[ದ್ವೀಪದಲ್ಲಿ ಭೈರವನಾಯಕನ ಗುಹೆಯ ಮುಂದುಗಡೆ ನೀಳವಾದ ಗಡ್ಡದಿಂದ ಪವಿತ್ರತರನಾಗಿ ತೋರುವ ಭೈರವನಾಯಕನೂ ಆತನ ಮಗಳು ಗೌರಾಂಬೆಯೂ ಬರುತ್ತಾರೆ.].

ಗೌರಾಂಬೆ(ಉದ್ವೇಗದಿಂದ)
ಅಪ್ಪಯ್ಯ, ನಿನ್ನ ಮಂತ್ರದ ಬಲದೊಳೀ ದೊಡ್ಡ
ಬಿರುಗಾಳಿ ಎದ್ದಿರುವುದಾದೊಡೆ ತವಿಸದನು.
ಕತ್ತಲೆಯ ಕಾರುತಿದೆ ಬಾಂದಳಂ! ಹುಚ್ಚೆದ್ದ
ವಾಹಿನಿ ಗಿರಿಶಿಖರಗಳ ಮುಟ್ಟಿ ಚೀರುತಿದೆ,
ಅಲ್ಲಿ ಮಲಗಿಹ ಗುಡುಗು ಮಿಂಚುಗಳನೆಚ್ಚರಿಸಿ!
ಬಿರುಗಾಳಿಯಲಿ ಸಿಲುಕಿ ನಮ್ಮ ಈ ದ್ವೀಪವೂ
ನಡುಗುತಿದೆ, ಮಿಡಿದ ಬೀಣೆಯ ತಂತಿಯಂದದಲಿ.
ಆ ರೌದ್ರ ದೃಶ್ಯವನು ನಾ ನೋಡಲಾರೆ!
ನೆನೆಯಲಾರೆ! ಆ ಕಿರುದೋಣಿ ತೆರೆಗಳಗ್ರದಲಿ
ಸುಳಿಗಾಳಿಯಲಿ ಸಿಲ್ಕಿ ಸುತ್ತುವ ತರಗಿನಂತೆ
ಕಂಪಿಸಿತು, ತತ್ತರಿಸಿ ಚಿಮ್ಮಿತು! ಹೋ ಎಂದು
ಬಡಜೀವಿಗಳು ಕೂಗುತಿರಲೊಡನೆ ಮುಳುಗಿತು! – (ಸುಯ್ದು)
– ಪುಣ್ಯಾತ್ಮರೊಬ್ಬರೂ ಇರಲಿಲ್ಲವೇ ಅಲ್ಲಿ? –
ನಿನ್ನ ಮಂತ್ರದ ಶಕ್ತಿ ನನಗಿದ್ದ ಪಕ್ಷದಲಿ
ಹೊಳೆಯನಿಳೆ ಈಂಟುವಂದದಿ ಮಾಡಿ ದೋಣಿಯನು
ಪೊರೆಯುತ್ತಿದ್ದೆ!

ಭೈರವ(ಮುಗುಳ್ನಗೆಯಿಂದ)
ತಾಳ್ಮೆಯಿಂದಿರು, ತಾಯಿ; ಇನ್ನೇನು
ಭಯವಿಲ್ಲ. ನಿನ್ನ ಪೂವೆದೆಯಳಲ ಪರಿಹರಿಸಿ
ಸಂತವಿಡು.

ಗೌರಾಂಬೆ – ಅಯ್ಯೋ ಇದೆಂತಪ್ಪ ದುರ್ದಿನಂ!

ಭೈರವ – ಭಯವೊಂದುಮಿಲ್ಲ; ಕೇಡಾರ್ಗಮಿಲ್ಲ;
ನಿರ್ನೆರಂ ನೀನೇತಕಿಂತು ಬೆದರುವೆ, ಮಗಳೆ?
ನಿನಗಾಗಿ, ನನ್ನ ಮುದ್ದಿನ ಮಗಳೆ, ನಿನಗಾಗಿ,
ನಿನಗೋಸುಗವೆ ನಾನು ಇಂತೆಲ್ಲಮೆಸಗಿರ್ಪೆ. – (ಅಂತರ್ಮುಖಿಯಾಗಿ)
ನೀನರಿಯೆ, ಮುದ್ದಿನ ಕುಮಾರ್ತೆ, ನೀನರಿಯೆ:
ನಾನಾರು? ನೀನಾರು? ಎಲ್ಲಿಂದ ನಾಲಿಲ್ಲಿ-
ಗೈತಂದಿಹೆವು? ಎಂಬುದಾವದನು ನೀನರಿಯೆ!
ನಿನ್ನ ಈ ತಂದೆ ಕಿರುಗುಹೆಗೊಡೆಯನೆಂಬುದನು
ಮಾತ್ರವೇ ನೀ ಬಲ್ಲೆ. ಮತ್ತಾವುದನು ಅರಿಯೆ. (ಕಣ್ತೊಯ್ಯುತ್ತಾನೆ)

ಗೌರಾಂಬೆ(ನಸುಗದ್ಗದಿಂದ)
ಇನ್ನೆವರಮರಿವಾಸೆ ಇರಲಿಲ್ಲ; ಬರಲಿಲ್ಲ.

ಭೈರವ(ಗಂಭೀರವಾಗಿ)
ಬಂದಿಹುದು! ಹೊತ್ತಿಂದು ಬಂದಿಹುದು, ನನ್ನಿಯನು
ನಿನಗೊರೆವ ಸಮಯ ಬಳಿಸಾರಿಹುದು. – ಬಾ ಇಲ್ಲಿ.
ನನ್ನ ಮಂತ್ರದ ಕವಚವನ್ನೆಳೆದು ಕೆಳಗಿರಿಸು –
(ಹಾಗೆ  ಮಾಡುತ್ತಾಳೆ)
ಹಾಗೆ; ಮಂತ್ರವು ಅಲ್ಲಿ ಬಿದ್ದಿರಲಿ. – ಕಣ್ಣೊರಸಿಕೊ,
ಸಾಂತಳಾಗು: – ನೀನು ನೋಡಿದ ದೋಣಿ ಮುಳುಗಿಲ್ಲ:
ಅಲ್ಲಿದ್ದ ಜನರ ಕೂದಲು ಕೂಡ ಕೊಂಕಿಲ್ಲ.
ನನ್ನ ಮಂತ್ರದ ಬಲದಿ ಮಾಯೆಯನು ಬೀಸಿದೆನು;
ಬಿರುಗಾಳಿ ಬೀಸಿದೊಲು, ಮಿಂಚು ಮಿಂಚಿದ ತೆರದಿ,
ಗುಡುಗು ಮೊಳಗಿದವೋಲು, ದೋಣಿಯು ಮುಳುಗಿದಂತೆ
ಕಣ್ಗಳಿಗೆ ತೋರಿದುದು. ಬೆದರದಿರು, ಗೌರಾ.
ಕಿವಿಗೊಟ್ಟು ಕೇಳು, ನಮ್ಮ ಹಿಂದಿನ ಕತೆಯ
ಹೇಳುವೆನು. ಇಂದದನು ಸಂಪೂರ್ಣ ಗೈಯುವೆನ್!

ಗೌರಾಂಬೆ – ಎನಿತೊ ಸೂಳ್ ಕತೆಯನೊರೆಯಲು ತೊಡಗಿ, ನಿಲ್ಲಿಸಿಹೆ –
‘ಇಂದಿರಲಿ. ಮುಂದೆ ಹೇಳುವೆನದನ್’ ಎಂದುಸುರಿ
ನಿದ್ದೆಮಾಳ್ಪೆನ್ನ  ಬಯಕೆಯನೆಳ್ಚರಿಸಿ ಕೆಣಕಿಹೆ.

ಭೈರವ – ಕತೆಯ ಹೇಳುವ ಕಾಲವೀಗಳೈತಂದಿಹುದು.
ಕಾಲವೇ ನಿನ್ನ ಕಿವಿಗಳ ತೆರೆಯುತಿಹುದು.
ಕೇಳು, ಕಿವಿಗೊಟ್ಟು ಕೇಳು. ಈ ಗುಹೆಗೆ ನಾವು
ಬರುವ ಮುನ್ನಿನ ಕಾಲದಾ ನೆನಪಿದೆಯೆ ನಿನಗೆ?
ನಿನಗೆ ನೆನಪಿರಲಾರದು: ನೀನಾಗ ಪುಟ್ಟವಳು,
ಮೂರೆ ವರ್ಷದ ಪುಟಾಣಿ!

ಗೌರಾಂಬೆ – ನೆನಪಿದೆ, ಅಪ್ಪಯ್ಯ,
ನೆನಪಿದೆ!

ಭೈರವ – ಎಲ್ಲಿಂದ? ಯಾರಿಂದ? ಏಕೆ? ಹೇಳು! –
ನಿನಗೆ ನೆನಪನು ತರುವ ಚಿತ್ರಮೇನಾದೊಡಂ
ಮನದಿ ಮೂಡಿದರದನು ಹೇಳು.
(ಗೌರಾಂಬೆ ಚಿಂತಿಸುತ್ತಾಳೆ)

ಗೌರಾಂಬೆ – ದೂರದಲಿ,
ನೆನಪಿನ ದಿಗಂತದಲಿ, ಮಸುಕಾದ ಕನಸಿನೊಲು,
ಮಬ್ಬಾಗಿ ಮಿಣುಕುತಿಹುದಾ ಚಿತ್ರ! ಐದಾರು
ಹೆಣ್ಣುಗಳು ಸಲಹಲಿರುತಿರ್ದರಲ್ಲವೆ ನನ್ನ?

ಭೈರವ – ಅಹುದಹುದೆ! ಅದಕಿಂತ ಮಿಗಿಲಾದ ಭಾಗ್ಯಮುಂ
ನಮಗಿತ್ತು. – ಇರಲಿ. ನಿನಗದರ ನೆನಪಾದುದೆಂತು?
– ಕತ್ತಲೆ ಕವಿದ ಕಳೆದ ಕಾಲದಾ ಗಬ್ಬದಲಿ, ಕಾಣ್,
ಮತ್ತೇನು ತೋರುತಿದೆ? ಇಲ್ಲಿಗೈತರ್ಪಾಗ
ನಾವೆಂತು ಬಂದೆವದ ಹೇಳು!

ಗೌರಾಂಬೆ(ಯೋಚಿಸಿ) ನೆನಪಿಲ್ಲ.

ಭೈರವ – ಇಂದಿಗೆ ಹನ್ನೆರಡು ವರುಷಗಳ ಹಿಂದೆ,
ಗೌರಾಂಬೆ, ಹನ್ನೆರಡು ವರುಷಗಳ ಹಿಂದೆ,
ನಾನು ಕೆಳದಿಯನಾಳ್ವ ನಾಯಕನಾಗಿದ್ದೆ.
ನಾನರಸು, ನೀನರಸುಕುವರಿಯಾಗಿದ್ದೆ.

ಗೌರಾಂಬೆ(ಕಣ್ಣರಳಿಸಿ ಕೌತುಕದಿಂದ)
ನೀನೆನ್ನ ತಂದೆಯಲ್ಲವೆ, ಜೀಯ?

ಭೈರವ – ಇಂತೇಕೆ ಪ್ರಶ್ನಿಸುವೆ? ನಿನ್ನಮ್ಮ ಹದಿಬದೆ!
ನೀನೆನ್ನ ಮಗಳೆಂದು ಹೇಳಿದವಳವಳೆಯೆ.
ನಿನ್ನ ತಂದೆಯೆ ಕೆಳದಿಯೊಡೆಯನಾಗಿದ್ದ;
ನೀನರಸು ಕುವರಿಯಾಗಿದ್ದೆ.

ಗೌರಾಂಬೆ – ಶಿವ ಶಿವಾ!
ಯಾರ ಪಾಪವು ನಮ್ಮನಿಲ್ಲಿಗೊಯ್ದಿತು? ಅಥವಾ
ನಮ್ಮ ಪುಣ್ಯವೊ ಏನೊ?

ಭೈರವ – ಪಾಪ ಪುಣ್ಯಗಳೆರಡು,
ಪ್ರಿಯಪುತ್ರಿ .ಪಾಪವೆಮ್ಮನು ಹೊರಗೆ ತಳ್ಳಿತು;
ಪುಣ್ಯವೆಮ್ಮನೀಯೆಡೆಗೊಯ್ದಿತು!

ಗೌರಾಂಬೆ – ಅಪ್ಪಯ್ಯ,
ನಿನಗೆನಿತು ಅಳಲನಿತ್ತೆನೊ ಏನೊ ನಾನಂದು? –
ಮುಂದಾದುದೇನು? ಹೇಳಪ್ಪ!

ಭೈರವ – ನನಗೆ ತಮ್ಮನೆ,
ನಿನ್ನ ಕಕ್ಕನು, ರುದ್ರನೆಂಬುವನು – ಸರಿಯಾಗಿ
ಕೇಳು – ಆ ತಮ್ಮನೆಯೆ ನಮ್ಮ ದುರ್ಗತಿಗೆ
ಕಾರಣ. ಒಂದೆ ಹೊಡೆಯೊಳೆ ಹುಟ್ಟಿ, ಒಬ್ಬ ತಾಯ್
ಇತ್ತ ಮೊಲೆಯನೆ ಈಂಟಿ ಬೆಳೆದ ಆ ಸೋದರನೆ
ಕಡುವೈರಿಯಪ್ಪುದೇ? – ನಿನ್ನನುಳಿದರೆ, ತಿರೆಯೊಳ್
ಎನಗಾತನೆಯೆ ಎರಡನೆಯ ಒಲ್ಮೆ ; ಆತಂಗೆ
ದಾನಧರ್ಮಂಗಳಲಿ, ಸತ್ಯ ಭಕ್ತಿಗಳಲ್ಲಿ;
ನಿಯಮ ನಿಷ್ಠೆಗಳಲ್ಲಿ ಹೆಸರಾಂತ ನನ್ನ
ನೆಲದ ಹೊರೆಯನು ಹೊರಿಸಿ, ನಾನು ವೇದಾಧ್ಯಯನ,
ಯೋಗ ಮೊದಲಹ ಗುಪ್ತಸಾಧನೆಗಳಲಿ ತೊಡಗಿ
ಮೈಮರೆತೆ. ನಿನ್ನ ಆ ಠಕ್ಕು ಚಿಕ್ಕಪ್ಪನಿಂ –
ನಾ ಹೇಳುವುದನೆಲ್ಲ ಕೇಳುತಿಹೆಯೇನು?

ಗೌರಾಂಬೆ – ಅಪ್ಪಯ್ಯ, ಕಿವಿಯಾಗಿ ಕೇಳುತಿಹೆನಲ್ತೆ!

ಭೈರವ – ಇಂತಿರಲು, ರಾಜ್ಯಭಾರದ ಗುಟ್ಟುಗಳನ್ನೆಲ್ಲ
ತಾನರಿತು: ಏರಿದವರನು ಕೆಳಗೆ ತಳ್ಳುವುದು;
ಬಾಲವಲ್ಲಾಡಿಸುವ ಕುನ್ನಿಗಳನೆತ್ತುವುದು;
ಗೊಂಬೆಗಳ ತೆರದಿಂದೆ ಅಧಿಕಾರಿಗಳನೆಲ್ಲ
ತನ್ನ ತಾಳಕೆ ತಕ್ಕ ರೀತಿಯಲಿ ಕುಣಿಸುವುದು;
ಇತ್ಯಾದಿ ರಾಜ್ಯತಂತ್ರದ ಮರ್ಮಗಳನೆಲ್ಲ
ತಾನರಿತು, ಹೆಮ್ಮರಕೆ ಬಂದಿಳಿಕೆ ಹಿಡಿದಂತೆ,
ನನ್ನರಸುತನಕವನು ಮೆಲಮೆಲನೆ ಕಾಲಿಟ್ಟು
ನನ್ನ ಸತ್ವವನೆಲ್ಲ ಹೀರತೊಡಗಿದನು –
ನೀನೆಲ್ಲಿಯೋ ನೋಡುತಿರುವೆ!

ಗೌರಾಂಬೆ – ಇಲ್ಲಪ್ಪಾ, ಮನಸಿಟ್ಟು
ಆಲಿಸುವೆ.

ಭೈರವ – ಕೇಳಮ್ಮ, ಕಿವಿಗೊಟ್ಟು ಕೇಳು.
ನಾನಿಂತು ಲೌಕಿಕ ವಿಚಾರಗಳ ತೊರೆದು
ಆತ್ಮಕಲ್ಯಾಣದಲಿ ತೊಡಗಿರಲು, ನನ್ನನುಜ
ನೆದೆಯಲ್ಲಿ  ಕೆಟ್ಟಬಯಕೆಯು ಬೆಳೆದು, ಮರವಾಯ್ತು.
ನಾನೆನಿತು ಹಿರಿದಾಗಿ ತಮ್ಮನನು ನಂಬಿದೆನೊ
ತಮ್ಮನ ದುರಾಶೆಯೂ ಅದಕೆ ಇರ್ಮಡಿಯಾಯ್ತು!
ರಾಜ್ಯದಾದಾಯವೆಲ್ಲವು ಅವನ ಕೈಸೇರಿ,
ದೊರೆಯ ಬಲವದರೊಡನೆ ಗೆಳೆತನವ ಬೆಳೆಯಿಸೆ, –
ಮುಂದೇನು? ಧನಮದದ ಬೆನ್ನಿನೊಳೆ ದರ್ಪಮದ
ಹುಟ್ಟಿದೊಡೆ, ಸದ್ಗುಣವು ದುರ್ಗುಣಕೆ ತಿರುಗುವುದು.
ಅಂತೆ ಆ ರುದ್ರನೂ ತಾನೆ ಭೂಪತಿಯೆಂದು
ನಂಬಿದನು. ಬಾಹ್ಯದಲಿ ನಮ್ರತೆಯನಭಿನಯಿಸಿ
ತನ್ನ ವಾಣಿಯೆ ರಾಜವಾಣಿಯೆಂಬಂದದಲಿ
ನಟಿಸತೊಡಗಿದನು. ಇಂತು ಬೆಳೆದುದವನಾಸೆ. –
ನೀನೆತ್ತ ನೋಡುತಿಹೆ?

ಗೌರಾಂಬೆ – ಇಂದ್ರಿಯಗಳನಿತುಮುಂ
ಕಿವಿಯಾಗಲೆಳಸುವುವು ಈ ಕತೆಯನಾಲಿಸೆ!

ಭೈರವ – ಇಂತೆಸಗಿ, ನಗರದರಸನ ಕೂಡೆ ಮಾತಾಡಿ,
ಒಳಸಂಚುಗಳ ನಡೆಸಿ, ಕಪ್ಪಮಂ ಕೊಡಲೊಪ್ಪಿ,
ಮಣಿಯದೆಯೆ ನಿಂತಿರ್ದ ಕೆಳದಿಯ ಕಿರೀಟಮಂ
ಪರರಾಯಡಿಗಿಡಲು ಒಪ್ಪಿ – ಹಾ ಕೆಳದಿ! –
ನನಗೆ ಬಲವಿಲ್ಲೆಂದು, ನನಗರಸುತನ ತಕ್ಕು
ದಲ್ಲೆಂದು, ನನಗೆ ಹೊತ್ತಗೆಗಳೆಯೆ ಸಾಕೆಂದು,
ನನ್ನನಲ್ಲಿಂದಟ್ಟಬೇಕೆಂದು ನಿಶ್ಚಯಿಸಿ –

ಗೌರಾಂಬೆ – ಶಿವ ಶಿವಾ!

ಭೈರವ – ನೋಡು, ಮಗಳೇ, ನೊಡು: ಚಿಕ್ಕಪ್ಪನೆಸಗಿದುದು
ಧರ್ಮವೆ? ವಿಚಾರಿಸು! ಅವನೆನಗೆ ಸೋದರನೆ?

ಗೌರಾಂಬೆ – ನನ್ನಜ್ಜಿ ಕುಟಿಲೆಯೆಂದಾನು ಊಹಿಸಲಾರೆ!
ಗೋವುಗಳ ಬಸಿರಿನಲಿ ಕುನ್ನಿಗಳು ಬಂದಪವು;
ಸಿಂಹಗಳ ಗಬ್ಬದಲಿ ಹುಲುನರಿಗಳುದಿಸಿಹವು;
ಎಂದು ನೀನೊಮ್ಮೊಮ್ಮೆ ಕತೆವೇಳುತಿರ್ದುದೆ ದಿಟಂ!

ಭೈರವ – ಮೇಲೆ ನಡೆದುದ ಕೇಳು: ನನಗೆ ಅರಿಯಾಗಿರ್ದ
ನಗರದರಸನು, ರುದ್ರನಾಡಿದಾ ನುಡಿಗಳಿಗೆ
ನೆರವನೀಯಲು ಸಮ್ಮತಿಸಿ, ನಟ್ಟಿರುಳಿನಲ್ಲಿ
ಸೇನೆಯೊಡನೈತಂದು ಕೆಳದಿಯನು ಮುತ್ತಿದನು.
ರುದ್ರನಾಯಕನೆಮ್ಮ ಕೋಂಟೆ ಹೆಬ್ಬಾಗಿಲನು
ತೆರೆಯೆ, ನಾನರಿಯದೆಯೆ ಅರಿಯ ಸೆರೆಯಾಳಾದೆ!
ಅಳುತಿರ್ದ ಮಗುವಾದ ನಿನ್ನನುಂ ನನ್ನನುಂ
ಕೊಂಡೊಯ್ದರಾಳುಗಳ್.

ಗೌರಾಂಬೆ(ನೀರವವಾಗಿ ರೋದಿಸುತ)
ವಿಶ್ವಾಸ ಘಾತುಕರು!
ಅಂದೇಸು ನಾನತ್ತೇನೋ ಅದನರಿಯೆ; ಅದಕಾಗಿ
ಇಂದಾದರೂ ಕಂಬನಿಯ ಕರೆವೆ. ಈ ಕತೆಯ
ಕೇಳ್ದೆನ್ನ ಹೃದಯವನು, ತೊಯ್ದರುವೆಯಂ ಪಿಳಿದು
ಪಿಂಡುವೊಲ್, ಆರೊ ಪಿಂಡಿದವೊಲಾಗುತಿದೆ!

ಭೈರವ(ಅವಳ ತಲೆಯನು ಕೈಯಿಂದ ತಡವುತ್ತ)
ಕೇಳು ಮುಂದಿನ ಕತೆಯ:
ನಾವಿಲ್ಲಿಗೆಂತು ಬಂದೆವು ಎಂಬುದನು ತಿಳಿವೆ.
ಇಂದಿಲ್ಲಿ ನಡೆಯುವೀ ಕತೆಗಾಗಿ ಹಿಂದಿನಾ
ಕತೆಯ ನಿನಗೊರೆದೆ.

ಗೌರಾಂಬೆ – ಸರೆಸಿಕ್ಕಿದೆಮ್ಮಿರ್ವರನು
ಅವರು ಕೊಲ್ಲದೆ ಮಾಣ್ದರೇಕೆ?

ಭೈರವ – ಸರಿಯಾಗಿ
ಕೇಳಿರುವೆ; ಒಳ್ಳೆಯ ಪ್ರಶ್ನೆಯಿದು. ಗೌರಾಂಬೆ,
ಅಂತೆಸಗೆ ಅವರಿಗೆಲ್ಲಿಯ ಕೆಚ್ಚು? ಭೈರವನು
ದೇಶದೊಲ್ಮೆಗೆ ಪಾತ್ರನಾಗಿದ್ದನೆಂಬುದನು
ತಿಳಿದಿದ್ದರವರೆಲ್ಲ. ಕೆಂಪಾದ ಪಾಪವನು
ಮರಳಿ ಕಡುಗೆಂಪಾಗಿ ಮಾಡಲಂಜಿದರು.
ನಮ್ಮೀರ್ವರನು ದೇಶದಿಂ ದೂರ ಕೊಂಡೊಯ್ದು
ಹಳೆಯ ಹರಿಗೋಲೊಂದರೊಳು ಹಾಕಿ, ನೆರೆ ತುಂಬಿ
ಭೋರ್ಗರೆದು ಹರಿದಿದ್ದ ಹೊಳೆಯಲ್ಲಿ ನೂಂಕಿದರು.
ಜಡಿಮಳೆ ಹೋ ಎಂದು ಸುರಿದಿತ್ತು; ಬಿರುಗಾಳಿ
ಬಲೆಗೊಳಗಾದ ಕೇಸರಿಯಂತೆ ಗರ್ಜಿಸಿತ್ತು.
ಮಿತ್ತುವಿನ ನಾಲಗೆಗಳಂದದಲಿ ವೀಚಿಗಳು
ತೇಲುತಿಹ ಹರಿಗೋಲ ನುಂಗಲೆಳಸಿದುವು.

ಗೌರಾಂಬೆ – ಅಪ್ಪಯ್ಯ, ನಿನಗೆನಿತು ಅಳಲನಿತ್ತೆನೊ ನಾನು?

ಭೈರವ – ಅಂತೆನ್ನದಿರು, ನನ್ನ ದೇವತೆಯೆ. ನಿನ್ನಿಂದ,
ನಿನ್ನಿಂದಲೇ ಬದುಕಿದೆನು. ಮುಗುಳುನಗೆಯಿಂದ
ನೀನೆನ್ನ ಹುರಿದುಂಬಿಸಿದೆ. ನಿನ್ನ ಕಣ್ಬೆಳಗೆ
ಬಟ್ಟೆದೋರಿದುದೆನಗೆ; ಬಲ್ಮೆಯಿಂ ನೀಡಿದುದು.

ಗೌರಾಂಬೆ – ಈ ದ್ವೀಪದೆಡೆಗೆಂತು ಬಂದುದು ನಾವು?

ಭೈರವ – ಈಶ್ವರನ ದಯೆಯಿಂದ!
ಜಯದೇವನೆಂಬೊಬ್ಬ ಮುದಿಯ ಸರದಾರನು
ಕರುಣೆಯಲಿ ಗುಟ್ಟಾಗಿ ಅನ್ನಪಾನಂಗಳನು
ದೋಣಿಯೊಳಗಿಡಿಸಿದನು. ಬೇಕಾದ ವಸನಗಳನ್
ಎಲ್ಲಮಂ ನೀಡಿದನು. ಅದರಿಂದಿನ್ನೆವರಂ
ಬದುಕಿದೆವು. ಸದ್ಗುಣಿ, ಪಾಪಭೀರು ಅವನು!
– ಗ್ರಂಥಗಳಲೆನಗೊಲ್ಮೆ ಎಂಬುದನು ತಿಳಿದವನು
ಕೆಳದಿಗಿಂತಲು ನನಗೆ ಮಿಗಿಲಾದ ಬೆಲೆಯುಳ್ಳ
ಕೃತಿಗಳನು ನೀಡಿದನು.

ಗೌರಾಂಬೆ – ಪುಣ್ಯಾತ್ಮನಾತನನು
ಎಂದಾದೊಡಂ ನಾನು ನೋಡುವೆನೆ?

ಭೈರವ(ಮಂತ್ರಕವಚವನ್ನು ಧರಿಸಿ)  ಹೊತ್ತಾಯ್ತು!
ನಾನಿಂದು ಮಾಡಬೇಕಹ ಕಾರ್ಯ ಬಹಳವಿದೆ.
ಕತೆಯ ತುದಿಯನು ಹೇಳಿ ಮುಗಿಸುವೆನು; ಹರಿಗೋಲು
ಇರುಳೆಲ್ಲ ತೇಲಿ, ನೇಸರು ತನ್ನ ಪೊಂದೇರನ್
ಅಡರಿ ಮೂಡುವೆಟ್ಟಿನ ನೆತ್ತಿಗೈತಹ ಮುನ್ನ,
ಎಚ್ಚರುವ ತಿರೆವೆಣ್ಣು ಮೆಲ್ಲನೆಮೆದೆರೆಯುತಿರೆ,
ಮುಂಬೆಳಗು ಮೈದೋರಿ ಬನಗಳನು ಬೆಳಗುತಿರೆ,
ವಿಹಂಗಮಗಳಿಂಚರದ ಹೊನಲುಕ್ಕಿ ಬರುತಿರಲು,
ತಣ್ಣನೆಯ ಸುಸಿಲುಸಿರು ಒಯ್ಯನೆ ತೀಡುತಿರೆ,
ಬಂದು ಈ ದ್ವೀಪವನು ಸೇರಿದುದು. ನಾನಿಲ್ಲಿ
ಈ ಗುಹೆಯನೆಲೆವನೆ ಮಾಡಿ ನಿನ್ನನು ಪೊರೆದೆ.
ನಿನಗಾನೆ ಗುರುವಾಗಿ ಅರಸಕುವರಿಯರರಿಯಲ್
ಆರದಿಹ ಎನಿತೆನಿತೊ ಬಿಜ್ಜೆಗಳ ನಿನಗಿತ್ತೆ.

ಗೌರಾಂಬೆ – ಅಪ್ಪಯ್ಯ, ನಾ ನಿನಗೆ ಚಿರಋಣಿ: – ಅದರೀ
ಬಿರುಗಾಳಿಯನ್ನೇತಕೆಬ್ಬಿಸಿದೆ? ಎಂಬುದಕೆ
ಕಾರಣವ ನೀನೊರೆಯಲಿಲ್ಲ.

ಭೈರವ – ಅಂತಪ್ಪೊಡಾಲಿಸು:
ವಿಧಿಯ ನಿಯಮದಿ, ಮಗಳೆ, ನನ್ನ ಆ ಶತ್ರುಗಳು
ಹೊಳೆಯನಡು ದೋಣಿಯಲಿ ಕುಳಿತು ಬಂದುದ ಕಂಡೆ.
ಅಮೃತಗಳಿಗೆಯನೇಕೆ ಬಿಡಲೆಂದು ಬಗೆದು
ಮಂತ್ರಶಕ್ತಿಯ ಬಲದಿ ಬಿರುಗಾಳಿಯೆಬ್ಬಿಸಿದೆ.
ಈಗ ಸಾಕೀ ಪ್ರಶ್ನೆ. ಮುಂದೆಲ್ಲ ತಿಳಿಯುವುದು.
[ಗೌರಾಂಬೆಯನ್ನು ಮುಟ್ಟುತ್ತಾನೆ. ಆಕೆಗೆ ನಿದ್ದೆ ಬರುತ್ತದೆ.]
ನಿದ್ದೆ ಬರುತಿದೆ ನಿನಗೆ, ಒಳ್ಳೆಯದು ಮಲಗು.
[ಗೌರಾಂಬೆ ಮಲಗುತ್ತಾಳೆ. ಭೈರವನಾಯಕನು ಆಕಾಶದ ಕಡೆ ನೋಡಿ]
ಬಾ, ಈಗ, ಕಿಂಕರ; ಸಿದ್ಧನಾಗಿಹೆನ್!
[ಮಾಯಾವಿಯಾದ ಕಿನ್ನರ ಬರುತ್ತಾನೆ. ಸುಂದರಾಕಾರ]

ಕಿನ್ನರ – ಜಯಮಕ್ಕೆ! ನನ್ನೊಡೆಯ, ನಿನಗೆ ಗೆಲವಕ್ಕೆ!
ನಿರವಿಪುದನೆಸಗಲೈತಂದಿಹೆನ್: ಬಾಂದಳದಿ
ಹಾರುವೆನ್: ಕಡಲುಗಳನೀಜುವೆನ್; ಬೆಂಕಿಯಲಿ
ಮುಳುಗುವೆನ್ ಮುಗಿಲುಗಳನಾಳುವೆನ್ ಮೇಣೇನಂ
ನೀನೆನಗೆ ಬೆಸವೇಳ್ದೊಡದನೆಸಗುವೆನ್ ನಾನ್!
ಆವಗಂ ನಾ ನಿನ್ನ ಕಿಂಕರನ್:

ಭೈರವ – ಕಿನ್ನರಾ,
ನಾಂ ಪೇಳ್ದುದನಿತುಮಂ ಎಸಗಿ ಬಂದಿರ್ಪೆಯೇಂ?

ಕಿನ್ನರ – ಅಂತೆಯೇ ಇನಿತುಮಂ ತಪ್ಪದೆಯೆ ಎಸಗಿದೆನ್:
ದೊರೆಯ ದೋಣಿಯನಡರಿ ಹಿಂದುಗಡೆ ಮುಂದುಗಡೆ
ಕುಣಿಕುಣಿದು ಹಾರಾಡಿ ಹೋರಾಡಿ ಚೀರಾಡಿ
ಅಂಬಿಗರ ಮೆದುಳಿನಲಿ ಮದಿರೆಯಾಗಾಡಿದೆನ್.
ತರುವಾಯಮಾ ಮಲೆಯ ಕೆಳಗುರುಳ್ವಂತೆ ನಾಂ
ಬಿರುಗಾಳಿ ಬೀಸಿದೆನ್, ಕರ್ಮುಗಿಲಾಗಿ ಗಗನದಲಿ
ಕಿಕ್ಕಿರಿದು, ಮಿಂಚಾಗಿ ಮಿಂಚಿದೆನ್; ಮೊಳಗಾಗಿ
ಗುಡುಗಿದೆನ್ ಬೆಟ್ಟಗಳ ಗಬ್ಬಂ ನಡುಗುವಂತೆ.
ಎರಗಿದೆನ್ ಸಿಡಿಲಾಗಿ ಬಂಡೆಗಳ್ ಬಿರಿವಂತೆ.
ತರುವಾಯಮಾ ನೀರಿನಲೆಗಳ ಹೊಕ್ಕು ದೋಣಿಯನ್
ನಡುಗಿಸಿದೆ ನುಡುಗಿಸಿದೆ. ನಂಜುಗೊರಲನ ಹಣೆಯ
ಕಣ್ಣಿಗಿಮ್ಮಡಿಯಾದ ಬೆಂಕಿಯಂದದಿ ಕಡೆಗೆ
ನಾವೆಯನ್ ಮುತ್ತಿದೆನ್. ಗುಡುಗುಡಿಸಿ ಭೋರಿಡುತ
ಮುಗಿಲಿನಲಿ ಕಲ್ಲಾಗಿ ಬೀರಿದೆನ್, ಬಿಕ್ಕಿದೆನ್!
ಹಗಲಿನಲಿ ಇರುಳಿಣಿಕಿದಂತೆಸಗಿ, ಮರಳಿ
ಇರುಳಿನಲಿ ಹಗಲಿಣಿಕಿದಂತೆಸಗಿ ಎಲ್ಲರನು
ಮಾಯೆಯಿಂ ಮುಚ್ಚಿದೆನ್. ಅವರವರ ಪಾಪಂಗಳನ್
ಆಯ್ದು ಅಲಗುವೋಲ್ ಸಮೆದು ಚುಚ್ಚಿದೆನ್!

ಭೈರವ – ಭಲಾ, ವೀರ ಕಿನ್ನರ!
ಬಗೆ ಬಟ್ಟೆಗೆಡದೆ, ಪುರ್ಚಿಗೀಡಾಗದೆಯೆ,
ಮಾಯೆಗೊಳಗಾಗದವರಿರ್ದರೇನ್ ಅವರಲ್ಲಿ?

ಕಿನ್ನರ – ಹುಚ್ಚಾಗದಿದ್ದವನು ಒಬ್ಬನಾದರು ಇಲ್ಲ.
ಗೋಳಾಡದಿರ್ದವರ ನಾ ಕಾಣಲಿಲ್ಲ. ಆ
ಅಂಬಿಗರನುಳಿದು ಮಿಕ್ಕವರೆಲ್ಲ ಮುಡಿಗೆದರಿ,
ಸುತ್ತಲಿಂ ಮುತ್ತಿಬಂದಗ್ನಿಯನ್ ಕಂಡಳುಕಿ,
ನೊರೆಯೆದ್ದ ತೆರೆಗಳಲಿ ಧುಮುಕಿದರು! ದೊರೆಯ ಮಗ
ಶಿವನಾಯಕನು ಮುಳುಗಿದವರಲ್ಲಿ ಮೊತ್ತ
ಮೊದಲಿಗನ್. “ನರಕದೊಳು ಆರಿಲ್ಲ! ಜವನಾಳ್ಗಳ್
ಅನಿಬರುಂ ಈಯೆಡೆಗೆ ಬಂದಿಹರ್!” ಎಂದೊರಲಿ
ಧುಮ್ಮಿಕಿದನ್ ಮೊರೆದು ಹರಿವ ವಾಹಿನಿಯಲ್ಲಿ!

ಭೈರವ – ನೀನೀಗಳೆನ್ನ ಕಿಂಕರ! ವೀರ ಕಿನ್ನರಾ,
ದಡದೆಡೆಯೆ ತಾನೆ ಇಂತೆಲ್ಲ ಜರುಗಿದುದು?

ಕಿನ್ನರ – ಅಹುದಹುದು, ದಡಕತಿ ಸಮೀಪದೊಳೆ!

ಭೈರವ – ಎಲ್ಲ ಅಕ್ಷತರಾಗಿ ಬದುಕಿರ್ಪರಷ್ಟೆ?

ಕಿನ್ನರ – ಕೂದಲೊಂದಾದೊಡಂ ಕೊಂಕಿಲ್ಲ, ನನ್ನೊಡೆಯ.
ಉಟ್ಟ ಸಿರಿಯುಡುಗೆಯೊಳು ಕಲೆಯೊಂದುಮಾಗಿಲ್ಲ.
ಅದಂತಿರ್ಕೆ; ಮತ್ತಿನಿತು ಪೊಸಕಳೆಯನೊಂದಿಹವು!
ನೀನು ಬೆಸವೇಳ್ದಂತೆ ದ್ವೀಪದೊಳಗಲ್ಲಲ್ಲಿ
ಓರೊರ್ವರಂ ಕೊಂಡು ಗುಂಪಾಗಿ ಹರಡಿಹೆನ್.
ದೊರೆಯ ಮಗನನ್ ನಾನೆ ತೀರಕೇರಿಸಿದೆ;
ದೀವಿಯೊಂದೆಡೆಯಲ್ಲಿ ಬಿಸುಸುಯ್ದು ಕುಳುತಿಹನ್,
ಅಳಲಿಂಗೆ ಕೆನ್ನೆಗಳ ಭಾರವನು ಕೈಲಿಟ್ಟು.

ಭೈರವ – ಉಳಿದವರನೆಲ್ಲೆಲ್ಲಿ ಚದರಿಸಿರ್ಪೆ!

ಕಿನ್ನರ – ನೌಕೆಯನ್
ಕೊಲ್ಲಿಯಲಿ ಕಟ್ಟಿಹೆನ್: ನೀನಂದು ಗೌರಾಂಬೆ-
ಗಾಗೆಂದು ತಗ್ಗಿವೂ ಗೊಂಡೆಗಳ ಕೊಯ್ಸಿ-
ದೆಡೆಯಲ್ಲಿ. ಉಳಿದ ಜನರೊಳ್ ಕೆಲರ್ ಕಲೆತು
ತಮ್ಮ ಮುಂದಿನ ಗತಿಯ ಚಿಂತಿಸುತಲಿಹರು.

ಭೈರವ – ಕಿನ್ನರಾ, ನೀನು ಕೈಂಕರ್ಯಮೂರ್ತಿಯೆ ದಿಟಂ!
ಪೇಳ್ದುದನೆಲ್ಲಮುಂ ಬಿಡದೆ ಬೆಸಕೆಯ್ದೆ. ಆದಡೆ,
ಮಾಳ್ಪ ಕಜ್ಜವದಿನ್ನು ಮಿನಿತೊಳದು. . . ಪೊಳ್ತೆನಿತು?

ಕಿನ್ನರ – ನಡುವಗಲ್ ದಾಂಟಿಹುದು – (ಮೇಲೆ ನೋಡಿ)
ಬೆಂಗದಿರನಾಗಲೆಯೆ
ಪಡುವಲೆಡೆಗೊಯ್ಯುತಿಹನಿಳಿವ ಪೊಂದೇರಂ.

ಭೈರವ – ಬೈಗುಗೆಂಪನು ಚೆಲ್ಲಿ ಸಂಜೆವೆಣ್ಣಿನಿಯನಂ
ಬೀಳ್ಕೊಳ್ವ ಮುನ್ನಮೆಯೆ ನಮ್ಮ ಕಜ್ಜವನಿಂದು
ಕೊನೆಗಾಣಿಸಲೆವೇಳ್ಕು.

ಕಿನ್ನರ(ನಸು ಇಳಿಮೊಗನಾಗಿ) ಇನ್ನುಮಿರ್ಪುದೆ ಕಜ್ಜಂ?
ನೀನಂದು ಬಾಸೆ ಕೊಟ್ಟಿಹೆಯಲ್ಲ! ನನ್ನೊಡೆಯ,
ನನಗೆಂದು ಬಿಡುಗಡೆ?

ಭೈರವ – ಇದೇನಿದು! ಇನಿತರೊಳೆ
ಅಲಸಿಕೆಯೆ?

ಕಿನ್ನರ – ನನಗ ಬಿಡುಗಡೆ ಎಂದು, ಜೀಯ?

ಭೈರವ(ದರ್ಪದಿಂದ)
ತೆಪ್ಪಗಿರ್! ಕೆಲಸ ಮುಗಿಯುವ ಮುನ್ನ ಬಿಡುಗಡೆಯ
ಮಾತೆತ್ತದಿರ್!

ಕಿನ್ನರ(ಭಯದಿಂದ) ಜೀಯ, ದೈನ್ಯದಿಮ್ ಬೇಡುವೆನ್!
ಕೈಮುಗಿದು ಬೇಡುವೆನ್. ನೀನೊರೆದ ಕಾರ್ಯಂಗಳಂ
ತಪ್ಪದೆಯೆ ಮಾಡಿದೆನು. ಪುಸಿಯಾಡಲಿಲ್ಲ;
ನುಸುಳಿಲ್ಲ. ಗೊಣಗುಡದೆ, ಬೇಸರದೆ ಸೇವಿಸಿದೆ.
ಒಂದು ಸಂವತ್ಸರದಿ ಬಿಡುಗಡೆಯ ನೀಡುವೆನು
ಎಂದೊರೆದೆ. ಕಳೆದುವಾಗಳೆ ಎರಡು ಬರಿಸಗಳ್!
ಇನ್ನೆವರಂ ಬಿಡುಗಡೆ ದೊರೆತುದಿಲ್ಲ.

ಭೈರವ – ಮರೆತೆಯೇಂ?
ಇನಿತರೊಳೆ ಮರೆತೆಯೇಂ? ಎಂತಪ್ಪ ನರಕದಿಂ
ನರಕಯಾತನೆಯಿಂದೆ ನಿನ್ನನಾನುದ್ಧರಿಸಿ
ಪೊರೆದಿರ್ಪನೆಂಬುದನ್?

ಕಿನ್ನರ – ಇಲ್ಲ, ಮರೆತಿಲ್ಲ!

ಭೈರವ – ಮರೆತಿರ್ಪೆ! ಮುನ್ನೀರ್ಗಳಂ ಸುತ್ತಿ, ಚಳಿನೆಲೆಗಳೊಳ್
ಧ್ರುವಗಳೊಳ್ ತಿರುಗುವುದು; ಮೇಣ್ ಬುವಿಯ ಬಸಿರಿನೊಳ್
ಸಂಚರಿಸಿ ವಿಷಯಗಳನರಿಯುವುದು; ಇವುಗಳನೆ
ಕಟ್ಟಜ್ಜುಗಗಳೆಂದು ಕೆಲೆಯುತಿಹೆಯಾ ನೀನು?

ಕಿನ್ನರ – ಇಲ್ಲ, ನಾನಂತೊರೆಯೆ.

ಭೈರವ – ಪುಸಿಯುಸಿರ್ವೆಯ, ದುರುಳ?
‘ಶನಿ’ ವೆಸರ ಮುದುಕಿಯಾದಾ ಮಂತ್ರವಾದಿನಿಯ
ಮರೆತೆಯೇಂ? ಮುದಿತನದ ಮಚ್ಚರದಿ, ಮುದಿತನದ
ಸಿಗ್ಗಿನಲಿ ಮಾರಿಯಾದಾ ‘ಶನಿ’ ಯ ಮರೆತೆಯೇಂ?

ಕಿನ್ನರ – ಇಲ್ಲ, ಜೀಯ, ಮರೆತಿಲ್ಲ.

ಭೈರವ – ಮರೆತಿರುವೆ! ಅವಳೆಲ್ಲಿ
ಜನಿಸಿದಳು ಹೇಳೆನಗೆ? ಮಾತಾಡೊ!

ಕಿನ್ನರ – ಮಲೆಯಾಳ!

ಭೈರವ – ಮಲೆಯಾಳವೋ? ತಿಂಗಳಿಗೊಮ್ಮೆ ನಿನಗದರ
ನೆನಪನೀಯಲೆ ಬೇಕು. ಇಲ್ಲದಿರೆ, ಕೃತಜ್ಞ!
ನೀನದನು ಮರೆಯುವೆ. ಆ ‘ಶನಿ’ ಮಲೆಯಾಳ
ದೇಶದಲಿ ಕೇಳಬಾರದ ಹೇಳಬಾರದ
ಮಂತ್ರ ಮಾಟಂಗಳನು ಮಾಡಿ, ಜನರನು ಕೆಡಿಸಿ,
ಎಲೈ ಪಾರಾಗಿಲ್ಲಿಗೈತಂದಳೈ: ಏತಕೆನೆ,
ಕೊಲಲೆಳಸಿದೊಡೆ ಅವಳಳಿಯಲಿಲ್ಲ! ಅದು ದಿಟವೆ?

ಕಿನ್ನರ – ಅಹುದು, ನನ್ನೊಡೆಯ.

ಭೈರವ – ಮೆಳ್ಳೆಗಣ್ಣಿನ ಮಂತ್ರ
ವಾದಿನಿಯನವಳ ಮಗನೊಡನಿಲ್ಲಿಗೆಳೆತಂದು,
ಪ್ರತಿಮಂತ್ರವಾದಿಗಳ ಬಲದಿಂದ, ನಾವಿಕರಾ
‘ಶನಿ’ ಯನೀ ದ್ವೀಪದಲಿ ಬಿಸುಟ್ಟು ಹಿಂತಿರುಗಿದರ್.
ಡಿಂಗರಿಗ! ಕಿನ್ನರಾ! ನೀನಾಕೆಯ ಗುಲಾಮ-
ನಾಗಿದ್ದೆ ಎಂದೆನಗೆ ನೀನೆ ಹೇಳಿರುವೆ.
ಪಾಪಿಯಾದವಳಾಣತಿಯನೆಸಗಲಾರದಿರೆ
ಶುದ್ಧಾತ್ಮನಹ ನೀನು, ಶಕ್ತಿಯಲಿ ನಿನ್ನನುಂ
ಮೀರಿರ್ದ ದುಷ್ಟಾತ್ಮಗಳ ಬಲದಿ, ತವಿಯದಿಹ
ಸಿಟ್ಟಿನಿಂದಾ ಮಂತ್ರವಾದಿನಿ ನಿನ್ನನೊಂ-
ದಾಲದ ಮರದ ಗಬ್ಬದೊಳಗಿಡಿಕಿ, ಸೆರೆಗೈದು,
ಶಪಿಸಿದಳ್. ನೀನಲ್ಲಿ ಹನ್ನೆರಡು ವರುಷಗಳ
ಪರಿಯಂತ ನೋವಿನಲಿ ನರಳುತ್ತ, ಹೊರಳುತ್ತ,
ಬೇನೆಯಲಿ ಬೇಯುತ್ತ, ಬಿಡುಗಡೆಯ ಬಯಸುತ್ತ,
ಬಿಡಿಪರನು ಕರೆಯುತ್ತ, ಕೊರಗುತ್ತ ಸೊರಗುತಿರ್ದೆ.
ಅನಿತರೊಳೆ ಆ ಮಾಟಗಾತಿ ಜವನೂರ್ಗೆ
ಜಾರಿದಳ್. ನೀನಾಗ ನೂರಾರು ಸಂಕುಗಳ
ಕೊರಳಿಂದೆ ಬರಿದೆ ಒರಲುತಲಿದ್ದೆ. ಈ ದ್ವೀಪದಲಿ
ಆ ‘ಶನಿ’ ಕರು ‘ಶನಿಯ’ ನಲ್ಲದೆಯೆ ಬೇರೊಬ್ಬರ್
ಇರಲಿಲ್ಲ!

ಕಿನ್ನರ – ಅಹುದೊಡೆಯ, ಪಾಳ್ ರಕ್ಕಸಿಯ ಮಗನ್, ಆ
ಗೂನು ಬೆನ್ನಿನ, ಗುಜ್ಜುಗೊರಲಿನ, ಗಿಡ್ಡದೇಹದ,
ಅಡ್ಡಮೂಗಿನ, ಮೆಳ್ಳೆಗಣ್ಣಿನ, ಡೊಳ್ಳುಹೊಟ್ಟೆಯ
‘ಶನಿಯ’!

ಭೈರವ – ಅಹುದದುವೆ ಶನಿಶಕ್ತಿ: ಶನಿಯ! – ನನ್ನ
ದಾಸ್ಯದಲಿ ನಮೆಯುತಿಹುದು. ನಾನೇನನುಸುರಲಿ? –
ನಿನ್ನಾ ಬೇನೆಗಳ ನೀನರಿಯೆಯಾ ಹೇಳು?
ನೀ ನರಳ್ವುದ ಕೇಳಿ ಚೀರಿದುವು ತೋಳಗಳ್;
ಕೂಗಿದುವು ಕರಡಿಗಳ್! –  ತಾನು ಮಾಡಿದ ಸೆರೆಯ
ಬಾಗಿಲನು ತಾ ತೆರೆಯಲರಿಯದಿಹ ಬೋನಿನಲಿ
ನಿನ್ನನಿಡುಕಿರ್ದಳಾ – ‘ಶನಿ’! ನಾನಿಲ್ಲಿ-
ಗೈತರಲು, ನಿನ್ನ ಗೋಳನು ಕೇಳಿ, ಕನಿಕರದಿ,
ಮಂತ್ರಸಾಮರ್ಥ್ಯದಿಂ ಮರದ ಬಸಿರನು ಸಿಗಿದು
ಹೊರಗೆಡಹಿ ಬಿಡಿಸಿದೆನು ನಿನ್ನನ್.

ಕಿನ್ನರ – ಅದಕಿದೋ
ಅಡಿಗೆರಗುವೆನ್, ಜೀಯ! (ಅಡ್ಡಬೀಳುತ್ತಾನೆ)

ಭೈರವ – ನೀನಿನ್ನು ಗೊಣಗಿದೊಡೆ
ಮರಳಿ ಆಲದ ಬಸಿರ ಬಾಯ್ದೆರಸಿ ಇಡುಕುವೆನ್.
ಹನ್ನೆರಡು ಮಾಗಿಗಳ್ ಕಳೆವನ್ನೆಗಂ ನೀಂ
ನರಳುತಿರಬೇಕಲ್ಲಿ!

ಕಿನ್ನರ – ಬೇಡ, ಬೇಡ, ನನ್ನೊಡೆಯ!
ನೀನೇನನುಸುರಿದೊಡೆ ತಪ್ಪದೆಯೆ ಬೆಸಕೆಯ್ವೆನ್.
ನಾ ನಿನ್ನ ಕಿಂಕರನ್!

ಭೈರವ – ಅಂತೆಸಗು! ಇನ್ನೆರಡು
ದಿನಗಳೊಳೆ ಬಿಡುಗಡೆಯ ನೀಡುವೆನ್.

ಕಿನ್ನರ – ನೀನೀಗಳ್
ನನ್ನೊಡೆಯ! ನಿನ್ನ ಬೆಸನೇನರುಹು! ಪೋದಪೆನ್.

ಭೈರವ – ಹೋಗು ನಡೆ. ಹೊಳೆಯ ದೇವತೆಯಂತೆ ವೇಷಮಂ
ಧರಿಸಿ, ನನಗೊರ್ವಗಲ್ಲದೆಯೆ ಮತ್ತಾರ
ಕಂಗಳಿಗು ಕಾಣದ ನಿಧಾನದಲಿ ವೇಷಮಂ
ತಳೆದು, ಮೇಲಿಲ್ಲಿಗೈತರು: ಬೇಗ ನಡೆ.
(ಕಿನ್ನರನು ಹೋಗುತ್ತಾನೆ)
[
ಭೈರವನಾಯಕನು ಮುದ್ದು ದನಿಯಿಂದ]
ಏಳು, ಗೌರಾ, ಏಳು: ಸಾಲ್ಗುಮೀಯಾಸರಂ!
ಎದ್ದೇಳು! (ಗೌರಾಂಬೆ ಕಣ್ಣುಜ್ಜಿಕೊಂಡು ಏಳುತ್ತ)

ಗೌರಾಂಬೆ – ನಿನ್ನ ಕತೆಯನ್ ಕೇಳುತಲ್ಲಿಯೇ ನಿದ್ರಿಸಿದೆ.

ಭೈರವ – ಮೇಲೇಳು! ತೆರಳುವಂ ಆ ಶನಿಯನಿರ್ಪೆಡೆಗೆ.
ಆ ಕುಬ್ಜನ್ ಆ ಒರಟನ್ ಏನುಜ್ಜುಗಂಗೈವನೋ
ನೋಡುವಂ!

ಗೌರಾಂಬೆ – ಅತಿನೀಚನಾತಂ, ಅಮಂಗಳನ್!
ಅವನ ಮುಸುಡಂ ಕಂಡರೆನಗಾಗದಪ್ಪಯ್ಯ!

ಭೈರವ – ಕೇಳ್, ಮಗಳೆ, ಈಗಳೆಮಗವನಿಲ್ಲದಾಗದು:
ಬೆಂಕೆಯಂ ಪೊತ್ತಿಪನ್; ಕಾಷ್ಠಮಂ ತಂದಪನ್;
ಬೇಹ ಕಜ್ಜಗಳನಿತುಮಂ ಮಾಳ್ಪನ್ – (ಕೂಗುವನು)
ಶನಿಯ! ಕೆಸರ್ಮಣ್ಣೆ! ಮಾತಾಡೊ!

ಶನಿಯ(ಒಳಗಿನಿಂದ) ಕಟ್ಟಿಗೆ ಒಳಗೆ ಬೇಕಾದಷ್ಟಿದೆ!

ಭೈರವ – ಹೊರೆಗೆ ಬಾರಾ ಇಲ್ಲಿ; ಇತರ ಕಾರ್ಯಗಳೊಳವು.
ಬೇಗ ಬಾರಾ, ಗೂಬೆ! ಬರ್ಪೆಯೊ? ಬರ್ಪುದೋ?
[ಕಿನ್ನರನು ಹೊಳೆಯ ದೇವತೆಯಾಗಿ ಬರುತ್ತಾನೆ]
ಏಂ ಚೆಲ್ವಿನಾಕಾರಂ! ಕಿನ್ನರಾ, ಬಳಿಗೆ ಬಾ!
(ಕಿವಿಯಲಾಡುತ್ತಾನೆ)

ಕಿನ್ನರ – ಪೇಳ್ದೆಲ್ಲಮಂ ಬಿಡದೆ ಕೈಗೂಡಿಪೆಂ! (ಹೋಗುತ್ತಾನೆ)

ಭೈರವ – ಎಲವೋ ದುರಾತ್ಮ, ಬರುವೆಯೋ? ಇಲ್ಲವೋ?
[ವಿಕಾರಾಕೃತಿಯ ಶನಿಯ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಸೋಮಾರಿತನದಿಂದ ಬಾಯಿಗೆ ಬಂದಂತೆ ಶಪಿಸುತ್ತ ಬರುತ್ತದೆ]

ಶನಿಯ – ನನ್ನ ಜನನಿಯ ಮಂತ್ರಗಳ್ ಪೆತ್ತ ಮರುಳ್ಗಳ್
ಎಲ್ಲರುಂ ನಿಮ್ಮಗಳ ಪೀಡಿಸಲಿ! ಕಾಡಿಸಲಿ!
ನಿಮ್ಮೀರ್ವರೆರ್ದೆಗಳ್ಗೆ ಬರಸಿಡಿಲ್ ಬಡಿಯಲಿ!

ಭೈರವ – ಇಂದಿನಿರುಳೆಯೆ ನಿನ್ನ ಬಪಕ್ಕೆಲುಬು ನುಚ್ಚುನೂರ್
ಅಪ್ಪಂತೆ ನಕ್ತಂಚರಿಗಳೆಲ್ಲ ಹರಕೆಗೈಗೆ!
ಅಂತರ ಬೆಂತರಗಳ್ ಭೂತ ಭೇತಾಳಗಳ್
ರಾತ್ರಿ ನಿನ್ನಂ ನುಚ್ಚುಗೈವಂತೊರೆಯುವೆನ್!

ಶನಿಯ – ನಾನು ಇವನನ್ನವನು ತಿನ್ನಬೇಕಂತೆ!
ನಾನೇನನುಂಡರೂ ಅದಿವನ ಕೂಳಂತೆ!
ನನ್ನ ತಾಯಿಯ ನೆಲಂ, ನನ್ನದೀ ದ್ವೀಪಂ!
ನಿನ್ನದೆಂತಪ್ಪುದೋ? ಮೊದಲಿಲ್ಲಿಗೈತಂದ
ಕಾಲದಲಿ ಎನಿತು ಗೌರವದಿಂದಲೆನ್ನ
ಕಾಣುತಲಿದ್ದೆ! ತಲೆಸವರಿ, ಮುದ್ದಿಸಿ ಮರುಳ್ಮಾಡಿ,
ನನ್ನನೀ ಗತಿಗೀಗ ತಂದಿರುವೆ. ಆಗಳುಣಲು
ಹಣ್ಗಗಳನು ಕೊಡುತಿದ್ದೆ; ಈಗ ಮಣ್ಣನು ಕೊಡುವೆ!
ಹಗಲಾವುದಿರಳಾವುದೆಂಬುದನು ನನಗಾಗ
ಬೋಧಿಸಿದೆ. ಬಿಸಿಗದಿರ ಚಳಿಗದಿರರಾರೆಂಬ
ನನ್ನಿಯನು ತಿಳಿಸಿದೆ. ನಿನಗಾನು ಮರುಳಾಗಿ
ತಿಳಿನೀರ ಬುಗ್ಗೆಗಳ ತೋರಿದೆನ್. ಮಧುರತರ
ಫಲವೀವ ಮರಗಳನ್ ತೋರಿದೆನ್. ರಮಣೀಯ
ದೃಶ್ಯಗಳ ಕಾಣಿಸಿದೆ. – ಸರ್ವಗಳ್, ಸಿಂಹಗಳ್,
ತೋಳಗಳ್, ರೋಗಗಳ್, ಹಾವು ಚೇಳುಗಳೆಲ್ಲ
ನನ್ನ ತಾಯಿ ಮಾಹೆಯಿಂದುದಿಸಿ ನಿಮ್ಮನ್
ಭಕ್ಷಿಸಲಿ! – ಅರಸನಾಗಿದ್ದಾನು ನಿಮಗೀಗ
ಆಳಾಗಬೇಕೆ? ನನಗಿರಲರೆಯ ಪೊಟರೆ;
ನಿಮಗಾದರಾ ಗುಹೆಯ ಮಂದಿರಂ!

ಭೈರವ – ಚಿಃ ದುಷ್ಟ!
ಸನ್ನೆ ಸಾಲದು, ನಿನಗೆ ದೊಣ್ಣೆಯೇ ಬೇಕು
ಬೆಂಕಿಗಲ್ಲದೆ ಲೋಹ ತಂಪಿಗದು ಮಣಿಯುವದೆ?
ಪುಡಿಗಿಂತ ಕಡೆಯಪ್ಪ ನಿನಗೆ ನಾನೆನಿತು
ದಯೆ ತೋರಿದೆನು! ನೀಚ, ಪಾಪದಿಂದೊಗೆತಂದ
ಪಾಪಿ, ಉಪಕಾರವೇನೆಂಬುದನು ನೀನರಿಯೆ.
ಕರುಣೆಯಿಂ ನಿನಗೆನಿತೊ ಬಿಜ್ಜೆಗಳನೊರೆದೆ;
ಮಿಗಗಳಂತೊರಲುತಿರ್ದವಗೆ ನುಡಿಗಳನಿತ್ತೆ.
ಕಗ್ಗಲ್ಲಿನರೆಯಮೇಲ್ ಮಳೆಗರೆದ ತೆರನಾಯ್ತು!
ನೀನೊಂದನುಂ ಕಲಿಯದಿರಲು ಮಳ್ಗಿಪ ಬದಲ್
ಕಲ್ಪೊಟರೆಯಲ್ಲಿಟ್ಟು ಪೊರೆದಿರ್ಪೆ

ಶನಿಯ – ನುಡಿವುದನ್
ನನಗಿತ್ತೆ: ಕೊಳ್ ಬಯ್ಗುಳಮೆ ನಿನಗೆ ಗುರದಕ್ಷಿಣೆ!
ನಿನ್ನ ನುಡಿ ಹಾಳಾಗ! ನಿನಗೆ ಸಾವಾಗ!

ಭೈರವ – ಚಿಃ ತೊಲಗು, ಎಲೆ ನೀಚ! ಕಟ್ಟಿಗೆಯ ಕೊಂಡು ಬಾ;
ನಡೆ, ಬೇಗ! ಬೇಗ ಬಾ, ಮಾಳ್ಪ ಕಜ್ಜಗಳೊಳವು!
ಮಚ್ಚರದಿ ಕುದಿಯುತಿಹೆಯೇಂ, ದುರುಳ? ತಳುವಿದರೆ,
ನನ್ನಾಣತಿಯನೆಸಗದಿರೆ ನಿನ್ನೆಲಬುಗಳಲಿ
ಬಲ್ಬೇನೆವೊಳೆಯಂ ಪರಿಸಿ ನರಳಿಸುವೆ!
ನಿನ್ನ ಗೋಳನು ಕೇಳಿ ಬನದ ಮಿಗಗಳು ಕೂಡ
ಬೆದರಿ ಕಂಪಿಸುವ ತೆರದಿ ಹಿಂಸಿಪೆನ್!

ಶನಿಯ – ನಿನ್ನ ದಮ್ಮಯ್ಯಾ! ಅಂತೆಸಗದಿರು, ಜೀಯ!
(ಸ್ವಗತ) ನನ್ನಳವ ಮೀರಿರ್ಪುದಿವನ ಮಂತ್ರದ ಬಲಂ;
ಬೆಸವೇಳ್ದವೊಲಿರೆ ಲೇಸು! ನನ್ನ ದೇವತೆ ಶನಿಯೆ
ಬೆದರುತಿರೆ, ನಾನಳುಕಲತಿಶಯವೆ?

ಭೈರವ – ಹೋಗು ನಡೆ!
ತೊಲಗಾಚೆ! (ಶನಿಯ ತೆರಳುತ್ತದೆ)
(ಕಿನ್ನರನು ಇತರರಿಗೆ ಅದೃಶ್ಯನಾಗಿ ಕುಣಿಯುತ್ತ ಹಾಡುತ್ತಾ ಬರುತ್ತಾನೆ. ಶಿವನಾಯಕನೂ ಅವನ ಹಿಂದೆಯೆ ಬರುತ್ತಾನೆ.)

ಕಿನ್ನರ(ಹಾಡು)
ತಳಿತಿಹ ತರುಗಳ ತಣ್ಣೆಳಲಲ್ಲಿ
ಚೆಲ್ವಿನ ಚೆಲ್ವೆಣ್ಣಿಹಳಿಲ್ಲಿ!
ಮುದ್ದಿಸಿ ಒಲಿ ಬಾ, ಚುಂಬಿಸಿ ನಲಿ ಬಾ,
ನಲಿನಲಿಯುವ ತಣ್ಣೆಲರಲ್ಲಿ!
ನಳನಳಿಸುವ ಹೊಸ ಹಸುರಿಹುದಿಲ್ಲಿ!
ಕಿನ್ನರಿಯರ ಸುರಗಾಯನವಿಲ್ಲಿ!

ಶಿವನಾಯಕ – ಎತ್ತಣಿಂದಯತರ್ಪುದೀ ಗಗನದಿಂಚರಂ?
ಸಗ್ಗದಿಂದವತರಿಪುದೋ? ಬುವಿಯಿನೇಳುವುದೊ?
ನಾನರಿಯೆ. (ಆಲಿಸಿ) ಗಾಯನಂ ನಿಂತಿಹುದು – ಆವುದೋ
ದ್ವೀಪದಧಿದೇವತೆಯೆ ಹಾಡುತಿದೆ. ತೀರದಲಿ
ಕುಳಿತು ನಾನೆನ್ನ ತಂದೆಯ ದುರ್ಗತಿಯ ನೆನೆದು
ಕಂಬನಿಯ ಸೂಸುತಿರೆ, ಬೀಣೆಯಿನಿದನಿಯಂತೆ
ಮಧುರ ಮೋಹನವಾದ ಸವಿಗೊಲಿನಿಂಚರಂ
ಮಳೆಗಾಳಿ ಹೊಳೆಗಳನು ಜೋಗುಳದಿ ಮಲಗಿಸುತ,
ನನ್ನೆದೆಯ ಸಂತವಿಸಿ, ಶಾಂತಿಯನು ತುಂಬುತ್ತ
ಒಯ್ಯೊಯ್ಯನೆಲರಿನಲಿ ತೇಲಿಬಂದುದು, ನನ್ನ
ಕಿವಿದೆರೆಗೆ! ಇಂಚರವನುಸರಿಸುತೈತರೆ
ಮೆಲ್ಲಮೆಲ್ಲನೆ ನನ್ನ ನೆಳೆದಿಲ್ಲಿಗೊಯ್ದಿರ್ಪುದು: –
ಆದರದು ನಿಂತಿಹುದು! –  ಇಲ್ಲ! ಮರಳಿ ಬರುತಿಹುದು!

ಕಿನ್ನರ(ಹಾಡುವನು)
ಕಡಲಿನ ಕಾಣದ ಪಾತಾಳದಲಿ
ತಂದೆಯು ಮಲಗಿಹನಾಳದಲಿ!
ಹವಳಗಳಾಗಿಹವೆಲುಬುಗಳೆಲ್ಲ!
ಮುತ್ತುಗಳಾದುವು ಕಣ್ಣುಗಳು!
ಮೊದಲಿನ ಮಾನವ ರೂಪವ ನೀಗಿ
ಹೊಳೆಹೊಳೆವನು ನವರತ್ನಗಳಾಗಿ!

ಶಿವ – ಮೆಯ್ಯಿಲಿದನಿಯೆನ್ನ ತಂದೆಯ ಮರಣವನೆ
ನುಡಿಯುತಿದೆ. ಮಾನವರ ಕೊರಲದನಿಯಲ್ಲವಿದು.
ತಿರೆಯಿಂದಲೇಳುತಿಹ ಸರವಲ್ಲ : ಬಾನಿನಿಂ-
ದಿಳಿಯುತಿದೆ.

ಭೈರವ – ಅಲರಂಚಿನಿಂ ಸಮೆದ ನಿನ್ನ ಕಣ್-
ಜವನಿಕೆಯ ಮೇಲೆತ್ತಿ ನೋಡಮ್ಮ. ನಿನಗೇನು
ಕಾಣುತಿದೆ ಹೇಳು?

ಗೌರಾಂಬೆ – ಅದೇನದು? ದೇವತೆಯೆ?
ಶಿವ ಶಿವಾ! ಸುತ್ತಲೂ ನೋಡುತಿಹುದೆಂತು!
ಸೊಬಗಿನಾಕಾರಮದು ದೇವತೆಯೆ ದಿಟ!

ಭೈರವ – ಇಲ್ಲ; ನಮ್ಮಂತೆ ಅದು ತಿನ್ನುವುದು, ಮಲಗುವುದು;
ನಮ್ಮಂತೆ ತಿರುಗುವುದು, ನುಡಿಯುವುದು, ನೋಡುವುದು.
ಮಗಳೆ, ನೀ ನೋಡುವೀ ಸುಂದರನು ಮುಳುಗಿದಾ
ದೋಣಿಯೊಳಗಿದ್ದವನು. ಶೋಕದಿಂದವನ ಮೊಗ
ಕುಂದಿಹುದು. ಸೌಂದರ್ಯ ರವಿಗೆ ದುಃಖವೆ ರಾಹು.
ಅಂತಿರ್ದೊಡಂ ಇವಂ ಚೆಲ್ವನೆಂದೊರೆಯಲಹುದು.
ತನ್ನ ಸಂಗಾತಿಗಳನರಸಿ ಸಂಚರಿಸುತಿರ್ಪಂ.

ಗೌರಾಂಬೆ – ನಾನೀತನಂ ಅಮರನೆಂದೆಯೆ ಕರೆಯಲಾಸಿಪೆಂ.
ಇನಿತು ಸೊಬಗನು ತೋರ್ಪ ವಸ್ತುವನು ಬುವಿಯ ಮೇಲ್
ಆನು ಕಂಡರಿಯೆ.

ಭೈರವ(ಸ್ವಗತ) ಪುಟ್ಟಿರ್ಪುದಿನಿದುವೇಟಂ!
ನನ್ನೆದೆಯ ಬಯಕೆ ಕೈಗೂಡುವುದು – (ಕಿನ್ನರಗೆ) ಕಿನ್ನರಾ,
ಇನ್ನೆರಡು ದಿನಗಳಲಿ ನಿನಗೆ ಬಿಡುಗಡೆ.

ಶಿವ(ಗೌರಾಂಬೆಯನು ಕಂಡು)
ನೀನಾರು, ದೇವಿ? ಕಿನ್ನರರ ಗಾಯನದಿ
ನಿರುತಮಾನಂದದಿಂದೀ ಸಗ್ಗವನ್ನಾಳ್ವ
ದ್ವೀಪರಾಣಿಯೋ? ಮೇಣ್ ಬರ್ದಿಲರ ನಾಡಿಂದೆ
ಇಳೆಗೆ ಇಳಿತಂದಿರ್ಪ ಅಚ್ಚರಿಯೊ? ಪೇಳ್!

ಗೌರಾಂಬೆ – ನಾನು ದೇವತೆಯಲ್ಲ, ಮಾನವ ಕನ್ಯೆ.

ಶಿವ – ಏನಿದು? ನನ್ನ ತಾಯ್ನುಡಿಯನಾಡುತಿಹಳು!
ನಾ ತಿರುಳ್ಗನ್ನಡವನಾಡುತಿರೆ, ಈ ತರಳೆ ಸಿರಿಗನ್ನಡವನಾಡುವಳ್!

ಭೈರವ – ಪೊಗಳ್ಕೆ ಇದೇಂ!
ನಗರದರಸಿದನು ಕೇಳ್ದೊಡೆ ಸುಮ್ಮನಾದಪನೆ?

ಶಿವ – ಏನಿದಚ್ಚರಿಯ ಮೇಲಚ್ಚರಿ! ನೀನೆಂತು
ನಗರದೊಡೆಯನ ಬಲ್ಲೆ? – ನಾನಾಡಿದೀ ನುಡಿಗಳನ್
ಆತನಾಗಲೆ ಕೇಳಿಹನು. ಅದಕೆ ಮರುಗುತಿಹೆ.
ಈಗ ನಗರದ ನಾಯಕನು ನಾನೆ. ಬಿರುಗಾಳಿಯೊಳ್
ಸಿಲ್ಕಿ ನೌಕೆಯು ಮುಳುಗೆ ಮುಳುಗಿದನ್ ತಂದೆ!

ಗೌರಾಂಬೆ – ಅಯ್ಯೋ!

ಶಿವ – ಸಟೆಯಲ್ಲ; ಅನಿಬರುಂ ಮುಳುಗಿದರ್, ಕೆಳದಿಯ
ನಾಯಕನು, ಜಯದೇವ ಮೊದಲಾದರೆಲ್ಲರುಂ!

ಭೈರವ(ಸ್ವಗತ) ಕೆಳದಿಯ ನಾಯಕನೂ ಅವನ ಮಗಳೂ ಸೇರಿ
ನಿನ್ನನಿಲ್ಲಿಯೆ ಸೆರೆಯೊಳಿಡಬಹುದು – ತರವಲ್ಲ –
ಕಣ್ಣುಕೂಡುವ ಮುನ್ನ ಮೆದೆಯೆರಡು ಕೂಡಿದುವು! –
(ಕಿನ್ನರಗೆ) ಇದಕಾಗಿ, ಗಗನಚಾರಿಯೆ, ನಿನಗೆ ಬಿಡುಗಡೆ!
(ಶಿವನಾಯಕಗೆ) ಯುವಕನೇ, ಪೊಳ್ಳುಪುಸಿಯಂ ನನ್ನೊಳಾಡದಿರ್!

ಗೌರಾಂಬೆ – ಅಪ್ಪಯ್ಯ ನಿಷ್ಕರುಣೆಯಿಂದೇಕೆ ನುಡಿಯುತಿಹೆ?
ನಾನರಿತ ಪುರುಷರಲ್ಲಿವನೆ ಮೂರನೆಯವನ್;
ಕಂಡು ನಾ ಬಿಸುಸುಯ್ದವರೊಳಿವನೆ ಮೊದಲಿಗನ್.
ಅಳ್ಕರಿಂ ನುಡಿ, ತಂದೆ. ನನಗಾಗಿ ಕೃಪೆದೋರು.

ಶಿವ – ತರಳೆ, ನೀನಿನ್ನುಂ ಅವಿವಾಹಿತಳೆಯಾಗಿ,
ನಿನ್ನೊಲ್ಮೆ ಇತರರೆದೆಗಂಡಿರದ ಪಕ್ಷದಲಿ
ನಿನ್ನನಾನೆನ್ನರಸಿಯನ್ನಾಗಿ ಮಾಡುವೆನ್.

ಭೈರವ – ಸಾಕು, ಸಾಕೀ ಬಣ್ಣದಾಲಾಪಂ: – (ಸ್ವಗತ)
ತರುಣ ತರುಣಿಯರಾಗಳೇ ಬೇಟದುರುಳಿನಲಿ
ಸಿಲುಕಿಹರ್. ಮೊತ್ತಮೊದಲನೆ ನೋಟದಿಂದುದಿಸಿ
ಬರ್ಪಾ ಬೇಟಮಸ್ಥಿರಮೆಂದು ತಿಳಿದವರ
ಮತಮಿಹುದು. ಸುಲಭದೊಳೆ ದೊರೆತುದಕೆ ಬೆಲೆಯಿರದು
ಎಂಬರ್. ಅದಕಾಗಿ ಎಡರುಗಳ ತಂದೊಡ್ಡುವೆನ್. –
(ಶಿವನಾಯಕಗೆ) ಯುವಕನೇ, ನೀನೆನ್ನ ಸೆರೆಯಾಳು! ಇಲ್ಲದ
ಸಲ್ಲದ ಬಿರುದುಗಳನೊರೆಯದಿರು. ಶತ್ರುಗಳ
ಬೇಹುಗಾರನು ನೀನು; ನಾನಿಲ್ಲಿಗರಸು.

ಶಿವ(ದರ್ಪದಿಂದ)
ನಗರದರಸನು ನಾನು ಶಿವರಾಯನೆಂದು ತಿಳಿ.

ಗೌರಾಂಬೆ – ಪವಿತ್ರಮಂದಿರದಿ ಪಾಪಗಳ್ ಜೀವಿಸೆವು.
ಪಾಪಗಳ್ಗೀ ತೆರದ ಗುಡಿಯಿರ್ಪುದಾದೊಡಂ
ಪುಣ್ಯ ತಾನಲ್ಲಿ ನೆಲೆಗೊಳ್ಳಲೆಳಸುವುದು.

ಭೈರವ(ಶಿವನಿಗೆ)
ಬಾ ನನ್ನ ಹಿಂದೆ – (ಗೌರಾಂಬೆಗೆ) ನೀನು ಮಾತಾಡದಿರು!
ರಾಜದ್ರೋಹಿ ಅವನು! – (ಶಿವಗೆ) ನೊಡುತಿಹೆ ಏಕೆ, ಬಾ,
ನಿನ್ ಕೈಕಾಲುಗಳಿಗೆ ಕರ್ಬೊನ್ನ ತೊಡರುಗಳ
ತೊಡಿಸಿ, ಕಳಕನು ಕುಡಿಸಿ, ಹುಲ್ಲು ಸೊಪ್ಪನು ತಿನಿಸಿ,
ಬೇರುಬಿತ್ತವನುಣಿಸಿ, ಹೊರೆಯನು ಹೇರಿ ದಣಿಸಿ, –
ನಿಂತಿರ್ಪೆಯೇಕೆ, ಬಾ!

ಶಿವ[ರಾಜಗಾಂಭೀರ್ಯದಿಂದ] ಬರಲೊಲ್ಲೆ, ನಿನ್ನಾಣೆಯಂ
ಪಳಿವೆನ್. ನಿನ್ನ ಬಲವೆನ್ನ ಬಲಮಂ ಮೀರ್ದೊಡೆ
ಆಗಳಾಂ ನಿನ್ನ ಹಿಂಬಾಲಿಪೆಂ. [ಖಡ್ಗವನ್ನು ಒರೆಯಿಂದ ಕಳಚು
ತ್ತಾನೆ. ಭೈರವನ ಸಂವನನದಿಂದ ಮಂತ್ರಮುಗ್ದವಾಗಿ ನಿಲ್ಲುತ್ತಾನೆ.]

ಗೌರಾಂಬೆ(ಕಣ್ಣೀರ್ವೆರಸಿ ಗದ್ಗದಿಂದ) ಅಪ್ಪಯ್ಯ,
ನೋಯಿಸದಿರೀತನಂ, ಸುಂದರಂ, ಕೋಮಲಂ,
ಕಣ್ಗಮತಿ ಚೆಲುಮಂ!

ಭೈರವ(ಕಣ್ಣುಕೆರಳಿ ನಟಿಸಿ) ಏಂ ಪೇಳ್ದ? ನನ್ನಡಿಯೆ
ನನಗೆ ನೀತಿಯನೊರೆಯುವಂತಿಹುದು! – (ಶಿವಗೆ)
ರಾಜದ್ರೋಹಿ,
ಕೂರಸಿಯನೊರೆಗಾಣಿಸೊಡನೆ, ತಡಮಾಡದಿರ್?
ಬೀನರಂತಭಿನಯಿಸಿ ಇರಿಯಲಾರದ ನೀನು
ಚಿತ್ತದೊಳ್ ಕಡುಪಾಪಿ ಎಂಬುದಂ ತೋರುತಿರ್ಪೆ!
ಮನಬಂದರೀ ಕಿರಿಯ ಕಡ್ಡಿಯಿಂದಲೆ ನಿನ್ನಾ
ಕೃಪಾಣಮಂ ಕಿತ್ತೆಸೆದು ನಿನ್ನ ನಿಳೆಗೊರಗಿಪೆನ್!

ಗೌರಾಂಬೆ(ಕೈಮುಗಿದು) ಬೇಡ, ಬೇಡ! ಬೇಡಿದಪೆನಪ್ಪಯ್ಯ!

ಭೈರವ – ನೀನೆನ್ನ ಬಳಿಸಾರದಿರ್, ದೂರವಿರ್!

ಗೌರಾಂಬೆ – ಕರುಣಿಸೈ, ತಂದೆ; ನಾನವಗೆ ಹೊಣೆನಿಲ್ಲುವೆನ್!

ಭೈರವ – ಸುಮ್ಮನಿರ್, ನೀನಿನ್ನು ಗಳಪಿದರೆ ಮುನಿಯುವೆನ್.
ಬೇಹುಗಾರಗೆ ನೀನುಂ ಸಹಕಾರಿಯಾದಪ್ಪೆಯೇಂ?
ತಿರೆಯೊಳೀತನಿಗಿಂತಲುಂ ಚೆಲ್ವರೆನಿತಿಲ್ಲ?
ಆ ಶನಿಯಗಿವನ ಹೋಲಿಸಿ ನೀನು ಮರುಳಾದೆ!
ಸುಂದರರನೇಕರಿಗೆ ಇವನೆ ಶನಿಯಂಗೆಣೆ
ಅವರಿವಂಗೆ ದೇವತೆಗಳಾದಪರ್!

ಗೌರಾಂಬೆ – ನನ್ನೊಲ್ಮೆಗತಿಕಾಂಕ್ಷೆಯಿಲ್ಲ; ಮೇಣಿವಂಗಿಂ
ಚೆನ್ನಿಗನ ಪಡೆಯಬೇಕೆಂಬಾಸೆಯುಂ ಇರದು.

ಭೈರವ(ಶಿವಗೆ) ಹೇಳಿದಂತಾಚರಿಸು; ಬಾ ಹಿಂದೆ. ಎಲ್ಲಿಹುದೊ
ನಿನ್ನದಟು? ಅಬಲೆಯಂತಬಲನಾಗಿಹೆ ಈಗ!

ಶಿವ(ಅಚ್ಚರಿಯಿಂದ)
ಅಹುದಹುದು, ನನಗೆಲ್ಲ ಕನಸಾಗಿ ತೋರುತಿದೆ!
(ಗೌರಾಂಬೆಯನ್ನು ನೋಡುತ್ತ)
ನನ್ನ ಸೆರೆಮನೆಯಿಂದ ದಿನಕೊಂದು ಸಾರಿ
ಈ ಚೆಲ್ವೆಯನು ನೋಳ್ವ ಸೌಭಾಗ್ಯವೊಂದಿರಲು,
ನನ್ನ ತಂದೆಯ ಮರಣ, ನನ್ನ ಗೆಳೆಯರ ಸಾವು,
ನನ್ನ ದುರ್ಗತಿ, ನನ್ನ ಅವಮಾನ, ಬಿರುನುಡಿಗಳಂ
ಬೀರುತಿಹ ಈತನ ದುರಭಿಮಾನ, ಎಲ್ಲವನು
ಸಂತಸದಿ ಸಹಿಸುವೆನು. ಬಿತ್ತರದ ತಿರೆಯೆಲ್ಲ
ಸ್ವಾತಂತ್ರ್ಯಕಿರಲಿ; ನನಗೀಕೆಯಂ ತೋರ್ಪೊಂದು
ಕಿಟಕಿಯಿರಲದುವೆ ಸಾಕು!

ಭೈರವ(ಸ್ವಗತ) ಇಚ್ಛೆ ನೆರವೇರುತಿದೆ! (ಶಿವನಾಯಕಗೆ)
ಹುಂ, ಹೊರಡು! (ಕಿನ್ನರಗೆ) ಕಿನ್ನರಾ, ನೀನೊಳ್ಳಿತೆಸಗಿರ್ಪೆ.
(ಭೈರವನೂ ಕಿನ್ನರನೂ ಮಾತಾಡುತ್ತಿರುತ್ತಾರೆ)

ಗೌರಾಂಬೆ(ಶಿವಗ) ಪ್ರಿಯತಮ, ನನ್ನೆದೆಯ ಚನ್ನಿಗನೆ, ಬೆದರದಿರು.
ನನ್ನ ತಂದೆಯ ಬಗೆಯ ಬೇರೆಯಾಗಿಹುದಿಂದು.
ಮಾತಿನಲಿ ಕಠಿನತೆಯ ತೋರಿದರು, ಎದೆಯಲ್ಲಿ
ಕೋಮಲತೆಯಡಗಿಹುದು. ಇಂತಾವಗಂ ತಂದೆ
ಕೋಪಗೊಂಡಿರಲಿಲ್ಲ. ಇಂದಿಂತಿರ್ಪನೇಕೊ?

ಭೈರವ(ಕಿನ್ನರಗೆ)… ಮಲೆಯ ತಂಗಾಳಿಗಳ ತೆರದಿ ಸಂಚರಿಸು. –
ಅದೊಡಮ್, ನಾಂ ಪೇಳ್ದುದೆಲ್ಲಮಂ ಮಾಳ್ಪುದು.
ತಪ್ಪದೆಯೆ ಮಾಳ್ಪುದು.

ಕಿನ್ನರ – ಒಂದಿನಿತು ಕುಂದಿರದೆ
ಬೆಸಗೆಯ್ವೆಂ!

ಭೈರವ(ಶಿವಗೆ) ಬಾ, ನಿನ್ನ ಸೆರೆಮನೆಗೆ
(
ಗೌರಾಂಬೆಗೆ) ಇತ್ತ ಬಾ,
ಆ ದ್ರೋಹಿಯೆಡೆಯಿಂ! (ಏನೊ ನುಡಿಯಲೆಳಸಿರೆ)
ಮತ್ತೆ ಮಾತಾಡದಿರ್
(ಎಲ್ಲರೂ ರೆರಳುತ್ತಾರೆ)