ಸಮ್ಮಾನ

ಮದುವೆಯ ಬಳಿಕ ಬೀಗರ ಸಮ್ಮಾನ (ಸನ್ಮಾನ)ದ ಕಾರ್ಯಕ್ರಮವಿರುತ್ತದೆ. ಮದುಮಗನ ಮನೆಯಿಂದ ಎಲ್ಲ ಬಂಧು-ಮಿತ್ರರ ಜೊತೆಗೂಡಿ ಹೋರಾಡುವಾಗ ಮದುಮಗಳು ತನ್ನ ಮದುವೆಯ ಸೀರೆಯನ್ನೇ ಉಡಬೇಕಾದುದು ಕಡ್ಡಾಯ. ಮದುವೆಯ ದಿನಗಳಲ್ಲಿ ಮದುವಣಿಗರಿಗೆ ನೆರೆದವರ ದೃಷ್ಟಿ ತಾಗಿರುತ್ತದೆಂಬ ನಂಬಿಕೆಯಿಂದ ಅವರು ಮೊದಲಾಗಿ ಮನೆಗೆ ಪ್ರವೇಶ ಮಾಡುವುದಕ್ಕೂ ಮುನ್ನ ದೃಷ್ಟಿದೋಷ ನಿವಾರಣೆಗಾಗಿ ಹೊಸ ಮದುವಣಿಗರನ್ನು ಅಂಗಳದಲ್ಲೇ ನಿಲ್ಲಿಸಿ, ಅರಿಸಿನ ನೀರು ಮತ್ತು ಹೊತ್ತಿಸಿದ ನೆನೆಯೊಂದಿಗೆ ಆರತಿ ಬೆಳಗಿ ಅದನ್ನು ಉತ್ತರ ದಿಕ್ಕಿನ ಕಡೆಗೆ ಚೆಲ್ಲಿತ್ತಾರೆ.

ಬಳಿಕ ನಡುಮನೆಯಲ್ಲಿ ದಂಪತಿಗಳನ್ನು ಎರಡು ಮಣೆಗಳಲ್ಲಿ ಕುಳ್ಳಿರಿಸುತ್ತಾರೆ. ಆಮೇಲೆ ಮದುವೆಗೆ ಬರಲಾಗದಿದ್ದವರು ಅಥವಾ ಪ್ರಾಯಸ್ಥ ಹೆಂಗಸರು ಇದ್ದರೆ, ಅವರು ಮದುಮಕ್ಕಳಿಗೆ ಅಕ್ಷತೆ ಹಾಕಿ ಆಶೀರ್ವದಿಸುತ್ತಾರೆ. ಅದಾದ ಮೇಲೆ ಅಲ್ಲಿಂದ ಎದ್ದು ಹೊರಬರುತ್ತಾರೆ. ನಂತರ ನಡೆಯುವ ಆ ದಿನದ ಔತಣದ ಸಂದರ್ಭದಲ್ಲಿ ಮದುಮಗನ ಎಲೆಯನ್ನು ಹೊರತುಪಡಿಸಿ ಉಳಿದೆಲ್ಲರ ಎಲೆಗೆ ಉಪ್ಪಿನಕಾಯಿಯ ನಂತರ ಬೆಲ್ಲ ಹಾಕಿ ಕಲಸಿದ ಅವಲಕ್ಕಿಯನ್ನು ಬಡಿಸುತ್ತಾರೆ. ವರನ ತಂಗಿಯೊಂದಿಗೆ ಬಂದ ಮದುಮಗಳು ಅವಳ ಸಹಾಯದೊಂದಿಗೆ ಮದುಮಗನಿಗೆ ಮೂರು ಬಾರಿ ಪಾಯಸ ಬಡಿಸುತ್ತಾಳೆ. ಇದಕ್ಕೆ “ಚಟ್ಟುವಂ ಪಿಡಿ” ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ಮದುಮಗ ಅವಳಿಗೆ ಉಡುಗೊರೆಯನ್ನು ಕೊಡುತ್ತಾನೆ.

. ಗೃಹ ಪ್ರವೇಶ

ಗೃಹಪ್ರವೇಶ ಕಾರ್ಯಕ್ರಮದ ಒಂದು ಹಂತದಲ್ಲಿ ಮನೆಯ ಯಜಮಾನ ಹಣದ ಪೆಟ್ಟಿಗೆಯನ್ನು ಹಿಡಿದು ಮನೆಗೆ ಒಂದು ಅಥವಾ  ಮೂರು ಸುತ್ತು ಪ್ರದಕ್ಷಿಣೆ ಬರುತ್ತಾನೆ. ಆತ ಮನೆಯೊಳಗೆ ಪ್ರವೇಶಿಸುವ ಮೊದಲು ಮನೆಯ ಯಜಮಾನತಿಯ ಸ್ಥಾನದಲ್ಲಿರುವ ಮಹಿಳೆ ದೀಪ ಹಿಡಿದು ಮುಂದಿನಿಂದ ಮನೆಗೆ ಸುತ್ತು ಬರಬೇಕು. ಅವಳ ತಾಯಿ ಅಥವಾ ತಾಯಿಯ ಸ್ಥಾನದಲ್ಲಿರುವ ಮಹಿಳೆ ಹಾಲನ್ನು ಕೈಯಲ್ಲಿ ಹಿಡಿದು ಅವಳ ಹಿಂದೆ ಪ್ರದಕ್ಷಿಣೆ ಹಾಕಬೇಕು. ಅನಂತರ ಉಳಿದವರು ಅಂದರೆ ಮನೆಗೆ ಬಂದ ಮುತ್ತೈದೆಯರು, ಕನ್ಯಾಸ್ತ್ರೀಯರು ಇದರಲ್ಲಿ ಭಾಗವಹಿಸಬಹುದಾಗಿದೆ ಮತ್ತು ಅವರು ಭಾಗವಹಿಸುತ್ತಾರೆ. ವಿಧವೆಯರಿಗೆ ಅವಕಾಶವಿಲ್ಲ. ಮನೆಗೆ ಸುತ್ತ ಬಂದ ಬಳಿಕ ಮನೆಯೊಳಗೆ ಹೊಸತಾಗಿ ಹೂಡಿದ ಒಲೆಯ ಮೇಲೆ ಹಾಲನ್ನು ಕುದಿಯಲು ಇರಿಸಿ, ಐದು ಜನ ಮುತ್ತೈದೆಯರು ಹಾಲುಕ್ಕಿಸುತ್ತಾರೆ. ಆ ಮನೆಯಲ್ಲಿ ಸುಖ ಸಮೃದ್ಧಿ ಉಕ್ಕಿ ಹರಿಯಲಿ ಎಂಬ ಸದಾಶಯದೊಂದಿಗೆ ಇದನ್ನು ಆಚರಿಸಲಾಗುತ್ತದೆ.

ಸೀಮಂತ

ತೀಯರಲ್ಲಿ ಬಸುರಿ ಹೆಣ್ಣಿಗೆ ನಡೆಸುವ ಸೂಮಂತವು ತವರಿನಲ್ಲಿ ನಡೆಯುತ್ತದೆ. ಸೀಮಂತದ ಹಿಂದಿನ ದಿನ ಹೆಣ್ಣಿನ ಕಡೆಯ ಕೆಲವರು ಹೆಂಗಸರು ಅಪ್ಪಂ ಮಾಡಲು ಬೇಕಾದ ಅಕ್ಕಿ, ಬೆಲ್ಲ, ತೆಂಗಿನಕಾಯಿ, ತೆಂಗಿನ ಎಣ್ಣೆ ಇವನ್ನೆಲ್ಲ ಹಿಡಿದುಕೊಂಡು ಅವಳ ಗಂಡನ ಮನೆಗೆ ಹೋಗಿ ಇಡೀ ರಾತ್ರಿ ಕುಳಿತು ಅಪ್ಪಂ ತಯಾರಿಸುತ್ತಾರೆ. ಮರುದಿನ ಮುಹೂರ್ತಕ್ಕೆ ಸರಿಯಾಗಿ ಅವಳನ್ನು ಏಳು ಬಗೆಯ ಹೂಗಳಿಂದ ಅಲಂಕರಿಸುತ್ತಾರೆ. ಈ ಹೂಗಳಲ್ಲಿ ಎಳೆಯ ಸಿಂಗಾರ ಹೂವು ಪ್ರಮುಖವಾದುದು (ಈ ಹೂವನ್ನು ಮುಟ್ಟು ನಿಂತ ಅವಧಿಯಿಂದ ಈ ಸೀಮಂತದ ಅವಧಿಯವರೆಗೆ ಬಸುರಿ ಹೆಂಗಸು ಮುಡಿಯುವುದಕ್ಕೆ ನಿಷೇಧವಿದೆ). ಏಳನೆಯ ತಿಂಗಳಲ್ಲಿ ನಡೆಸುವ ಈ ಸೀಮಂತ ಶಾಸ್ತ್ರದಂದು ಹಿಂಗಾರದ ಹೂವನ್ನು ಹೆಚ್ಚು ಕಡಿಮೆ ಕಡ್ಡಾಯವಾಗಿ ಬಳಸುತ್ತಾರೆ. ಇವರಲ್ಲಿ ಬಸುರಿಗೆ ಸಂಬಂಧಪಟ್ಟ ಶಾಸ್ತ್ರದಲ್ಲಿ ಏಳಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಹಾಗಾಗಿ ಏಳು ಬಗೆಯ ಹೂವುಗಳನ್ನು ಅವಳ ತಲೆಗೆ ಮುಡಿಸುತ್ತಾರೆ ಮತ್ತು ಏಳು ಬಗೆಯ ತಿಂಡಿ ಮಾಡಿ ಬಸುರಿ ಹೆಣ್ಣಿಗೆ ಬಡಿಸಲಾಗುತ್ತದೆ. ಏಳನೆಯ ತಿಂಗಳ ಬಸುರಿ ಹೆಣ್ಣು ಪವಿತ್ರ ಸ್ಥಳಗಳಿಗೆ ಹೋಗಬಾರದೆಂಬ ಕಟ್ಟಳೆ ಇದೆ. ಸಾಮಾನ್ಯವಾಗಿ ಏಳನೆಯ ತಿಂಗಳ ಹೊತ್ತಿನಿಂದಲೇ ಪ್ರಸವದ ಸಾಧ್ಯತೆ ಅಧಿಕವಾಗಿರುವ ಕಾರಣದಿಂದ ಹೀಗೆ ಮಾಡುತ್ತಿದ್ದಿರಬಹುದು. ಬಸುರಿ ಹೆಣ್ಣಿನ ಸುರಕ್ಷೆಯ ದೃಷ್ಟಿಯಿಂದ ಮಾತ್ರವಲ್ಲದೆ, ಧಾರ್ಮಿಕ ಸ್ಥಳಗಳ ಪಾವಿತ್ಯ್ರವನ್ನು ಕಾಪಾಡುವ ಕಾಳಜಿ ಕೂಡ ಇದರಲ್ಲಿ ಕಂಡು ಬರುತ್ತದೆ. ಹುಡುಗಿಯ ಮಾವ, ತಂದೆ ಮತ್ತಿತರ ಕುಟುಂಬಸ್ಥರು ಅಚ್ಚಮ್ಮಾರೊಂದಿಗೆ ಗಂಡನ ಮನೆಗೆ ಬಂದು ಸೀಮಂತದ ದಿನ ನಿಗದಿ ಮಾಡುತ್ತಾರೆ. ಮುಟ್ಟು ನಿಂತಲ್ಲಿಂದ ಸೀಮಂತದವರೆಗೆ ಈ ಹೂವನ್ನು ಮುಡಿಯುವಂತಿಲ್ಲ. ಅಂದು ಗರ್ಭಿಣಿ ಸೀರೆ ಉಡುವ ಪ್ರಕ್ರಿಯೆಗೆ “ಕೋಡಿ ಉಡುಕ್ಕಲ್” ಎನ್ನುತ್ತಾರೆ. ಅಲಂಕಾರ ಮುಗಿದ ಬಳಿಕ ಮನೆಯ ಅಥವಾ ಕುಟುಂಬದ ಹಿರಿಯ ಮಹಿಳೆ ಗುರಿಕಾರರ ಅಪ್ಪಣೆ ಪಡೆದು ಗರ್ಭಿಣಿಯನ್ನು ಪೂರ್ವದಿಕ್ಕಿಗೆ ಮುಖ ಮಾಡಿಸಿ ಒಂದುಹಲಗೆಯ ಮೇಲೆ ಕೂರಿಸುತ್ತಾರೆ. ನಂತರ ಊಟಕ್ಕೆ ಮಾಡಿದ ಭಕ್ಷ್ಯಗಳನ್ನೆಲ್ಲ ಬಡಿಸುತ್ತಾರೆ. ಬಳಿಕ ಎಲ್ಲರ ಊಟವಾಗುತ್ತದೆ.

ಮುತ್ತೈದೆಯರೆಲ್ಲ ಸೇರಿಕೊಂಡು ಗರ್ಭಿಣಿಯನ್ನು ಮನೆಯೊಳಗೆ ಪೂರ್ವಕ್ಕೆ ಮುಖ ಮಾಡಿ ಮಣೆಯ ಮೇಲೆ ಕುಳ್ಳಿರಿಸುತ್ತಾರೆ. “ಚಮ್ಮಾನತಿಂಡೆ ಅರಿಕೆಟ್ಟಲ್” ಎಂಬ ಉಡಿತುಂಬುವ ಕಾರ್ಯದಲ್ಲಿ ಅಕ್ಕಿ, ಕರಿಜೀರಿಗೆ, ಅರಿಶಿನಕೊಂಬು ಹಾಗೂ ಚಿಲ್ಲರೆ ಹಣವನ್ನು ಉಡಿಗೆ ಹಾಕುತ್ತಾರೆ. ಗಂಡನ ತಾಯಿ ಅಥವಾ ಕುಟುಂಬದ ಹಿರಿಯ ಹೆಂಗಸು ಐದು ಕುಡ್ತೆ ಬೆಳ್ತಿಗೆ ಅಕ್ಕಿ, ಒಂದು ತೆಂಗಿನಕಾಯಿ, ಐದು ವೀಳ್ಯದೆಲೆ, ಒಂದು ಅಡಿಕೆಯನ್ನು ಒಂದು ಬಟ್ಟಲಲ್ಲಿ ಹಾಕಿ ಮೆಟ್ಟಲಿನ ಒಳಗೆ ನಿಂತು, ಗರ್ಭಿಣಿ ಸೊಸೆ ಮೆಟ್ಟಲಿನ ಹೊರಗೆ ನಿಂತು ಅವಳ ಹೆಗಲ ಮೇಲಿಂದ ಇಳಿಬಿಟ್ಟ ಬಟ್ಟೆಯನ್ನು ಎತ್ತಿ ಹಿಡಿದು ಅದರಲ್ಲಿ ಸುರಿದು ಕಟ್ಟುತ್ತಾರೆ.

ಆ ಬಳಿಕ ಗರ್ಭಿಣಿಯನ್ನು ಮನೆಯ ಹೊರ ಅಂಗಣದಲ್ಲಿ ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಿ, ಅಚ್ಚಮ್ಮಾರರು, ಗುರಿಕಾರರು ಮತ್ತು ಊರವರೆಲ್ಲ ಒಟ್ಟಾಗಿ ಕುಲದೇವರನ್ನು ಪ್ರಾರ್ಥಿಸುತ್ತಾರೆ. ಆಮೇಲೆ ತವರಿಗೆ ಹೊರಟು ನಿಂತ ಗರ್ಭಿಣಿ ಸ್ತ್ರೀ ಹಿರಿಯರೆಲ್ಲ ಕಾಲುಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದು ಅಂಗಳದಿಂದ ಹೊರಕ್ಕಿಳಿಯುತ್ತಾಳೆ. ಅಲ್ಲಿ ಅವಳು ಮತ್ತು ಮುತ್ತೈದೆ ಸ್ತ್ರೀಯರೆಲ್ಲ ಒಂದು ಚಾಪೆ ಹಾಸಿ ಕುಳಿತು ತಾಂಬೂಲ ಹಾಕುತ್ತಾರೆ. ಆನಂತರ ಅವಳು ಹಿಂತಿರುಗಿ ನೋಡದೆ ತವರಿಗೆ ಹೊರಟುಹೋಗಬೇಕು.

ಸೀಮಂತ ಕಾರ್ಯವನ್ನು ಕೆಲವೆಡೆ “ಪುಳಿಕುಡಿ” ಎಂದು, ಇನ್ನು ಕೆಲವು ಕಡೆಗಳಲ್ಲಿ “ವಯತ್ ಪೊಂಗಳ್” ಎಂದೂ ಕರೆಯುತ್ತಾರೆ. ಅದರಂತೆ ಹಿಂದೆ ಎರಡು ದಿನಗಳ ಕಾಲ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ಮೊದಲ ದಿನ ರಾತ್ರಿ ತಿಂಗಳ ಬೆಳಕಿನಲ್ಲಿ ಗರ್ಭಿಣಿ ಹೆಂಗಸನ್ನು ಪುರೋಹಿತನ ಹೆಂಡತಿ ಹುಣಸೆ ಮರದ ಕೆಳಗೆ ಕರೆದೊಯ್ದು ಅಲ್ಲಿ ಬೆಳ್ಳಿಯ ಉಂಗುರ ಕಟ್ಟಿದ ಏಳು ಮೊಳದ ನೂಲನ್ನು ಕೊಡುತ್ತಿದ್ದಳು. ಅದನ್ನು ಗರ್ಭಿಣಿ ಸ್ತ್ರೀ ಆ ಮರಕ್ಕೆ ಕಟ್ಟಬೇಕು. ಹಾಗೆ ಹಟ್ಟುವಾಗ ನೂಲು ತುಂಡಾದರೆ ತಾಯಿ ಅಥವಾ ಮಗು ಸಾಗುತ್ತದೆ ಎಂಬ ನಂಬಿಕೆ ಇತ್ತು. ಎರಡನೆಯ ದಿನದಂದು ಅದನ್ನು ತೆಗೆಯುತ್ತಿದ್ದರು. ಎರಡನೆಯ ದಿನ ಮನೆಗೆ ಬಂದಾಗ ಗಂಡ ಅವಳ ಬಾಯಿಗೆ ಹುಳಿ ರಸವನ್ನು ಸುರಿಯಬೇಕು. ಅವಳು ಅದನ್ನು ಕುಡಿಯಬೇಕಿತ್ತು. ಪುರೋಹಿತನ ಹೆಂಡತಿ ಅವಳ ಹೊಕ್ಕುಳಿಗೆ ವೀಳ್ಯದೆಲೆ ಮೂಲಕ ಎಣ್ಣೆ ಸುರಿಯುತ್ತಿದ್ದಳು. ಆಗ ಎಣ್ಣೆ ಕೆಳಗಿಳಿದು ಹೋದ ಹಾಗೆಯೇ ಮಗುವಿನ ಲಿಂಗದ ಪತ್ತೆ ಆಗುತ್ತದೆಂಬ ನಂಬಿಕೆ ಇತ್ತು. ಅಂದು ದುಷ್ಟಶಕ್ತಿಯನ್ನು ದೂರವಿರಿಸುವುದಕ್ಕಾಗಿ “ತೈಯಾಟ”ವೆಂಬ ಧಾಮಿಕ ಆಚರಣೆಯನ್ನು ನಡೆಸುತ್ತಿದ್ದರು.

ಈಗ ಈ ಕ್ರಮದಲ್ಲಿ ಬದಲಾವಣೆಗಳಾಗಿವೆ. ಸೀಮಂತಕ್ಕೆ ದಿನ ನಿಗದಿ ಮಾಡಿದ ಬಳಿಕ ಹೆಣ್ಣಿನ ಮನೆಯವರು ಪ್ರತ್ಯೇಕವಾಗಿ ಆಮಂತ್ರಣ ಕೊಡುವುದಿಲ್ಲ. ಗಂಡಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಹೆಣ್ಣಿನ ಮನೆಯವರು ಸಾಮರ್ಥ್ಯವಿದ್ದಲ್ಲಿ ಚಿನ್ನವನ್ನು, ಏಳು ಬಗೆಯ ಹೂವು ಮತ್ತು ಏಳು ಬಗೆಯ ತಿಂಗಳನ್ನು ತರುತ್ತಾರೆ. ಇವುಗಳ ಜೊತೆಗೆ ಫಲವಸ್ತುಗಳನ್ನು ಬಡಿಸುತ್ತಾರೆ. ಬಳಿಕ ತವರಿಗೆ ಬಂದ ಹೆಣ್ಣು ಹೆರಿಗೆಯಾಗಿ ಮಗುವಿನ ಸಹಿತ ಗಂಡಿನ ಮನೆಗೆ ಮರಳಿ ಹೋಗಬೇಕೇ ಹೊರತು ಮೊದಲು ಹೋಗುವ ಕ್ರಮವಿಲ್ಲ.

ಹೆರಿಗೆ

ಚೊಚ್ಚಲ ಹೆರಿಗೆ ತವರಿನಲ್ಲಿ ಆಗುತ್ತದೆ. ಗಂಡು ಮಗುವಾದರೆ ತೆಂಗಿನ ಸೋಗೆಯ ಕಡೆತುಂದನ್ನು ಹಿಡಿದು ನೆಲಕ್ಕೆ ಮೂರು ಸಲ ಹೊಡೆದು ಕೂ ಎಂದು ಕೂಗುತ್ತಾರೆ. ಹೆಣ್ಣಾದರೆ ಕಂಚಿನ ಬಟ್ಟಲು ಹಿಡಿದು ಜಾಗಟೆಯಂತೆ ಬಡಿಯುತ್ತಾರೆ. ಹೆತ್ತ ತಕ್ಷಣ ಬಾಣಂತಿಗೆ ಸ್ನಾನ ಮಾಡಿಸುತ್ತಾರೆ. ಹೆರಿಗೆ ನೋವು ಕಡಿಮೆಯಾಗಲು ಸೀಯಾಳಕ್ಕೆ ಪೊನ್ನಾಲಿ ಸೊಪ್ಪು, ಜೀರಿಗೆ ಹಾಕಿ ಕುಡಿಯಲು ಕೊಡುತ್ತಾರೆ. ಹದಿನೆಂಟು ದಿನಗಳ ಅಮೆ (ಸೂತಕ) ಇರುತ್ತದೆ. ಬಡವರಲ್ಲಿ ಬಾಣಂತಿ ೭ನೆಯ ದಿನದಂದು ಶ್ರೀಮಂತರಲ್ಲಿ ೨೮ ನೆಯ ದಿನದಂದು ಹೊರಗೆ ಹೋಗಬಹುದು. ಹೆರಿಗೆಯಾದ ೨೮ನೆಯ ದಿನಕ್ಕೆ ನಾಮಕರಣ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಇಲ್ಲಿ ಜಾತಿಯ ಆಧಾರದಲ್ಲಿ ಅಲ್ಲ ಎಂಬುದನ್ನು ಗಮನಿಸಬೇಕು. ಬಡವರಿಗೆ ಹೊಟ್ಟೆ ಮಾಡಿನ ಅನಿವಾರ್ಯತೆ ಇರುವುದರಿಂದ ಒಂದೇ ಸಮುದಾಉದವರಲ್ಲೇ ಈ ಬಗೆಯ ಅಂತರ ಕಂಡುಬರುವುದು ವಿಪರ್ಯಾಸವೇ ಸರಿ. ಮದುವಿಗೆ ಹೆಸರಿಟ್ಟು ತೊಟ್ಟಿಲಿಗೆ ಹಾಕುವ ಅಧಿಕಾರ ಮಗುವಿನ ತಂದೆಯ ತಾಯಿ (ಮಗುವಿನ ಅಜ್ಜಿ)ಗೆ ಇರುತ್ತದೆ. ಹೆಣ್ಣು ಮಗುವಿಗೆ ಬೆಳ್ಳಿಯ ಉಡಿದಾರ ಮತ್ತು ತಾಲಿಯನ್ನು ಹಾಕಲಾಗುತ್ತದೆ. ಬಾಣಂತಿಗೆ ೪೦ ದಿನಗಳ ಕಾಲ ಪುಳಿನೀರ್ ನೀಡುತ್ತಾರೆ. ನಂಜಾಗಬಾರದೆಂದು ಬಾಣಂತಿಯ ಬಾಯಿಗೆ ತಾಮ್ರದ ಮುಕ್ಕಾಲಿ ನಾಣ್ಯವನ್ನು ಹಾಕುತ್ತಾರೆ. ೪೦ನೆಯ ದಿನ ಬಾಣಂತಿ ಸ್ನಾನ ಮಾಡಿ ಬಾವಿ ಮುಟ್ಟಬೇಕು. ಅವಳು ಮೂರು ಚಮಚ ಎಣ್ಣೆ, ಐದು ವೀಳ್ಯೆದೆಲೆ, ಒಂದು ಅಡಕೆಯನ್ನು ಬಾವಿಗೆ ಹಾಕಿ ಮೂರು ಕೊಡ ನೀರು ಸೇದಿ ತೆಂಗಿನ ಬುಡಕ್ಕೆ ಹಾಕಬೇಕು. ಬಳಿಕ ದೇವಸ್ಥಾನಕ್ಕೆ ಹೋಗಬೇಕು.

ಮಗು ಹುಟ್ಟಿದ ದಿನವೇ ಅದರ ತಂದೆಗೆ ಆ ಸುದ್ದಿ ತಿಳಿಸುತ್ತಾರೆ. ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಕ್ಕಿ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ತೆಂಗಿನಕಾಯಿ, ಓಲೆಬೆಲ್ಲಗಳನ್ನು ಕಳುಹಿಸಿಕೊಡುತ್ತಾರೆ. ಹೆತ್ತು ಮೂರನೆಯ ದಿನಕ್ಕೆ ವಣ್ಣಾತ್ತಿ ಮನೆಗೆ ಬಂದು ಒಗೆದ ಹೊಸ ಬಿಳಿ ಮಡಿಬಟ್ಟೆಯನ್ನು ತಾಯಿಗೂ ಮಗುವಿಗೂ ಕೊಡುತ್ತಾರೆ. ಬಳಿಕ ವಣ್ಣಾನ್ ಮತ್ತು ವಣ್ಣಾತ್ತಿಗೆ ಮನೆಯವರು ಊಟ ನೀಡಿ ಕಳುಹಿಸುತ್ತಾರೆ. ಐದನೆಯ ದಿನ ಮತ್ತು ಬರುವ ವಣ್ಣಾತ್ತಿ ಕೊಟ್ಟ ಸೀರೆಯನ್ನು ಬಾಣಂತಿ ಸ್ತ್ರೀ ಉಡಬೇಕು. ಮಗುವನ್ನು ಮೊದಲು ತಾಯಿಯ ಮಡಿನಲ್ಲಿ ಇರಿಸಿ ನಂತರ ಕುಟುಂಬದ ಸದಸ್ಯರ ಕೈಗೆ ಕೊಡುತ್ತಾರೆ. ವಣ್ಣಾನರನ್ನು ಬಿಟ್ಟು ಉಳಿದವರೆಲ್ಲ ಅಕ್ಷತೆ ಹಾಕಿ ಮಗುವಿನ ಕೈಯಲ್ಲಿ ಉಡುಗೊರೆ ಕೊಡುತ್ತಾರೆ. ನಂತರ ಮರ್ಯಾದಿಕಾರನ್ ಒಂದು ಒಳನೀರನ್ನು ಕೆತ್ತಿ ಅದರ ನಡನ್ನು ವೀಳ್ಯದೆಲೆಯಿಂದ ಬಾಣಂತಿ ಮತ್ತು ಮಗುವಿನ ಮೇಲೆ ಹಾಗೂ ಮನೆಯೊಳಗಡೆ ಚಿಮುಕಿಸಿ ಎಲ್ಲವನ್ನು ಶುದ್ಧಗೊಳಿಸಿ ಉಳಿದುದನ್ನು ಮನೆಯ ಬಾವಿಗೆ ಹಾಕುತ್ತಾರೆ. ಮತ್ತೆ ಒಂಬತ್ತನೆಯ ದಿನದಂದು ಬರುವ ವಣ್ಣಾನರು ಕೊಟ್ಟ ಮಡಿಬಟ್ಟೆಯನ್ನು ತಾಯಿ ಮತ್ತು ಮಗು ತೊಡಬೇಕು. ಹಿಂದೆ ಬಾಣಂತಿಯ ಬಟ್ಟೆಯನ್ನು ವಣ್ಣಾನರೇ ಒಗೆದು ಕೊಡಬೇಕಿತ್ತು. ಅದಕ್ಕೆ ಪ್ರತಿಯಾಗಿ ವವರಿಗೆ ಅಕ್ಕಿ, ತೆಂಗಿನಕಾಯಿ, ಹಣವನ್ನು ಕೊಟ್ಟು ಗೌರವಿಸುತ್ತಿದ್ದರು. ಆದರೆ ಈಗ ಹಾಗಿಲ್ಲ, ಎಲ್ಲ ಬಟ್ಟೆಯನ್ನು ಅವರೇ ಶುದ್ಧಗೊಳಿಸಿದುದಕ್ಕೆ ಸಾಂಕೇತಿಕವಾಗಿ ಒಂದು ಬಟ್ಟೆಯನ್ನು ಒಗೆದರೆ ಸಾಕು ಎಂಬಲ್ಲಿಗೆ ಬದಲಾವಣೆಯಾಗಿದೆ. ಅಂದರೆ ವಣ್ಣಾನ್ ಹಾಗೂ ವಣ್ಣಾತ್ತಿಯ ಸ್ಥಾನ ಬದಲಾಗಿದೆ. ಬಾಣಂತಿ-ಮಗುವನ್ನು ನೋಡಲು ಮನೆಗೆ ಬರುವ ಹೆಂಗಸರ ತಲೆಗೆ ಸ್ವಲ್ಪ ಎಣ್ಣೆ ಕೊಟ್ಟು ತಿನ್ನಲು ಓಲೆ ಬೆಲ್ಲದ ತುಂಡು ಹಾಗೂ ತೆಂಗಿನಕಾಯಿಯ ಹೋಳುಗಳನ್ನು ಕೊಡುವುದು ರೂಢಿಯಲ್ಲಿದೆ. ಬಾಣಂತಿಗೆ ಕೊಡುವ ಲೇಹ್ಯ, ಮದ್ದಿನ ಪುಡಿಗಳಿಗೆ ಓಲೆ ಬೆಲ್ಲವನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಾದುದು.

ತೊಟ್ಟಿಲಿಗೆ ಹಾಕುವುದು

ಮಗು ಹುಟ್ಟಿದ ಹತ್ತೊಂಬತ್ತನೆಯ ದಿನಕ್ಕೆ ಅದನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ಮಾಡುತ್ತಾರೆ. ಬೇರೆ ದಿನಗಳಲ್ಲೂ ಹಾಕಬಹುದಾದರೂ ಈ ದಿನಕ್ಕೆ ಮುಹೂರ್ತ ನೋಡಬೇಕೆಂದಿಲ್ಲ. ಆ ದಿನ ಬಾಣಂತಿ ಮತ್ತು ಮಗುವಿನ ಸ್ನಾನ ಮಾಡಿಸಿ ಅವಳಿಂದ ಬಾವಿಯಿಂದ ನೀರು ಸೇದಿಸಿ ತೆಂದು ಮತ್ತು ಅಡಿಕೆಯ ಮರಕ್ಕೆ ಹಾಕಿಸುತ್ತಾರೆ. ಬಳಿಕ ಮನೆಯ ಮಧ್ಯದಲ್ಲಿ ಕೋಣೆಯಲ್ಲಿ ತೂಗುದೀಪ ಉರಿಸಿಟ್ಟು, ಅದರ ಬಳಿಯಲ್ಲಿ ತಾಯಿಯನ್ನೂ ಅವಳ ಮಡಿನಲ್ಲಿ ಮಗುವನ್ನೂ ಕೂರಿಸುತ್ತಾರೆ. ಕಾಯಿಸಿದ ದನದ ಹಾಲಿನಲ್ಲಿ ಚಿನ್ನದ ಉಂಗುರವನ್ನು ಮುಳುಗಿಸಿ, ಮಗುವಿನ ಅಜ್ಜಿ (ತಂದೆಯ ತಾಯಿ) ಅಥವಾ ಅವರಿಲ್ಲದಿದ್ದರೆ ಅವರ ಪ್ರತಿನಿಧಿಯಾಗಿ ಬಂದ ಹಿರಿಯ ಮಹಿಳೆ ಮೂರು ಬಾರಿ ಮಗುವಿನ ಬಾಯಿಗೆ ಹಾಕುತ್ತಾರೆ. ಬಳಿಗೆ ಉಳಿದವರೆಲ್ಲರೂ ಹಾಕಬಹುದು.

ನಾಮಕರಣ

ಸಾಮಾನ್ಯವಾಗಿ ನಾಮಕರಣವನ್ನು ಮಗು ಹುಟ್ಟಿದ ಇಪ್ಪತ್ತೆಂಟನೆಯ ದಿನದಂದು ನಡೆಸುತ್ತಾರೆ. ಮಗುವಿನ ಕಾಲಿಗೆ ತಾಮ್ರದ ಗೆಜ್ಜೆಯನ್ನು, ಸೊಂಟಕ್ಕೆ ಕಟ್ಟುವ ದಾರದಲ್ಲಿ ಕಬ್ಬಿಣದ ಚೂರನ್ನು ಸಿಕ್ಕಿಸುವ ಕ್ರಮವನ್ನು ಕೆಲವರು ಮಾಡುತ್ತಿದ್ದರು. ಅಂದು ಮಗುವಿನ ತಂದೆಯ ತೊಡೆಯ ಮೇಲೆ ಮಗುವನ್ನು ಮಲಗಿಸಿ, ಅದರ ಬಲಕಿವಿಯಲ್ಲಿ ಆತ ಮೂರು ಬಾರಿ ಅದಕ್ಕೆ ಇಡುವ ಹೆಸರನ್ನು ಹೆಳಬೇಕು. ನಂತರ ಒಳ್ಳೆಯ ದಿನ ನೋಡಿ ತಾಯಿ-ಮಗುವನ್ನು ತೊಟ್ಟಲು ಸಮೇತ ಮಗುವಿನ ತಂದೆಯ ಮನೆಗೆ ಕರೆದೊಯ್ಯುತ್ತಾರೆ.

ತೀಯರಸ ಇತರ ಸಂಸ್ಕಾರಗಳು

ಕನ್ಯಾವು, ಪೊಡವಕೊಡ, ಕೈ ಹಿಡಿಸುವುದು, ಸತ್ತವರ ಮದುವೆ ಇವು ತೀಯರಲ್ಲಿ ಗಂಡು-ಹೆಣ್ಣು ಇಬ್ಬರಿಗೂ ಸಂಬಂಧಪಟ್ಟಂತೆ ಪ್ರಚಲಿತದಲ್ಲಿದ್ದ ಇತರ ಆಚರಣೆಗಳಾಗಿವೆ.

. ಪಂದಳ್ ಮಂಗಳ (ಚಪ್ಪರ ಮದುವೆ)

ಚಪ್ಪರ ಮದುವೆಗೆ ಮೊದಲಾಗಿ ಸ್ಥಳ ನಿರ್ಧರಿಸಿ, ನಂತರ ಜೋಯಿಸರಲ್ಲಿ ಪ್ರಶ್ನೆಯ ಮೂಲಕ “ಮೂರ್ತತಿಂಡೆ ಕಿಡಾವು”ವನ್ನು ಎಲ್ಲಿಂದ, ಯಾವ ಕುಟುಂಬದಿಂದ ಆರಿಸಬಹುದು ನಿರ್ಧರಿಸುತ್ತಾರೆ. ಹಾಗೆ ಆಯ್ದ ಏಳು ವರ್ಷದೊಳಗಿನ ಹೆಣ್ಣು ಮಗುವಿಗೆ ಚಂದನವನ್ನು ಲೇಪಿಸಿ, ಬಿಳಿಯ ಬಟ್ಟೆಯ ಅಡ್ಡಮುಂಡು ಅಥವಾ ಬಿಳಿಲಂಗ-ರವಿಕೆಯನ್ನು ತೊಡಿಸಿ, ಸೊಂಟದಿಂದ ಮೇಲ್ಭಾಗಕ್ಕೆ ಶಾಲು ಹೊದಿಸುತ್ತಾರೆ. ಮುಹೂರ್ತದ ಸಮಯಕ್ಕೆ ಮಾತ್ರ ಒಂದು ಕೆಂಪು ಬಣ್ಣದ ಬಟ್ಟೆಯನ್ನು ಮಗುವಿನ ಮೈಮೇಲೆ ಹೊದಿಸುತ್ತಾರೆ. ಆ ಬಳಿಕ ಸ್ವಜಾತಿ ಬಾಂಧವರ ಮದುವೆ ಇದೇ ಚಪ್ಪರದಲ್ಲಿ ನಡೆಯಬೇಕು, ನಡೆಯುತ್ತದೆ. ಅಲ್ಲಿಯತನಕ ಆ ಮಗು ಮಲ್ಲೇ ಇರಬೇಕು. ಬಳಿಕ ಆ ಮಗುವಿಗೆ ಒಂದು ಗಂಡು ನೋಡಿ ಅದೇ ಚಪ್ಪರದಲ್ಲಿ ಮದುವೆ ಮಾಡುತ್ತಾರೆ. ಅನಂತರ ಆ ಚಪ್ಪರವನ್ನು ತೆಗೆಯುತ್ತಾರೆ.

. ಕನ್ಯಾವು

ಇದು ಚಿಕ್ಕಮಕ್ಕಳು ಮರಣ ಹೊಂದಿದಾಗ, ಕುಟುಂಬದ ಹಿರಿಯ ಮನೆಯಲ್ಲಿ ನಡೆಸುವ ಆಚರಣೆಯಾಗಿದೆ. ಉಪ್ಪು ಹಾಕದೆ ಅಕ್ಕಿ, ಓಲೆಬೆಲ್ಲ ಮತ್ತು ತೆಂಗಿನಕಾಯಿ ತುರಿ ಹಾಕಿ ಮಾಡಿದ ಸಿಹಿಭಕ್ಸ್ಯವನ್ನು ಕುಟುಂಬದ ಹಿರಿಯ ಸ್ತ್ರೀ ಬಡಿಸಿ, ಪ್ರತ್ಯೇಕವಾಗಿ ಇಡುವ ಮೂಲಕ ಅದು ಮರಣಿಸಿದ ಮಗುವಿಗೆ ಸಲ್ಲುತ್ತದೆ ಎಂಬ ನಂಬಿಕೆ ಈ ಆಚರಣೆಯಲ್ಲಿದೆ ಇದಕ್ಕೆ “ಕನ್ಯಾವು ಪಳಂಬುನ್ನ” ಎನ್ನುತ್ತಾರೆ.

. ಪೊಡವಕೊಡ

ಇದು ತೀಯರಲ್ಲಿ ಕಂಡುಬರುವ ಒಂದು ವಿಶಿಷ್ಟ ಪದ್ಧತಿಯಾಗಿದೆ. ಅದರಂತೆ ಮದುವೆಯಾದ ಹೆಣ್ಣೊಬ್ಬಳಿಗೆ ತನ್ನ ಗಂಡನಿಂದ ತನಗೆ ನೆಮ್ಮದಿಯಿಲ್ಲ, ಆತನೊಂದಿಗೆ ಸಹಬಾಳ್ವೆ ಸಾಧ್ಯವಿಲ್ಲ ಎಂದಾದಾಗ ಅವನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗುವ ಅಧಿಕಾರ ಇರುತ್ತದೆ. ಮರುಮದುವೆಯ ಸಂದರ್ಭದಲ್ಲಿ ಹೊಸ ಪತಿಯಿಂದ ಸೀರೆಯನ್ನು ಸ್ವೀಕರಿಸಿ, ಅವನನ್ನು ಗಂಡನನ್ನಾಗಿ ಪಡೆಯುತ್ತಿದ್ದಳು. ಅವನಿಂದಲೂ ಸಮಾಧಾನವಿಲ್ಲವೆಂದಾದಲ್ಲಿ ಅವನನ್ನೂ ತ್ಯಜಿಸಿ, ಇನ್ನೊಂದು ಮದುವೆಯಾಗುವ ಅವಕಾಶವಿತ್ತು. ಸೀರೆಯನ್ನು ಹೆಚ್ಚು ಹೆಚ್ಚು ಪಡೆದುಕೊಂಡಷ್ಟೂ ಅವಳು ಅಷ್ಟು ಮದುವೆಯಾಗಿದ್ದಾಳೆಂದು ಅರ್ಥ ಬರುತ್ತಿದ್ದುದರಿಂದ ಅವಳಿಗೆ ಮರ್ಯಾದೆ ಕೂಡ ಹೆಚ್ಚು. ಈ ಪದ್ಧತಿ ಅವರಲ್ಲಿ ಹೆಣ್ಣಿನ ಮೇಲೆ ಕೌಟುಂಬಿಕವಾಗಿ ನಡೆಯುವ ಶೋಷಣೆಯನ್ನು ತಡೆಯುವುದಕ್ಕೆ ಬಹುಮಟ್ಟಿಗೆ ಕಾರಣವಾಗಿದೆ.

. ಕೈ ಹಿಡಿಸುವುದು

ಒಬ್ಬ ಮಹಿಳೆಯ ಗಂಡ ಸತ್ತಿದ್ದರೆ ಅಥವಾ ಗಂಡ ಬಿಟ್ಟಿದ್ದರೆ ಅಂತಹ ಹೆಣ್ಣು ಮತ್ತು ಹೆಂಡತಿ ಸತ್ತ ಗಂಡು ಇವರಿಬ್ಬರ ಮನೆಯವರು ಮದುವೆ ಮಾತುಕತೆ ನಡೆಸುತ್ತಾರೆ. ಮದುವೆಯ ದಿನ ನಿಗದಿ ಮಾಡುತ್ತಾರೆ. ಸಿಂಗರಿಸಿದ ಹೆಣ್ಣು-ಗಂಡು ಎದುರು ಬದುರಾಗಿ ನಿಲ್ಲುತ್ತಾರೆ. ಅವರಿಬ್ಬರ ನಡುವಿನಲ್ಲಿ ದೊಡ್ಡ ಬಟ್ಟೆಯ ತೆರೆ ಹಿಡಿದಿರುತ್ತಾರೆ. ಅದರ ಆಚೆ ಈಚೆಯಿಂದ ಹುಡುಗ ಮತ್ತು ಹುಡುಗಿಯ ಕೈತಂದು ಮದುಮಗನ ಕೈ ಮೇಲೆ ಮದುಮಗಳ ಕೈ ಇರುವ ಹಾಗೆ ಹಿಡಿಯುತ್ತಾರೆ. “ಮದುಮಗ ಮದುಮಗಳು ಮಲೆ ಏರುವರು” ಎಂದು ಮೂರು ಬಾರಿ ಜೋರಾಗಿ ಹೇಳಿ ಮದುಮಗ ಮತ್ತು ಮದುಮಗಳ ಕೈಹಿಡಿಸುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರನ್ನೂ ಪತಿ-ಪತ್ನಿಯರೆಂದು ಪರಿಗಣಿಸಲಾಗುತ್ತದೆ.

. ಸತ್ತವರ ಮದುವೆ

ಮದುವೆಯಾಗದೆ ಸತ್ತ ಗಂಡು ಮತ್ತು ಮದುವೆಯಾಗದೇ ಸತ್ತ ಸ್ವಜಾತಿಯ ಹುಡುಗಿಯನ್ನು ಮದುವೆ ಮಾಡಬೇಕೆಂದು ನಿಶ್ಚಯಿಸಿದ ದಿನದಂದು ಸಾಂಕೇತಿಕವಾಗಿ ವಿವಾಹ ವಿಧಿಗಳನ್ನು ನೆರವೇರಿಸಲಾಗುತ್ತದೆ. ಮದುಮಗಳಿಗೆ ಬೇಕಾಗುವ ಸೀರೆ-ರವಿಕೆ, ಕರಿಮಣಿ, ಶೃಂಗಾರ ವಸ್ತುಗಳನ್ನು ಚೀಲದಲ್ಲಿ ಗಂಡಿನ ಮನೆಗೆ ತರುತ್ತಾರೆ. ಗಂಡಿನ ಮನೆಯಲ್ಲಿ ಎರಡು ಮಣೆಗಳನ್ನಿರಿಸಿ, ಅದರ ಮೇಲೆ ಮದುಮಗ, ಮದುಮಗಳ ಮದುವೆ ವಸ್ತ್ರಗಳನ್ನಿಡುತ್ತಾರೆ. ಎರಡು ಮನೆಯವರು ಮಾತುಕತೆ ನಡೆಸಿ ಮದುವೆ ಮಾಡಿಸುತ್ತಾರೆ. ಮದುವೆ ಊಟ ಮಾಡಿ ಮದುಮಗಳ ವಸ್ತುಗಳನ್ನು ತಾಯ ಮನೆಗೆ ತರುತ್ತಾರೆ. ನಂತರ ಮದುಮಗಳ ಸೀರೆ-ರವಿಕೆಯನ್ನು ಚೀಲದಲ್ಲಿ ಹಾಕಿ ಗಂಡಿನ ಮನೆಗೆ ಹೆಣ್ಣನ್ನು ಕರೆತರುತ್ತಾರೆ. ನಂತರ ಬೀಗರು ಹೋಗಿ ಬರುತ್ತಾ ಇರುತ್ತಾರೆ. ಹೆಣ್ಣಿನ ಮನೆಯಲ್ಲಿ ಏನೇ ಕಾರ್ಯಕ್ರಮವಿದ್ದರೂ ಗಂಡಿನ ಮನೆಯವರಿಗೂ, ಗಂಡಿನ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹೆಣ್ಣಿನ ಮನೆಯವರಿಗೂ ಆಮಂತ್ರಣ ಇರುತ್ತದೆ. ಒಟ್ಟಾರೆ ವಧೂವರರು ಬದುಕಿದ್ದ ಪಕ್ಷದಲ್ಲಿ ಎರಡೂ ಕುಟುಂಬಗಳ ನಡುವೆ ಎಂತಹ ಸಂಬಂಧವಿರುತ್ತಿತ್ತೋ ಆ ಬಗೆಯಲ್ಲಿ ನಡೆದುಕೊಳ್ಳುತ್ತಾರೆ.

ಶವಸಂಸ್ಕಾರ

ಉಪವಾಸವಿರುವ ಸತ್ಯವ್ಯಕ್ತಿಯ ಮನೆಯವರಿಗೆ ಶವಸಂಸ್ಕಾರದ ಮರುದಿನ ನೆರೆಹೊರೆಯವರಿಂದ ಊಟದ ವ್ಯವಸ್ಥೆ ಇರುತ್ತದೆ. ಇದೊಂದು ಸತ್ಸಂಪ್ರದಾಯವಾಗಿದ್ದು, ನೆರೆಕರೆಯ ಮನೆಯವರು ಅವರ ದುಃಖದಲ್ಲಿ ಪಾಲ್ಗೊಂಡು ನಾವೆಲ್ಲ ನಿಮ್ಮ ಜೊತೆಗಿದ್ದೇವೆ ಎಂದು ಸಮಾಧಾನಿಸುವ ರೀತಿಯಾಗಿದೆ. ಅನಂತರ ಮುಸ್ಸಂಜೆ ಸಮಯದಲ್ಲಿ ನಡುಮನೆಯಲ್ಲಿ ಸೂತಕದ ಹೆಂಗಸರು ಚಾಪೆ ಹರಡಿ ಕುಳಿತುಕೊಳ್ಳುತ್ತಾರೆ. ಒಂದು ಗಿಂಡಿಯಲ್ಲಿ ಹೊರಗಿನಿಂದ ನೀರನ್ನು ತುಂಬಿಸಿ ಒಳಗೆ ಹರಡಿಸ ಚಾಪೆಯಲ್ಲಿ ಇರುತ್ತಾರೆ. ಹೊರಗೆ ಮಾಡಿದ ಸೋರಿನಲ್ಲಿ ಅಂಗಳ ಪ್ರವೇಶ ಮಾಡುವ ಜಾಗದಲ್ಲಿ ಒಂದು ಪಾತ್ರೆಯಲ್ಲಿ ನೀರು ಹಾಕಿ ಒಂದು ತಂಬಿಗೆ ಹಾಕಿಡುತ್ತಾರೆ. ಆಮೇಲೆ ಕ್ರಿಯೆ ಹಿಡಿಯುವ ವ್ಯಕ್ತಿ ಹೊರಮಾಡಿನ ಅಡಿಯಲ್ಲಿ ಬಂದು, ತನ್ನ ಎರಗೈ ಮಡಚಿ ತನ್ನ ಎಡಹೆಗಲ ಮೇಲಿಟ್ಟು ನಿಲ್ಲುತ್ತಾರೆ. ಆಗ ಒಳಗಿನ ಚಾಪೆಯಲ್ಲಿ ಕುಳಿತವರು “ಅಯ್ಯೋ” ಎಂದು ಮೂರು ಬಾರಿ ಕೂಗುತ್ತಾರೆ. ಈ ಕ್ರಮವನ್ನು ಉತ್ತರಕ್ರಿಯೆಯ ಮೊದಲ ದಿನದವರೆಗೆ ಆಚರಿಸಲಾಗುತ್ತದೆ. ಮನೆಯ ಹೆಂಗಸರಾಗಲೀ ಇತರ ಹೆಂಗಸರಾಗಲೀ ತೀಯರಲ್ಲಿ ಬಸುರಿ ಹೆಂಗಸರು ಸತ್ತರೆ ಪ್ರೇತಗಳಾಗುತ್ತಾರೆ ಎಂಬ ನಂಬಿಕೆಯಿದ್ದು, ಅವರನ್ನು ಕಾಡಿಗೆ ಅಥವಾ ದೂರದ ಸ್ಥಳಗಳಿಗೆ ತೆಗೆದುಕೊಂಡು ಹೋಗಿ ಹೂಳುತ್ತಾರೆ. ಹಾಗೆ ಮಾಡಿದಲ್ಲಿ ಅವರು ಪ್ರೇತಗಳಾಗಿ ತಮ್ಮನ್ನು ಕಾಡಲಾರರು ಎಂಬು ಭಾವಿಸುತ್ತಾರೆ.

ಉತ್ತರಕ್ರಿಯೆ

ಇದರ ಮೊದಲಿನ ದಿನ ಸಂಜೆಯೊಳಗೆ ಎಲ್ಲಾ ಹೆಂಗಸರೂ ಬಂದು ಸೇರುತ್ತಾರೆ. ಗಂಡಸರು ಮಾರನೆಯ ದಿನ ಬಂದರೂ ತೊಂದರೆ ಇಲ್ಲ. ಸೂತಕದ ಹೆಂಗಸರಿಗೆಲ್ಲಾ ಸೂರ್ಯ ಮುಳುಗಿದ ಕೂಡಲೇ ಒಂದು ಸರಳವಾದ ಊಟ ಏರ್ಪಡಿಸುತ್ತಾರೆ. ಆಮೇಲೆ ಏನನ್ನೂ ತಿನ್ನುವಂತಿಲ್ಲ. ಅಡುಗೆಯಲ್ಲಿ ಕುಟುಂಬದ ಹೆಂಗಸರಾಗಲೀ, ಗಂಡಸರಾಗಲೀ ಪಾಲ್ಗೊಳ್ಳುವಂತಿಲ್ಲ. ಸತ್ತ ವ್ಯಕ್ತಿ ಗಂಡಸಾಗಿದ್ದರೆ, ಒಳಗೆ ಕೂತ ಅವನ ಹೆಂಡತಿಯ ತಲೆಗೆ ಬಿಳಿಬಟ್ಟೆಯ ತುಂಡನ್ನು ಮುಸುಕು ಹಾಕುತ್ತಾರೆ. ಮುಖ್ಯ ಮರ್ಯಾದಿಕ್ಕಾರನ್ ಹೊರಗಿರುವ ಗಂಡಸಿನ(ಸತ್ತ ವ್ಯಕ್ತಿಯ ಮಗ ಅಥವಾ ಮಗನ ಸಮಾನವಾದ ಕ್ರಿಯೆ ಹಿಡಿಯುವ ವ್ಯಕ್ತಿ) ಹೆಗಲ ಮೇಲೆ ಬಿಳಿ ಬಟ್ಟೆಯ ತುಂಡನ್ನು ಹಾಕುತ್ತಾನೆ, ಆತನ ಕ್ಷೌರದ ಬಳಿಕ ಕುಟುಂಬಸ್ಥರಲ್ಲದ ಹಿರಿಯ ಹೆಂಗಸು(ಮೂಪತ್ತಿ) ಬಲಗೈಯಲ್ಲಿ ದೀಪ ಹಿಡಿದು ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆಯನ್ನು ನಡು ಅಂಗಳದಲ್ಲಿಟ್ಟು ಒಂದು ಮಣೆಯ ಮೇಲೆ ಇಡುತ್ತಾರೆ. ಸೂತಕದ ಹೆಂಗಸರು ಮೀಯಲು ಹೋಗುವಾಗ ಮತ್ತು ಬರುವಾಗ ಮುಂದಿನಿಂದ ಮೂಪತ್ತಿ ದೀಪ ಹಿಡಿದುಕೊಂಡು ಹೋಗುತ್ತಾಳೆ. ದೀಪದ ಬಳಿ ಮೃತ ವ್ಯಕ್ತಿಯ ಹೆಂಡತಿ ಅಥವಾ ತಾಯಿ ಅಥವಾ ಮಗಳು ಕೂತಿರುತ್ತಾರೆ. ಗಂಡಸರು ಮೀಯಲು ಹೋದಾಗ ಮಿಂದು ಬಂದ ಕುಟುಂಬಸ್ಥರಲ್ಲದ ಹೆಂಗಸರು ಅಡುಗೆ ಮಾಡುತ್ತಾರೆ. ಹಿಂದೆ ಶುದ್ಧಿಕಾರ್ಯ ನಡೆಸಿಕೊಟ್ಟ ಮರ್ಯಾದಿಕ್ಕಾರನ್‌ಗೆ ನಾಲ್ಕು ರೂಪಾಯಿ ಕಾಣಿಕೆ ಕೊಟ್ಟರೆ, ವಣ್ಣಾತ್ತಿಗೆ ಮೂರು ರೂಪಾಯಿ ಕೊಡುತ್ತಿದ್ದರು.

ಬಿಲ್ಲವರ ವಿಧಿನಿಷೇಧಗಳು

ಬಿಲ್ಲವರ ಎಲ್ಲ ಸಂಸ್ಕಾರಗಳ ಆಚರಣೆಯ ವಿಧಿಗಳ ಜೊತೆಗೆ ಅವುಗಳಿಗೆ ಸಂಬಂಧ ಪಟ್ಟಂತೆ ನಿಷೇಧಗಳು ಇವೆ. ಆದರೆ ಅವೆಲ್ಲವೂ ಮಹಿಳೆಯನ್ನು ಒಂದು ಬಗೆಯ ದೂರದಿಂದ ನೋಡುವ ಮತ್ತು ಮಹಿಳೆಗೆ ಮಾತ್ರ ಅನ್ವಯವಾಗುವ ರೀತಿಯಲ್ಲಿವೆ. ಮದುವೆಯಾಗಿ ಹೊರಗಿನಿಂದ ಅಂದರೆ ಬೇರೆ ಕುಟುಂಬದಿಂದ ಮನೆಗೆ ಸೊಸೆಯಾಗಿ ಬಂದ ಹೆಣ್ಣು, ತನ್ನ ಪತಿಯ ಮನೆಯ ಹಿರಿಯರಾದ ಅತ್ತೆ, ಮಾವ, ಭಾವ, ಅತ್ತಿಗೆಯರ ಹೆಸರು ಹಿಡಿದು ಕರೆಯುವಂತಿಲ್ಲ. ಇದು ಅವಳು ತನ್ನ ಗಂಡ ಹಾಗೂ ಆತನ ಮನೆಯವರೊಂದಿಗೆ ತಗ್ಗಿ-ಬಗ್ಗೊ ನಡೆಯಬೇಕೆಂಬ ಉದ್ದೇಶದಿಂದ ಕೂಡಿದೆ. ತನ್ನ ಭಾವ ಅಂದರೆ ಗಂಡನ ಅಣ್ಣ ಅಥವಾ ತಮ್ಮನಿಂದ ಅವಳು ಒಂದು ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಅವರಿಂದ ದೂರವಿರಬೇಕು. ಆತ ಕುಳಿತ ಬೆಂಚು, ಚಾಪೆಯಲ್ಲಿ ಇವಳುಸ ಕುಳಿತುಕೊಳ್ಳಬಾರದು. ಇಂತಹ ಸ್ತ್ರೀ-ಪುರುಷರ ನಡುವೆ ಸಲುಗೆ, ಬೆಳೆದು ಮುಂದೆ ಅವರ ನಡುವೆ ಅನೈತಿಕ ಸಂಬಂಧವು ಏರ್ಪಡಬಹುದೆಂಬ ಭಯ. ಗಂಡಿನ ಕುರಿತಾಗಿ ಆ ಬಗೆಯ ಯಾವುದೇ ಆತಂಕಗಳು ಸಮಾಜದಲ್ಲಿ ಇಲ್ಲದಿದ್ದುದು ಈ ವಿಧಿನಿಷೇಧಗಳಿಗೆ ಕಾರಣವಾಗಿದೆ. ಇದಲ್ಲದೆ, ಹೆಣ್ಣು ತನ್ನ ಭಾವನ ಎಂಜಲು ತೆಗೆಯಬಾರದು, ಹಾಗೆ ತೆಗೆದರೆ ದೋಷ ತಟ್ಟುವುದು, ಪಾಪ ಸುತ್ತಿಕೊಳ್ಳುವುದು ಎಂದು ಬೆದರಿಸುವ ನಿಷೇಧದಲ್ಲಿ, ಅವರ ನಡುವೆ ಯಾವುದೇ ಕಾರಣಕ್ಕೂ ಆತ್ಮೀಯತೆ ಏರ್ಪಡಭಾರದು ಎಂಬ ಎಚ್ಚರವಿದೆ. ಇದು ತಂದೆ-ಮಗಳು, ಅಣ್ಣ-ತಂಗಿ, ಮಾವ-ಸೊಸೆ, ಅತ್ತೆ-ಅಳಿಯರ ನಡುವೆಯೂ ಇದೆ. ಹಿಂದಿನ ಕಾಲದಲ್ಲಿ ಮೈನೆರೆಯುವ ಮೊದಲೇ ಅಥವಾ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಿದ್ದ ಕಾರಣ್ಕಕೆ, ಅವರ ನಡುವೆ ಹೇಳಿಕೊಳ್ಳುವಂತಹ ವಯಸ್ಸಿನ ಅಂತರವಿರುತ್ತಿರಲಿಲ್ಲ. ಹಾಗಾಗಿ ಈ ಬಗೆಯ ಎಚ್ಚರವಹಿಸುವಂತೆ ಅವರನ್ನು ಪ್ರೇರೇಪಿಸಿರಬಹುದು. ಅಥವಾ ಸಂಶಯಗ್ರಸ್ಥ ಮನಸ್ಸು ಇದನ್ನೆಲ್ಲ ಕಲ್ಪಿಸಿಕೊಂಡು ಇಂತಹ ವಿಧಿನಿಷೇಗಳನ್ನು ಸೃಷ್ಟಿಸಿರಬಹುದು. ಇಂಥೆಲೆಲ್ಲ ಹೆಣ್ಣು ಮತ್ತು ಗಂಡಿನ ನಡುವೆ ಏರ್ಪಡಬಹುದಾದ ಸ್ನೇಹಪೂರ್ಣ ಸೌಹಾರ್ದಯುತ ಸಂಬಂಧದ ಸಾಧ್ಯತೆಯನ್ನೇ ಅಲ್ಲಗಳೆಯಲಾಗಿದೆ ಮತ್ತು ನಿರಾಕರಿಸಲಾಗಿದೆ.

ಮದುವೆಯಾಗಿ ಗಂಡನ ಮನೆಯಲ್ಲಿ ಇರುವ ಬಿಲ್ಲವ ಹೆಣ್ಣು ಆಷಾಢ ತಿಂಗಳಿನಲ್ಲಿ ಕಡ್ಡಾಯವಾಗಿ ತನ್ನ ತವರುಮನೆಗೆ ಹೋಗಿ ಇರಬೇಕಿತ್ತು. ಇದಕ್ಕೆ ಕಾರಣ ಹಿಂದಿನ ಕಾಲದಲ್ಲಿ ಹೆಚ್ಚಿನವರು ಕೃಷಿಕರಾಗಿದ್ದು, ಅವರದು ಬಡತನದ ಜೀವನವಾಗಿತ್ತು. ಈ ತಿಂಗಳಿನಲ್ಲಿ ಕೃಷಿ ಸಂಬಂಧಿ ಕೆಲಸಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಿದ್ದ ಅವರಿಗೆ ರಭಸದ ಮಳೆಗಾಲದ ಈ ದಿನಗಳಲ್ಲಿ ಆರೋಗ್ಯ ಕೆಡುವ ಭಯವೂ ಇತ್ತು. ಹೊಸದಾಗಿ ಮದುವೆಯಾಗಿ ಬಂದ ಹೆಣ್ಣು ಹೊಸ ಪರಿಸರಕ್ಕೆ ದೈಹಿಕವಾಗಿ ಒಗ್ಗಿಕೊಳ್ಳದಿದ್ದಲ್ಲಿ ದೈಹಿಕವಾಗಿ ಶ್ರಮವನ್ನು ಬಯಸುವ ಕೃಷಿ ಕೆಲಸಗಳು ಒಮ್ಮೆಲೇ ಅವಳಿಗೆ ಕಷ್ಟಸಾಧ್ಯವಾಗಬಹುದು. ಅದಕ್ಕಾಗಿ ಹವಾ ಬದಲಾವಣೆ ಇರಲಿ ಎಂಬ ಕಾರಣಕ್ಕಾಗಿಯೂ ಇರಬಹುದು ಮತ್ತು ಕೃಷಿ ಕೆಲಸಗಳೆಲ್ಲ ಮುಗಿದ ಬಳಿಕ ಅವರಿಗೆ ಕೆಲಸವಿಲ್ಲದೆ ಹೊಟ್ಟೆ ಹೊರೆಯುವುದು ಒಂದು ಸಮಸ್ಯೆಯಾಗಿದ್ದಿರಬಹುದು. ಮನೆಯ ಸೊಸೆ ಇಲ್ಲಿದ್ದು ಹೊಟ್ಟೆಗೆ ಸರಿಯಾಗಿ ಹಾಕಲಾಗದಿದ್ದ ಅಪವಾದಕ್ಕೆ ತಾವು ಗುರಿಯಾಗಬಾರದೆಂಬುದೂ ಒಂದು ಕಾರಣವಾಗಿದ್ದು, ಅದಕ್ಕಾಗಿಯೂ ಆಕೆಯನ್ನು ಅವರು ತವರಿಗೆ ಕಳುಹಿಸುತ್ತಿದ್ದಿರಬೇಕು. ಕ್ರಮೇಣ ಈ ವಿಚಾರವೇ ಒಂದು ಸಂಪ್ರದಾಯವಾಗಿ ರೂಢಿಗೆ ಬಂದಿರಬೇಕೆಂದು ತೋರುತ್ತದೆ.