[ದ್ವೀಪದ ಮತ್ತೊಂದು ಭಾಗ. ರಣನಾಯಕ, ರಂಗನಾಯಕ, ರುದ್ರನಾಯಕ, ಜಯದೇವರು ಬರುತ್ತಾರೆ.]

ಜಯದೇವ(ಬಿಸುಸುಯ್ದು)
ಮುಂದೊಂದು ಹೆಜ್ಜೆಯನು ಇಡಲಾರೆ. ಶಿವಶಿವಾ!
ನನ್ನ ಮುದಿ ಎಲುಬುಗಳೊ ಕಡಲೆಯಂ ಬೀಸುತಿವೆ. –
ಇದು ಚಕ್ರಭೀಮ ಕೋಟೆಯೆ ಹೌದು. ಎನಿತೊಳವು
ಸುತ್ತುಗಳು! ಏನು ತಿರುಗಣೆಗಳು! ದಿಣ್ಣೆಗಳು,
ಕಣಿವೆಗಳು! ಕಣಿವೆಗಳು, ದಿಣ್ಣೆಗಳು! ಏರಿಳಿದು,
ಇಳಿದೇರಿ ಸಾಕಾಯ್ತು! ನೀವಿನಿತು ತಳುವಿದರೆ
ವಿಶ್ರಮಿಸಿಕೊಳ್ಳುವೆನು.

ರಣ – ನಿನ್ನನಾಡುವುದೇಕೆ,
ಜಯದೇವ? ನನ್ನ ಕಾಲ್ಗಳೆ ಸೋತು, ಮುಂದೆ
ನಡೆಯಲಾರದೆ ಬರಿದೆ ತಡವುತಿವೆ! ಕುಳಿತು ದಣಿ
ವಾರಿಸಿಕೊ. – ನನಗಿನಿತು ನೆಚ್ಚಿಲ್ಲ; ಮುಳುಗಿದನು!
ನನ್ನಣುಗನಳಿದಿಹನು! ಬಿದಿ ಎಮ್ಮ ಸಾಹಸವನ್
ಅಣಕಿಸುತಲಿರ್ಪುದು! ಹೋದನೇ? ಹೋಗಲಿ!
ಮಾಳ್ಪುದೇನ್?

ರುದ್ರ(ರಂಗನಾಯಕಗೆ) ನನಗೇನೊ ಅವನ ಈ ಪರಿ ಕಂಡು
ಸಂತೋಷವುಕ್ಕುತಿದೆ. ಮರೆಯದಿರು ನಮ್ಮ ಹರುವಂ.
ಸಮಯ ದೊರೆಕೊಂಡಾಗ ಅದನು ಸಾಧಿಸಬೇಕು.

ರಂಗ(ರುದ್ರಗೆ) ಇನ್ನೊಂದು ಸಮಯ ಸಿಕ್ಕಿದರೆ ಬಿಡಲಾಗದು.

ರುದ್ರ(ರಂಗಗೆ) ಇಂದಿನಿರುಳೇ ಸಾಕು. ತಿರುತಿರುಗಿ ಬಳಲಿಹರು.
ಗಾಢನಿದ್ರೆಯ ತಳೆದು ಎಚ್ಚರಿಕೆ ತಪ್ಪುವರು;
ಆಗ ಮಾಡಿದರಾಯ್ತು.

ರಂಗ – ಇಂದಿನಿರುಳೇ ಅಕ್ಕೆ.
ಇನ್ನದನು ಕುರಿತಾಡುವುದು ಬೇಡ! ಸುಮ್ಮನಿರು!
[ಗಾನ ಕೇಳಿಬರುತ್ತದೆ]

ರಣ – ಏನು ಸಂಗೀತವದು? ಮಿತ್ರರಿರಾ, ಕೇಳಿ!

ಜಯ – ಏನಿದದ್ಭುತ ಗಾನ!

[ಭೈರವನು ದೂರ ಅದೃಶ್ಯನಾಗಿ ಬರುತ್ತಾನೆ. ಬಳಿಯಲ್ಲಿ ವಿಚಿತ್ರ ಆಕೃತಿಗಳು ಹಾಡುತ್ತ ಬಂದು ಕೈಲಿರುವ ಹಣ್ಣುಹಂಪಲುಗಳನ್ನು ಮುಂದಿಟ್ಟು, ನೃತ್ಯಮಾಡಿ ಎಲ್ಲರನ್ನೂ ಫಲಹಾರಕ್ಕೆ ಆಹ್ವಾನಿಸಿ ಮಾಯವಾಗುತ್ತವೆ.]

(ವಿಚಿತ್ರಾಕೃತಿಗಳ ಹಾಡು)

ಕಿನ್ನರ ಕಿಂಕರರೆಲ್ಲರು ಬನ್ನಿ;
ಬನದಿಂ, ಮಲೆಯಿಂ, ಕೊಳದಿಂ ಬನ್ನಿ!
ಕಳಿತಿಹ ಗೊಂಚಲು ಹಣ್ಗಳ ತನ್ನಿ
ಬೆಟ್ಟದ ಬಾಳೆಯ ಗೊನೆಗಳ ತನ್ನಿ
ಚಿನ್ನದ ತೊಳೆಗಳ ಹಲಸನು ತನ್ನಿ
ಬಣ್ಣದ ಮಾವಿನ ಹಣ್ಣನು ತನ್ನಿ!
ತಿಳಿಗೊಳದಿಂ ತಿಳಿನೀರನು ತನ್ನಿ
ಕಂಪನು ನೀಡುವ ಬೇರ್ಗಳ ತನ್ನಿ;
ಪೊಸ ಸುಳಿಬಾಳೆಯ ಎಲೆಗಳ ತನ್ನಿ
ತಳಿರಿನ ದೊನ್ನೆಯ ಬಟ್ಟಲ ತನ್ನಿ!
ಕಿನ್ನರ ಕಿಂಕರರೆಲ್ಲರು ಬನ್ನಿ;
ಬನದಿಂ, ಮಲೆಯಿಂ, ಕೊಳದಿಂ, ಬಯಲಿಂ,
ಬನ್ನಿಂ! ಬನ್ನಿಂ! ಬೇಗನೆ ಬನ್ನಿಂ! [ತಟ್ಟೆಗಳನ್ನು ಇಟ್ಟು]
ಹಸಿದಿಹ ಅತಿಥಿಗಳೆಲ್ಲರು ಬನ್ನಿ;
ತಂದಿಹ ವಿಧವಿಧ ಫಲಗಳ ತಿನ್ನಿ;!
ಮಾವನು ತಿನ್ನಿ, ಹಲಸನು ತಿನ್ನಿ,
ನೀರನು ಕುಡಿಯಿರಿ ಬನ್ನಿ! ಬನ್ನಿ! [ಹೋಗುತ್ತಾರೆ]

ರಣ – ಶಿವನೇ, ಕಾಪಾಡು! – ಇವೇನು ರೂಪಗಳು!

ರಂಗ – ಏಂ ಸೂತ್ರಗೊಂಬೆಗಳ ಕುಣಿದಾಟಂ! – ನಾನೀಗ
ನಂಬಿದೆನು ದಶಶಿರದ ರಾಕ್ಷಸರು ಇಹರೆಂದು.
ಈಗಳುಂ ರಾವಣನು ಲಂಕೆಯನಾಳ್ವನೆಂದು!

ರುದ್ರ – ಇನ್ನೇಕೆ ಸಂದೇಹ? ಈಗಳಾದುದ ಕಂಡು
ಎಲ್ಲವನು ನಂಬುವೆನು. ಕಬ್ಬಿಗರ ಬಣ್ಣನೆಯೊಳ್
ಒಂದಿನಿತುಂ ಸಟೆಯಿಲ್ಲ. ಇದೆ ಎನ್ನುವರು ಮೂರ್ಖರು!

ಜಯದೇವ – ನಾವಿದನು ನಗರದಲಿ ಹೇಳಿದರೆ ಜನರು
ನಂಬುವರೆ? ನಾವಿಂಥ ಜನಗಳನು ಕಂಡೆವೆನೆ –
ಏಕೆಂದರವರು ಈ ದ್ವೀಪದ ನಿವಾಸಿಗಳೆ
ಇರಬೇಕು. – ರೂಪಗಳು ಬೇರಾದೊಡೇನಂತೆ?
ಮಾನವರ್ ಅರಿಯದಿಹ ಅತಿಥಿಸತ್ಕಾರವಿದು!
ಮನುಜರಲಿ ಈ ವಿನಯ ಮರ್ಯಾದೆಗಳು ವಿರಳ!
ಇಲ್ಲ ಎಂದರು ಎನ್ನಬಹುದು!

ಭೈರವ(ಸ್ವಗತ) ಧರ್ಮಾತ್ಮನ್,
ಪುಣ್ಯಾತ್ಮನಹೆ ನೀನು. ನನ್ನಿಯನೆ ನುಡಿದಿರ್ಪೆ.
ಏಕೆಂದರಲ್ಲಿರ್ಪ ಮೂವರಲಿ ಪಿಶಾಚಗಳ
ಮೀರರ್ಪ ನಕ್ತಾತ್ಮರೊಳರು!

ರಣ – ಏನು ರೂಪ! ಏನು ಗಾನ! ಏನು ಅಭಿನಯ!

ಭೈರವ(ಸ್ವಗತ) ಈಗ ಹೊಗಳುವೆ ಏಕೆ? ಮುಂದಪ್ಪುದನು ಕಂಡು
ತರುವಾಯ ಹೊಗಳುವರೆ ಜಾಣರಾದವರು.

ರುದ್ರ – ಎವೆಯಿಕ್ಕುವುದರಲ್ಲಿಯೇ ಮಾಯವಾದರು!

ರಂಗ – ಹೋದರೆಮಗೇನಂತೆ? ಹಣ್ಣುಗಳನೀ ಎಡೆಯೆ
ಬಿಟ್ಟಿಹರು. ನಮಗೊ ಹಸಿವಾಗಿಹುದು ತೊಳಲಿ.
ಬನ್ನಿಂ! ಚೆನ್ನಾಗಿ ಭುಜಿಸುವಂ!

ರಣ – ಶಿವಶಿವಾ, ನಾನೊಲ್ಲೆ!

ಜಯದೇವ – ಬೆದರಲೇತಕೆ ಜೀಯ? ಬಾಲ್ಯದಲಿ ಎನಿತೆನಿತೊ
ಕತೆಗಳನು ಕೇಳಿದೆವು: ಹೊಟ್ಟೆಯಲಿ ಕಣ್ಣುಳ್ಳ
ದಾನವರು! ನೆತ್ತಿಯಲಿ ಬಾಯುಳ್ಳ ಮಾನವರು!
ಶಿರದಲ್ಲಿ ಕೊಂಬುಳ್ಳ ರಕ್ಕಸರು! ಪಕ್ಕದಲಿ
ರೆಕ್ಕೆಗಳನಾಂತಿರ್ಪ ಕವಡು ರಕ್ಕಸಿಯರು!
ಈಗಳಾದರೊ ಏನು? ಕಂಡಕಂಡವರೆಲ್ಲ
ಕಂಡೆವೆಂದೊರೆಯುವರು! – ಇದಕಳುಕಲೇಕೆ?

ರಣ – ಮೊದಲ್ ನಾನೆ ತೊಡಗುವೆನ್: ಮುದುಕನಾಗಿಹೆನು;
ನನ್ನ ಕಾಲವದಾಯ್ತು! – ನನಗೆ ಬೇಕಾದವನು
ಬಾಳದೆಯೆ ಹೊದನು! ಬದುಕಿ ನನಗಿನ್ನೇನು?
ಕೆಳದಿಯ ನಾಯಕರೆ, ಬನ್ನಿ ನೀವು ತೊಡಗಿ.

[ಮಿಂಚು, ಗುಡುಗು, ಕಿನ್ನರನು ಘೋರ ರಾಕ್ಷಸಿಯ ವೇಷದಿಂದ ನುಗ್ಗಿ ಬರಲು ಹಣ್ಣುಹಂಪಲುಗಳು ಮಾಯವಾಗುತ್ತವೆ.]

ಕಿನ್ನರ – ನಿಮ್ಮಲ್ಲಿ ಮೂರು ಜನ ಪಾಪಿಗಳಿಹರು! ಬಿದಿ,
ಬೊಮ್ಮಾಂಡಮನಿತುಮಂ ಆಳುತಿಹ ಬಿದಿ,
ಹೇಸಿ ನರಕವು ಕೂಡ ಉಗುಳಿಯಟ್ಟಿದ ನಿಮ್ಮನ್
ಈ ದ್ವೀಪಕೆಸದಿಹುದು. ಮರುಳುಗಳ ಗೊಟ್ಟಿಯೊಳ್
ಬದಕಲರ್ಹರು ನೀವು. ಅದರಿಂದ ದೆವ್ವಗಳ
ನೆಲೆಯ ಬೀಡಾಗಿರ್ಪ ಈ ದ್ವೀಪದಲಿ ನೀವು
ತೊಳಲುವಿರಿ. ನಿಮ್ಮೆಲ್ಲರನು ಮರುಳರನ್ನಾಗಿ
ಮಾಡಿಹೆನ್! [ಎಲ್ಲರೂ ಕತ್ತಿಗಳನ್ನು ಒರೆಗಳಚುತ್ತಾರೆ.]

ಚಿಃ! ಚಿಃ! ಮೂರ್ಖರಿರ, ಹೇಡಿಗಳ್
ನೀವೇನ ಮಾಡುವಿರಿ? ವಿಧಿಯ ಕಿಂಕರರಾವು;
ನಿಮ್ಮ ಕೈಯಾ ಕತ್ತಿಗಳೂ ನಾವೆ. ಚೀರುತಿಹ
ಗಾಳಿಗಳ ಖಂಡಿಸಿರಿ! ಭೋರ್ಗರೆವ ನೀರುಗಳ
ಕತ್ತರಿಸಿ! ನನ್ನ ಮೈನವಿರನೊಂದಾದೊಡಂ
ಕೀಳಲಾರದು ನಿಮ್ಮ ಮೈಬಲ್ಮೆ. ನಮ್ಮವರ್
ನನ್ನಂತೆ ಬಲವಂತರಾಗಿಹರ್. ನೀವೀಗ
ಕತ್ತಿಗಳ ಭಾರದಿಂ ಕುಸಿಯುವಿರಿ! ಅವುಗಳನು
ಎತ್ತಲಾರದೆ ಕೆಳಗೆ ಬಿಸುಡುವಿರಿ! [ಹಾಗೆ ಮಾಡುತ್ತಾರೆ.]

ಮರೆಯದಿರಿ – ಅದನೊರೆಯೆ ಇಲ್ಲಿಗೈತಂದಿಹೆನ್ – ನೆನೆಯಿರಿ!
ನೀವು ಮೂವರು ಸೇರಿ ಭೈರವನಾಯಕನ
ರಾಜ್ಯವನು ಮೋಸದಿಂದಪಹರಿಸಿ, ವಾಹಿನಿಯೊಳ್
ಆತನಂ ಮಗಳೊಡನೆ ತೇಲಿದಿರಿ. ನೆನಪಿದೆಯೆ?
ಅದರಿಂದ ಮಿಗವಕ್ಕಿ ಹೊಳೆ ಮಲೆಗಳೆಲ್ಲವುಂ
ನಿಮ್ಮ ಕೇಡನೆ ಬಯಸಿ ಕಾದಿಹವು. ಅದರಿಂದ,
ರಣನಾಯಕನೆ, ನಿನ್ನ ಕುವರನಂ ಅಪಹರಿಸಿ
ಕೊಂಡಿಹವು. ನೀವಳಿಯುವನ್ನೆವರಂ ನಿಮ್ಮ
ಪೀಡನೆಯೆ ನಮ್ಮಾಟವಾದಪುದು. ದ್ವೀಪದಲಿ
ನಿಮ್ಮ ಬಾಳಿನಿತುಮುಂ ನಿಮ್ಮ ಪಶ್ಚಾತ್ತಾಪ,
ನಿಮ್ಮ ಪ್ರಾಯಶ್ಚಿತ್ತಗಳಲಿ ಪೂರೈಸುವುದು!
[ಗುಡುಗುತ್ತದೆ; ಕಿನ್ನರನು ಮಾಯವಾಗುತ್ತಾನೆ, ಎಲ್ಲಾ ಬೆರಗಾಗೆ]

ಭೈರವ(ಸ್ವಗತ) ಕಿನ್ನರಾ, ನಿನ್ನ ಪಾತ್ರವ ನೀನು ಚೆನ್ನಾಗಿ
ನಟಿಸಿರ್ದೆ. ಭೀಷಣತೆ ಗಾಂಭೀರ್ಯಗಳೆರಡುಂ
ತುಂಬಿರ್ದುವದರಲ್ಲಿ. ನಾನು ಪೇಳ್ದುದನೆಲ್ಲ
ನಿಷ್ಠೆಯಿಂದೆಸಗಿರ್ಪೆ. ನನ್ನ ಕಿಂಕರರೆಲ್ಲ
ನಿನ್ನಂತೆ ತಂತಮ್ಮ ಕಜ್ಜಗಳನೆಸಗಿಹರ್.
ನಿನ್ನ ಮಾಯೆಯ ಬಲದಿ ನನ್ನರಿಗಳನಿಬರುಂ
ಹುಚ್ಚೆದ್ದು ಹೋಗಿಹರು; ನನ್ನ ಕೈಯೊಳಗಿಹರು.
ಇವರೆಲ್ಲಮಿಂತಿರ್ಕೆ. ತರುಣ ಶಿವನಾಯಕನ –
ಮರಣ ಹೊಂದಿಹನೆಂದು ಇವರೆಲ್ಲ ತಿಳಿದಿರುವ –
ತರುಣ ಶಿವನಾಯಕನ ಬಳಿಗೈದುವೆನ್; ಅಲ್ಲಿ
ಗೌರಾಂಬೆಯೆಂತಿರ್ಪಳದನು ನೋಡುವೆನ್. (ಹೊರಡುತ್ತಾನೆ)

ಜಯದೇವ – ನಾಯಕರೆ, ಇಂತೇಕೆ ನಿಂತಿರ್ಪಿರಿ?

ರಣ – ಶಿವಶಿವಾ! ಶಿವಶಿವಾ! ಭೈರವನಾಯಕನ
ಪೆಸರನಾರೋ ಪೇಳ್ದವೋಲಾಯ್ತು. ಗಾಳಿಯೋ?
ವಾಹಿನಿಯೊ? ಗುಡುಗು ಕೂಗಿತೊ ಏನೊ? ನಾನರಿಯೆ.
ನಾನು ನೆಗಳಿದ ಪಾಪವನು ಹೇಳಿ ಹಂಗಿಸಿತು.
ಅದರಿಂದಲೆನ್ನ ಸುತನ್ ಅಳಿದನೆಂದೊರೆಯಿತು.
ಹೊಳೆಯ ಬುಡದಲಿ ಮಲಗಿ ನಿದ್ರಿಸುತಲಿಹನವನು.
ನಾನವನ ಪಕ್ಕದೊಳೆ ಪೊಗಿ ನಿದ್ರಿಪೆನ್! [ನಿಷ್ಕ್ರಮಣ]

ರಂಗ – ಕೆಚ್ಚಿದ್ದರವುಗಳಿಗೆ, ದೆವ್ವಗಳು ಒಂದೊಂದೆ
ಬರಲಿ ನೋಡುವೆನಾಗ. ಕತ್ತರಿಸಿ ಕೆಡಹುವೆನ್!

ರುದ್ರ – ನಾನೂ ನೆರವಾಗುವೆನು. [ಇಬ್ಬರೂ ಹೋಗುತ್ತಾರೆ.]

ಜಯದೇವ – ಪಾಪದಿಂದವರ್ಗೆಲ್ಲ
ಎದೆಗೆಚ್ಚು ತೊಲಗಿಹುದು. ಎಂದೊ ಕುಡಿದಾ ವಿಷವು
ಇಂದು ಮೈಗೇರಿಹುದು! ಏನು ಮಾಳ್ಪರೊ ಕಾಣೆ!
ಅವರ ಹಿಂದೆಯೆ ಹೋಗಿ ಸಂತೈಸಲೆಳಸುವೆನು!

(ಹೊರಡುತ್ತಾನೆ)