[ದ್ವೀಪದ ಮತ್ತೊಂದು ಬಾಗ. ರಣನಾಯಕ, ರಂಗನಾಯಕ, ರುದ್ರನಾಯಕ, ಜಯದೇವಇವರುಗಳು ಬಂಡೆಯ ಮೇಲೆ ಕುಳಿತು ಮಾತಾಡುತ್ತಿರುತ್ತಾರೆ.]

ಜಯದೇವ – ಮಹಾಸ್ವಾಮಿ, ಶಾಂತರಾಗಿ, ತಮ್ಮವೋಲ್ ವೀರರಿಗೆ
ಅಧೈರ್ಯವಿದು ತರವೆ? ನಾವೆಲ್ಲರುಳಿದಿಹುದೆ
ಸೋಜಿಗದ ಸಂಗತಿ. ಬಾಳಿನೊಳ್ ದುಃಖಗಳ್
ಬರ್ಪುದೇಂ ಪೊಸತಲ್ತು.

ರಣನಾಯಕ(ಜುಗುಪ್ಸೆಯಿಂದ) ದಯಮಾಡಿ ಸುಮ್ಮನಿರು!
(ಚಿಂತಿಸುತ್ತಾನೆ)

ರುದ್ರನಾಯಕ – ಜಯದೇವನುಪದೇಶವೆನೆ ಬೇಯ್ವ ಕಂಗಳಿಗೆ
ಕಾರವನೂಡಿದಂತೆ!

ರಂಗನಾಯಕ – ಬಣಗು ವೇದಾಂತವನು
ನೀನೆಲ್ಲಿ ಕಲಿತೆಯೋ? ಸರ್ವದಾ ನಿನ್ನ ಒಣ
ಉಪದೇಶವನು ಕೇಳಿ ಕೇಳಿ ಕಿವಿಗಳು ಜಿಡ್ಡು
ಗಟ್ಟಿಹವು. ತಲೆ ಚಿಟ್ಟು ಹಿಡಿದುಹೋಗಿಹುದು.

ಜಯ – ಅಹುದಹುದು; ರೋಗಿಗಳಿಗಾವಗಂ ಮದ್ದು
ಕಹಿಯಂತೆ!

ರುದ್ರ – ಭೋಗಗಳ ಪಡೆಯಲಾರದ ಜನರು
ಯೋಗವನು ನಟಿಸುವರು!

ರಣ(ತನಗೆ ತಾನೆ ಗಟ್ಟಿಯಾಗಿ) ಹೊಳೆಯ ಪಾಲಾದೆಯಾ,
ಮಗನೆ? ನನ್ನ ಬಾಳ್ವೆಯ ಕಣ್ಣನಿರಿದೆಯಾ?
ಬದುಕಿನೊಳ್ ಕತ್ತಲೆಯ ಕವಿಸಿದೆಯಾ? ನಿನ್ನಬ್ಬೆ
ಬೆಸಗೊಂಡೊಡಾನೇನಂ ಪೇಳಲಿ? ನಿನ್ನನುಜೆ
ಬಂದಂಕದಲಿ ಕುಳಿತು ‘ನನ್ನಣ್ಣನೆಲ್ಲಿ?’ ಎಂದು
ಕೇಳುವಾ ಸಮಯದಲಿ ನಾನೆಂತು ಸೈರಿಸಲಿ?
ನಿನ್ನ ಪ್ರಜೆಗಳ್ ಬಂದು ‘ನಮ್ಮ ಚಿಕ್ಕರಸರೆಲ್ಲಿ?’
ಎಂದು ಬೇಡಲು ಆವ ನಾಲಗೆಯೊಳೊರೆಯಲಿ?
ಹಾ ಕಂದ! ಮುದಿಯ ತಂದೆಯನಗಲಿ ಪೋದೆಯೇಂ!

ರುದ್ರ – ನಾಯಕರೆ, ತಮ್ಮ ಮಗನಿನ್ನುಮುಳಿದಿರಬಹುದು.
ತೆರೆಗಳಂ ಬಗೆಬಗೆದು ತಲೆಯ ಮೇಗಡೆಗೆತ್ತಿ,
ಚಿಮ್ಮಿ ಮುಂದಕೆ, ಈಜಿ ಸಾಗುತಿದ್ದುದ ಕಂಡೆ.
ಶಕ್ತಿಯೊಳ್ ಯುಕ್ತಿಯೊಳ್, ಜಾಣ್ಮೆಯೊಳ್ ತಾಳ್ಮೆಯೊಳ್
ನಮ್ಮೆಲ್ಲರಂ ಮೀರಿದಾತಂ ಮುಳುಗಿದಪನೆ?
ಆತನೆಲ್ಲಿಯೊ ಕುಳಿತು ಸೊಗದೊಳಿಹನೆಂಬುದೆಯೆ
ನನ್ನ ನಂಬುಗೆ! ನನ್ನ ಆಸೆ!

ರಣ(ಶೋಕದಿಂದ) ಇಲ್ಲ, ಇನ್ನೆಲ್ಲಿ
ಅವನಿಹನು? ಅವನು ಹೋದನು; ಇನ್ನು ಬಾರನು.

ರಂಗ – ಆ ಪುಸಿಗ ಜೋಯಿಸನು ಹೊರಡುವಾಗೇನೊದರಿ
ಕಳುಹಿದನು! ಬಾಯಲ್ಲಿ ಹರಸುತ್ತ ಮನದಲ್ಲಿ
ಶಪಿಸಿದನೆ? ನಾನೆಂದೆ: – ಮುಂಗಾರ ಸಮಯಮಿದು,
ಪೆರ್ದೊರೆಯ ನಂಬಲಾಗದು, ಎಂದು. ನೀರು
ಬೆಂಕಿಗಳ ನಂಬುವರೆ? ನಾನೊರೆದುದಂ ಪುಡಿಗೆ
ಕಡೆಯೆಂದೆಣಿಸಿದರು. ಈಗಳೋ – ಮುಳುಗಿದುದು
ದೋಣಿ; ನಾವಿನಿಬರೆಮ್ಮ ಸಯ್ಪಿನ ಬಲದಿ
ಬದುಕಿದೆವು. ವೀರ ಶಿವನಾಯಕನೊ ಹೊಳೆಯ
ಹೆಮ್ಮಿನಿಗುಣಿಸಾದನು!

ರಣ – ಬದುಕಿಲ್ಲವೆಂಬೆಯೇಂ? (ಶೋಕಿಸುವನು)

ಜಯ(ರಂಗನಾಯಕಗೆ) ನಾಯಕರೆ,
ಆವ ಪೊಳ್ತಿನೊಲಾವುದೊರೆಯಬೇಕೆಂಬುದೆಯೆ
ನಿಮಗೆ ತಿಳಿಯದು. ಪುಣ್ಣೆಗೆಣ್ಣೆಯಂ ಬಳಿಯುವರೆ?
ಮೇಣದನು ಇರಿಯುವರೆ? ಜೀಯ, ರಣನಾಯಕರೆ,

ರಣ – ಬೇಡ, ಮಾತಾಡದಿರು – ಮೌನದಲಿ ಶಾಂತಿಯಿದೆ –

ಜಯ – ಅದೋ, ದೂರದಿಂದೈತಪ್ಪ ಸಂಗೀತಮಂ ಕೇಳಿ!
ಇಲ್ಲಿ ಅರೆಗಳು ಕೂಡ ಹಾಡುವುದನರಿತಿಹವು!
ಆಗಸದೊಳೆಲ್ಲಿಯುಂ ಗಾನಮಯಮಿಲ್ಲಿ!
(ಕಿನ್ನರನು ಅದೃಶ್ಯನಾಗಿ ಹಾಡುತ್ತಾ ಬರುತ್ತಾನೆ)

ಕಿನ್ನರ(ಹಾಡು) ಹಬ್ಬಿದ ಮಲೆಗಳ ಮೇಲಲೆದಾಡುವ ಮಳೆಗಳೆ ಬನ್ನಿ;
ಬನಬನದಲಿ ಚಿಮ್ಮುತ ನಲುದಾಡುವ ಚಳಿಗಳೆ ಬನ್ನಿ!
ಮುಗಿಲಂಚಿನ ಕುಡಿಮಿಂಚಿನ ನವಕಾಂಚನವನು ತೊಟ್ಟು,
ನವನೀರದ ಸುರಚಾಪದ ಪೊಂದಾರದ ಉಡೆಯುಟ್ಟು
ಬಹುವೇಗದಿ ಬಿರುಗಾಳಿಯೆ ಬಾರೈ!
ಕಡಲೂರಿಗೆ ನಾವ್ ಪೊಗುವ ಬಾರೈ!
ನೀಂ ಗೆಲಿದಿಹ ಪೊಸ ಜೀವರ ತಾರೈ!
ನಮ್ಮೂರಿಗೆ ಹೊಸ ದಾರಿಯ ತೋರೈ

ಜಯ – ನನಗೇಕೊ ನಿದ್ದೆ ಬಂದಂತಾಗುತಿದೆ.

ರುದ್ರ – ಮಲಗು (ಜಯದೇವ ಮಲಗುವನು)

ರಣ – ನಿದ್ರಿಸಿದನವನೆಂತು ಶೀಘ್ರದೊಳೆ! ನನಗುಂ
ಕಣ್ಣೆಮೆಗಳೇಕೊ ಕೆಳಗೆಳೆಯುತಿವೆ.

ರಂಗ – ಮಲಗಣ್ಣಾ,
ಶೋಕದಲಿ ನಿದ್ದೆಬರುವುದೆ ಅಪೂರ್ವ. ಬಂದಾಗ
ಮಲಗುವುದಿರುದೆ ಕೇಡು! ನಿದ್ದೆಗೈದೊಡೆ ಶಾಂತಿ
ಲಭಿಸುವುದು.

ರುದ್ರ – ಅಂಗರಕ್ಷಣೆಗಾಗಿ ನಾವು
ಕಾದಿಹೆವು. ನಾಯಕರೆ, ಮಲಗಿ ನಿರ್ಭಯದಿಂದ.

ರಣ – ಅಂತಕ್ಕೆ – ಏಂ ನಿದ್ದೆ! (ಮಲಗುತ್ತಾನೆ, ಕಿನ್ನರ ಹೊರಡುತ್ತಾನೆ)

ರಂಗ – ಇದೇನಿವರಿಗೀ ನಿದ್ದೆ?

ರುದ್ರ – ಈ ಹವದ ಮೈಮೆಯದು.

ರಂಗ – ಹಾಗಾದರೆಮಗೇತಕಾನಿದ್ದೆ ಬಾರದಿದೆ?
ನನ್ನ ಕಂಗಳಲದರ ಸುಳಿವುಮಿಲ್ಲ.

ರುದ್ರ – ನನಗುಮಂತೆಯೆ ಇಹುದು.
ಮಾತಾಡಿಕೊಂಡಂತೆ ನಿದ್ದೆಮಾಡಿದರಿವರು!
ಸಿಡಿಲು ಬಡಿದೊರಗಿದವರಂತೆ ಬಿದ್ದಿಹರು.
(ಸ್ವಲ್ಪ ಕುಹಕಾಲೋಚನೆ ಮಾಡಿ) ನಾಯಕರೆ.

ರಂಗ – ಏನು?

ರುದ್ರ – ಇರಲಿ, ಅದನೀಗಳೊರೆಯೆ

ರಂಗ – ಅದೇಕೆ ಪೇಳ್ವುದನಾಗಳೆ ಪೇಳಲದುವೆ ಲೇಸು.

ರುದ್ರ(ರಂಗನಾಯಕನ ತಲೆಯ ಕಡೆ ದುರುದುರನೆ ನೋಡುತ್ತ) ಇದೇನು!

ರಂಗ – ನಾಯಕರೆ ನೀವೇನಂ ಕಂಡಿಂತಟು ಬೆಚ್ಚಿಬೀಳುವಿರಿ?

ರುದ್ರ(ಕಣ್ಣುಜ್ಜಿಕೊಂಡು ಮತ್ತೆ ನೋಡುತ್ತ)
ಇದೇನು? ಯಾವ ರಾಜನ ಮಕುಟವಿದು?

ರಂಗ – ಎಲ್ಲಿ?

ರುದ್ರ – ಹಾ! ರಣನಾಯಕರ ಮಣಿಕಚಿತ ಮಕುಟಂ!

ರಂಗ – ಇದೇನಿದು, ನಾಯಕರೆ? ನಿಮಗುಂ ನಿದ್ದೆಯೊ ಏನು?

ರುದ್ರ – ಹಾ! ತಳಿಸುತಿಹುದೆಂತು! ನಿಮಗದು ಕಾಣಿಸದೆ?
ನಗರದರಸರ ಮಕುಟಂ! ನೋಡಲ್ಲಿ! ನೋಡಲ್ಲಿ!
ಗಗನದಿಂದವತರಿಪ ಚಾರು ಸುರಚಾಪದೊಲು
ನಿಮ್ಮ ಮೇಲಿಳಿಯುತಿದೆ!

ರಂಗ – ಎಲ್ಲಿ? ಎಲ್ಲಿ? ನಾ ಕಾಣೆ!

ರುದ್ರ – ನೀವೇನು ಕುರುಡರೇ?

ರಂಗ – ನೋಡಿದರೆ ಕಾಣಿಸದು.
ಕನಸು ಕಾಣುವಿರೇನು? ಅಚ್ಚರಿ! ಈ ನಿದ್ದೆ
ಅಚ್ಚರಿ! ನಡೆಯುತ್ತ, ನುಡಿಯುತ್ತ, ಚರಿಸುತ್ತ,
ಇಂತಪ್ಪ ಗಾಢನಿದ್ರೆಯಳಿರ್ಪುದಾಶ್ಚರ್ಯಂ! ಆಶ್ಚರ್ಯಂ?

ರುದ್ರ – ನಾಯಕರೆ,
ಕಣ್ಣಿಲ್ಲದಿರ್ದರುಂ ಕಲ್ಪನೆ ಕುರುಡಹುದೆ?
ಬುದ್ಧಿಯಿಲ್ಲದೆ ನೀವು ಹಾಳಾಗುವಿರಿ! ಅಯ್ಯೊ!

ರಂಗ – ನಿಮ್ಮದಿದು ತಿರುಳು ತುಂಬಿದ ಕನಸಿನಂತಿಹುದು!

ರುದ್ರ – ನಾಯಕರೆ, ಬರುಗನಸಲ್ಲ; ನನ್ನ ದರ್ಶನಂ!
ಬಿನದವಲ್ಲೆನ್ನ ನುಡಿ; ಕಿವಿಗೊಡುವಿರಾದೊಡೆ,
ನೀವರಸರಾಗುವಿರಿ!

ರಂಗ – ಬೇಡ! ನನಗದು ಬೇಡ!

ರುದ್ರ – ನಗರದ ಸಿಂಹವಿಷ್ಟರಕೊಡೆಯರಪ್ಪಂತೆ
ಮಾಡುವೆಂ!

ರಂಗ – ಇನ್ನೊಮ್ಮೆ ನುಡಿಯದಿರಿ, ನಾಯಕರೆ!

ರುದ್ರ – ವೀರಪಾರ್ಥಿವರಾಗಿ, ನವಯುವಕರಾಗಿ ನೀವ್‌
ಬೆದರುವುದೆ? ನಾ ನಿಮಗೆ ನೆರವಾಗಿ ಬಂದಿರಲು
ನಿಮಗದೇತರ ಭಯಂ?

ರಂಗ – ನಾನೊಲ್ಲೆ, ನಾನೊಲ್ಲೆ!

ರುದ್ರ – ವೀರಪುಂಗವ ರಂಗನಾಯಕರೆ,
ನಿಮ್ಮೆದೆಯ ನಾ ಬಲ್ಲೆ; ಒಳಗಿರ್ಪುದಾಕಾಂಕ್ಷೆ,
ತೋರಿಕೆಗೆ ಬೇಡೆಂಬುವಭಿನಯಂ. ಹಂಗಿಸುತ
ನಿಮ್ಮ ಬಯಕೆಯ ನೀವೆ, ಮುಂಬರಿಯಲಳಕುವಿರಿ!
ದೊರೆತ ಸಮಯವ ಬಿಡಲು ಮರಳಿ ಬರುವುದೆ? ಹೇಳಿ!

ರಂಗ – ನಿಮ್ಮಾಸೆಯೆಂತಿರ್ಪುದೋ ಹೇಳಿ; ನೀವೆನ್ನ
ಮಂಗಳಾಕಾಂಕ್ಷಿಗಳು ನಿಮ್ಮ ಸಲಹೆಗೆ ನಾನು
ಶರಣಾದೊಡೊಳ್ಳಿತಹುದು.

ರುದ್ರ – ನಾಯಕರೆ, ನೀವೆನ್ನಂ
ಸಾಮಾನ್ಯನೆಂದರಿಯದಿರಿ; ನರಕದೊಡೆಯನಿಗೆ
ಸಲಹೆಗಳನೀಯಲರಿವೆ! – ದೊರೆಯ ಮಗನುಳಿದಿಹನೆ?
ಯಾರು ಹೇಳುವ ಮಾತು! ಯಾರು ನಂಬುವ ಮಾತು?
ಅವನು ಮುಳುಗಿದುದು ಸುಳ್ಳಾದೊಡೆ, ಇವರಿಲ್ಲಿ
ಮಲಗಿಹುದೆ ಪುಸಿಯಹುದು.

ರಂಗ – ನನಗೆ ನೆಚ್ಚಿಲ್ಲ,
ಅವನು ಬದುಕಿಹನೆಂಬ ಮಾತಿನಲಿ.

ರುದ್ರ(ಧ್ವನಿಪೂರ್ವಕವಾಗಿ) ನೆಚ್ಚಿಲ್ಲ! –
ನೆಚ್ಚು! ನಿಮಗಿಹ ನೆಚ್ಚು! ಕೆಚ್ಚೆದೆಯ ಬೀರನಿಗೆ
ನೆಚ್ಚು ತೊತ್ತಾಗುವಳು! ಆ ಶಿವನಾಯಕನು
ಮುಳುಗಿರ್ಪನೆಂಬಿರಾ?

ರಂಗ – ಸಾಯದೆಯೆ ಮತ್ತೇನು?

ರುದ್ರ – ಅವನು ಅಳಿದೊಡೆ ಮುಂದೆ ಯುವರಾಜನಾರಹನು?
ನಗರದೊಡೆತನವಾರ್ಗೆ?

ರಂಗ – ಸಿಂಗಣ್ಣನಾಯಕಗೆ?

ರುದ್ರ – ಅದರ ಬದಲೊಂದರೆಗೆ ಪಟ್ಟಕಟ್ಟಲು ಲೇಸು!
ಮಂಕನಿಗೆ ರಾಜ್ಯವೆ? ಹಗಲಾವುದಿರುಳಾವು –
ದೆಂಬುದನೆ ತಿಳಿಯದವಗೇಕೆ ಪಟ್ಟದ ಪೆರ್ಮೆ?

ರಂಗ – ನಿಮ್ಮೆದೆಯ ನಾನರಿಯಲಾರದಿಹೆ.

ರುದ್ರ – ಅಹಹಾ!
ನನ್ನ ಬಗೆ ನಿಮಗಿರ್ದೊಡೆ! – ಎನಿತು ಮಲಗಿಹರಿವರು,
ಶಯ್ಯೆಯಾಗಿರ್ಪರೆಗಳಂತೆವೋಲ್? ಮುನ್ನುಡಿ
ನಮ್ಮೇಳ್ಗೆಗೀ ನಿದ್ದೆ! ತಿಳಿಯಿತೇ?

ರಂಗ – ತಿಳಿದಂತೆ
ತೋರುತಿದೆ.

ರುದ್ರ – ನಿಮ್ಮ ಭಾಗ್ಯದ ಲಕ್ಷ್ಮಿ ಬಾಗಿಲಿಗೆ
ಬಂದಿಹಳು: ಒಳಗೆ ಕರೆವಿರೋ? ತಳ್ಳುವಿರೋ?

ರಂಗ – ನಿಮ್ಮಣ್ಣನನು ನೀವು ರಾಜ್ಯದಿಂದಟ್ಟಿದಿರಿ,
ಅಲ್ಲವೇ?

ರುದ್ರ – ಅಹುದು, ಯುಕುತಿಯಿಂದೋಡಿಸಿದೆ.
ನೋಡೀಗಳೆಂತರಸನುಡುಗೆಗಳ್ ಸಿಂಗರಿಸು-
ತಿಹವೆನ್ನ ರೂಪಮನ್! ನನ್ನಣ್ಣನಾಳುಗಳ್
ಅಂದಿರ್ದರೆನಗೆ ಎಣೆಯಾಗಿ. ನೋಡಿಂದು
ಅವರೆಲ್ಲರೆನ್ನ ಕಿಂಕರರಾಗಿ ಗೆಯ್ಯುತಿಹರು.

ರಂಗ – ಧರ್ಮಮೆತ್ತಣ್ಗಾಯ್ತು? ಭೀಮ ಅರ್ಜುನರಂಥ
ಮೂಲೋಕದಾ ಗಂಡುರುಂ ಕೂಡ ಧರ್ಮಜನ
ನುಡಿಗಳನು ವೇದವೆಂದೇ ತಿಳಿದು ಅವನಿತ್ತ
ಆಜ್ಞೆಯನು ಮೀರುತಿರಲಿಲ್ಲ. ಲಕ್ಷ್ಮಣನು
ಅಗ್ರಜನ ನೆಳಲಾಗಿ ಸೇವಿಸಿದನಣ್ಣನನು!

ರುದ್ರ – ಸಾಕು, ಸಾಕಿದು, ರಂಗನಾಯಕರೆ; ನಿಮಗಾರು,
ಜಯದೇವನಿದನೆಲ್ಲ ತಿಳುಹಿದನೆ? ಧರ್ಮ!
ಧರ್ಮವೆಂಬುದು ಹೇಡಿಗಳ ಮರ್ಮ! ಕಬ್ಬಿಗರ
ಕಲ್ಪನೆಯ ಕತೆಗಳಲಿ ಕೇಳಿದಾ ತತ್ತ್ವಂಗಳಂ
ಈ – ರಾಜಕಿಯದಲಿ ತರಬೇಡಿ. ಕತೆಗಳವು,
ನಮ್ಮದಿದು ಕತೆಯಲ್ಲ! ಧರ್ಮಸತ್ಯಗಳೆಲ್ಲ
ಮುದಿತನದ ಮಾತುಗಳ್; ಕೆಚ್ಚೆದೆಯ ಜವ್ವನದ
ವೀರವಾಕ್ಯಗಳಲ್ಲ. ಮುಪ್ಪಡಿಸಿ ಬಂದಾ
ಕಾಲದಲಿ, ನಾವೂ ನನ್ನಿಯಂ ಕುರಿತು
ತಿಳಿಯದಿಹ ಮಕ್ಕಳಿಗೆ ಬುದ್ಧಿ ಹೇಳಿದರಾಯ್ತು!
ನೀವೇನು ಮಾಡುವಿರೊ ಅದೆ ನಿಮ್ಮ ಧರ್ಮ.
ಬೇರೆ ಧರ್ಮವದೆಲ್ಲಿ? ನಿದ್ದೆಯಲಿ ಮುಳುಗಿಹನ್
ನಗರದರಸನ್‌, ಮಣ್ಣಿಗಿಂತಲುಂ ಮಣ್ಣಾಗಿ,
ಕಲ್ಲಿಗಿಂತಲುಮಧಿಕ ಕಲ್ಲಾಗಿ. ಮಿಂಚುವೀ
ನನ್ನ ಕೂರಸಿಯವನ ಮುಂಡಮಂ ರುಂಡದಿಂ
ಬೇರ್ಕೈದ ಕೂಡಲೆ ದಿಟಂ ನೀವರಸರಾಗುವಿರಿ!

ರಂಗ – ಜನಪದದಪವಾದ?

ರುದ್ರ – ಹೊಳೆಯಲ್ಲಿ ಮುಳುಗಿದನ್
ಎಂದರಾಯ್ತೇಳಿ!

ರಂಗ(ಉದ್ವೇಗದಿಂದ) ಕತ್ತಿಯನ್ ಒರೆಗಳಚಿ,
ನಾಯಕರೆ! ನಗರದರಸಗೆ ನೀವು ಸಲ್ಲಿಸುವ
ಕಪ್ಪವನ್ ನಿಲ್ಲಿಸುವೆ. ನೀವೆನ್ನ ನೇಹಿಗರ್!

ರುದ್ರ – ನಾನು ರಣನಾಯಕನ ಕಡಿದೊಡನೆ, ನೀವು
ಜಯದೇವನಂ ತುಂಡುಗೈವುದು! – (ಕತ್ತಿಗಳನೆಳೆಯುವರು)

ರಂಗ – ಒಂದೆ ಮಾತು (ಪಿಸುಮಾತಾಡುತ್ತಾನೆ)
(
ಅದೃಶ್ಯನಾಗಿ ಕಿನ್ನರನು ಬರುವನು)

ಕಿನ್ನರ – ದಿವ್ಯದೃಷ್ಟಿಯನಟ್ಟಿ ನನ್ನೊಡೆಯನರಿತಿಹನು
ನಿನಗಂ ಮೇಣ್ ನಿನ್ನ ಗೆಳೆಯಂಗಂ ಬಂದಿರ್ಪ
ದುರ್ಗತಿಯ ಪರಿಯಂ. ನನ್ನನಟ್ಟಿದನಿಲ್ಲಿ-
ಗದಕಾಗಿ; ನಿಮ್ಮೀರ್ವರನ್ನೆಳ್ಚರಿಸಲೆಂದು.
[ಜಯದೇವನ ಕಿವಿಯಲ್ಲಿ ಹಾಡುವನು]
ಮಲಗಿರಲು ನೀವಿಂತು
ಸಾವಿಹುದು ಬಳಿ ನಿಂತು
ಹಸಿದು, ಬಾಯ್ದೆರೆದು;
ಜೀವನದೊಳಾಸೆಯಿರೆ
ಬಿಟ್ಟೇಳು ನಿದ್ದೆಯನು,
ಏಳು ಮೇಲೇಳು!

ರುದ್ರ – ಇನ್ನು ತಡಮಾಳ್ಪುದೇಕೆ?

ಜಯ(ಎಚ್ಚತ್ತು ಗಾಬರಿಯಿಂದ) ಶಿವ ಶಿವಾ! ಶಿವ ಶಿವಾ!
ದೊರೆಯಂ ಕಾಪಾಡು! (ರುದ್ರ ರಂಗನಾಯಕರನ್ನು ನೋಡಿ)
ಏನಿದೇನಿದು? (ರಣನಾಯಕಗೆ) ಹೋ
ಎದ್ದೇಳು! ಎದ್ದೇಳು! (ರುದ್ರ ರಂಗನಾಯಕರಿಗೆ)
ಕತ್ತಿಗಳನೊರೆಗಳಚಿ
ನಿಂತಿರುವಿರೇಕೆ? ಬೆಚ್ಚುವಿರದೇಕಿಂತು?

ರಣ(ಎಚ್ಚತ್ತು) ಏನು! ಏನು! ಏನು!

ರಂಗ – ನಾವಿಲ್ಲಿ ನಿಂತಿರಲು, ನಿಮ್ಮ ಸಂರಕ್ಷಣೆಯ
ಕಾರ್ಯದಲ್ಲಿಯೆ ತೊಡಗಿ ನಿಂತಿರಲು, ಬಳಿಯೊಳೇ
ಆನೆಗಳೊ, ಸಿಂಹಗಳೊ ಗರ್ಜಿಸಿದ ತೆರನಾಗಿ –
ಅದರಿಂದಲೇ ನೀವು ಎಚ್ಚತ್ತು ಕೂಗಿದುದು –
ಅಬ್ಬಬ್ಬಾ ಏಂ ಭಯಂಕರನಾದಂ! ನನ್ನೆದೆ ನಡನಡ ನಡಗಿತು!

ರಣ – ನನಗಾವ ನಿಡುದನಿಯೂ ಕೇಳ್ದುದಿಲ್ಲ!

ರುದ್ರ – ಅಬ್ಬಬ್ಬ! ಗಿರಿಗಳನೆ ನಡುಗಿಸುವ ಹುಂಕಾರ!
ಭೂಕಂಪಮಂ ಗೈವ ಹರಿಕಂಠ ಗರ್ಜನೆ!
ಸಿಂಹಗಳೆ ಇರಬೇಕು!

ರಂಗ – ಮೇಣ್ ರಕ್ಕಸರೊ?

ರಣ – ಜಯದೇವ, ನೀನುಂ ಕೇಳ್ದೆಯೇಂ?

ಜಯ – ನನ್ನಾಣೆ, ಏನೊ ಮೊರೆದಂತಾಗಿ ಎಚ್ಚತ್ತು,
ನಿಮ್ಮನುಂ ಎಚ್ಚರಿಸೆ, ಕೂಗಿದೆನು. ಕಣ್ದೆರೆದು
ನೋಡಲ್ಕೆ ಕತ್ತಿಗಳನೊರೆಯಿಂದ ಹಿರಿದೆತ್ತಿ
ನಿಂದಿದ್ದರಿವರಿರ್ವರುಂ ಬೆಕ್ಕಸಂ ಬಡುತ.
ನಾವಿನ್ನು ಎಚ್ಚರಿಕೆಯಿಂದಿರ್ಪುದೇ ಲೇಸು!
ಇಲ್ಲಿಂದ ತೊಲಗುವಂ; ಕತ್ತಿಗಳನೊರೆಗಳಚಿ!

ರಣ – ಪೊರಡುವಂ. ಮಗನ ಗತಿ ಏನಾದುದೆಂಬುದಂ
ತಿಳಿಯುವಂ; ನಡೆಯಿಂ!

ಜಯ – ರಕ್ಷಿಸುಗೆ ಪರಶಿವಂ
ಕಾಳ್‌ಮಿಗಗಳಿಂದಾತನಂ! ಅವನಿನ್ನುಂ
ಬದುಕಿರ್ಪಂ! ಆಂ ಬಲ್ಲೆಂ!

ರಣ – ಬನ್ನಿಂ, ಬೇಗ ನಡೆಯಿಂ!
(ಹೊರಡುತ್ತಾರೆ)

ಕಿನ್ನರ – ಭೈರವನಿಗಿದನೆಲ್ಲಮಂ ತಿಳುಹುವೆನ್, ದೊರೆಯೆ,
ಪೋಗು, ಮಗನಂ ಪುಡುಕು, ನಿನಗಕ್ಕೆ ಮಂಗಳಂ!