[ದ್ವೀಪದ ಒಂದು ಭಾಗ. ಮುಸಲಧಾರೆಯಾಗಿ ಸುರಿಯುವ ಮಳೆಯ ಜವನಿಕೆಯಲ್ಲಿ ಸಮಸ್ತ ದೃಶ್ಯವೂ ಮಸುಗಾಗಿದೆ. ಬಿರುಗಾಳಿಗೆ ಬಳುಕುವ ಬಲ್ಮರಗಳ ಅಸ್ಪಷ್ಟಾಕಾರಗಳು ತೆರೆಯೊಳಗಣ ಚಿತ್ರದಂತೆ ಗೋಚರಿಸುತ್ತವೆ. ಗುಡುಗು ಸಿಡಿಲುಗಳ ನಡುನಡುವೆ ಕಿನ್ನರನ ಗಾನದ ತಾನ ಬಹುದೂರದಿಂದೆಂಬಂತೆ ಕೇಳಿಬರುತ್ತದೆ. ಬರಬರುತ್ತ ಗುಡುಗು ಮಿಂಚು ಮಳೆ ಇಳಿಮೊಗವಾಗಿ ಕಿನ್ನರನ ಹಾಡೂ ಕೇಳಿಸುತ್ತದೆ. ದೂರ ದೂರ ದೂರ ಸಂಚರಿಸಿ ಅದು ಮತ್ತೆ ಕಿವಿಮರೆಯಾಗಿ, ಮಳೆ ಹೊಳವಾಗುತ್ತದೆ. ತೊಯ್ದ ಬಟ್ಟೆಯ ಡೊಳ್ಳು ಹೊಟ್ಟೆಯ ನಸುಮುದುಕ ತ್ರಿಶಂಕು ಒಂದು ಬಂಡೆಯ ಮೇಲೆ ಬಳಲಿ ಕೂತಿರುವುದು ಕಣ್ಣಿಗೆ ಬೀಳುತ್ತದೆ.]

ತ್ರಿಶಂಕು(ಮೇಲೆ ನೋಡಿ)
ಏನು ಮಳೆ! ಏನು ಗುಡುಗು! ಏನು ಗಾಳಿ! ಏನು ಮಿಂಚು!
ಅಬ್ಬಬ್ಬ! ಪ್ರಳಯಕಾಲದ ಮಳೆಯ ರುದ್ರನಿಗೆ
ಮದವೇರಿ ಬಂದಾಗ ಚೇಳು ಕಡಿದಂತಿಹುದು!
ಗಾಳಿಯಾಳ್ವನಿಗೆ ಮರುಳಮರಿದಂತಿಹುದು!
ಮುಗಿಲೊಡೆಯನಾದರೋ ಕಳ್ಳು ಕುಡಿದಂತಿಹುದು:
ಬಾನ್ನೀರೆಗಾವುದೋ ಕುತ್ತಮೇರ್ದಂತಿಹುದು!
(ಸುಯ್ದು ಕೆಳಗೆ ನೋಡಿ)
ದೋಣಿ ತಲೆಕೆಳಗಾಗೆ ಎಲ್ಲರೂ ಮುಳುಗಿದರು:
ರಣನಾಯಕರು, ಶಿವನಾಯಕರು, ಆ ಮಂತ್ರಿ
ಜಯದೇವರು, ರಂಗನಾಯಕ ರುದ್ರನಾಯಕರು, –
ಎಲ್ಲರೂ ಮುಳುಗಿದರೆ? ನಾನೆಂತು ಬದುಕಿದೆನೊ
ನಾನರಿಯೆ. ಬೊಜ್ಜು ಬಂದಿಹ ದೇಹ; ಈಜಲರಿಯೆ!
ಆದರೇಂ? ಡೊಳ್ಳು ಬಂದಿಹ ಹೊಟ್ಟೆ; ಮುಳುಗಲರಿಯೆ!
ಹೊಳೆ ಕೂಡ ಹೇಸಿ ಬಿಸುಟಿತೆ ನನ್ನ? ಈ ಹೊಳೆಯ
ನಡುವೆಯಿಹ ದ್ವೀಪದಲಿ ಬಾಳ್ವುದಾದರು ಎಂತು?
ಗಳಪುವೆನೆ ಜನವಿಲ್ಲ; ಅಲೆಯುವೆನೆ ಉದ್ಯಾನ
ವನವಿಲ್ಲ; ತಿರಿಯುವೆನೆ ಅರಮನೆಗಳಿಲ್ಲಿಲ್ಲ;
ಹೊಡೆಯಾರಲುಂಬುವೆನೆ ಭಕ್ಷ್ಯಭೋಜ್ಯಗಳಿಲ್ಲ:
ಏನಿಲ್ಲ – ಜೀವವೆಂಬುದೆ ಇಲ್ಲ; ಸಾವೆ
ಸಾಮ್ರಾಜ್ಯವಾಳುತಿದೆ. ಗಾಳಿಗಳ ಸಂಗದಲಿ
ಗಾಳಿ ನಾನಾಗುವೆನು: ಮರುಳಿಗಿಂತಲು ಮರುಳು
ನಾನಾಗಿ ಹೋಗುವೆನು: – ನನ್ನ ಮಾಂಸಗಳೆಲ್ಲ
ಕರಕರಗಿ ಹೋಗುವುವು; ನಾನು ಎಲುಬಿನ ಮೂಟೆ
ಯಾಗುವೆನು! ಈ ಕಣ್ಣುಗಳು ಕರಗಿ ತೂತೆರಡು
ಮಾತ್ರ ನನಗುಳಿಯುವುವು. ಆ ಬಳಿಕ ಮಾನವರ
ಕೂಟದಲಿ ನಾನು ಕಲೆಯುವುದೆಂತು! – ಅಯ್ಯಯೋ,
ನಾನೀಗಲೇ ಮರುಳಾಗಲಾರಂಭಿಸಿಹೆನು!
ಅಲ್ಲದಿರೆ ನನಗೇತಕೀ ಹಸಿವೆ? ಅಯ್ಯಯೋ,
ನನ್ನ ಹಸಿವೆಯೆ ನನ್ನ ಬೊಜ್ಜು ಬಾಡನು ಕಿತ್ತು
ಸುಲಿಸುಲಿದು ನುಂಗುತಿದೆ. ಹಸಿದಿರುವ ಮರುಳುಗಳ
ದ್ವೀಪವಿದು! ನಿಜವಾಗಿಯೂ ದೆವ್ವಗಳ ದ್ವೀಪ!
(
ಕೂಗುವನು)
ಹಸಿವೆ! ಹಸಿವೆ! ಬಾಣಸಿಗ ಬೀಮಣಾ!
(ಹಾಗೆ ಮಲಗುವನು)

(ಬಾಣಸಿಗ ಬೀಮಣನು ಕೈಯಲಿ ಹೆಂಡದ ಬುರುಡೆಯೊಂದನು ಹಿಡಿದುಕೊಂಡು ಬರುವನು. ಸುಮಾರು ನಾಲ್ವತ್ತು ವರ್ಷ ವಯಸ್ಸಿನ ದಾಂಡಿಗನು. ತೊಯ್ದ ಬಟ್ಟೆಗಳು ಅವ್ಯವಸ್ಥೆಯಿಂದ ಮೈಗೆ ಅಂಟಿಕೊಂಡಿರುವುವು.)

ಬೀಮಣ – ನನಗೆ ಈಜಲು ಕಲಿಸಿಕೊಟ್ಟವನು ಸಾವಿರ ಶತಮಾನ, ಸಾಯದೆ ಹೋದರೆ, ಬದುಕಿದರೆ,ಜೀವದಿಂದಿದ್ದರೆ, ಬಾಳಲಿ! ಇಲ್ಲದಿರೆ ಉಳಿದೆಲ್ಲರಿಗೂ ಆದಂತೆ ನನಗೂ ನೀರ್ಮಸಣವಾಗುತ್ತಿತ್ತು! ಶಿವ ಶಿವಾ! ಎಂತಹ ದುರ್ಮಣ! ಎಂತಹ ದುರ್ಮರಣ! –   – ಏನು ಚಳಿಗಾಳಿ! (ಹೆಂಡವನು ಕುಡಿದು ಬಾಯಿ ಒರೆಸಿಕೊಂಡು ಮೇಲೆ ನೋಡಿ)  ಇನ್ನೂ ಆಗಸ ಸಿಟ್ಟಿನಿಂದ ಹುಬ್ಬುಗಂಟಿಕ್ಕಿಕೊಂಡೇ ಇದೆ. ಒಂದಲ್ಲ ಎರಡಲ್ಲ; ನಲವತ್ತು ಸಂವತ್ಸರಗಳನು ಕಳೆದ್ದಿದ್ದೇನೆ ಈ ಭೂಮಿಯ ಮೇಲೆ. ಆದರೂ ಇಂತಪ್ಪ ಬಿರುಗಾಳಿ ಮಳೆಗಳನು ನಾನು ಬೇರೆ ಕಂಡರಿಯೆ. ಕೇಳಿ ಕೂಡ ಅರಿಯೆ!

ತ್ರಿಶಂಕು – ಹಸಿವೆ! ಹಸಿವೆ! ಬೀಮಣಾ!

ಬೀಮಣ(ತನ್ನೊಳೆ)  ಏನು ಸದ್ದುಗಳಿವು! ಈ ದ್ವೀಪ ಸದ್ದುಗಳ ಮುದ್ದೆಯೆಂದೇ ತೋರುತ್ತದೆ. ಇದರ ತೀರವನೇರಿದಾಗಲೇ ಸಂಗೀತ ಕೇಳಿಸಿತು; ಯಾರೋ ಕರೆದಂತಾಯಿತು! ನೂರಾರು ಇಂಪಾದ ವಾಣಿಗಳು ಮಾತಾಡಿಕೊಳ್ಳುವಂತಾಯಿತು – ನಾನು ಬದುಕಿ  ಭೂಮಿಯ ಮೇಲಿರುವೆನೋ, ಸತ್ತು ಸ್ವರ್ಗದಲ್ಲಿರುವೆನೋ ನನಗೊಂದೂ ಬಗೆ ಹರಿವುದಿಲ್ಲ. ಅಂತೂ ಇದು ಮಾಯದ ಮನೆಯೆಂದೇ ತೋರುತ್ತದೆ!

ತ್ರಿಶಂಕು – ಅಯ್ಯಯೋ! ಹಸಿವೆ! ಬೀಮಣಾ!

ಬೀಮಣ – ಇದಾರ ದನಿ? ನನ್ನನೇ ಕರೆಯುತಿದೆ? ತ್ರಿಶಂಕುವಿನ ವಾಣಿಯಂತಿಹುದು! ಪಾಪ, ತ್ರಿಶಂಕು ಸತ್ತು ಪ್ರೇತವಾಗಿ ನನ್ನನು ಕರೆಯುತಿಹನೆಂದು ತೋರುತ್ತದೆ! ಹಾಗಾದರೆ ನಾನು ಸತ್ತಿಲ್ಲ! (ಕರೆಯುವನು)  ತ್ರಿಶಂಕೂ! ತ್ರಿಶಂಕೂ! ಎಲ್ಲಿರುವೆ? ಮಾತಾಡು?

ತ್ರಿಶಂಕು – ಅಯ್ಯಯೋ, ಹಸಿವೆ, ಬೀಮಣಾ!

ಬೀಮಣ – ಪಾಪ, ನಿಜವಾಗಿಯೂ ಪ್ರೇತವಾಗಿಹನು! ಇರಲಿ ಮಾತಾಡಿಸಿ ನೋಡುವೆನು. (ಗಾಳಿಯನ್ನು ಸಂಬೋಧಿಸಿ) ಮಿತ್ರನೇ, ನೀನು ಸತ್ತಿರುವೆ; ಪ್ರೇತವಾಗಿರುವೆ; ಅದ್ಯಶ್ಯನಾಗಿರುವೆ!

ತ್ರಿಶಂಕು – ಇಲ್ಲ. ನಾನು ಸತ್ತಿಲ್ಲ. ಚಳಿಯಿಂದ ಹಸಿದಿರುವೆ – ಅಯ್ಯಯೋ!

ಬೀಮಣ – ಹಾಗದರೆ ನಾನು ಸತ್ತಿರುವೆ! ನಾನು ಪ್ರೇತವಾಗಿರುವೆ! ನಾನು ನಿನಗೆ ಅದೃಶ್ಯನಾಗಿರುವೆ!

ತ್ರಿಶಂಕು(ಬೆಚ್ಚಿಬಿದ್ದು ಮೇಲಕ್ಕೆದ್ದು) ಹಾಗಾದರೆ ನೀನು ನನ್ನೊಡನೆ ಮಾತಾಡಿದ್ದೇಕೆ? ನಿನಗೇನು ಬುದ್ಧಿಯಿಲ್ಲವೇ? ಸತ್ತು ಪ್ರೇತವಾಗಿರುವವರು ಬದುಕಿ ಬಾಳುವರೊಡನೆ ಮಾತಾಡಬಾರದೆಂದು ಗೊತ್ತಿಲ್ಲವೇ ನಿನಗೆ?

ಬೀಮಣ(ತ್ರಿಶಂಕುವನ್ನು ನೋಡಿ ಗುರುತಿಸಿ, ತನ್ನಲ್ಲಿಯೇ) ಹೌದು! ಇವನೇ ನಮ್ಮ ತ್ರಿಶಂಕು! ಸತ್ತಿಲ್ಲ, ಪಾಪ ಬದುಕಿದ್ದಾನೆ! (ಗಟ್ಟಿಯಾಗಿ) ಮಿತ್ರನೇ, ಮಿತ್ರನೇ, ನಿನ್ನನ್ನು ಕಂಡು ನನಗೆ ಅತ್ಯಾನಂದವಾಗಿದೆ. (ಕೈಚಾಚಿ ಅವನನ್ನು ತಬ್ಬಿಕೊಳ್ಳಲು ಮುಂದೆ ನುಗ್ಗುವನು.)

ತ್ರಿಶಂಕು(ಹೆದರಿ ಚೀತ್ಕಾರಮಾಡಿ) ಅಯ್ಯಯೋ ಪಿಶಾಚ! ಬೀಮಣ ಪಿಶಾಚ! ನನ್ನನ್ನು ಪೀಡಿಸ ಬೇಡ! ನಿನ್ನ ದಮ್ಮಯ್ಯ! (ಎಂದು ಓಡಲೆಳಸುವನು.)

ಬೀಮಣ – ನಿಲ್ಲು, ತ್ರಿಶಂಕು. ಎಲ್ಲಿಗೆ ಓಡುವೆ? ನಿಲ್ಲು! (ಹಿಡಿದುಕೊಳ್ಳುವನು.)

ತ್ರಿಶಂಕು(ಹೆದರಿ) ಅಯ್ಯಮಾ! ಸತ್ತೇ! ಸತ್ತೇ! (ಬೀಳುವನು.)

ಬೀಮಣ(ತನ್ನಲ್ಲಿ) ಈ ಮುದುಕನನ್ನು ಹೆತ್ತ ಮುದಿಗೂಬೆ ಹಾಳಾಗ! ಏನು ಭಯ ಇವನಿಗೆ (ಬಹಿರಂಗ) ಅಯ್ಯೋ ತ್ರಿಶಂಕು, ಎಷ್ಟು ಭಯ ನಿನಗೆ! ನಾವಿಬ್ಬರೂ ಬದುಕಿದ್ದೇವೆ ಕಣಪ್ಪಾ! (ತ್ರಿಶಂಕು ನಿಟ್ಟುಸಿರುಬಿಟ್ಟು ಮೇಲೆದ್ದು ದೈನ್ಯದೃಷ್ಟಿಯಿಂದ ನೋಡುತ್ತ)

ತ್ರಿಶಂಕು – ಬೀಮಣ, ನಿಜವಾಗಿಯೂ ನೀನು ಸತ್ತಿಲ್ಲವಷ್ಟೆ?

ಬೀಮಣ – ನೀನು ಸತ್ತಿದ್ದರೆ ನಾನೂ ಸತ್ತಿದ್ದೇನೆ!

ತ್ರಿಶಂಕು – ಇಲ್ಲ, ನಿನ್ನ ದಮ್ಮಯ್ಯ! ನಾನು ನಿಜವಾಗಿಯೂ ಸತ್ತಿಲ್ಲ.

ಬೀಮಣ – ಹಾಗಾದರೆ ನಾನೂ ಸತ್ತಿಲ್ಲ!

ತ್ರಿಶಂಕು – ನಿನ್ನಾಣೆಗೂ?

ಬೀಮಣ – ನಿನ್ನಾಣೆಗೂ! ನನ್ನಾಣೆಗೂ! ಈ ಹೆಂಡದ ಬುರುಡೆ ಆಣೆಗೂ!

ತ್ರಿಶಂಕು(ಅಂಗಲಾಚುತ್ತ) ಬೀಮಣ, ಬಹಳ ಹಸಿವೆ! ಅದರಲ್ಲಿಯೂ ಬಾಯಾರಿಕೆ! ನಿಲ್ಲಲು ಕೂಡ ಬಲವಿಲ್ಲ. (ಹೆಂಡದ ಬುರುಡೆಯನ್ನು ಅಭೀಷ್ಟಕನಯನಗಳಿಂದ ಈಕ್ಷಿಸುವನು.)

ಬೀಮಣ(ನಗುತ್ತಾ) ಬುರುಡೆಯನ್ನು ಕಂಡು ಬಾಯಾರಿಕೆಯಾಯ್ತೆ?

ತ್ರಿಶಂಕು – ಇಲ್ಲ, ನಿನ್ನ ಕೊರಳಾಣೆ! ಗಂಟಲು ಒಣಗಿಹೋಗಿದೆ! ನಿಲ್ಲಲು ಕೂಡ ಆಗುವುದಿಲ್ಲ.

ಬೀಮಣ – ಈಗ ತಾನೆ ನಾಗಾಲೋಟ ಕಿತ್ತಿದ್ದೆ!

ತ್ರಿಶಂಕು – ಅಯ್ಯೋ, ಸಾವಿನೆದುರು ನೀರಡಿಕೆಯೆ!

ಬೀಮಣ – ಹೋಗಲಿ ಬಿಡು; ಇಗೋ ಕುಡಿ. (ಬೀಮಣನು ಬುರುಡೆಯನ್ನು ತ್ರಿಶಂಕುವಿನ ಬಾಯಿಗೆ ಹಿಡಿಯುವನು. ತ್ರಿಶಂಕು ಅದನ್ನು ಕೈಗಳಿಂದ ಹಿಡಿದುಕೊಳ್ಳಲು ಹೋಗಲು ಬೀಮಣನು ಅದಕ್ಕೆ ಒಪ್ಪದೆ ಹಿಂದಕ್ಕೆ ಎಳೆದುಕೊಳ್ಳುವನು.) ನೀನು ಮುಟ್ಟಬೇಡ! ನಾನೇ ಹೊಯ್ಯುತ್ತೇನೆ. (ತ್ರಿಶಂಕುವಿನ ಬಾಯಿಗೆ ಸುರೆಯನ್ನು ಹೊಯ್ಯುವನು.)

ತ್ರಿಶಂಕು(ಸಂತೋಷದಿಂದ ಹೊಟ್ಟೆ ನೀವಿಕೊಳ್ಳುತ್ತಾ) ಸತ್ತವನು ಬದುಕಿ ಬಂದೆನಯ್ಯಾ!

ಬೀಮಣ – ಅದರಿಂದಲೇ ದೇವತೆಗಳು ಇದನು ಪಾನಮಾಡುವರು. ಇದು ಮರ್ತ್ಯಲೋಕದ ಅಮೃತವಯ್ಯಾ, ಅಮೃತ!

ತ್ರಿಶಂಕು – ಬೀಮಣ, ಹೊಳೆಯಲ್ಲಿ ಬಿದ್ದವನು, ನೀನು ಬದುಕಿ ಬಂದುದು ಹೇಗೆ?

ಬೀಮಣ – ನೀನು ಬಂದಂತೆ.

ತ್ರಿಶಂಕು – ನಾನು ಬರಲಿಲ್ಲ; ಗಂಗಮ್ಮ ದಡ ಕಾಣಿಸಿದಳು.

ಬೀಮಣ – ನಾನು ಈಜಿ ಈಜಿ ನೆಲಸೇರಿದೆ.

ತ್ರಿಶಂಕು – ಉಳಿದವರು?

ಬೀಮಣ – ಗಂಗಮ್ಮನ ಪಾಲು!

ತ್ರಿಶಂಕು – ಶಿವನಾಯಕರು, ರಣನಾಯಕರು ಎಲ್ಲ ಮುಳುಗಿದರೇ?

ಬೀಮಣ – ನನಗೆ ಗೊತ್ತಿಲ್ಲ. ಉಳಿದವನು ನಾನೊಬ್ಬನೇ ಎಂದು ತಿಳಿದಿದ್ದೆ. ಜೊತೆಗೆ ನೀನೂ ಒಬ್ಬನು ಬದುಕಿಬಿಟ್ಟಿದ್ದೀಯೆ!

ತ್ರಿಶಂಕು – ಅವರ ಗತಿ ಏನಾಯಿತೆಂದು ನೋಡಬೇಕಲ್ಲಾ, ಮತ್ತೆ.

ಬೀಮಣ – ಅದಕ್ಕೇನು ಮಾಡಬೇಕು? ಹೇಳು!

ತ್ರಿಶಂಕು – ಮಾಡುವುದೇನು! ಹುಡುಕುವುದಪ್ಪಾ! ನೀನು ಈ ದಿಕ್ಕಿನಲ್ಲಿ ಹುಡುಕು. ನಾನು ಈ ದಿಕ್ಕಿನಲ್ಲಿ ನೋಡುತ್ತೇನೆ.
(ತೆರಳಲೆಸುವನು)

ಬೀಮಣ – ಎಚ್ಚರಿಕೆ, ತ್ರಿಶಂಕು, ಎಚ್ಚರಿಕೆ! ಇದೇನೋ! ಅದ್ಭುತ ದ್ವೀಪ! (ಗಾನ ಕೇಳಿಸುವುದು) ಕೇಳಿದೆಯಾ ಯಾರೋ ಹಾಡುತಿದಾರೆ!

ತ್ರಿಶಂಕು – ಮನುಷ್ಯರಿರಲಾರರು! ಕಿನ್ನರರಿರಬೇಕು!

(ಇಬ್ಬರೂ ಒಂದೊಂದು ಕಡೆಗೆ ಹೋಗುತ್ತಾರೆ)