[ದ್ವೀಪದ ಮಗದೊಂದು ಭಾಗ. ಹೆಂಡ ತಲೆಗೇರಿ ಶನಿಯ, ಬೀಮಣ, ತ್ರಿಶಂಕು ಇವರ ಪ್ರವೇಶ.]

ಬೀಮಣ – ಬೇಡ, ನೀನು ಹೇಳುವುದೇನೂ ಅವಶ್ಯವಿಲ್ಲ. ಸುಮ್ಮನಿರು, ನನಗೆಲ್ಲ ಗೊತ್ತು. ಕಳ್ಳು ಮುಗಿದ ಮೇಲೆಯೇ ನೀರು ಕುಡಿಯುವುದು. ಅದಕಿಂತ ಮುಂಚೆ ಒಂದು ತೊಟ್ಟು ನೀರನ್ನೂ ಕುಡಿಯುವವನಲ್ಲ ನಾನು. ಆದ್ದರಿಂದ ಭಯವೇಕೆ ಕುಡಿ, ರಾಕ್ಷಸ, ಕುಡಿ. ಕುಡಿ ನನ್ನ ಹೆಸರಿನ ಮೇಲೆ.

ತ್ರಿಶಂಕು – ರಾಕ್ಷಸವೊ? ಮೈಗೊಂಡ ಮರುಳ್ತನವೊ? ಈ ದ್ವೀಪದಲ್ಲಿ ಇರುವವರು ನಾವೈದು ಜನರಂತೆ; ಇವರೊಳಗೆ ಮೂವರು ನಾವು. ಇನ್ನುಳಿದ ಇಬ್ಬರೂ ನಮ್ಮಂತೆ ಬುದ್ಧಿವಂತರಾಗಿದ್ದರೆ, ನಮ್ಮ ಸಾಮ್ರಾಜ್ಯ ಮೂರು ದಿನಗಳಲ್ಲಿಯೆ ತಲೆತಿರುಗಿ, ತತ್ತರಿಸಿ ಮುರಿದುಕೊಂಡು ಬೀಳುವುದೇ ನಿಶ್ಚಯ!

ಬೀಮಣ – ಕುಡಿ, ರಾಕ್ಷಸಾ, ಕುಡಿ! ನನ್ನ ಅಪ್ಪಣೆಯಾದ ಮೇಲೆ ನಿನಗೇನು ಹೆದರಿಕೆ? – ನಿನ್ನ ಕಣ್ಗಳೇನು ಬುರುಡೆಯ ತೂತುಗಳಲ್ಲಿ ಹೆದರಿ ಹುದುಗಿದಂತಿವೆ.

ತ್ರಿಶಂಕು – ಮತ್ತೆಲ್ಲಿ ಹುದುಗಬೇಕು? ಬಾಲದಲ್ಲಿಯೇ?

ಬೀಮಣ(ಮತ್ತೇರಿ) ಈ ನನ್ನ ನರರಾಕ್ಷಸನು ಕಳ್ಳಿನಲ್ಲಿ ನಾಲಗೆ ಮುಳುಗಿಸಿ ಬಿಟ್ಟಿದ್ದಾನೆ! – ನನ್ನನ್ನೇನೋ ಹೊಳೆ ಕೂಡ ಮುಳುಗಿಸಲಾರದು! – ಏನು ಸ್ವಲ್ಪ ದೂರ ಈಜಿದೆನೇ? – ಅದೆಲ್ಲ ನಿನಗೇಕೆ ಸುಮ್ಮನಿರು. – ನಾನೇನು ಮಾಡಲಿ ಸ್ವಾಮಿ? ದೋಣಿ ಗಾಳಿಯನ್ನು ಮುಳುಗಿಸುತ್ತಾ ಇದೆ! – ನಲ್ವತ್ತು ಯೋಜನೆ ಈಜಿಬಿಟ್ಟೆ. – ಎಲೋ ರಕ್ಕಸಾ, ಕಳ್ಳಿನಾಣೆಗೂ ನೀನು – ನನ್ನ – ಸಾರಥಿ – ಆಗುವೆಯೊ? – ಅಥವಾ – ಧ್ವಜವಾಗುವೆಯೊ?

ತ್ರಿಶಂಕು – ಸಾರಥಿ ಬೇಕಾದರಾಗಲಿ; ಧ್ವಜವಾಗುವುದಂತೂ ಖಂಡಿತ ಬೇಡ. ಏಕೆಂದರೆ ಧ್ವಜ ದೃಢವಾಗಿ ನಿಂತಿರುವ ವಸ್ತು.

ಬೀಮಣ – ರಾಕ್ಷಸ ಮಹಾಶಯ, ನಾವು – ಯುದ್ದದಲ್ಲಿ – ಓಡಬಾರದು.

ತ್ರಿಶಂಕು – ಓಡುವುದೂ ಇಲ್ಲ; ನಿಲ್ಲುವುದೂ ಇಲ್ಲ. ಕುಡಿದು ತಲೆಗೇರಿ ಸತ್ತವರಂತೆ ಬೀಳುವಿರಿ ಅಷ್ಟೆ!

ಬೀಮಣ – ಮಾತಾಡು, ರಾಕ್ಷಸ! ನೋಡು, ಒಳ್ಳೆಯ ರಾಕ್ಷಸನಾದರೆ ಮಾತಾಡಬೇಕು.

ಶನಿಯ – ತಾವು ಹೇಳಿದ್ದೇನು? ನಿಮ್ಮ ಪಾದಕ್ಕೆ ಬಿದ್ದೆ. [ತ್ರಿಶಂಕುವನ್ನು ಕರಾಗ್ರದಿಂದ ತೋರಿಸಿ] ಅವನು ಶೂರನಲ್ಲ. ನಾನು ಅವನ ಸೇವೆ ಮಾಡುವುದಿಲ್ಲ.

ತ್ರಿಶಂಕು – ಏನಂದೆ! ಏನಂದೆ, ಮೂರ್ಖ ರಾಕ್ಷಸ! ಸುಳ್ಳು ಬೊಗಳುವೆಯಾ? ಹೇಡಿಗಳಾದವರು ಯಾರೇ ಆಗಲಿ ನಾನು ಇಂದು ಕುಡಿದಷ್ಟು ಸುರೆಯನ್ನು ಸೇವಿಸಬಲ್ಲರೇ? ಚಿಃ! ನರಮತ್ಸ್ಯಾವತಾರ! (ಮುಷ್ಟಿ ತೋರಿಸುತ್ತಾನೆ.)

ಶನಿಯ(ಬೆದರಿ) ಅಯ್ಯೋ ಅವನೆಂತು ಹಲ್ಲುಕಿರಿಯುವನು! (ಬೀಮಣಗೆ) ದೇವ ಕಾಪಾಡು! ನೀನಲ್ಲದಿನ್ನಾರು ಗತಿಯೆನಗೆ!

ತ್ರಿಶಂಕು – “ದೇವ!” ಇದೆಲ್ಲ ಎಲ್ಲಿಂದ ಬಂತು ಈ ರಾಕ್ಷಸಗೆ? (ಪುನಃ ಹೊಡೆಯುವಂತೆ ನಟಿಸುತ್ತಾನೆ.)

ಶನಿಯ – ನೋಡು, ನೋಡು! ಅಯ್ಯೊ! ಪುನಃ – ಅವನ್ನನ್ನು ಕಚ್ಚಿ ಕೊಂದುಬಿಡಬಾರದೇ?

ಬೀಮಣ – ತ್ರಿಶಂಕೂ, ಎಚ್ಚರಿಕೆಯಿಂ ಮಾತಾಡು. ಹುಂ, ಏನೆಂದು ತಿಳಿದೆ! ಬಾಯಿಗ ಬಂದಂತೆ ಬೊಗಳಬೇಡ! ಇದು ನನ್ನ ರಾಜ್ಯ. ನೀನೆಲ್ಲಿಯಾದರೂ ದಂಗೆಯೆದ್ದರೆ, ದಂಗಯೇಳುವ ಸೂಚನೆಯನ್ನ ತೋರಿಸಿದರೆ, ನೊಡು, ನಿನಗೆ ಆ ಮರವೇ ಗತಿ! – ಈ ರಾಕ್ಷಸ ನನ್ನ ಪ್ರಜೆ. ಅದಕ್ಕೆ ತೊಂದರೆ ಕೊಡಬೇಡ, ಎಚ್ಚರಿಕೆ! ಹುಂ?

ಶನಿಯ – ದೇವ, ನಿನಗೆ ಅಭಿವಂದಿಪೆನು. ನಾನು ಬೇಡಿದ ವರವ ದಯಪಾಲಿಪೆಯಾ?

ಬೀಮಣ – ಆಗಲಿ, ದಯಪಾಲಿಸುವೆ! ಕಾಲಿಗೆ ಅಡ್ಡಬಿದ್ದು ಬೇಡಿಕೊ; ಸ್ವಲ್ಪ ನಿಲ್ಲು, ನಾನು ಸರಿಯಾಗಿ ನಿಂತುಕೊಳ್ಳುತ್ತೇನೆ. (ಕಾಲನ್ನು ಜೋಡಿಸಿ ನಿಲ್ಲುತ್ತ) ತ್ರಿಶಂಕು, ನೀನೂ ಸರಿಯಾಗಿ ನಿಂತುಕೊಳ್ಳೋ! ಇನ್ನಾವಾಗಲೋ ನಾವು ನಮಸ್ಕಾರ ಮಾಡಿಸಿಕೊಳ್ಳೋದು? ಇನ್ನಾರೋ ನಮಗೆ ನಮಸ್ಕಾರ ಮಾಡೋರು? ಸಿಕ್ಕಿದ್ದೇ ಲಾಭ! – ಹುಂ! – ಸರಿಯಾಗಿ! (ಶನಿಯ ನಮಸ್ಕಾರ ಮಾಡುತ್ತದೆ. ಕಿನ್ನರನು ಅದೃಶ್ಯನಾಗಿ ಬರುತ್ತಾನೆ.)

ಶನಿಯ – ಪಿಂತೆ ನಾನೊರೆದಂತೆ ದುರುಳನೊರ್ವನ ಬಲೆಗೆ
ನಾನ್ ಸಿಲ್ಕಿ ಬಿದ್ದಿಹೆನ್. ಮಾಟಗಾರನ್ ಅವನ್;
ಮೋಸದಿಂದೀ ನೆಲವನ್ ಎನ್ನಿಂದ ಕಸಿದಿಹನ್!
ಮೋಸದಿಂದೀ ನೆಲವನ್ ಎನ್ನಿಂದ ಕಸಿದಿಹನ್!

ಕಿನ್ನರ – ಸುಳ್ಳು!
[ಶನಿಯ ಕೋಪದಿಂದ ತ್ರಿಶಂಕುವಿನ ಕಡೆ ನೋಡಿ]

ಶನಿಯ – ಸುಳ್ಳಾಡುವನು ನೀನು, ಕತ್ತೆಯೇರಿದ ಮಂಗ!
ನಿನ್ನ ನೀಗಳೆ ನನ್ನ ಈ ಶೂರ ದೇವತೆ
ಜವನ ಮನೆಗಟ್ಟಿದರೆ – ಪುಸಿಯಾಗದೆನ್ನ ನುಡಿ!

ಬೀಮಣ – ತ್ರಿಶಂಕೂ, ಅದರ ಹೇಳಿಕೆಗೆ ನೀನು ಇನ್ನೆಲ್ಲಿಯದರೂ ಅಡ್ಡಬಂದರೆ ನೋಡಿಕೋ, ಇದೇ ಕೈಯಿಂದ ನಿನ್ನ ಹಲ್ಲೆಲ್ಲ ಹೊಟ್ಟೆಗೆ ಹೋಗುವಂತೆ ಹೊಡೆಯುತ್ತೇನೆ.

ತ್ರಿಶಂಕು – ಯಾಕೇ? ನಾನೇನು ಮಾಡಿದೆ? ನಾನು ಸುಮ್ಮನಿದ್ದೇನೆ.

ಬೀಮಣ – ಹುಂ, ಇನ್ನುಮೇಲೆ ಸೊಲ್ಲೆತ್ತದಿರು. (ಶನಿಯಗೆ) ಮುಂದೆ?

ಶನಿಯ – ಹೇಳುವೆನು. – ಮಂತ್ರದಿಂದೀ ದ್ವೀಪವನ್ ಕಸಿದು
ಕೊಂಡಿಹನ್. ಬಲ್ಮೆಯಿಂದವನನ್ ನೀನ್ ಅಳಿಪಿದೊಡೆ –
ನಿನಗೆ ಬಲವಿದೆ, ಬಲ್ಲೆ – (ತ್ರಿಶಂಕುಗೆ) ಇದರ ಕೈಲಾಗದು!

ಬೀಮಣ – ಸರಿ, ಸರಿ, ನಿಜ! ನಿಜ!

ಶನಿಯ – ನೀನು ಅರಸಾಗಿರುವೆ. ನಾನು ಆಳಾಗಿರುವೆ.

ಬೀಮಣ – ಅವನನು ಕೊಲ್ಲುವುದು ಹೇಗೆ? ನನಗೆ ಅವನಿರುವ ತಾಣವನು ತೋರಿಸುವೆಯೇನು?

ಶನಿಯ – ಅವನು ಮಲಗಿದ್ದಾಗ ತೋರ್ದಪೆನ್. ನೀನವನ
ತಲೆಯೊಡೆದು. ಚರ್ಮವನ್ ಸುಲಿಸುಲಿದು, ಎಲುಬುಗಳ್
ನುಚ್ಚಾಗುವಂತೆ ಮಾಡಿಬಿಡು! ಹ! ಹ! ಹ! ಹ!

ಕಿನ್ನರ – ಸುಳ್ಳು! ನಿನ್ನಿಂದಾಗದ ಕೆಲಸವದು!

ಶನಿಯ(ತ್ರಿಶಂಕುವಿಗೆ) ಎಲ್ಲಿ ರಣಗೇಡಿಯಿದು! ಎದೆಗೆಟ್ಟ ಸೊಣಗವಿದು!
(ಬೀಮಣನ ಕಡೆ ತಿರುಗಿ ದೈನ್ಯದಿಂದ ಬೇಡುತ್ತಾನೆ)
ದೇವತೆಯೆ, ಬೇಡುವೆನು. ಅವಗೆರಡು ಗುದ್ದಿ, ಆ
ನಿನ್ನ ಅಮರ್ದುವಟ್ಟಲನು ಕಸಿದುಕೊ! ಆಮೇಲೆ
ಕುಡಿಯಲಿ ಕೆಸರ್ನೀರನ್! ನಾನವನಿಗೆಂದಿಗೂ
ತಿಳಿಗೊಳನ ತೋರಿಸೆನ್!

ಬೀಮಣ – ತ್ರಿಶಂಕೂ, ತೊಂದರೆಗೆ ಕಾರಣ – ನೋಡು, ಹೇಳಿದ್ದೇನೆ. ನಡುವೆ ಬಾಯಿ ಹಾಕಬೇಡ, ಸುಮ್ಮನಿರು, ಇಲ್ಲವಾದರೆ ಅಪಾಯ ಸಂಭವಿಸುವ ಕಾಲಬಂದೀತು. ಅಡುಗೆ ಮನೆಯಿಂದ ಇಲ್ಲಿಯವರೆಗೆ ಎಡಬಿಡದೆ ಬಂದಿರುವ ನನ್ನ ನಿನ್ನ ಸ್ನೇಹ ಭಸ್ಮವಾದೀತು – ನಿನ್ನ ಹೆಣದೊಡನೆ!

ತ್ರಿಶಂಕು – ಇದೇನಿದು? ನಾನೇನು ಮಾಡಿದೆ ನಿಮಗೆ! ಸುಮ್ಮನೆ ಕಲ್ಲು ನಿಂತಂತೆ ನಿಂತಿದ್ದೇನೆ! – ಬೇಕಾದರೆ ದೂರ ಸರಿದು ನಿಲ್ಲುತ್ತೇನೆ. (ಹಾಗೆ ಮಾಡಿ)

ಬೀಮಣ – “ಸುಳ್ಳು” ಎಂದು ಒರಲಲಿಲ್ಲವೆ ನೀನು?

ಕಿನ್ನರ – ಸುಳ್ಳು!

ಬೀಮಣ – ಏನಂದೆ! ಏನಂದೆ? ನನ್ನದೂ ಸುಳ್ಳೆ? ನನ್ನದೂ ಸುಳ್ಳೆ? ಹಾಗಾದರೆ ಇಗೋ ಕೈಗಡುಬುಗಳು. (ತ್ರಿಶಂಕುವನ್ನು ಗುದ್ದುತ್ತಾನೆ) ಈಗ ನಿನಗೆ ಬೇಕಾದಷ್ಟು ಉಂಡೆಗಳನ್ನು ತೆಗೆದುಕೊ! ಆಮೇಲೆ ಸುಳ್ಳಿನ ಹೊರೆಯನ್ನು ನನ್ನ ಮೇಲೆ ಹೊರಿಸುವಿಯಂತೆ.

ತ್ರಿಶಂಕು – ನಾನು ಕೂಗಿದನೆ? – ಕಿವಿ ಕೆಟ್ಟಿದೆ; ತಲೆ ಸರಿಯಿಲ್ಲ ನಿನಗೆ – ನಿನ್ನ ಹೆಂಡದ ಬುರುಡೆ ಹಾಳಾಗ! – ಒಡೆದು ಚೂರಾಗ! – ನೀನು ಕುಡಿಯದೆ ಹೋಗ! ಗಂಟಲು ಕಟ್ಟಿಹೋಗ! – ನಿನ್ನ ರಕ್ಕಸಗೆ ರೋಗ ತಗಲಿ ಮಣ್ಣುತಿಂದು ಹೋಗ! – ನಿಮ್ಮಿಬ್ಬರನ್ನೂ ಮಾರಿ ಬಡಿದುಕೊಂಡು ಹೋಗ! –

ಶನಿಯ(ನಗುವನು) ಹ! ಹ! ಹಹಹ!

ಬೀಮಣ – ಹುಂ, ನಿನ್ನ ಕತೆ ಮುಂದೆ ಸಾಗಲಿ! (ತ್ರಿಶಂಕುಗೆ) ಇನ್ನೂ ಸ್ವಲ್ಪ ದೂರ ಹೋಗಿ ನಿಲ್ಲು!

ಶನಿಯ – ಹುಂ, ಹೇರು ಅವನಿಗೆ, ಚೆನ್ನಗಿ! ಬೇಕಾದರೆ ನಾನೂ ಸಹಾಯಕ್ಕೆ ಬರುತ್ತೇನೆ!

ಬೀಮಣ – ಇನ್ನೂ ಸ್ವಲ್ಪ ದೂರ ನಿಲ್ಲು. (ಶನಿಯಗೆ) ಹುಂ, ಈಗ ಹೇಳು.

ಶನಿಯ – ಹಿಂದೆ ನಾನೊರೆದಂತೆ, ಹಗಲಿನಲಿ ನಿದ್ದೆ
ಗೈವುದು ಅವನ ಪದ್ಧತಿ. ಅವನ ಹೊತ್ತಗೆಗಳಂ
ಮೊದಲೊಳೇ ಸುಲಿದು, ಆಮೇಲೆ ಅವನ ತಲೆಯಿಂದ
ಮೆದುಳನೆಳೆಯಲ್ ಬಹುದು. ಸೌದೆಯಿಂ
ಬುರುಡೆಯಂ ನುಚ್ಚುನೂರಾಗೊಡೆದು, ಮೊನಚಾದ
ಕಟ್ಟಿಗೆಯ ಇಟ್ಟಿಯಿಂ ತಿವಿದು, ಕೂರಸಿಯಿಂದ
ತುಂಡರಿಸಿ, ಪರ್ದುಗಳ್ಗೆ ಬಿರ್ದಿಕ್ಕಬಹುದು.
ಮೊದಲವನ ಗ್ರಂಥಗಳನೆಲ್ಲ ಕದಿಯಲೆ ಬೇಕು;
ಮರೆಯದಿರು, ಪುಸ್ತಕಗಳಿಲ್ಲದಿರೆ ಅವನೊಂದು
ಮಣ್ಮುದ್ದೆ; ನನ್ನಂತೆ! ಮಂತ್ರಗಳೆ ಅವನ ಬಲ.
ಅವನ ಕೈವಶವಾಗಿರುವ ದೆವ್ವಗಳು ಕೂಡ
ನನ್ನಂತೆ ಒಳಗೊಳಗೆ ಅವನನ್ನು ಹಳಿಯುತಿವೆ.
ಗ್ರಂಥಗಳನುರಿಸಿಬಿಡು: ನಮಗೆ ಜಯವಾದಂತೆ
ಆಮೇಲೆ! – ಅವನ ಬಳಿ ಬೆಲೆಯುಳ್ಳ ವಸ್ತುಗಳ್
ಬಹಳವಿವೆ. ಅವನ ಮಗಳವುಗಳಲಿ ಅತ್ಯಂತ
ಬೆಲೆಯುಳ್ಳ ವಸ್ತು! ಸೌಂದರ್ಯದಲಿ ಅವಳು
ದೊರೆಯಿಲ್ಲದವಳೆಂದು ಅವನೆ ಹೇಳುವನು.
ನನ್ನ ತಾಯಿಯ ಹೊರತು, ಇವಳ ಹೊರತು, ನಾನಾವ
ರಮಣಿಯನು ಕಂಡಿಲ್ಲ. ಅವನ ಮಗಳಾ ಚೆಲ್ವಿ-
ನೆದುರಿನಲಿ ನನ್ನ ತಾಯಿಯೋ ಕರಿಯ ಕಸವೆಂದೆ
ಹೇಳುವೆನು! – ನನ್ನ ತಾಯಿಯೊಳೆನಗೆ ಭಕ್ತಿಯಿದೆ!

ಬೀಮಣ – ಹಾಗಾದರಾ ರಮಣಿ ಅನಿತು ಸುಂದರಿಯೆ! ಬಿಡು, ರಕ್ಕಸ, ಅವನನ್ನು ಕೊಂದೇ ಬಿಡುವೆನು. ಅವನ ಮಗಳೂ ನಾನೂ ಅರಸ ಅರಸಿಯರಾಗಿ ರಾಜ್ಯವನ್ನಾಳುವೆವು. ಸುಖದಿಂದ ಬಾಳುವೆವು! – ತ್ರಿಶಂಕೂ ನೀನೂ ಮಂತ್ರಿಗಳಾಗಿರಿ. ಏನಯ್ಯಾ, ತ್ರಿಶಂಕು, ನಿನಗೆ ಸಮ್ಮತವೆ?

ತ್ರಿಶಂಕು – ಭಲಾ! ನಮ್ಮ ಪುಣ್ಯವೇ ಪುಣ್ಯ!

ಬೀಮಣ – ತ್ರಿಶಂಕು, ಬಾ ಇಲ್ಲಿ. ಬಾ ಇಲ್ಲಿ. ನಿನ್ನ ಕೈಯನ್ನು ಇತ್ತ ನೀಡು. (ಕೈ ಹಿಡಿದು) ನಿನ್ನನ್ನು ಹೊಡೆದುದು ತಪ್ಪಾಯ್ತು! ಆದರೆ ಬದುಕಿರುವ ತನಕ ನಾಲಗೆಯನ್ನು ಸ್ವಲ್ಪ ಹತೋಟಿಯಲ್ಲಿ ಇಟ್ಟುಕೊ!

ಶನಿಯ – ಇನ್ನು ಅರೆಗಳಿಗೆಯಲಿ ಅವನು ಮಲಗುವನ್,
ಆಗ ಕೊಲ್ಲುವೆಯೇನು?

ಬೀಮಣ – ನಿನ್ನಾಣೆ! ಕೊಲ್ಲುವೆನ್!

ಕಿನ್ನರ – ನನ್ನೊಡೆಯನಿಗೆ ಇದನರುಹುವೆನು.

ಶನಿಯ – ನಿನ್ನ ಸಾನ್ನಿಧ್ಯದಲಿ ಆನಂದವಾಗುತಿದೆ
ನನಗೆ, ನೀನಾಗ ಹಾಡಿದ ಸಮರ ಗೀತೆಯನು
ಇನ್ನೊಮ್ಮೆ ಹಾಡುವೆಯಾ, ದೇವ?

ಬೀಮಣ – ರಕ್ಕಸಾ, ನೀನೇನು ಹೇಳಿದರು ಮಾಡುವೆನು, ಸರಿಯೋ ತಪ್ಪೋ! – ಬಾ, ತ್ರಿಶಂಕು, ಹಾಡೊಣ! (ಹಾಡುತ್ತಾರೆ)

ವೀರ ಧೀರ ಶೂರರೆಲ್ಲ
ಬೇಗ ಬನ್ನಿರಿ!
ಬಿಲ್ಲು ಬಾಣಗಳನು ಹಿಡಿದು
ಹಾರಿ ಬನ್ನಿರಿ!
ಸಮರ ಧರೆಗೆ ಪೋಗುವಾ!
ಶತ್ರುಗಳನು ತಾಗುವಾ!
ಹಿಡಿದು, ಬಡಿದು, ತಲೆಯ ಕಡಿದು,
ಬಿಸಿಯ ರಕ್ತವನ್ನು ಕುಡಿದು,
ಇರಿದು, ಮುರಿದು, ತರಿದು, ಹರಿದು,
ಚುಚ್ಚಿ, ಕೊಚ್ಚಿ, ನುಣ್ಣನರೆದು,
ಜಯವ ಹೊಂದಿ ಮರಳುವಾ!
ಭಟರೆ, ಗೆದ್ದು ತೆರಳುವಾ!
ವೀರ ಧೀರ ಶೂರರೆಲ್ಲ
ಬೇಗ ಬನ್ನಿರಿ!
ಬಿಲ್ಲು ಬಾಣಗಳನು ಹಿಡಿದು
ಹಾರಿ ಬನ್ನಿರಿ!

ಶನಿಯ – ರಾಗ ಸರಿಯಾಗಿಲ್ಲ
[ಕಿನ್ನರನು ತಾಳಹಾಕಿ ರಾಗವನ್ನು ಬಾರಿಸುತ್ತನೆ]

ಬೀಮಣ – ಇದಾರ ಗಾನ?

ತ್ರಿಶಂಕು – ಮಾರುತ ಮಹಾಶಯನು, ನಮ್ಮ ಹಾಡಿಗೆ ತಕ್ಕ ಹಾಗೆ ತಾಳ ಹಾಕುತ್ತಿರುವನು.

ಬೀಮಣ – ನೀನು ನಿಜವಾಗಿಯೂ ಮನುಷ್ಯನಾಗಿದ್ದರೆ ನಿನ್ನ ನಿಜಸ್ವರೂಪವನ್ನು ತೋರು. ದೆವ್ವವಾಗಿದ್ದರೆ ಮನಸ್ಸು ಬಂದಹಾಗೆ ಮಾಡು.

ತ್ರಿಶಂಕು – ದಮ್ಮಯ್ಯ! ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು! ಊರಿಗೆ ಹೋದ ಮೇಲೆ ಕೋಳಿಯನ್ನಾಗಲಿ ಕುರಿಯನ್ನಾಗಲಿ ಯಾವ ಹರಕೆಯನ್ನು ಬೇಕಾದರೂ ಸಲ್ಲಿಸುತ್ತೇನೆ!

ಬೀಮಣ – ಸತ್ತರೆ ನಿನ್ನ ಋಣ ತೀರಿತು! ನೀನಾರು? ನೋಡಿಯೇಬಿಡುತ್ತೇನೆ. – (ಮುಂದುವರಿದು ಹೆದರಿ) ಅಯ್ಯೋ ಕಾಪಾಡು! ಕಾಪಾಡು!

ಶನಿಯ – ಏನು, ಬೆದರಿಬಿಟ್ಟೆಯಾ?

ಬೀಮಣ – ಎಲ್ಲಾದರೂ ಉಂಟೆ? ಬೀಮಣಗೆ ಹೆದರಿಕೆ?

ಶನಿಯ – ಹೆದರದಿರು. ಇಲ್ಲಿ ಯಾವಾಗಲು ಸದ್ದುಗಳು
ತುಂಬಿರುವ ದ್ವೀಪವಿದು. ಗಾನಗಳು ಸಂತೊಷ
ವೀಯುವುವು. ಅದು ಹೊರತು ನೋಯಿಸವು.
ಕೆಲವು ಸಲ ನೂರಾರು ವಾದ್ಯಗಳು ಕರ್ಣದೆಡೆ
ಹಾಡುವುವು; ಕೆಲವು ಸಲ ತಂತಿಗಳ ಮಿಡಿಯುವುವು.
ಕೆಲವು ಸಲ ನಾನು ಮಲಗಿ ಎದ್ದು ತಿರುಗುತಿರೆ
ಮೃದುಮಧುರ ವಾಣಿಗಳು ಮರಳಿ ನಾನ್ ಜೋಂಪಿಪೊಲು
ಜೋಗುಳವ ಹಾಡುವುವು. – ಕನಸಿನಲಿ ಮೋಡಗಳು
ಬಾಯ್ದೆರೆದು, ಮೈಮೇಲೆ ಉದುರುವಂತಿಹ ಹೊಳೆವ
ರತ್ನಗಳ ರಾಶಿಯನು ಮೆರೆದಪವು. ಎಚ್ಚತ್ತು,
ಆ ಕನಸುಗಳೆ ಮರಳಿ ಬರಲೆಂದು ಮಲಗುವೆನು.

ಬೀಮಣ – ಹಾಗಾದರೆ ಇದು ನನಗೆ ಸುಖದ ಸಾಮ್ರಾಜ್ಯವೇ ದಿಟ! ಒಂದು ಬಿಡಿಕಾಸು ಖರ್ಚಿಲ್ಲದೆ ಅಮರ ಸಂಗೀತ ದೊರಕುತ್ತದೆ!

ಶನಿಯ – ಹೌದು. ಆದರದು ಭೈರವನ ಕೊಂದ ಬಳಿಕ.

ಬೀಮಣ – ಅದೇನು ಆಗಿಹೋಗುತ್ತೆ! – ಓಹೋ! ಅದನ್ನು ಆಗಲೇ ಸವಿಗನಸಿನಲಿ ಸಿಕ್ಕಿ ಮರೆತುಬಿಟ್ಟಿದ್ದೆ!

ತ್ರಿಶಂಕು – ಗಾನ ದೂರ ದೂರಕೆ ಜಾರುತಿದೆ. ಈಗ ಅದನ್ನೇ ಹಿಂಬಾಲಿಸೋಣ. ಆಮೇಲೆ ನಮ್ಮ ಕೆಲಸಕ್ಕೆ ತೊಡಗೋಣ!

ಬೀಮಣ – ದಾರಿ ತೋರು, ರಕ್ಕಸಾ, ಮುಂದೆ ನಡೆ! – ಅಹಾ! ಈ ಗಗನದ ಗಾಯಕನು ಕಣ್ಣಿಗೆ ಬಿದ್ದಿದ್ದರೆ! – ಅಹಾ! ಎನಿತಿಂಪು!
[ಹಿಂದೆಯೆ ತೆರಳುತ್ತಾನೆ]

ತ್ರಿಶಂಕು(ಶನಿಯಗೆ) ನಿಲ್ಲುವೆ ಏಕೆ? ಬಾ ಹೋಗೋಣ!

(ಹೊರಡುತ್ತಾರೆ)