ಷೇಕ್ಸ್‌ಪಿಯರ್ ಕೊನೆಕೊನೆಗೆ ಬರೆದ ನಾಟಕಗಳಲ್ಲಿ ಟೆಂಪೆಸ್ಟ್ ಒಂದು. ಅದು ಕೊಟ್ಟಕೊನೆಯದಲ್ಲವಾದರೂ ಅದರ ಹಿಂದಿನದೆಂದು ಅನೇಕ ವಿದ್ವಾಂಸರ ಊಹೆ. ಅದೇನೆ ಇರಲಿ, ವೈವಿಧ್ಯಮಯ ಜೀವನವನ್ನು ಬಾಳಿ, ಬದುಕಿನ ಸಿಹಿಕಹಿಗಳನ್ನುಂಡು, ಬಾಳಿನ ಗುಟ್ಟುನ್ನೂ ಬೆಲೆಯನ್ನೂ ಅರಿತ ಪರಿಪಕ್ವಾನುಭವದ, ಸಮಗ್ರದೃಷ್ಟಿಯ ಪರಿಣತವಯಸ್ಸಿನ ನಾಟಕಕಾರನ ಪರಿಣತಕೃತಿ ಅದು ಎಂಬುದು ನಿರ್ವಿವಾದ ಸಂಗತಿ. ವೈರ ವೈರಕ್ಕೆ ಮದ್ದಲ್ಲ; ಸೇಡು ಸೇಡನ್ನೆ ಹೆರುತ್ತದೆ; ಪ್ರೇಮ ಔದಾರ್ಯ ಕ್ಷಮೆ ಸಹನೆ ಮಾನವನನ್ನು ಪುನೀತಗೊಳಿಸುವ, ಭೂಮಿಗೆ ನಾಕವನ್ನೆಳೆದುತರುವ ದೈವೀಗುಣಗಳು; ಇವೆಲ್ಲ ಪ್ರಾರ್ಥನೆ ಪೂಜೆ ಧ್ಯಾನ ತಪಸ್ಸುಗಳಿಂದ ಮಾತ್ರ ಒದಗುವಂಥವು – ಎಂಬಿವೇ ವಿಶ್ವತತ್ತ್ವಗಳು ಈ ನಾಟಕದಲ್ಲಿ ಪ್ರತಿಮಿತವಾಗಿವೆ. ಇಲ್ಲಿ ನಿರೂಪಣೆಗೊಂಡಿರುವ ಜೀವನದರ್ಶನ ಭಾರತೀಯ ದರ್ಶನದಿಂದ ಅಭಿನ್ನವಾದುದು. ಆದುದರಿಂದಲೆ ಪಾತ್ರಸೃಷ್ಟಿ ಸನ್ನಿವೇಶಕಲ್ಪನೆ ಮತ್ತು ನಾಟಕದ ವಾತಾವರಣ ಭಾರತೀಯ ಸಂಪ್ರದಾಯಕ್ಕೂ ಅಭಿರುಚಿಗೂ ತುಂಬ ಹೊಂದಿಕೊಂಡಿರುವಂತೆ ಕಾಣುತ್ತದೆ. ಪ್ರಾಸ್ಪೆರೋನಲ್ಲಿ ವಿಶ್ವಾಮಿತ್ರ ಕಣ್ವಮುನಿಗಳನ್ನೂ ಮಿರಾಂಡಳಲ್ಲಿ ಶಕುಂತಲೆಯಂಥ ಮುಗ್ಧ ಋಷಿಕನ್ಯೆಯನ್ನೂ ಸುಲಭವಾಗಿ ಗುರುತಿಸಬಹುದಾಗಿದೆ.

ಈ ಕಾರಣದಿಂದ “ಬಿರುಗಾಳಿ” “ಟೆಂಪೆಸ್ಟ್” ನಾಟಕದ ಅನುವಾದವಾದರೂ ಇಂಗ್ಲಿಷ್ ಬಾರದ ಜನರಿಗೆ ಸ್ವತಂತ್ರಕೃತಿಯೆಂದೇ ಕಾಣಬಹುದು. ಬಹುಮಟ್ಟಿಗೆ ಮೂಲವನ್ನೆ ಅನುಸರಿಸಿದ್ದರೂ ಅಲ್ಲಲ್ಲಿ ಸ್ವಾತಂತ್ರ್ಯವಹಿಸಿ ಒಂದೆರಡು ದೃಶ್ಯಗಳನ್ನು ಬದಲಾಯಿಸಿಕೊಂಡಿದೆ (ಮೂಲದ ಮೊದಲನೆಯ ದೃಶ್ಯಕ್ಕೂ ಇಲ್ಲಿಯ ಮೊದಲನೆಯ ದೃಶ್ಯಕ್ಕೂ ಸಂಬಂಧವೇ ಇಲ್ಲ); ಹಾಸ್ಯದ ಸನ್ನಿವೇಶಗಳಲ್ಲಿ, ಸಂಭಾಷಣೆಗಳಲ್ಲಿ ಮತ್ತು ಹಾಡುಗಳಲ್ಲಿ ಒಮ್ಮೊಮ್ಮೆ ಸ್ವತಂತ್ರ ಸೃಷ್ಟಿಯೇ ಆಗಿದೆ. ಈ ಅಂಶವನ್ನು ತ್ರಿಶಂಕು, ಬೀಮಣ ಮತ್ತು ಶನಿಯರ, ಶಿವನಾಯಕ ಮತ್ತು ಗೌರಾಂಬೆಯರ ಮಾತುಕತೆಗಳಲ್ಲಿ, ಕಿನ್ನರ, ನದೀದೇವಿ ಮತ್ತು ಬನದೇವಿಯರ ಹಾಡುಗಳಲ್ಲಿ ಮನಗಾಣಬಹುದು.

ಮಾನವನ ಮನೋರಂಗದಲ್ಲಿ ಯಾವಾಗಲೂ ದುಶ್ಶಕ್ತಿ ಸಚ್ಛಕ್ತಿಗಳಿಗೆ ಹೋರಾಟ ನಡೆಯುತ್ತಿರುತ್ತದೆ. ಒಂದು ಕಡೆ ಲೋಭ ಮೋಹ ಛಲ ವಂಚನೆ ಅಹಂಕಾರ ಮೊದಲಾದ ಪಾಶವೀಶಕ್ತಿಗಳು, ಮತ್ತೊಂದು ಕಡೆ ತ್ಯಾಗ ಪ್ರೇಮ ಕ್ಷಮೆ ಸತ್ಯ ಶಾಂತಿ ಮೊದಲಾದ ದೈವೀಶಕ್ತಿಗಳು. ಇವುಗಳ ಹೋರಾಟವೇ ಬಾಹ್ಯಪ್ರಪಂಚದಲ್ಲಿ ಯುದ್ಧ ಕೊಲೆ ರಕ್ತಪಾತ ಮೊದಲಾದ ಅನಾಹುತಗಳ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಈ ಹೋರಾಟದಲ್ಲಿ ಪಾಶವೀಶಕ್ತಿಗೆ ಮೊದಮೊದಲು ವಿಜಯ ದೊರಕಿದರೂ ಕೊನೆಗೆ ದೈವೀಶಕ್ತಿಯೇ ಗೆಲ್ಲಬೇಕು. ಇಲ್ಲವಾದರೆ ಪ್ರಪಂಚ ಪಿಶಾಚಿಗಳ ನೃತ್ಯರಂಗವಾಗುತ್ತದೆ. ಈ ತತ್ತ್ವ ಈ ನಾಟಕದಲ್ಲಿ ಮೊದಲಿಂದ ಕೊನೆಯತನಕ ವಿಕಾಸಗೊಳ್ಳುತ್ತ ಹೋಗುತ್ತದೆ.

ತಮ್ಮನ ರಾಜ್ಯಲೋಭ ತಪೋನಿರತನೂ ಸಾತ್ತ್ವಿಕನೂ ಆದ ಅಣ್ಣನನ್ನು ರಾಜ್ಯಭ್ರಷ್ಟನನ್ನಾಗಿ ಮಾಡುತ್ತದೆ. ಅವನು ಪುಣ್ಯವಶದಿಂದ ಒರ್ವಳೇ ಮಗಳೊಡನೆ ದೂರದ ದ್ವೀಪದವೊಂದನ್ನು ಸೇರಿ, ಮಂತ್ರಬಲದಿಂದ ಪಾಶವೀಶಕ್ತಿ ದೈವೀಶಕ್ತಿಗಳೆರಡನ್ನೂ ತನ್ನ ಅಧೀನದಲ್ಲಿಟ್ಟುಕೊಂಡು ತಪೋನಿರತನಾಗಿರುತ್ತಾನೆ. ಒಮ್ಮೆ ರಾಜ್ಯಲೋಭಿ ತಮ್ಮನೂ ಅವನ ಆಪ್ತರೂ ದೋಣಿಯಲ್ಲಿ ಆ ದ್ವೀಪದೆಡೆಗೆ ಬರುತ್ತಾರೆ. ಆಗ ಅಣ್ಣ ಬಿರುಗಾಳಿಯೆಬ್ಬಿಸಿ, ದೋಣಿಯಲ್ಲಿದ್ದವರು ಚೆಲ್ಲಾಪಿಲ್ಲಿಯಾಗುವಂತೆ ಮಾಡಿ, ಕೂದಲು ಸಹ ಕೊಂಕದಂತೆ ಎಲ್ಲರನ್ನೂ ದ್ವೀಪದ ದಡಕ್ಕೊಯ್ದು ಬೇರೆ ಬೇರೆ ಕಡೆ ಸುರಕ್ಷಿತವಾಗಿಡುತ್ತಾನೆ.

ನಾಟಕ ಆರಂಭವಾಗುವುದು ಬಿರುಗಾಳಿಯ ಆರ್ಭಟದಿಂದ. ಅದು ರುದ್ರನಾಯಕ ರಣನಾಯಕರ ದುರಾಶೆ ದೌರ್ಜನ್ಯಗಳಿಗೆ ಸಂಕೇತವಾಗಿರುವಂತೆ ಭೈರವನಾಯಕನ ಶಾಪದ ಸಂಕೇತವೂ ಆಗಿದೆ. ಋಷಿಶಾಪ ಎಂತು ಕ್ಲೇಶಕಾರಿಯೊ ಅಂತೆ ತುದಿಯಲ್ಲಿ ಕ್ಲೇಶಹಾರಿಯೂ ಮಂಗಳಕಾರಿಯೂ ಅಹುದು. ಅದರ ಒಂದು ಮುಖ ಅಮಂಗಳ ಸ್ವರೂಪದ್ದಾದರೂ ಮತ್ತೊಂದು ಮುಖ ಮಂಗಳಸ್ವರೂಪದ್ದು. ಇಲ್ಲಿ ಬಿರುಗಾಳಿಗೆ ಪ್ರೇರಕಶಕ್ತಿ ಋಷಿ ಭೈರವನಾಯಕ, ಕರಣಶಕ್ತಿ ಕಿನ್ನರ ಎಂಬುದನ್ನರಿತರೆ ಈ ಸಂಕೇತದ ಅರ್ಥ ಸ್ಪಷ್ಟವಾಗುತ್ತದೆ. ಅದು ಆರಂಭದಲ್ಲಿ ರುದ್ರನಾಯಕ ರಣನಾಯಕ ಶಿವನಾಯಕರಿಗೂ ಅವರ ಆಪ್ತ ವರ್ಗದವರಿಗೂ, ಅಲ್ಲದೆ ಗೌರಾಂಬೆಗೂ ಅನಿಷ್ಟವಾಗಿ ಭಯಾನಕವಾಗಿ ಕಾಣುತ್ತದೆ; ಅವರನ್ನು ಘೋರ ದುಃಖಕ್ಕೆ ಗುರಿಮಾಡುತ್ತದೆ. ದುಃಖ ಯಾವಾಗಲೂ ಅಂತ್ಯದಲ್ಲಿ ಕಲ್ಯಾಣಸ್ವರೂಪಿ. ಏಕೆಂದರೆ ಅದು ಹೃದಯದ ಕಲ್ಮಷವನ್ನು ತೊಳೆದು ಪಾವನಗೊಳಿಸಿ ದೈವೀಕೃಪೆಗೆ ಯೋಗ್ಯಪಾತ್ರವನ್ನಾಗಿ ಮಾಡುತ್ತದೆ. ಭೈರವನಾಯಕ ತನ್ನ ತಮ್ಮ ರುದ್ರನಾಯಕನನ್ನು ಕ್ಷಮಿಸಲು ಸಿದ್ಧನಾಗಿದ್ದಾನೆ. ಆದರೆ ಅವನು ಕ್ಷಮೆಗೆ ಅರ್ಹನಾಗಬೇಡವೆ? ಇಷ್ಟಮಿತ್ರರಿಂದ ದೂರರಾಗಿ, ನಿರ್ಜನವಾದ ಪ್ರದೇಶದಲ್ಲಿ, ತನ್ನ ಮನೋವಿಕೃತಿಯ ಪ್ರತಿರೂಪಿಗಳಾಗಿರುವ ವಿಚಿತ್ರಾಕೃತಿಗಳ ನಡುವೆ ದೈಹಿಕ ಮತ್ತು ಮಾನಸಿಕ ಯಾತನೆಗಳನ್ನನುಭವಿಸಿ, ಹಿಂದಣ ತಮ್ಮ ಪಾಪಕರ್ಮಗಳನ್ನು ನೆನೆದುಕೊಂಡು ಕಣ್ಣೀರು ಸುರಿಸುತ್ತಾರೆ. ಪ್ರಾಯಶ್ಚಿತ್ತದಿಂದ ಒದಗಿದ ಪಶ್ಚಾತ್ತಾಪದಿಂದ ಪಾಪನಾಶವಾಗುತ್ತದೆ. ಪಾಪಿಗಳೆಲ್ಲ ಕಣ್ಣೀರಿನ ಗಂಗೆಯಲ್ಲಿ ಮಿಂದು ಶುದ್ಧರಾದಾಗ, ಶಾಪವೆ ವರವಾಗಿ ಪರಿಣಮಿಸಿ, ಭೈರವನಾಯಕನ ಕೃಪೆಗೆ ಪಾತ್ರರಾಗುತ್ತಾರೆ. ಗೌರಾಂಬೆಗಾದರೊ ಮೊದಲು ಬಿರುಗಾಳಿ ದುಃಖಾವಹವಾಗಿ ಕಂಡರೂ ಕೊನೆಗೆ ವರವಾಗಿ ಸುಖಾವಹವಾಗಿ ಪರಿಣಮಿಸಿ, ಶಿವನಾಯಕನ ಸಂಗಸುಖವನ್ನನುಭವಿಸುತ್ತಾಳೆ.

ಮಾನವನ ಪಾಶವೀ ಮತ್ತು ದೈವೀಶಕ್ತಿಗಳ ಹೋರಾಟ ಅತ್ಯಂತ ಉಜ್ವಲವಾಗಿ ಶನಿಯ ಮತ್ತು ಕಿನ್ನರರ ಪಾತ್ರಗಳಲ್ಲಿ ಪ್ರತಿಮಿತವಾಗಿದೆ. ಪಾಶವೀ ಶಕ್ತಿ ಯಾವಾಗಲೂ ವಿಕಾರಸ್ವರೂಪದ್ದು; ಅದು ಅನವರತ ಅದೋಮುಖಿ, ತಮೋಗುಣಿ; ಅಹಂಕಾರ ಸ್ವಾರ್ಥ, ಲೋಭ, ಆಲಸ್ಯ, ಹೊಟ್ಟೆಬಾಕತನ – ಅದರ ಲಕ್ಷಣ. ದೈವೀಶಕ್ತಿ ಸದಾ ಸೌಂದರ್ಯಪೂರ್ಣವಾದದ್ದು; ಅದು ಯವಾಗಲೂ ಊರ್ಧ್ವಮುಖಿ, ಸಾತ್ತ್ವಿಕಶೀಲವುಳ್ಳದ್ದು; ತ್ಯಾಗ, ಔದಾರ್ಯ, ಪ್ರೇಮ, ಕ್ಷಮಾ – ಇವು ಅದರ ಲಕ್ಷಣಗಳು. ಶನಿಶಕ್ತಿ ಕಿನ್ನರಶಕ್ತಿಗಳೆರಡೂ ಮಾನವನಲ್ಲಿವೆ; ಶನಿಶಕ್ತಿಯನ್ನು ದಮನಮಾಡಿ ಕಿನ್ನರಶಕ್ತಿಯನ್ನು ಎಚ್ಚರಿಸಿದಾಗ ಮಾತ್ರ ಮಾನವನ ಉನ್ನತಿ ಸಾಧ್ಯ. ನಾಟಕದಲ್ಲಿ ಬರುವ ಶನಿಯ ಮತ್ತು ಕಿನ್ನರರ ಸ್ವರೂಪಸ್ವಭಾವಗಳಿಂದ ಅವರು ಹೇಗೆ ಪಾಶವೀಶಕ್ತಿ ದೈವೀಶಕ್ತಿಗಳಿಗೆ ಸಂಕೇತಮಾತ್ರರು ಎಂದು ವಿದಿತವಾಗುತ್ತದೆ. ಭೈರವನಾಯಕ ಶನಿಯನನ್ನು ಗುಲಾಮಗಿರಿಯಲ್ಲಿಟ್ಟು, ಕಿನ್ನರನ ಅಲೌಕಿಕ ಶಕ್ತಸಾಮರ್ಥ್ಯಗಳನ್ನು ತನ್ನ ಉನ್ನತ ಧ್ಯೇಯಸಾಧನೆಗೆ ಬಳಸಿಕೊಂಡು ಕೃತಾರ್ಥನಾಗುತ್ತಾನೆ. ಶನಿಯ ಅರ್ಧಮಾನುಷ ಕಿಂಕರ. ಕಿನ್ನರ ಅತಿಮಾನುಷ ಕಿಂಕರ. ಇದರಲ್ಲೇ ಅವರ ವಿರೋಧಸ್ವಭಾವ ಸ್ವರೂಪಗಳು ವ್ಯಕ್ತವಾಗುತ್ತವೆ.

ಪ್ರಾರ್ಥನೆ ಪೂಜೆ ಧ್ಯಾನ ತಪಸ್ಸುಗಳಿಂದ ಮಾನವನ ಜೀವನ ದಾನವತೆಯಿಂದ ಪಾರಾಗಿ ಹೇಗೆ ಮನುಷ್ಯತ್ವ ಅಮರತ್ವಗಳನ್ನು ಸಾಧಿಸಬಲ್ಲುದೆಂಬುದು ಭೈರವನಾಯಕನ ಜೀವನದಿಂದ ಬೋಧೆಯಾಗುತ್ತದೆ. ಅಂಥ ಸಾಧಕನಿಗೆ ಕಷ್ಟಪರಂಪರೆಗಳು ಬರುತ್ತವೆ, ನಿಜ; ಆದರೆ ಅವು ಪರೀಕ್ಷಾರ್ಥವಾದುವು, ಕ್ಷಣಿಕವಾದುವು. ಸಾಧನೆಯ ಆರಂಭದಲ್ಲಿ ಶನಿ ಅವನನ್ನು ಹಿಗ್ಗಾಮುಗ್ಗ ಎಳೆದು ಕಾಡಿಸುತ್ತದೆ; ಕಿನ್ನರನಂಥ ಅತಿಮಾನುಷಲೋಕದ ಶಕ್ತಿಗಳನ್ನು ಸೆರೆಹಾಕಿ ಮಾನವನಿಗೆ ದಕ್ಕದಂತೆ ದರ್ಪದಿಂದಲೂ ಅಹಂಕಾರದಿಂದಲೂ ಮೆರೆಯುತ್ತದೆ. ಅದನ್ನು ಗೆದ್ದನೆಂದರೆ ಅತಿಮಾನುಷಲೋಕದ ಸರ್ವಶಕ್ತಿಗಳೂ ಅವನಿಗೆ ಕಿಂಕರರಾಗಿ ನೆರವಾಗುತ್ತವೆ. ಸಮಸ್ತ ನಿಸರ್ಗವೆ ಅವನ ಅಧೀನವಾಗುತ್ತದೆ. ಅವನ ಅಪ್ಪಣೆಯಂತೆ ಗಾಳಿ ಬೀಸುತ್ತದೆ, ನದಿ ಹರಿಯುತ್ತದೆ, ಗುಡುಗು ಸಿಡಿಲು ಆರ್ಭಟಿಸುತ್ತವೆ. ಅವನ ಸನ್ನಿಧಿಯ ಹಸುವಿನ ಕರು ಹುಲಿಯ ಹಾಲನ್ನು ಕುಡಿಯುತ್ತದೆ, ಗಜ ಸಿಂಹಗಳು ಜೊತೆಯಲ್ಲಿ ವಾಸಿಸುತ್ತವೆ, ತೋಳ ಕುರಿ ಒಂದೇ ಬಟ್ಟಲಲ್ಲಿ ನೀರು ಕುಡಿಯುತ್ತವೆ.

ಷೇಕ್ಸ್‌ಪಿಯರ್ ನ ಟೆಂಪೆಸ್ಟ್‌ ನಾಟಕದಲ್ಲಿಯೂ ಈ ತತ್ತ್ವಗಳು ಗೋಪ್ಯವಾಗಿಯೊ ಪ್ರಕಟವಾಗಿಯೊ ವ್ಯಕ್ತಗೊಂಡಿವೆ. ಇಷ್ಟೇ ಅಲ್ಲದೆ, ಕೆಲವು ವಿಮರ್ಶಕರು ಈ ನಾಟಕದಲ್ಲಿ ನಾಗರಿಕ – ಅನಾಗರಿಕ ಜನಾಂಗಗಳ, ವಿಜ್ಞಾನಿ ಮಾನವ – ವನ್ಯಮಾನವನ ಹೋರಾಟವನ್ನೂ ಗುರುತಿಸಲೆಳಸುತ್ತಾರೆ. ಷೇಕ್ಸ್‌ಪಿಯರ್ ನ ಸಮಯದಲ್ಲಿ ಇಂಗ್ಲೆಂಡ್‌ ದೇಶ ಅಭೀವೃದ್ಧಿಯ ಶಿಖರವನ್ನೇರುವುದರಲ್ಲಿತ್ತು. ವಿಜ್ಞಾನಕ್ಷೇತ್ರದಲ್ಲಿ, ಕೈಗಾರಿಕಾಪ್ರಪಂಚದಲ್ಲಿ ತಕ್ಕಮಟ್ಟಿನ ಸಿದ್ಧಿಯನ್ನು ಪಡೆದಿತ್ತು. ಅಲ್ಲಿಯ ಅನೇಕ ಸಾಹಸಿಗರು ದಿಗ್ವಿಜಯಯಾತ್ರೆಯನ್ನು ಕೈಕೊಂಡು, ಹೊಸಹೊಸ ವಸಾಹತುಗಳನ್ನು ಕಂಡುಹಿಡಿಯುತ್ತಿದ್ದರು. ಕಡಲರಾಣಿಯೆಂದು ಆ ದೇಶ ಪ್ರಸಿದ್ಧವಾಗಿತ್ತು. ಸಾಮ್ರಾಜ್ಯವನ್ನು ಸ್ಥಾಪಿಸುವ ಆತುರದಲ್ಲಿತ್ತು. ಅಂತಹ ಕಾಲದಲ್ಲಿ ಮೂಡಿದ ಈ ನಾಟಕದಲ್ಲಿ ಸಾಮ್ರಾಜ್ಯದಲ್ಲಿ ಸಾಮ್ರಾಜ್ಯಶಾಹಿಯ ಪ್ರಭಾವಕ್ಕೆ ಒಳಗಾಗಿರುವ ವಿದ್ವಾಂಸರಿಗೆ ನಾಗರಿಕ-ಬರ್ಬರ ಜನಾಂಗಗಳ ಹೋರಾಟ ಕಂಡಿರವುದೇನೂ ಆಶ್ಚರ್ಯವಲ್ಲ.

‘ಬಿರುಗಾಳಿ’ಯಲ್ಲಿ ಸಾಮ್ರಾಜ್ಯಶಾಹಿಯ ರಾಷ್ಟ್ರೀಯ ಮನೋಭಾವನೆಗಳನ್ನು ಮಾತ್ರ ನಾವು ಗುರುತಿಸಿದರೆ ಅದು ವಿಶ್ವಕೃತಿಯ ಮಟ್ಟಕ್ಕೆ ಏರುವುದಿಲ್ಲ. ಸರ್ವಕಾಲ ಸರ್ವದೇಶ ಮಾನ್ಯವಾಗುವ ವಿಶ್ವತತ್ತ್ವಗಳ ಪ್ರತಿಮೆಗಳನ್ನು ಗುರುತಿಸುವುದರಿಂದ ನಾಟಕಕೃತಿಗೆ ವಿಶ್ವತ್ವ ಮತ್ತು ಶಾಶ್ವತತ್ವ ಒದಗುವಂತಾಗುತ್ತದೆ.