ಇದು ಒಂದು ಏಕಾಂಕ ನಾಟಕ. ಕಡಲೆಯ ನಂಜಸೆಟ್ಟಿ ಎಂಬ ಮೈಸೂರಿನ ವ್ಯಾಪಾರಿಯೊಬ್ಬನು ಇಮ್ಮಡಿ ತಿಮ್ಮರಾಜ ಒಡೆಯರಿಗೆ ‘ಬಿರುದಂತೆಂಬರ ಗಂಡ’ ನೆಂಬ ಬಿರುದನ್ನು ಸಾಧಿಸಿಕೊಟ್ಟ ರಾಜಭಕ್ತಿಯ ವೀರಚರ್ಯೆ ಈ ನಾಟಕದಲ್ಲಿದೆ. ತಾವು ಅಂತು, ತಾವು ಇಂತು ಎಂದು ಹೊಗಳಿಸಿಕೊಳ್ಳುವ ಪಾಳೆಯಗಾರರ ಎದುರಿಗೆ ಧೀರನೂ ಶೂರನೂ ಸ್ವದೇಶವತ್ಸಲನೂ ರಾಜಭಕ್ತನೂ ಆದ ನಂಜಸೆಟ್ಟಿ, ತಮ್ಮ ರಾಜರು ಈ ಎಲ್ಲ ಬಿರುದುಗಳನ್ನು ಮೀರಿದವರು ಎಂಬ ಅರ್ಥದಲ್ಲಿ ಮೈಸೂರಿನ ರಾಜರು ‘ಬಿರುದಂತೆಂಬರ ಗಂಡ’ ಎಂದು ಉದ್ವೋಷಿಸುತ್ತಾನೆ. ಇದರಿಂದ ಕ್ರುದ್ಧರಾದ ಪಾಳೆಯಗಾರರು ನಂಜಸೆಟ್ಟಿಯೊಂದಿಗೆ ಯುದ್ಧಕ್ಕೆ ಬರುತ್ತಾರೆ. ಅವನು ಅವರೆಲ್ಲರೊಂದಿಗೆ ಹೋರಾಡಿ ಜಯಗಳಿಸಿ ಮೈಸೂರಿನ ಕೀರ್ತಿಯನ್ನು ಕಾಪಾಡುತ್ತಾನೆ. ಅದೇ ವೇಳೆಯಲ್ಲಿ ತಮ್ಮ ಬಿರುದುಗಳನ್ನು ಹೊಗಳಿಸಿಕೊಂಡು ಅಲ್ಲಿಗೆ ಬಂದ ಉಮ್ಮತ್ತೂರಿನ ಪಾಳೆಯಗಾತಿಯ ಎದುರಿಗೆ ಅರಸರ ಬಿರುದುಗಳನ್ನು ಹೊಗಳುತ್ತಾನೆ. ಬಿರುದುಗಳನ್ನು ಕೇಳಿ ಅವಳು ಕೆರಳತ್ತಾಳೆ. ದೊರೆ ಪೇಚಿಗೆ ಸಿಲುಕುವಂತಾಗುತ್ತದೆ. ಆದರೂ ನಂಜಸೆಟ್ಟಿಯಿಂದ ಕ್ಷಮಾಪಣೆ ಕೇಳಿಸುತ್ತಾನೆ. ಹೀಗೆ ತಮ್ಮ ಉದಾತ್ತವರ್ತನೆಯಿಂದ ಆ ಪಾಳೆಯಗಾತಿಯನ್ನು ಗೆದ್ದು ವೀರೋಚಿತವಾದ ವರ್ತನೆಯಿಂದ ಆಕೆಯ ಗಂಡನನ್ನು ಸೋಲಿಸಿ ತಮ್ಮ ಬಿರುದನ್ನು ಉಳಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ನಂಜಸೆಟ್ಟಿಯ ಮುದ್ದಿನ ಹೆಸರಾದ ಅಪ್ಪಣ್ಣ ಎಂಬುದನ್ನು ತಮ್ಮ ಸ್ವಂತ ಬಿರುದನ್ನಾಗಿ ಹೊಂದಿ ಅಂದಿನಿಂದ ‘ಅಪ್ಪಣ್ಣತಿಮ್ಮರಾಜ ಒಡೆಯ’ರಾಗುತ್ತಾರೆ. ನಂಜಸೆಟ್ಟಿಯ ರಾಜಭಕ್ತಿ ಅಭಿಮಾನಗಳೇ ಈ ನಾಟಕದ ತುಂಬ ವ್ಯಕ್ತವಾಗಿವೆ. ಉಮ್ಮತ್ತೂರಿನ  ಪಾಳೆಯಗಾತಿ ಮಾದೇವಮ್ಮಣ್ಣಿಯ ಸ್ವಾಭಿಮಾನವೂ ಅಷ್ಟೇ ಉಜ್ವಲವಾಗಿ ಪ್ರಕಟವಾಗಿದೆ. ನಂಜಸೆಟ್ಟಿ ಅವಳಲ್ಲಿ ಕ್ಷಮಾಯಾಚನೆ ಮಾಡುವ ಪ್ರಸಂಗವು ಮೈಸೂರು ಅರಸರು ಸ್ತ್ರೀ ಸಮಾಜಕ್ಕೆ ಸಲ್ಲಿಸಿದ ಗೌರವವನ್ನು ಅವರ ಸಂಸ್ಕೃತಿಯನ್ನು ಬಿಂಬಿಸುವ ಪ್ರಸಂಗವಾಗಿದೆ.