[ದ್ವೀಪದ ಮತ್ತೊಂದು ಬಾಗ. ಶನಿಯ ಕಟ್ಟಿಗೆಯ ಹೊರೆಯನ್ನು ಹೊತ್ತುಕೊಂಡು ಬರುತ್ತದೆ. ಗುಡುಗಿನ ಸದ್ದು ಕೇಳಿಸುತ್ತದೆ. ಹೊರೆಯನ್ನು ಕೆಳಗಿಟ್ಟು ಸೊಂಟಗೈಯಾಗುತ್ತದೆ.]

ಶನಿಯ – ಭೂಮಿಯಲಿ ಅಲೆಯುತಿಹ ರುಜೆಗಳನಿತುಮುಂ:
ಚಳುಕುಳುಕು, ತೊನ್ನು, ಹೊಟ್ಟೆಯನೋವು, ಕಣ್ಬೇನೆ,
ಕಿವಿನೋವು, ತಲೆನೊವು, ನಾಯ್ಗೆಮ್ಮು, ಬದಿಶೂಲೆ,
ಕಾಲೊಡಕ, ವಾತಪಿತ್ತಗಳೆಲ್ಲ ಭೈರವನ
ಸೆರೆಗೈದು ಪೀಡಿಸುಗೆ! ಬುವಿಯೊಳಿಹ ಸರ್ವ, ಕ್ರಿಮಿ
ಕೀಟಗಳು: ಹೇನುಗಳು, ಕೂರೆಗಳು, ತಿಗಣೆಗಳು,
ಜಿಗಣೆಗಳು, ಸೊಳ್ಳೆಗಳು ಗಿಳ್ಳೆಗಳು ಎಲ್ಲ
ಅವನ ನೆತ್ತರವೀಂಟಿ ಸಂತಸದಿ ಜೀವಿಸುಗೆ! –
ಅವನ ಕಿನ್ನರದೂತರಿದನಾಲಿಸುತಲಿರಬಹುದು!
ಆಲಿಸುಗೆ, ಬೈಯುವೆನು! ಆಲಿಸುಗೆ, ಶಪಿಸುವೆನು!
ಅವನಾಜ್ಞೆಯಿಲ್ಲದೆಯೆ ಅವುಗಳೇನನು ಮಾಡ
ಲಾರವು. – ಹೋದುದಕೆ, ಬಂದುದಕೆ; ಕುಳಿತುದಕೆ,
ನಿಂತುದಕೆ ‘ಛೂ’ ಬಿಡುವನಾ ಕುನ್ನಿಗಳನೆನ್ನ ಮೇಲೆ.
ಮಂಗನಂದದಿ ಕೆಲವು ಪಲ್ಕಿರಿದು ಪರಿಹಾಸ್ಯ
ಮಾಡುವುವು. ಕಣೆಹಂದಿಗಳ ತೆರದಿ ಕಾಲನಡು
ನುಸಿಯುವುವು, ಹಾದಿಯಲಿ ಹೋಗುತಿರೆ, ಹೆಮ್ಮರದ
ತುಂಡುಗಳ ರೂಪವನು ಹೊಂದಿ ದಾರಿಯೊಳಡ್ಡ
ಬೀಳುವುವು, ನಾ ಮುಗ್ಗರಿಸುವಂತೆ. ಒಮ್ಮೊಮ್ಮೆ
ಕೇಸರಿನಲಿ ತಳ್ಳುವುವು. ಬಟ್ಟೆಗೆಡಿಪವು ಒಮ್ಮೆ.
ಹಾವುಗಳ ಹೋಲುತ್ತ ಅಂಗಾಂಗಗಳ ಬಿಗಿದು
ಬುಸ್ಸೆಂದು ಬೆದರಿಸುತ ಹುಚ್ಚು ಹಿಡಿಸುವುವು. – (ದೂರಕ್ಕೆ ನೋಡಿ)
ಹೋ! ಅಗೋ! ಆಗಲೇ ಅಲ್ಲೊಂದು ಬರುತಿಹುದು.
ಕಟ್ಟಿಗೆಯ ತರಲು ತಳುವಿದ ತಪ್ಪಿಗಾಗೊಬ್ಬ
ಕಿನ್ನರನನಟ್ಟಿಹನು ನನ್ನ ಪೀಡಿಸಲೆಂದು.
ಏಗೈವೆನೀಗಳಾನರಿಯೆನ್! – ಇರಲಿ,
ಸತ್ತವೊಳ್ ಮಲಗುವೆನ್! ಶನಿಯ ದಯೆಯಿಂದವನ್
ನನ್ನನವಲೋಕಿಸದೆ ಮುಂಬರಿಯಬಹುದು.
[ಕಂಬಳಿ ಮುಚ್ಚಿಕೊಂಡು ಮಲಗುತ್ತಾನೆ. ತ್ರಿಶಂಕು ಬರುತ್ತಾನೆ.]

ತ್ರಿಶಂಕು(ಸುತ್ತ ನೋಡಿ) ಏನು ಬಟ್ಟಬಯಲಿದು? ನೆಳಲೀಯಲೊಂದು ಗಿಡವಿಲ್ಲ, ಮರವಿಲ್ಲ, ಹುದುಗಿಕೊಳ್ಳಲು ಒಂದು ಬಂಡೆ ಕೂಡ ಇಲ್ಲ. (ಮೇಲೆ ನೋಡಿ) ಇದೇನಿದು? ಗಗನದಲಿ ಮತ್ತೆ ಕರ್ಮುಗಿಲು ಕವಿಯುತಿದೆ. ಸುಯ್ಯೆಂದು ಮರಳಿ ಬೀಸತೊಡಗಿದೆ ಬಿರುಗಾಳಿ. ಆ ಕರಿಯ ಮೋಡ, ಕರಿಯರೆಯ ಹೋಲುತಿಹ ಆ ದೊಡ್ಡ ಮೋಡ, ಇನ್ನೇನು ಈಗಲೋ ಆಗಲೋ ಗುಂಡುಗಳ ಮಳೆಗರೆವ ಸಿಡಿಮದ್ದಿನುಂಡೆಯಂತೆ ಹುಬ್ಬು ಗಂಟಿಕ್ಕಿಕೊಂಡಿದೆ. ಗುಡುಗಿದರೆ ಎಲ್ಲಿ ಅಡಗುವುದೊ ನಾನರಿಯೆ. ನನ್ನ ಈ ಮುದಿತಲೆಯ ಮೇಲೆಯೇ ಬೀಳಬೇಕೆಂದು, ಹಾರೈಸಿ ಕಣ್ಣಿಟ್ಟು ಹವಣಿಸಿ ಕಾಯ್ದುಕೊಂಡಿರುವ ಆ ಮಳೆಗಲ್ಲು ಉದುರ ತೊಡಗಿದರೆ ಎಲ್ಲಿ ಮೈಮರೆಸಿಕೊಳ್ಳುವುದೊ ನಾನರಿಯೆ – (ಎರಡು ಹೆಜ್ಜೆ ನಡೆದು ನೆಲದ ಕಡೆ ನೋಡಿ) ಇದೇನಿದು? – ಕಲ್ಲೋ? ಮರವೋ? ಮೀನೋ? ಮನುಷ್ಯನೋ? ಸತ್ತಿದೆಯೋ ಬದುಕಿದೆಯೋ? – ಮೀನೆಂದೇ ತೋರುತ್ತದೆ. – (ಮೂಸಿ ನೋಡಿ) ಹೌದು, ಅದೇ ವಾಸನೆ! ಹಳೆಯ ಕಾಲದ ಮೀನೆಂದು ತೋರುತ್ತದೆ. ರಾಮಾಯಣ ಕಾಲದ್ದಿರಬೇಕು! ಬಹಳ ವಿಚಿತ್ರವಾಗಿದೆ. ಇದು ನಮ್ಮೂರಿನಲ್ಲಿ ಸಿಕ್ಕಿದ್ದರೆ ಏಸು ಹಣ ಸಂಪಾದನೆ ಮಾಡುತ್ತಿದ್ದೆ! ತಿರುಕನೂ ಕೂಡ ಕಾಸುತೆತ್ತು ನೋಡಲು ಬರುತ್ತಿದ್ದ! – ಓಹೋ ಮನಷ್ಯರ ಕಾಲುಗಳಿವೆ! – ಓಹೋ, ರೆಕ್ಕೆಗಳು ತೋಳುಗಳಂತಿವೆ! – (ಮುಟ್ಟಿ ನೋಡಿ) ಓಹೋ ಬೆಚ್ಚಗಿದೆ! – ಓಹೋ ಗಡ್ಡ ಬೇರೆ! – ಅಯ್ಯೊ ನಾನೆಂತಹ ದಡ್ಡ! ಮೀನಲ್ಲ ಇದು. ಯಾವನೋ ಈ ದ್ವೀಪದ ನಿವಾಸಿ ಸಿಡಿಲಿನಿಂದ ಈಗತಾನೇ ಸತ್ತು ಬಿದ್ದಿದ್ದಾನೆ! (ಗುಡುಗುವುದು) ಅಯ್ಯಯ್ಯೋ ಕೆಟ್ಟೆನಲ್ಲಾ! ಮತ್ತೆ ಪ್ರಾರಂಭವಾಯಿತು ಆ ಮಾರಿಮಳೆ! –  ಇವನ ಕಂಬಳಿಯೊಳಗೆಹುದುಗುವುದೆ ಲೇಸು! ಅಡಗಲು ಇನ್ನೆಲ್ಲಿಯೂ ತಾವಿಲ್ಲ! ಏನು ಮಾಡುವುದು? ಹೊಸ ಊರು, ಹೊಸ ಪರಿಚಯ, ಅಯ್ಯೋ ನನ್ನ ಹಣೆ ಬರಹವೇ! ಎಲ್ಲಿಯೋ ಎಂಥೆಂಥವರ ಜೊತೆಯಲ್ಲಿಯೋ ಮಲಗಬೇಕಾಗಿದೆ!
ಹೆಣದೊಡನೆ ಮಲಗುವುದಾದರೂ ಹೇಗೆ? ಅದರಲ್ಲಿಯೂ ಬದುಕಿರುವಾಗ (ಗುಡುಗು) ಇನ್ನೇನು ಮಾಡುವುದು! ಮಾರಿಮಳೆ ಮುಗಿವತನಕ ಇಲ್ಲಿಯೇ ಹುದುಗಿರುವೆನು!
[ಶನಿಯನ ಕಂಬಳಿಯೊಳಗೆ ಹುದುಗುತ್ತಾನೆ. ಬೀಮಣನು ಹೆಂಡದ ಪಾತ್ರೆಯನ್ನು ಹಿಡಿದು ಹಾಡುತ್ತ ಪ್ರವೇಶಿಸುತ್ತಾನೆ]

ಬೀಮಣ(ಹಾಡು)
ದೋಣಿಯನೇರೆನು, ದೋಣಿಯನೇರೆನು,
ದೋಣಿಯನೇರೆನು ನಾನಿನ್ನು!

ರಾಗವೇ ಸರಿಯಾಗಿಲ್ಲ. ಮಸಣದಲ್ಲಿ ಅತ್ತಂತಿದೆ. ಕೊರಳಿಗೆ ಒಂದಿನಿತು ಹೆಂಡಯ್ಸುವೆನ್!
(ಕುಡಿಯುತ್ತಾನೆ)
(
ಹಾಡು) ಬನದಲ್ಲಿ ನನಗೊಂದು ಹೆಣ್ಣು ಸಿಕ್ಕಿತು, ಹೆಣ್ಣು!
ಹೆಣ್ಣೆಂದರೇನೆಂಬೆ ಸುಲಿದ ಬಾಳೆಯಹಣ್ಣು!
ಹಣ್ಣು ನೇರಿಲಹಣ್ಣು ಹೆಣ್ಣ ಹೊಳೆಯುವ ಕಣ್ಣು!
ಹೆಣ್ಣ ದೇಹದ ಬಣ್ಣ ಮಣ್ಣು, ಚಿನ್ನದ ಮಣ್ಣು!
ಅವಳ ಕೈಗಳ ದುಂಡು ಬೆಳದ ಬಾಳೆಯ ದಿಂಡು!
ಅವಳ ಕಾಲ್ಗಳ ಕಂಡು ಮುತ್ತುಕೊಟ್ಟನು ಗಂಡು!
ಬನದಲ್ಲಿ ನನಗೊಂದು ಹೆಣ್ಣುಸಿಕ್ಕಿತು, ಹೆಣ್ಣು!
ಹೆಣ್ಣೆಂದರೇನೆಂಬೆ ಸುಲಿದ ಬಾಳೆಯ ಹಣ್ಣು!

ಇಂದೇಕೊ ಸಂಗೀತವೆ ಸರಿಯಾಗುವುದಿಲ್ಲ. ಹೊಳೆಯಲ್ಲಿ ಮುಳುಗಿ ಮಳೆಯಲ್ಲಿ ತೊಯ್ದು ಕಂಠ ಕಟ್ಟಿದೆಯೆಂದು ತೋರುತ್ತದೆ. ಸ್ವಲ್ಪ ಗಂಟಲು ಸರಿಮಾಡಿಕೊಳ್ಳುತ್ತೇನೆ.
(ಕುಡಿಯುತ್ತಾನೆ)

ಶನಿಯ – ಅಯ್ಯೋ – ಪೀಡಿಸಬೇಡ – ಅಯ್ಯೋ!

ಬೀಮಣ – ಓಹೋ ಇದೇನು ಸಮಾಚಾರ? ಇಲ್ಲೇನು ದೆವ್ವಗಳಿವೆಯೋ? – ಓಹೋ ನನ್ನ ಮುಂದೆ ನಿಮ್ಮ ಆಟವೋ? – (ಕೆಳಗೆ ನೋಡಿ) ಓಹೋ, ನಿನ್ನ ನಾಲ್ಕು ಕಾಲುಗಳನ್ನು ಕಂಡು ಹೆದರಿಕೊಳ್ಳವನಾಗಿದ್ದರೆ ಹೊಳೆಯಿಂದ ಮೇಲೆ ಬರುತ್ತಿದ್ದೆನೇ ಇಂದು? ಎರಡು ಕಾಲು ಸಾಲದೆ ನಾಲ್ಕು ಕಾಲಿನ ಮೇಲೆ ನಡೆಯುವ ನಿನಗೆ, ನಾನು, ಎರಡು ಕಾಲಿನ ವೀರ, ಹೆದರುವೆನೇ?

ಶನಿಯ – ಪಿಶಾಚ ಪೀಡಿಸುತ್ತಿದೆ – ಅಯ್ಯೋ!

ಬೀಮಣ – ಯಾವುದೋ ಚಳಿಜ್ವರ ಹಿಡದ ರಾಕ್ಷಸವಿರಬೇಕು. ಹಾಗಲ್ಲದಿದ್ದರೆ, ಇದರ ಮನೆ ಕಾಯವಾಗ, ನನ್ನಂತೆಯೇ ಮಾತಾಡುವುದೆಂದರೇನು? ಅದರಲ್ಲಿಯೂ ಕನ್ನಡದಲ್ಲಿ? ನಮ್ಮ ಕನ್ನಡದಲ್ಲಿ! ಆಃ ರಾಕ್ಷಸನಾದರೂ ಎಂತಹ ನುಡಿಯೊಲ್ಮೆ! ಏನು ದೇಶಭಕ್ತಿ! ಏನು ಭಾಷಾಭಿಮಾನ! ನಮಗಿಂತಲೂ ವಾಸಿ! ಹ ಹ ಹ! ನಾನಂತೂ ಯಮನಾದರೂ ಸರಿಯೆ, ಕನ್ನಡದಲ್ಲಿ ಕರೆದಾ? ಕುಣುಕೊಂಡು ಹೋಗ್ತೇನೆ! ಇಲ್ಲಾ? ಬರೋದಿಲ್ಲಾ ಅಂದುಬಿಡ್ತೇನೆ! – ಕನ್ನಡ ರಕ್ಕಸ, ಪಾಪ! ಚಳಿಯಿಂದ ಒರಲುತಿರಬಹುದು; ಸ್ವಲ್ಪ ಮದ್ದು ಹಿಂಡುತ್ತೇನೆ. ಇದನ್ನು ಹೇಗಾದರೂ ಮಾಡಿ ಪಳಗಿಸಿ ನಮ್ಮೂರಿಗೆ ತೆಗೆದುಕೊಂಡು ಹೋದರೆ ಚಕ್ರವರ್ತಿ ಕೂಡ ನನ್ನ ಮನೆಗೆ ಬರುತ್ತಾನೆ.

ಶನಿಯ – ದಮ್ಮಯ್ಯ! ಕಾಡಬೇಡ! ಇನ್ನು ಮೇಲೆ ಬೇಗ ಸೌದೆ ತರುತ್ತೇನೆ! – ಅಯ್ಯೋ!

ಬೀಮಣ – ಪಾಪ! ಪಿತ್ತ ನೆತ್ತಿಗೇರಿದೆ. ಚಳಿಯಿಂದ! ಅದರಿಂದಲೆ ಹುಚ್ಚು ಹಿಡಿದಂತೆ ಕಿರುಚುತ್ತಿದೆ. ಸ್ವಲ್ಪ ಈ ಸೋಮರಸ ಪಾನ ಮಾಡಿಸಿದರೆ ಒಡನೆಯೆ ಚಳಿ ಬಿಟ್ಟು ಪರಾರಿಯಾಗುತ್ತದೆ. ಪಳಗಿಸಿಟ್ಟುಕೊಂಡರೆ ಲಾಭವಾದರೆ ನನಗೆ, ವೆಚ್ಚವಾದರೆ ನನ್ನೊಡೆಯನಿಗೆ!

ಶನಿಯ – ನಾನೆಲ್ಲ ಬಲ್ಲೆ! ನಿನ್ನ ಕೈಲಿ ಏನೂ ಸಾಗುವುದಿಲ್ಲೆಂದು! ಸಾಗುವುದಾಗಿದ್ದರೆ ಹೀಗೇಕೆ ನಡುಗುತಿದ್ದೆ – ನನಗೆ ಗೊತ್ತು, ಎಲ್ಲ ಭೈರವನ ಕುತಂತ್ರ!

ಬೀಮಣ – ಎಲ್ಲಿ ಬಾಯಿತೆರೆ, ಕೊತ್ತಿ! ಚಳಿ ಹೋಗುವಂತೆ ಮದ್ದು ಹಿಂಡುತ್ತೇನೆ. ಹುಂ, ಬಾಯಿತೆರೆ! ನಡುಕವೆಲ್ಲ ನಿಂತೇ ಹೋಗುತ್ತದೆ. ಹಾಗೆ ನನ್ನ ಮಾತು ಕೇಳು. (ಶನಿಯಗೆ ಹೆಂಡಕುಡಿಸುತ್ತಾನೆ) ಅಯ್ಯೋ ಮಂಕು ರಕ್ಕಸಾ, ಕನ್ನಡಿಗಾ, ನಿನಗೆ ಹಿತವರಾರೆಂಬುದೇ ತಿಳಿಯದಲ್ಲಾ! ಹುಂ ಬಾಯಿತೆರೆ!

ತ್ರಿಶಂಕು(ಸ್ವಗತ) ಇದೇನು? ಬೀಮಣನ ದನಿಯಂತೆಯೆ ಕೇಳುತ್ತಿದೆ – ಅಯ್ಯೋ ಅದೆಲ್ಲಿಯ ಮಾತು? ಯಾವುದೋ ಪಿಶಾಚವಿರಬೇಕು – (ಗಟ್ಟಿಯಾಗಿ) ಅಯ್ಯೋ ದಮ್ಮಯ್ಯ! ಕಾಪಾಡು!

ಬೀಮಣ – ನಾಲ್ಕು ಕಾಲು. ಎರಡು ಕಂಠ! ಇದೆಂತಹ ರಕ್ಕಸ! ಈ ಕಡೆಯ ಬಾಯಿಂದ ಒಳ್ಳೆಯ ಮಾತಾಡುತ್ತಿದೆ. ಆ ಕಡೆಯ ಬಾಯಿಂದ ಬರಿಯ ಹೊಲ್ಲಮೆಯೆ ಹೊರಹೊಮ್ಮುತಿದೆ. ಈ ಪಾತ್ರೆಯ ಮಧುವೆಲ್ಲ ಮುಗಿದರೂ ಸರಿಯೆ; ಇದರ ಚಳಿ ಬಿಡಿಸಲೇಬೇಕು. ಎಲ್ಲಿ? ಬಾಯಿ ತೆರೆ. (ಶನಿಯಗೆ ಕುಡಿಸುತ್ತಾನೆ) ಹುಂ; ಸಾಕು. ಈ ಬಾಯಿಗೆ ಸಾಕು! ಉಳಿದುದನು ಆ ಬಾಯಿಗೆ ಹೊಯ್ಯುತ್ತೇನೆ.

ತ್ರಿಶಂಕು – ಬೀಮಣಾ!

ಬೀಮಣ –  ಆ ಬಾಯಿಂದ ನನ್ನನೇ ಕರೆಯುತಿದೆ ನನ್ನ ಹೆಸರು ಇದಕೆಂತು ಗೊತ್ತು? – ಅಯ್ಯೋ ದೇವರೆ! ರಾಕ್ಷಸವಲ್ಲ; ಇದಾವುದೋ ದುಷ್ಟ ಪಿಶಾಚವಿರಬೇಕು? ಸಾಕಪ್ಪ, ನನಗಿದರ ಗೊಡವೆಯೇ ಬೇಡ. (ದೂರ ಸರಿದು) ಮದ್ದು ಹೊಯ್ಯಲು ಒಂದು ಉದ್ದವಾದ ಸೌಟು ಕೂಡ ಇಲ್ಲ!

ತ್ರಿಶಂಕು – ಬೀಮಣಾ! ನೀನು ಬೀಮಣನೆ ಹೌದಾದರೆ, ಸಟ್ಟುಗದಾಣೆಗೂ ನೀನು ಕೈತವದ ಮರಳಲ್ಲದಿರೆ ನನ್ನನು ಮುಟ್ಟಿ ಮಾತಾಡು. ನಾನು ತ್ರಿಶಂಕು. ಹೆದರಬೇಡ; ನಿನ್ನ ಪ್ರಾಣಸ್ನೇಹಿತ ತ್ರಿಶಂಕು, ನಾನು.

ಬೀಮಣ – ನೀನು ದಿಟವಾಗಿಯೂ ತ್ರಿಶಂಕುವೆ? ಹೌದಾದರೆ ಹೊರಗೆ ಬಾ; ಈ ಕುಳ್ಳ ಕಾಲುಗಳನ್ನು ಹಿಡಿದೆಳೆಯುವೆ. (ಬಗ್ಗಿ ನೋಡಿ) ಅಯ್ಯೋ ಚತುಷ್ಪಾದಿ! ಈ ನಾಲ್ಕು ಕಾಲುಗಳಲ್ಲಿ ತ್ರಿಶಂಕುವಿನ ಕಾಲ್ಗಳಾವುವು? ಯಾವುದಾದರೂ ಆಗಲಿ. ದೇವರೇ ಗತಿ. ಕಣ್ಣುಮುಚ್ಚಿಕೊಂಡು ಎಳೆದೇ ಬಿಡುತ್ತೇನೆ! (ಕಣ್ಣುಮುಚ್ಚಿಕೊಂಡು ಎಳೆಯುತ್ತಾನೆ. ತ್ರಿಶಂಕು ಹೊರಗೆ ಬರುತ್ತಾನೆ.) ಹೋ ಹೌದು! ನೀನೇ ನಮ್ಮ ತ್ರಿಶಂಕು! ಇಲ್ಲಿಗೆ ಹೇಗೆ ಬಂದೆ!

ತ್ರಿಶಂಕು – ಅರಸನನ್ನು ಅರಸುತ್ತ ಇಲ್ಲಿಗೆ ಬರಲು, ಗುಡುಗಿತು. ಇವನು ಸಿಡಿಲು ಬಡಿದು ಸತ್ತವನೆಂದು ಭಾವಿಸಿ, ಸದ್ಯಕ್ಕೆ ಕಂಬಳಿಯೆ ಗತಿ ಎಂದು ಒಳಗೆ ನುಗ್ಗಿಬಿಟ್ಟೆ – (ಪೆದ್ದು ಪೆದ್ದಾಗಿ) ಬಿರುಗಾಳಿ ನಿಂತಿದೆಯೆ? (ಮೇಲೆ ನೋಡುತ್ತಾನೆ.)

ಬೀಮಣ – ಅದರ ಬಲ್ಮೆಗೂ ಮೇರೆಯಿದೆ. ಅದರಾಟ ಮುಗಿಯಿತಿನ್ನು.

ಶನಿಯ(ಎದ್ದು ನಿಂತು ಸ್ವಗತ) ಆಹಾ! ಎಂತಹ ದಿವ್ಯವಾದ ಸುಂದರ ದೇವತೆಗಳಿವರು! ಕರದಮೃತಕಲಶದಿಂ ಮೆರೆವ ಆ ಚೆಲ್ವಿನಾಕೃತಿ ಗೀರ್ವಾಣನೇ ದಿಟಂ. ಪಾದಗಳಿಗೆರಗಿ ಕೃಪೆ ಬೇಡಿದರೆ ನನಗೊಳ್ಳಿತಾಗುವುದು! (ಬೀಮಣನ ಮುಂದೆ ಬಂದು) ನಿನ್ನ ದಾಸನು ನಾನು: ನೀನಿತ್ತ ಆ ಮರ್ದ್ದು ಬರ್ದಿಲರಮರ್ದೆ ದಿಟಂ (ಅಡ್ಡ ಬೀಳುತ್ತಾನೆ)

ಬೀಮಣ – ಹೇಗೆ? ಚಳಿ ಈಗ ಕಡಿಮೆಯಾಗಿದೆಯೆ?

ಶನಿಯ – ನೀನು ಸ್ವರ್ಗದಿಂದ ಬಂದೆಯಾ?

ಬೀಮಣ – ಹೌದು, ಸೋಮಲೋಕದಿಂದಲೆ ಇಳಿದುಬಂದೆ – ನಿನ್ನೆ ನಾನಲ್ಲಿಯೇ ಇದ್ದೆ!

ಶನಿಯ – ಅಹುದಹುದು, ನಾ ಬಲ್ಲೆ. ಎನಿತೊ ಸಲ ಚಂದ್ರನಲಿ
ನಿನ್ನ ನಾ ನೋಡಿಹೆನು. ನಿನ್ನನಾ ತಿಂಗಳೊಳೆ
ನನ್ನೊಡತಿ ತೋರಿದಳು. ನಿನ್ನ ಎಲೆವನೆಯಿರ್ಪ
ತಾಣವನು ಅಲ್ಲಿ ತೋರಿದಳು, ನನ್ನೊಡತಿ.

ಬೀಮಣ – ಬಾ, ಇಲ್ಲಿ! ಬಾ ಇಲ್ಲಿ!! ನೀನು ನೋಡಿದುದು ದಿಟವೆಂದು ಈ ಅಮರ್ದಿನ ಮೇಲಾಣೆಯಿಟ್ಟು ಒದರು – ಮರಳಿನಿತು ಅಮರ್ದನಿಕ್ಕುವೆನ್. ಹುಂ. ಪ್ರಮಾಣಮಾಡು!
(ಕುಡಿಸುತಿರೆ)

ತ್ರಿಶಂಕು – ಅಯ್ಯಯ್ಯೋ ಇದೆಂತಹ ಬಡ ರಕ್ಕಸ! ಈ ದರಿದ್ರ ಪ್ರಾಣಿಗೆ ಸುಮ್ಮನೆ ಬೆದರಿದೆನಲ್ಲಾ! ಬಲ್ಮೆಯಲ್ಲದ ರಕ್ಕಸ! ಅರಿವುಗೆಟ್ಟ ರಕ್ಕಸ! – ಸಾಕು! ಸಾಕು! – ಭಲಾ! ಚೆನ್ನಾಗಿ ಹೀರಿತು ಪ್ರಾಣಿ!

ಶನಿಯ(ಕುಡಿದ ತೃಪ್ತಿಯಿಂದ ಕೈಮುಗಿದುಕೊಂಡು)
ಸಗ್ಗಿಗನೆ, ಈ ದ್ವೀಪದೋಳಿಹ ಫಲವತ್ತಾದ
ಭೂಭಾಗಗಳನೆಲ್ಲಮಂ ನಿನಗೆ ತೋರುವೆನು
ಬೇಕಾದ ತನಿವಣ್ಗಳಂ ತಂದು ನೀಡುವೆನು.
ತಿಳಿಗೊಳದ ತಣ್ಣೀರ್ಗಳಂ ತಂದು ಅರ್ಪಿಸುವೆ.
ನೀನೆನ್ನ ದೇವತೆ! ನಿನ್ನ ಅಡಿಗಳಿಗಿದೋ
ಕಂಬನಿಯ ಅಭಿಷೇಕಮಂ ಗೈದು ಮುತ್ತಿಡುವೆ.

ಬೀಮಣ – ಹಾಗಾದರೆ ಬಾ; ಅಡ್ಡಬಿದ್ದು ಪ್ರಮಾಣಮಾಡು! (ಶನಿಯ ಹಾಗೆಯೆ ಮಾಡುತ್ತಿರೆ)

ತ್ರಿಶಂಕು – ಇದೆತ್ತಣ ಮರುಳು ರಕ್ಕಸ! ಬೀಮಣ, ನಿನಗೆ ಒಳ್ಳೆಯ ಭಕ್ತನೇ ಸಿಕ್ಕಿದನು! ನೀನು ಮಲಗಿರುವಾಗ ಅಮರ್ದೆಲ್ಲ ಬತ್ತುವುದು, ನಾ ಬಲ್ಲೆ.

ಬೀಮಣ(ಶನಿಯನ ತಲೆಯನ್ನು ಚೆನ್ನಾಗಿ ನೆಲಕೊತ್ತಿ) ಚೆನ್ನಾಗಿ! ಚೆನ್ನಾಗಿ ಆಣೆಯಿಡು! ಸರಿಯಾಗಿ ಶರಣುಮಾಡೊ!

ತ್ರಿಶಂಕು – ಇದೆಲ್ಲಿಯ ಪೋಲಿ ರಕ್ಕಸ! ಬರಿಯ ಹೈಲು! (ಹಲ್ಲು ಕಡಿಯುತ್ತ) ಕಂಡರೆಯೆ ಹಿಡಿದು ಗುದ್ದುವಂತಾಗುತ್ತದೆ.

ಬೀಮಣ – ಸಾಕು, ಏಳು! (ಶನಿಯ ಏಳುತ್ತದೆ) ಪಾಪ! ಬಹಳ ಬಳಲಿದೆ! ಇಗೋ ಕುಡಿ! (ಕುಡಿಸುತ್ತಾನೆ)

ತ್ರಿಶಂಕು – ಬೀಮಣ, ಸ್ವಲ್ಪ ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡು! ಈ ಹೈಲು ರಕ್ಕಸಗೆ ಈ ರೀತಿ ಕುಡಿಸಿದರೆ ಮುಂದೆ ನಮ್ಮ ಗತಿ?

ಶನಿಯ – ತಿಳಿನೀರ ಬುಗ್ಗೆಗಳ ತೋರ್ದಪೆನ್. ನಿನಗಾಗಿ
ಪಣ್ಗಳಂ ಕೊಯ್ದಪೆನ್, ಮೀನ್ಗಳಂ ಹಿಡಿದಪೆನ್.
ಕಟ್ಟಿಗೆಯ ತಂದೊಟ್ಟುವೆನ್. ನನ್ನ ಮೊದಲನೆಯ
ಯಜಮಾನ ಭೈರವನ್ ಹಾಳಾಗಿ ಹೋಗಲಿ!
ಅವನ ಗೊಡವೆಯೆ ಸಾಕು! ದೇವತೆಯೆ, ನೀನೆಯೆ
ನನ್ನ ಮುಂದಿನ ಒಡೆಯ!

ತ್ರಿಶಂಕು – ಅಯ್ಯೋ ಕುಡುಕನನ್ನು ದೇವತೆಯೆಂದು ಕರೆಯುತ್ತಿದೆಯಲ್ಲಾ! ಇದೆಂತಹ ಮರುಳು ರಕ್ಕಸ!

ಶನಿಯ – ನಳ್ಳಿಗಳ್ ನಲಿದಿರ್ಪ ನಲ್‌ನೆಲವ ತೋರ್ದಪೆನ್.
ನನ್ನುಗುರ್ಗೈದುವಿಂ ಗೆಡ್ಡೆಗಳನಗೆದಪೆನ್.
ಗೂಡಿನಲಿ ಮಲಗಿರ್ಪ ಹಕ್ಕಿಗಳ ಮೊಟ್ಟೆಗಳ
ತೋರುವೆನ್. ಗೊಂಚಲ್ಗಳಿಂ ಪೂವುಗಳ ಕೊಯ್ದು
ಮಾಲೆಯಂ ಸೂಡುವೆನ್. ಸಿಂಗರದ ಪವಳಗಳ
ನೆಯ್ದು ಹಾರವಮಾಡಿ ನಿನಗದನ್ ತೊಡಿಸುವೆನ್.

ತ್ರಿಶಂಕು – ಎಲವೋ ಮಂಕು! ಸಾಕು, ನಿಲ್ಲಿಸು!

ಬೀಮಣ – ಮಾರಾಯ, ಮಾತು ಸಾಕು. ಮೊದಲು ದಾರಿ ತೋರು. – ತ್ರಿಶಂಕು, ನಾಯಕರು ಪರಿವಾರದೊಡನೆ ಮುಳುಗಿದರು. ನಾವೆ ಇಲ್ಲಿಗೆ ಚಕ್ರವರ್ತಿಗಳಾಗಿ ಮನಬಂದಂತೆ ಕುಡಿದು ತಿಂದು ಬದುಕಬಹುದಷ್ಟೆ?

ಶನಿಯ(ಹಾಡುತ್ತದೆ)
ನಮೋ ನಮೋ ಭೈರವಗೆ! ನಮೋ! ನಮೋ! ನಮೋ!

ತ್ರಿಶಂಕು – ಏ! ಹೈಲು! ಮಂಕು! ಪೋಲಿ! ಹುಚ್ಚು! ಒದರಬೇಡವೋ, ತೆಪ್ಪಗಿರು!

ಶನಿಯ(ಹಾಡುತ್ತಾ ಕೈತಾಳ ಹಾಕಿಕೊಂಡು ಕುಣಿಯುತ್ತಾನೆ)
ನಮೋ ನಮೋ ಭೈರವಂಗೆ! ನಮೋ ನಮೋ! ನಮೋ!
ಇನ್ನು ಮೇಲೆ ಅವನಿಗಾಗಿ ನಾನು ಮೀನು ಹಿಡಿವುದಿಲ್ಲ.
ಇನ್ನು ಮೇಲೆ ಅವನಿಗಾಗಿ ನಾನು ಕೆಲಸ ಬಾಳ್ಪುದಿಲ್ಲ.
ಬೆಂಕಿಯನು ಮಾಡೆನು!
ಕಟ್ಟಿಗೆಯ ಕೂಡೆನು!
ಹಣ್ಣು ಹೂವು ಮೀನುಗಳನು
ಒಂದನುಂ ತಾರೆನು!
ತಿಳಿಯ ಕೊಳನ ನೀರುಗಳನು
ಎಂದಿಗುಂ ತೋರೆನು!
ಉಂಡು ಬಿಟ್ಟ ಪಾತ್ರೆಗಳನು ನಾನು ಇನ್ನು ತೊಳೆವುದಿಲ್ಲ.
ಕಂಡ ಕಂಡ ಕೆಲಸಗಳನು ನಾನು ಇನ್ನು ಮಾಳ್ಪುದಿಲ್ಲ.
ಶನಿಯಗಿಂದು ಬೇರೆ ಒಂದು
ದೇವತೆಯು ದೊರಕಿಹುದು!
ಶನಿಯಗಿಂದು ಬಂಧ ಮುಕ್ತಿ
ತನಗೆ ತಾನೆ ದೊರಿಕಿಹುದು.
ನಮೋ ನಮೋ ಭೈರವಗೆ! ನಮೋ ನಮೋ ನಮೋ!

ಬೀಮಣ – ಭಲಾ ವೀರರಾಕ್ಷಸಾ! ಎಲ್ಲಿ? ದಾರಿತೋರು. ನಡೆ, ಮುಂದೆ!

(ಹೊರಡುತ್ತಾರೆ.)