[ಭೈರವನ ಗುಹೆಯ ಮುಂದೆ ಶಿವನಾಯಕನು ಒಂದು ಭಾರವಾದ ಮರದ ತುಂಡನ್ನು ಹೊತ್ತುಕೊಂಡು ಬಂದು ನೆಲದ ಮೇಲೆ ಹಾಕುತ್ತಾನೆ.]

ಶಿವನಾಯಕ – ಸೊಗದ ಕಜ್ಜಗಳೊಳವು ಕೆಲವು; ಸೊಗಮಿಲ್ಲದಿಹ
ಕಜ್ಜಂಗಳುಂ ಕೆಲವಿಹವು. ಕೆಲವು ಕಾರ್ಯಗಳಲ್ಲಿ
ಕಾರ್ಯಭಾರವೆ ನಮಗೆ ಸಂತಸವ ನೀಡುವುದು;
ಕೆಲವರೊಳು ಕಾರ್ಯಂ ಬಹುಭಾರಮಾದಪುದು!
ಎದೆಯ ಬಡತನವ ಸೂಚಿಸುವ ಸಿರಿಗೆಯ್ಮೆಗಳು
ಕೆಲವಿಹವು. ಕೆಲವು ಬಡಗೆಯ್ಮೆಗಳೂ ಬಗೆಯ
ಸಿರಿತನದ ಚಿಹ್ನೆಗಳೆ! ನಾನೆಸಗುವೀ ಗೆಯ್ಮೆ
ಸುಂದರಿಯ ಮಧುರ ಸಾನಿದ್ಯದಿಂ ಹೀನಮುಂ
ಕಠಿನಮುಂ ಭಾರಮುಂ ಆಗಿರದೆ ಸವಿಗೆಲಸ-
ಮಾಗಿಹುದು. ಬಳಲಿಕೆಗೆ ಜೀವಕಳೆ ತುಂಬಿರ್ಪಳ್
ಆ ನಳಿನನಯನೆ! – ಅವಳಯ್ಯನಾ ಕ್ರೌರ್ಯಕ್ಕೆ
ಈರೈದುಮಡಿಯಿರ್ಪುದವಳೆದೆಯ ಸೌಜನ್ಯಂ!
ಜಗ್ಗದಿಹ ಕಗ್ಗಲ್ ಆ ಮುದುಕನ್! ನೂರಾರು!
ತೊಲೆಗಳನ ತಂದಿಲ್ಲಿ ರಾಶಿಗೈಯೆಂದೆನಗೆ
ಕಟ್ಟಾಣತಿಯ ಬೆಸಸಿ ಪೋದನ್! ಕಂಬನಿಯ
ಚೆಲ್ಲುವಳು ನನ್ನ ಆ ಚೆಲ್ವೆ ಈ ಬಳಲಿಕೆಯ
ಕಂಡು, ಕನಿಕರದಿನೆದೆ ಬೆಂದು, ಬೇಟಂ ನೊಂದು. –
ಮರೆತು ಕೈಗೆಲಸವನು ಸವಿವಗಲ್ಗನಸಿನಲಿ
ಅಲೆದೊಡೇನಪ್ಪುದು? ಆದರೇನೀ ಮಧುರ
ಭಾವಗಳೆ ನನ್ನಾಸರಂಗಳೆದು ಪೊಸಪುರುಳನ್
ಇತ್ತಪವು.

[ಗೌರಾಂಬೆ ಬರುತ್ತಾಳೆ. ಭೈರವನು ದೂರದಲಿ ಕಾಣಿಸಿಕೊಳ್ಳದೆ ಬರುತ್ತಾನೆ]

ಗೌರಾಂಬೆ – ಶಿವ ಶಿವಾ! ದಣಿವನಾರಿಸಿಕೊಳದೆ
ಏಕಿಂತು ಗೆಯ್ಯುತಿಹೆ? ಆ ಸೌದೆಗಳನೆಲ್ಲ
ಮಿಂಚೆರಗಿ ಬೂದಿಮಾಡಿದ್ದರೊಳಿತಾಗುತಿತ್ತು.
ಅವುಗಳಂತಿರ್ಕೆ, ಬಾ; ದಣಿವಾರಿಸಿಕೊ. ಈ ತೊಲೆಗಳ್
ಉರಿವಾಗ ನಿನ್ನ ಕಷ್ಟವ ನೆನೆದು ಕಣ್ಣೀರು
ಕಾರುವುವು, ಹೊಗೆಯ ನಿಟ್ಟುಸಿರೆಳೆದು ಅಪ್ಪಯ್ಯ
ಜಾನದಲಿ ಮುಳುಗಿಹನ್. ಒಂದಿನಿತು ದಣಿವಾರಿಸಿಕೊ
ದಯೆಯಿಟ್ಟು. ಪಗಲ ಬೆಂಗದಿರನುರಿ ಚುರ್ಚುತಿಹುದು!

ಶಿವ – ನನ್ನ ಕಂಗಳ ಚೆಲ್ವೆ, ನನ್ನ ಮುದ್ದಿನ ಪೆಣ್ಣೆ,
ಬೈಗುಗೆಂಪಿಳಿದು ಇರುಳ ನೆರಳ್ ಇಳಿವ ಮುನ್ನಮೆ
ಕೈಕೊಂಡ ಕಜ್ಜಮನ್ ಮಾಡಿ ಮುಗಿಸಲ್ ವೇಳ್ಕುಂ.

ಗೌರಾಂಬೆ – ನೀನ್ ಆಸರಂಗಳೆ. ನಾನು ಸೌದೆಯನೆತ್ತಿ
ತಂದಿಲ್ಲಿ ರಾಶಿಮಾಡುವೆನು. ನೀಡಿತ್ತಲದನ್;
ಬೇಡುವೆನ್ ಕೊಡು, ಗುಡ್ಡೆಗೊಯ್ವೆನ್.

ಶಿವ – ಅದಾಗದು,
ಪೂಮೆಯ್ಯ ನಲ್ಲೆ. ನಾನು ಬಳಿಯೊಳೆ ಕುಳಿತು
ನಿನ್ನ ಕೈಯಲಿ ಕಟ್ಟಿಗೆಯ ಹೊರಿಸುವುದಕ್ಕಿಂತ
ನನ್ನ ಬೆನ್ಮುರಿದು, ನರ ಹರಿದು ಹೋಹುದೆ ಲೇಸು!

ಗೌರಾಂಬೆ – ನೀನುರೆ ಬಳಲ್ದಿರ್ಪೆ. ನಾನು ಹೊರುವುದು ಧರ್ಮ.
ನೀನಿನಿತು ಪೊಳ್ತು ವಿಶ್ರಮಿಸಿಕೊಳ್ವುದುಂ ಧರ್ಮ!
ನಾನು ಹೊರುವುದು ಉಚಿತ. ಏಕೆನೆ ಅದರೊಳ್
ನನಗೆ ಬೇಸರಮಿಲ್ಲ. ನನ್ನ ಬಗೆಯೊಪ್ಪಿದುದು;
ನಿನ್ನ ಬಗೆಯಾದರೋ ಆಜ್ಞೆಯಂತೆಸುಗುತಿದೆ;

ಭೈರವ(ಸ್ವಗತ) ಜವ್ವನೆಗೆ ಬಲಿತಿಹುದು ಬೇಟಂ! ಇನ್ನೇನು?
ಬೇಟಕಾಹುತಿಯಾಗಿಬಿಟ್ಟಳ್ ಎನ್ನಣುಗಿ.

ಗೌರಾಂಬೆ – ಬಹಳ ಬಳಲಿಹೆ ನೀನು.

ಶಿವ – ಇಲ್ಲ, ಜೇನಿನಿಯೆ.
ಇರುಳಾದೊಡಂ ಬಳಿಯಿರಲ್ ನೀನು ನನಗದುವೆ
ಮುನ್ನೇಸರ್ ಐತರ್ಪ ಸಮಯಮಾದಪುದು!
ಏಣಾಕ್ಷಿ, ನನ್ನದೊರ್ ಬಿನ್ನಪಂ: ಹಕ್ಕಿಗಳ್,
ಬನಗಳಲಿ ನುಣ್ಚರವ ಬೀರುವಾ ಕೋಗಿಲೆಯೆ
ಮೊದಲಹ ವಿಹಂಗಗಳ್, ನಿನ್ನನಾವ ಪರಿಯಿಂ
ಸಂಬೋದಿಪವೊ ತಿಳಿಯಲಾಸಿಪೆನ್.

ಗೌರಾಂಬೆ – ‘ಗೌರಾಂಬೆ!’
ಎಂದೆನ್ನನ್ ಉಲಿದಪಪು! – ಅಯ್ಯೋ ತಪ್ಪಿದೆನ್.
ತಂದೆಯಾಣತಿಯಿಹುದು: ಪೆಸರನಾರೊಡನೆಯುಂ
ಪೇಳಲಾಗದು ಎಂದು.

ಶಿವ – ‘ಗೌರಾಂಬೆ!’ ‘ಗೌರಾಂಬೆ!’
ಎನಿತು ಮುದ್ದಿನ ಪೆಸರ್! ಜೇನು ಸೋರುವ ಪೆಸರ್!
ಮನಸಿಜನ ವೇದಸಾರದ ಮುಖ್ಯಮಂತ್ರಮದು!
ಮಾಧುರ್ಯ ಮಂಜೂಷೆಯಾದೆನ್ನ ಗೌರಾಂಬೆ,
ನಾನೆನಿತು ಚೆಲುವೆಯರನೀಕ್ಷಿಸಿದೆನಾದೊಡಂ
ಆರನುಂ ಇನಿತು ಎದೆದುಂಬಿ ನಾನೋವಿಲ್ಲ.
ಕೆಲವರನು ಸೊಬಗಿಂಗೆ ಮೆಚ್ಚಿದೆನು. ಕೆಲವರನು
ನಾಗರತೆಗಾಗೊಲಿದೆನ್. ಮತ್ತೆ ಪಲಂಬರನು
ನಂಟಿನ ನಣ್ಪಿಗಾಗಿ ಪ್ರೀತಿಸಿದೆ. ಹಲವರನು
ಕೊರಲಿನಿಂಚರಕಾಗಿ, ಇನಿಬರನು ಕಲಿತಿರ್ಪ
ಬಿಜ್ಜೆಗಾಗೋವಿದೆನು. ಚಂಚಲಿಪ ಕಣ್ಗಳಿಗೆ,
ಕಿಕ್ಕಿರಿದ ಮುಂಗುರಳಿಗಾಗಿನಿಬರನ್ ಪೊಗಳಿದೆನ್,
ಆದರೀ ನಿರುಪಮಾ ಲಾವಣ್ಯಮಯ ಮೂರ್ತಿ,
ಪೂರ್ಣತೆಯೆ ರೂಪವೆತ್ತಂದದಿಂ, ಉತ್ತಮರ
ಉತ್ತಮ ಗುಣಂಗಳೆಲ್ಲಮನ್ ಪಡೆದು ಮೆರೆದಪಳ್!

ಗೌರಾಂಬೆ – ತರಣಿಯರು ಎಂತಿರ್ಪರೋ ಅದನು ನಾನರಿಯೆ!
ಕನ್ನಡಿಯೊಳ್ ಎನ್ನ ಮೊಗಮನ್ ನಾನ್ ನೋಡಿರ್ಪೆನ್
ಅದು ಹೊರತು ಭಾಮೆಯರ ಮೊಗವ ನೋಡಿಯೆ ಇಲ್ಲ.
ಸುಂದರನೆ, ನಿನ್ನನುಂ ಮೇಣೆನ್ನ ತಂದೆಯುಮಂ
ಬಿಟ್ಟರೀ ಲೋಕದಲಿ ಇನ್ನುಳಿದ ಪುರುಷರನು
ಕಂಡಿಲ್ಲ. ಚೆನ್ನೆಯರ, ಚೆನ್ನಿಗರ ಚೆಲ್ವುಗಳ
ವಿವಿಧತೆಯ ಅನುಭವಂ ನನಗಿಲ್ಲ. – ಆದೊಡಂ
ನೀನಲ್ಲದಿನ್ನಾರನ್ ಆನೊಲಿಯೆ; ಮೇಣೆನ್ನ
ಕಲ್ಪನೆ ನಿನ್ನಂ ಮೀರ್ದ ಸೊಬಗಿನಾಕೃತಿಯಂ
ಕಡೆಯಲರಿಯದು. ಇನಿಯ, ನಿನಗೆ ನೀನೆ ಎಣೆ!
ಪಿತನ ವಿಧಿಯನು ಮೀರಿ ನಿನ್ನೊಡನೆ ಗಳಪಿದೆನ್.
ಮುನಿಯುವನ್ ಅವನರಿವೊಡೆ!

ಶಿವ – ಉತ್ತಮರ ವಂಶದೊಳೆ
ಜನಿಸಿರ್ಪ ಅರಸುಕುವರನು ನಾನು, ಗೌರಾಂಬೆ. –
ಅರಸನಾಗಿಹೆನೆಂದೆ ಭಾವನೆ. – ನನ್ನಾಸೆ
ಅಂತಾಗದಿರಲೆಂದೆ! – ಕಾಷ್ಠ ಕಷ್ಟವನಿನ್ನು
ಸಹಿಸಲಾರೆನ್: ಮುಚ್ಚುಮರೆಯೇಕೆ? ನಿನ್ನೆದುರ್
ನನ್ನೆದೆಯನರಳಿಪೆನ್. ಮೊದಲ ದರ್ಶನದೊಳೆಯೆ
ನಿನ್ನೊಲ್ಮೆಗಾನ್ ಸೆರೆಯಾಗಿ ಸಂದೆನ್. ಸೊಬಗಿನಾ
ಸೆರೆಯಿಂದ ನಾನ್ ಬಿಡುಗಡೆಯ ಬಯಸೆನ್. ನಿನಗಾಗಿ
ಬಲ್ಲೆನಾಳಾಗಿರಲ್.

ಗೌರಾಂಬೆ – ಒಪ್ಪಿದಯ್ ನೀನೆನ್ನನ್?

ಶಿವ – ಸ್ವರ್ಗಮೆ ಸಾಕ್ಷಿಯಾಗಿ, ಭೂಮಿ ತಾಂ ಸಾಕ್ಷಿಯಾಗಿ,
ಗ್ರಹ ಸೂರ್ಯ ಚಂದ್ರ ತಾರಾ ಸಾಕ್ಷಿಯಾಗಿ,
ಸರ್ವ ದೇವಾನುದೇವತೆಗಳ್ ಸಾಕ್ಷಿಯಾಗಿ
ನಾನ್ ನಿನ್ನನೊಲಿದಿರ್ಪೆನ್! ಎರಡಿರದ ಒಮ್ಮನದೊಳ್
ಒಲಿದಿರ್ಪೆನ್! ಮೆಚ್ಚಿದೆನ್, ಓತಿಹೆನ್, ಪೂಜಿಪೆನ್!

ಗೌರಾಂಬೆ(ಆನಂದಬಾಷ್ಪಗಳನ್ನು ಸುರಿಯುತ್ತ)
ಸಕ್ಕರೆಯ ಸುದ್ದಿಯನು ಕೇಳಿ ಕಂಬನಿಗರೆವ
ನಾನು ಎಂತಹ ಮುಕ್ಕೆ!

ಭೈರವ(ಸ್ವಗತ) ಇದು ನಿರುಪಮ ಪ್ರೇಮಗಳ ಮಧುರ ಸಂಗಮಂ!
ಓ ಓ ದೇವತೆಗಳಿರಾ, ಪೂವಲಿಯ ಚೆಲ್ಲಿಂ!

ಶಿವ – ಏತಕಳುತಿಹೆ, ನಲ್ಲೆ?

ಗೌರಾಂಬೆ – ನನ್ನ ಬಡತನಕೆ ನಾನೆ
ಬೆದರಿರ್ಪೆ: ಈವೆನೆಂದುದನ್ ಈಗಳರ್ಪಿಸಲ್
ಎದೆಯಳುಕುತಿದೆ. ಎದೆಗೆ ಕೆಚ್ಚಿಲ್ಲ. ಕೊಡಲ್ ಒಮ್ಮೆ
ನಿಡಿದುದನ್ ಇನ್ನೊಮ್ಮೆ ತೆಗೆದುಕೊಳ್ಳಲು ಆರೆ.
ನೀಡದಿರಲ್ ಅಳಿಯುವೆನ್. ಏಕೆಂದಿರೀ ದಿವ್ಯ
ದಾನದೊಳೆ ಅಮೃತಮಿದೆ! ಆದರಾನ್ ಪುಲ್ಗೆಣೆ!
ಮರೆಯಾಗಲ್ ಎಳಸುವಾಗಳೆ ಎದ್ದು ತೋರುತಿಹ
ನಾಚಿಗೆಯೆ, ತೊಲಗಾಚೆ! ಬಾರಮ್ಮ, ಮುಗ್ಧತೆಯೆ!
ಪಾವನಲು ನೀನು, ಬಳಿಸಾರಮ್ಮ!

ಶಿವ – ನಲ್ಲೆ, ಪೆಣ್ಮಣಿಯೆ, ಫಲವ ಕೋರದು ಪ್ರೇಮ!
ಚಲವ ತೋರದು ಪ್ರೇಮ! ಭಯವನರಿಯದು ಪ್ರೇಮ!
ಪ್ರೇಮ ಸಾಮ್ರಾಜ್ಯದಲಿ ಬಡತನವೆ ಸಿರಿತನಂ!

ಗೌರಾಂಬೆ – ನೀನೆನ್ನನ್ ಓವೊಡಾನ್ ಅರ್ಧಾಂಗಿಯಾದಪೆನ್!
ಓವದಿರೆ ನಿನ್ನ ಸೇವಕಿಯಾಗಿ, ಸೇವೆಯೊಳೆ
ಜೀವಮಾನವ ಸಮೆದು, ನಿನ್ನ ಜೊತೆಗೂಡುವೆನ್
ಸಾವಿನಲಿ! ನೀನೆನ್ನ ತೊರೆದರುಂ ನಾ ನಿನ್ನ
ಕಿಂಕರೆ! ನೀನ್ ಪಳಿದರುಂ ನಾನ್ ಭಕ್ತಳೆಂದುಂ!

ಶಿವ(ಮೊಳಕಾಲೂರಿ)
ನನ್ನ ಮುದ್ದಿನ ಚೆಲ್ವೆ, ನೀನ್ ನನ್ನ ದೇವತೆ!
ನನ್ನ ಬಿಜ್ಜೆಗೆ ನೀನೆ ಸರಸತಿ! ಮೇಣ್ ನನ್ನ
ಸಿರಿಗೆ ನೀನೆಯೆ ಲಕುಮಿ! ನನ್ನ ತಪಸಿಗೆ ನೀನೆ
ಪಾರ್ವತಿ! ನನ್ನ ಬಾಳ್ಕೆಗೆ ನೀನೆ ಮೋಕ್ಷಂ!
ದೇವಿ, ನಾನಿಂದು ಸಂಪೂರ್ಣನಾದೆನ್!

ಗೌರಾಂಬೆ – ನೀನಿನ್ನು ನನ್ನೆರೆಯನ್?

ಶಿವ – ಬಂಧನಂ ಮುಕ್ತಿಯಂ
ಬಿಗಿದಪ್ಪುವಂತೆವೋಲ್ ನಿನ್ನ ಕೈಪಿಡಿದಿರ್ಪೆನ್.
ವ್ಯಕ್ತಂ ಅವ್ಯಕ್ತಮಂ ಮುದ್ದಿಸುವ ತೆರದಿಂದೆ
ನಾನಿನ್ನ ಮುದ್ದಿಪೆನ್. ನಶ್ವರಂ ಶಾಶ್ವತವನ್
ಆಲಿಂಗಿಪಂದದಲಿ ನಿನ್ನನ್ ನಾನಪ್ಪುವೆನ್

ಗೌರಾಂಬೆ – ನಾನಿದೋ, ಅಂಜಲಿಯೊಳ್ ಎದೆಯಲ್ಮೆಯಂ ತುಂಬಿ
ನಿನಗಿತ್ತಪೆನ್! [ಪಾಣಿಗ್ರಹಣಮಂ ಗೈವರ್]
ಪ್ರಾಣೇಶ, ತಂದಯೈತರ್ಪ
ಪೊಳ್ತು ಬಳಿ ಸಾರಿಹುದು. ನಾನೀಗ ತೆರಳುವೆನ್!
[ಹಿಂದೆ ಹಿಂದೆ ನೋಡುತ್ತ ಹೋಗುತ್ತಾಳೆ. ಶಿವನಾಯಕನು ಅವಳನ್ನೆ ನೋಡುತ್ತ ಮೊತ್ತೊಂದು ಕಡೆಗೆ ಹೋಗುತ್ತಾನೆ.]

ಭೈರವ – ಅವರ ಸೊಗಕಿಂತಲೂ ನನ್ನ ಸೊಗಮಧಿಕತರ!
ಅವರೆದೆಯ ಇಂಗೊಳದೊಳೆನ್ನೆದೆಯೆ ಪಾಲ್ಗಡಲ್!
ಮಗಳ ಸಂತಸವಲ್ಲದಿನ್ನಾವ ಸಂತಸಂ
ಪಿತೃಗೆ! ಬೈಗುಗೆಂಪೋಕಳಿಗೆ ಮುನ್ ಪೂವಿಂಪಿನಾ
ಜೇನ್ಗಜ್ಜಮಂ ಪಣ್ಗೊಳಿಸವೇಳ್ಕುಂ. ತುಂಬಿ ನಾನ್!

(ಹೊರಡುತ್ತಾನೆ)