗುತ್ತವೆ ಎನ್ನುವ ವಿವರಣೆ ಷಿಲ್ಲಾಂಗ್ ವಿಶ್ವವಿದ್ಯಾನಿಲಯ ಪ್ರಾಣಿಶಾಸ್ತ್ರಜ್ಞ ಎ.ಕೆ. ಗೂಸ್ ನೀಡುತ್ತಾರೆ.  ಆರ್ಥಿಕ ತಜ್ಞ ಸುಬ್ರತೋ ಬ್ಯಾನರ್ಜಿ ಹೇಳುತ್ತಾರೆ. :ಆಹಾರ ಸರಬರಾಜು ಹೆಚ್ಚಿದಾಗ ಇಲಿಗಳ ಸಂಖ್ಯೆ ಸಹಜವಾಗಿ ಹೆಚ್ಚುತ್ತದೆ.  ಹಾಗೇ ಆಹಾರವಿರದ ಜಾಗದಿಂದ ಇಲಿಗಳು ಆಹಾರವಿರುಲ್ಲಿ ವಲಸೆ ಬರುತ್ತವೆ.  ಪರಿಸರ ತಜ್ಞರಾದ ಗ್ರೀನ್‌ಗ್ರಾಹಂ ಪ್ರಕಾರ ಇಲಿಗಳು ಬಿಲಗಳಲ್ಲಿ ವಾಸಿಸುತ್ತವೆ.  ವಿಪರೀತ ಬೀಜಗಳು ಸಿಕ್ಕ ಕಾರಣ ಎಲ್ಲವೂ ಬಿಲದಿಂದ ಹೊರಬರುತ್ತವೆ.  ಅಷ್ಟೇ ಹೊರತು ಇಲಿಸಂಖ್ಯೆಯ ಸ್ಫೋಟ ಖಂಡಿತಾ ಆಗಿಲ್ಲ.  ಮಿಜೋರಾಂ ಪರಿಸ್ಥಿತಿ ಬೇರೆಡೆ ಬಿದಿರು ಹೂಬಿಟ್ಟು ಬೀಜವಾದಾಗ ಏಕೆ ಆಗದು ಎನ್ನುವ ಪ್ರಶ್ನೆಯನ್ನೂ ಹಾಕುತ್ತಾರೆ.  ಇಲ್ಲಿ ಸಹಜವಾಗಿ ಇಲಿಗಳು ಹೆಚ್ಚಿವೆ.  ಅವೆಲ್ಲಾ ಹೊರಬಂದು ಒಟ್ಟಾಗಿ ಕಾಣುವ ಕಾರಣ ಸಂಖ್ಯಾಸ್ಫೋಟವಾದಂತೆ ಕಾಣಿಸುತ್ತದೆ.

ಪರಿಹಾರ ಹಾಗೂ ಪುನರ್ವಸತಿ ಸರಿಯಾಗಿ ಆದರೆ ಎಲ್ಲವೂ ಸರಿಯಾದಂತೆ ಎಂಬುದು ಸರ್ಕಾರದ ನಿಲುವು.

ಕ್ಷಾಮ ಪರಿಹಾರ

ಆದಾಗಲೇ ಆದಿವಾಸಿಗಳು ಸಾಕಷ್ಟು ಬಾರಿ ಕ್ಷಾವನ್ನು ಅನುಭವಿಸಿದ್ದರು.  ಅವರಿಗೆ ಬೇರೆಯವರ ಸಹಾಯ ತೆಗೆದುಕೊಳ್ಳಬೇಕೆಂಬ ಅರಿವು ಇರಲಿಲ್ಲ.  ಮೊದಲಬಾರಿ ಬ್ರಿಟಿಷರು ಅವರಿಗೆ ಸಹಾಯ ಮಾಡಿದರು.  ಅವರನ್ನು ಗುಡ್ಡಪ್ರದೇಶಗಳೀಂದ ಬಯಲು ಪ್ರದೇಶಕ್ಕೆ ಕರೆತಂದರು.  ಆದಿವಾಸಿಗಳು ತಮ್ಮ ಕಾಡನ್ನು ಬಿಟ್ಟು ಬರುವವರೇ ಅಲ್ಲ.  ಕೆಲವರು ವ್ಯಾಪಾರಕ್ಕೋ, ಬೇಟಯಾಡಲು ಮಾತ್ರ ಬರುತ್ತಿದ್ದರು.  ಈಗ ಕಷ್ಟವು ಅವರನ್ನು ಬಯಲಿಗೆ ತಳ್ಳಿತ್ತು.  ಮೊದಲ ಹಂತದಲ್ಲಿ ಪೂರ್ವವಲಯದ ೮೦ ಕುಟುಂಬಗಳು ಜಲ್ನಶೆರ್ರಾ ಮೂಲಕ ಧಾಲೇಶ್ವರಿ ನದಿ ತೀರಕ್ಕೆ ಬಂದರು.  ಆಮೇಲೆ ಪಶ್ಚಿಮವಲಯದವರೂ ಬಂದರು.  ಇದು ಅಲ್ಲಿರುವ ಚಹಾತೋಟದ ಕೆಲಸಗಾರರಿಗೆ ತಲೆಬಿಸಿಯಾಯಿತು.  ಆದರೆ ಬ್ರಿಟಿಷರು ಇಬ್ಬರನ್ನೂ ಸಮನ್ವಯಗೊಳಿಸಿದರು.  ಕ್ಷಾಮ ಕಳೆಯುವವರೆಗೆ ಆದಿವಾಸಿಗಳಿಗೆ ಆಹಾರದ ಕೊರತೆ ತೀವ್ರವಾಗಿತ್ತು.  ಕೂಲಿಗೆ ಸಿದ್ಧವಾದರು.  ತಮ್ಮ ಬಳಿಯಿರುವ ಅರಣ್ಯ ಉತ್ಪನ್ನಗಳು, ದಂತ, ಶ್ರೀಗಂಧ ಮುಂತಾದ ಅಮೂಲ್ಯವಸ್ತುಗಳನ್ನು ಮಾರಿದರು.  ಬ್ರಿಟಿಷರು ಅದಕ್ಕಾಗಿ ಅರಣ್ಯ ತನಿಖಾಗೇಟ್‌ಗಳಲ್ಲಿ ತಪಾಸಣೆ ಮಾಡುವಿಕೆ, ತೆರಿಗೆ ವಿಧಿಸುವಿಕೆಗಳನ್ನು ನಿಲ್ಲಿಸಿದರು.  ಮರಗಳ ಕಡಿತಲೆ ಮಾಡುವುದು, ಸಾಗಾಣಿಕೆ ಕೆಲಸಗಳನ್ನು ಅವರಿಂದ ಮಾಡಿಸತೊಡಗಿದರು.  ಪರಿಹಾರ ಕಾರ್ಯಕ್ಕಾಗಿ ರಸ್ತೆಗಳ ನಿರ್ಮಾಣ ಮಾಡಲಾಯಿತು.  ರೈಲುಮಾರ್ಗವನ್ನೂ ನಿರ್ಮಿಸಿದರು.  ಹೀಗೆ ಬ್ರಿಟಿಷ್ ಆಡಳಿತ ತಮ್ಮ ಮಿಷನರಿಗಳಿಗೆ ಆದಿವಾಸಿಗಳ ಅಂಗಳದವರೆಗೆ ಪ್ರವೇಶ ಸಿಗುವಂತೆ ಮಾಡಿತು.  ಕಾಡಿನ ಮರಗಳು ರೈಲು ಹತ್ತಿ ವಿದೇಶ ಸೇರತೊಡಗಿದವು.

೧೮೮೧ರಲ್ಲಿ ಕೇವಲ ೧೮ಸಾವಿರ ಚೀಲ ಅಕ್ಕಿ, ಎರಡು ಸಾವಿರ ಚೀಲ ಭತ್ತವನ್ನು ಪರಿಹಾರಕ್ಕೆ ಬಳಸಲಾಗಿತ್ತು.  ೨,೨೪೦ರೂಪಾಯಿಗಳು ಒಟ್ಟು ಖರ್ಚು.  ಅದರಲ್ಲಿ ೧,೧೦೦ ರೂಪಾಯಿಗಳು ಅಕ್ಕಿ ಹಾಗೂ ಭತ್ತಕ್ಕಾದರೆ ೧,೦೪೦ರೂಪಾಯಿಗಳು ಸಾಗಾಣಿಕೆಗೆ. ಉಳಿದ ನೂರು ರೂಪಾಯಿ ಇತರೆ ಖರ್ಚು.  ಮಿಷನರಿಗಳು ಗಂಜಿಕೇಂದ್ರ ನಡೆಸುತ್ತಿದ್ದರು.  ಖಾಸಗಿ ವ್ಯಾಪಾರಿಗಳು ಮಿಜೋರಾಂನ ಟಿಪಾಯಿಮುಖ ಹಾಗೂ ಚಾಂಗ್‌ಸಿಲ್‌ನಲ್ಲಿ ಅಕ್ಕಿ ಅಂಗಡಿ ಪ್ರಾರಂಭಿಸಿದರು.  ಆದರೆ ಆದಿವಾಸಿಗಳು ಕೊಳ್ಳುವ ಶಕ್ತಿ ಇಲ್ಲದೇ ಅಲ್ಲಿಗೂ ದಾಳಿ ಮಾಡುತ್ತಿದ್ದರು.  ಅದನ್ನು ತಪ್ಪಿಸಲು ಪೋಲೀಸ್ ರಕ್ಷಣೆ ನೀಡಲಾಯಿತು.  ಬ್ರಿಟಿಷರೇ ಟಿಪಾಯಿಮುಖ್ ಹಾಗೂ ಗುಮಾರ್‌ಮುಖ್‌ಗಳಲ್ಲಿ ಅಕ್ಕಿ ಅಂಗಡಿ ತೆರೆದರು.  ಕ್ಷಾಮ ಪ್ರದೇಶಗಳಿಗೆ ವೈದ್ಯರು, ಅಧಿಕಾರಿಗಳು ಭೇಟಿ ನೀಡಿದರು.  ೧೯೧೧-೧೨ರ ಕ್ಷಾಮದಲ್ಲಿ ಡಬ್ಲ್ಯೂ.ಎನ್. ಕೆನ್ನಡಿ ಎನ್ನುವ ದಯಾಳು ಕ್ಷಾಮ ಪರಿಹಾರಕ್ಕಾಗಿ ೮೦ಸಾವಿರ ರೂಪಾಯಿಗಳನ್ನು ಬ್ರಿಟಿಷ್ ಸರ್ಕಾರದಿಂದ ಸಾಲವಾಗಿ ಪಡೆದರು.  ಹೀಗೆ ಸೂಕ್ತ ನಿರ್ವಹಣೆಯ ಮೂಲಕ ಕ್ಷಾಮದ ತೀವ್ರತೆಯನ್ನು ಕಡಿಮೆ ಮಾಡುವ ಪ್ರಯತ್ನ ಬ್ರಿಟಿಷ್ ಸರ್ಕಾರದ್ದಾಗಿತ್ತು.

ಕ್ಷಾಮಕ್ಕೆ ಕಾರಣ ಇಲಿಗಳ ಸಂಖ್ಯಾಸ್ಫೋಟ ಎಂಬುದು ತಿಳಿದ ಮೇಲೆ ಅವುಗಳ ನಿಗ್ರಹಕ್ಕೆ ಉಪಾಯಗಳನ್ನು ಹುಡುಕತೊಡಗಿದರು.  ಅದಕ್ಕಾಗಿ ಫ್ರಾನ್ಸ್‌ನಿಂದ ವಿಶೇಷ ಬೋನುಗಳನ್ನು ತರಿಸಲಾಯಿತು.  ಸ್ಥಳೀಯ ವೈದ್ಯರೊಬ್ಬರು ಹೊಸರೀತಿಯ ಬೋನನ್ನು ಅಭಿವೃದ್ಧಿಪಡಿಸಿದರು.  ಬಲೆಗಳ ಬಳಕೆ.  ಕಲ್ಲುಬೋನು ಹೀಗೆ ಅನೇಕ ತಂತ್ರಗಳ ಬಳಕೆ.  ದಿನಾಲೂ ೫೦೦ಇಲಿಗಳನ್ನು ಹಿಡಿದರೂ ಇಲಿಗಳ ನಿಯಂತ್ರಣ ಮಾಡಲಾಗಲಿಲ್ಲ.

ಆಹಾರ ತುಂಬಿದ ಬುಟ್ಟಿಗಳಿಗೆ ಗಟ್ಟಿಯಾದ ಮುಚ್ಚಳ ಮಾಡುವುದು ಹಾಗೂ ಇಲಿಗಳು ಬುಟ್ಟಿಗಳ ಬಳಿ ಬಾರದಂತೆ ಅದಕ್ಕೆ ಗಂಟೆ, ಲೊಡಗಗಳನ್ನು ಕಟ್ಟಿ ದೊಡ್ಡ ಶಬ್ದ ಬರುವಂತೆ ಮಾಡುವ ಉಪಾಯ ಕೆಲವು ದಿನ ನಡೆಯಿತು.  ಹಸಿದ ಇಲಿಗಳು ಗಂಟೆಗೆ ಹೆದರುವುದನ್ನು ಬಿಟ್ಟವು.  ಆದಿವಾಸಿಗಳು ದೀರ್ಘಕಾಲ ಯಾವ ಆಹಾರಪದಾರ್ಥಗಳನ್ನೂ ಸಂಗ್ರಹಿಸುವುದಿಲ್ಲ.  ಅವರ ಆರ್ಥಿಕ ಯೋಚನೆ ಅಂದಿನ ದುಡಿಮೆ ಅಂದಿಗೆ.  ಅಂದಿನ ಆಹಾರ ಅಂದಿಗೆ ಎಂಬುದು ಮಾತ್ರ.  ಆದರೂ ಆಹಾರ ಸಂಗ್ರಹ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು.  ಅದೂ ಪ್ರಯೋಜನವಾಗಲಿಲ್ಲ.  ದೆಮಗಿರಿಯಲ್ಲಿ ಅವರಿಗೆ ಕೆಲಸ ನೀಡಲಾಯಿತು.  ಕೂಲಿಯಾಗಿ ಅಕ್ಕಿ ಇನ್ನಿತರ ಆಹಾರಪದಾರ್ಥಗಳನ್ನೇ ನೀಡಲಾಗುತ್ತಿತ್ತು.  ಹೀಗೆ ಬ್ರಿಟಿಷರು ಎಡೆಬಿಡದೇ ಮಾಡಿದ ಪರಿಹಾರಕಾರ್ಯಗಳು ಆದಿವಾಸಿಗಳ ಮನಸ್ಸಿನಲ್ಲಿ ಅವರಿಗೊಂದು ಖಾಯಂ ಗೌರವಸ್ಥಾನ ಸಿಗುವಂತೆ ಮಾಡಿತು.  ಅವರೆಲ್ಲಾ ಕ್ರಿಶ್ಚಿಯನ್ ಧರ್ಮವನ್ನು ಒಪ್ಪಿಕೊಳ್ಳತೊಡಗಿದರು.

ಆದರೂ ಅನೇಕ ಆದಿವಾಸಿಗಳು ಬ್ರಿಟಿಷರೊಂದಿಗೆ ಯುದ್ಧ ಮಾಡುತ್ತಿದ್ದರು.  ಆಹಾರಕ್ಕಾಗಿ ದಾಳಿ ಮಾಡುವುದು, ಅಪಹರಣ ಇವೆಲ್ಲಾ ನಡೆಯುತ್ತಿತ್ತು.  ಅವರ ಭಯವೇನೆಂದರೆ ಬ್ರಿಟಿಷರು ತಮ್ಮ ನೆಲವನ್ನೆಲ್ಲಾ ಆಕ್ರಮಿಸಿ ತಮ್ಮದಾಗಿಸಿಕೊಳ್ಳುತ್ತಾರೆ ಹಾಗೂ ತಮ್ಮ ಕುಲವನ್ನು ನಿರ್ನಾಮ ಮಾಡುತ್ತಾರೆ ಎಂಬುದಾಗಿತ್ತು ಹಾಗೂ ಅದು ನಿಜವೂ ಆಗಿತ್ತು.

ಆದಿವಾಸಿಗಳ ಈ ಹೇಳಿಕೆಯು ಅಲ್ಲಿ ಇಂದಿಗೂ ಪ್ರಸ್ತುತ;  ಈ ಜನ ನಮ್ಮಂತಿಲ್ಲ.  ಆಡುಗಳಂತೆ ಬಿಳಿ.  ಆದರೆ ಕ್ರೂರಿಗಳು.  ಮೈಕಾಣಿಸದಂತೆ ಕಾಲಿನಿಂದ ತಲೆಯವರೆಗೆ ಬಟ್ಟೆ ಧರಿಸುತ್ತಾರೆ.  ಬೆಟ್ಟ ಹತ್ತಲಾಗದು, ಅರೆಬೆಂದವರು.

ಬ್ರಿಟಿಷರಿಗೆ ಮಿಜೋಕಾಡಿನ ರಹಸ್ಯ ಕೊನೆಗೂ ತಿಳಿಯಲಿಲ್ಲ.  ಅವರ ಆಡಳಿತದಲ್ಲಿ ಇನ್ನೂ ಮೂರು ಕ್ಷಾಮ ಬಂತು.  ಅವರು ಪರಿಹಾರ ಕಾರ್ಯ ಏರ್ಪಡಿಸುವುದರ ಮೂಲಕ ಆದಿವಾಸಿಗಳ ಮನಸ್ಸನ್ನು ಗೆದ್ದರು.  ಸತ್ತ ಬಿದಿರಿನ ಕುಲವನ್ನು ಸರ್ವನಾಶ ಮಾಡಿದರು.  ಮತ್ತೆ ಆ ಜಾಗದಲ್ಲಿ ಬಿದಿರು ಏಳದಂತೆ ಚಹಾತೋಟಗಳನ್ನು ನಿರ್ಮಿಸಿದರು.  ರೈಲುಮಾರ್ಗ ನಿರ್ಮಿಸಿ ಆದಿವಾಸಿಗಳ ಕೈಯಿಂದಲೇ ದೈತ್ಯಮರಗಳನ್ನು ಕಡಿಸಿ ಸಾಗಿಸಿದರು.  ಒಂದೆಡೆ ಆದಿವಾಸಿಗಳಿಗೆ ಹತ್ತಿರವಾಗುತ್ತಾ ಸಾಬ್‌ಪಾ, ಮಿರಾಂಗ್‌ತೋಪಾ, ಮಿಕಾಂತ್‌ತೋಪಾ [ಬಿಳಿತಂದೆ, ಪೋಷಕ] ಎಂದೆಲ್ಲಾ ಕರೆಸಿಕೊಂಡರು.  ಲೆವಿನ್ ಎನ್ನುವ ಅಧಿಕಾರಿಗೆ ಥಾಂಗ್ಲಿಯಾನ [ಗುರೂಜಿ] ಎಂಬ ಹೆಸರನ್ನು ಇಟ್ಟು ತಮ್ಮವನನ್ನಾಗಿ ಮಾಡಿಕೊಂಡರು.  ಅವರ ಭಾಷೆ, ಸಂಸ್ಕೃತಿಗಳನ್ನು ಕಲಿತ ಬ್ರಿಟಿಷರು ಅವರ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಭಾಗವಹಿಸಿದರು.  ಕೊನೆಗೆ ಅವರ ಸಾಮಾಜಿಕ ಬದುಕಿನಲ್ಲೂ ಸೇರಿಕೊಂಡರು.  ಹೀಗೆ ಮಿಜೋ ಆದಿವಾಸಿಗಳ ಬಣ್ಣವೇ ಬದಲಾಯಿತು.  ಅವರ ಮತ್ತು ಕಾಡಿನ ಸಂಬಂಧ ದೂರಾಗುತ್ತಾ ಬಂತು.  ಸ್ವತಂತ್ರಜೀವಿಗಳು ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಳ್ಳತೊಡಗಿದರು.  ಭಾರತ ಸ್ವಾತಂತ್ರ್ಯ ಪಡೆದಾಗ ಇವರು ತಮ್ಮನ್ನು ಬ್ರಿಟಿಷರೇ ಆಳಲಿ ಎಂದು ಅಪೇಕ್ಷಿಸಿದರು.

ಉಪಸಂಹಾರ

ನಮ್ಮನ್ನು ರಕ್ಷಿಸಿದ ಬಿಳಿಚರ್ಮದ ಗುರುಗಳೇ
ಮತ್ತೊಮ್ಮೆ ನಮ್ಮ ನೆಲಕ್ಕೆ ಬನ್ನಿ.
ಬಡವರನ್ನು ಪೊರೆವ ದೊರೆಗಳೇ, ನಮ್ಮ ಈ ಭೂಮಿಯನ್ನ
ಮತ್ತೆ ತಮ್ಮ ಪಾದದಡಿಯಲ್ಲಿ ಹಾಸಲು ನಾವು ಸಿದ್ಧರಿದ್ದೇವೆ.
[ಇದೊಂದು ಮಿಜೋ ಭಾಷೆಯ ಕವನದ ರೂಪಾಂತರ]

ಭಾರತ ಸ್ವಾತಂತ್ರ್ಯವಾದ ನಮತರ ೧೯೫೮ರಲ್ಲಿ ಮತ್ತೆ ಮಿಜೋರಾಂನಲ್ಲಿ ಕ್ಷಾಮ ಬಂತು.  ಆಗ ಏನಾಯಿತು ಎಂಬುದನ್ನು ಪ್ರಾರಂಭದಲ್ಲೇ ವಿವರಿಸಲಾಗಿದೆ.  ಪರಾವಲಂಬಿತನದ ಸುಖದಲ್ಲಿ ಮೈಮರೆತ ಆದಿವಾಸಿಗಳು ತಮ್ಮದೇ ಆಡಳಿತ, ಪ್ರಜಾಪ್ರಭುತ್ವ-ಎಂಬ ಪರಿಕಲ್ಪನೆಗೆ ಒಗ್ಗಿಕೊಳ್ಳಲಿಲ್ಲ.  ಅದಕ್ಕೆ ತಕ್ಕಂತೆ ಅಸ್ಸಾಂ ಸರ್ಕಾರ, ಕೇಂದ್ರ ಸರ್ಕಾರದ ನಿರ್ಲಕ್ಷ್ಯವು ಅಲ್ಲಿ ಇಂದಿಗೂ ನುಂಗಲಾರದ ಕಡುಬಾಗಿದೆ.

ಪರಿಸರ ತಜ್ಞ ಅನಿಲ್ ಅಗರ್‌ವಾಲ್ ಬರೆಯುತ್ತಾರೆ.  ಅಲ್ಲೀಗ ಹೂಬಿಟ್ಟು, ಬೀಜ ಉದುರಿಸಿದ ಬಿದಿರನ್ನು ಕಡಿಯುವವರಿಲ್ಲ.  ಹೀಗಾಗಿ ಇಲಿಗಳು ತಿಂದು ಉಳಿದ ಬೀಜಗಳು ಮೊಳಕೆಯೊಡೆಯುತ್ತಿವೆ.  ತಾಯಿ ಬಿದಿರಿನ ಸಮುದಾಯಗಳು ಮೊಳಕೆಯೊಡೆದ ಸಸಿಗಳನ್ನು ರಕ್ಷಿಸುತ್ತಿವೆ.  ತಾವು ಕೊಳೆಯುತ್ತಾ ಅವುಗಳಿಗೆ ಆಹಾರ ಒದಗಿಸುತ್ತಿವೆ.  ಮತ್ತೆ ಬಿದಿರಿನ ಸಂಕುಲ ಮೇಲೇಳಲು ಸಹಾಯವಾಗುತ್ತಿವೆ.  ಮಿಜೋ ಬೆಟ್ಟಗಳಲ್ಲಿ ಮತ್ತೆ ಬಿದಿರಿನ ಲಕ್ಷೆಪಲಕ್ಷ ಕುಟುಂಬಗಳು ಮೇಲೇಳಲು ತಾಯಿಬಿದಿರಿನ ಸಮುದಾಯ ಅಗತ್ಯ.  ಅರಣ್ಯಾಧಿಕಾರಿಗಳು ಬ್ರಿಟಿಷರ ಕಾಲದ ನೀತಿಗಳನ್ನು ಅನುಸರಿಸುವುದನ್ನು ಬಿಟ್ಟರೆ ಮತ್ತೆ ಬಿದಿರಿನ ಸಂತತಿ ಏಳುತ್ತದೆ.  ಆದರೆ ಸತ್ತ ಬಿದಿರು ಬೆಂಕಿಗೆ ಸಿಲುಕಿ ಕಾಡಿನ ಬೆಂಕಿ ಹರಡದಂತೆ ರಕ್ಷಣೆ ನೀಡಬೇಕಾದ್ದು ಅತ್ಯಗತ್ಯ.  ಬಿದಿರು ಕಾಡಿನಲ್ಲಿದ್ದರೆ ಸುಮಾರು ೪೦ ಜಾತಿಯ ಇತರ ಸಸ್ಯಗಳಿಗೆ ಪೋಷಣೆ ನೀಡುತ್ತದೆ.  ಮಣ್ಣಿನ ಸವಕಳಿಯನ್ನು ತಪ್ಪಿಸಿ ಇಳಿಜಾರಿನ ಬೆಟ್ಟಗಳು ಸದಾ ಫಲವತ್ತಾಗಿರುವಂತೆ ನೋಡಿಕೊಳ್ಳುತ್ತದೆ.  ಮುಂದೆಯೂ ಕ್ಷಾಮ ಪರಿಹಾರದೊಂದಿಗೆ ಬಿದಿರಿನ ಸಂತತಿಯ ಉಳಿವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಯೋಜನೆ ರೂಪಿಸಬೇಕಾದ್ದು ಅರಣ್ಯ ಇಲಾಖೆ, ಭೂಸರ್ವೆ ಇಲಾಖೆ, ಬಿದಿರು ಸಂಶೋಧನಾ ವಿಭಾಗ, ಕೇಂದ್ರ ಜೀವಿವೈವಿಧ್ಯ ಸಂಸ್ಥೆಗಳ ಕೆಲಸವಾಗಿದೆ.

ಮಾಹಿತಿ: ಸಜಲ್ ನಾಗ್