[ಭೈರವನಾಯಕನು ಗುಹೆಯ ಮುಂದೆ. ಭೈರವನಾಯಕ, ಶಿವನಾಯಕ, ಗೌರಾಂಬೆ ಬರುತ್ತಾರೆ.]

ಭೈರವ – ಅನಾಗರಿಕನಂದದಲಿ ಬಿರುನುಡಿಗಳಿಂ ಬೈದು,
ಇನಿತು ಕಡುಗೆಯ್ಮೆಯಲಿ ನಿನ್ನ ನೂಂಕಿದೆನ್; ಅದಕೆ
ತಗುವ ಸನ್ಮಾನವನೆ ಮಾಡುವೆನ್: ತಕ್ಕ ಬಹು-
ಮಾನವನೆ ನೀಡುವೆನ್: ನನ್ನ ಜೀವನದುಸಿರ್,
ನನ್ನ ಬಾಳ್ವೆಯ ಕಣ್ಣೆ ತಾನಾಗಿರುವ ನನ್ನ
ಸುಕುಮಾರಿ ಗೌರಾಂಬೆಯನ್‌ ನಿನಗೆ ಧಾರೆ
ಎರೆದಿರ್ಪೆನ್. ನಿನ್ನೊಲವಿನಾಳವನ್ ಪರಿಕಿಸಲ್
ಅಂತೆಸಗಿದೆನ್! ಬರಿದೆ ಚಿಂತೆಗೊಳಗಾಗದಿರು.
ಕಷ್ಟಾಪಮಾನಗಳ ಒರೆಗಲ್ಲಿನಲಿ ನಿನ್ನ
ಒಲ್ಮೆಪೊನ್ನನ್ ತಿಕ್ಕಿ ನೋಡಿಹೆನ್. ಚಿನ್ನದೊಳ್
ಮತ್ತಾವ ಕೀಳ್ಪೊನ್ನುಂ ಬೆರೆತಿಲ್ಲವೆಂದರಿತೆನ್. – (ಮೇಲೆ ನೋಡಿ)
ಬಾನ್ವೆಣ್ಣೆ, ತಿರೆವೆಣ್ಣೆ, ತೊರೆವಣ್ಣೆ, ನೀವೆಲ್ಲ
ಸಾಕ್ಷಿಯಾಗಿರಿ: ನನ್ನ ಪುತ್ರಿಯಂ ಸಂತಸದಿ
ಶಿವನಾಯಕಂಗೆ ಧಾರೆಯನೆರೆದು ಇತ್ತಪೆನ್! –
(ಮಗಳನ್ನೂ ಅಳಿಯನನ್ನೂ ನೋಡಿ)
ಗೌರಾಂಬೆ ಹೂಚೆಲುವೆ. ಗೌರಾಂಬೆ ಅತಿಸುಗುಣೆ.
ನಾಯಕನೆ, ತಂದೆ ಮಗಳನು ಬಣ್ಣಿಸುವನೆಂದು
ತಿಳಿಯದಿರು. ಬಣ್ಣನೆಗಳೆಲ್ಲವನು ಹಿಂದಿಕ್ಕಿ
ಮುಂಚುವುದು ನನ್ನ ಗೌರಿಯ ಶೀಲ!

ಶಿವ – ಮಾವ,
ನನ್ನಿ ನುಡಿಯಲ್ ನಂಬದಿಹುದೆಂತು? ಬಾಂದಳದ
ದನಿಯೊಂದು ‘ನಂಬದಿರ್!’ ಎಂದರೂ ನಾನೊಪ್ಪೆನ್!

ಭೈರವ – ನಳನಳಿಸುವೀ ಹಸುರಿನಲಿ ಕುಳಿತು, ಅವಳೊಡನೆ
ಮಾತಾಡಿ, ನೀವೀರ್ವರೂ ಸೇರಿ ಸರಸದಿಂ
ಬರುವ ಕಾಲದ ಮುಗುದ ಸವಿಗನಸುಗಳ ಕಟ್ಟುತಿರಿ! –
ಕಿನ್ನರಾ, ಎಲ್ಲಿರ್ಪೆ!
(ಕಿನ್ನರನ ಪ್ರವೇಶ)

ಕಿನ್ನರ – ಬೆಸನೇನ್, ನನ್ನೊಡೆಯ?

ಭೈರವ – ಕೈಕೊಂಡ ಕಾರ್ಯಮಂ ನೀನುಂ ನಿನ್ನಾಳ್ಗಳುಂ
ಬಿಡದೆ ನಿರ್ವಹಿಸಿದಿರಿ. ಅಂತಹುದೆ ಇನ್ನೊಂದು
ಮಾಯೆಯಂ ತೋರವೇಳ್ಕುಂ ನಡೆ. ಬೇಗದಿಂ
ಮೇಳಮಂ ಕರೆದು ತಾ. ತರುಣ ದಂಪತಿಗಳಿಗೆ
ನನ್ನ ಮಂತ್ರದ ಕಲೆಯ ನೋಡಬೇಕೆಂದಾಸೆ!
ತೋರ್ಪೆನೆಂದಾನುಂ ಬಾಸೆಯಿತ್ತಿಹೆನ್.
ಶೀಘ್ರದಿಂ ಕರೆದು ತಾ.

ಕಿನ್ನರ – ಕರೆತರ್ಪೆನೀಗಳೆಯೆ!

ಭೈರವ – ಎವೆಯಿಕ್ಕುವುದರೊಳ್!

ಕಿನ್ನರ – ಹೋಗಿ ಬಾ, ಕರೆದು ತಾ, ಎಂದು ನೀಂ ಪೇಳ್ವ ಮುನ್ನ,
ಎರಡು ಸಾರಿ ಹಿಂದೆ ಮುಂದೆ ಉಸಿರ ನೀನು ಎಳೆವ ಮುನ್ನ
ತಮ್ಮ ತಮ್ಮ ವೇಷಗಳನು ಧರಿಸಿ ಎಲ್ಲ ಬರುವರು.
ತುದಿಯ ಬೆರಳಮೇಲೆ ನಿಂತು ಕುಣಿದು ನಲಿದು ಬರುವರು.
ಶುಕ ಪಿಕಂಗಳಿಂಚರಂಗಳೇಳಿಸುತ್ತ ಬರುವರು.
ನವ ಮಯೂರ ನೃತ್ಯಗಳನು ತೋರಿ, ಮೀರಿ, ಬರುವರು.

ಭೈರವ – ಹೋಗು, ನಡೆ, ಕಿನ್ನರಾ (ಕಿನ್ನರ ಹೋಗುತ್ತಾನೆ.)
ಮಾತಾಡದಿರಿ. ಕಣ್ದೆರೆದು ಮೌನದಿಂದಿರಿ.
[ಗಾನ ಕೇಳಿಸುತ್ತದೆ. ಒಡನೆಯೆ ಬಣ್ಣಬಣ್ಣದ ಹೊಗೆ ಮಂಜು ಮುಸುಗಿ ದೃಶ್ಯವು ರಮಣೀಯವೂ ಅಲೌಕಿಕವೂ ಆಗುತ್ತದೆ. ಹಸುರುಡೆಯ ಬನದೇವಿ ತೇಲಿ ತೇಲಿ ಪ್ರವೇಶಿಸುತ್ತಾಳೆ.]

ಬನದೇವಿ – ಬನಗಳಧಿದೇವತೆಯ ಬನದೇವಿ ನಾನು,
ಸೌಂದರ್ಯ ದೇವತೆಗೆ ಹಸುರು ಕಣ್ಣಾನು;
ಸುಂದರ ವಸಂತನಿಗೆ ಸುಂದರಿಯು ನಾನು,
ಭೂಮಿದೇವಿಗೆ ನಚ್ಚಿನಾ ಕೆಳದಿ ನಾನು;
ಭೂದೇವಿಗನುದಿನವು ಪಸುರುಡೆಯನುಡಿಸಿ,
ತರತರದ ಕುಸುಮದಾಭರಣಗಳ ತೊಡಿಸಿ,
ಹೊಳೆಹೊಳೆವ ಹಿಮಮಣಿಯ ಮಾಲೆಗಳ ಸೂಡಿ,
ಪೂತ ಪೊಸ ಬಳ್ಳಿಗಳ ಹೊಂಬಳೆಯ ನೀಡಿ,
ಸಿಂಗರಿಸಿ ಕಳುಹುವೆನು ಸೃಷ್ಟಿರಂಗಕ್ಕೆ!
ಮಾನವರೆ, ನಿಮಗೆ ಗೆಲವಕ್ಕೆ! ಸೊಗಮಕ್ಕೆ!
[ನೀರುಡೆಯ ನದೀದೇವಿ ಹೊಳೆಯಂತೆ ಹರಿಹರಿದು ಬರುತ್ತಾಳೆ.]

ನದೀದೇವಿ – ಬೆಟ್ಟದುದಿಯಲಿ ಹುಟ್ಟಿ, ಕಡಲಿಗೆ
ಹರಿವ ಹೊಳೆಗಳ ರಾಣಿಯು.
ಒಮ್ಮೆ ಹಾರುತ, ಒಮ್ಮೆ ಜಾರುತ,
ಒಮ್ಮೆ ನಿಲ್ಲುತ, ಒಮ್ಮೆ ಓಡುತ
ನಲಿವ ನಾ ಜಲವೇಣಿಯು!
ಚಲಿಪ ಮೀನುಗಳೆನ್ನ ಕಂಗಳು,
ಪೊಳೆವ ಪವಳಗಳೊಡವೆಯು.
ನಿಂತ ನೀರಿನ ಮೇಲೆ ಮಲಗುವ
ಗಿಳಿಗಳೆದೆಯನು ಹೋಲಿ ತೇಲುವ
ಪದ್ಮಪತ್ರಗಳುಡುಗೆಯು!
ನನ್ನ ಬಲಗಡೆ, ನನ್ನ ಎಡಗಡೆ,
ಶಾಲಿವನಗಳು ನಲಿವುವು.
ನಾನು ಹೋಹೆಡೆಯೆಲ್ಲ ತೃಪ್ತಿಯು,
ನಾನು ನಿಲ್ವೆಡೆಯೆಲ್ಲ ಸೌಖ್ಯವು,
ನನ್ನ ಪೈರುಗಳೊಲಿವುವು!
ಪುಣ್ಯತೀರ್ಥಗಳೆನ್ನೊಳಿರುವುವು,
ಪಾಪಗಳ ನಾ ತೊಳೆಯುವೆ.
ಮುಗಿಲ ಮನೆಯಿಂದೋಡಿ ಬಂದೆನು,
ಶಿವನ ಜಡೆಯನು ತುಳಿದು ನಿಂದೆನು,
ಭಕ್ತರಡಿಗಳ ತೊಳೆಯುವೆ!
ನಾನು ಹೊಳೆಗಳ ರಾಣಿಯು!
ನಲಿವ ನಾ ಜಲವೇಣಿಯು!
ನಾನು ನೀರಜಪಾಣಿಯು!
ನಾನು ಗಂಗೆಯ ವಾಣಿಯು!
[ಮುಗಿಲ ದೇವತೆಗಳು ಮೇಲಿಂದ ಇಳಿಯುತ್ತಾರೆ.]

ಮುಗಿಲ ದೇವತೆಗಳು – ರವಿಯ ಕಡಲ ಮುದ್ದಿಪೆಡೆಯೊಳುದಿಸಿ ಬಂದೆವು.
ಬಿತ್ತರದ ಬಾನಿನಲಿ ತೇಲಿಬಂದೆವು
ಮಳೆಯ ಬಿಲ್ಲ ಮುಡಿದು, ಸೂಸಿ,
ಗುಡುಗಿನೊಡನೆ ಸರಸವಾಡಿ,
ಮಿಂಚುಗಳನು ಬಳೆಯ ಮಾಡಿ,
ತೇಲಿಬಂದೆವು!
ಭೂಮಿಯೆಲ್ಲ ಸೊಗದೊಳಿಹುದು,
ಪೈರುಪಚ್ಚೆ ಬೆಳೆಯುತಿಹುದು,
ಎಂಬ ಸೊಗದ ಸುದ್ದಿಯನು
ಹೇಳಬಂದೆವು!
ರವಿಯ ಕಡಲ ಮುದ್ದಿಪೆಡೆಯೊಳುದಿಸಿ ಬಂದೆವು.
ಬಿತ್ತರದ ಬಾನಿನಲಿ ತೇಲಿಬಂದೆವು.
ಬಿಸಿಲ ಬೇಗೆಯಿಂದ ಬೆಂದು
ಬಾಡುತಿರುವ ಹೂವುಗಳಿಗೆ
ಅಮರಸುಖವ ನೀಡಲೆಂದು
ಸೊದೆಯ ತಂದೆವು!
ವಿರಹದಗ್ನಿಯಿಂದ ಬೆಂದು
ಬಳಲುತಿರ್ಪ ತರುಣರೆದೆಗೆ
ತಣ್ಪುಮುತ್ತನೀಯಲೆಂದು
ತೇಲಿಬಂದೆವು!
ರವಿಯು ಕಡಲ ಮುದ್ದಿಪೆಡೆಯೊಳುದಿಸಿ ಬಂದೆವು
ಬಿತ್ತರದ ಬಾನಿನಲಿ ತೇಲಿಬಂದೆವು.
[ಉರ್ವಶಿ ನರ್ತಿಸುತ್ತ ಬರುತ್ತಾಳೆ]

ಉರ್ವಶಿ – ರಂಭೆ, ತಿಲೋತ್ತಮೆ, ಮೇನಕೆಯರ ಸಖಿ
ಸಗ್ಗದ ಅಚ್ಚರಿ ಉರ್ವಶಿ ನಾನು;
ಇಂದ್ರನ ನಚ್ಚಿನ ಪೆಣ್ಣಣಿ ನಾನು,
ರಿಸಿಗಳ ತವಸನು ನುಂಗಿದಳಾನು;
ಸೃಷ್ಟಿಯ ಮೋಹಿನಿ ನಾನಾಗಿರುವೆನು
ಮಾಯೆಗೆ ಕಣ್ಣಾಗಿರುವಲು ನಾನು;
ಸವಿ ಸೆರೆಯಲಿ ನಲಿವರ ಕೆಳೆಯಾಗಿಹೆ,
ಶುಷ್ಕ ವಿಮುಕ್ತಿಯ ಶತ್ರುವು ನಾನು!
ಲೋಕಗಳೆಲ್ಲವನನುದಿನ ಸುತ್ತಿ,
ಚಾಗದ ಕೋಂಟೆಗಳೆಲ್ಲವ ಮುತ್ತಿ,
ಭೋಗದ ಬಿಂಜವನೆಲ್ಲಿಯು ಬಿತ್ತಿ,
ನಲಿವೆನು ಕಾಮನ ಬಾವುಟವೆತ್ತಿ!
ಮಧುಮಾಸದ ಕೋಗಿಲೆಗಳ ಕೂಡಿ
ಬನ ಬನ ಬನಗಳ ಸಂಚರಿಪೆ;
ಗಿಳಿಗಳ ಕೊರಲೊಳು ನಾನೇ ಹಾಡಿ,
ವಿರಹಿಗಳೆಲ್ಲರನುಪಚರಿಪೆ.
ಬಾ, ಬಾ, ಯುವಕನೆ, ಬನಗಳಲಿ
ತಳಿತಿಹ ಮರಗಳ ನೆಳಲಿನಲಿ
ಒಯ್ಯನೆ ಬಹ ತಂಗಾಳಿಯಲಿ
ಬಾ, ಬಾ, ಉರ್ವಶಿಯಿಹಳಲ್ಲಿ!
[ಎಲ್ಲರೂ ಸೇರಿ ಹಾಡುತ್ತಾರೆ]

ಎಲ್ಲರೂ – ನರರೊಳ್ಗೆಯ್ಮೆಗೆ ಪರಶಿವ ಮೆಚ್ಚಲಿ!
ಕವಿಗಳ, ಕಲೆಗಳು, ನಾಡೊಳು ಹೆಚ್ಚಲಿ!
ಕಾಲಕೆ ಬುವಿಯಲಿ ಮಳೆಬೆಳೆಯಾಗಲಿ!
ಸಜ್ಜನವೃಂದಕೆ ಚಿರಸುಖವಾಗಲಿ!
ವೀರರು ನಾಡಿನ ಬಸಿರೊಳು ಹುಟ್ಟಲಿ!
ಧರೆಯೊಳು ದೇವರ ರಾಜ್ಯವ ಕಟ್ಟಲಿ:
ತರುಣ ತರುಣಿಯರ ಮದುವೆಗಳಾಗಲಿ!
ಭೂವಿಯೆ ಸ್ವರ್ಗವ ಮೀರ್ವಂತಾಗಲಿ!
[ಭೈರವನ ಕೈಸನ್ನೆಯಿಂದ ಅವರೆಲ್ಲ ಮಾಯವಾಗುತ್ತಾರೆ.]

ಭೈರವ(ಸ್ವಗತ) ಮರೆತಿದ್ದೆ! ಮಾರಿಯ ಪಿತೂರಿಯನು ಮರೆತಿದ್ದೆ!
ನನ್ನ ಕೊಲೆಯಂ ಬಯಸಿ, ಆ ಶನಿಯ ತನ್ನ ಅನು-
ಯಾಯಿಗಳ ಕೂಡಿ ಬಹ ಪೊಳ್ತು ಬಳಿಸಾರಿಹುದು.
(ಶಿವನಾಯಕಗೆ)
ನೃತ್ಯವಿಂದಿಗೆ ಸಾಲ್ಗುಂ! ಚೆನ್ನಾಯ್ತೆ ನರ್ತನಂ?

ಶಿವ – ನಮ್ಮರಸನಾಸ್ಥಾನದಲ್ಲಿಯುಂ ನಾನಿಂಥ
ಕುಣಿತವನು ಕಂಡಿಲ್ಲ, ಗಾನವನು ಕೇಳಿಲ್ಲ.
ಸ್ವರ್ಗೀಯವಾಗಿತ್ತು! ಅವುಗಳೆಲ್ಲವು ಮಾಯಾ-
ಮೂರ್ತಿಗಳೆ?

ಭೈರವ – ಅಹುದು, ಮಾಯೆಯ ಬಲದೊಳೈತಂದ
ದೇವತೆಗಳವರು. [ಉದ್ವೇಗ, ಚಿಂತೆಗಳಿಗೆ ಒಳಗಾಗುತ್ತಾನೆ.]

ಶಿವ(ಗೌರಾಂಬೆಗೆ) ನಿನ್ನ ತಂದೆಯ ಪರಿಯೆ
ಬೇರೆಯಾದಂತಿಹುದು, ಆವುದೊ ಚಿಂತೆಯೊಳದ್ದು!

ಗೌರಾಂಬೆ(ಶಿವನಾಯಕಗೆ)
ಮೊಗದೊಳುರಿ ಹೊಮ್ಮುತಿದೆ. ಆವಗಂ ಅವನಿಂತು
ಕೋಪವಶನಾದುದನು ಕಂಡಿಲ್ಲ.

ಭೈರವ – ನಾಯಕನೆ,
ಬೆಕ್ಕಸಂಬಡುವಂತೆ ತೋರುತಿದೆ. ಏನಿಲ್ಲ,
ನೀವು ಸಂತಸದೊಳಿರಿ. ನಾನೊರೆದ ತೆರದಿಂದೆ
ನೀನು ನೋಡಿದುದೆಲ್ಲ ಬರಿಯ ಮಾಯೆಯೆ ದಿಟಂ!
ಗಾಳಿಯದು, ಕರಗಿ ಗಾಳಿಯ ಹೊಂದಿ ಹೋದುದು.
ನೀನು ಕಂಡೀ ದೃಶ್ಯದಂತೆಯೇ ಸರ್ವವೂ,
ವಿಸ್ತಾರವಾದೀ ಸಮಸ್ತ ವಿಶ್ವವೂ ಕೂಡ
ಮಾಯೆಯೆಂದರಿಯವುದು; ಕನಸೆಂದು ಭಾವಿಪುದು.
ಪೊಂಬುತ್ತಳಿಗಳಿಂದ ತಲೆಯೆತ್ತಿ ರಂಜಿಸುವ
ನಮ್ಮ ಏಳುಪ್ಪರಿಗೆಯರಮನೆಗಳೂ, ಮುಗಿಲ
ಬೆಳ್ನಿರಿಯ ತೆರೆಯೊಳ್ ಅವಿತು ಆಗಸವ ತಿವಿವೆಮ್ಮ
ಗೋಪುರಗಳಿಂ ಮೆರೆವ ಗುಡಿಗಳೂ, ಮೇಣ್ ನಮ್ಮ
ಧನಕನಕಾದಿ ಸಕಲೈಶ್ವರ್ಯ ಸಮುದಾಯವೂ;
ಹೆಚ್ಚೇನು? ನದಿಗಳಿಂ, ಗಿರಿಗಿಳಿಂ, ವನಗಳಿಂ,
ಸ್ಥಿರೆ ಎಂಬ ಪೆಸರಿನಿಂ ಮೆರೆದಿರ್ಪ ನಮ್ಮ
ಈ ಮಹಾ ಉರ್ವರೆಯೆ ಕಾಲವಾಹಿನಿಯಲ್ಲಿ
ಕರಕರಗಿ, ಒಡೆದ ಸವಿಗನಸಂತೆ ಪುಚ್ಚಳಿದು
ಪೋದಪುದು; ಸೊನ್ನೆಯೊಳಗೊಂದಾಗಿ ಅಡಗುವುದು,
ಕುರುಪು ಕುಡಾ ಉಳಿಯದಂದದಲಿ! ನಾವೆಲ್ಲ
ಕನಸುಗಳೆ! ಆವನೊ ಕಾಣುತಿಹ ಕನಸುಗಳು!
ಕನಸೆಮ್ಮ ಬಾಳನಾವರಿಸಿಹುದು. ಕನವರಿಪನ್
ಆತನೆಚ್ಚತ್ತನೆನೆ, ನಾವೆಲ್ಲಿ? ಶೂನ್ಯದಲಿ! –
ನೆನೆದದಂ, ಗೌರಯಾಣ್ಮ, ಸುಯ್ದುದೀ ಪಿತೃಹೃದಯಂ
ಅದೆನ್ನ ದೌರ್ಬಲ್ಯಂ! ಮುದಿಮೆದುಳ್ ಕದಡಿಹುದು!
ನೀವೀರ್ವರೂ ನಡೆಯಿರಾ ಗುಹೆಯ ಮಂಡಪಕೆ.
ಸೊಗಮಿಹುದು ನಿಮಗಲ್ಲಿ. ನನಗೊ? ತಂಗಾಳಿಯಲಿ
ಇಲ್ಲಿ; ಶಾಂತಿಮಾಳ್ಪೆನ್ ಕದಡಿರುವ ಬಗೆಗೆ!

ಗೌರಾಂಬೆ, ಶಿವನಾಯಕ(ಸಸಂಭ್ರಮವಾಗಿ)
ನಿಮ್ಮಿಷ್ಟಮೆಮಗಾಜ್ಞೆ. ಪೋದಪೆವು. (ನಲಿನಲಿದು ತೆರಳುತ್ತಾರೆ)

ಭೈರವ – ಕಿನ್ನರಾ, ಎಲ್ಲಿರ್ಪೆ [ಕಿನ್ನರನ ಪ್ರವೇಶ]

ಕಿನ್ನರ – ಬೆಸನೇನ್, ಒಡೆಯ!

ಭೈರವ – ಆ ಶನಿಯಗೆದುರಾಗಲ್ ಅನುವಾಗು.

ಕಿನ್ನರ – ಅಹುದು, ನನ್ನೊಡೆಯ, ಉರ್ವಶಿ ಬಂದ ಪೊಳ್ತೆ
ನಿನಗದನು ಹೇಳಬೇಕೆಂದೆಳಸಿದೆನ್. ಆದರೆ
ನೀನೆಲ್ಲಿ ಮುನಿಯುವೆಯೊ ಎಂದುಸಿರದಾದೆನ್!

ಭೈರವ – ಈಗಳವರನ್ ಎಲ್ಲಿಗೊಯ್ದಿರ್ಪೆ?

ಕಿನ್ನರ – ಕುಡಿಕುಡಿದು ಕೆಂಪೇರಿಹೋಗಿದ್ದರವರೆಲ್ಲರ್.
ಮತ್ತಿನಲಿ, ಮೊಗದ ಮೇಲಾಡಿದೆಲರನೆ ತಿವಿದು,
ಅಡಿಗಳನೆ ಸೋಂಕಿತೆಂದುರ್ವರೆಯನ್ ಒದೆದು
ಕೂಗುತ್ತ ಬರುತಿರ್ದರ್ ಈ ಯಡೆಗೆ. ನಾನಾಗಳ್
ತಾಳಂಗಳಂ ಬಡಿಬಡಿದು ಹಾಡಲಾರಂಭಿಸಿದೆ.
ಒಡನೆಯೆ ಮಿಗಗಳಂತೆ ಕಿವಿಗಳನ್ ಆಡಿಸುತ,
ಕಣ್ಣೆಮೆಯನ್ ಇಕ್ಕದೆಯೆ ನಾಸಿಕವ ಮೇಗೆತ್ತಿ
ಗಾನವನೆ ಮೂಸುತ್ತ ಹಿಂಬಾಲಿಸಿದರೆನ್ನನ್‌.
ಕೊರಕಲೊಳ್, ಕಲ್ಗಳೊಳ್, ಮುಳ್ಗಳೊಳ್, ಕೆಸರಿನೊಳ್
ಎಳೆತಂದು, ಕಡೆಗೆ ತಾವರೆಗೊಳದ ಉಸುಬಿನೊಳ್
ಕಿವಿವರೆಗೆ ಕೆಸರೇರುವನ್ನೆವರಂ ಬಿಡದೆ ನೂಂಕಿ
ಪಿಂತಿರುಗಿ ಬಂದೆನ್.

ಭೈರವ – ಒಳ್ಗೆಲಸವೆಸಗಿದೆಯ್!
ನೀನಿಂತು ಕೆಲವೊಳ್ತು ಅದೃಶ್ಯನಾಗಿಯೆ ಇರು! –
ಹೋಗಿ ಗುಹೆಯೊಳಗಿಂದ ಚಿಂದಿಗಳ ತಾ ಇಲ್ಲಿ.
ಆ ಕಳ್ಳರನ್ ಪಿಡಿಯೆ ಒಂದುಪಾಯಂ ಮಾಳ್ಪೆನ್.

ಕಿನ್ನರ – ಅಪ್ಪಣೆ! [ಹೋಗುತ್ತಾನೆ]

ಭೈರವ – ಪಿಶಾಚ! ಹುಟ್ಟು ಪಿಶಾಚ! ಏಗೈದರೇನಂತೆ
ಡೊಂಕು ತಿದ್ದುವುದಿಲ್ಲ. ನಾನೆನಿತು ಯತ್ನಿಸಿದೆ
ಸನ್ಮಾರ್ಗಕವನನ್ ಎಳೆತರಲೆಂದು. ನೀರಿನೊಳು
ಹೋಮಗೈದಂತಾಯ್ತು ನನ್ನಾ ಪ್ರಯತ್ನಂ.
ಕಾಲ ಹೋದಂತೆಲ್ಲ ಕುರೂಪಿಯಾಗುತ್ತಿಹನ್.
ದೇಹದಂತೆಯೆ ಮನಂ ವಿಕಾರಗೊಳುತಿಹುದು!
ದುರುಳರೈತರ್ಕೆ! ಒರಲಿಸುವೆನವರನ್!
[ಕಿನ್ನರನು ಮಿರುಗುವ ಪೀತಾಂಬರಗಳನ್ನು ಹೊತ್ತು ತರುತ್ತಾನೆ.]
ಈ ಎಡೆಯೆ ಜೋಲಾಡುವಂತೆ ಸಾಲಾಗಿ
ಅವುಗಳನ್ ತೂಗಲಿಡು. [ಹಾಗೆಯೆ ಮಾಡುತ್ತಾನೆ.]
[ಭೈರವನಾಯಕನೂ ಕಿನ್ನರನೂ ಅಡಗುತ್ತಾರೆ. ಶನಿಯ, ಬೀಮಣ, ತ್ರಿಶಂಕು ಕೆಸರಾದ ಒದ್ದೆಬಟ್ಟೆಗಳಲ್ಲಿ ಬರುತ್ತಾರೆ.]

ಶನಿಯ – ಮೆಲ್ಲಗೆ, ಮೆಲ್ಲಗೆ ಹೆಜ್ಜೆಯಿಡಿ! ಆ ಮುದಿಗೂಬೆಗೆ ಹೆಜ್ಜೆ ಸಪ್ಪುಳ ಎಲ್ಲಿಯಾದರು ಕೇಳಿಸೀತು! ನಾವೀಗ ಅವನ ಗುಹೆಯ ಬಳಿಯಲ್ಲಿಹೆವು.

ಬೀಮಣ – ರಾಕ್ಷಸಾ, ನಿನ್ನ ಕಿನ್ನರ ಮಾಡಿದ ಕೆಲಸ ನೋಡಿದೆಯಾ! ‘ಅವನು ಬಹು ಸಾಧು ಪ್ರಾಣಿ, ಅವನಿಂದ ತೊಂದರೆ ಏನೂ ಆಗುವುದಿಲ್ಲ’ ಎಂದೊದರಿದೆಯಲ್ಲಾ! ಈಗ ನಮ್ಮ ಗತಿ ಏನಾಗಿದೆ ನೋಡು! ನೋಡೋ, ಮೂರ್ಖ! ನನಗೆ ಸಿಟ್ಟು ಬಂದುದೆ ಆದರೆ ನಿನ್ನ – (ಹಲ್ಲು ಕಡಿದು ಶನಿಯನ್ನು ನೋಡುತ್ತಾನೆ.)

ತ್ರಿಶಂಕು – ಗತಿ ಪೂರೈಸಿತೆಂದೆ ತಿಳಿದುಕೊ!

ಶನಿಯ – ದಮ್ಮಯ್ಯ, ನನ್ನಲ್ಲಿ ಕೃಪೆದೋರಿ ಸುಮ್ಮನಿರು.
ಮುಂದೆ ನಿನಗೊದಗಿಬಹ ಸೊಗದಿದಿರು ಈ ಎಡರು
ಹುಲ್ಲಿಗೆಣೆ! – ಮೆಲ್ಲಗೆ ಮಾತಾಡಿ! ಸದ್ದಿಲ್ಲ,
ನಟ್ಟಿರುಳಿನಂತಿಹುದು! ಮೆಲ್ಲಗೆ! ಮೆಲ್ಲಗೆ!

ತ್ರಿಶಂಕು[ಗಟ್ಟಿಯಾಗಿ] ಅಲ್ಲವೋ! ಎಲೋ ಹೈಲು ರಾಕ್ಷಸ, ನಮ್ಮ ಹೆಂಡದ ಬುರುಡೆಗಳೆಲ್ಲ ಹೋದುವಲ್ಲೋ ಆ ಉಸುಬಿನಲಿ! ಅದಕ್ಕೇನು ಹೇಳುವೆಯೋ ಈಗ?

ಬೀಮಣ – ನೀನೆಂಥ ರಾಕ್ಷಸವೋ! ನಿನ್ನಿಂದ ಮಾನಹಾನಿ, ಧನಹಾನಿ, ಹೆಂಡದ ಹಾನಿ, ಕಡೆಗೆ ಪ್ರಾಣಹಾನಿ – ಅಂತೂ ಕಡೆಗೂ ನಿನ್ನಿಂದ ನಮಗೆ ಸುಖವಿಲ್ಲವೆಂದೇ ಕಾಣುತ್ತದೆ.

ತ್ರಿಶಂಕು – ಮೈತುಂಬ ಕೆಸರಾದರೂ ‘ಏನೋ! ಹೋಗಲಿ!’ ಎನ್ನಬಹುದು. ಹೆಂಡದ ಬುರುಡೆಗಳು ಹೋಗಿದ್ದು?

ಬೀಮಣ – ಆದದ್ದಾಗಲಿ, ಹೋಗಿ ಆ ಹೆಂಡದ ಬುರುಡೆಗಳನ್ನು ಸಂರಕ್ಷಿಸಿಯೇ ಬಿಡುತ್ತೇನೆ!! – ಕೆಸರಿನಲಿ ಕಿವಿಯಲ್ಲದಿದ್ದರೆ ತಲೆ ಬೇಕಾದರೂ ಮುಚ್ಚಿ ಹೋಗಲಿ! ನೋಡಿಯೇ ಬಿಡುತ್ತೇನೆ! [ಹೋಗಲುದ್ಯುಕ್ತನಾಗುತ್ತಾನೆ.]

ಶನಿಯ – ದೇವತೆಯೆ, ದಯಮಾಡಿ ಸುಮ್ಮನಿರು! ನೊಡಲ್ಲಿ,
ಅದೆ ಗುಹೆಯ ಬಾಯಿ. ಸದ್ದುಮಾಡದೆ ಒಳಗೆ
ಹೋಗೋಣ! ನಾನು ಹೇಳಿದಂತೆ ಮಾಡಿಬಿಡು.
ಆಮೇಲೆ, ನಿನ್ನದೀ ದ್ವೀಪ ಚಕ್ರಾಧಿಪತ್ಯಂ!!
ಈ ಶನಿಯ ನಿನಗೆ ಕಿಂಕರನಾಗಿ ನಿಲ್ಲುವನ್.

ಬೀಮಣ(ತತ್ತರಿಸುತ್ತ) ಎಲ್ಲಿ, ಸ್ವಲ್ಪ ಕೈಹಿಡಿದುಕೊ. ಮೈ ನಡುಗುತ್ತಿದೆ, ಸಿಟ್ಟಿನಿಂದ! ತಲೆ ತಿರುಗುತ್ತಿದೆ, ಕೋಪದಿಂದ!

ತ್ರಿಶಂಕು(ದುಕೂಲಗಳನ್ನು ಕಂಡು ಅಟ್ಟಹಾಸದಿಂದ) ಬೀಮಣ ಚಕ್ರವರ್ತಿ! ಬೀಮಣ ಸಾರ್ವಭೌಮ! ಬೀಮಣ ಮಹಾಪ್ರಭೋ! ಇಲ್ಲಿ ನೋಡು! ಇಲ್ಲಿ ನೋಡು! ನಿನಗೆ ಬೇಕಾದ ರಾಜದುಕೂಲಗಳು!

ಶನಿಯ – ಥೂ ಮೂರ್ಖ! ಕೂಗಬೇಡ! ಆ ಚಿಂದಿಗಳು ನಮಗೇಕೆ ಅಲ್ಲಿರಲಿ ಬಿಡು!

ತ್ರಿಶಂಕು[ಅಣಕು ನೀಳ್ದನಿಯಿಂದ] ಎಲೆ ಎಲೆ ರಾಕ್ಷಸಾ! ಮೋಸಮಾಡುವೆಯೋ? ನಮಗಿಲ್ಲವೇ ಹರಕುಬಟ್ಟೆಗಳ ಪರಿಚಯ? – ಇಲ್ಲಿ ನೋಡು! – ಇಲ್ಲಿ ನೋಡು, ಬೀಮಣ ಚಕ್ರವರ್ತಿ!
[ನಿಲುವಂಗಿಯನ್ನು ಹೊದೆದುಕೊಳ್ಳುತ್ತಾನೆ.]

ಬೀಮಣ – ತ್ರಿಶಂಕು, ಒಳ್ಳೆಯ ಮಾತಿನಲ್ಲಿ ಅದನ್ನು ಅಲ್ಲಿಯೆ ಇಡು. ನನಗೆ ಸೇರಬೇಕಾದ್ದು ಅದು.

ತ್ರಿಶಂಕು – ಆಗಲಿ ತಾವೇ ಧರಿಸಿಕೊಳ್ಳಿ! [ಅಲ್ಲಿ ಹಾಕುತ್ತಾನೆ. ಬೀಮಣ ಅದನ್ನು ಎತ್ತಿಕೊಳ್ಳುತ್ತಾನೆ. ತೊಡಲು ಎಳಸುತ್ತಾನೆ.]

ಶನಿಯ – ನಿನ್ನ ಮನೆ ಹಾಳಾಗ! ಆ ಚಿಂದಿಗಳಿಗೇಕಿಷ್ಟು ಪರಿದಾಟ! – ಹೋಗಿ, ಮೊದಲು ಕೊಲೆ ಮಾಡೋಣ! ಅವನೆಲ್ಲಿಯಾದರು ಎದ್ದನೆಂದರೆ, ನೋಡು, ತಲೆಯಿಂದ ಕಾಲವರೆಗೂ, ನಮ್ಮ ಚಮಡ ಸುಲಿಯುತ್ತಾನೆ!

ಬೀಮಣ – ಸುಮ್ಮನಿರೋ ರಾಕ್ಷಸಾ! ಸುಮ್ಮನಿರೋ ಸಾಕು! – ನಿನ್ನಾಣೆ ತ್ರಿಶಂಕು. ಇದು ನನ್ನ ನಿಲುವಂಗಿಯಲ್ಲವೇನೋ? – ಓಹೋ ಹಾಕಿಕೊಂಡಿದ್ದು ತಲೆಕೆಳಗಾಯಿತು! – ಓಹೋ ಹಿಂದುಮುಂದಾಯಿತು! – ಎಲೇ ನಿಲುವಂಗಿ, ಬಾಳಬೇಕೆಂದು ಆಸೆಯಿದ್ದರೆ ತಂಟೆಕೊಡಬೇಡ!

ತ್ರಿಶಂಕು – ಮಾಡಿದರೆ, ಹಾಗೆ ಮಾಡಬೇಕು! ಒರಲೆ ತಿಂದಂತೆ ಸ್ವಲ್ಪ ಸ್ವಲ್ಪವಾಗಿ ಜರಿಯ ಜರಿಯನ್ನೆಲ್ಲ ತಿನ್ನಬೇಕು!

ಬೀಮಣ – ಭಲಾ! ನೀನು ಬಲು ಒಳ್ಳೆಯ ವಿದೂಷಕ! ನಾನು ರಾಜನಾಗಿರುವಾಗ ವಿದೂಷಕನಿಗೆ ಕೊರತೆಯೇನು? ತೆಗೆದುಕೋ! ನಿನಗೆ ಈ ರುಮಾಲು ಇನಾಮು ‘ಒರಲೆ ತಿಂದಂತೆ’ ಅದೆಂತಹ ಉಪಮಾಣ! ಅಬ್ಬಬ್ಬ! ಇದನ್ನು ಕೇಳಿದರೆ ಕಬ್ಬಿಗರು ಕೂಡ ತಬ್ಬಿಬ್ಬಾಗದೆ ಇರರು! ಅದಕ್ಕಾಗಿ ತೆಗೆದುಕೋ ಮತ್ತೊಂದು ಇನಾಮು!

ತ್ರಿಶಂಕು – ರಾಕ್ಷಸಾ, ಸುಮ್ನೆ ನಿಂತರಾಗದು! ಕೈಚುರುಕುಮಾಡಿ ಬಟ್ಟೆಗಳನೆಲ್ಲ ಮೂಟೆಕಟ್ಟು!

ಶನಿಯ – ದಮ್ಮಯ್ಯಾ ಮಾರಾಯ! ನಾವು ಹೀಗೆ ತಡಮಾಡಿದರಾಗದು. ಅವನೆಲ್ಲಿಯಾದರೂ ಎದ್ದನೆಂದರೆ ನಾವೆಲ್ಲ ಮಂಗಗಳೋ, ನರಿಗಳೇ, ಆಗಿಹೋಗುತ್ತೇವೆ.

ಬೀಮಣ – ಹುಂ! ರಾಕ್ಷಸಾ, ಕೈಹಾಕು! ಮತ್ತೇನು ನೋಡುವುದು! ಇವುಗಳನ್ನೆಲ್ಲ ನಾನು ಹೆಂಡವನ್ನಿಟ್ಟಿರುವ ಜಾಗಕ್ಕೆ ತೆಗೆದುಕೊಂಡು ಹೋಗು! ಹೋಗದೆ ಇದ್ದರೆ, ನನ್ನ ರಾಜ್ಯದಿಂದ ನಿನ್ನನ್ನು ಒದ್ದು ಓಡಿಸಿಬಿಡುತ್ತೇನೆ! ಹುಂ ಎಚ್ಚರಿಕೆ! – ಹೊರಡು, ಕತ್ತೆ; ಇದನ್ನೂ ಹೊತ್ತುಕೊ!
[ಒಂದು ಬಟ್ಟೆ ಹೇರುತ್ತಾನೆ.]

ತ್ರಿಶಂಕು[ಮತ್ತೊಂದನ್ನು ತೆಗೆದು ತೋರಿಸಿ] ಇದೂ! ಇದೂ!

ಬೀಮಣ – ಹುಂ, ಇದೂ ಒಂದಿರಲಿ! ನಿಚ್ಚ ಉಡುವುದಕ್ಕೆ!
[ವಿಕಾರಾಕೃತಿಗಳು ಅಬ್ಬರಿಸುತ್ತಾ ನುಗ್ಗಿಬಂದು ಅವರನ್ನು ಅಟ್ಟುತ್ತವೆ. ಕಿನ್ನರನೂ ಭೈರವನೂ ಅವುಗಳನ್ನೂಛೂಬಿಡುತ್ತ ಹಿಂದೆಯೇ ಓಡುತ್ತಾರೆ.]

ಭೈರವ – ಹಿಡಿ! ಹಿಡಿ!! ಮೊದಲು ಹಿಡಿ! ಆ ಡೊಳ್ಳು ಹೊಟ್ಟೆಯ.

ಕಿನ್ನರ –  ಹಿಡಿ! ಹಿಡಿ!! ಆ ದಾಂಡಿಗನ!

ಭೈರವ –  ಹಿಡಿ! ಹಿಡಿ!! ಆ ಗೂನುಬೆನ್ನಿನ ಗೊಗ್ಗನ!

ಕಿನ್ನರ –  ಚುಚ್ಚು! ತಿವಿ!! ಕಡಿ! ಹಿಡಿ! ಕುಡಿ! [ಓಡುತ್ತಾರೆ.]

[ಒಳಗೆ ಗದ್ದಲ. ಒರಲುವಿಕೆ.]