ತಿನ್ನುವ ಆಹಾರ ವಿಷವಾದಗ ಮಾನವ ಕುಲ ಅವನಿತಿ ಹೊಂದುವುದು ಸಾಮಾನ್ಯ. ನಾವು ಭೂಮಿ ಮೇಲೆ ಗಗನಯಾತ್ರಿಗಳಾಗಿ ಬದುಕುತ್ತಿದ್ದೆವೆ. ಗಾಳಿ, ನೀರು, ಮಣ್ಣು ಹಾಗು ಆಹಾರ ವಿಷವನ್ನಾಗಿ ಮಾರ್ಪಾಡು ಮಾಡುತ್ತಿದ್ದೆವೆ. ಬದುಕನ್ನು ಯಾಂತ್ರಿಕವಾಗಿ ಮಾಡಿಕೊಳ್ಳುತ್ತದ್ದೆವೆ. ಬಳಸುವ ಅನೇಕ ವಸ್ತುಗಳು ವಿಷದಿಂದ ಕೂಡಿದೆ. ಅವುಗಳಲ್ಲಿ ಪ್ಲ್ಯಾಸ್ಟಿಕ್ ಸಹ ಒಂದು. ಪ್ಲ್ಯಾಸ್ಟಿಕ್ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುವುದನ್ನು ವಿವರಿಸಲಾಗಿದೆ.

ಬಳಕೆಬಿಸ್ಫೆನಾಲ್ – ಎ ಒಂದು ಜೈವಿಕ ಸಂಯುಕ್ತ ವಸ್ತು. ಇದನ್ನು ಸಾಮಾನ್ಯವಾಗಿ ಬಿ.ಪಿ.ಎ (BPA) ಎಂದು ಕರೆಯುತ್ತಾರೆ. ಬಿಸ್ಫೆನಾಲ್ – ಎ ಯನ್ನು ಪ್ರಪ್ರಥಮ ಬಾರಿಗೆ ೧೮೯೧ರಲ್ಲಿ ರಷ್ಯಾದ ರಸಾಯನಿಕ ವಿಜ್ಞಾನಿ ಎ.ಪಿ.ಡಿಯನಿನ್ ಪ್ರಪ್ರಂಚಕ್ಕೆ ಪರಿಚಯಿಸಿದರು. ಇದನ್ನು ಪಾಲಿಕಾರ್ಬೋನೆಟೆಡ್ ಪ್ಲ್ಯಾಸ್ಟಿಕ್ ಹಾಗು ಇಪಾಕ್ಸಿ ರಸಾಯನಿಕ ರಾಳವನ್ನು ತಯಾರಿಸಲು ಬಳಸುತ್ತಾರೆ. ಬಿಸ್ಫೆನಾಲ್ – ಎ ರಸಾಯನಿಕವು ಈಸ್ಟ್ರಜೆನಿಕ (ಮದಜೆನಕ)ವೆಂದು ಪರಿಚಯವಿತ್ತು. ೨೦೦೮ರಲ್ಲಿ ಬಿಸ್ಫೆನಾಲ್ – ಎ ಬಳಕೆ ಮತ್ತು ಅದರ ಆರೋಗ್ಯದ ಮೇಲೆ ಆಗು ಪರಿಣಾಮಗಳನ್ನು ಎಲ್ಲಾ ಮಾದ್ಯಮಗಳು ವರದಿ ಮಾಡಿದ್ದವು. ೨೦೧೦ರಲ್ಲಿ ಅಮೇರಿಕದ ಅಂತರಾಷ್ಟ್ರೀಯ ಸಂಸ್ಥೆಯ ವರದಿಯಲ್ಲಿ ಗಾಬರಿ ಮೂಡುವ ವಿಷಯಗಳನ್ನು ವರದಿಮಾಡಿತು. ಭ್ರೂಣ, ಶಿಶು ಹಾಗು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗಂಡು ಲಕ್ಷಣಗಳು ರೂಪಾಂತರ ಹೊಂದಿ ಹೆಣ್ಣು ಲಕ್ಷಣಗಳಾಗಿ ಪರಿವರ್ತನೆ ಆಗುತ್ತದೆ ಎಂದು ವರದಿ ಹೇಳುತ್ತದೆ. ಅಮೇರಿಕದ ಅಂತರಾಷ್ಟ್ರೀಯ ಸಂಸ್ಥೆಯು ಇಲಿಗಳ ಮೇಲೆ ಪ್ರಯೋಗ ಮಾಡಿದಾಗ ಈ ರೀತಿಯ ಮಾರ್ಪಾಡು ಹೊಂದಿದ್ದು ಕಂಡುಬಂದಿದೆ. ಇದರಿಂದಾಗಿ ಸೆಪ್ಟಂಬರ್ ೨೦೧೦ರಲ್ಲಿ ಕೆನಡಾ ದೇಶವು ಬಿಸ್ಫೆನಾಲ್ – ಎ ವಿಷ ವಸ್ತುವೆಂದು ಘೋಷಿಸಿತು. ಅದಲ್ಲದೇ ಮಕ್ಕಳು ಕುಡಿಯುವ ಹಾಲು ಬಾಟಲುಗಲ್ಲಿ ಬಿಸ್ಫೆನಾಲ್ – ಎ ಬಳಕೆಯನ್ನು ನೀಷೇದಿಸಿದೆ.

ಬಿಸ್ಫೆನಾಲ್-ಎ ಯನ್ನು ಮುಖ್ಯವಾಗಿ ಪ್ಲ್ಯಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ೧೯೫೭ರಿಂದಲೂ ಬಿಸ್ಫೆನಾಲ್ – ಎ ವಾಣಿಜ್ಯಕವಾಗಿ ಬಳಕೆಯಲ್ಲಿದೆ. ಪಾರದರ್ಶಕವಾದ ಹಾಗೂ ಬಹುತೇಕವಾಗಿ ಒಡೆಯದ ಪ್ಲ್ಯಾಸ್ಟಿಕ್‌ನ್ನು ನೀರಿನ ಬಾಟಲು, ಸಿಡಿ/ಡಿವಿಡಿಗಳೂ, ಮನೆ ಬಳಕೆಯ ಸಾಮಾಗ್ರಿಗಳು, ಕ್ರೀಡಾ ಸಾಮಾಗ್ರಿಗಳು, ವೈದಕೀಯ ಹಾಗು ದಂತ ಉಪಕರಣಗಳು, ಕಣ್ಣಿನ ಗ್ಲಾಸ್ ಲೆನ್ಸಗಳು, ನೀರಿನ ಪೈಪುಗಳು, ಶೇಕರಣಾ ಸಾಮಗ್ರಿಗಳನ್ನು ಒಳಗೊಂಡಂತೆ ಹಲವಾರು ಸಾಮಾನ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಿಸ್ಫೆನಾಲ್-ಎ ಬಳಸುತ್ತಾರೆ.

ಬಿಸ್ಫೆನಾಲ್-ಎ ಯನ್ನು ಹೊಂದಿರುವ ಇಪಾಕ್ಸಿ ರಸಾಯನಿಕ ರಾಳಗಳನ್ನು ಬಹುತೇಕವಾಗಿ ಆಹಾರ ಹಾಗು ಪಾನೀಯ ಕ್ಯಾನುಗಳ ಒಳಭಾಗದ ಲೇಪನವಾಗಿ ಬಳಸತ್ತಾರೆ. ಈ ಹಿಂದೆ ಬಿಸ್ಫೆನಾಲ್-ಎ ಯನ್ನು ಶೀಲಿಂದ್ರನಾಶಕವಾಗಿ ಬಳಸಲಾಗುತ್ತಿತ್ತು.

ಪರಿಣಾಮಗಳು

ಹಲವು ಅಧ್ಯಯನಗಳ ಪ್ರಕಾರ ಬಿಸ್ಫೆನಾಲ್-ಎ ಯನ್ನು ಮಾನವ ಕುಲಕ್ಕೆ ಕಂಟಕವೆಂದು ಹಣೆಪಟ್ಟಿ ಕಟ್ಟಲಾಗಿದೆ. ಇದರ ಬಳಕೆಯಿಂದ ಮುಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಂಚಿತವಾಗಿ ಮೈನೆರೆಯುವ ಬಗ್ಗೆ ಹಾಗು ಸ್ತನ ಗ್ರಂಥಿಗಳ ಮೇಲೆ ಗಾಡ ಪರಿಣಾಮ ಬೀರುತ್ತದೆ ಎಂದು ಅಮೇರಿಕದ ನ್ಯಾಷನಲ್ ಇನ್ಸಿಸ್ಟಿಟ್ಟೂಟ್ ಆಫ್ ಹೆಲ್ತ್ ವರದಿ ಹೇಳುತ್ತದೆ

ಹಲವು ಸಂಶೋಧನಾ ವರದಿಯ ಪ್ರಕಾರ ಬಿಸ್ಫೆನಾಲ್-ಎ ಯನ್ನು ಧೀರ್ಘ ಕಾಲದವರೆಗೂ ಬಳಸಿದರೆ ಸ್ಥೂಲಕಾಯ ಹೆಚ್ಚಾಗಬಹುದು ಎಂದು ಹೇಳಿದೆ. ಈ ಅಂಶವು ಸಾರ್ವಜನಿಕ ವಲಯದಲ್ಲಿ ಹಲವಾರು ಚರ್ಚೆಗೆ ಒಳಪಟ್ಟಿದೆ.

ಅಮೇರಿಕದ ನ್ಯಾಷನಲ್ ಇನ್ಸಿಸ್ಟಿಟ್ಟೂಟ್ ಆಫ್ ಹೆಲ್ತ್ ವರದಿಯ ಪ್ರಕಾರ ಭ್ರೂಣ, ಹಸುಳುಯ ಬೆಳೆವಣಿಗೆ ಹಾಗು ಅದರ ನಡವಳಿಕೆ ಮೇಲೆ ಬಿಸ್ಫೆನಾಲ್-ಎನ ಪರಿಣಾಮಗಳ ಬಗ್ಗೆ “ಸ್ವಲ್ಪ ಮಟ್ಟಗಿನ ಕಳವಳ”ವಿದೆ ಎದು ನಿರ್ಧರಿಸಲಾಗಿತು.

೨೦೦೨ರ ವರದಿಯ ಪ್ರಕಾರ ಬಿಸ್ಫೆನಾಲ್-ಎ ರಸಾಯನಿಕ ಅಂಶವು ನರಮಂಡಲದ ಕೆಲಸವನ್ನು ಮೊಟಕುಗೊಳಿಸುತ್ತದೆ. ಇದು ತನ್ನ ಬಹು ಮಾರ್ಗಗಳ ಮೂಲಕ ನರಮಂಡಲದ ಚಟುವಟಿಕೆಯನ್ನು ನಿಯಂತ್ರಿಸಬಹುದು ಅಥವಾ ಬದಲಿಸಬಹುದು. ಹಲವು ಬಾರಿ ಬಿಸ್ಫೆನಾಲ್-ಎ ಯನ್ನು ಇಲಿಗಳಿಗೆ ತಿನ್ನಿಸಿ ಪ್ರಯೋಗ ಮಾಡಲಾಯಿತು. ಈ ಪ್ರಯೋಗದಿಂದ ಹಲವು ಗಾಬರಿ ವಿಷಯಗಳು ಹೊರಬಂದವು. ಮಿದುಳಿನ ರಚನೆ, ಚಟುವಟಿಕೆ ಹಾಗು ನಡವಳಿಕೆ ಮೇಲೆ ನಿರಂತರವಾದ ಪರಿಣಾಮ ಬೀರಬಹುದು ಎಂದು ಪ್ರಯೋಗದ ವರದಿ ಹೇಳಿದೆ.

ಬಿಸ್ಫೆನಾಲ್-ಎ ಗೆ ಶಿಶುವು ಒಡ್ಡಿಕೊಂಡಾಗ ಅದು, ಲೈಂಗಿಕವಾಗಿ ದ್ವಿರೂಪಿ ಮೆದುಳು ರಚನೆಯ ಮೇಲೆ ಗಾಡ ಪರಿಣಾಮ ಬೀರಬಹುದು ಎಂದು ವರದಿ ಹೇಳುತ್ತದೆ.

ಬಿಸ್ಫೆನಾಲ್-ಎ ಯನ್ನು ಅಧಿಕವಾಗಿ ಮಹಿಳೆ ಸೇವಿಸಿದ್ದಲ್ಲಿ ಸ್ತನಗಳ ಆಕಾರ ಮಾರ್ಪಾಡಿಸುವುದರ ಜೋತೆಗೆ ಸ್ತನ ಕ್ಯಾನ್ಸರ್ ಬರುವ ಸಂಭವಗಳು ಹೆಚ್ಚಾಗಿ ಇರುತ್ತದೆ ಎಂದು ವರದಿ ಹೇಳುತ್ತದೆ.

ಆದಷ್ಟೂ ಪ್ಲ್ಯಾಸ್ಟಿಕ್‌ಯನ್ನು ಕಡಿಮೆ ಬಳಸೋಣ ಮುಂದಿನ ದಿನಗಳನ್ನು ನೆಮ್ಮದಿಯಿಂದ ಬದುಕುವ ಕಲೆಯನ್ನು ಬೆಳೆಸೋಣ. ಪರಿಸರವನ್ನು ಪ್ಲ್ಯಾಸ್ಟಿಕ್ ಮುಕ್ತ ಗೊಳಿಸಿ ಮಣ್ಣಿನ ಅರೋಗ್ಯವನ್ನು ಕಾಪಾಡೋಣ. ಪ್ಲ್ಯಾಸ್ಟಿಕ್‌ಗೆ ಧಿಕ್ಕರಿಸಿ, ಸ್ವಾಭಾವಿಕ ವಸ್ತುಗಳನ್ನು ಬಳಸೋಣ, ಸುಂದರ ಪರಿಸರವನ್ನು ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನಿಡೋಣ.