[ಷೇಕ್ಸ್ಪಿಯರ್ ಮಹಾಕವಿಯಟೆಂಪೆಸ್ಟ್ನಾಟಕದ ರೂಪಾಂತರ]

ಸಹ್ಯಾದ್ರಿ ಪರ್ವತಶ್ರೇಣಿಗಳ ನಿರ್ಜನ ನಿಬಿಡಾರಣ್ಯಗಳ ಮಧ್ಯೆ ಪ್ರವಹಿಸುತ್ತಿದ್ದ ಒಂದು ನದಿಯ ನಡುವೆ ಸಣ್ಣದೊಂದು ದ್ವೀಪವಿತ್ತು. ಅಲ್ಲಿ ಋಷಿಚರ್ಯೆಯಲ್ಲಿದ್ದ ಭೈರವನಾಯಕನು ತನ್ನ ಮಗಳು ಗೌರಾಂಬೆಯೊಡನೆ ವಾಸಿಸುತ್ತಿದ್ದನು. ಆತನಿಗೆ ‘ಶನಿಯ’ ಎಂಬ ಅರ್ಧಮಾನುಷ ಕಿಂಕರನೂ, ಕಿನ್ನರ ವರ್ಗಕ್ಕೆ ಸೇರಿದ ಒಬ್ಬ ಅತಿಮಾನುಷ ಡಿಂಗರಿಗನೂ ಇದ್ದರು. ‘ಶನಿಯ’ ‘ಶನಿ’ ಎಂಬ ಮಂತ್ರಗಾರ್ತಿಯ ಮಗನು. ಆ ಮಂತ್ರಗಾರ್ತಿ ಭೈರವನು ಆ ದ್ವೀಪಕ್ಕೆ ಬರುವುದಕ್ಕೆ ಕೆಲವು ದಿವಸಗಳ ಮುನ್ನವೇ ಜವನಾಲಯಕ್ಕೆ ಸಂದಿದ್ದಳು ಭೈರವನಾಯಕನು ಅಲ್ಲಿಗೆ ಬಂದಮೇಲೆ ‘ಶನಿ’ಯಿಂದ ಪೀಡಿತವಾಗಿದ್ದ ಗಗನಚಾರಿಗಳಿಗೆಲ್ಲ ಬಿಡುಗಡೆಯನ್ನು ನೀಡಿ, ಶುಭ್ರ ಮನೋಹರಮೂರ್ತಿಯಾಗಿದ್ದ ‘ಕಿನ್ನರ’ನನ್ನು ತನ್ನ ದೂತನನ್ನಾಗಿ ನೇಮಿಸಿಕೊಂಡಿದ್ದನು. ‘ಶನಿಯ’ನೂ ಭೈರವನಾಯಕನ ಪರಿಚಾರಕನಾದನು. ಹೀಗೆ ಭೈರವನಾಯಕನು ಸಣ್ಣವಳಾಗಿದ್ದ ತನ್ನ ಮಗಳು ಗೌರಾಂಬೆಯನ್ನು ಪರಿಪಾಲಿಸುತ್ತ ಅವಳಿಗೆ ವಿದ್ಯಾಬುದ್ಧಿಗಳನ್ನು ಕಲಿಸುತ್ತ, ತನ್ನ ಯೋಗಬಲದಿಂದ ನಿಸರ್ಗದೇವತೆಗಳನ್ನು ವಶಪಡಿಸಿಕೊಂಡು ಎಲ್ಲರನ್ನೂ ಬಾಯ್ಕೇಳಿಸುತ್ತ ಹನ್ನೆರಡು ವರ್ಷಗಳನ್ನು ನೂಕಿದನು.

ಒಂದು ದಿನ ಗೌರಾಂಬೆ ತಂದೆಯೊಡನೆ ನದಿಯ ತೀರದಲ್ಲಿ ಸಂಚರಿಸುತ್ತಿರಲು, ನದಿಯ ನಡುವೆ ಒಂದು ದೋಣಿ ಬಂದುದನ್ನು ಕಂಡಳು. ಅದರಲ್ಲಿ ಕೆಲವು ಸುಂದರ ವ್ಯಕ್ತಿಗಳಿದ್ದರು. ಆಕೆ ವಿಸ್ಮಯದಿಂದ ನೋಡುತ್ತಿರುವಾಗಲೆ ಒಂದು ದೊಡ್ಡ ಬಿರುಗಾಳಿಯೆದ್ದು ದೋಣಿಯನ್ನು ಮುಳುಗಿಸಿಬಿಟ್ಟಿತು. ಅದನ್ನು ಕಂಡು ಗೌರಾಂಬೆ ದುಃಖಪಡುತ್ತಿರಲು ಭೈರವನಾಯಕನು ತನ್ನ ಮಂತ್ರದ ಬಲದಿಂದಲೇ ಬಿರುಗಾಳಿಯೆದ್ದುದೆಂದೂ, ದೋಣಿ ಮುಳುಗಿದುದೆಂದು ಹೇಳಿ ಮಗಳನ್ನು ಸಂತಯಸಲೆಳಸಿದನು. ಆದರೆ ಮುಗ್ಧೆಯಾದ ಗೌರಾಂಬೆ ದೊಣಿಯಲ್ಲಿದ್ದ ಮನುಷ್ಯರ ಮರಣವನ್ನು ನೆನೆದು ರೋದಿಸತೊಡಗುವಳು. ಆಗ ಭೈರವನು “ಮಗಳೆ, ವ್ಯಸನಪಡಬೇಡ. ಎಲ್ಲವನ್ನೂ ನಿನ್ನ ಕಲ್ಯಾಣಕ್ಕಾಗಿಯೇ ಮಾಡಿರುವೆನು. ಅಲ್ಲಿದ್ದ ಜನರಾರೂ ಅಳಿದಿಲ್ಲ” ಎಂದು ಸಂತವಿಡುವನು.

ಗೌರಾಂಬೆ ಬಿರುಗಾಳಿಯನ್ನು ಎಬ್ಬಿಸಿದುದಕ್ಕೆ ಕಾರಣವೇನೆಂದು ಕೇಳುವಳು.

ಭೈರವನಾಯಕನು ತನ್ನ ಹಿಂದಿನ ವೃತ್ತಾಂತವನ್ನು ಸಂಕ್ಷೇಪವಾಗಿ ಹೇಳುವನು. “ಮಗಳೇ, ಹನ್ನೆರಡು ವರ್ಷಗಳ ಹಿಂದೆ ನಾನು ಕೆಳದಿಯನಾಳ್ವ ನಾಯಕನಾಗಿದ್ದೆ. ನನ್ನ ತಮ್ಮ ರುದ್ರನಾಯಕನಿಗೆ ರಾಜ್ಯಭಾರವನ್ನು ವಹಿಸಿ, ನಾನು ವೇದಾಧ್ಯಯನ, ಯೋಗಸಾಧನೆ ಮೊದಲಾದವುಗಳಲ್ಲಿ ಮಗ್ನನಾದೆ. ರುದ್ರನಾಯಕನು ನಗರ ಸಂಸ್ಥಾನದ ಅರಸನಾದ ರಣ ನಾಯಕನೊಡನೆ ಒಳ ಸಂಚು ನಡೆಯಿಸಿ, ನನ್ನನ್ನು ರಾಜ್ಯಚ್ಯುತನನ್ನಾಗಿ ಮಾಡಿ, ನಮ್ಮಿಬ್ಬರನ್ನು ಹರಿದ ಹರಿಗೋಲೊಂದರಲ್ಲಿ ಹಾಕಿ ಹೊಳೆಯಲ್ಲಿ ತೇಲಿಬಿಟ್ಟನು. ದೈವಕೃಪೆಯಿಂದ ಅದು ಮುಳುಗದೆ ಈ ದ್ವೀಪದೆಡೆಗೆ ನಮ್ಮನ್ನು ತರೆತಂದುಬಿಟ್ಟಿತು. ಇಂದು ಆ ನನ್ನ ಶತ್ರುಗಳು ಹೊಳೆಯ ನಡುವೆ ಬಂದುದನ್ನು ಕಂಡೆ. ಅವರಿಗೆ ಬುದ್ಧಿಗಳಿಸಬೇಕೆಂದು ಬಯಸಿ ಇಂತೆಲ್ಲ ಮಾಡಿದೆನು.”

ಬಿರುಗಾಳಿಯ ರೂಪದಲ್ಲಿ ಕಿನ್ನರನು ದೋಣಿಯನ್ನು ಮುಳುಗಿಸಿ, ಅದರಲ್ಲಿದ್ದ ಜನರೆಲ್ಲರನ್ನೂ ಅವರರಿಯದಂತೆ ಸುರಕ್ಷಿತವಾಗಿ ದ್ವೀಪದೆಡೆಗೊಯ್ದು ಭೈರವನಾಯಕನ ಆಜ್ಞೆಯಂತೆ ಅವರನ್ನು ಚದರಿಸುವನು. ರುದ್ರನಾಯಕ, ರಣನಾಯಕ, ಅವನ ತಮ್ಮ ರಂಗನಾಯಕ ಮತ್ತು ಮಂತ್ರಿ ಜಯದೇವ ಇವರೆಲ್ಲ ಒಂದು ಕಡೆ ಸೇರುವರು. ಸೇವಕರಾದ ಭೀಮಣ ತ್ರಿಶಂಕುಗಳು ಒಂದು ಗುಂಪಾಗುವರು. ರಣನಾಯಕನ ಮಗನಾದ ಶಿವನಾಯಕನನ್ನು ಮಾತ್ರ ಅದೃಷ್ಟ ಕಿನ್ನರನು ಭೈರವ ಗೌರಾಂಬೆಯರು ಇದ್ದಲ್ಲಿಗೆ ಕರೆತರುವನು. ಶಿವನಾಯಕ ಗೌರಾಂಬೆಯರ ಪ್ರಣಯಮೈತ್ರಿ ಪ್ರಥಮ ಸಂದರ್ಶನದಲ್ಲಿಯೇ ಮೊಳೆತು ಬೆಳೆಯುವುದು. ಸುಲಭಸಾಧ್ಯವಾದ ವಸ್ತುವಿಗೆ ಬೆಲೆ ಬಾರದೆಂಬ ತತ್ತ್ವವನ್ನು ಚೆನ್ನಾಗಿ ಅರಿತ ಭೈರವನು ಮೊದಮೊದಲು ರುದ್ರತೆಯನ್ನು ನಟಿಸಿ ಶಿವನಾಯಕನನ್ನು ಪರೀಕ್ಷಿಸಿ ಕಡೆಗೆ ಮಗಳನ್ನು ಅವನಿಗೆ ಧಾರೆಯೆರೆಯುವನು.

ಅಷ್ಟರಲ್ಲಿ ಇತ್ತ ‘ಶನಿಯ’ ನನ್ನು ಸಂದರ್ಶಿಸಿದ ಬೀಮಣ ತ್ರಿಶಂಕುಗಳು ಅವನಿಂದ ಎಲ್ಲ ವಿಚಾರವನ್ನೂ ತಿಳಿದು ಭೈರವನನ್ನು ಕೊಲ್ಲಲು ಪಿತೂರಿ ನಡೆಯಿಸುವರು. ಬೀಮಣನನ್ನು ಮೂರ್ಖನಾದ ‘ಶನಿಯ’ ಸ್ವರ್ಗದಿಂದ ಇಳಿದು ಬಂದ ದೇವತೆಯೆಂದೇ ಭಾವಿಸಿ, ಅವನ ಸಹಾಯ ಪಡೆದು ಭೈರವನ ದಾಸ್ಯದಿಂದ ಮುಕ್ತನಾಗಲು ಬಯಸುವನು. ಆದರೆ ಕಿನ್ನರನ ನೆರವಿನಿಂದ ಭೈರವನು ಅವರನ್ನು ಕಷ್ಟನಷ್ಟಗಳಿಗೆ ಗುರಿಪಡಿಸಿ ಓಡಿಸುವನು.

ಅತ್ತ ರುದ್ರ ರಂಗನಾಯಕರು ಬಳಲಿ ನಿದ್ರಿಸುತ್ತಿದ್ದ ಜಯದೇವ ರಣನಾಯಕರನ್ನು ಸಂಹರಿಸಲು ಪ್ರಯತ್ನಿಸಿ ಭೈರವನಿಂದ ಕಳುಹಲ್ಪಟ್ಟ ಕಿನ್ನರರಿಂದ ಪರಾಜಿತರಾಗಿ, ಮಾಯೆಯಿಂದ ಮರುಳ್ಗೊಂಡು ಭೈರವನಾಯಕನ ಗುಹೆಯ ಬಳಿಗೆ ಒಯ್ಯಲ್ಪಡುವರು. ಅಲ್ಲಿ ಮೈತಿಳಿದು, ಭೈರವನಾಯಕನ ಗುರುತನ್ನು ಬಹು ಶ್ರಮದಿಂದ ತಿಳಿದು, ತಮ್ಮ ಅಪರಾಧವನ್ನು ಒಪ್ಪಿಕೊಂಡು ಕ್ಷಮೆ ಬೇಡುವರು. ಭೈರವನು ಅವರನ್ನೆಲ್ಲ ಮನ್ನಿಸಿ, ಮಗನ ಅಳಿವಿಗಾಗಿ ಗೋಳಿಡುತ್ತಿದ್ದ ರಣನಾಯಕನಿಗೆ ಗೌರಾಂಬೆ ಶಿವನಾಯಕರನ್ನು ತೋರುವನು. ತಂದೆ ಮಕ್ಕಳು ಪರಸ್ಪರ ದರ್ಶನದ ಆನಂದದಿಂದ ಹಿಗ್ಗುವರು. ಶಿವನಾಯಕನಿಂದ ಸಕಲ ವೃತ್ತಾಂತವನ್ನೂ ತಿಳಿದ ರಣನಾಯಕ ಜಯದೇವರುಗಳು ಭೈರವನಾಯಕನನ್ನು ಕೊಂಡಾಡುವರು. ಅಷ್ಟರಲ್ಲಿ ಕಿನ್ನರನು ಓಡಿಹೋಗಿದ್ದ ಬೀಮಣ ತ್ರಿಶಂಕು ಶನಿಯರನ್ನು ಅಲ್ಲಿಗೆ ತರುಬಿಕೊಂಡು ಬರುವನು. ಆಗ ಅವರಿಗೆ ಕುಡಿದು ತಲೆಗೇರಿದ್ದ ಹೆಂಡದ ಮತ್ತೆಲ್ಲ ಇಳಿಯುವುದು.

ರಣನಾಯಕ ಮೊದಲಾದವರುಗಳು ಭೈರವನಾಯಕನ ಆಹ್ವಾನವನ್ನು ಸ್ವೀಕರಿಸಿ ಆತನ ಗುಹೆಯಲ್ಲಿ ಆ ರಾತ್ರಿಯನ್ನು ಸಂತಸದಿಂದ ಕಳೆಯುವರು. ಮರುದಿನ ಎಲ್ಲರೂ ನಗರ ಸಂಸ್ಥಾನಕ್ಕೆ ಹೊರಡುವರು. ಕಿನ್ನರನು ಬಿಡುಗಡೆ ಹೊಂದಿ, ಎಂದಿನಂತೆ ತಿಳಿಯಾಳದಾಗಸದ ನೀಲಿಯಲ್ಲಿ ತನ್ನ ಮಳೆಬಿಲ್ಗರಿಗಳ ರೆಕ್ಕೆಗಳನ್ನು ಬಿದಿರ್ಚಿ ಇನಿದನಿಯಿಂದ ಹಾಡುತ್ತಾ  ಸಂಚರಿಸತೊಡಗುವನು.