ಸುಮಾರು ಒಂದು ಶತಮಾನದ ಹಿಂದಿನ ಸಂಗತಿ. ಮದರಾಸಿನ ಸಮುದ್ರ ತೀರದ ಮರಳಿನ ಮೇಲೆ ಪ್ರತಿದಿನ ಸಂಜೆ ಜನ ಕಿಕ್ಕಿರಿದು ನರೆಯುತ್ತಿದ್ದರು. ಆಗ ಧ್ವನಿವರ್ಧಕಗಳಿರಲಿಲ್ಲ. ಅಲ್ಲಿ ಒಬ್ಬರು ಎಲ್ಲರಿಗೂ ಕೇಳಿಸುವಂತೆ ದೊಡ್ಡದನಿಯಲ್ಲಿ ರಾಷ್ಟ್ರೀಯ ಶಿಕ್ಷಣದ ಬಗ್ಗೆ ಭಾಷಣ ಮಾಡುತ್ತಿದ್ದರು.

“ರಾಷ್ಟ್ರ ಎಂದರೆ ಏನು? ರಾಷ್ಟ್ರವೆಂದರೆ ಅನೇಕ ವ್ಯಕ್ತಿಗಳ ಕೂಟವಲ್ಲ. ಭಾಷಣ ಕೇಳಲು ಬರುವ ಜನ, ಅಥವಾ ವಿಮಾನವನ್ನು ನೋಡಲು ಬರುವ ಜನ ಒಂದು ರಾಷ್ಟ್ರವಲ್ಲ. ಒಂದು ಭೂಭಾಗದ ಜನಕ್ಕೆ “ನಾವೆಲ್ಲ ಒಂದು” ಎನ್ನಿಸುವ, ಅವರನ್ನು ಒಂದುಗೂಡಿಸುವ ವೈಶಿಷ್ಟ್ಯಗಳೇ ರಾಷ್ಟ್ರೀಯತ್ವ. ಆ ವೈಶಿಷ್ಟ್ಯಗಳೇ ನಮ್ಮನ್ನು ಇನ್ನೊಬ್ಬರಿಂದ ಪ್ರತ್ಯೇಕ ಮಾಡಿ ತೋರಿಸಬಲ್ಲವು.”

“ನಮ್ಮ ದೇಶದಲ್ಲಿ ಬ್ರಿಟಿಷ್‌ಸರಕಾರ ಆರಂಭಿಸಿದ ಶಿಕ್ಷಣ ರಾಷ್ಟ್ರೀಯ ಶಿಕ್ಷಣವೇ? ಅಲ್ಲ. ಏಕೆಂದರೆ ಆ ಶಿಕ್ಷಣ ನಮ್ಮಲ್ಲಿ ರಾಷ್ಟ್ರೀಯ ದೃಷ್ಟಿಯನ್ನು ಬೆಳೆಸಲು ಸಮರ್ಥವಾಗಿಲ್ಲ. ಅವನಿಗೆ ಹಾಗೆ ಮನಸ್ಸಿದ್ದರೂ ಅಂಥ ಶಿಕ್ಷಣ ಕೊಡಲು ಮಾನಸಿಕ ತರಬೇತಿ ಇಲ್ಲ. ಇಂಗ್ಲಿಷರು ರಾಮಾಯಣದ ಒಂದೆರಡು ಶ್ಲೋಕಗಳನ್ನೋ, ವೇದಾಂತರ ಸೂತ್ರಗಳನ್ನೋ ಭಾಷಾಂತರ ಮಾಡಿ ತಜ್ಞರು ಎಂದು ಹೇಳಿಸಿಕೊಳ್ಳಬಹುದು. ಆದರೆ ನಮ್ಮ ಸಂಸ್ಕೃತಿಯ ಆತ್ಮ ಏನು ಎಂಬುದನ್ನು ಅವರು ಅರಿಯಲಾರರು.”

ಹೀಗೆ ಭಾಷಣ ಮಾಡುತ್ತಿದ್ದವರು ಬಿಪಿನ್‌ಚಂದ್ರಪಾಲ್‌ಅವರು.

ಗಾಂಧೀಜಿ ಅವರು ಸ್ವರಾಜ್ಯ ಎಂಬ ಶಬ್ದವನ್ನು ಬಳಕೆಗೆ ತರುವ ಮೊದಲೇ ಸ್ವರಾಜ್ಯ ಪಡೆಯುವ ಬಗ್ಗೆ ಜನಮನದಲ್ಲಿ ಕಿಡಿ ಹೊತ್ತಿಸಿದವರು ಅವರು. ಗಾಂಧೀಜಿಯವರು ಅನುಸರಿಸಿದ ಬಹಿಷ್ಕಾರ ತಂತ್ರವನ್ನು ಬಹಳ ಮುಂಚಿತವಾಗಿಯೇ ಸಂಘಟಿಸಿದವರು ಅವರು. ಭಾರತದ ಇತಿಹಾಸದಲ್ಲಿ ಲಾಲಾ ಲಜಪತರಾಯ್, ಬಾಲ ಗಂಗಾಧರ ತಿಲಕ್‌ಮತ್ತು ಬಿಪಿನ್‌ಚಂದ್ರಪಾಲ್‌ಅವರು ಲಾಲಾ, ಬಾಲ್‌, ಪಾಲ್‌ಎಂದೇ ಪ್ರಸಿದ್ಧರಾಗಿದ್ದಾರೆ.

ತಂದೆತಾಯಿಯರು

ಬಿಪಿನ್‌ಚಂದ್ರಪಾಲರು ಅಂದು ಬಂಗಾಲಕ್ಕೆ ಸೇರಿದ್ದ ಸಿಲ್ಹೆಟ್‌ಜಿಲ್ಲೆಯ ಪೊಯ್ಲ ಎಂಬ ಹಳ್ಳಿಯಲ್ಲಿ ೧೮೫೮ನೆಯ ನವೆಂಬರ್ ಏಳರಂದು ಹುಟ್ಟಿದರು. ಅವರ ತಂದೆ ರಾಮಚಂದ್ರ ಪಾಲರು ಆತ್ಮಸಾಕ್ಷಿಯಾಗಿ ನಡೆಯುತ್ತಿದ್ದರು. ತಾಯಿ ಅನ್ನಪೂರ್ಣೆ. ಪಾಲರಲ್ಲಿ ಕಂಡು ಬರುವ ಅನೇಕ ಸದ್ಗುಣಗಳಲ್ಲಿ ತಾಯಿ ತಂದೆಯರಿಂದ ಬಂದ ಬಳುವಳಿಯೂ ಸೇರಿದೆ.

ಬಿಪಿನ್‌ಚಂದ್ರರ ತಂದೆ ರಾಮಚಂದ್ರ ಪಾಲರು ಪರ್ಶಿಯನ್‌ಭಾಷಾ ಪಂಡಿತರು. ತಂದೆ ತಕ್ಕಷ್ಟು ನೆಮ್ಮದಿಯಾಗಿದ್ದವರು. ಅವರು ಯಾವ ಆಸೆಗೂ ಬಲಿ ಬೀಳುವವರಲ್ಲವೆಂದು ಮೇಲಧಿಕಾರಿಗಳಿಗೆ ತಿಳಿದಿತ್ತು. ಆದುದರಿಂದ ವಿವಾದಗಳನ್ನು ಬಗೆಹರಿಸಲು ಅವರನ್ನು ಅಧಿಕಾರಿಗಳು ಕಳುಹಿಸುತ್ತಿದ್ದರು. ಒಮ್ಮೆ ಪ್ರಬಲ ವಿರೋಧಿಗಳಾದ ಭೋವಾಲದ ಬಾಲು ಕಲಿ ನಾರಾಯಣ ರೇ ಮತ್ತು ವ್ಯಾಸರ ನಡುವಿನ ತನಿಖೆಗೆ ಪಾಲರು ಹೋದರು. ಅವರು ಅಲ್ಲಿಗೆ ಹೋದೊಡನೆಯೆ ನಾರಾಯಣ ರೇ ಅವರ ಪ್ರತಿನಿಧಿ ಎರಡು ಸಾವಿರ ರೂಪಾಯಿಗಳನ್ನು ಕೊಡಲು ಬಂದ. ಪಾಲರು ಹಣಕ್ಕೆ ಬಾಯಿಬಿಡುವವರಲ್ಲವಾದರೂ ಅವರ ಹಳ್ಳಿಯಲ್ಲಿ ಅವರ ಎದುರಿಗೇ ಹಣಬೇಡವೆಂದು ಹೇಳಿದರೆ ತೊಂದರೆಯಾಗಬಹುದು ಎಂದು ಯೋಚಿಸಿದರು. ಕೊನೆಗೆ ಅವರು ಒಂದು ಉಪಾಯ ಮಾಡಿದರು. “ನಾನು ಇಷ್ಟೊಂದು ಹಣ ಹೇಗೆ ಒಯ್ಯಲಿ? ನೀವೇ ಢಾಕಾಕ್ಕೆ ಕಳುಹಿಸಿರಿ. ನಾನು ಅಲ್ಲಿಗೆ ಹೋಗದ ಹೊರತು ನನ್ನ ವರದಿ ಮೇಲಧಿಕಾರಿಗಳಿಗೆ ಕಳುಹಿಸಿವುದಿಲ್ಲ” ಎಂದು ಹೇಳಿದರು. ಢಾಕಾಕ್ಕೆ ಹೋದ ಬಳಿಕ ನ್ಯಾಯವಾದ ವರದಿಯನ್ನೇ ಕಳುಹಿಸಿದರು. ಹೀಗೆ ಬೇಡದೇ ಬಂದ ಹಣವನ್ನು ಸಹ ಕಣ್ಣೆತ್ತಿ ನೋಡಲಿಲ್ಲ.

ರಾಮಚಂದ್ರ ಪಾಲರು ಸನದು ಪರೀಕ್ಷೆಗೆ ಕಟ್ಟಿ ವಕೀಲರಾದರು. ಮತ್ತು ಕೆಲಕಾಲದಲ್ಲಿಯೇ ಮುನ್ಸೀಫರಾದರು. ಅವರು ನ್ಯಾಯ ಬಿಟ್ಟು ನಡೆಯಲಿಲ್ಲ. ತನ್ನ ಜನರಿಗೆ ನೌಕರಿ ಕೊಡಿಸಲಿಲ್ಲ. ತನ್ನ ಹೆಸರು ಹೇಳಿ ನೌಕರಿಗಿಟ್ಟಿಸಿಕೊಂಡವರನ್ನು ನೌಕರಿಯಿಂದ ಕಡಮೆ ಮಾಡಿಸಲಿಕ್ಕೂ ಅವರು ಹಿಂದೆ ಮುಂದೆ ನೋಡಲಿಲ್ಲ.

ರಾಮಚಂದ್ರ ಪಾಲರು ಮನಸ್ಸಿಗೆ ನ್ಯಾಯವೆಂದು ತೋರಿದುದನ್ನು ಆಚರಿಸಲು ಅವರು ಎಂದೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಒಮ್ಮೆ ಅವರು ಕೆಲಸ ಮಾಡುತ್ತಿದ್ದ ಕಚೇರಿ ತಾತ್ಕಾಲಿಕವಾಗಿ ಮುಚ್ಚಿದುದರಿಂದ ಊರಿಗೆ ಬಂದರು. ಆಗ ಊರವರೆಲ್ಲ ಸೇರಿ ನಿರಪರಾಧಿಯಾದ ಒಂದು ಬ್ರಾಹ್ಮಣ ಕುಟುಂಬಕ್ಕೆ ಬಹಿಷ್ಕಾರ ಹಾಕಿದುದು ತಿಳಿಯಿತು. ರಾಮಚಂದ್ರ ಪಾಲರು ದಿಕ್ಕಿಲ್ಲದ ಬ್ರಾಹ್ಮಣನನ್ನು ತಮ್ಮ ಮನೆದೇವರ ಪೂಜೆಗೆ ನಿಯಮಿಸಿಕೊಂಡರು. ಮುಂದೆ ಕೆಲದಿನಗಳಲ್ಲಿಯೇ ದುರ್ಗಾಪೂಜೆ ಆರಂಭವಾಯಿತು. ಪಾಲರು ಅವನಿಂದಲೇ ದುರ್ಗಾಪೂಜೆಯನ್ನು ಮಾಡಿಸಿದುದರಿಂದ, ಊರವರು ಪಾಲರಿಗೂ ಬಹಿಷ್ಕಾರ ಹಾಕಿದರು. ಅವರು ಆ ಊರು ಬಿಡುವವರೆಗೆ ಅಂದರೆ ಸುಮಾರು ಹದಿನಾರು ವರುಷಗಳವರೆಗೂ ಊರವರ ಬಹಿಷ್ಕಾರವನ್ನು ಸಹಿಸಿದರು.

ಅವರು ಕೆಲದಿನಗಳಲ್ಲಿಯೆ ಸರಕಾರಿ ನೌಕರಿಗೆ ಶರಣು ಹೊಡೆದು, ವಕೀಲಿಯನ್ನು ಪ್ರಾರಂಭಿಸಿ ಸ್ವಲ್ಪ ಕಾಲದಲ್ಲಿಯೇ ಸುಪ್ರಸಿದ್ಧ ವಕೀಲರಾದರು.

ಬಿಪಿನ್‌ಚಂದ್ರರ ತಾಯಿ ನಾರಾಯಣಿದೇವಿ ಎಂದೂ ಶಾಲೆಗೆ ಹೋದವರಲ್ಲ. ಆದರೆ ಆಕೆ ಬಹು ಕೆಲಸವಂತರು, ಶಿಸ್ತಿನ ಮಹಿಳೆ. ಅವರಿಗೆ ಮನೆಗೆ ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಲ್ಲಿಯೇ ಸಂತೋಷ. ತುಂಬಾ ದೈವಭಕ್ತರು, ವ್ರತನಿಯಮಗಳಲ್ಲಿ ನಂಬಿಕೆ ಇದ್ದವರು.

ಬಿಪಿನ್‌ಚಂದ್ರರಿಗೆ ಹದಿನೇಳು ವರ್ಷ ವಯಸ್ಸಾದಾಗ ಅವರ ತಾಯಿ ನಾರಾಯಣಿ ತೀರಿಕೊಂಡರು.

ಪಾಲರು ಸಿಲ್ಹೆಟದಲ್ಲಿದ್ದಾಗ ದೊಡ್ಡ ಆಸ್ತಿಯೊಂದನ್ನು ಲಿಲಾವಿನಲ್ಲಿ ಖರೀದಿಸಿದುದರಿಂದ ಅವರ ಕೈಯಲ್ಲಿದ್ದ ನಗದು ಹಣ ಕರಗಿತು. ಆ ಆಸ್ತಿಯ ದೆಸೆಯಿಂದ ಕೋರ್ಟಿನ ವ್ಯವಹಾರಗಳು ಬೆಳೆದು ಉತ್ಪನ್ನ ಕೈಗೆ ಹತ್ತದಂತಾಯಿತು. ಹೀಗಾಗಿ ಮನೆಯ ವೆಚ್ಚವನ್ನು ಕಡಿಮೆ ಮಾಡಬೇಕಾಯಿತು.

ಬಿಪಿನ್‌ಚಂದ್ರರು ಶಾಲೆಗೆ ಹೋಗುವಾಗ ಅವರಿಗೆ ಒಂದು ಷರಾಯಿ ಮತ್ತು ಒಂದು ಕೋಟು ಹೊಲಿಸಿ ಕೊಡುತ್ತಿದ್ದರು. ವರ್ಷಕ್ಕೊಂದು ಜೊತೆ ಚಪ್ಪಲಿ ಕೊಡಿಸುತ್ತಿದ್ದರು. ಆದರೆ ಚಪ್ಪಲಿ ನಾಲ್ಕು ತಿಂಗಳಲ್ಲಿಯೇ ಹರಿದು ಹೋಗುತ್ತಿದ್ದುದರಿಂದ ವರ್ಷದಲ್ಲಿ ಬಹುದಿನ ಬರಿಗಾಲಿನಲ್ಲಿಯೇ ಸ್ಕೂಲಿಗೆ ಹೋಗಬೇಕಾಗುತ್ತಿತ್ತು. ಬಿಪಿನ್‌ಚಂದ್ರರು ಷರಾಯಿ, ಕೋಟು ತೊಟ್ಟು ಕಾಲಿಗೆ ಚಪ್ಪಲಿ ಇಲ್ಲದೆ ಮಳೆಗಾಲದಲ್ಲಿ ಶಾಲೆಗೆ ಹೋಗಬೇಕಾಗುತ್ತಿತ್ತು.

ಬಾಲ್ಯಶಿಕ್ಷಣ

ಪಾಲರ ಪ್ರಾಥಮಿಕ ಶಿಕ್ಷಣ ಸಿಲ್ಹೆಟ್‌ನಗರದ ಮಿಶನರಿ ಶಾಲೆಯಲ್ಲಿ ಪ್ರಾರಂಭವಾಯಿತು. ಪಾಲರು ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡುವುದಕ್ಕಿಂತಲೂ ವಿವಿಧ ವಿಷಯಗಳನ್ನೊಳಗೊಂಡ ಹೊರಗಿನ ಪುಸ್ತಕಗಳನ್ನು ಓದುತ್ತಿದ್ದುದೇ ಹೆಚ್ಚು. ೧೮೭೪ರಲ್ಲಿ ಸಿಲ್ಹೆಟ್‌ಸರಕಾರಿ ಪ್ರೌಢಶಾಲೆಯ ಮುಖಾಂತರ ಬಿಪಿನ್‌ಚಂದ್ರರು ಕಲ್ಕತ್ತ ವಿಶ್ವವಿದ್ಯಾನಿಲಯದ ಪ್ರವೇಶ ಮಾಡಿದರು. ಪರೀಕ್ಷೆಯಲ್ಲಿ ಮೂರನೇ ವರ್ಗದಲ್ಲಿ ಪಾಸಾದರು. ಆನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಲ್ಕತ್ತೆಗೆ ಹೋದರು. ೧೮೭೫ರಲ್ಲಿ ಪ್ರೆಸಿಡೆಸ್ಸಿ ಕಾಲೇಜಿಗೆ ಸೇರಿದರು. ಎರಡು ಬಾರಿ “ಫಸ್ಟ್‌ಆರ್ಟ್ಸ್‌” (ಬಿ.ಎ.ಗೆ ಮೊದಲಿನ ಪರೀಕ್ಷೆ)ಯಲ್ಲಿ ಫೇಲಾದರು. ಅಲ್ಲಿಗೇ ಅವರ ವಿದ್ಯಾಭ್ಯಾಸ ಕೊನೆಗೊಂಡಿತು.

ಬ್ರಹ್ಮಸಮಾಜದ ಆಕರ್ಷಣೆ

ಬ್ರಹ್ಮಸಮಾಜದ ಅಂದಿನ ಅನೇಕರನ್ನು ಆಕರ್ಷಿಸಿದ ಹಾಗೆ ಬಿಪಿನ್‌ಚಂದ್ರರನ್ನೂ ಆಕರ್ಷಿಸಿತು. ಬ್ರಹ್ಮ ಸಮಾಜವು ಮೂರ್ತಿಪೂಜೆ, ಜಾತಿಪದ್ಧತಿ, ಮೇಲುಕೀಳು ಭಾವನೆ, ಬಾಲ್ಯವಿವಾಹ ಇವುಗಳನ್ನು ವಿರೋಧಿಸುತ್ತಿತ್ತು. ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿತ್ತು. ಬಾಲ್ಯ ವಿವಾಹವನ್ನು ನಿಷೇಧಿಸುವಂತೆ ಒತ್ತಾಯ ಮಾಡಿ ಸರಕಾರದಿಂದ ಕಾನೂನು ಮಾಡುವುದರಲ್ಲಿ ಬ್ರಹ್ಮ ಸಮಾಜದವರು ಸಫಲರಾಗಿದ್ದರು. ವ್ಯಕ್ತಿಯ ಮನಃಸಾಕ್ಷಿಯನ್ನು ಒಪ್ಪುವುದು ಅವರ ಧ್ಯೇಯವಾಗಿತ್ತು.

ಬ್ರಹ್ಮಸಮಾಜದ ಪ್ರಮುಖರಾದ ಕೇಶವ ಚಂದ್ರಸೇನರು ಬಾಲ್ಯವಿವಾಹವನ್ನು ನಿಷೇಧಿಸುವಂತೆ ಕಾನೂನು ಮಾಡಲು ಪ್ರಯತ್ನ ನಡೆಸಿದ್ದರು. ಆ ಕಾನೂನಿನಂತೆ ವರನಿಗೆ ಹದಿನೆಂಟು ಮತ್ತು ವಧುವಿಗೆ ಹದಿನಾಲ್ಕು ವರ್ಷ ವಯಸ್ಸಾಗಬೇಕಿತ್ತು. ಆದರೆ ಕೇಶವಚಂದ್ರಸೇನರು ತಮ್ಮ ಹದಿಮೂರು ವರ್ಷ ವಯಸ್ಸಿನ ಮಗಳನ್ನು ಹದಿನಾರು ವರ್ಷ ವಯಸ್ಸಿನ ಕೊಚ್‌ಬಿಹಾರದ ಯುವರಾಜನಿಗೆ ಮದುವೆ ಮಾಡಿಕೊಟ್ಟರು.

ಈ ರೀತಿ ಕೇಶವಚಂದ್ರರ ನಡೆಗೂ, ನುಡಿಗೂ ಅಂತರ ಬಂದುದರಿಂದ ಶಿವನಾಥ ಶಾಸ್ತ್ರಿಯವರ ನೇತೃತ್ವದಲ್ಲಿ ಬಿಪಿನ್ ಚಂದ್ರಪಾಲ್‌ಮತ್ತು ಅವರ ಸಂಗಡಿಗರು ಸಾಧಾರಣ ಬ್ರಹ್ಮಸಮಾಜವನ್ನು ಸ್ಥಾಪಿಸಿದರು.

ಉಪಾಧ್ಯಾಯ ವೃತ್ತಿ

ಬಿಪಿನ್‌ಚಂದ್ರರು ಬ್ರಹ್ಮ ಸಮಾಜವನ್ನು ಸೇರಿದುದರಿಂದ ಅವರ ಶಿಕ್ಷಣಕ್ಕೆ ನೀಡುತ್ತಿದ್ದ ಹಣದ ಸಹಾಯವನ್ನು ತಂದೆಯವರು ನಿಲ್ಲಿಸಿದರು. ಹೀಗಾಗಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ ತಿಂಗಳಿಗೆ ಮೂವತ್ತು ರೂಪಾಯಿ ಸಂಬಳ ವಾಸಕ್ಕೆ ಮನೆ ಕೊಡುವ ಕರಾರಿನ ಮೇಲೆ ಬಿಪಿನ್‌ಚಂದ್ರರು ೧೮೭೯ರ ಪ್ರಾರಂಭದಲ್ಲಿ ಕಟಕ್‌ನಲ್ಲಿ ಹೈಸ್ಕೂಲಿಗೆ ಮುಖ್ಯ ಉಪಾಧ್ಯಾಯರಾಗಿ ನಿಯಮಿಸಲ್ಪಟ್ಟರು. ಆದರೆ ಆಡಳಿತ ವರ್ಗಕ್ಕೂ ಮುಖ್ಯ ಉಪಾಧ್ಯಾಯರಿಗೂ ಪರೀಕ್ಷೆಗೆ ಹುಡುಗರನ್ನು ಆರಿಸುವ ವಿಷಯದಲ್ಲಿ ಮತಭೇದ ಬಂದುದರಿಂದ ಪಾಲರು ರಾಜೀನಾಮೆ ಕೊಟ್ಟು ಬಂದರು. ಮುಂದೆ ಸಿಲ್ಹೆಟಿನಲ್ಲಿ ೧೮೦ರಲ್ಲಿ “ಪಾರದರ್ಶಕ” ವೆಂಬ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ವಾರಪತ್ರಿಕೆಯನ್ನು ಮುದ್ರಿಸಲು ಮುದ್ರಣದ ಅನುಕೂಲತೆ ಇಲ್ಲದುದರಿಂದ ಅವರ ಮಿತ್ರರು ಒಂದು ಮುದ್ರಾಣಾಲಯವನ್ನು ಸ್ಥಾಪಿಸಿದರು. ಆದರೆ ಕೆಲಸಗಾರರು ಕಲ್ಕತ್ತೆಯಿಂದ ಬರಬೇಕಾಗುತ್ತಿತ್ತು. ಆದುದರಿಂದ ಕೆಲಸಗಾರರ ಮರ್ಜಿಯನ್ನು ಸಂಪಾದಕ ಮಂಡಳಿ ಹಿಡಿಯಬೇಕಾಗುತ್ತಿತ್ತು. ಆಮೇಲೆ ಸಂಪಾದಕ ವರ್ಗದವರೇ ಮೊಳೆ ಜೋಡಿಸುವುದು, ಮುದ್ರಿಸುವುದು, ಫ್ರೂಫ್‌ನೋಡುವುದು ಮುಂತಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಇದರಿಂದ ಮುದ್ರಣಾಲಯದ ಕೆಲಸಗಾರರ ಮೇಲೆ ಪ್ರಭಾವವುಂಟಾದುದಲ್ಲದೆ ತಾವು ಇಲ್ಲದಿದ್ದರೂ ಪತ್ರಿಕೆ ನಡೆಯುವುದೆಂದು ತಿಳಿದುಬಂದುದರಿಂದ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದರು.

ಆದರೆ ಅನಾರೋಗ್ಯದಿಂದ ಸಿಲ್ಹೆಟ್‌ಬಿಟ್ಟು ೧೮೮೧ರ ಆಗಸ್ಟ್‌ಅಂತ್ಯದಲ್ಲಿ ಬೆಂಗಳೂರಿನ ರಾವ್‌ಬಹದ್ದೂರ್ ಆರ್ಕಾಟ್‌ನಾರಾಯಣಸ್ವಾಮಿ ಮೊದಲಿಯಾರರು ಸ್ಥಾಪಿಸಿದ ನ್ಯೂ ಇಂಗ್ಲಿಷ್‌ಸ್ಕೂಲಿನ ಹೆಸ್‌ಮಾಸ್ಟರಾಗಿ ಸೇರಿಕೊಂಡರು. ಅದೇ ವರ್ಷ ಮುಂಬಯಿಯ ಪ್ರಾರ್ಥನಾ ಸಮಾಜ ಮಂದಿರದಲ್ಲಿ ಪಾಲರ ವಿವಾಹವಾಯಿತು. ಶಿವನಾಥ ಶಾಸ್ತ್ರಿಗಳು ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದ ಬಾಲವಿಧವೆ ನೃತ್ಯಕಾಳಿಯೇ ಅವರ ಕೈಹಿಡಿದ ವಧು.

ಮಳೆಯಲ್ಲಿ ಶಾಲೆಗೆ

ವಿವಾಹ

 

ಮದುವೆಯಾಗಿ ರೈಲಿನಲ್ಲಿ ಬೆಂಗಳೂರಿಗೆ ಹೊರಟ ಬಿಪಿನ್‌ಚಂದ್ರಪಾಲರಿಗೆ ಶಿವನಾಥ ಶಾಸ್ತ್ರಿಗಳು ಸ್ಟೇಷನ್ನಿನವರೆಗೂ ಬಂದು “ಹಣ ಏನಾದರೂ ಬೇಕೇ?” ಎಂದು ಕೇಳಿದರು. ಅದಕ್ಕೆ ಪಾಲರು “ಅವಶ್ಯವಿಲ್ಲ, ದಾರಿಯಲ್ಲಿ ಮಿತ್ರರಿದ್ದಾರೆ” ಎಂದು ಅಂದರಂತೆ. ಆದರೆ ತಮ್ಮ ಸಾಮಾನುಗಳನ್ನು ರೈಲಿಗೆ ಹತ್ತಿಸಿದ ಕೂಲಿಗಳಿಗೆ ಹಣಕೊಟ್ಟ ಬಳಿಕ ಅವನ ಕೈಯ್ಯಲ್ಲಿದ್ದುದು ಕೇವಲ ಹದಿನಾಲ್ಕು ಆಣೆ ಮಾತ್ರ. ಪುಣೆಗೆ ಮುಟ್ಟಿದಾಗ ಸ್ಟೇಷನ್ನಿನಲ್ಲಿ ಇಳಿದು ಹೊಟ್ಟೆತುಂಬಾ ನೀರು ಕುಡಿದರು. ಬಳಿಕ ನೃತ್ಯಕಾಳಿಗೆ “ಊಟ ಮಾಡುತ್ತೀಯಾ?” ಎಂದು ಕೇಳಿದರು. ಅವಳು “ತನಗೇನೂ ಹಸಿವೆಯಿಲ್ಲ, ಮದರಾಸ್‌ಮುಟ್ಟಿದ ಮೇಲೆ ಗೆಳಯರಿದ್ದಾರೆ” ಎಂದು ಧೈರ್ಯ ಹೇಳಿದಳು.

ಅವರು ರೈಲು ರಾಯಚೂರಿಗೆ ಬಂದಾಗ ಶಿವನಾಥ ಶಾಸ್ತ್ರಿಗಳು ಕಳುಸಿದ ತಾರು ಮನಿಯಾರ್ಡರು ಹತ್ತು ರೂಪಾಯಿ ಮುಟ್ಟಿತು.

ಅವರು ಬೆಂಗಳೂರಿನಲ್ಲಿಯೂ ಬಹುಕಾಲ ನಿಲ್ಲಲಿಲ್ಲ. ಕಲ್ಕತ್ತ ಸಿಟಿ ಲೈಬ್ರರಿಯಲ್ಲಿ ತಿಂಗಳಿಗೆ ನೂರು ರೂಪಾಯಿ ಸಂಬಳದ ಮೇಲೆ ಕೆಲಸಕ್ಕೆ ಸೇರಿದರು. ಅವರು ಓದಿದ ಪುಸ್ತಕಗಳಿಗೆ ಇತಿಮಿತಿ ಇರಲಿಲ್ಲ. ಇದೇ ಅವಧಿಯಲ್ಲಿ ಅವರ ಮೊದಲ ಹೆಂಡತಿ ತೀರಿದುದರಿಂದ ಅವರ ಮನಸ್ಸು ವ್ಯಾಕುಲವಾಯಿತು. ಮತ್ತು ಮನಶ್ಶಾಂತಿಗಾಗಿ ಕೆಲಕಾಲ ಸಾಧುಸಂತರ ಸತ್ಸಂಗದಲ್ಲಿ ಕಳೆದರು. ಬಳಿಕ ಬಾಬು ಸುರೇಂದ್ರನಾಥ ಬ್ಯಾನರ್ಜಿಯವರ ಸೋದರಿಯ ವಿಧವೆ ಮಗಳಾದ ಬಿರಜ್‌ಮೋಹಿನಿ ದೇವಿಯವರನ್ನು ಮದುವೆಯಾದರು. ಬಿಪಿನ್‌ಚಂದ್ರಪಾಲ್‌ಮತ್ತು ಬಿರಜ್‌ಮೋಹಿನಿ ದೇವಿಯವರಿಗೆ ಏಳು ಜನ ಮಕ್ಕಳಾದರು.

ಪಾಲರು ಬ್ರಹ್ಮಸಮಾಜಕ್ಕೆ ಸೇರಿದುದರಿಂದ ತಂದೆ ರಾಮಚಂದ್ರ ಪಾಲರು ಯಾವ ಸಂಬಂಧವನ್ನೂ ಇಟ್ಟು ಕೊಂಡಿರಲಿಲ್ಲ. ಆದರೆ ಆರೋಗ್ಯವು ಕೆಡಹತ್ತಿದುದರಿಂದ ಮಗನನ್ನು ಕರೆಯಿಸಿಕೊಂಡು ಆಸ್ತಿಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಅವರು ಊರಲ್ಲಿ ಒಂದು ಶಾಲೆಯನ್ನು ತೆರೆದರು. ಕೆಲಕಾಲದಲ್ಲಿ ಅವರು ಶಾಲೆ ನಿಂತುಹೋಯಿತು. ಅದರ ಜೊತೆಗೆ ತಂದೆಯ ಆಸ್ತಿಯಲ್ಲಿ ಬಹುಪಾಲು ಕೈಬಿಟ್ಟಿತು.

ಧಾರ್ಮಿಕ ಕ್ಷೇತ್ರದಲ್ಲಿ

ಪಾಲರು ಪತ್ರಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಿದ್ದುದಲ್ಲದೆ ಧಾರ್ಮಿಕ ಚಿಂತವನ್ನೂ ಮಾಡುತ್ತಿದ್ದರು. ಬ್ರಹ್ಮಸಮಾಜದಲ್ಲಿ ಜಡತೆ ಕಂಡುಬಂದಾಗ ಭಾರತೀಯ ತತ್ವಶಾಸ್ತ್ರ ಹಾಗೂ ಇನ್ನಿತರ ಧರ್ಮಗಳ ಆಳವಾದ ಅಭ್ಯಾಸ ಮಾಡಿದರು. ಬಾಬು ಕಾಲಿಚರಣ ಬ್ಯಾನರ್ಜಿ ಬ್ರಹ್ಮ ಸಮಾಜವನ್ನು ತೆಗಳಿ ಕ್ರಿಶ್ಚಿಯನ್‌ಧರ್ಮವನ್ನು ಹೊಗಳಿ ಅನೇಕ ಭಾಷಣಗಳನ್ನು ಮಾಡಿದಾಗ ಬಿಪಿನ್‌ಚಂದ್ರರು ಅನೇಕ ವ್ಯಾಖ್ಯಾನ ಮಾಲೆಗಳನ್ನು ನಡೆಸಿ ಕಾಲಿಚರಣ ಬ್ಯಾನರ್ಜಿಯವರ ವಾದವನ್ನು ಖಂಡಿಸಿದರು.

ಬ್ರಿಟಿಷ್ ಮತ್ತು ವಿದೇಶೀ ಅದ್ವೈತ ಸಂಸ್ಥೆಯವರು ಪಾಲರಿಗೆ ಆಕ್ಸ್‌ಫರ್ಡಿನಲ್ಲಿ ಪ್ರಾಚೀನ ಕ್ರಿಶ್ಚಿಯನ್‌ಮತ್ತು ಯಹೂದಿ ಧರ್ಮದ ಬಗ್ಗೆ ಅಭ್ಯಾಸ ಮಾಡಲು ಶಿಷ್ಯವೇತನವನ್ನು ನೀಡಿದರು. ಅವರು ೧೮೯೮ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಅವರು ಅಲ್ಲಿ ಎರಡು ವರ್ಷ ಅಭ್ಯಾಸ ಮಾಡಬೇಕಿತ್ತು. ಆದರೆ ಪಾಲರು ಆ ವಿಷಯದಲ್ಲಿ ತೋರಿಸಿದ ಪ್ರಾವಿಣ್ಯವನ್ನು ಮೆಚ್ಚಿ ಈ ಸಂಸ್ಥೆಯವರು ಒಂದು ವರ್ಷದಲ್ಲಿಯೇ ಅವರಿಗೆ ಅವಶ್ಯವುಳ್ಳ ಸರ್ಟಿಫಿಕೇಟು ಕೊಟ್ಟರು. ಅನಂತರ ನ್ಯಾಷನಲ್‌ಟೆಂಪರನ್ಸ್‌ಅಸೋಯಿಯೇಷನ್ನಿನವರು ಕೊಟ್ಟ ಆಮಂತ್ರಣವನ್ನು ಒಪ್ಪಿ ನಾಲ್ಕು ತಿಂಗಳು ಕಾಲ ಭಾಷಣ ಮಾಡಲು ನ್ಯಾಯಾರ್ಕಿಗೆ ಹೋದರು. ಪಾಲರು ಧರ್ಮಸಹಿಷ್ಣುತೆ ಮತ್ತು ಭಾರತೀಯ ತತ್ವಜ್ಞಾನದ ಬಗ್ಗೆ ಮಾತನಾಡಿದರು. ಇಂದು ಭಾರತದ ಆತ್ಮ ಮತ್ತು ಪಾಶ್ಚಾತ್ಯರ ಭೌತಿಕವಾದಗಳು ಪರಸ್ಪರ ಹೊಂದಾಣಿಕೆಯಾಗಬೇಕೆಂದು ಜಗತ್ತೇ ಬಯಸುವುದಾಗಿ ಸಾರಿದರು.

ಪಾಲರು ಭಾರತಕ್ಕೆ ಮರಳಿದ ಬಳಿಕ ೧೯೦೦ರಲ್ಲಿ “ನ್ಯೂ ಇಂಡಿಯಾ” ಪತ್ರಿಕೆ ಪ್ರಾರಂಭಿಸಿದರು. ಮತ್ತು ಭಾರತದ ಚೈತನ್ಯ ಯಾವುದರಲ್ಲಿದೆ ಎಂಬುದನ್ನು ಅರಿಯಲು ಆಳವಾಗಿ ಅಭ್ಯಾಸ ಮಾಡುತ್ತಿದ್ದರು. ಪಾಲರು “ಭಾರತದ ಆತ್ಮ” ಎಂಬ ಪುಸ್ತಕದ ಮುನ್ನುಡಿಯಲ್ಲಿ “ಶ್ರೀಕೃಷ್ಣ ಭಾರತದ ಆತ್ಮ ಎಂದು ಹೇಳಿದರೆ ನಾನು ವೈಷ್ಣವ ಪಕ್ಷಪಾತಿ ಎಂದು ಜನ ಅನ್ನಬಹುದು. ಆದರೆ ಹಿಂದೂ, ಇಂದೂ, ಮುಂದೂ ಭಾರತದ ಏಕತೆಯ ಪ್ರತೀಕವಾಗಿ ಶ್ರೀಕೃಷ್ಣನೊಬ್ಬನೇ ನಮ್ಮ ಮನಸ್ಸಿನ ಎದುರು ಶಾಶ್ವತವಾಗಿ ನಿಲ್ಲಬಲ್ಲ ಮಹಾತ್ಮ”ನೆಂದು ಬಣ್ಣಿಸಿದ್ದಾರೆ. “ಬಂಗಾಲದ ವೈಷ್ಣವ ಧರ್ಮ” ಎಂಬ ಪುಸ್ತಕದಲ್ಲಿ ಕೃಷ್ಣನನ್ನು ಭಾರತದ ಆತ್ಮ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

ಪಾಲರ ದೃಷ್ಟಿಯಲ್ಲಿ ಬ್ರಹ್ಮಸಮಾಜದ ವಿಚಾರ, ವೈಷ್ಣವ ತತ್ವ ಅಥವಾ ಇನ್ನಾವ ವಿಚಾರವೇ ಇರಲಿ, ಅದೆಲ್ಲವೂ ಹಿಂದೂ ಮನಸ್ಸಿನ ವಿಕಾಸದ ಸಂಕೇತಗಳು. ಕ್ರೈಸ್ತ ಅಥವಾ ಇಸ್ಲಾಂ ಅಥವಾ ಬೌದ್ಧ ಮತದಂತೆ ಹಿಂದೂಧರ್ಮ ಒಬ್ಬ ಪ್ರವಾದಿಯು ಸ್ಥಾಪಿಸಿದ ದರ್ಮವಲ್ಲ. ಅದು ಧರ್ಮಗಳ ಒಂದು ಕುಟುಂಬ. ಈ ತತ್ವದ ಆಧಾರದ ಮೇಲೆ ಅವರು ಜಗತ್ತು, ಒಳ ಆಡಳಿತಗಳಲ್ಲಿ ಸ್ವಾತಂತ್ರ‍್ಯವುಳ್ಳ ಧರ್ಮಗಳ ಒಕ್ಕೂಟವಾಗಬೇಕೆಂದು ಬಯಸಿದರು. “ಹಿಂದೂ ಧರ್ಮ ಯಾವುದೋ ಒಂದು ಶಾಸ್ತ್ರ ಅಥವಾ ಪಂಗಡಕ್ಕೆ ಕಟ್ಟುಬೀಳದೆ ಸತ್ಯ ಮತ್ತು ಅದರ ಮಹತ್ವಗಳನ್ನು ತೆರೆತೆರೆದಿಡುವ ನಿರಂತರ ಪ್ರಯತ್ನವಾಗಿದೆ” ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ

೧೮೭೬ರಲ್ಲಿ ಶಂಕರ್ ಘೋಷ್‌ಲೇನಿನಲ್ಲಿ ಇದ್ದ ಶಾರೀರಿಕ ಶಿಕ್ಷಣ ಕೇಂದ್ರಕ್ಕೆ ಬಿಪಿನ್‌ಚಂದ್ರರು ಸೇರಿದಾಗ ಒಂದು ಘಟನೆ ನಡೆಯಿತು. ಆ ವರುಷ ವಸಂತ ಮಾಸದಲ್ಲಿ ತಾಲಾದಲ್ಲಿ ಹಿಂದೂ ಮೇಳೆ ನಡೆಯಿತು. ಪಾಲರು ಒಂದು ಕುರ್ಚಿಯ ಮೇಲೆ ಕುಳಿತು ಶಕ್ತಿ ಪ್ರದರ್ಶನವನ್ನು ನೋಡುತ್ತಿದ್ದರು. ಅವರ ಹಿಂಬದಿಯಿಂದ ಒಬ್ಬ ಆಂಗ್ಲನು ಬಂದು ತನ್ನ ಪ್ರಿಯತಮೆಗೆ ಸ್ಥಳ ಕೊಡಿಸಲು ಪಾಲರನ್ನು ಎಳೆದು ಹಾಕಲು ಯತ್ನಿಸಿದ. ಆಂಗ್ಲನು ವಿನಯದಿಂದ ಸ್ಥಳ ಕೇಳಿದ್ದರೆ ಪಾಲರು ಬಿಟ್ಟುಕೊಡುತ್ತಿದ್ದರೋ ಏನೋ! ಆದರೆ ಆಂಗ್ಲನು ಪಾಲರನ್ನು ತಳ್ಳುವುದನ್ನು ಕಂಡ ತರುಣರ ನೆತ್ತರು ಬಿಸಿಯಾಯಿತು. ಅವರು ಈ ಜಗಳದಲ್ಲಿ ಭಾಗವಹಿಸಿದುದರಿಂದ ಇಟ್ಟಿಗೆಗಳ ತೂರಾಟಕ್ಕೆ ಆರಂಭವಾಯಿತು. ಸುರೇಂದ್ರನಾಥ ಬ್ಯಾನರ್ಜಿಯವರ ಕಿರಿಯ ತಮ್ಮ ತರುಣರ ಮುಖಂಡನಾಗಿ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಪಾಲರ ಮೇಲೆ ಕೇಸು ದಾಖಲಾಯಿತು. ಪಾಲರು ದಂಗೆಯೆಬ್ಬಿಸಿದರೆಂತಲೂ, ಸರಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿ ಮಾಡಿದರೆಂತಲೂ, ಅವರ ಮೇಲೆ ಆರೋಪವಿತ್ತು. ಈ ವಿಚಾರಣೆಯ ನಾಟಕದಲ್ಲಿ ಪಾಲರಿಗೆ ಇಪ್ಪತ್ತು ರೂಪಾಯಿ ದಂಡವಾಯಿತು. ಆದರೆ ಇದರಿಂದ ಪಾಲರ ಬಗ್ಗೆ ತರುಣರಲ್ಲಿ ಆದರ ಹೆಚ್ಚಾಯಿತು. ಅಭಿಮಾನ ಬೆಳೆಯಿತು.

ಕಾರ್ಮಿಕರಿಗಾಗಿ

ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಈಸ್ಟ್‌ಇಂಡಿಯಾ ಕಂಪನಿಯವರಿಂದ ವಿಕ್ಟೋರಿಯಾ ಮಹಾರಾಣಿ ಭಾರತದ ಆಡಳಿತವನ್ನು ವಹಿಸಿಕೊಂಡಳು. ಆಗ ಭಾರತವನ್ನು ಇಲ್ಲಿನ ಜನರ ಒಳಿತನ್ನೇ ಗುರಿಯಾಗಿಟ್ಟುಕೊಂಡು ಆಡಳಿತ ನಡೆಸುವುದಾಗಿ ಬ್ರಿಟಿಷ್‌ಸರ್ಕಾರ ಭರವಸೆ ಕೊಟ್ಟಿತು. ಆದರೆ ಆಡಳಿತ ನಿಜವಾಗಿ ಭಾರತೀಯರ ಪ್ರಗತಿಗಾಗಿ ನಡೆಯುತ್ತಲೇ ಇರಲಿಲ್ಲ. ರೈತರು, ಜಮೀನುದಾರರ ದಬ್ಬಾಳಿಕೆಗೆ ತುತ್ತಾಗಿ ಕಂಗೆಟ್ಟಿದ್ದರು. ಭೂಮಿಯ ಕಂದಾಯ ಹೆಚ್ಚಿತ್ತು. ಹೊಲಗಳು ಪಾಳುಬಿದ್ದವು. ಮುಕ್ಕಾಲು ಪರಿಹಾರ ಕಾಣದೆ ತೊಳಲಾಡುತ್ತಿದ್ದರು. ಭೂಮಿಯ ಉತ್ಪನ್ನ ಸಾಲದುದರಿಂದ ಸಾಗುವಳಿದಾರರು ಭೂಮಿಯನ್ನು ಕಳೆದುಕೊಂಡು ಕೂಲಿಕಾರರಾಗಿ ಅಸ್ಸಾಮಿನ ಚಹಾ ತೋಟಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದರು. ಅಸ್ಸಾಮಿನ ಟೀ ತೋಟಗಳಲ್ಲಿ ಕೆಲಸಗಾರರ ಸ್ಥಿತಿ ತೀರಾ ಕರುಣಾಜನಕವಾಗಿತ್ತು. ಅವರಿಗೆ ಯಾವ ಹಕ್ಕುಗಳೂ ಇರಲಿಲ್ಲ. ತೀರ ಅನಾರೋಗ್ಯಕರ ಸ್ಥಿತಿಯಲ್ಲಿ ಅವರು ದುಡಿಯಬೇಕಾಗಿತ್ತು. ಕಾಯಿಲೆ ಬಂದರೆ ಕೂಲಿ ಇಲ್ಲ, ಔಷಧವಿಲ್ಲ, ಸತ್ತರೆ ಕೇಳುವವರಿಲ್ಲ, ತೋಟಗಳ ಮಾಲೀಕರು, ಕೂಲಿಯವರು ಮನುಷ್ಯರೇ ಅಲ್ಲ ಎನ್ನುವಂತೆ ಅವರನ್ನು ಕಾಣುತ್ತಿದ್ದರು. ಮನಸ್ಸು ಬಂದಂತೆ ಹೊಡೆಯುತ್ತಿದ್ದರು. ಒಮ್ಮೆಮ್ಮೆ ಈ ಹೊಡೆತಗಳಿಂದ ಕೆಲಸಗಾರರು ಸತ್ತೇ ಹೋದುದ್ದುಂಟು. ಆದರೂ ಕೇಳುವವರೇ ಇರಲಿಲ್ಲ. ಮಾಲೀಕರು ಬಹು ಮಂದಿ ಬಿಳಿಯರು. ಅವರದೇ ಸರಕಾರ, ಅವರದೇ ನ್ಯಾಯಾಲಯಗಳು.

"ಭಾರತ ಸ್ವರಾಜ್ಯವನ್ನು ಪಡೆಯಲೇಬೇಕು."

ಬಿಪಿನ್‌ಚಂದ್ರಪಾಲರೂ ಅವರ ಸ್ನೇಹಿತ ದ್ವಾರಕನಾಥ ಗಂಗೂಲಿಯವರೂ ಈ ಅನ್ಯಾಯವನ್ನು ಪ್ರತಿಭಟಿಸಿದರು. ೧೮೮೭ರಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಅಧಿವೇಶನದಲ್ಲಿ ಈ ಸ್ನೇಹಿತರು ಅಸ್ಸಾಮಿನಲ್ಲಿ ಕೆಲಸಗಾರರಿಗೆ ನಡೆಯುತ್ತಿದ್ದ ಅನ್ಯಾಯ, ಅವರ ಬಗೆಗೆ ಅಮಾನುಷ ವರ್ತನೆ ಇವನ್ನು ಜನತೆಯ ಗಮನಕ್ಕೆ ತಂದರು. ೧೮೯೬ರಲ್ಲಿ ಅವರ ಒತ್ತಾಯದಿಂದ ಕಾಂಗ್ರೆಸ್‌ಈ ವಿಷಯಕ್ಕೆ ಗಮನಕೊಟ್ಟು ಕೆಲಸಗಾರರ ಸ್ಥಿತಿಯನ್ನು ಉತ್ತಮಗೊಳಿಸಬೇಕು ಎಂದು ಠರಾವು ಮಾಡಿತು. ಅಸ್ಸಾಮಿನ ಛೀಪ್‌ಕಮೀಷನರ್ ಹೆನ್ರಿ ಕಾಟನನು ಈ ಒತ್ತಾಯದಿಂದ ಕೆಲಸಗಾರರ ಸ್ಥಿತಿಗತಿಗಳ ವಿಚಾರಣೆಯನ್ನು ಕೈಗೊಂಡ. ಅವರ ಸ್ಥಿತಿ ಸ್ವಲ್ಪ ಸುಧಾರಿಸಿತು.

ಭಾರತದ ಸುಶಿಕ್ಷಿತ ತರುಣರು ಆಡಳಿತದಲ್ಲಿ ಮಹತ್ವದ ಹುದ್ದೆಯನ್ನು ನಡೆಸಲು ಸಮರ್ಥರಿದ್ದರೂ ಬ್ರಿಟಿಷರು ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಸುರೇಂದ್ರನಾಥ ಬ್ಯಾನರ್ಜಿಯವರಂಥ ತಜ್ಞರನ್ನು ಕ್ಷುಲ್ಲಕ ಕಾರಣಗಳಿಗಾಗಿ ನೌಕರಿ ಬಿಟ್ಟು ಹೋಗುವಂತೆ ಸರಕಾರದವರು ಮಾಡಿದುದರಿಂದ ತರುಣರಲ್ಲಿ ಅಸಂತೋಷ ಹೊಗೆಯಾಡುತ್ತಿತ್ತು.

ಲಾರ್ಡ್‌ಕರ್ಜನರ ಆಡಳಿತ ಮತ್ತು ವಂಗಭಂಗ

ಲಾರ್ಡ್‌ಕರ್ಜನ್‌ಬ್ರಿಟಿಷ್‌ಸರ್ಕಾರದ ಪ್ರತಿನಿಧಿಯಾಗಿ ಭಾರತದ ವೈಸರಾಯ್‌ಆದ. ಅವನ ಆಡಳಿತದಲ್ಲಿ ಅತೃಪ್ತಿ ಇನ್ನೂ ಬೆಳೆಯಿತು. ಮೇಲಿನ ಎಲ್ಲ ಹುದ್ದೆಗಳೂ ಇಂಗ್ಲಿಷರಿಗೇ ಮೀಸಲಾದವು. ೧೮೯೯ರಲ್ಲಿ ಕಲ್ಕತ್ತ ಕಾರ್ಪೋರೇಷನ್‌ಕಾಯಿದೆಯನ್ನು ಮಾಡಿ ಸದಸ್ಯರ ಸಂಖ್ಯೆಯನ್ನು ೭೫ರಿಂದ ೫೦ಕ್ಕೆ ಇಳಿಸಿದುದರಿಂದ ಕಾರ್ಪೋರೇಷನ್ನಿನಲ್ಲಿ ಇಂಗ್ಲಿಷರದೇ ಬಹುಮತವಾಯಿತು. ಮುಂದೆ ಐದು ವರ್ಷಗಳಲ್ಲಿ ಭಾರತ ವಿಶ್ವವಿದ್ಯಾನಿಲಯ ಕಾಯಿದೆ ಮಾಡಿ ಸಿಂಡಿಕೇಟ್‌ಸದಸ್ಯರ ಸಂಖ್ಯೆ ಕುಗ್ಗಿಸಿದ. ಇದರಿಂದ ಇಂಗ್ಲಿಷರ ಬಹುಮತವಾಗಿ ವಿಶ್ವವಿದ್ಯಾನಿಲಯದ ನೌಕರರ ನಿರಂಕುಶ ಆಡಳಿತ ಪ್ರಾರಂಭವಾಯಿತು.

ಅದೇ ವರ್ಷ ಕರ್ಜನ್‌ಸರಕಾರಿ ನೌಕರರ ರಹಸ್ಯ ಕಾಯಿದೆಯನ್ನು ಮಾಡಿ ಸರಕಾರದ ಅಧಿಕಾರ ಹೆಚ್ಚಿಸಿ ರಾಜದ್ರೋಹದ ವ್ಯಾಪ್ತಿ ಹೆಚ್ಚಿಸಿದ. ಪತ್ರಿಕೆಗಳ ಮೇಲೆ ಗದೆಯೆತ್ತಲಿಕ್ಕೂ ಅವಕಾಶ ಮಾಡಿಕೊಂಡ.

೧೯೦೫ರಲ್ಲಿ ಬ್ರಿಟಿಷ್‌ಸರ್ಕಾರ ಬಂಗಾಳವನ್ನು ಎರಡು ಭಾಗಗಳನ್ನಾಗಿ ಒಡೆಯಿತು. ಇದನ್ನು ಇಡೀ ದೇಶ ಧಿಕ್ಕರಿಸಿತು. ಮತೀಯ ಕಲಹವನ್ನು ಹೆಚ್ಚಿಸುವ ಕರ್ಜನ್ನನ ನೀತಿಯನ್ನು ದೇಶದ ಜನತೆ ಧಿಕ್ಕರಿಸಿತು. ೧೯೦೬ರಲ್ಲಿ “ವಂದೇ ಮಾತರಂ” (ಒಂದೇ ಮಾತರಂ) ಎಂಬ ದೈನಿಕ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರಲ್ಲಿ ಬಿಪಿನ್ ಚಂದ್ರಪಾಲ್‌ರು ಗುಡುಗಿದರು: “ಸರಕಾರವೇನಾದರೂ ಬಂದು ಸ್ವರಾಜ್ಯ ತೆಗೆದುಕೊಳ್ಳಿ ಎಂದು ಹೇಳಿದರೆ “ಧನ್ಯವಾದ ನಿಮಗೆ” ಎನ್ನುವೆ, ಆದರೆ ಸ್ವೀಕರಿಸುವುದಿಲ್ಲ. ಸ್ವರಾಜ್ಯ ಪಡೆಯುವುದು ನಮ್ಮ ಸಾಮರ್ಥ್ಯದಿಂದಲೇ ಹೊರತು, ಬೇಡುವುದರಿಂದಲ್ಲ.”

“ಬೇಡಿ ನಾವು ಸಾಧಿಸಬಹುದಾದುದೇನು? ಅಲ್ಲೊಂದು ಹೈಕೋರ್ಟ್‌ಜಡ್ಜನ ಕೆಲಸ; ಇಲ್ಲೊಂದು ಕೌನ್ಸಿಲ್ಲಿಗೆ ನಾಮಕರಣ. ಆದರೆ ನಾವು ಅಸಹಕಾರ ಮಾಡಿ ಸರಕಾರದ ಯಂತ್ರ ನಡೆಸಲು ಜನ ಸಿಗದ ಹಾಗೆ ಮಾಡುವುದೇ ನಮ್ಮ ಮುಂದಿನ ದಾರಿ” ಎಂದು ಸಾರಿದರು.

“ವಂದೇ ಮಾತರಂ” ಪತ್ರಿಕೆ ಬಹುಬೇಗ ಜನಪ್ರಿಯತೆ ಗಳಿಸಿತು. ಇದರಲ್ಲಿನ ಲೇಖನಗಳು ಯುವಕರ ದೇಶಪ್ರೇಮವನ್ನು ಬಡಿದೆಬ್ಬಿಸಿದವು. ಮುಂದೆ ಶ್ರೀ ಅರವಿಂದರೆಂದು ಪ್ರಸಿದ್ಧರಾದ ಕ್ರಾಂತಿಕಾರಿ ಯುವಕ ಅರವಿಂದ ಘೋಷರ ಲೇಖನಗಳು ಓದಗರಲ್ಲಿ ಆತ್ಮವಿಶ್ವಾಸವನ್ನು ಚಿಮ್ಮಿಸಿದವು.

ಭಾರತದ ಸ್ವಾತಂತ್ರ್ಯಕ್ಕಾಗಿ ಈ ಕಾಲದಲ್ಲಿ ಶ್ರಮಿಸುತ್ತಿದ್ದವರನ್ನು ಎರಡು ಗಂಪುಗಳಾಗಿ ವಿಂಗಡಿಸಬಹುದು. ಮಂದಗಾಮಿಗಳು, ಬ್ರಿಟಿಷರಿಗೆ ಭಾರತದಲ್ಲಿ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟು ಭಾರತೀಯರಿಗೆ ಹೆಚ್ಚಿನ ಅಧಿಕಾರ ದೊರೆಯುವಂತೆ ಮಾಡಬೇಕು ಎಂದು ನಂಬಿದ್ದರು. ತೀವ್ರವಾದಿಗಳು, ಸಭೆಗಳು-ಠರಾವುಗಳು-ಪ್ರಾರ್ಥನೆಗಳು ಇವುಗಳಿಂದ ಪ್ರಯೋಜನವಿಲ್ಲ, ಭಾರತೀಯರು ಬ್ರಿಟಿಷ್‌ಸರ್ಕಾರವನ್ನು ವಿರೋಧಿಸಿ ಹೋರಾಡಬೇಕು, ಅವರು ತಾವಾಗಿ ಭಾರತವನ್ನು ಬಿಟ್ಟುಹೋಗುವಂತೆ ಮಾಡಬೇಕು ಎಂದು ನಂಬಿದ್ದರು. ತೀವ್ರವಾದಿಗಳು ಬ್ರಿಟಿಷ್‌ಸರಕುಗಳಿಗೆ ಬಹಿಷ್ಕಾರ ಹಾಕಿದರು. ಬಿಪಿನ್‌ಚಂದ್ರಪಾಲರು ತೀವ್ರವಾದಿಗಳ ನಾಯಕರಲ್ಲಿ ಒಬ್ಬರು. ಸರಕಾರಿ ನೌಕರಿಗಳನ್ನು ಬಿಟ್ಟರು, ಬಿರುದುಗಳನ್ನು ಹಿಂತಿರುಗಿಸಿದರು. ಚಳವಳಿ ವ್ಯಾಪಕವಾಗಿ ಬೆಳೆಯಿತು. ಕಲ್ಕತ್ತೆಯ “ಇಂಗ್ಲಿಷ್‌ಮನ್‌” ಪತ್ರಿಕೆಯು “ಕಲ್ಕತ್ತೆಯ ಗೋಡೌನುಗಳಲ್ಲಿ ಬಟ್ಟೆಗಳು ಮಾರಾಟವಾಗದೆ ದಿವಾಳಿ ಬಿದ್ದಿವೆ. ಅನೇಕ ಮಾರವಾಡಿಗಳ ಮಳಿಗೆಗಳು ದಿವಾಳಿ ಬಿದ್ದಿವೆ. ಅನೇಕ ಮಾರವಾಡಿಗಳ ಮಳಿಗೆಗಳು ದಿವಾಳಿ ಎದ್ದಿವೆ. ದೊಡ್ಡ ದೊಡ್ಡ ಇಂಗ್ಲಿಷ್‌ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕೈ ಕಟ್ಟಿಕೊಂಡು ಕುಳಿತಿದ್ದಾರೆ. ಸರಕಾರ ದ್ವೇಷಿಗಳ ಕೈಯಲ್ಲಿ ಬಹಿಷ್ಕಾರವೊಂದು ದೊಡ್ಡ ಆಯುಧವಾಗಿ ಪರಿಣಮಿಸಿದೆ” ಎಂದು ಬರೆಯಿತು. ಬಿಪಿನ್‌ಚಂದ್ರಪಾಲರೆಂದರೆ ಸರ್ಕಾರ ನಡುಗುವಂತಾಯಿತು. ಅವರ ಚಳುವಳಿಯ ಪರಿಣಾಮವಾಗಿ ಬಂಗಾಳದ ಗೌರ್ನರ್ ಫುಲ್ಲರ್ ಎಂಬಾತ ರಾಜೀನಾಮೆ ಕೊಡಬೇಕಾಯಿತು.

೧೯೦೬ರಲ್ಲಿ ಕಲ್ಕತ್ತ ಕಾಂಗ್ರೆಸ್‌ಅಧಿವೇಶನದಲ್ಲಿ ಪಾಲರ ನಿರ್ಭಯ ವೃತ್ತಿ ಬೆಳಕಿಗೆ ಬಂತು. ಅವರ ನಿರ್ದೇಶನದಲ್ಲಿಯೇ ವಿಷಯ ನಿಯಾಮಕ ಸಮಿತಿಯು ಗೊತ್ತುವಳಿಗಳೆಲ್ಲ ರೂಪುತಳೆದವು. ೧೯೦೭ರ ಮೇ ತಿಂಗಳಿನಲ್ಲಿ ಮದರಾಸಿನ ತರುಣರ ಬಿನ್ನಹವನ್ನು ಮನ್ನಿಸಿ ಅಲ್ಲಿಯ ಸಮುದ್ರ ದಂಡೆಯ ಮೇಲೆ ಅವರು ಮಾಡಿದ ಭಾಷಣಗಳಿಗೆ ೨೦-೩೦ ಸಾವಿರ ಜನ ಸೇರುತ್ತಿದ್ದರು. “ಭಾರತ ಬ್ರಿಟಿಷ್‌ಸಾಮ್ರಾಜ್ಯದ ಭಾಗವಾಗಿರಲಾರದು. ಸ್ವತಂತ್ರವಾಗಿ ಸಾಮಾನವಾಗಿ ಮಿತ್ರರಾಷ್ಟ್ರವಾಗಬಹುದು. ಭಾರತಕ್ಕೆ ಸ್ವರಾಜ್ಯ ಪಡೆಯಲೇ ಬೇಕು” ಎಂದರು.

ವಂದೇ ಮಾತರಂ ಪ್ರಸಂಗ”

ವಂದೇ ಮಾತರಂ ಪತ್ರಿಕೆಯಲ್ಲಿ ಬರೆದ ಲೇಖಕ್ಕಾಗಿ ಅರವಿಂದರ ಮೇಲೆ ಸರಕಾರ ಮೊಕದ್ದಮೆ ಹೂಡಿತು. ಪಾಲರನ್ನು ಸಾಕ್ಷಿಯಾಗಿ ಕರೆದಾಗ ಅವರು ಸಾಕ್ಷಿ ನುಡಿಯಲು ನಿರಾಕರಿಸಿದರು. ಅದಕ್ಕೆ ವಿವರಣೆ ಕೊಡುತ್ತ “ಈ ಪ್ರಕರಣ ಆತ್ಮಸಾಕ್ಷಿಗೆ ವಿರೋಧವಾದದ್ದು. ಇದು ಅನ್ಯಾಯದ ಮೊಕದ್ದಮೆ, ಸಮಾಜಕ್ಕೆ ಹಾನಿಕರವೂ, ದೇಶದ ಶಾಂತತೆಗೆ ಭಂಗ ತರುವಂತಹದೂ ಆಗಿದೆ. ಆದುದರಿಂದ ಇಂಥ ಮೊಕದ್ದಮೆಗಳಲ್ಲಿ ಸಾಕ್ಷಿ ಹೇಳದಿರುವುದೇ ನಾಗರಿಕನ ಕರ್ತವ್ಯವೆಂದು ಭಾವಿಸುತ್ತೇನೆ” ಎಂದರು.

ಆಗಿನ ಶಾಸನದ ಪ್ರಕಾರ ಇಂತಹ ಮೊಕದ್ದಮೆಯಲ್ಲಿ ಸಾಕ್ಷಿಯಾಗಿ ಕರೆಸಿದರೆ ಸಾಕ್ಷಿ ಹೇಳಲೇ ಬೇಕಾಗುತ್ತಿತ್ತು. ಹೇಳಲು ನಿರಾಕರಿಸಿದರೆ ಶಿಕ್ಷೆಯಾಗುತ್ತಿತ್ತು. ಇದು ತಿಳಿದೂ ಬಿಪಿನ್‌ಚಂದ್ರರು ಸಾಕ್ಷ್ಯ ಹೇಳುವುದಿಲ್ಲ ಎಂದು ಸಾರಿದರು. ಕೋರ್ಟಿಗೆ ಅವಮಾನ ಮಾಡಿದ ಅಪರಾಧಕ್ಕಾಗಿ ಬಿಪಿನ್‌ಚಂದ್ರರಿಗೆ ನ್ಯಾಯಾಧೀಶರು ಆರು ತಿಂಗಳು ಶಿಕ್ಷೆ ವಿಧಿಸಿದರು. ಈ ಅಹಿಂಸಾತ್ಮಕ ಪ್ರತೀಕಾರವನ್ನು ಪ್ರಪ್ರಥಮವಾಗಿ ಆಚರಿಸಿ ತೋರಿಸಿದ ಪಾಲರ ಬಗ್ಗೆ ಉತ್ತಮ ಉಪನ್ಯಾಸಕಾರ, ಲೇಖಕ ಹಾಗೂ ರಾಷ್ಟ್ರೀಯವಾದದ ಪ್ರಮುಖ ವಕ್ತಾರನ ಬಗ್ಗೆ ಜನತೆಯ ಆದರ ಹೆಚ್ಚಿತು. ಕಲ್ಕತ್ತೆಯಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ಪಾಲರನ್ನು ಅಭಿನಂದಿಸಲು ಸೇರಿದ್ದ ಸಭೆ ಒಂದು ಸಾವಿರ ರೂಪಾಯಿ ಸಂಗ್ರಹಿಸಿ ಪಾಲರ ಹೆಂಡತಿಗೆ ಕಳುಹಿಸಿತು.

ಪಾಲರು ಜೈಲಿನಲ್ಲಿದ್ದಾಗ ಹಿಂದೂಧರ್ಮದ ಮೇಲೆ ಎರಡು ಪುಸ್ತಕಗಳನ್ನು ಬರೆದರು.

ಅವರು ಜೈಲಿನಿಂದ ಬಿಡುಗಡೆಯಾಗಿ ಬಂದ ದಿನ ಕಲ್ಕತ್ತೆಯ ನಾಗರಿಕರು ಅವರನ್ನು ಗೌರವಿಸಿ ನಿಧಿಯನ್ನು ಅರ್ಪಿಸಿದರು.

ಹೀಗೆ ಬಿಪಿನ್‌ಚಂದ್ರರು ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಆದರೆ ಜನತೆಯಲ್ಲಿ ಬಹಿಷ್ಕಾರದ ಚಳವಳಿಗಾಗಲಿ, ಇನ್ನಿತರ ಸ್ವಾತಂತ್ರ್ಯ ಸಂಗ್ರಾಮದ ಬಗೆಗಾಗಲಿ ಸಂಘಟನೆಯಿಲ್ಲದುದರಿಂದ ಇಲ್ಲಿಯ ರಾಜಕಾರಣದಿಂದ ದೂರವಾಗಿ ಇಂಗ್ಲೆಂಡಿಗೆ ಹೋಗಿ ಭಾರತದ ಜನತೆಯ ಪರವಾಗಿ ಪ್ರಚಾರ ಮಾಡಹತ್ತಿದರು.

ಇಂಗ್ಲೆಂಡಿನಲ್ಲಿ ಸ್ವರಾಜ್ಯ ಪತ್ರಿಕೆಯನ್ನು ಪಾಲರು ಸ್ಥಾಪಿಸಿದರೂ ಬಹುಕಾಲ ನಡೆಯದುದರಿಂದ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದರು. ಭಾರತದೊಡನೆ ಸಹಾನುಭೂತಿಯುಳ್ಳ ಮುಖಂಡರನ್ನು ಕಂಡರು. ಮೂರು ವರ್ಷಗಳ ನಂತರ ಇಂಗ್ಲೆಂಡಿನಿಂದ ತಿರುಗಿಬಂದ ಬಳಿಕ ಸ್ವರಾಜ್ಯದಲ್ಲಿ ಬರೆದ ಒಂದು ಲೇಖನಕ್ಕಾಗಿ ಸರಕಾರ ಒಂದು ತಿಂಗಳ ಶಿಕ್ಷೆ ವಿಧಿಸಿತು.

ಜಾಗತಿಕ ದೃಷ್ಟಿ

ಸೆರೆಮನೆಯಿಂದ ಹೊರಬಂದ ಬಳಿಕ ಬಿಪಿನ್‌ಚಂದ್ರರು ಭಾರತದ ಸ್ಥಾನ ಏನಾಗಬೇಕೆಂಬುದನ್ನು ವಿವರಿಸಿದರು. ಆಗ ಬ್ರಿಟಿಷ್‌ಸಾಮ್ರಾಜ್ಯ ವಿಸ್ತಾರವಾಗಿ, ಪ್ರಬಲವಾಗಿತ್ತು. ಅದರ ಕೇಂದ್ರ ಬ್ರಿಟನ್‌; ಕೆಲವು ದೇಶಗಳಿಗೆ ಒಳ ಆಡಳಿತದಲ್ಲಿ ಸ್ವಾತಂತ್ರ್ಯವಿತ್ತು. ಭಾರತಕ್ಕೆ ಯಾವ ಬಗೆಯ ಸ್ವಾತಂತ್ರ್ಯವೂ ಇರಲಿಲ್ಲ. ಬಿಪಿನ್‌ಚಂದ್ರರು ಭಾರತ ಬ್ರಿಟನ್ನಿಗೆ ಮತ್ತು ಇತರ ದೇಶಗಳಿಗೆ ಸಮಾನವಾಗಿರಬೇಕೆಂದು ಸೂಚಿಸಿದರು. ಭಾರತ ಬ್ರಿಟನ್ನಿಗೆ ಸಮಾನವಾಗಿರಬೇಕು, ಆದರೆ ಭಾರತ ಇತರೆ ದೇಶಗಳಿಂದ ದೂರವಾಗಿ ಒಂಟಿಯಾಗಿ ನಿಲ್ಲಬಾರದು. ಹಲವು ರಾಷ್ಟ್ರಗಳ ನಡುವೆ, ಅವುಗಳೊಡನೆ ಹೊಂದಿಕೊಂಡು ಬಾಳಬೇಕು ಎಂಬ ಅಭಿಪ್ರಾಯವನ್ನು ನಿರೂಪಿಸಿದರು. ಹೀಗೆ ಜಾಗತಿಕ ದೃಷ್ಟಿಯನ್ನು ಪಡೆದಿದ್ದ ಮೊದಲನೆಯ ಭಾರತೀಯ ನಾಯಕ ಬಿಪಿನ್‌ಚಂದ್ರಪಾಲ್‌ಎನ್ನಬಹುದು.

ಪಾಲರಿಗೆ ತಮ್ಮದೇ ಒಂದು ಪಕ್ಷ ಕಟ್ಟುವುದಕ್ಕಾಗಲೀ, ಯಶಸ್ವಿ ರಾಜಕಾರಣಿಯಾಗುವುದಕ್ಕಾಗಲೀ ಹಣದ ಅನುಕೂಲತೆ ಇರಲಿಲ್ಲ. ಅವರ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೂ ಕೇವಲ ಅವರ ಬರವಣಿಗೆಯೊಂದೇ ಆಧಾರವಾಗಿತ್ತು. ಅವರ ಜೀವನವೇ ಒಂದು ಬಡಯಾತ್ರಿಕನ ಕಥೆಯಾಗಿತ್ತು.

ಅವರು ಅನೇಕ ವರ್ಷಗಳ ವರೆಗೆ ಬಹುದೊಡ್ಡ ತೀವ್ರಗಾಮಿಯೆಂದೆನಿಸಿಕೊಂಡಿದ್ದರೂ ತಮ್ಮ ಬದುಕಿನ ಕೊನೆಯ ಆರು ವರ್ಷಗಳಲ್ಲಿ ತೀವ್ರಗಾಮಿತ್ವವನ್ನೂ ಕಾಂಗ್ರೆಸ್ಸನ್ನೂ ಬಿಟ್ಟುಬಿಟ್ಟಿದ್ದರು. ಅವರು ಹುಟ್ಟಾ ಕ್ರಾಂತಿಕಾರಿಯಾದುದರಿಂದ ಯಾವುದೇ ಒಂದು ಪಕ್ಷದ ಶಿಸ್ತಿಗೆ ಒಳಗಾಗಿರುವುದು ಸಾಧ್ಯವಾಗಲಿಲ್ಲ. ೧೯೧೮ರಿಂದ ೧೯೨೦ರವರೆಗೆ ಕಾಂಗ್ರೆಸ್ಸಿನಲ್ಲಿ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದುದೇನೋ ನಿಜ. ತಿಲಕರ ಮತ್ತು ಆನಿ ಬೆಸೆಂಟರ ಹೋಂ ರೂಲ್‌ಚಳುವಳಿಯಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಪಂಜಾಬ್‌ಮತ್ತು ದಿಲ್ಲಿ ಸರಕಾರಗಳು ಬಿಪಿನ್‌ಚಂದ್ರಪಾಲ್‌ಮತ್ತು ಲೋಕಮಾನ್ಯ ತಿಲಕರಿಗೆ ಹೋಂ ರೂಲ್‌ಚಳುವಳಿಯ ಪ್ರಚಾರಕ್ಕೆ ಬರಬಾರದೆಂದು ಆಜ್ಞೆ ಹೊರಡಿಸಿದ್ದವು. ೧೯೧೮ರ ಮಾರ್ಚಿಯಲ್ಲಿ ಅವರಿಬ್ಬರೂ ಇಂಗ್ಲೆಂಡಿಗೆ ಹೋಗಲು ಕೊಲಂಬೊ ಮುಟ್ಟಿದಾಗ ಬ್ರಿಟಿಷ್‌ಸರಕಾರ ಪಾಸ್‌ಪೋರ್ಟ್ ರದ್ದುಮಾಡಿತು.

ಗಾಂಧೀಜಿಯೊಡನೆ ಮತಭೇದ

ಕಲ್ಕತ್ತೆಯಲ್ಲಿ ೧೯೨೦ರ ಕೊನೆಯ ಭಾಗದಲ್ಲಿ ನಡೆದ ಕಾಂಗ್ರೆಸ್‌ಅಧಿವೇಶನದಲ್ಲಿ ಗಾಂಧೀಜಿ ಅಸಹಕಾರ ಚಳವಳಿ ಠರಾವು ಮಂಡಿಸಿದರು. ಇದರಲ್ಲಿ ಭಾರತೀಯರು ಬ್ರಿಟಿಷ್ ಸರ್ಕಾರದೊಂದಿಗೆ ಯಾವ ರೀತಿಯಿಂದಲೂ ಸಹಕರಿಸಬಾರದೆಂದು ಪ್ರಾರ್ಥಿಸಲಾಗಿತ್ತು. ಆ ಸರ್ಕಾರ ಕೊಟ್ಟಿದ್ದ ಎಲ್ಲ ಬಿರುದುಗಳನ್ನು ಹಿಂದಿರುಗಿಸಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಬಿಟ್ಟು ಹೊರಕ್ಕೆ ಬಂದು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಬೇಕು. ಬ್ರಿಟಿಷ್‌ಮತ್ತು ವಿದೇಶೀ ವಸ್ತುಗಳನ್ನು ಬಹಿಷ್ಕರಿಸಬೇಕು ಮೊದಲಾದ ಕ್ರಮಗಳನ್ನು ಸೂಚಿಸಿತ್ತು. ಪಾಲರು ತಿದ್ದುಪಡಿ ಸೂಚಿಸಿದರು. ಅದರಲ್ಲಿ ಅವರು ಭಾರತದ ಪ್ರತಿನಿಧಿಗಳ ಶಿಷ್ಟಮಂಡಲವನ್ನು ಭೇಟಿ ಮಾಡುವಂತೆ ಬ್ರಿಟನ್ನಿನ ಪ್ರಧಾನಮಂತ್ರಿಗಳನ್ನು ಪ್ರಾರ್ಥಿಸಬೇಕು, ಭಾರತಕ್ಕೆ ಕೂಡಲೇ ತನ್ನ ಆಡಳಿತವನ್ನು ನಡೆಸಿಕೊಳ್ಳುವ ಅಧಿಕಾರವನ್ನು ಕೊಡುವಂತೆ ಕೇಳಿಕೊಳ್ಳಬೇಕು ಎಂದು ಸೂಚಿಸಿದರು. ಮತ್ತು ಗಾಂಧೀಜಿಯವರ ವಿಚಾರವನ್ನು ಚಾಲನೆ ಮಾಡಲು ಒಂದು ಪ್ರಾತಿನಿಧಿಕ ಸಮಿತಿಯನ್ನು ನೇಮಿಸಬೇಕೆಂದು ವಾದಿಸಿದರು.

ಈ ಸೂಚನೆಯ ಸಮರ್ಥನೆಗಾಗಿ ಬಂಗಾಳದಲ್ಲಿ ಹಿಂದೆ ನಡೆಸಿದ ಸ್ವದೇಶಿ ಚಳವಳಿ ಏಕೆ ಯಶಸ್ವಿಯಾಗಲಿಲ್ಲವೆಂಬುದರ ವಿವರಗಳನ್ನು ವಿವರಿಸಿದರು. ಮತ್ತು ಅಸಹಕಾರ ಚಳುವಳಿ ಪ್ರಾರಂಭಿಸುವ ಮೊದಲು ಸಾಕಷ್ಟು ಪ್ರಚಾರ ನಡೆಯಬೇಕು, ಜನರಿಗೆ ಅಸಹಕಾರ ಚಳವಳಿ ಎಂದರೇನು, ಜನ ಏನು ಮಾಡಬೇಕು ಎಂಬುದನ್ನು ವಿವರಿಸಬೇಕು, ಇಲ್ಲವಾದರೆ ಇಂತಹ ಬೃಹತ್ ಚಳವಳಿ ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಈ ಸಭೆಯಲ್ಲಿ ಪಾಲರ ತಿದ್ದುಪಡಿ ಬಿದ್ದುಹೋಯಿತು. ಆದರೆ ಗಾಂಧೀಜಿಯವರ ಕನಸು ನನಸಾಗಲು ಕಾಲು ಶತಮಾನಕ್ಕಿಂತ ಹೆಚ್ಚು ಕಾಯಬೇಕಾಯಿತು. ಅಂದ ಬಳಿಕ ಪಾಲರ ಸೂಚನೆಯಲ್ಲಿ ವಾಸ್ತವಿಕತೆ ಇತ್ತೆಂಬುದು ಸ್ಪಷ್ಟವಾಗುತ್ತದೆ.

ಪಾಲರು ತಳೆದ ನಿಲುವನ್ನು ಅನೇಕರು ತಪ್ಪರ್ಥ ಮಾಡಿಕೊಂಡರು. ಅವರು ಬ್ರಿಟನ್ನಿನ ಪರವಾಗಿ ಇದ್ದವರಿಂದ ಹಣ ಪಡೆದು ಈ ಸೂಚನೆ ಮಾಡಿದ್ದಾರೆಂದು ಹೇಳಲಿಕ್ಕೂ ಹಿಂಜರಿಯಲಿಲ್ಲ. ಆಗ ಹಿರಿಯ ನಾಯಕರಾಗಿದ್ದ ದೇಶಬಂಧು ಚಿತ್ತರಂಜನದಾಸರು “ಅವರನ್ನು ನೀವು ಬೇಕಾದಂತೆ ಅಂದುಕೊಳ್ಳಿ. ಆದರೆ ಅವರು ಹಣಕ್ಕಾಗಿ ತನ್ನನ್ನು ಮಾತ್ರ ಮಾರಿಕೊಂಡ ಎಂದು ಹೇಳಬೇಡಿ. ಏಕೆಂದರೆ ಅವರಿಗೆ ಹಣವೆಂದರೆ ಕಸಕ್ಕಿಂತಲೂ ಕಡೆ” ಎಂದು ಗರ್ಜಿಸಿದರು.

ಕೇಂದ್ರ ಶಾಸನ ಸಭೆ

ಪಾಲರು ೧೯೨೪ರಿಂದ ೨೭ರವರೆಗೆ ಕೇಂದ್ರ ಶಾಸನ ಸಭೆಯಲ್ಲಿ ಕಲ್ಕತ್ತೆಯ ಪ್ರತಿನಿಧಿಯಾಗಿದ್ದರು. ಚುನಾವಣೆಗೆ ನಿಂತ ಸಂದರ್ಭದಲ್ಲಿ ಮತದಾರರ ಕರ್ತವ್ಯಗಳನ್ನು ತಿಳಿಸಿದುದಲ್ಲದೆ ತಾವು ಆರಿಸಿಬಂದರೆ ಏನೇನು ಸಾಧಿಸುತ್ತೇವೆ ಎಂಬುದನ್ನು ವಿಶದಪಡಿಸಿದರು. ಮತದಾರರು ವೋಟು ಮಾಡುವಾಗ ಪಕ್ಷದ ವಿಷಯಕ್ಕೆ ಪ್ರಾಧಾನ್ಯ ಕೊಡಬಾರದು, ಪಕ್ಕಕ್ಕಿಂತ ದೇಶ ಮುಖ್ಯ ಎಂದು ಜನತೆಗೆ ಪ್ರಾರ್ಥನೆ ಮಾಡಿದರು. ದೇಶಕ್ಕಾಗಿ ದಕ್ಷ ಕೆಲಸ ಮಾಡುವಾತನನ್ನು ಆರಿಸಬೇಕು. ಆಯ್ಕೆಯಾದನಂತರ ಆತನು ಸರಿಯಾಗಿ ಜನಹಿತದ ಕೆಲಸ ಮಾಡದಿದ್ದಾಗ ಆತನನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದೂ ಸೂಚಿಸಿದ್ದರು. ಜನತೆಯು ಎಚ್ಚೆತ್ತು ತಮ್ಮ ಪ್ರತಿನಿಧಿಯ ಮೂಲಕ ತಮ್ಮ ಅನಿಸಿಕೆಗಳನ್ನು ವ್ಯಕ್ತಮಾಡದಿದ್ದರೆ ಪ್ರಜಾಸತ್ತೆಯು ಯಶಸ್ವಿಯಾಗಲಾರದೆಂದು ಮತದಾರರನ್ನು ಎಚ್ಚರಿಸಿದ್ದರು.

ಬಿಪಿನ್‌ಚಂದ್ರರು ಕಲ್ಕತ್ತೆಯ ಮತದಾರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮತ್ತು ತನ್ನ ಮತಕ್ಷೇತ್ರದ ಏಳಿಗೆಗಾಗಿ ಯತ್ನಿಸಿದರು. ಮೂರು ವರ್ಷಗಳ ನಂತರ ಪುನಃ ಅವರು ಚುನಾವಣೆಗೆ ನಿಲ್ಲಲಿಲ. ಚುನಾವಣೆಗಳಲ್ಲಿ ಹಣಕಾಸು, ಕೋಮು ಭಾವನೆ ಮುಖ್ಯವಾಗುತ್ತಿವೆಯೇ ಹೊರತು ಸಾರ್ವಜನಿಕ ಹಿತ ಅಥವಾ ರಾಜಕೀಯ ತತ್ವಕ್ಕೆ ಮನ್ನಣೆ ಇಲ್ಲವೆಂದು ಅವರಿಗೆ ಅನ್ನಿಸಿತು.

"ಎಲ್ಲರೂ ಸಮಾನರಾದ ಪ್ರಜಾಪ್ರಭುತ್ವ ನಮಗೆ ಬೇಕು"

ಬಿಪಿನ್‌ಚಂದ್ರಪಾಲರು ಭಾರತದ ಹಿರಿಯ ನಾಯಕರ ಮೆಚ್ಚುಗೆ ಗಳಿಸಿದ್ದರು. ಸುಭಾಷ್‌ಚಂದ್ರ ಬೋಸರು ೧೯೨೩ರಲ್ಲಿ ಬಂಗಾಳ ಪ್ರಾಂತಿಕ ಕಾಂಗ್ರೆಸ್‌ ಕಾರ್ಯದರ್ಶಿಗಳಾಗಿದ್ದಾಗ, “ಪಾಲರು ತಿರುಗಿ ಬರುವುದಾದರೆ ನಾವು ಸ್ವಾಗತಿಸುತ್ತೇವೆ” ಎಂದು ಅವರಲ್ಲಿ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜವಾಹರಲಾಲರು “ಪಾಲರು ಧಾರ್ಮಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಅತ್ಯಂತ ಮೇಲ್ಮಟ್ಟದಲ್ಲಿ ಇದ್ದಾರೆ. ಅವರಷ್ಟು ಚೆನ್ನಾಗಿ ಬಂಗಾಳ ಮತ್ತು ಭಾರತದ ಜನತೆಯ ಆಳವಾದ ಭಾವನೆಗಳನ್ನು ಅರಿತು ಜಗತ್ತಿನ ಎದುರು ಇಟ್ಟವರು ವಿರಳ” ಎಂದು ಹೊಗಳಿದ್ದಾರೆ.

ಮಬ್ಬು ಕವಿದ ವರ್ಷಗಳು

ಬಿಪಿನ್‌ಚಂದ್ರರ ಜೀವನದ ಕಡೆಯ ಹನ್ನೊಂದು ವರ್ಷಗಳು ತುಂಬಾ ದುಃಖಕರವಾಗಿದ್ದವು. ಇಂಗ್ಲೆಂಡಿನಲ್ಲಿದ್ದಾಗ ಅವರು ಹಣಕಾಸಿಲ್ಲದೆ ಬಹಳ ಕಷ್ಟಪಡಬೇಕಾಯಿತು. ಇಂಗ್ಲಿಷಿನಲ್ಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ದಿನ ತಳ್ಳಬೇಕಾಯಿತು. ಕ್ರಾಂತಿಕಾರಿ ಲೇಖನಗಳನ್ನು, ಬ್ರಿಟನನ್ನು ಉಗ್ರವಾಗಿ  ಟೀಕಿಸುವ ಲೇಖನಗಳನ್ನು ಸಹಜವಾಗಿ ಆ ಪತ್ರಿಕೆಗಳು ಪ್ರಕಟಿಸಲು ಇಷ್ಟಪಡುತ್ತಿರಲಿಲ್ಲ. ಆದುದರಿಂದ ಪಾಲರು ಸೌಮ್ಯವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿತ್ತು. ಭಾರತ ಸರ್ಕಾರವನ್ನು ನಡುಗಿಸುವ ಉಗ್ರ ಹೋರಾಟಗಾರರಾಗಿದ್ದ ಪಾಲರು ೧೯೨೦-೨೧ರ ಸುಮಾರಿಗೆ ಗಾಂಧೀಜಿಯವರು ಭಾರತದ ಮಹಾ ನಾಯಕರು ಎನ್ನಿಸಿಕೊಂಡರು. ಆದರೆ ಪಾಲರು ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ದೂರ ಉಳಿದರು. ಬಂಗಾಳದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ಚಿತ್ತರಂಜನದಾಸರನ್ನು ಟೀಕಿಸಿದರು. ಈ ಎಲ್ಲ ಕಾರಣಗಳಿಂದ ಅವರ ಜನಪ್ರಿಯತೆ ಕ್ರಮೇಣ ಮಾಸುತ್ತ ಬಂತು. ಈ ಹನ್ನೊಂದು ವರ್ಷಗಳಲ್ಲಿ ಅವರು ಆಗಾಗ ರಾಷ್ಟ್ರದ ಸಮಸ್ಯೆಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು; ಆದರೂ ಅವರು ರಾಜಕೀಯದಿಂದ ನಿವೃತ್ತರಾಗಿದ್ದರು ಎಂದೇ ಹೇಳಬೇಕು. ಬಡತನ ಒಂಟಿತನ ನೋವುಗಳಲ್ಲಿ ಈ ಕಾಲವನ್ನು ಕಳೆಯಬೇಕಾಯಿತು.

ಬಿಪಿನ್‌ಚಂದ್ರಪಾಲರು ೧೯೩೨ರ ಮೇ ೨೦ರಂದು ತಮ್ಮ ಕೊನೆಯ ಉಸಿರನ್ನೆಳೆದರು. ಆಗ ಸ್ಟೇಟ್ಸ್‌ಮನ್‌ಬರೆದ ಸಂಪಾದಕೀಯ ಚಿತ್ತವೇಧಕವಾಗಿತ್ತು. “ದೇಶದ ಸ್ವಾತಂತ್ರ್ಯಕ್ಕೆ ಪ್ರೇರಣೆಯನ್ನು ನೀಡಿದ ಬಿಪಿನ್‌ಚಂದ್ರಪಾಲರು ನಿಧನ ಹೊಂದಿದ ಬಳಿಕ ರಾಷ್ಟ್ರೀಯ ಪತ್ರಿಕೆಗಳು ಅವರನ್ನು ಹೊಗಳುತ್ತಿವೆ. ಆದರೆ ಇಂದು ಅವರನ್ನು ಹೊಗಳುತ್ತಿರುವವರು ಅವರು ಕಷ್ಟದಲ್ಲಿದ್ದಾಗ ನೆರವಿಗೆ ಬರಲಿಲ್ಲ. ಸುಮಾರು ಏಳು ವರ್ಷಗಳಿಗಿಂತ ಹೆಚ್ಚು ಕಾಲ ಇಂಗ್ಲಿಷರ ಮಾಲಕತ್ವದ ಪತ್ರಿಕೆಗಳೇ ಅವರ ಲೇಖನಗಳನ್ನು ಪ್ರಕಟಿಸುತ್ತಿದ್ದವು. ಭಾರತೀಯ ಪತ್ರಿಕೆಗಳು ಅವರ ಪ್ರಬುದ್ಧ ವಿಚಾರಗಳಿಗೆ ಎಡೆಗೊಡಲಿಲ್ಲ. ಅವರ ಶವದ ಮೇಲೆ ಪುಷ್ಪಗುಚ್ಚಗಳ ರಾಶಿಯನ್ನು ಹಾಕಲು ಇಂದು ಮುಂದಾಗಿರುವವರೇ ಅವರು ಬದುಕಿದ್ದಾಗ ಟೀಕಿಸಿದರು” ಎಂದು ಬರೆದಿತ್ತು.

ವ್ಯಕ್ತಿತ್ವ

ಬಿಪಿನ್‌ಚಂದ್ರಪಾಲರದು ವರ್ಚಸ್ವಿ ವ್ಯಕ್ತಿತ್ವ, ಅವರ ಸಾಧನೆ ಬಹುಮುಖವಾದುದ್ದು. ಇಪ್ಪತ್ತು ಇಪ್ಪತ್ತೈದು ಸಹಸ್ರ ಮಂದಿಯ ಸಭೆಯಲ್ಲಿ, ಧ್ವನಿವರ್ಧಕವಿಲ್ಲದೆ ಅವರು ಗಂಟೆಗಟ್ಟಲೆ ಸಭಿಕರ ಮನಸ್ಸನ್ನು ಸೆರೆಹಿಡಿಯುವಂತೆ ಮಾತನಾಡುತ್ತಿದ್ದರೆಂದರೆ ಅವರು ಎಷ್ಟು ವಿಷಯಗಳನ್ನು ತಿಳಿದುಕೊಂಡಿದ್ದರು, ಎಷ್ಟು ಸ್ಪಷ್ಟವಾಗಿ ವಿಷಯಗಳನ್ನು ನಿರೂಪಿಸುತ್ತಿದ್ದರು, ಅವರ ಭಾಷೆ ಎಷ್ಟು ಶಕ್ತವಾದದ್ದು ಎಂಬುದನ್ನು ಊಹಿಸಬಹುದು. ತಮಗೆ ಸರಿ ಎಂದು ತೋರಿದ್ದನ್ನು ನಿರ್ಭಯವಾಗಿ ನುಡಿಯುವ, ಆಚರಿಸುವ ದಿಟ್ಟ ವ್ಯಕ್ತಿತ್ವ ಅವರದು. ಜಾತಿಪದ್ಧತಿಯನ್ನು ಅವರು ಹದಿನಾಲ್ಕನೆಯ ವಯಸ್ಸಿಗೆ ತಿರಸ್ಕರಿಸಿದರು. ಬ್ರಹ್ಮ ಸಮಾಜದ ರೀತಿ, ತತ್ವಗಳು ಅವರ ಮನಸ್ಸಿಗೆ ಒಪ್ಪಿಗೆಯಾದವು. ತಾವು ಸಾಂಪ್ರದಾಯಿಕ ಹಿಂದೂಮತವನ್ನು ಬಿಟ್ಟು ಬ್ರಹ್ಮ ಸಮಾಜವನ್ನು ಸೇರಿದರೆ ತಂದೆಗೆ ಕೋಪ ಬರುತ್ತದೆ. ಅವರಿಂದ ಓದಿಗೆ ಸಿಕ್ಕುವ ಹಣದ ಸಹಾಯ ನಿಂತುಹೋಗುತ್ತದೆ ಎಂದು ತಿಳಿದೂ ಬ್ರಹ್ಮರೆಂದರೆ ಆಗಿನ ಸಮಾಜದಲ್ಲಿ ದೊಡ್ಡ ಪಾಪ. ಧೈರ್ಯವಾಗಿ ಪಾಲರು ವಿಧವೆಯನ್ನು ಮದುವೆಯಾದರು. ತಮ್ಮ ಗುರುವೆನಿಸಿದ್ದ ಕೇಶವಚಂದ್ರ ಸೇನರು ನಡೆದುಕೊಂಡ ರೀತಿ ಸರಿಯಿಲ್ಲ ಎಂದು ತೋರಿದಾಗ ಅವರಿಂದ ದೂರವಾದರು. ೧೮೯೧ರಲ್ಲಿ ಅವರು ಹಿಂದೂ ಯುವಕ ಯುವತಿಯರ ಮದುವೆಯ ವಯಸ್ಸಿಗೆ ಸಂಬಂಧಿಸಿದ ಶಾಸನಕ್ಕೆ ಬೆಂಬಲ ಕೊಟ್ಟರೆ ಅವರನ್ನು ಕೊಲೆ ಮಾಡುವುದಾಗಿ ಕೆಲವರು ಬೆದರಿಸಿದರು. ಆದರೂ ಪಾಲರು ಜಗ್ಗಲಿಲ್ಲ. ಬ್ರಿಟಿಷ್‌ಸರ್ಕಾರವನ್ನೇ ವಿರೋಧಿಸಿ ಸೆರೆಮನೆಗೆ ಹೋದರು. ಸರ್ಕಾರಕ್ಕೂ, ಬಲಿಷ್ಠವಾದ ಬಿಳಿಯರಿಗೂ ಕೋಪ ಬರುವುದೆಂದು ತಿಳಿದೂ ಅಸ್ಸಾಮಿಯ ಟೀ ತೋಟಗಳ ಕೆಲಸಗಾರರಿಗಾಗಿ ವರ್ಷಗಟ್ಟಲೆ ಹೋರಾಡಿದರು. ಕಡೆಯ ವರ್ಷಗಳಲ್ಲಿ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಆಗಿನ ಅತ್ಯಂತ ಜನಪ್ರಿಯ ನಾಯಕರಾಗಿದ್ದ ಮಹಾತ್ಮಗಾಂಧಿ ಮತ್ತು ಸಿ.ಆರ್. ದಾಸರನ್ನು ವಿರೋಧಿಸಿದರು. ಯಾರನ್ನಾದರೂ ಮೆಚ್ಚಿಸಲು ಅಥವಾ ಅಧಿಕಾರ ಗಿಟ್ಟಿಸಲು ಇಲ್ಲವೇ ಜನಪ್ರಿಯತೆ ಸಂಪಾದಿಸಲು ಎಂದೂ ಅವರು ಸುಳ್ಳು ಹೇಳಿಲಿಲ್ಲ. ತಮ್ಮ ಅಭಿಪ್ರಾಯವನ್ನು ಮುಚ್ಚಿಡಲಿಲ್ಲ. ಬಡತನವನ್ನೇ ಜೀವನದುದ್ದಕ್ಕೂ ಉಂಡ ಬಿಪಿನ್‌ಚಂದ್ರರು ಬಲಾಢ್ಯ ಬ್ರಿಟಿಷ್‌ಸರ್ಕಾರವನ್ನು ನಡುಗಿಸಿದರೆಂಬುದು ಅವರ ಪ್ರಾಮಾಣಿಕತೆ ಮತ್ತು ದೇಶಾಭಿಮಾನಗಳಿಗೆ ಸಾಕ್ಷಿ.

ಬಹುಮುಖ ಸೇವೆ

ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಹೋರಾಟಕ್ಕೆ ಒಂದು ರೂಪ ಕೊಟ್ಟರು. ಆದರೆ ಅವರು ದೇಶದ ನಾಯಕರಾಗುವ ಎಷ್ಟೋ ಮೊದಲೇ ಬಿಪಿನ್‌ಚಂದ್ರರು ಹಲವಾರು ರೀತಿಗಳಲ್ಲಿ ದೇಶಕ್ಕೆ ಮಾರ್ಗದರ್ಶನ ಮಾಡಿದ್ದರು. ಗಾಂಧೀಜಿ ಸ್ವರಾಜ್ಯ ಎಂಬ ಶಬ್ದವನ್ನು ಜನಪ್ರಿಯಗೊಳಿಸುವ ಮೊದಲೇ ಅದನ್ನು ಮತ್ತೆ ಮತ್ತೆ ಬಿಪಿನ್‌ಚಂದ್ರರು ಬಳಸಿದ್ದರು. ಭಾರತ ಬ್ರಿಟನಿನಿಂದ ಸಂಪೂರ್ಣವಾಗಿ ಸ್ವತಂತ್ರವಾಗಬೇಕು ಎಂದು ಸಾರಿದ್ದರು. ಸ್ವಾತಂತ್ರ್ಯಗಳಿಸಲುಬ್ರಿಟಿಷ್‌ಸರ್ಕಾರದೊಡನೆ ಅಸಹಕಾರ ಮಾಡಬೇಕು, ಬೇರೆ ದೇಶಗಳಿಂದ ಬಂದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಘೋಷಿಸಿದ್ದರು. ಬಂಗಾಳದಲ್ಲಿ ಸ್ವದೇಶಿ ಚಳವಳಿಯ ಜನಕರು ಬಿಪಿನ್‌ಚಂದ್ರರೇ. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದು ಅದು ಬ್ರಿಟನಿನ ಪ್ರಭುತ್ವದಿಂದ ಮುಕ್ತವಾದರೆ ಸಾಲದು, ಅದು ತನ್ನ ಏಳಿಗೆಗಾಗಿ ಇತರ ದೇಶಗಳನ್ನು ಬೇಡದೆ ಆರ್ಥಿಕವಾಗಿಯೂ ಸ್ವತಂತ್ರವಾಗಬೇಕು ಎಂದು ಪ್ರತಿಪಾದಿಸಿದರು. ಭಾರತದ ಸಂಪತ್ತನ್ನೂ ಕೆಲಸಗಾರರ ಶ್ರಮವನ್ನೂ ತನ್ನ ಅಭಿವೃದ್ಧಿಗಾಗಿ ಬ್ರಿಟನ್‌ಬಳಸಿಕೊಳ್ಳುವುದನ್ನು ವಿರೋಧಿಸಿದರು. ೧೯೨೦ರಲ್ಲಿ ಪ್ರಕಟವಾದ ಒಂದು ಪುಸ್ತಕದಲ್ಲಿ, ಕಾರ್ಮಿಕರ ಕೂಲಿ ಹೆಚ್ಚಬೇಕು, ಕೆಲಸದ ಅವಧಿ ಕಡಮೆಯಾಗಬೇಕು ಎಂದು ವಾದಿಸಿದರು. ದೇಶದ ನಿಜವಾದ ಸಂಪತ್ತು ಅಲ್ಲಿನ ಜನತೆ, ಈ ಸಂಪತ್ತು ಸಾರ್ಥಕವಾಗಬೇಕಾದರೆ ದೇಶದ ಭಾಗ್ಯವನ್ನು ಬೆಳೆಸುವ ಮನೋಧರ್ಮ ಮತ್ತು ಯೋಗ್ಯತೆಗಳನ್ನು ಕೊಡುವ ಶಿಕ್ಷಣ ಪದ್ಧತಿ ಅಗತ್ಯ ಎಂದು ಘೋಷಿಸಿ, ಅಂದಿನ ಶಿಕ್ಷಣ ಪದ್ಧತಿಯನ್ನು ಖಂಡಿಸಿದರು. ಅವರದು ಸಂಕುಚಿತ ಮನಸ್ಸಿನ ದೇಶಾಭಿಮಾನವಲ್ಲ. ಭಾರತ ಎಲ್ಲ ರಾಷ್ಟ್ರಗಳೊಡನೆ ಸಹಕಾರದಿಂದ, ಸ್ನೆಹದಿಂದ ಬಾಳಬೇಕು, ಜಗತ್ತಿನ ಶಾಂತಿ, ಪ್ರಗತಿಗಳಿಗೆ ತನ್ನ ಕೊಡುಗೆಯನ್ನು ನೀಡಬೇಕು ಎಂದು ಅವರ ಹಂಬಲ. “ವಂದೇ ಮಾತರಂ”ನಂತಹ ನಿರ್ಭೀತ, ದೇಶಪ್ರೇಮದ , ಪ್ರಗತಿಪರ ಪತ್ರಿಕೆಯನ್ನು ನಡೆಸಿ ಭಾರತದಲ್ಲಿ ಪತ್ರಿಕೆಗಳನ್ನು ನಡೆಸುವವರಿಗೆ ಒಂದು ಸ್ಫೂರ್ತಿದಾಯಕ ಆದರ್ಶವನ್ನು ಮುಂದಿಟ್ಟರು. ಹಿಂದೂ ಸಮಾಜಕ್ಕೆ ಅಂಟಿಕೊಂಡ ಹಲವು ದೋಷಗಳನ್ನು ಅವರು ತೀವ್ರವಾಗಿ ಖಂಡಿಸಿದರು. ಆದರೆ ಹಿಂದೂ ಧರ್ಮದ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಇತರ ಧರ್ಮಗಳ ತಿರುಳನ್ನು ತಿಳಿದುಕೊಂಡಿದ್ದರು. ಅವರ ಜೀವನದ ಕಡೆಯ ಭಾಗದಲ್ಲಿ ಶಂಕರಾಚಾರ್ಯರು, ಶ್ರೀ ಚೈತನ್ಯರು-ಇವರ ಪ್ರಭಾವ ಅವರ ಮೇಲಾಯಿತು. ಅವರ ಲೇಖನಿಯೂ ಸಮರ್ಥವಾದದ್ದು. ನೂರಾರು ಲೇಖನಗಳನ್ನು ಬರೆದರು; ಆತ್ಮಚರಿತ್ರೆಯನ್ನು ಬರೆದರು; ಬ್ರಹ್ಮಸಮಾಜದ ಧ್ಯೇಯಗಳನ್ನು ವಿವರಿಸಿ ಪುಸ್ತಕ ಬರೆದರು; “ದಿ ನ್ಯೂ ಸ್ಪಿರಿಟ್-ದಿಸೌಲ್‌ಆಫ್‌ಇಂಡಿಯ” “ದಿ ನ್ಯೂ ಎಕನಾಮಿಕ್‌ಮೆನಸ್‌ಟು ಇಂಡಿಯ” “ಸ್ವದೇಶಿ ಅಂಡ್ ಸ್ವರಾಜ್‌” ಮೊದಲಾದ ಪುಸ್ತಕಗಳಲ್ಲಿ ಎಚ್ಚೆತ್ತ ಭಾರತದ ಹೊಸ ದೃಷ್ಟಿ-ಶಕ್ತಿಗಳನ್ನು ನಿರೂಪಿಸಿದರು. ಅದರ ಸಮಸ್ಯೆಗಳನ್ನು ವಿಶ್ಲೇಷಿಸಿದರು. ರಾಮಮೋಹನರಾಯ್‌, ಕೇಶವಚಂದ್ರ ಸೇನ್‌, ಅರವಿಂದರು, ರವೀಂದ್ರರು ಇಂತಹ ಹಲವಾರು ಮಂದಿ ಆಧುನಿಕ ಭಾರತದ ಹಿರಿಯರ ಸಾಧನೆಯನ್ನು ಕುರಿತು ವಿವರವಾಗಿ ಬರೆದರು.

ಅವರೊಮ್ಮೆ ಬರೆದರು: “ಬಾಳಿನ ಎಲ್ಲ ರಂಗಗಳಲ್ಲಿ, ಸಂಬಂಧಗಳಲ್ಲಿ ಪ್ರಜಾಪ್ರಭುತ್ವದ ಆಚರಣೆಯೇ ನಮ್ಮ ಗುರಿ. ಹುಟ್ಟು, ಲಿಂಗ, ಶ್ರೀಮಂತ ಅಥವಾ ಬಡ ಸಂಸಾರ, ಮೇಲು ಅಥವಾ ಕೀಳು ಅಂತಸ್ತು-ಇಂತಹ ಯಾವ ಆಕಸ್ಮಿಕದಿಂದಲೂ ಯಾರಿಗೂ ಅನುಕೂಲ ಅಥವಾ ಅನನುಕೂಲವಿಲ್ಲದ, ಎಲ್ಲರೂ ಸಮಾನರಾದ ಪ್ರಜಾಪ್ರಭುತ್ವ ನಮಗೆ ಬೇಕು.”

ಅವರು ಸಾಯುವುದಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಕೊಟ್ಟ ಸಂದರ್ಶನದಲ್ಲಿ “ನಮ್ಮ ಕಾಲದ ಬುದ್ಧಿವಂತರೆಂದೆನಿಸಿಕೊಳ್ಳುವವರಲ್ಲಿ ಸ್ಪಷ್ಟವಾಗಿ ಸ್ವತಂತ್ರವಾಗಿ ವಿಚಾರ ಮಾಡುವ ಶಕ್ತಿ ಮೂಡಿಬರಬೇಕಾಗಿದೆ” ಎಂದಿದ್ದರು.

ನಮ್ಮ ಜನಾಂಗ ಸ್ವತಂತ್ರವಾಗಿ, ಸ್ಪಷ್ಟವಾಗಿ ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳುವುದೇ ನಾವು ಪಾಲರಿಗೆ ಅರ್ಪಿಸಬೇಕಾದ ಕಾಣಿಕೆ, ಸಮರ್ಪಿಸಬೇಕಾದ ಶ್ರದ್ಧಾಂಜಲಿ.