[ಭೈರವನಾಯಕನ ಗುಹೆಯ ಮುಂಭಾಗ. ಮಂತ್ರಕವಚಧಾರಿಯಾದ ಭೈರವನಾಯಕನೂ ಕಿನ್ನರನೂ ಬರುತ್ತಾರೆ]

ಭೈರವ – ಈಗಳೆನಿಚ್ಚೆ ಮಾಗಿ ಹಣ್ಣಾಗುತಿದೆ:
ಒಂದಿನಿತೂ ಕುಂದದಿದೆ ನನ್ನ ಮಂತ್ರದ ಬಲಂ.
ನನ್ನ ಮಾಯೆಯ ದೇವತೆಗಳೆಲ್ಲ ತಪ್ಪದೆಯೆ
ಪೇಳ್ದಾಣತಿಯ ಪಾಲಿಸುತ್ತಿಹರ್. ಇಂದೆನಗೆ
ಬಿದಿಯೆ ಶರಣುಹೊಕ್ಕಂತಿದೆ. ಪೊಳ್ತೆನಿತು?

ಕಿನ್ನರ – ನೇಸರಾಗಳೆ ತನ್ನ ಹೊಂದೇರನಸ್ತಗಿರಿ
ಮಸ್ತಕದೊಳಿಳಿಸುತಿರ್ಪನ್, ಜೀಯ. ತಾವರೆ
ತನ್ನ ಪೂವೆಲೆವನೆಯ ಬಾಗಿಲನ್ ಮುಚ್ಚುತಿದೆ
ದುಮ್ಮನದಿ. ಕತ್ತಲೆಯ ಮೊತ್ತಗಳ ಕರಿನೆರಳ್
ಮೂಡುದೆಸೆಯಿಂ ಮೆಲ್ಲಮೆಲ್ಲನೆ ತಿರೆಗಿಳಿದು
ಹಬ್ಬುತಿದೆ. ಇನಿತರೊಳ್ ನಮ್ಮ ಕಜ್ಜಂ ಕೊನೆಯ
ಕಾಣವೇಳ್ಕುಂ ಎಂದು ಪೊಳ್ತಡೆಯೊಳಾಡಿರ್ದೆ.

ಭೈರವ – ಅಹುದಹುದು, ಕಿನ್ನರಾ, ಉಸುರಿರ್ದೆನ್. ಆಗಳ್
ಬಿರುಗಾಳಿಯನೆಬ್ಬಿಸಿದ ಬೆಳಗುವೊಳ್ತಿನೊಳ್
ಅಂತುಟಾಲೋಚಿಸಿರ್ದೆ. ಅದಂತಿರ್ಕೆ, ಕಿನ್ನರಾ;
ಅರಸನೂ ಅನುಯಾಯಿಗಳೂ ಎಲ್ಲಿರುವರೀಗಳ್?

ಕಿನ್ನರ – ನೀನವರನ್ ಅಗಲಿದಾಗಳ್ ಎಂತೆಸೆಗೆ ಬೆಸಸಿದೆಯೊ
ಅಂತೆ ಅನಿಬರನ್ ತರುಬಿ ಕೂಡಿರ್ಪೆನ್.
ಈ ಗುಹೆಗೆ ಬಳಿಯಿರ್ಪ ಮಾಮರದ ತೋಪಿನಲಿ
ಅವರೆಲ್ಲ ಸೆರೆಯಾಗಿ ಬಿದ್ದಿಹರ್. ಅಲ್ಲಿಂದ
ನಿನ್ನಪ್ಪಣೆಯ ಹೊರತು ಕದಲುವಂತಿಲ್ಲವರ್.
ಅರಸನುಂ, ಮೇಣವನ ತಮ್ಮನುಂ, ಮೇಣ್ ನಿನ್ನ
ತಮ್ಮನುಂ ಪುರ್ಚೇರ್ದು ಕುಳಿತಿಹರ್. ಸಜ್ಜನನ್‌
ಜಯದೇವನ್ ಅವರಿಗಾಗಳುತಿಹನು: ನನ್ನೊಡೆಯ,
ಮಾಗಿಯಲಿ ಮರದೆಲೆಗಳಿಂ ಪನಿಗಳುದುರ್ವಂತೆ,
ಬಿಳಲು ಬಿಳ್ದವನ ನೆರೆಗಡ್ಡದಿಂ ಕಂಬನಿಗಳ್
ಎಡೆಬಿಡದೆ ಸೋರ್ದಪವು! – ನಿನ್ನ ಮಾಯೆಗೆ ಸಿಲ್ಕಿ
ಅವರೆಲ್ಲರುಂ ನೋವಿನಲಿ ನರಳುತಿರ್ಪರ್.
ನೀನು ನೋಡಿದೆಯಾದರೆದೆಗರಗಿ ಪೋಗುವಯ್‌!

ಭೈರವ – ಎದೆಗರಗುವಂತಿರ್ಪರೇಂ?

ಕಿನ್ನರ – ನಾನು ಮಾನವನಲ್ಲ;
ಆದೊಡಂ ಕರಗಿದುದು ನನ್ನೆದೆ!

ಭೈರವ – ಕಿನ್ನರಾ,
ಕರಗಿದಪುದೆನ್ನೆರ್ದೆಯುಂ. ಗಾಳಿಯಾಗಿಹ ನೀನೆ
ಮರುಗಿದೊಡೆ ಮನುಜನಾಗಿಹ ನಾನು, ನನ್ನಂತೆ
ಇರ್ಪ ಮನುಜರಿಗಾಗಿ ಮರುಗದಿರ್ಪೆನೆ, ಹೇಳು!
ಅವರೆನಗೆ ನಿರ್ನೆರಂ ಪೆರ್ಬೇನೆಗೈದರ್.
ಆದೊಡಂ ನಾನವರ ದಂಡಿಸೆನ್! ಪೀಡಿಸೆನ್!
ಮುಯ್ಗೆ ಮುಯ್ಯಂ ತೀರ್ಚಿ ಕೊಳ್ವುದದು ಜಸಮಲ್ತು!
ದಂಡನೆ ದೊಡ್ಡವರ ಕಾರ್ಯಮಾಗದು; ಕ್ಷಮೆಯೆ
ಪುಣ್ಯಾತ್ಮರಿಗೆ ಪಿರಿಯ ಪೊಂದೊಡಿಗೆ. ಬಳಲಿಹರ್,
ಅವರೆಲ್ಲ ನೊಂದಿಹರ್, ಬಗೆಯಲ್ಲಿ ಬೆಂದಿಹರ್.
ಪೋಗವರ ಸೆರೆಬಿಡಿಸು! ಮುಸುಗಿರ್ಪ ಮಾಯೆಯನ್
ಬೇಗನೋಸರಿಸಿ ಇಲ್ಲಿಗವರನ್ ಕರೆದು ತಾ.

ಕಿನ್ನರ – ಅಪ್ಪಣೆ! ಬೇಗನೆಯೆ ಕರೆತರ್ಪೆ. (ಹೋಗುತ್ತಾನೆ)
ಮಲೆಗಳಿರ,

ಭೈರವ – ಮರಗಳಿರ, ತೊರೆಗಳಿರ, ಕೆರೆಗಳಿರ, ಓ ಬನದ
ಅಭಿಮಾನದೇವತೆಗಳಿರ, ಬುವಿಯೊಳ್ ಆಗಸದೊಳ್
ಆವಗಂ ಮಳೆಬಿಲ್ಲೆರಂಕೆಗಳ ಮೇಲವೆವ
ಯಕ್ಷ ಕಿನ್ನರ ಕಿಂಪುರುಷರಿರಾ, ನಿಮ್ಮಗಳ
ಬಲ್ಮೆಯಿಂ, ನಿಮ್ಮೆಲ್ಲರೊಲ್ಮೆಯಿಂ ನಾನೆನಿತೊ
ಗೆಯ್ಯೆಗಳನೆಸಗಿದೆನ್: ನೇಸರಿಂದುಗಳ
ಗಮನವನ್ ತಡೆದಿಹನ್, ಪಗಲೊಲ್ ಇರುಳಂ ಕವಿಸಿ
ಕಾಲವನೆ ತಲೆಕೆಳಗು ಮಾಡಿದೆನ್. ಅಚಲಗಳ
ಕಂಪಿಸುವ ಬಿರುಗಾಳಿಗಳನೆಬ್ಬಿಸಿದೆ. ಗುಡುಗು
ಮಿಂಚುಗಳನ್ ಎನ್ನಿಚ್ಚೆಯಂದದೊಳ್ ಕುಣಿಸಿದೆನ್.
ನನ್ನ ಮಂತ್ರದ ಬಲದೊಳ್ ಅಳಿದವರ್ ಸೂಡಿನಿಂ-
ದೆಚ್ಚತ್ತು ಬದುಕಿ ಹಿಂದಿರುಗಿದರ್. ಆದೊಡೆ –
ಅದೊಡಿಂದಿಂಗೆ ಸಾಲ್ಗುಂ! ಇಂದು ನಿಮ್ಮೆಲ್ಲರನ್
ನಮಿಸಿ ಬೀಳ್ಕೊಳ್ಳುವೆನ್! ನನ್ನ ಮಂತ್ರವನಿಂದು
ತೊರೆಯುವೆನ್! ಮಂತ್ರದಂಗಿಯ ಹರಿದು ಬಿಸುಡುವೆನ್!
ನನ್ನ ಬಯಕೆಯ ಕಜ್ಜಮಿಂದು ಕೊನೆಗಂಡಿಹುದು.
ಮಂತ್ರದೀ ಕೋಲನ್ ಒಡೆದು ಪುಡಿಪುಡಿ ಮಾಡಿ
ಮಣ್ಣಿನೊಳ್ ಮಣ್ಣಾಗಿ ಮಾಡುವೆನ್! ಆ ನನ್ನ
ತಂತ್ರಶಾಸ್ತ್ರವನೆಲ್ಲ ಕಡಲಿನಲಿ ಮುಳುಗಿಪೆನ್,
‘ಕಡಲಿನ ಕಾಣದ ಪಾತಾಳದಲಿ’ ಮುಳುಗಿಪೆನ್!
[ಗಾನ ಕೇಳಿಸುತ್ತದೆ. ಕಿನರ ಬರುತ್ತಾನೆ. ಅವನ ಹಿಂದೆ ಮಂತ್ರಮುಗ್ಧರಾಗಿ ರಣನಾಯಕ, ಜಯದೇವ, ರಂಗನಾಯಕ, ರುದ್ರನಾಯಕ ಎಲ್ಲ ಬರುತ್ತಾರೆ. ಭೈರವನಾಯಕನು ನೆಲದ ಮೇಲೆ ಎಳೆದ ಗೆರೆಯ ಒಳಗೆ ಹೋಗಿ ನಿಲ್ಲುತ್ತಾರೆ]
ಮಂತ್ರ ಮುಗ್ಧರ್ ಇವರ್ ಯಂತ್ರಗಳಂತಿಹರ್!
ನಿಮ್ಮ ಮೆದುಳನ್ ಮಾಯೆ ಮುಸುಗಿಹುದು ಮರ್ಬಿನಿಂ!
ತಣ್ಣೆಲರ ತೀಟದಿಂದೈತರ್ಪ ಶಾಂತಿಯಲಿ
ನಿಮ್ಮೀ ಮರುಳ್ತನಂ ತವಿದು ಪೋಗುಗೆ! –
[ಶಿವಾ! ಶಿವಾ! ಶಿವಾ! ಎಂದು ಮರುಳುತನವನ್ನು ನಿವಾರಿಸುವಂತೆ ಮಂತ್ರೋಚ್ಛಾರಣೆ ಮಾಡುತ್ತಾನೆ.]
ಪುಣ್ಯಾತ್ಮ ಜಯದೇವ, ಧನ್ಯಾತ್ಮ ಜಯದೇವ,
ನಿನ್ನ ಬೇನೆಯ ಬೇಗೆಗೆನ್ನ ಕಣ್ಗಳ್ ಪನಿಗಳಂ
ಕರೆಯುತಿವೆ! – ಮಾಯೆ ತುಂಬಿದ ಮಬ್ಬು ತೊಲಗುತಿದೆ,
ಮೂಡುವೆಟ್ಟಿನ ಮೇಲೆ ಮುನ್ನೇಸರೇರುತಿರೆ
ಮಿಸುನಿವೆಳಗಂ ಪೆರುವ ಮುಂಬೆಳಕಿಗಾ ಕವಿದ
ಕಳ್ತಲೆಯ ಮೊತ್ತಂ ಕೆಲಸಾರುವಂದದಲಿ
ಮಾಯೆಯೊಯ್ಯನೆ ನಿಮ್ಮ ಬಗೆಯಿಂದ ಜಾರುತಿದೆ!
ಮೂಡುತಿದೆ ಹೊಳಹು. ಕದಡು ಬಗೆ ತಿಳಿಯಾಗುತ್ತಿದೆ!
ಬಿಗಿದ ಮಂತ್ರದ ಕಟ್ಟು ಸಡಿಲುತಿದೆ. – ಜಯದೇವ,
ನೀನೆನ್ನ ಪೊರೆದವನ್; ನೀನೆನ್ನ ರಕ್ಷಕನ್!
ನಿನಗಿದೋ ನಮಿಸುವೆನ್; ನಡೆಯಲ್ಲಿ, ನುಡಿಯಲ್ಲಿ
ನಿನಗಿದೊ ವಂದನೆಯನರ್ಪಿನ್ –

ರಾಜೇಂದ್ರ,
ನನ್ನನೂ ನನ್ನ ಮಗಳನೂ ನೀನು ಬಹುವಾಗಿ
ಪೀಡಿಸಿದೆ. ನಿನ್ನ ಸೋದರ ರಂಗನಾಯಕನು
ನಿನಗೆ ನೆರವಾದನು. – ಈಗಳಾದರು ನಿನ್ನ
ಎದೆ ಬೇಯುವುದೆ, ರಂಗನಾಯಕ? – ಸೋದರನೆ,
ಒಂದೆ ಬಸಿರಿಂ ಬಂದ ನನ್ನ ಒಡಹುಟ್ಟಿದನೆ,
ತಮ್ಮ, ರುದ್ರನಾಯಕನೆ, ರಾಜ್ಯಾಭಿಲಾಷೆಯಿಂ
ಸೋದರತೆಯನೆ ಮರೆತು, ಧರ್ಮವನೆ ತೊರೆದು,
ಅನ್ಯಾಯವೆಂಬುದನು ಲೆಕ್ಕಿಸದೆ ನೀನೆನಗೆ
ಅಪರಾಧವನ್ನೆಸಗಿ ಸಂತಸದಿ ಬಾಳುತಿಹೆ! –
ರಂಗನಾಯಕನೊಡನೆ ಒಳಸಂಚು ಮಾಡಿ
ದೊರೆಯ ಕೊಲೆಗಾರನಾಗುತಲಿದ್ದೆ; ನಾನದನ್
ತಪ್ಪಿಸಿದೆ. ನಿನ್ನ ಅಪರಾಧಗಳನೆಲ್ಲವನು
ಮನಿಸಿಹೆ! – ನಿಮಗೀಗ ಕದಡುಬಗೆ ತಿಳಿಯಾಗಿ
ಬರುತಿಹುದು. ಮುನ್ನಿನೊಲೆ ಚಿತ್ತದೊಳ್ ಸ್ವಾತಂತ್ರ್ಯ
ಮೊಳೆಯುತಿದೆ. ನಾನಾರು ಎಂಬ ನನ್ನಿಯು ನಿಮ್ಮ
ಅರಿವಿಗಿನ್ನುಂ ಮಿಂಚದಿದೆ. ನನ್ನನೀ ರೂಪಿನಲಿ
ನೀವರಿಯಲಾರಿರಿ. – ಕಿನ್ನರಾ, ಹೋಗು, ನಡೆ,
ನನ್ನಾ ಮಕುಟ ಖಡ್ಗಂಗಳಂ ಬೇಗ ತಾ. [ಕಿನ್ನರನ ನಿಷ್ಕ್ರಮಣ]
ಕೆಳದಿಯೊಳು ಅಂದು ನಾನಿರ್ದಂತೆ ವೇಷಮಂ
ಧರಿಸುವೆನ್, ಆಗ ನಿಮಗರಿವಾಗುವುದು! – ಕಿನ್ನರಾ,
ಬೇಗ ಬಾ: ನಿನ್ನ ಬಿಡುಗಡೆ ಬಳಿಯನೆಯ್ದುತಿದೆ.
[ಕಿನ್ನರನು ಉಡುಪನ್ನು ತಂದು ಭೈರವನಾಯಕನಿಗೆ ಹಾಡುತ್ತಾ ತೊಡಿಸುತ್ತಾನೆ]

ಕಿನ್ನರ – ದುಂಬಿಯು ಬಂಡನು ಹೀರುವ ಎಡೆಯೊಳು
ನಾ ಮಧುಪಾನವ ಮಾಡುವೆನು;
ತೇಲುವ ತಾವರೆ ಹೂವಿನ ಹೊಡೆಯೊಳು
ಪವಡಿಸೆ ಸಜ್ಜೆಯ ಹೂಡುವೆನು.
ನೇಸರು ಮುಳುಗಲು ಮಲಗುವೆನಲ್ಲಿ;
ಗೂಬೆಯು ಕೂಗಲು ಹುದುಗುವೆನಲ್ಲಿ;
ಕತ್ತಲೆ ಮುತ್ತಲು ಪವಡಿಪೆನಲಿ;
ಕೌಮುದಿ ರಂಜಿಸೆ ನಲಿಯುವೆನಲ್ಲಿ!
ಮಳೆಬಿಲ್ಗರಿಗಳ ರೆಕ್ಕೆಯ ತಳೆದಿಹ
ಮೇಘವಿಮಾನವನೇರಿ
ಗಾಳಿಯ ಬಟ್ಟೆಯೊಳಲೆಯುವೆ ನಲಿಯುವೆ
ಮುಕ್ತಿಯ ಸೊದೆಯನು ಹೀರಿ!

ಭೈರವ – ನೀನೆನ್ನ ನಚ್ಚಿನ ಡಿಂಗರಿಗನ್, ಕಿನ್ನರಾ!
ನಿನ್ನನಗಲಲ್ ಮನಂ ಬಾರದಿದೆ – ಬಿಡು, ಅಂತಿರ್ಕೆ –
ಹೋಗು, ನಡೆ; ಶನಿಯ, ಬೀಮಣ, ತ್ರಿಶಂಕುಗಳನ್
ಈಯೆಡೆಗೆ ಕರೆದು ತಾ!

ಕಿನ್ನರ – ಎಮೆಯಕ್ಕುವುದರೊಳೇ
ಅವರನಿಲ್ಲಿಗೆ ತರುಬುತೆಳ್ಬುವೆನ್! [ಹೊರಡುತ್ತಾನೆ]

ಜಯದೇವ – ಮಾಯೆಗಿದು
ತವರುಮನೆಯಾದಂತೆ ತೋರುತಿದೆ. ಶಿವಶಿವಾ!
ಪಾರುಮಾಡೆಮ್ಮನೀ ಮಾಯಾದ್ವೀಪದಿಂ!

ಭೈರವ – ನಗರದೊಡೆಯನೆ, ನೋಡು; ಕೆಳದಿಯ ನಾಯಕನ್,
ಭೈರವನಾಯಕನ್ ನಿನ್ನೆದುರ್ ಜೀವಸಹಿತಂ
ನಿಂತು ಮಾತಾಡುತಿರ್ಪಂ. ರಾಜೇಂದ್ರರ, ನಿನಗುಂ
ಮೇಣ್ ನಿನ್ನ ಪರಿವಾರದವರಿಗುಂ ಸ್ವಾಗತಂ
ಪೇಳ್ದಪೆನ್!

ರಣ – ನೀನು ಭೈರವನಾಯಕನೆ ಅಹುದೊ
ಅಲ್ಲವೋ ನಾನರಿಯೆ. ನನ್ನನು ಮರುಳ್ಗೆಯ್ಯೆ
ಭೈರವನ ವೇಷಮಂ ತಳೆದ ಆವ ಕೈತವದ
ಬೆಂತರವೊ ನಾನರಿಯೆ! ಬಾಡು ನೆತ್ತರ್ಗಳಿಂ
ಸಮೆದಿರ್ಪ, ದೇಹದೊಲ್ ತೋರುತಿಹೆ ನೀನು!
ಅಲ್ಲದೆಯೆ, ನಿನ್ನ ನೋಡಿದಮೇಲೆ, ಕದಡಿರ್ದ
ನನ್ನ ಬಗೆ ತಿಳಿಯಾಗುತಿದೆ. ನನ್ನನ್ ಅಚ್ಚರಿ
ಆವರಿಸುತಿಹುದು! ಭೈರವನಾಯಕನೆ, ಇದೆಕೊ
ನಿನ್ನ ನಾಡನು ನಿನಗೆ ಹಿಂದಕೊಪ್ಪಿಸಿದೆ;
ನನ್ನ ಮೇಲೆರಕಮಂ ತೋರಿ ಸ್ವೀಕರಿಸದನ್!
ಮರೆತುಬಿಡು ಮುನ್ನ ನಾಂ ಗೈದ ಅಪರಾಧಮಂ!
ಮನ್ನಿಸಯ್, ಕೈಮುಗಿದು ಬೇಡುವೆನ್. – ಆದೊಡಂ
ಭೈರವನಾಯಕನ್ ಬದುಕಿರ್ಪನೆಂತು?
ಎಂತಿಲ್ಲಿಗೈತಂದನ್ ಅರಿಯಲಾಸಿಪೆನ್.

ಭೈರವ – ಮೊತ್ತಮೊದಲ್, ಪುಣ್ಯಾತ್ಮ ಜಯದೇವ, ಅಳವಿಯನೆ
ಅರಿಯದಿಹ ನಿನ್ನ ಮುದಿತನದ ನನ್ನಿಯನಪ್ಪಿ
ಪೂಜಿಪೆನ್.

ಜಯದೇವ – ನೀನು ಭೈರವನಹುದೊ? ಅಲ್ಲವೋ?
ದೇವ, ನಾನೆಂತುಟರಿವೆನ್.

ಭೈರವ – ನಿಮಗಿನ್ನುಂ ಈ ನೆಲದ
ಅದ್ಭುತಂ ತೊಲಗಿಲ್ಲ. ಕಣ್ಣಾರೆ ಕಂಡರೂ
ನಂಬುಗೆಯೆ ನಡುಗುತಿದೆ. – ಮಿತ್ರರಿರ, ನಿಮಗೆಲ್ಲ
ಸ್ವಾಗತಂ! ಇನ್ನೆವರಮೀಕ್ಷಿಸಿದ ಮಾಯೆಯಂ
ಮರೆತುಬಿಡಿ. ಶಾಂತಿಯಂ ಪೊರ್ದ್ದಿ. ನೀವೆನಗೆ
ಬಿರ್ದ್ದಿನವರ್. [ರುದ್ರ ರಂಗನಾಯಕರಿಗೆ]

ನಾಯಕರೆ, ನನಗೆ ಮನಬಂದಿರ್ದೊಡೆ
ರಾಜದ್ರೋಹಿಗಳಪ್ಪ ನಿಮ್ಮೀರ್ವರಂ ದೊರೆಯ
ಸಿಗ್ಗಿನಗ್ಗಿಗೆ ಬೇಳ್ವವೋಲೆಸಗುತಿರ್ದೆನ್.
ಆದೊಡೀ ಸಮಯದೊಳ್ ತರಮಲ್ತು ಕೀಳ್‌ಪಿಸುಣ್‌.

ರಂಗ[ಸ್ವಗತ] ಶನಿ ನುಡಿಯುತಿಹುದವನ ಬಾಯಲ್ಲಿ.

ಭೈರವ[ರಂಗನಾಯಕಗೆ] ಶನಿಯಲ್ಲ –
[ರುದ್ರಗೆ] ರುದ್ರನಾಯಕನೆ ನೀನೆಸಗಿದಪರಾಧಮಂ
ಕೋಟಿಯಂ ಮನ್ನಿಸಿಹೆ. ನನ್ನ ನಾಡಂ ನನಗೆ
ಮರಳಿ ನೀಡವೇಳ್ಕುಂ.

ರಣ – ನೀನು, ಕೆಳದಿಯ ಒಡೆಯ
ಭೈರವನಾಯಕನ್ ಅಹುದಾದೊಡೆ, ಸಂಶಯಂ
ಕೆಡುವಂತೆ ನಮಗೆಲ್ಲ ನಿನ್ನ ಕತೆಯಂ ತಿಳುಹು.
ಬಿರುಗಾಳಿಯೊಳ್ ಸಿಲ್ಕಿ, ಓಡೊಡೆದು, ಹೊಳೆಗಿಳಿದು,
ಎಂತೊ ದಡವನ್ ಸೇರ್ದ ನಮ್ಮನ್ ನೀನೆಂತರಿತೆ?
(ದುಃಖದಿಂದ)
ನನ್ನ ಮಗ! ನನ್ನ ಮಗ! – ಅಯ್ಯೊ ಶಿವನಾಯಕಾ! –
ನನ್ನ ಮಗನೆಂತು ಎಲ್ಲಿ ಹೋದನು ಹೇಳು!

ಭೈರವ – ರಾಜೇಂದ್ರ, ನಿನ್ನೊಡನೆ ಬೇಯುತಿದೆ ನನ್ನಾತ್ಮಮುಂ.

ರಣ – ಪೋದುದಿನ್ ಬಂದಪುದೆ? ನನಗಿನ್ನು ಬದುಕಿನಲಿ
ತಾಳ್ಮೆ ಎಂಬುವುದಿಲ್ಲ; ಶಾಂತಿ ಎಂಬುವುದಿಲ್ಲ.

ಭೈರವ – ಶಾಂತಿದೇವಿಯ ನೆರವ ನೀನಿನ್ನುಂ ಬಯಸಿಲ್ಲ
ಎಂದೆನ್ನ ಭಾವನೆ; ಬಯಸಿದರೆ ಬಳಿ ಬಹಳ್.
ಆ ದಿವ್ಯ ದೇವಿಯ ಕೃಪೆ ನನಗೆ ದೊರತಿಹುದು;
ತೃಪ್ತನಾಗಿರ್ಪೆನ್ ಅದರಿಂ!

ರಣ – ಏನು? ಮಗನಳಿವು
ತೃಪ್ತಿದಾಯಕವೆ?

ಭೈರವ – ನಿನ್ನದಕ್ಕಿರ್ಮಡಿ ನನ್ನಳಲ್!
ಮತ್ತಮಿನಿತಧಿಕತರಮೆಂದೊಡಂ ಎನಬಹುದು:
ಕಳೆದುಕೊಂಡಿರ್ಪೆನಾನಿಂದೆನ್ನ ನಚ್ಚು ಮಗಳಂ!
ನನಗಿರ್ದ ಒರ್ವಳೇ ಮುದ್ದು ಮಗಳಂ!

ರಣ – ಏನು ನಚ್ಚಿನ ಮಗಳೆ? – ಅವರಿರ್ವರುಂ ನನ್ನ
ನಗರ ಸಂಸ್ಥಾನದೊಳ್ ರಾಜರಾಣಿಯಾರಾಗಿ –
ಶಿವಶಿವಾ, ನನ್ನ ಕುವರನ ಗತಿಯೆ ನನಗೇಕೆ
ಬಾರದಿದೆ? ನಿನ್ನ ಮಗಳೆಂದು ನಿನ್ನನು ಬಿಟ್ಟು
ಅಗಲಿದಳ್?

ಭೈರವ – ಇಂದಿನಾ ಬಿರುಗಾಳಿಯಲಿ ಸಿಲ್ಕಿ
ಮಾಯವಾದಳು, ದೊರೆಯೆ! – ಇಂತೇಕೆ ಇವರೆಲ್ಲ
ಬೆರಗಾಗಿ ನನ್ನನೇ ದುರದುರನೆ ನೋಡುತಿಹರು?
ನನ್ನ ನುಡಿಗಳನಿವರು ನಂಬಲಾರದೆ, ಬರಿದೆ
ಸಂದೆಯದೊಳ್, ಅಚ್ಚರಿಯೊಳ್, ಓಲಾಡುತಿರ್ಪರ್.
ತಮ್ಮ ಕಣ್‌ಗಳ ತಾವೆ ನಂಬಲಾರರ್. ತಮ್ಮ
ನುಡಿಗಳಲಿ ತಮಗೆ ನಂಬುಗೆ ಸಡಿಲವಾಗುತಿದೆ. –
ಗೆಳೆಯರಿರ, ನೀವೆಂತು ಬಗೆದೊಡಂ ನಾನು ಆ
ಕೆಳದಿಯೊಡೆಯನೆ ಸಾಜಂ! ನೀವು ಹೊಳೆಯಲಿ ತೇಲಿ
ಬಿಟ್ಟು, ಬೀಳ್ಕೊಂಡ ಭೈರವನಾಯಕನೆ ನಾನು.
ಬಿದಿಯ ಮೈಮೆಯೊಳಾನು ಈ ದ್ವೀಪಕೈತಂದೆ;
ಮೇಣ್ ಇದರ ದೊರೆತನವ ಕೈಕೊಂಡೆ. ಸಾಕಿನ್ನು –
ಮೊತ್ತಮೊದಲೇಕೆ ನಿಮಗೆನ್ನ ಚರಿತೆಯನರುಹಿ
ಸಂತಸವನಾರಿಪುದು? ಎಲ್ಲರೂ ಇತ್ತ ಬನ್ನಿ:
ಈ ಗುಹೆಯೆ ನನ್ನ ರಾಜಾಲಯಂ! ಈಯೆಡೆಯೊಳ್
ನನ್ನ ನಚ್ಚಿನ ಪ್ರಜೆಗಳಿನಿತೊಳರ್! ನೀಮೆಮಗೆ
ನನ್ನ ನೆಲವಮಂ ಮರಳಿ ದಾನಗಯದಿರ್ಪಿರಿ.
ಬದಲಾಗಿ ನಿಮಗೊಂದು ಅಚ್ಚರಿಯ ತೋರುವೆನ್.
ನೀಮಿತ್ತ ನೆಲಕಿಂತಲೂ ಬೆಲೆಯೊಳಧಿಕತರ
ವಸ್ತುಗಳ ತೋರ್ದಪೆನ್: ಅತ್ತ ನೋಡಿಂ!
[ಗುಹಾದ್ವಾರ ತೆರೆಯುತ್ತದೆ. ಶಿವನಾಯಕನೂ ಗೌರಾಂಬೆಯೂ ಪಗಡೆಯಾಡುತ್ತಿರುತ್ತಾರೆ.]

ಗೌರಾಂಬೆ – ಸಟೆಯನಾಡದಿರು, ನನ್ನೆರೆಯ!

ಶಿವ – ಮನದನ್ನೆ,
ನೂರಾರು ನಾಡುಗಳಿಗಾದೊಡಂ ನಾನೊಂದು
ಪುಸಿಯನಾದರು ಆಡೆ.

ಗೌರಾಂಬೆ – ನಾಡುಗಳಿಗಾಗಿ
ನೀನೆನಿತು ಸುಳ್ಳಾಡಿದರು ನಾನು ಮನ್ನಿಸುವೆ!
ನೆತ್ತದಲಿ ಕೈತವವ ತೋರ್ದೊಡೆ ಸೈರಿಸೆನು!

ರಣ – ಇದೇನು? ಮಾಯೆಯೊ? ನಿಜವೊ? ನಿಜವಾದ ಪಕ್ಷದಲಿ
ಕುವರನೊರ್ವನನ್‌ ಇರ್ಮೆ ಪೆತ್ತವೋಲಾದಪುದು!

ರಂಗ – ಇಂದ್ರಜಾಲವ ಮೀರ್ದ ಗುರುತರ ಪವಾಡಮಿದು!

ಶಿವ(ತೆಕ್ಕನೆದ್ದು ಎಲ್ಲರನ್ನೂ ಬೆರಗುವಟ್ಟು ಕಂಡು)
ಹೊಳೆ ಅಗುರ್ವಾದೊಡಂ ದಯೆಯಿಂದ ತುಂಬಿಹುದು.
ಬರಿದೆ ನಾನದನ್ ಬೈದು ಶಪಿಸಿದೆನ್! [ತಂದೆಗೆ ನಮಿಸುತ್ತಾನೆ]

ರಣ – ನನ್ನೊಲ್ಮೆ ಒದಗಿಸುವ ಹರಕೆಗಳ ಸುರಿಮಳೆಯೆ
ನಿನ್ನ ಮೇಲಿಳಿಯಲಿ! ಮೇಲೇಳು, ಕಂದಾ,
ನೀನೆಂತು ಬದುಕಿ ಬಂದಯ್ ಹೇಳು! ಸಂತಸದಿ
ನನ್ನೆರ್ದೆ ವಿಕಂಪಿಸಿದೆ, ಬಡಿದ ಮದ್ದಳೆಯಂತೆ.

ಗೌರಾಂಬೆ – ಆಶ್ಚರ್ಯಮಾಶ್ಚರ್ಯಂ! ಏನಿದೀ ಸೌಂದರ್ಯಂ!
ಎನಿತು ಸ್ವರ್ಗೀಯಮಾದುದು ಭೂಮಿಯರ ಚೆಲ್ವು!
ಸೌಂದರ್ಯಮೂರ್ತಿಗಳ ಪಡೆದಿರ್ಪ ಈ ಪೊಸತು
ಜಗಮೆನಿತು ಸುಖಕರಂ!

ಭೈರವ(ಗೌರಾಂಬೆಗೆ)
ಗೌರಾ, ನಿನಗೆಲ್ಲ ಪೊಸತು?

ರಣ(ಶಿವನಾಯಕಗೆ) ನಿನ್ನೊಡನೆ ಆಡುತಿರ್ದಾ ಸುಂದರಿ ಅದಾರು?
ಒರ್ದಿನದ ತಪದಲ್ಲಿ, ಒರ್ಪಗಲ ಜೋಗದಲಿ
ನಿನಗೆ ಪ್ರತ್ಯಕ್ಷಳಾದಾ ದೇವತೆ ಅದಾರು?
ನಮ್ಮನಗಲಿಸಿ, ಮರಳಿ ಸೇರಿಸಿದ ಆ ಪುಣ್ಯ
ಸ್ತ್ರೀಮೂರ್ತಿ ಯಾರು?

ಶಿವ – ಅವಳು ದೇವತೆಯಲ್ಲ,
ತಂದೆ, ಮಾನವಳೆ, ಪರಶಿವನ ದಯೆಯಿಂದ
ಅವಳೀಗಳೆನ್ನವಳ್! ನೀವೆಲ್ಲ ಪೆರ್ದೊರೆಯ
ಪಾಲಾದಿರೆಂದರಿತು ನೆಚ್ಚುಳಿದ ನಾನು
ನಿಮ್ಮಾಜ್ಞೆಯಂ ಪಡೆಯಲಾರೆನೆಂದೇ ಬಗೆದು
ಈ ಚೆಲ್ವೆಯಂ ಕಂಡು ಓವಿದೆನ್, ವರಿಸಿದೆನ್,
ಗೌರಾಂಬೆ ಎಂಬ ಪೆಸರೀಕೆಯಿಂ ಜೇನ್ಗರೆಯುತಿದೆ.
ಕೆಳದಿಗಧಿಪತಿಯಾದ ಭೈರವನಾಯಕಂಗೆ
ತನುಜೆಯಾಗಿಹಳೀಕೆ. ಮುನ್ನಾತನಾ ಜಸಂ
ಕಿವಿಗಿತ್ತು. ಇಂದು ಕಣ್ಗಮಾಗಿರ್ಪುದು!
ಗೌರಾಂಬೆಯಿಂದಾತನ್ ಎನಗೆ ಮಾವನ್ ಇಂದು!

ರಣ – ನನ್ನ ಸೊಸೆಯಂ ನಾನೆ ಸೆರಗೊಡ್ಡಿ ಬೇಡುವೆನ್!
ಗೌರಾಂಬೆ, ನಿನಗೆ ನಾನಪರಾಧವೆಸಗಿದೆನ್;
ಮನ್ನಿಸೌ, ಮಾದೇವಿ, – ನೀನೆನ್ನ ಸೊಗದ ಸಿರಿ!

ಭೈರವ – ರಾಜೇಂದ್ರ, ಸಾಕು! ನೀನಿಂತೆಸಗುವುದು ತರವೆ?
ಹಳೆಯ ನೆನಹನು ಮರಳಿ ಕೆಣಕುತಿಹೆಯೇಕೆ?
ತೊರೆದ ಭಾರವನೇಕೆ ಮತ್ತೆ ಹೊರಲೆಳಸುತಿಹೆ?

ಜಯದೇವ – ಕಂಗಳಿಂ ರಸಧಾರೆ ಸೋರುತಿದೆ. ಬಾಯಿಂದೆ
ನುಡಿ ಹೊಮ್ಮಲರಿಯದಿದೆ. – ಓವೋ ಸಗ್ಗಿಗರಿರಾ,
ಈ ನವತರುಣ ದಂಪತಿಗಳುತ್ತಮಾಂಗಲಿ
ನಿಮ್ಮ ಸಿರಿ ಹರಕೆಗಳ ಸುರಿಮಳೆಯ ಸೂಸಿಂ!
ರಾಜರಾಣಿಯರಾಗಿ ಬಾಳಲಿವರುಗಳೆಂದು
ಹರಸುತ್ತ, ಮುಡಿಯಲ್ಲಿ ವಯಿರಗಲ ಕೆತ್ತನೆಯ
ಮಕುಟಗಳನಳವಡಿಸಿಂ! ನಿಮ್ಮ ಕೃಪೆಯಿಂದಾವು
ಅಗಲಿದೆವು, ಮೇಣ್ ನಿಮ್ಮ ಒಲ್ಮೆಯಿಂದಲೆ ಮರಳಿ
ನಾವಿಂತು ಸೇರಿಹೆವು.

ರಣ – ತಥಾಸ್ತು! ತಥಾಸ್ತು!!

ಜಯದೇವ – ಕೆಳದಿಯರಸನು ನೆಲವನುಳಿದುದು, ಸಂತತಿಗೆ
ನಗರದರಸಿಯತನಂ ದೊರೆಯಲೋಸುಗವೆಂದೆ
ತೋರುತಿದೆ! – ಹರುಸದಿಂದೆಲ್ಲರುಂ ನಲಿಯುವಂ!
ಹೋದ ಮಗ ಬಂದಿಹನ್; ಹೊಸ ಸೊಸೆಯ ತಂದಿಹನ್!
ಬಿರುಗಾಳಿಯೊಳ್ ಸಿಲ್ಕಿ ಹೊಳೆಯ ಪಾಲಾದವರ್
ನಾಮೆಲ್ಲ ಬದುಕಿಹೆವು. ಭೈರವನಾಯಕಂಗೆ
ಮರಳಿ ಕೆಳದಿಯ ನೆಲಂ ಕೈಸೇರಿದತ್ತು.
ಎಲ್ಲಕುಂ ಮಿಗಿಲು, ಮರುಳಾಗಿರ್ದ ನಾವೆಲ್ಲರುಂ
ಮರಳಿ ತಿಳಿವನು ಹೊಂದಿ ಮನುಜರಾಗಿಹೆವು!
ಅದರಿಂದೆ ಸಂತಸದೊಳನಿಬರುಂ ನಲಿಯರೈ!

ರಣ – ನನ್ನ ಮುದ್ದಿನ ಮಕ್ಕಳಿರ ಬನ್ನಿ, ಬಳಿಗೆ ಬನ್ನಿ –
(ಆರ್ಶೀವದಿಸುತ)
ನಿಮಗಿಂದು ಮಂಗಳಮಂ ಕೋರದವನೆದೆಯಲ್ಲಿ
ಕೋಟಿ ನರಕಳುದಿಸಿ ಪೀಡಿಸಲಿ!

ಜಯದೇವ – ತಥಾಸ್ತು!
[ಕಿನ್ನರನು ಶನಿಯ, ಬೀಮಣ, ತ್ರಿಶಂಕು ಇವರನ್ನು ಅವರ ಕದ್ದೊಯ್ದು ಬಟ್ಟೆಗಳೊಡನೆ ತರುಬಿಕೊಂಡು ಬರುತ್ತಾನೆ.]

ಬೀಮಣ – ಇನ್ನು ಮೇಲೆ ಅವರವರ ಪಾಡು ಅವರವರಿಗೆ; ನನ್ನ ಮೇಲೆ ಭಾರವಿಲ್ಲ. ಅವರವರ ಹಣೆಯಲ್ಲಿ ಬರೆದಂತಾಗಲಿ! ಗೊತ್ತಾಯಿತೇ, ರಾಕ್ಷಸಾ? ಹುಂ! – (ಶನಿಯ ಹೆದರಿ) ಹೆದರಬೇಡ! ಹೆದರಬೇಡ! ಧೈರ್ಯವಾಗಿರು!

ತ್ರಿಶಂಕು – ಇದೇನು? ನನ್ನ ಕಣ್ಗಳು ತಲೆಯಲ್ಲಿವೆಯೊ! ತಲೆಯೇ ಕಣ್ಗಳಲ್ಲಿದೆಯೊ! ನನ್ನೆದುರು ಕಂಗೊಳಿಸುತಿರುವ ಇವರಾರು?

ಶನಿಯ – ಶನಿಯಾಣೆ! ಇವರೆಲ್ಲ ದೇವತೆಗಳೇ ಹೌದು!
ನನ್ನೊಡೆಯನೆಂತು ಚೆಲ್ವಾಗಿ ತೋರುತಿಹನಿಂದು!
ನನ್ನ ಗತಿ ಏನಾಗುವುದೊ ಅರಿಯೆ.

ರಂಗ – ರುದ್ರನಾಯಕರೆ,
ಇವುಗಳಾವ ವಿಚಿತ್ರ ಜಂತುಗಳು?

ರುದ್ರ – ಒಂದೇನೊ
ನರಪಿಶಾಚವೆ ನಿಜ!

ಭೈರವ – ಚೆನ್ನಾಗಿ ನೋಡಿದರೆ
ನಿಮಗೆ ಗುರುತಾಗುವುದು. – ಈ ಕರೂಪಿ, ದೊರೆಯೆ,
‘ಶನಿ’ ಎಂಬ ಕಡುಕೆಟ್ಟ ಮಂತ್ರಗಾರ್ತಿಯ ಕರು.
ಅವರಿರ್ವರೊಡನಿವನು ನನ್ನನಿರಿಯಲು ಸಂಚು
ಮಾಡಿಹನು. ಅವರಿಬ್ಬರೂ ನಿಮ್ಮ ಕಿಂಕರರೆ,
ಈ ಕರಿಕನೆನ್ನವನ್!

ಶನಿಯ – ಅಂತೂ ಇಂದೆನೆಗೆ ಸಾವೆ ಗತಿ!

ರಣ – ಇವನೆಮ್ಮ ಬಾಣಸಿಗ ಬೀಮಣನಲ್ಲವೆ?

ರಂಗ – ಕುಡಿದು ಕೆಂಪೇರಿಹನು; ಹೆಂಡವೆಲ್ಲಿತ್ತಿವರಿಗೆ?

ರಣ – ಇವನೆಮ್ಮ ತ್ರಿಶಂಕು; ಹಣ್ಣುಹಣ್ಣಾಗಿನು.
ಮತ್ತೇರಿ ತತ್ತರಿಸುತಿಹನು. ಕಳ್ಳೆಲ್ಲಿ
ದೊರಕಿತಿವರಿಗೆ ಈ ದ್ವೀಪದಲಿ? ತ್ರಿಶಂಕೂ,
ಕಳ್ಳೆಲ್ಲಿ ದೊರಕಿತೋ? ಕಣ್ಣೆಲ್ಲ ಕೆಂಪೇರಿ,
ಕುಡಿಕುಡಿದು ಹಣ್ಣಾಗಿ ತತ್ತರಿಸುತಿಹೆಯಲ್ಲಾ?

ತ್ರಿಶಂಕು – ಈ ನೆಲಕೆ ಕಾಲಿಟ್ಟಾಗಳಿಂದ ನನ್ನ ಬುರುಡೆಯಲ್ಲಿ ಟಗರುಗಾಳೆಗವಾಗುತಿದೆ. ಬೆಟ್ಟಗಳು ಸುತ್ತುತಿವೆ. ಮರಗಿಡಗಳೆಲ್ಲ ಕೋಲಾಟವಾಡುತಿವೆ.

ರಂಗ(ಬೀಮಣನನ್ನು ಅಲ್ಲಾಡಿಸಿ) ಇದೇನಿದು, ಬೀಮಣಾ?

ಬೀಮಣ – ಅಯ್ಯೋ ನನ್ನನ್ನು ಮುಟ್ಟದಿರಿ – ನಾನು ಬೀಮಣನಲ್ಲ. ನಾನು ಬೇನೆಯ ಮುದ್ದೆ!

ಭೈರವ – ನೀನು ಈ ದ್ವೀಪದ ಚಕ್ರವರ್ತಿಯಲ್ಲವೇನೋ?

ಬೀಮಣ(ಬೆಪ್ಪಾಗಿ ಕಣ್ಣರಳಿಸಿ ನೋಡುತ್ತಾ) ಹೌದೆಂದೇ ತೋರುತ್ತಿದೆ – ನನ್ನ ತಲೆಯಲ್ಲಿ ಈ ದ್ವೀಪವೆಲ್ಲ ಚಕ್ರದಂತೆ ವರ್ತಿಸುತ್ತಿದೆ!

ರಣ – ಇಂತಹ ವಿಲಕ್ಷಣ ಪ್ರಾಣಿಯನು ನಾನೆಂದೂ
ನೋಡಿಲ್ಲ. (ಶನಿಯನನ್ನು ನಿರ್ದೇಶಿಸುತ್ತಾನೆ)

ಭೈರವ – ಅಹುದಹುದು; ದೇಹವಿರುವಂತುಟೆ
ಬಗೆಯುಮಿರ್ಪುದೀತಂಗೆ. – ಹೋಗು, ನಡೆ, ಗುಹೆಯೊಳಗೆ,
ನಿನ್ನ ಗೆಳೆಯರ ಕೂಡಿ. – ಹೆದರದಿರು, ನಾನಿಂದು
ನಿಮ್ಮನಿಬರಂ ಮನ್ನಿಸಿಹೆ. – ಗುಹೆಯನೋರಣಿಸು,
ಬೇಗ ನಡೆ!

ಶನಿಯ – ಅಪ್ಪಣೆ! ನಿನ್ನಾಣತಿಯನೆಸಗಿ
ಕೃಪೆಯನಾರ್ಜಿಸಿ ಮುಂದೆ ಮತಿವಂತನಾಗುವೆನ್. –
(ಬೀಮಣನನ್ನು ನೋಡುತ್ತಾ)
ಕತ್ತೆಗಳಿಗೆಲ್ಲ ನಾನೆಯೆ ಹಿರಿಯ ಹೆಗ್ಗತ್ತೆ:
ಕುಡುಕನಾಗಿರ್ಪ ಈ ಮೂಳನನು ಸಗ್ಗದ
ಹಿರಿಯ ದೇವತೆಯೆಂದೆ ಪೂಜಿಸಿದೆನಲ್ಲಾ!

ಭೈರವ – ಹೋಗು ಬೇಗ, ಜವದಿ ಪಸದನಗೊಳಿಸು.

ರಣ – ನೀವೂ ನಡೆಯಿರಿ. ಈ ವಸನಗಳನು ಅವುಗಳಿದ್ದೆಡೆಯೊಳೆ ಇರಿಸಿ.

ರಂಗ – ಹುಂ, ಬೇಗ! ಹೋಗಿ; ಕದ್ದೆಡೆಯೊಳೇ ಇರಿಸಿ!
[ಶನಿಯ, ತ್ರಿಶಂಕು, ಬೀಮಣ ಹೋಗುತ್ತಾರೆ.]

ಭೈರವ – ಮಿತ್ರರಿರ, ನೀಮೆಲ್ಲರುಂ ನನ್ನ ಈ ಬಡ ಗುಹೆಗೆ
ಬಿಜಯಮಾಡಿ, ನನ್ನ ಬಡ ಬಿರ್ದನ್ ಅಂಗೀಕರಿಸಿ!
ಈ ಇರುಳ್ ನಮಗೆಲ್ಲ ಒಸಗೆಯಿರುಳಾಗಿಹುದು.
ನನ್ನ ಅಜ್ಞಾತವಾಸದ ಕತೆಯ ನಿಮಗರುಹಿ
ಇಂದಿನಿರುಳನು ಬಿನದದೊಳೆ ಕಳೆದು, ನಾಳೆ
ಮುನ್ನೇಸರ್ ಅಂಬರದಿ ಮೂಡಿಬಹ ಮುನ್ನಮೇ
ನಿಮ್ಮ ನೌಕೆಯನೇರಿ ರಾಜಧಾನಿಗೆ ತೆರಳಿ
ನೂತನ ವಧೂವರರ ಮದುವೆ ದಿಬ್ಬಣಗಳಂ
ಬಿಯದಿಂದ ಮೆರೆಯುವಂ. – ತರುವಾಯ ಕೆಳದಿಯಲಿ
ಇನ್ನುಳಿದ ನನ್ನ ಬಾಳ್ಕೆಯದೆಲ್ಲಮಂ ಶಿವನ
ಜಾನದೊಳೆ ನೀಗುವೆನ್.

ರಣ – ನನ್ನೆದೆ ತುಡಿಯುತಿದೆ
ನಿನ್ನ ಕತೆಯನ್ ಕೇಳ್ದು.

ಭೈರವ – ನಿಮ್ಮ ಮೇಲುಕ್ಕೆವದ
ಬರಿಸವನೆ ಕರೆಯುವೆನ್. ಪಯಣ ಸೊಗವಾಗುವೊಲ್
ಅನುಕೂಲ ಮಾರುತನ ಬೆಂಬಲವನಿತ್ತಪೆನ್. (ಕಿನ್ನರಗೆ)
ನನ್ನ ನಚ್ಚಿನ ಡಿಂಗರಿಗ, ಮುದ್ದು ಕಿನ್ನರಾ,
ನೀನೆಮಗೆ ಪಯಣದಲಿ ನೆರವಾಗು. ನೀನಿನ್ನು
ನನ್ನ ಗೆಳೆಯನ್, ಡಿಂಗರಿಗನಲ್ತು, ಬಾ ಇಲ್ಲಿ [ಮೈದಡವಿ]
ನೀನ್ ಇನ್ ಸಂತಸದಿ ನಲಿದಾಡು! ನಿನ್ನ ಮನಂ
ಬಂದವೋಲ್ ಮೀನ್ವಟ್ಟೆಯೊಳ್ ಹಾಡಿ ಅಲೆದಾಡು!
ನಿನಗೆ ಮಂಗಳಮಕ್ಕೆ! ಸೊಗಮಕ್ಕೆ! ಶುಭಮಕ್ಕೆ.

ಕಿನ್ನರ(ಹಾಡು)
ದುಂಬಿಯು ಬಂಡನು ಹೀರುವ ಎಡೆಯೊಳು
ನಾ ಮಧುಪಾನವ ಮಾಡುವೆನು.
ತೇಲುವ ತಾವರೆ ಹೂವಿನ ಹೊಡೆಯೊಳು
ಪವಡಿಸೆ ಸಜ್ಜೆಯ ಹೂಡುವೆನು.
ನೇಸರು ಮುಳುಗಲು ಮಲಗುವೆನಲ್ಲಿ!
ಗೂಬೆಯು ಕೂಗಲು ಹುದುಗುವೆನಲ್ಲಿ!
ಕತ್ತಲೆ ಮುತ್ತಲು ಪವಡಿಪೆನಲ್ಲಿ;
ಕೌಮುದಿ ರಂಜಿಸೆ ನಲಿಯುವೆನಲ್ಲಿ!
ಮಳೆಬಿಲ್ಗರಿಗಳ ರೆಕ್ಕೆಯ ತಳೆದಿಹ
ಮೇಘ ವಿಮಾನವನೇರಿ,
ಗಾಳಿಯ ಬಟ್ಟೆಯೊಳಲೆಯುವೆ, ನಲಿಯುವೆ,
ಮುಕ್ತಿಯ ಸೊದೆಯನು ಹೀರಿ!

[ಹಾಡುತ್ತಾ ಹೋಗುತ್ತಾನೆ]