ತೀಯರ ವಿಧಿನಿಷೇಧಗಳು

ಬಿಲ್ಲವರಲ್ಲಿರುವಂತೆಯೇ ತೀಯರಲ್ಲೂ ಮದುವೆಯಾಗದ ಹೆಣ್ಣು ಹಿರಿಯರಿಗೆ ವಿಧೇಯಳಾಗಿ ನಡೆಯಬೇಕು ಎಂಬ ನೆಲೆಯಲ್ಲಿ ಎಲ್ಲ ಕ್ರಮಗಳು ರೂಢಿಗೆ ಬಂದಿವೆ. ಅವಳು ತನ್ನ ಮಾವ, ಗಂಡ, ಭಾವ, ಅತ್ತೆಯರ ಹೆಸರು ಹೇಳುವಂತಿಲ್ಲ. ಹೆರಿಗೆಯಾದ ಮನೆಯಲ್ಲಿನ ಗಂಡಸರು ಆ ಮನೆಯಲ್ಲಿ ಹದಿಮೂರು ದಿನಗಳವರೆಗೆ ನಿಲ್ಲುವಂತಿಲ್ಲ. ಹಾಗಾಗಿ ಆ ದಿನಗಳಲ್ಲಿ ಅವರು ಬೇರೆ ಕಡೆ ಹೋಗಬೇಕು. ಆ ದಿನಗಳಲ್ಲಿ ಅವರು ಹೆಂಗಸರು ಹೋಗುವ ಸ್ನಾನದ ಮನೆಗೆ ಕೂಡ ಹೋಗುವುದು ನಿಷಿದ್ಧ. ದೇವರ ಕೋಣೆಗಂತೂ ಹೋಗುಂವತೆಯೇ ಇಲ್ಲ. ಉಳಿದಂತೆ ಬೇರೆ ನಿಷೇಧಗಳು ಬಿಲ್ಲವರಲ್ಲಿ ಇರುವಂತೆಯೇ ತೀಯರಲ್ಲೂ ಇವೆ.

 

ಜನಪದ ಆಟಗಳಲ್ಲಿ ಹೆಣ್ಣು
ಚೆನ್ನೆಮಣೆ ಆಟ

ಜುಲೈ ಕೊನೆಯಿಂದ ಆಗಸ್ಟ್ ಮೊದಲ ವಾರದ ಅವಧಿ (ಹಿಂದೆ ಮಳೆಗಾಲದ ಅವಧಿಯಲ್ಲಿ ಅಂದರೆ ಅಷ್ಟಮಿ/ ಚೌತಿಯ ತನಕ; ಈಗ ದೀಪಾವಳಿ ಹಬ್ಬದ ತನಕ)ಯಲ್ಲಿ ಹೆಚ್ಚಾಗಿ ಹೆಂಗಸರು ಆಡುವ ಆಟವಿದು. ಅಕ್ಕ-ತಂಗಿಯರು ಆಡಬಾರದು ಎಂಬ ನಿಯಮವಿದೆ. ಇದಕ್ಕೆ ಕಾರಣ ಈ ಆಟದ ಹಿಂದಿರುವ ಕತೆಗಳು. ಅವುಗಳಲ್ಲಿ ಸಿರಿ ಪಾಡ್ದನದಲ್ಲಿ ಬರುವ ಅಬ್ಬಗ-ದಾರಗೆಯರ ಕಥೆಯೂ ಒಂದು. ಚೆನ್ನೆಮಣೆ ಆಟಕ್ಕಿಳಿದ ಈ ಸಹೋದರಿಯರು ಮುಂದೆ ಆಟದಲ್ಲಿ ಕಲಹವುಂಟಾದಾಗ ಮಣೆಯಿಂದ ಒಬ್ಬರನ್ನೊಬ್ಬರು ಹೊಡೆದುಕೊಂಡು ಸಾಯುತ್ತಾರೆ. ಅದು ಇಲ್ಲಿನ ಜನಸಾಮಾನ್ಯರಲ್ಲಿ ಒಂದೇ ಮನೆಯ ಸಹೋದರಿಯರು ಆಟವಾಡಿದಲ್ಲಿ, ಅವರ ನಡುವೆ ಇರುವ ಸಲಿಗೆಯಿಂದ ಒಂದಲ್ಲ ಒಂದು ಹಂತದಲ್ಲಿ ಜಗಳವಾಗಿಯೇ ಆಗುತ್ತದೆ. ಮತ್ತು ಅದು ಯಾವುದಾದರೊಂದು ಅನಾಹುತಕ್ಕೆ ಕಾರಣವಾಗುತ್ತದೆ ಎಂಬ ಭಯದ ಭಾವನೆ ಬೇರೂರುವುದಕ್ಕೆ ಕಾರಣವಾಗಿದೆ.

 

ಕೃಷಿ ಸಂಬಂಧಿ ಆಚರಣೆಗಳಲ್ಲಿ ಬಿಲ್ಲವರ ಹೆಣ್ಣು

. ಹೊಸ ಬೆಳೆಯನ್ನು ಮನೆ ತುಂಬಿಸುವುದು

ಮನೆಯ ಗಂಡಸು ಗದ್ದೆಯಲ್ಲಿ ಪೈರು ಬಲಿತ ಸಮಯದಲ್ಲಿ ಗೊತ್ತು ಪಡಿಸಿದ ದಿನದಂದು ಗದ್ದೆಯಿಂದ ತೆನೆಯನ್ನು ಕೊಯ್ಡು ತಂದು ಮನೆಯ ಅಂಗಳದಲ್ಲಿರುವ ತುಳಸೀಕಟ್ಟೆಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಆ ಬಳಿಕ ತೆನೆ ಸಮೇತ ಮನೆಯನ್ನು ಪ್ರವೇಶಿಸುವಾಗ ದ್ವಾರದಲ್ಲಿ ಮನೆಯೊಡತಿ ಆತನ ಕಾಲುಗಳಿಗೆ ನೀರನ್ನೆರೆಯುತ್ತಾಳೆ. ಬಳಿಕ ತೆನೆಯಿಂದ ಪೀಠವನ್ನು ಮನೆಯೊಳಗಿನ ದೇವರ ಕೋಣೆಗೆ ಅಥವಾ ದೈವದ ಗುಡಿಗೆ ಕೊಂಡುಹೋಗಿ ಇರುತ್ತಾರೆ.

. ಹೊಸ ಅಕ್ಕಿ ಊಟ

ಆಯಾ ವರ್ಷದ ಹೊಸ ಬೆಳೆಯನ್ನು, ಆ ವರ್ಷದಲ್ಲಿ ಆಹಾರವಾಗಿ ಪ್ರಥಮ ಬಾರಿಗೆ ಸೇವಿಸುವ ನಿಗದಿತ ದಿನದ ಊಟಕ್ಕೆ “ಹೊಸ ಅಕ್ಕಿಯ ಊಟ” ಎಂದು ಕರೆಯುತ್ತಾರೆ. ಮನೆಯ ಸ್ಥಿತಿಗತಿಗನುಸಾರವಾಗಿ ಊಟಕ್ಕೆ ನಿರ್ದಿಷ್ಟ ಸಂಖ್ಯೆಯ ಮೇಲೋಗರಗಳನ್ನು ಮಾಡಲಾಗುತ್ತದೆ. ಹೆಚ್ಚು ಹೆಚ್ಚು ಸಂಖ್ಯೆಯ ಮೇಲೋಗರಗಳು ಮನೆಯ ಯಜಮಾನನ ಅಂತಸ್ತಿನ ಸೂಚಕಗಳಾಗಿವೆ. ಊಟಕ್ಕೆ ಕೂರುವ ಪಂಕ್ತಿಯ ಮೊದಲಲ್ಲಿ ಮನೆಯ ಯಜಮಾನ ಕುಳಿತುಕೊಳ್ಳಬೇಕು. ಮೊದಲು ಮನೆಯೊಡತಿ ಆತನ ಎಲೆಗೆ ಅನ್ನ ತುಂಬಿದ ಸಟ್ಟುಗವನ್ನು ಮೂರು ಬಾರಿ ಇಡುತ್ತಾಳೆ. ಆಗ ಆತ ಸಟ್ಟುಗದಲ್ಲಿರುವ ಅನ್ನಕ್ಕೆ ಕೈ ಮುಗಿದು ಅಕ್ಕಿಕಾಳಿನ ಅಕ್ಷತೆ ಹಾಕಿ ಪ್ರಾರ್ಥಿಸಿ ಅನ್ನವನ್ನು ತನ್ನ ಎಲೆಗೆ ಜಾರಿಸಬೇಕು. ಆ ಬಳಿಕ ಇದೇ ರೀತಿ ಮನೆಯ ಇತರರೂ ಮಾಡಬೇಕು. ಅಂದಿನ ಅಡುಗೆಯಲ್ಲಿ ಮಳ್ಳು ಸೌತೆ, ಕೆಸುವನ್ನು ಕಡ್ಡಾಯವಾಗಿ ಎಂಬಂತೆ ಬಳಸುತ್ತಾರೆ.

 

ಬಿಲ್ಲವರ ಹಬ್ಬಗಳು
ಕೆಡ್ಡಸ

ತುಳುವಿನ “ಪುಯಿಂತೆಲ್” (ಮಕರಮಾಸ) ತಿಂಗಳ ೨೭ನೇ ದಿನದಿಂದ ಆರಂಭವಾಗಿ ಮುಂದಿನ ಮೂರು ದಿನಗಳವರೆಗೆ ಆಚರಣೆಯಲ್ಲಿರುವ ಹಬ್ಬ (ಕೆಡ್ವಾಸ). ಭೂದೇವಿ “ಬಹಿಷ್ಠೆ” ಯಾಗಿರುವಳು ಎಂಬ ನಂಬಿಕೆ ಈ ಆಚರಣೆಯ ಹಿಂದೆ ಕೆಲಸ ಮಾಡುತ್ತದೆ. ನಾಲ್ಕನೆಯ ದಿನಕ್ಕೆ ಮುತ್ತೈದೆತನವನ್ನು ಸೂಚಿಸುವ ಅರಿಶಿನ, ಕುಂಕುಮ, ಬಳೆ, ಹೂಗಳನ್ನು ಬಾಳೆಯ ಎಲೆಯ ಮೇಲೆ ಅಂಗಳದಲ್ಲಿಟ್ಟು ಪ್ರಾರ್ಥಿಸಿ ಭೂಮಿಗೆ ತೆಂಗಿನ ಎಣ್ಣೆಯನ್ನು ಎರೆಯಲಾಗುತ್ತದೆ. ಇದು ಬಹಿಷ್ಠೆಯಾಗಿದ್ದ ಭೂದೇವಿಯನ್ನು ಸ್ನಾನಾದಿ ಕರ್ಮಗಳಿಂದ ಪರಿಶುದ್ಧಗೊಳಿಸಿ ಅಲಂಕಾರ ಮಾಡುವ ಕ್ರಿಯೆಯೆಂದು ಭಾವಿಸಲಾಗುತ್ತದೆ. ಈ ಮೂರು-ನಾಲ್ಕು ದಿನಗಳಲ್ಲಿ ಮನೆಯ ಹೆಂಗಸರು ಹೊರಗಾಗಬಾರದೆಂದೂ, ಹಾಗೊಮ್ಮೆ ಅದರಲ್ಲಿ ಅದರಿಂದ ಕೆಡುಕಾಗುವುದೆಂದೂ ನಂಬಿಕೆಯಿತ್ತು. ಒಂದೊಮ್ಮೆ ಮುಟ್ಟಾದಲ್ಲಿ ಆಗ ಮುಟ್ಟಾದ ಹೆಂಗಸರು ಆ ಮೂರು ರಾತ್ರಿಗಳಲ್ಲಿ ಹೆಣೆದ ಹಸಿ ತೆಂಗಿನ ಗಡಿಗಳ ಮೇಲೆ ಮಲಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿತ್ತು.

 

ತೀಯರ ಹಬ್ಬ ಹರಿದಿನಗಳು
ಓಣಂ

ಹೆಂಗಸರು ಸಾಂಪ್ರದಾಯಿಕ ಅಡುಗೆಯಾದ ಮುಂಡು ಮತ್ತು ಕವಣಿಯನ್ನು ತೊಟ್ಟುಕೊಳ್ಳುತ್ತಾರೆ. ಅಂದು ಅವರು ವೃತ್ತಾಕಾರವಾಗಿ ನಿಂತು “ಕೈಕೊಟ್ಟಿಕಳಿ” ಎಂಬ ಸಾಮೂಹಿಕ ನೃತ್ಯವನ್ನು ಅಭಿನಯಿಸುತ್ತಾರೆ.

ತಿರುವಾದಿರ ಅಥವಾ ಆರ್ದ್ರಾ

ದಶಂಬತ ತಿಂಗಳಿನ ಶುಕ್ಲಪಕ್ಷ ಹುಣ್ಣಿಮೆಯ ದಿನ ಸದಾ ಮುತ್ತೈದೆಯಾಗಿರುವ ಆಶಯದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಗುಂಪುಗೂಡುವ ಹೆಂಗಳೆಯರೆಲ್ಲ ಸೇರಿ, ಹಣತೆ ಅಥವಾ ಹಚ್ಚಿಟ್ಟ ಕಾಲು ದೀಪದ ಸುತ್ತಲೂ ವೃತ್ತಾಕಾರವಾಗಿ ನಿಂತು, ಪರಸ್ಪರ ಕೈ ತಟ್ಟುತ್ತ ಕುಣಿಯುತ್ತಾ ಸಾಗುತ್ತಾರೆ. ಇದಕ್ಕೆ “ತಿರುವಾದಿರಕಳಿ” ಎಂದು ಹೆಸರು. “ಪೂರಕ್ಕಳಿ” ಎಂಬುದು ಪುರುಷರ ಸಾಮೂಹಿಕ ನೃತ್ಯವಾಗಿದೆ.

ವಿಷು

ಏಪ್ರಿಲ್ ತಿಂಗಳಿನಲ್ಲಿ ಆಚರಿಸುವ (ವಿಷು) ಅಥವಾ (ಬಿಸು) (ಬೇರೆಡೆಯಲ್ಲಿ ಯುಗಾದಿ) ಸಂಪೂರ್ಣವಾಗಿ ಮಹಿಳೆಯರದೇ ಹಬ್ಬ. ಅಂದು ನಡೆಯುವ ಎಲ್ಲ ಕೆಲಸಗಳಲ್ಲಿ ಮಹಿಳೆಯರದೇ ಮುಖ್ಯಪಾತ್ರ. ಮನೆಗೆ ಬರುವ ಹೊಸ ಬೆಳೆ ಮತ್ತು ಮನೆಯ ಮಹಿಳೆಯರಲ್ಲಿ ಇರುವ ಅವಿನಾಭಾವ ಸಂಬಂಧ ಇದರಲ್ಲಿ ವ್ಯಕ್ತವಾಗುತ್ತದೆ. ಅಂದು ಎಲ್ಲ ಬಗೆಯ ತರಕಾರಿಗಳಿಂದ ಅಡುಗೆ ತಯಾರಿಸಲಾಗುತ್ತದೆ. ಹೊಸ ಬಟ್ಟೆ ಧರಿಸಿ, ಮನೆಯೆದುರು ಹೂವಿನಿಂದ ಆಕರ್ಷಕವಾಗಿ ರಂಗೋಲಿ ಬಿಡಿಸುತ್ತಾರೆ. ಅವರ ಸಂಭ್ರಮದಲ್ಲಿ ಮನೆಯ ಪುರುಷ ಸದಸ್ಯರು, ನೆರೆಹೊರೆಯ ಮಂದಿ ಪಾಲ್ಗೊಳ್ಳುತ್ತಾರೆ.

ಸಾಹಿತ್ಯ

ವಡಕ್ಕನ್‌ಪಾಟ್ಟು

ಇವು ಕೇರಳದ ಕಥನಗೀತೆಗಳಾಗಿವೆ. ವೀರ, ಶೌರ್ಯಗಳ ವಿವರಣೆ ನೀಡುವ ಇವು ಮಾಧವಿ, ಉಣ್ಣಿಯಾರ್ಚ ಎಂಬ ತೀಯ ಮಹಿಳೆಯರ ಪರಾಕ್ರಮವನ್ನು ವರ್ಣಿಸುತ್ತವೆ.

ಕಳರಿ ವಿದ್ಯೆ ಕಲಿಸುವ ಸ್ಥಳ. ಅಂಗಸಾಧನೆಗೆ ಮಾತ್ರವಲ್ಲದೆ ದೈವಿಕ ಆರಾಧನಾ ಸ್ಥಳ. ಇದನ್ನು ಕಲಿಯಲು ಅದರದೇ ಆದ ವಿಧಿವಿಧಾನಗಳಿವೆ. ಪ್ರತಿಯೊಂದು ಗರಡಿಗೂ ಅದರ ಆರಾಧನಾ ದೇವರೆ “ಪರಾದೇವತಾ” (ಭಗವತಿ) ಇರುತ್ತಾಳೆ. ಈ ವಿದ್ಯೆ ಕಲಿಯಲು ಗಂಡಸರು, ಹೆಂಗಸರು ಎಂಬ ಭೇದ ಇರಲಿಲ್ಲ. ಎಲ್ಲರೂ ಕಳರಿ ಅಭ್ಯಾಸ ಮಾಡುತ್ತಿದ್ದರು. ಗಂಡಸರು ಸಂಪೂರ್ಣ ಪರಿಣತಿ ಪಡೆದರೆ, ಹೆಂಗಸರು ಉತ್ತಮ ಅಂಗಸೌಷ್ಟವ ಪಡೆಯುವ ಮತ್ತು ಈಗಿನ ಕರಾಟೆಯಂತೆ ಶರೀರಕ್ಕೆ ರಕ್ಷಣೆ ಒದಗಿಸಲು ಅಭ್ಯಾಸ ಮಾಡುತ್ತಿದ್ದರು. ಸೌಂದರ್ಯ ಮೀಮಾಂಸೆಯ ದೃಷ್ಟಿಯಿಂದಲೇ ಹೆಣ್ಣನ್ನು ನೋಡಲಾಗುತ್ತಿತ್ತು ಮತ್ತು ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ ಈ ವಿದ್ಯೆಯ ಬಳಕೆಯಾಗುತ್ತಿತ್ತು. ಸ್ವರಕ್ಷಣೆಯ ಹೊಣೆಗಾರಿಕೆಯನ್ನೂ ಅವರೇ ವಹಿಸಿಕೊಂಡು ಇದನ್ನು ಕಲಿಯುತ್ತಿದ್ದರು ಎಂಬುದು ಕೂಡ ಒಂದು ಅಂಶವಾಗಿದೆ.

ಬಿಲ್ಲವರ ಮತ್ತು ತೀಯರ ಆರಾಧನಾ ವಿಚಾರಗಳು

ಬಿಲ್ಲವರ ಶೈವ ದೇವತೆಯ ಆರಾಧಕರಾದುದರಿಂದ ಸಹಜವಾಗಿಯೇ ಅವರಿಗೆ ನಾಗಾರಾಧನೆ, ಭೂತಾರಾಧನೆಗಳೂ ಮುಖ್ಯವಾಗುತ್ತವೆ. ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಜುಮಾದಿ, ಬೊಬ್ಬರ್ಯ ಇವು ಬಿಲ್ಲವರು ಮುಖ್ಯವಾಗಿ ಆರಾಧಿಸುವ ದೈವಗಳು. ತುಳುನಾಡಿನ ಎಲ್ಲಾ ಜನಾಂಗಗಳ ಆರಾಧನಾ ದೈವವಾಗಿರುವ ಬೆರ್ಮೆರ್ ದೈವವನ್ನು ಬಿಲ್ಲವರ ಗರಡಿಗಳಲ್ಲಿ ಆರಾಧಿಸಲಾಗುತ್ತದೆ. ನಾಗಾರಾಧನೆಯೊಂದಿಗೆ ತಳುಕು ಹಾಕಿಕೊಂಡಿರುವ ಬೆರ್ಮೆರ್ ಆರಾಧನೆಗೆ ತುಳುನಾಡಿನಲ್ಲಿ ವಿಶೇಷವಾದ ಮಹತ್ವವಿದೆ. ಬೆರ್ಮೆರ್ ದೈವವು ಸಂತಾನ, ಕೃಷಿ, ಪ್ರಕೃತಿ ಸಂಬಂಧಿ ದೈವವಾಗಿರುವುದು ಇದಕ್ಕೆ ಕಾರಣವಾಗಿದೆ.

ತೀಯರು ಭಗವತಿಯನ್ನು ಕುಲದೇವತೆಯಂತೆ ಆರಾಧಿಸುತ್ತಿದ್ದು, ಪೂಮಾಣಿ, ಕಿನ್ನಿಮಾಣಿ, ಚಾಮುಂಡಿ ಇವರು ಆರಾಧಿಸುವ ಇತರ ಪ್ರಮುಖ ದೈವಗಳು. ಸಂಘಂ ಕಾಲದಲ್ಲಿ ತೀಯರು ಕೊಟ್ಟವೈ ಎಂಬ ದೇವಿಗೆ ದೈವಾರಾಧನೆಯ ಮುಖ್ಯ ಅಂಗವಾಗಿ ಕಳ್ಳನ್ನು ಸಮರ್ಪಿಸುತ್ತಿದ್ದುದನ್ನು ಉಲ್ಲೇಖಿಸಲಾಗಿದೆ.

ತೀಯರ ದೇವತಾರಾಧನೆ

ಕೇರಳದಿಂದ ತುಳುನಾಡಿಗೆ ಜನರು ವಲಸೆ ಬಂದಂತೆ ಅವರ ದೈವಗಳೂ ಬಂದಿವೆ. ಒಂದು ಕಾಲದಲ್ಲಿ ಮನುಷ್ಯರಾಗಿ ಬದುಕಿ, ಕಾರಣಾಂತರದಿಂದ ಸತ್ತು, ಶಿವನನ್ನೋ, ದೇವಿಯನ್ನೋ ಸೇರಿ ಅವರ ಅನುಗ್ರಹದಿಂದ ಮತ್ತು ಭೂಲೋಕಕ್ಕೆ ಬಂದು ತ್ಯೆಯ್ಯಂ ಆದ ವ್ಯಕ್ತಿಗಳನ್ನು ಆರಾಧಿಸಲಾಗುತ್ತದೆ. ತ್ಯೆಯ್ಯಂ ಆರಾಧನೆಯಲ್ಲಿ “ಅಮ್ಮ ದೈವಂ”ಗಳನ್ನು ದೇವಿಯ ಅಂಶಗಳಾಗಿ ಪರಿಗಣಿಸಿ ಅವುಗಳಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ. ಕೇರಳದ ಒಟ್ಟು ತ್ಯೆಯ್ಯಂಗಳಲ್ಲಿ ಮುಕ್ಕಾಲು ಪಾಲು “ಅಮ್ಮ” ತ್ಯೆಯ್ಯಂಗಳಾಗಿವೆ. “ಅಮ್ಮಂ ದೈವ”ವನ್ನು ಕೃಷಿ ದೇವತೆಯಾಗಿಯೂ ಆರಾಧಿಸುತ್ತಾರೆ.

ಭಗವತೀ ಆರಾಧನೆ

ಭಗವತಿಗೆ ತ್ಯೆಯ್ಯಂ ಕಟ್ಟುವ ವಾಡಿಕೆಯಿಲ್ಲ. ಶ್ರೀ ಚೀರುಂಬಾ ಭಗವತಿಯು ಸಮರ ದೇವತೆ ಎಂದೂ ನಾಗವಂಶಕ್ಕೆ ಶಾಸ್ತಿ ಮಾಡಿರುವಳೆಂದೂ ತಿಳಿಯುತ್ತದೆ. ದಾರಿಗಾಸುರನ ನಾಶಕ್ಕಾಗಿ ಶಿವನ ಹಣೆಗಣ್ಣಿನ ನೀರಹನಿಯಿಂದ ಅವನ ತೊಡೆಯ ಮೇಲೆ ಬಿದ್ದು ಜನಿಸಿದವಳು ಚೀರುಂಬಾ ಭಗವತಿ. ಆದಿಮೇದಾಳ ನಾಮಾಕಿತನಾದ ಗುಳಿಗನ ಭುಜದ ಮೇಲೆ ನಿಂತು ಅವನ ಕೋಟೆಯನ್ನು ನೋಡಿದ ದೇವಿಯು ಮುದಿಕಿಯ ವೇಷದಲ್ಲಿ ಅವನನ್ನು ಮೋಸಗೊಳಿಸಿ, ಗುಳಿಗನ ಸಹಾಯದಿಂದ ದಾರಿಗಾಸುರನನ್ನು ಸಂಹರಿಸಿದಳು. ಪ್ರತೀವರ್ಷ ಅಥವಾ ಮೂರು ಅಥವಾ ಐದು ಅಥವಾ ಏಳು ವರ್ಷಗಳಿಗೊಮ್ಮೆ ಭರಣಿ ನಕ್ಷತ್ರದಂದು ಏಳು ದಿನಗಳ ಕಾಲ ಭರಣಿ ಉತ್ಸವ. ಗೊನೆ ಮುಹೂರ್ತ, ಮರ ಮುಹೂರ್ತ ಆದ ಬಳಿಕ “ಆನೆಪಂದೊಲು” ಎಂದು ಕರೆಯಲಾಗುವ ಆನೆಗಾತ್ರದ ಚಪ್ಪರವನ್ನು ಹಾಕುವ ಮೂಲಕ ಉತ್ಸವದ ಆರಂಭ. ಶ್ರೀಕ್ಷೇತ್ರಕ್ಕೆ ಸಂಬಂಧಿಸಿದ ನಾಲ್ಕು ತರವಾಡಿನ ಮನೆಗಳ ಪೈಕಿ ಮೊದಲೇ ಗೊತ್ತು ಮಾಡಿದ ಒಂದು ತರವಾಡಿನ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಆ ತರವಾಡಿಗೆ ಸೇರಿದ ಹತ್ತು ವರ್ಷದೊಳಗಿನ ಹೆಣ್ಣು ಮಗುವನ್ನು ಆಶೀರ್ವದಿಸಿ ಪೂಜೆಗಾಗಿ ಸ್ವೀಕರಿಸುತ್ತಾರೆ. ಈ ಉತ್ಸವ ಮುಗಿಯುವವರೆಗೆ ಮಗು ಶುದ್ಧಾಚಾರದಲ್ಲಿ ಇರಬೇಕಾಗುತ್ತದೆ. ಇದು ಬಯಲುಸೀಮೆಯಲ್ಲಿ ಆಚರಣೆಯಲ್ಲಿ ಇರುವ ಕಲಶ ಹೊರುವ, ನೇಪಾಳದಲ್ಲಿ ಇರುವ ಕುಮಾರೀ ಪೂಜೆಯ ಆಚರಣೆಯನ್ನು ನೆನಪಿಗೆ ತರುತ್ತದೆ. ಭಗವತಿ ಆರಾಧನೆಯಲ್ಲಿ ಕಂಡು ಬರುವ ಕಥೆಯೊಂದು ತೀಯರ ಕುರಿತು ಅಸ್ಪೃಶ್ಯತೆಯ ಸೂಚನೆಯನ್ನು ನೀಡುತ್ತದೆ. (ಹೆಚ್ಚಿನ ವಿವರಗಳಿಗೆ ಸಂಗೀತಾ ಎಂ. ಅವರ “ದ.ಕ.ದ ತೀಯ ಜನಾಂಗ- ಒಂದು ಸಾಂಸ್ಕೃತಿ ಅಧ್ಯಯನ” ವನ್ನು ನೋಡಿ)

ಕೊರತಿ ದೈವಾರಾಧನೆ

ಕೊರತಿ ಮಾತೆಯನ್ನು ತೀಯರ ಎಂಟು ಬಳಿಯವರ ತರವಾಡುಗಳಲ್ಲಿ ಆರಾಧಿಸುತ್ತಾರೆ. ತೀಯರ ಸಮುದಾಯದ ಮಹಿಳೆಯರು ಬಹಳ ಭಯಭಕ್ತಿಯಿಂದ ಶುದ್ಧಾಚಾರದಲ್ಲಿ ಮೀನು, ಮಾಂಸದೂಟ ತಯಾರಿಸಿ ಅರ್ಪಿಸುತ್ತಾರೆ. ಪ್ರತೀ ತರವಾಡಿನಲ್ಲಿ ಈ ಮಾತೆಗೆ ಎತ್ತರದಲ್ಲಿ ಮಂಚವಿರುತ್ತದೆ. ತರವಾಡಿನ ಯಾವುದೇ ಕಾರ್ಯವನ್ನು ಕೈಗೊಳ್ಳುವಾಗಲೂ ಇಲ್ಲಿ ಪೂಜೆ ನಡೆಸಿ, ದೈವಕ್ಕೆ ಗೌರವಗಳನ್ನು ಸಲ್ಲಿಸಲಾಗುತ್ತದೆ.

ಆಲಿ ತೈಯ್ಯಂ ಆರಾಧನೆ

ಆಲಿ ಎಂಬ ಮಂತ್ರವಾದಿ ಮುಸ್ಲಿಂನು ಕೊಳದಲ್ಲಿ ಮೀಯುತ್ತಿದ್ದ ಸುಂದರ ಸ್ತ್ರೀ (ದೇವಿ)ಯನ್ನು ಬಯಸುತ್ತಾನೆ. ಅವಳ ನಿರ್ಬಂಧಕ್ಕೆ ಸಿಲುಕಿ ನೀರಿಗಿಳಿದ ಅವನನ್ನು ಅವಳು ನೀರಿನಲ್ಲಿ ಮುಳುಗಿಸುತ್ತಾಳೆ. ಆ ಬಳಿಕ ತೈಯ್ಯಂ (ದೈವ) ಆದ ಆಲಿ ಆರಾಧಿಸಲ್ಪಡುತ್ತಾನೆ. ಈ ಆರಾಧನೆಯಲ್ಲಿ ಮುಸ್ಲಿಮರೂ ಭಾಗವಹಿಸುತ್ತಾರೆ. ಕೇರಳ ಪರಿಸರದಲ್ಲಿನ ಧರ್ಮ ಸಮನ್ವಯ ಗುಣ ಈ ಆಚರಣೆಯ ಹಿನ್ನೆಲೆಯಲ್ಲಿದೆ.

ಸಂತಾನಕ್ಷಮತೆ ಇರುವ ಹೆಣ್ಣಿನ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸುವ ಅಯ್ಯಪ್ಪನ ಆರಾಧನೆಯಲ್ಲೂ ಅಯ್ಯಪ್ಪ ವೃತಧಾರಿಗಳು ಶಬರಿಮನೆಗೆ ಸಾಗುವ ಹಾದಿಯಲ್ಲಿ ಮಸೀದಿಯೊಂದರಲ್ಲಿ ಪೂಜೆ ಸಲ್ಲಿಸಿ ಮುಂದೆ ಸಾಗಬೇಕೆಂಬ ನಿಯಮ ಇಂದಿಗೂ ನಡೆದುಕೊಂಡು ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.

 

ಮಹಿಳೆಯರಿಗೆ ಸಂಬಂಧಿಸಿದ ಒಗಟುಗಳು/ನಂಬಿಕೆಗಳು

ಮಹಿಳಾ ಸಂಬಂಧಿ ಒಗಟುಗಳು

ಒರಿ ಅಜ್ಜಿಕ್ ಮೂನು ಕಣ್ಣ್ (ಒಬ್ಬಳು ಅಜ್ಜಿಗೆ ಮೂರು ಕಣ್ಣುಗಳು)

ಅಮ್ಮ ಕಲ್ಲ್‌ಲುಂ, ಮುಳ್ಳಿಲುಂ, ಮೊವ ಮಂಙ್ಙಲ ಪಂದಲಿಲುಂ (ತಾಯಿ ಕಲ್ಲಿನಲ್ಲಿ, ಮುಳ್ಳಿನಲ್ಲಿ, ಮಗಳು ಮದುವೆ ಚಪ್ಪರದಲ್ಲಿ)

ಮುಟ್ಟತ್ತೆ ಕನ್ಯಕ ನಿನ್ನು ಪೆಟ್ರು (ಅಂಗಳದ ಕನ್ಯೆ ನಿಂತು ಹೆತ್ತಳು)

ಮೇಲೆ ಹೇಳಲಾದ ಒಗಟುಗಳಲ್ಲಿ ವಿಶೇಷತೆಯೇನೂ ಕಂಡುಬರದಿದ್ದರೂ ಅವು ಹೆಣ್ಣಿಗೆ ಸಂಬಂಧಿಸಿವೆ ಎಂಬ ಕಾರಣಕ್ಕಾಗಿ ಇಲ್ಲಿ ಕೊಡಲಾಗಿದೆ.

ನಂಬಿಕೆಗಳು ಬದುಕಿಗೆ ಪೂರಕವೂ ಹೌದು, ಮಾರಕವೂ ಹೌದು. ಅವು ಬದುಕನ್ನು ಕಟ್ಟುವಂತೆ ಒಡೆಯಲೂ ಬಲ್ಲವು. ಹೆಣ್ಣಿಗೆ ಸಂಬಂಧಿಸಿದ ಯಾವುದೇ ಬಗೆಯ ನಂಬಿಕೆಗಳಾಗಲೀ, ಆಚರಣೆಗಳಾಗಲೀ ಅವು ಅವಳ ಮೇಲೆ ನಿಯಂತ್ರಣ ಸಾಧಿಸುವ ನೆಲೆಯಲ್ಲೇ ಕೆಲಸ ಮಾಡಿವೆ.

. ಧಾರ್ಮಿಕ ನಂಬಿಕೆಗಳು

– ತುಳಸಿ ಗಿಡದಿಂದ ಪತಿವ್ರತೆಯರು ಎಲೆಗಳನ್ನು ಕೀಳಬಾರದು.

– ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣಿಗೆ ಅಪಾಯ

ಮೊದಲ ನಂಬಿಕೆಯ ಹಿನ್ನೆಲೆಯಲ್ಲಿ ಗಿಡಮೂಲಿಕೆಗಳ ಸಂರಕ್ಷಣೆಯ ದೃಷ್ಟಿ ಕಂಡುಬಂದರೆ, ಎರಡನೆಯದರಲ್ಲಿ ವಿವೇಚನೆಯಿಲ್ಲದ ಮೂಢತೆ ಮಾತ್ರ ಗೋಚರಿಸುತ್ತದೆ.

. ಸಾಂಸ್ಕೃತಿಕ ನಂಬಿಕೆಗಳು

-ಮಂಗಳವಾರ ಮತ್ತು ಶುಕ್ರವಾರಗಳಂದು ಮದುಮಗಳು ತಾಯಿ ಮನೆಯಿಂದ ಹೊರಬಾರದು.

-ಆಟಿ ತಿಂಗಳಲ್ಲಿ ಸೊಸೆ ತವರಿಗೆ ಹೋಗದಿದ್ದರೆ ಅತ್ತೆಯ ಕಣ್ಣು ಒಡೆಯುತ್ತದೆ.

-ಆಷಾಢದಲ್ಲಿ ಅತ್ತೆ, ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದು.

-ಆಟಿ ತಿಂಗಳಿನಲ್ಲಿ ಹೊಸ ಸೀರೆ, ಬಳೆ ತೊಡಬಾರದು

– ಸೊಸೆ ತನ್ನ ಅತ್ತೆ, ಗಂಡನ ಹೆಸರು ಹೇಳಬಾರದು

ಬಡತನದ ಬದುಕಿನಲ್ಲಿ ಅತ್ತೆ-ಸೊಸೆಯರ ನಡುವಿನ ಸಂಬಂಧದ ಎಳೆ ಬಹು ಸೂಕ್ಷ್ಮದ್ದು. ಗಂಡನ ಮನೆಗೆ ಹೊಸಬಳಾದ ಸೊಸೆ ಮತ್ತು ಅಲ್ಲಿನ ಯಜಮಾನಿಕೆಯನ್ನು ನಡೆಸಿಕೊಂಡು ಬಂದಸ ಅತ್ತೆಯ ನಡುವೆ ಏರ್ಪಡುವ ಸಂಬಂಧ ಬಲಗೊಳ್ಳಬೇಕಾದುದು ಅನಿವಾರ್ಯ. ಅದು ಹರಿಯದಂತೆ ಎಚ್ಚರಿಕೆ ಅಗತ್ಯ. ಸಂಬಂಧಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮತ್ತು ಹಿರಿಯರ ಕುರಿತು ಗೌರವವನ್ನು ತೋರಿಸುವ ನೆಲೆಯಲ್ಲಿ ಇಂತಹ ನಂಬಿಕೆಗಳು ಹುಟ್ಟಿಕೊಂಡಿವೆ.

-ಉಗುರಿನಲ್ಲಿ ಬಿಳಿಯ ಚುಕ್ಕೆ ಹೂವು ಮೂಡಿದರೆ ಮನೆಯಲ್ಲಿ ಬಸುರಿ ಹೆಂಗಸಿದ್ದಾಳೆಂಬ ಸೂಚನೆ

-ಗರ್ಭಿಣಿಯ ಹೊಟ್ಟೆ ಸಣ್ಣಗಿದ್ದರೆ ಗಂಡು ಮಗು, ದಪ್ಪಗಿದ್ದರೆ ಹೆಣ್ಣು ಮಗು.

-ಬಾಣಂತಿ ಹೆಂಗಸು ರಾತ್ರಿ ಸಮಯದಲ್ಲಿ ಒಂಟಿಯಾಗಿ ಹೊರಗಡೆ ಹೋಗಬಾರದು.

-ಬಾಣಂತಿ ಬರಿಗಾಗಲ್ಲಿ, ಹೊರ ಹೋಗಬಾರದು, ಮೆಟ್ಟು ಹಾಕಿಕೊಂಡು ಕೈಯಲ್ಲಿ ಕಬ್ಬಿಣದ ತುಂಡನ್ನು ಹಿಡಿದುಕೊಂಡಿರಬೇಕು.

-ಬಾಣಂತಿಯ ಆರೋಗ್ಯದ ಕುರಿತ ಕಾಳಜಿ ಇದರಲ್ಲಿ ವ್ಯಕ್ತವಾಗಿದೆ.

-ಬಾಣಂತಿಯರ ಕಾಲು ದಾಟಬಾರದು, ದಾಟಿದರೆ ಮಕ್ಕಳಿಗೆ ಹಾಲು ಬರುವುದಿಲ್ಲ.

-ಅದಕ್ಕಾಗಿ ಕಾಲನ್ನು ಪುನಃ ಮರಳಿ ದಾಟಬೇಕು.

ಸಾಮಾನ್ಯವಾಗಿ ಬಾಣಂತಿಯರು ತಮ್ಮ ಕಾಲ ಮೇಲೆ ಮಗುವನ್ನು ಮಲಗಿಸಿ ಕೊಂಡಿರುತ್ತಾರೆ. ಅವಳ ಕಾಲನ್ನು ದಾಟಿದ ವ್ಯಕ್ತಿ ಕಾಲು ತೊಡರಿ ಬಿದ್ದು ತಾಯಿಯ ಕಾಲ ಮೇಲೆ ಇರುವ ಮಗುವಿಗೆ ಅಪಾಯವಾಗಬಾರದೆಂಬ ಕಳಕಳಿಯೇ ಈ ನಂಬಿಕೆಗೆ ಕಾರಣ. ಬಸುರಿ-ಬಾಣಂತಿಯರಿಗೆ ಸಂಬಂಧಿಸಿದ ನಂಬಿಕೆಗಳು ಭಾವನಾತ್ಮಕ ನೆಲೆಯದ್ದಾಗಿದ್ದು, ಅವರ ಕುರಿತಾದ ಪ್ರೀತಿ, ಕಾಳಜಿಗಳೇ ಕಾರಣವಾಗಿ ಹುಟ್ಟಿಕೊಂಡಿವೆ ಎನ್ನಬಹುದು.

-ಖಾಲಿ ತೊಟ್ಟಿನಲ್ಲಿ ತೂಗಬಾರದು.

ಹುಟ್ಟಿದ ಮಗು ಮರಣಿಸಿದ ಸಂದರ್ಭದಲ್ಲಿ ಹುಟ್ಟಿದ ನಂಬಿಕೆ ಇದಾಗಿದ್ದು, ಖಾಲಿ ತೊಟ್ಟಿಲು ಅದನ್ನು ನೆನಪಿಸಿ ದುಃಖಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಕಾರಣದಿಂಧ ಅದನ್ನು ತೂಗಬಾರದು ಎಂದು ನಿಷೇಧವನ್ನು ತಂದಿರಬೇಕು.

-ಮಗುವನ್ನು ತೆಗೆದುಕೊಂಡವರ ಕೈಯಲ್ಲಿಯೇ ವಾಪಾಸು ಕೊಡದಿದ್ದರೆ, ಮಾಡಿದ ಸಾಲ ಹಾಗೆಯೇ ಉಳಿಯುತ್ತದೆ.

ಈ ನಂಬಿಕೆ ಮಗುವಿನ ಸುರಕ್ಷತೆಯ ದೃಷ್ಟಿಯಿಂದ ರೂಪುಗೊಂಡಿದೆ. ಇಲ್ಲವಾದಲ್ಲಿ ಮಗುವನ್ನು ಯಾರು ಯಾರದೋ ಕೈಯಲ್ಲಿ ಕೊಟ್ಟು ಅನಾಹುತಗಳಾಗುವ ಸಂದರ್ಭವನ್ನು ತಪ್ಪಿಸಲು ಈ ನಂಬಿಕೆ ಸಹಕರಿಸುತ್ತದೆ.

-ಮಗುವಿಗೆ ತಾಯಿಯು ಒಂದೇ ಮೊಲೆಯ ಹಾಲನ್ನು ಕುಡಿಸಿ ನಿಲ್ಲಿಸಬಾರದು.

ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಏಕಮಾತ್ರ ಆಹಾರವಾಗಿರುವ ಕಾರಣಕ್ಕೆ ಮಗುವಿಗೆ ಒಂದೇ ಮೊಲೆಯ ಹಾಲು ಸಾಕಾಗದಿರಬಹುದು. ಮೊದಲ ಮಗುವನ್ನು ಹೆತ್ತ ಹೆಣ್ಣ ಅನನುಭವಿಯಾಗಿರುವ ಕಾರಣಕ್ಕೆ ಈ ನಂಬಿಕೆ ರೂಢಿಗೆ ಬಂದಿರಬಹುದು.

-ಹೆಣ್ಣು ಮಗು ತಾಯಿಗೆ ಆಧಾರ, ಗಂಡು ಮಗ ತಂದೆಗೆ ಆಧಾರ.

ಶ್ರೇಣೀಕೃತ ಶ್ರಮವಿಭಜನೆಯ ನೆಲೆಯಿಂದ ಮಗಳು ಗೃಹಕೃತ್ಯದ ನಿರ್ವಹಣೆಗೆ, ಮಗ ಹೊರ ಸಂಪಾದನೆಗೆ ಹೋಗುವವ ಎಂಬ ಕಾರಣಕ್ಕೆ ಈ ನಂಬಿಕೆ ಬೆಳೆದಿರಬಹುದು.

-ಹುಡುಗಿ ನಡೆಯುವಾಗ ಕಾಲು ಸವರಿಕೊಂಡು ನಡೆದರೆ ಮನೆ ಗುಡಿಸಿ, ಗುಂಡಾಂತರವಾಗುತ್ತದೆ.

-ಮುಟ್ಟಾದ ಹೆಂಗಸರು ಮನೆಯೊಳಗೆ ಪ್ರವೇಶಿಸುವಂತಿಲ್ಲ.

-ಮುತ್ತೈದೆ ಹೆಂಗಸು, ಮದುವೆಯಾಗದ ಹೆಣ್ಣು ಕವುಚಿ ಮಲಗಿಕೊಂಡು ಹಾಕಿದ ಕಣ್ಣೀರು ಭೂಮಿಗೆ ಬಿದ್ದರೆ ಮನೆಗೆ ಒಳ್ಳೆಯದಾಗಲಾರದು.

-ಗಂಡನ ಊಟದ ನಂತರ ಹೆಂಡತಿ ಅದೇ ಬಟ್ಟಲದಲ್ಲಿ ಊಟ ಮಾಡಬೇಕು.

-ಗಂಡಸರಗೆ ಹಿಡಿಸೂಡಿ ತಾಗಿಸಬಾರದು.

-ಹೆಂಗಸರು ಅವಳಿ ಬಾಳೆಹಣ್ಣು ತಿನ್ನಬಾರದು.

-ಹೆಣ್ಣು ನೋಡಲು ಬರುವಾಗ ಮನೆಯ ಎದುರಿನಲ್ಲಿ ಹಿಡಿಸೂಡಿ ಇರಬಾರದು.

-ಕೈಯಲ್ಲಿದ್ದ ಬಳೆಯನ್ನು ಒಡೆಯಬಾರದು.

ಇವು ಹೆಣ್ಣು ಇಂದಿಗೂ ಗಂಡಿನ ಅಧೀನಳು, ಕೆಲಸ ಶ್ರೇಣೀಕರಣದಂತೆ ಹೆಣ್ಣಿಗೆ ಹಂಚಲಾಸ ಕೆಲಸಗಳು ಯಾವತ್ತೂ ಕೆಳಮಟ್ಟದವು ಎಂಬ ಭಾವನೆಯನ್ನು ಹಾಗೂ ಹೆಣ್ಣಿನ ಕುರಿತಾದ ಸಾಂಪ್ರದಾಯಿಕ ಪಡಿಯಚ್ಚಿನ ಅಪೇಕ್ಷಿಯಿಂದ ಹುಟ್ಟಿಕೊಂಡ ನಂಬಿಕೆಗಳು ಎನ್ನಬಹುದು.

ಉಪಸಂಹಾರ

ಒಟ್ಟಿನಲ್ಲಿ ಹೇಳುವುದಾದರೆ ಸಮಾಜದ ಹಿಂದುಳಿದ ಸಮುದಾಯವಾಗಿರುವ ಬಿಲ್ಲವರಲ್ಲಾಗಲೀ, ತೀಯರಲ್ಲಾಗಲೀ ಕುಟುಂಬ ವ್ಯವಸ್ಥೆ ಮಾತೃಮಾಲೀಯವಾದುದಾಗಿತ್ತು. ಆಸ್ತಿಯ ಹಕ್ಕಿನ ಸಂದರ್ಭದಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಅಂದರೆ ತಾಯಿಯ ಕಡೆಯಿಂದ ಆಸ್ತಿ ಬರುವ ಕಾರಣಕ್ಕೆ ಈ ಪದ್ಧತಿ ಮಾನ್ಯವಾಗಿತ್ತು. ಇದರಿಂದ ನೇರವಾಗಿ ಹೆಣ್ಣಿಗೆ ಅಂತಹ ಅನುಕೂಲವೇನಿರಲಿಲ್ಲ. ಈ ಜನಾಂಗದ ಇತಿಹಾಸದ ಅಧ್ಯಯನದಿಂದ ಮೇಲ್ಕೋಟಕ್ಕೆ ಬಿಲ್ಲವ ಹೆಣ್ಣು ಗೌರವಕ್ಕೆ ಪಾತ್ರಳಾಗಿದ್ದಳೆಂಬಂತೆ ಕಂಡರೂ ವಾಸ್ತವದಲ್ಲಿ ಹಾಗಿರುವಂತೆ ಕಂಡು ಬರುವುದಿಲ್ಲ.

ಮೌಖಿಕ ಸಾಹಿತ್ಯದಲ್ಲಿ ಬಿಲ್ಲವ ಸಮುದಾಯದ ಹೆಣ್ಣು ಆ ಸಮುದಾಯದ ಕಾರಣಿಕದ ವೀರರ ಹುಟ್ಟಿಗೆ ಕಾರಣಾಗಿ, ದುಡಿಯುವ ಜನವರ್ಗದ ಶ್ರಮ ಸಂಸ್ಕೃತಿಯ ಪ್ರತೀಕವಾಗಿ, ಜೀವನ ಸಂಘರ್ಷದಲ್ಲಿ ನಿರಂತರ ಹೋರಾಟದ ಪ್ರತಿಮೆಯಾಗಿ ಉಳಿದುಕೊಳ್ಳುತ್ತಾಳೆ. ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಅವಳು ಜೀವನದಿಯಾಗಿ ಕಂಡು ಬರುತ್ತಾಳೆ. ಹೆಣ್ಣನ್ನು ಕಾಲ್ಪನಿಕವಾಗಿ ದೈವತ್ವದ ನೆಲೆಯಲ್ಲಿ ನೋಡುವ ಪುರುಷವರ್ಗ ವಾಸ್ತವ ಬದುಕಿನಲ್ಲಿ ಅಕೆಯನ್ನು ಭೋಗದ ವಸ್ತುವಾಗಿ, ರಾಜಕೀಯ, ಆರ್ಥಿಕ ನೆಲೆಯ ಪ್ರಯೋಜನಕ್ಕಾಗಿ ಮಾತ್ರ ಬಳಸಿಕೊಂಡಿದೆ. ಇದು ಈ ಸಮುದಾಯದ ಸಂದರ್ಭದಲ್ಲೂ ಸುಳ್ಳಾಗಿಲ್ಲ. ಹೆಣ್ಣನ್ನು ಎರಡನೆಯ ದಜೆಯ ಪ್ರಜೆಯಾಗಿಯೇ ಕಾಣುತ್ತಿದ್ದರು. ಹೆಣ್ಣಿನ ಶೀಲಕ್ಕೆ ಪ್ರಾಮುಖ್ಯವಿದ್ದು, ಅದರ ರಕ್ಷಣೆ ಮುಖ್ಯವಾಗಿತ್ತು. ಹಾಗಿದ್ದೂ ಅವಳ ಮೇಲೆ ನಿರಂತರವಾಗಿ ಲೈಂಗಿಕ ಶೋಷಣೆ ನಡೆಯುತ್ತಿತ್ತೆಂಬುದಕ್ಕೆ ಆಕೆ ಗರ್ಭವತಿಯಾದ ಸಂದರ್ಭಗಳನ್ನು ಅಲೌಕಿಕ ನೆಲೆಗೆ ಹೊಂದಿಸಿದ ಪ್ರಸಂಗಗಳೇ ಸಾಕ್ಷಿಗಳಾಗಿವೆ (ಉದಾಹರಣೆಗೆ ದೇಯಿ ಬೈದೈದಿಯ ಕತೆ, ಕಾನದ-ಕಟದ ಪಾಡ್ದನದ ಬೊಳ್ಳೆಯ ಹುಟ್ಟು, ಮತ್ತು ಆಕೆ ಗರ್ಭವತಿಯಾಗುವ ಪ್ರಸಂಗಗಳು) ಆದರೆ ಇಂತಹ ಇಕ್ಕಟ್ಟಿನ ಸನ್ನಿವೇಶದಲ್ಲಿ ಅಧಿಕಾರಶಾಹಿಯು ಹಸ್ತಕ್ಷೇಪ ಮಾಡಿ ಅವರಿಗೆ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿಕೊಡುವ ಮೂಲಕ ಬದುಕಿಗೆ ದಾರಿ ಮಾಡಿಕೊಡುವುದು, ಅರಮನೆಯ ಆಗುಹೋಗುಗಳಲ್ಲಿ ಅವರು ಕೆಲವೊಮ್ಮೆ ಪಾಲ್ಗೊಳ್ಳುವುದೇ ಮೊದಲಾಗಿ ಇಂತಹ ಸಮಸ್ಯೆಯ ತೀವ್ರತೆಯನ್ನು ತಿಳಿಗೊಳಿಸುವ ಸನ್ನಿವೇಶಗಳು ಗಮನಾರ್ಹವಾಗಿವೆ. ಇದಕ್ಕೆ ಕಾರಣಗಳು ಕೇವಲ ಮಾನವೀಯ ನೆಲೆಯದಂದು ನಂಬುವಂತಿಲ್ಲ. ಹಾಗೆ ನಂಬದಿರುವುದಕ್ಕೆ ಈ ಪ್ರಸಂಗಗಳಲ್ಲಿ ಮುಂದೆ ಮಾತಿಗೆ ತಪ್ಪುವ ಅಧಿಕಾರಶಾಹಿ ಕಾರಣ.

ಸಂಸ್ಕೃತಿಯ ಕುತಿರ ಕಾಳಜಿ ಮಾತ್ರ ಮಹಿಳೆಯಲ್ಲಿ ಹೇರಳವಾಗಿದೆ. ಅದರ ರಕ್ಷಣೆಗಾಗಿ ಅವಳ ಹೋರಾಟವು ನಿರಂತರವಾಗಿದೆ ಎಂಬುದು ಇಂದಿಗೂ ಸತ್ಯ. ಸಾಮಾಜಿಕ ಆಚರಣೆಗಳಲ್ಲಿ ಆಕೆಗೆ ಅಂತಹ ಪ್ರಾಧಾನ್ಯವೇನಿರಲಿಲ್ಲ. ದಕ್ಷಿಣ ಕನ್ನಡದ ಇತರ ಸಮುದಾಯಗಳಲ್ಲಿರುವಂತೆಯೇ ಈ ಸಮುದಾಯದಲ್ಲೂ ಮಹಿಳೆಯರಿಗೆ ತೀರ ವೈಯಕ್ತಿಕವೂ ಖಾಸಗಿಯೂ ಆದ ಮೈನೆರೆದಾಗ ನಡೆಸುವ ವಿಧಿಗಳು ಮತ್ತು ಮದುವೆಯ ಕೆಲವು ನಿರ್ದಿಷ್ಟ ಪ್ರಸಂಗಗಳಲ್ಲಿ ಹೊರತುಪಡಿಸಿದರೆ ಉಳಿದಂತೆ ಮಹಿಳೆಯರು ಪೂರಕ ಪಾತ್ರಗಳಂತೆ ಕಾಣಿಸಿಕೊಳ್ಳುತ್ತಾರೆ.

ಹಬ್ಬ-ಹರಿದಿನಗಳಲ್ಲಿ ಈ ಸಮುದಾಯದ ಅದರಲ್ಲೂ ಮುಖ್ಯವಾಗಿ ತೀಯ ಮಹಿಳೆಯರ ಸಕ್ರಿಯವಾದ ಭಾಗವಹಿಸುವಿಕೆಯು ಪಾರಂಪರಿಕವಾದ ಉಡುಪುಗಳ ಧಾರಣೆ, ನೃತ್ಯ ಸಂಗೀತಗಳ ಬಳಕೆಯ ನೆಲೆಯಲ್ಲಿ ಮಹತ್ವದ್ದಾಗಿದೆ. ಸಂಸ್ಕೃತಿಯ ಮುಂದುವರಿಕೆಗೆ ಸುಧೀರ್ಘವಾದ ಉಳಿವಿಗೆ ಮಹಿಳೆಯರಲ್ಲಿ ಅವುಗಳ ಆಚರಣೆಯಲ್ಲಿ ಇರುವ ನಿಷ್ಠೆ, ಕಾಳಜಿಗಳೇ ಕಾರಣವಾಗಿವೆ. ಬದುಕಿಗೆ ಅನಿವಾರ್ಯವಾದ ಆಹಾರಕ್ಕೆ ಹಬ್ಬಗಳ ಆಚರಣೆಯಲ್ಲಿ ವಿಶೇಷ ಮಹತ್ವ ಕಲ್ಪಿಸಿಕೊಟ್ಟವರೇ ಮಹಿಳೆಯರು. ತಮಗೆ ದೊರೆತ ಕನಿಷ್ಟ ಅವಕಾಶಗಳನ್ನೇ ಆಕಾಶವಾಗಿಸಿಕೊಂಡ ಅವರು ತಮ್ಮತನವನ್ನು ಮರೆದಿದ್ದಾರೆ.

ಹುಟ್ಟಿನಿಂದಾರಂಭಿಸಿ ಮರಣದವರೆಗಿನ ಜೀವನ ಸಂಸ್ಕಾರದ ವಿಧಿಗಳಿಗೆ ಭಾವನಾತ್ಮಕವಾದ ಸ್ಪರ್ಶವನ್ನು ಒದಗಿಸಿದವರು ಮಹಿಳೆಯರು. ಭಾವನಾರಹಿತವಾದ ಯಾವುದೇ ಆಚರಣೆ, ಕ್ರಿಯೆ ಅರ್ಥಹೀನ. ಕುಟುಂಬ-ಸಂಸ್ಕೃತಿಯೊಳಗೆ ಬದುಕುತ್ತಿರುವ ನಮಗೆ ಭಾವನೆಗಳೇ ಪ್ರಧಾನ. ಈ ಭಾವನೆಗಳು ಬದುಕನ್ನು ಬೆಳೆಸುತ್ತವೆ. ಈ ಭಾವನೆಗಳನ್ನು ಮಹಿಳೆಯರು ಬೆಳೆಸಿದ್ದಾರೆ, ಬೆಳೆಸುತ್ತಾರೆ.

ಶೈಕ್ಷಣಿಕವಾಗಿ ಇತ್ತೀಚೆಗಷ್ಟೇ ಗುರುತಿಸಿಕೊಳ್ಳುತ್ತಿರುವ ಈ ಸಮುದಾಯದ ಮಂದಿ ವಿಭಿನ್ನ ಔದ್ಯೋಗಿಕ ರಂಗಗಳಲ್ಲಿ ತೊಡಗಿಕೊಂಡು, ಆರ್ಥಿಕವಾಗಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಅವರಲ್ಲಿ ಧೈರ್ಯ ಮೂಡಿದೆ. ಮಹಿಳೆಯರು ರಾಜಕೀಯ ರಂಗದಲ್ಲೂ ಮುಂಚೂಣೆಗೆ ಬರುತ್ತಿದ್ದಾರೆ. ಹೀಗೆ ಎಲ್ಲ ಕ್ಷೇತ್ರಗಳ್ಲಲಿ ಈ ಸಮುದಾಯದ ಮಹಿಳೆಯರ ಹೆಜ್ಜೆಗಳು ಅವರನ್ನು ನಿಧಾನವಾಗಿಯಾದರೂ ಪ್ರಗತಿಯತ್ತ ಒಯ್ಯುತ್ತಿವೆ.

ಶ್ರೀ ನಾರಾಯಣ ಗುರುಗಳು ತಮ್ಮ ಸಮಾಜದ ಒಳಿತಿಗಾಗಿ ಶ್ರಮಿಸಿರುವ ಶ್ರೇಷ್ಠ ವ್ಯಕ್ತಿ ಎಂಬುದಾಗಿ ಬಿಲ್ಲವರು ಗುರುತಿಸಿದ್ದಾರೆ. ತಮ್ಮ ಇಂದಿನ ತಿಳುವಳಿಕೆಯ ಬದುಕಿಗೆ ಅವರು ಮೂಡಿಸಿದ ಜಾಗೃತಿಯೇ ಕಾರಣ ಎಂಬುದಾಗಿ ನಂಬಿದ್ದಾರೆ ಮತ್ತು ಅವರನ್ನು ದೇವರಿಗೆ ಸಮಾನವಾಗಿ ಕಂಡು ಆರಾಧಿಸುತ್ತ ಬಂದಿದ್ದಾರೆ. ಶ್ರೀ ನಾರಾಯಣ ಗುರು ಅವರು ಬಿಲ್ಲವ ಸಮುದಾಯದ ಮೇಲಿನ ಅಸ್ಪೃಶ್ಯತೆಯ ಕಳಂಕವನ್ನು ತೊಡೆಯಲು, ಬಿಲ್ಲವ ಮಹಿಳೆಯರಿಗೂ ಶಿಕ್ಷಣದ ಅಗತ್ಯವನ್ನು ಮನಗಾಣಿಸಲು ಶ್ರಮಿಸಿದ ಮಹನೀಯರಾಗಿದ್ದಾರೆ. ಬಿಲ್ಲವ ಮಹಿಳೆ ಇಂದು ಸಾಮಾಜಿಕಾವಾಗಿ, ಶೈಕ್ಷಣಿಕವಾಗಿ, ರಾಜಕೀಯ ರಂಗದಲ್ಲಿ ಪ್ರಗತಿ ಸಾಧಿಸಿದ್ದಾರೆ. ಅದರ ಹಿಂದೆ ಶ್ರೀ ನಾರಾಯಣ ಗುರುಗಳಂತಹ ಶ್ರೇಷ್ಠರ ಪ್ರಯತ್ನವಿದೆ. ಅದರ ಫಲವಾಗಿ, ಈ ಸಮುದಾಯವು ಸಮಾಜದ ಪ್ರಗತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.