ಬಿಲ್ಲವರ ಬಳಿಗಳು

ಬಿಲ್ಲವರಲ್ಲಿ ವಿಶೇಷವಾಗಿ ವಿವಾಹದ ಸಂದರ್ಭಗಳಲ್ಲಿ ಬಳಿಗಳಿಗೆ ಪ್ರಾಮುಖ್ಯತೆ ಇದೆ. ಹುಡುಗಿಯ ಮತ್ತು ಹುಡುಗನ ತಂದೆ ತಾಯಂದಿರ ಬಳಿಗಳು ಪರಸ್ಪರ ಅಥವಾ ಹುಡುಗಿಯ ಮತ್ತು ಹುಡುಗನ ತಂದೆಯರ ಬಳಿಗಳು ಪರಸ್ಪರ ಒಂದೇ ಆಗಿದ್ದಲ್ಲಿ ವಿವಾಹ ಏರ್ಪಡುತ್ತಿರಲಿಲ್ಲ. ಒಂದೇ ಬಳಿಯ ಗಂಡು ಹೆಣ್ಣು ಸಹೋದರ ಭಾವದ ಸಂಬಂಧವನ್ನು ಇದು ಸೂಚಿಸುತ್ತದೆ ಎಂದು ಬಿಲ್ಲವರು ನಂಬಿದ್ದರು. ಬಿಲ್ಲವರಲ್ಲಿ ರೂಢಿಯಲ್ಲಿದ್ದ ಬಳಿಗಳು.

೧. ಅಂಚನ್, ೨. ಅಮೀನ್, ೩. ಕೋಟ್ಯಾನ್ ೪. ಸಾಲಿಯಾನ್, ೫. ಸನಿಲ್, ೬. ಸುವರ್ಣ, ೭. ಬಂಗೇರ, ೮. ಕರ್ಕೇರ

ತೀಯರ ಬಳಿಗಳು

ತೀಯರಲ್ಲಿ ಎಂಟು ಬಳಿಗಳಿರುವುದು ಕಂಡು ಬರುತ್ತದೆ. ಈ ಕಾರಣಕ್ಕೆ ಅವರನ್ನು “ಎಟ್ಟಿಲ್ಲಕಾರ್” ಎಂದೂ ಕರೆಯುತ್ತಾರೆ.

೧. ನೆಲ್ಲಿಕತೀಯ, ೨. ಪಡಾಂಕುಡಿಯ, ೩. ತೇನಾ ಕುಡಿಯ, ೪. ಬಾತೀಯ, ೫. ಕಾರಕತೀಯ, ೬. ನಾಂಗುಡಿಯ, ೭. ಪುಲ್ಲಂ ಚುಟ್ಟಿ, ೮. ಪೈಂಬ ಕುರಿಯ,

ತೀಯರು ಈ ಬಳಿಗಳ ಹೆಸರುಗಳನ್ನು ಬಿಲ್ಲವರಂತೆ ತಮ್ಮ ಹೆಸರಿನ ಜೊತೆಗೆ ಜೋಡಿಸಿಕೊಂಡಿಲ್ಲ.

ಬಿಲ್ಲವರ ವಿವಾಹ ವಿಧಿಗಳು

ಬಿಲ್ಲವರ ಮದುವೆಯಲ್ಲಿ ಗುರಿಕಾರ ಮತ್ತು ಮಡಿವಾಳರದು ಪ್ರಮುಖ ಪಾತ್ರ. ಅವರಲ್ಲಿ ನಾಲ್ಕು ಮಂದಿ ಗುರಿಕಾರರಿರುತ್ತಿದ್ದು, ಒಂದನೆಯ ಗುರಿಕಾರನು ಮುಖ್ಯನಾಗಿದ್ದಾನೆ. ಮುಹೂರ್ತದ ಕಬೆ ಹಾಕುವುದರಿಂದ ಆರಂಭಿಸಿ, ಹೆಣ್ಣೊಪ್ಪಿಸಿ ಕೊಡುವವರೆಗೂ ಗುರಿಕಾರನ ಪಾತ್ರ ಅತ್ಯಂತ ಮಹತ್ವದ್ದು. ಒಂದನೆಯ ಗುರಿಕಾರನು ಇಲ್ಲದಿದ್ದಲ್ಲಿ ಮಾತ್ರ ಎರಡನೆಯ ಗುರಿಕಾರ, ಆತನಿಲ್ಲದಿದ್ದಲ್ಲಿ ಮೂರನೆಯ ಗುರಿಕಾರ ಹೀಗೆ ಆಚರಣೆಗಳನ್ನು ನಡೆಸಿಕೊಂಡು ಹೋಗಬೇಕಾಗಿತ್ತು. ಮದುವೆಯ ಪ್ರತಿಯೊಂದು ಪ್ರಕ್ರಿಯೆಯನ್ನು ಬಹಿರಂಗವಾಗಿ ಘೋಷಿಸುತ್ತ ನೆರೆದ ಸಭೆಯ ಅನುಮತಿ ಪಡೆದು ವಿವಾಹ ಕಾರ್ಯವನ್ನು ನಿರ್ವಿಘ್ನವಾಗಿ ನೆರೆವೇರಿಸುವ ಜವಾಬ್ದಾರಿ ಗುರಿಕಾರರದು. ಮಡಿವಾಳ ಇನ್ನೋರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿವಾಹ ಸಂಬಂಧಿ ಆಚರಣೆಗಳಲ್ಲಿ ಅವನ ಉಪಸ್ಥಿತಿ ಅತ್ಯಂತ ಅಗತ್ಯದ್ದಾಗಿತ್ತು. ಆತನ ಪಾತ್ರ ನಿರ್ವಹಣೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ. ಹಾಗೆಯೇ ಹೆಣ್ಣಿಗೆ ಸಂಬಂಧಿಸಿ ನಡೆಸುವ ವೈವಾಹಿಕ ವಿಧಿಗಳಲ್ಲಿ ಗುರಿಕಾರ್ತಿಯರು ಪ್ರಮುಖ ಪಾತ್ರ ವಹಿಸುತ್ತಾರೆ.

. ಕಂಚಿಡ್ ದೀಪಿನ ದುಡ್ಡು (ಕಂಚಿನ ಪಾತ್ರೆಯಲ್ಲಿ ದುಡ್ಡು ಇರಿಸುವ ಹಣ)

ಹಿಂದೆ ಬಹಳ ಬಡತನವಿದ್ದ ಕಾರಣಕ್ಕೆ ರೂಢಿಗೆ ತಂದಂತೆ ಮದುವೆ ನಿಗದಿಯಾದ ಬಳಿಕ ವಧುವಿಗೆ ಮಂಗಲಸೂತ್ರ, ಧಾರೆಸೀರೆ, ಊಟಕ್ಕಾಗಿ ಆಗುವ ವೆಚ್ಚವನ್ನೊಳಗೊಂಡ ಮೊತ್ತವನ್ನು ಹುಡುಗಿಯ ಮನೆಯವರು ಹಣದ ರೂಪದಲ್ಲಿ ಅಕ್ಷತೆಯ ತಟ್ಟೆಯಲ್ಲಿಟ್ಟು ಹುಡುಗನಿಗೆ ಕೊಡುವ ಕ್ರಮವಿತ್ತು. ಇದು ವರನ ಆರ್ಥಿಕ ಸ್ಥಿತಿಗನುಸಾರವಾಗಿ ಇರುತ್ತಿತ್ತು. ಇದು ಬಿಲ್ಲವರಲ್ಲಿ ವರದಕ್ಷಿಣ ಪದ್ದತಿ ರೂಢಿಯಲ್ಲಿದ್ದುದನ್ನು ಸೂಚಿಸುತ್ತದೆ.

. ಕಾಯಿ ಪೂಲು ಪಗಪ್ಪುನಿ (ಕಾಯಿ ಹೋಳು ಬದಲಾಯಿಸಿಕೊಳ್ಳುವುದು)

ಮದುವೆಗೆ ಮುನ್ನ ಹೆಣ್ಣು ಮತ್ತು ಗಂಡು ಇಬ್ಬರ ಮನೆಯಲ್ಲೂ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಎರಡೂ ಕಡೆಯಿಂದ ತಲಾ ನಾಲ್ಕು ಮಂದಿ ಗುರಿಕಾರರು (೧ನೇ, ೨ನೇ, ೩ನೇ ಮತ್ತು ೪ನೇ ಗುರಿಕಾರ) ಇದರಲ್ಲಿ ಭಾಗವಹಿಸುವುದು ನಡೆದುಬಂದ ಕ್ರಮ. ಇವರೊಂದಿಗೆ ಗಂಡು ಮತ್ತು ಹೆಣ್ಣಿನ ಸೋದರಮಾವಂದಿರು ನಿಶ್ಚಿತಾರ್ಥದಲ್ಲಿ ವಚನಬದ್ಧತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಮೂರು ಬಾರಿ ಎಲೆ ಅಡಿಕೆ ಹೋಳು ಬದಲಾವಣೆ ಮಾಡಿಕೊಳ್ಳುವ ಕ್ರಮ ರೂಢಿಯಲ್ಲಿತ್ತು. ಇದಕ್ಕೆ “ಕಾಯಿ ಪೂಲು ಪಗಪ್ಪುನಿ” ಎಂದು ಕರೆಯಲಾಗುತ್ತಿತ್ತು.  “ಇಂಥ ಹುಟ್ಟುಮೂಲವಿರುವ ಹೆಣ್ಣನ್ನು ಇಂಥ ಗಂಡಿಗೆ ಕೊಡುವುದು” ಎಂಬ ಮಾತನ್ನು ಹೇಳಿ ನಿಶ್ಚಿತಾರ್ಥವನ್ನು ದೃಢೀಪಡಿಸಲಾಗುತ್ತಿತ್ತು.

. ಪೇರು ಪೂಜುನಿ, ಮದಿರೆಂಗಿ

ಸಾಮಾನ್ಯವಾಗಿ ಮದುವೆಯನ್ನು ಗಂಡಿನ ಮನೆಯಲ್ಲಿ ನಡೆಸಲಾಗುತ್ತಿದ್ದು,ಸ ಅಪೂರ್ವಕ್ಕೆಂಬಂತೆ ಅದುಸ ಹೆಣ್ಣಿನ ಮನೆಯಲ್ಲಿ ನಡೆಯುತ್ತಿದ್ದುದೂ ಇತ್ತು. ಮದುವೆಯ ದಿನದಂದು ಚಪ್ಪರದ ಕೇಂದ್ರ ಭಾಗದಲ್ಲಿ ಪಾಲೆ ಮತ್ತು ಹೊಂಗೆಯ ಮರದ ಕೊಂಬೆಯನ್ನು ನೆಡಲಾಗುತ್ತಿದ್ದು, ಇದಕ್ಕೆ “ಮುಹೂರ್ತದ ಕಬೆ” ಎಂದು ಕರೆಯುತ್ತಿದ್ದರು. ಅಂದು ವಧು ಹಾಗೂ ವರನ ಮನೆಯಲ್ಲಿ ತೆಂಗಿನ ಕಾಯಿಯನ್ನು ಅರೆದು ತಯಾರಿಸಿದ ಹಾಲಿಗೆ ಅರಸಿನ ಬೆರೆಸಿ ಅವರ ಮೈ ಕೈಗಳಿಗೆ ಸವರುವ ಆಚರಣೆಯೇ “ಪೇರು ಪೂಜುನಿ” ಆ ಬಳಿಕ ಅವರ ಕೈಕಾಲುಗಳಿಗೆ ಮದರಂಗಿಯನ್ನು ಹಚ್ಚಿ ಅವರನ್ನು ಅಲಂಕರಿಸಲಾಗುತ್ತದೆ.

. ದಿಬ್ಬಣ ಎದುರ್ಕೊನುನಿ (ದಿಬ್ಬಣ ಎದುರುಗೊಳ್ಳುವುದು)

ಮಕ್ಕಳ ಸಂತಾನ ಪದ್ಧತಿಯನ್ನು ಆಚರಿಸುವ ಸಮುದಾಯಗಳಲ್ಲಿ ಹೆಣ್ಣನ್ನು ಗಂಡಿನಲ್ಲಿಗೆ ಕರೆದೊಯ್ದು ಮದುವೆ ಮಾಡಿಕೊಡುವ ಕ್ರಮವಿಲ್ಲ ಮತ್ತು ಹೆಣ್ಣಿನವರೇ ಮುಂದಾಗಿ ಗಂಡಿನವರ ದಿಬ್ಬಣವನ್ನು ಎದುರುಗೊಂಡು ಸ್ವಾಗತಿಸಿ, ಅವರಿಗೆ ಸಲ್ಲತಕ್ಕ ಸಕಲ ಮರ್ಯಾದೆಗಳನ್ನೂ ಸಲ್ಲಿಸಬೇಕು. ಆದರೆ ಬಿಲ್ಲವ ಸಮುದಾಯದಲ್ಲಿ ಹಾಗಿಲ್ಲ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ತಲುಪಬೇಕಾದರೆ ರಾತ್ರಿ ಹೊತ್ತಿನಲ್ಲಿಯೇ ಎತ್ತಿನ ಗಾಡಿಗಳಲ್ಲಿ ದಿಬ್ಬಣ ಹೊರಡುತ್ತಿದ್ದು, ಮದುಮಗಳ ಮುಂದಿನಿಂದ ಮಡಿವಾಳನೊಬ್ಬ ದೀವಡಿಗೆ ಹಿಡಿದು ಸಾಗುತ್ತಿದ್ದ. ವಿವಾಹದಲ್ಲಿ ಜಲಸಾಕ್ಷಿಯೇ ಪ್ರಮುಖವಾಗಿರುವ ಸಮುದಾಯಗಳಲ್ಲಿ ಒಂದಾದ ಬಿಲ್ಲಿವರು ಅಗ್ನಿಗೂ ನೀಡುತ್ತಿದ್ದ ಪ್ರಾಮುಖ್ಯವನ್ನು ಇದು ಸಚಿಸುತ್ತದೆ. ಹೆಣ್ಣಿನ ದಿಬ್ಬಣ ಬಂದಿದೆ ಎಂದು ಹೆಣ್ಣಿನ ಕಡೆಯ ಇಬ್ಬರು ಗುರಿಕಾರರು ಗಂಡಿನವರಿಗೆ ತಿಳಿಸುತ್ತಾರೆ. ಆಗ ಗಂಡಿ ಕಡೆಯವರು ಅರಶಿನ-ಕುಂಕುಮ, ಕಲಶಕನ್ನಡಿ ಹಿಡಿದ ಮುತ್ತೈದೆಯರಿಂದ ಒಳಗೊಂಡ ಸಮೂಹದೊಂದಿಗೆ ದಿಬ್ಬಣ್ಣವನ್ನು ಎದುರುಗೊಂಡು ಸ್ವಾಗತಿಸಿ, ಕರೆದೊಯ್ಯಬೇಕು. ಇದು ಬಿಲ್ಲವರಲ್ಲಿ ಹೆಣ್ಣಿಗಿರುವ ಪ್ರಾಮುಖ್ಯತೆಯನ್ನು ಸೂಚಿಸುವುದಾದರೂ ಅದು ಕೇವಲ ಆಚರಣಾತ್ಮಕ ನೆಲೆಯಲ್ಲಿ ಮಾತ್ರ ಕಂಡು ಬರುತ್ತದೆ. ಇದಕ್ಕೆ ಪ್ರತಿಯಾಗಿ ಗಂಡಿನ ಕಡೆಯವರಿಗೂ ಇದೇ ರೀತಿಯ ಮರ್ಯಾದೆ ಸಲ್ಲಿಸಲಾಗುತ್ತದೆ.

. ಚೌಕ ಸೇರುನಿ

ಇದು ವಿವಾಹ ವಿಧಿಯ ಪ್ರಮುಖ ಅಂಗವಾಗಿದೆ. ದಿಬ್ಬಣ ಬಂದ ಬಳಿಕ ಮದುವೆಯ ಚಪ್ಪರದಲ್ಲಿ ಗಂಡು-ಹೆಣ್ಣಿನ ಕಡೆಯ ಗುರಿಕಾರರು, ಸೋದರ ಮಾವಂದಿರು, ಹೆತ್ತವರು ಮತ್ತು ಕುಟುಂಬ ವರ್ಗದ ಇತರ ಪ್ರಮುಖರು ಮುಂದೆ ನಡೆಯಲಿರುವ ಮನೆಯು ಏರ್ಪಾಡಿನ ಕುರಿತು ಮಾತುಕತೆಗೆ ಚೌಕಾಕಾರವಾಗಿ ಚಾಪೆ ಹಾಸಿ ಕುಳಿತುಕೊಳ್ಳುವ ಸಣ್ಣ ಕೂಟದ ಒಂದು ಕ್ರಮವಾಗಿದೆ. ಇದರಲ್ಲಿ ನಿಶ್ಷಿತಾರ್ಥದ ದಿನದಂದು ಕೈಗೊಂಡ ನಿರ್ಣಯಗಳನ್ನು ಬಹಿರಂಗವಾಗಿ ಹೇಳುವ ಮೂಲಕ ದೃಢೀಪಡಿಸಲಾಗುತ್ತದೆ.

. ಬಾಳ್ ದೀಪುನಿ

ಇದು ವರನನ್ನು ವಿವಾಹಕ್ಕೆ ಸಜ್ಜುಗೊಳಿಸುವ ಅಂಗವಾಗಿ ವರನಿಗೆ ಮಡಿವಾಳರಿಂದ ಮುಖಕ್ಷೌರ ಮಾಡಿಸುವ ಒಂದು ಆಚರಣೆ. ಈ ಆಚರಣೆಯಲ್ಲಿ ಮಡಿವಾಳನು ಒಂದು ತುಂಡು ಬಾಳೆ ಎಲೆಯ ಮೇಲೆ ಅಕ್ಕಿ ಮತ್ತು ತೆಂಗಿನಕಾಯಿಗಳನ್ನಿಟ್ಟು (ಸಾಂಕೇತಿಕವಾಗಿ ಗಣಪತಿ ದೇವರನ್ನು ಇಡುವುದು) ದೀಪ ಹಚ್ಚಿ ದೇವರಿಗೆ ಕೈಮುಗಿಯುತ್ತಾನೆ. ಬಳಿಕ ಒಂದು ಮಣೆಯ ಮೇಲೆ ವರನನ್ನು ಕುಳ್ಳಿರಿಸಿ ಒಂದು ಲೋಟದಲ್ಲಿ ಹಾಲು ಇನ್ನೊಂದು ಲೋಟದಲ್ಲಿ ನೀರನ್ನಿಟ್ಟುಕೊಂಡು ವರನ ಎರಡೂ ಕೆನ್ನೆಗೆ ಮುಟ್ಟಿಸಿ ವರನಿಗೆ ಮುಖ ಕ್ಷೌರದ ಸಾಂಕೇತಕ ಕ್ರಿಯೆಯನ್ನು ನಡೆಸುತ್ತಾನೆ.

. ಮೋಂದಲ್ ಸೇಸೆ

ಕ್ಷೌರದ ಬಳಿಕ ವರನಿಗೆ ಮೋಂದಲ್ ಸೇಸೆ ಹಾಕಿ ಅವನನ್ನು ಕನ್ಯಾದಾನ ಸ್ವೀಕಾರಕ್ಕೆ ಸಿದ್ಧಗೊಳಿಸಲಾಗುತ್ತದೆ. ಈ ಸೇಸೆಯನ್ನು ಮುತ್ತೈದೆಯಾಗಿರುವ ವರನ ತಾಯಿ ಅಥವಾ ಹತ್ತಿರದ ಸಂಬಂಧಿಯಾಗಿರುವ ಮುತ್ತೈದೆ ಹೆಂಗಸು ಹಾಕಬೇಕು. ಈ ಆಚರಣೆಯಲ್ಲಿ ವಿಧವೆಯರು ಹಾಗೂ ಗಂಡಸರು ಭಾಗವಹಿಸುವಂತಿರಲಿಲ್ಲ. ಅವಳನ್ನು ಉಚಿತವಾಗಿ ದಾನರೂಪದಲ್ಲಿ ಗಂಡು ಪಡೆದುಕೊಳ್ಳುತ್ತಿದ್ದುದನ್ನು ಈ ಕ್ರಮ ಖಚಿತಗೊಳಿಸುತ್ತದೆ. ಹಿಂದೆ ಮೋಂದಲ್ ಸೇಸೆಯ ಸಮಯಕ್ಕೆ ವರನ ಅಕ್ಕ ಅಥವಾ ತಂಗಿಯಾದವಳು ಆತನ ಎರಡೂ ಕಾಲುಗಳಎರಡೆಯ ಬೆರಳಿಗೆ ಬೆಳ್ಳಿಯ ಕಾಲುಂಗುರ ತೊಡಿಸುತ್ತಿದ್ದಳು. ಹೆಣ್ಣಿಗೆ ಹೇಗೆ ಮಾಂಗಲ್ಯ, ಕಾಲುಂಗುರ ಇತ್ಯಾದಿಗಳು ವಿವಾಹಿತೆ ಎಂಬುದನ್ನು ಸೂಚಿಸುವುದಕ್ಕಾಗಿ ತೊಡಿಸಲಾಗುತ್ತಿತ್ತೋ ಹಾಗೆಯೇ ಹಿಂದೆ ಇದು ಆ ಗಂಡಿಗೆ ಮದುವೆಯಾಗಿದೆ ಎಂಬುದರ ಗುರುತಾಗಿರುತ್ತಿತ್ತು. ಅಲ್ಲದೆ ಅದನ್ನು ತೆಯಬಾರದೆಂಬ ನಿಯಮವಿತ್ತು. ಇದರಿಂದ ಆ ಗಂಡು ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿರಲಿಲ್ಲ. ಇದು ಗಂಡಿನ ಸ್ವೇಚ್ಚಾಚಾರಕ್ಕೆ ಕಡಿವಾಣವಾಗಿ ಕೆಲಸ ಮಾಡುತ್ತಿತ್ತು. ಆದರೆ ಈಗ ಮದುವೆಯ ಸಮಯದಲ್ಲಿ ಅದನ್ನು ಧರಿಸುವ ಕ್ರಮ ಜಾರಿಯಲ್ಲಿದ್ದರೂ ಮದುವೆಯ ಬಳಿಕ ಅದನ್ನು ಕಾಲಿನಿಂದ ತೆಗೆಯಬಾರದೆಂಬ ನಿಯಮವೇನೂ ಇಲ್ಲ.ಸ ಈಗ ಮೋಂದೆಲ್ ಸೇಸೆಯಾಗಲೀ ದಲ್ಯ ಹಾಸುವ ಕ್ರಮವಾಗಲೀ ಆಚರಣೆಯಲ್ಲಿ ಇಲ್ಲ. ಅಂತೆಯೇ ಈ ಕೆಲಸಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಡಿವಾಳರನ್ನು ಕರೆಸುವ ಕರಮ ನಿಂತಿದೆ. ಬದಲಾಗಿ ಅವರಿಗಿಂತ ಮತ್ತು ತಮಗಿಂತ ಶ್ರೇಷ್ಠರಾದ ವೈದಿಕರ ಸಂಪ್ರದಾಯದಂತೆ ಮದುವೆ ನಡೆಸುವ ಕ್ರಮ (ಬ್ರಾಣ ಧಾರೆ) ಹುಟ್ಟಿಕೊಳ್ಳುತ್ತಿದೆ.

. ಧಾರೆ

ಧಾರೆಯ ಕ್ರಮವನ್ನು ನೆರೆವೇರಿಸುವ ಮೊದಲು ಮಡಿವಾಳನು ವಧೂವರರಿಗೆ ಕುಳಿತುಕೊಳ್ಳಲು ಎರಡು ಕುರ್ಚಿಗಳಿಗೆ ಬಿಳಿಬಟ್ಟೆಯನ್ನು ಹೊದಿಸಿ ಸಿದ್ಧಗೊಳಿಸುತ್ತಾನೆ. ಇವುಗಳ ಸುತ್ತ ಸುಮಾರು ಆರು ಇಂಚು ಅಗಲದ ಬಿಳಿಬಟ್ಟೆಯನ್ನು ಸುತ್ತುತ್ತಾರೆ. ವಧುವು ವರನ ಬಲಗಡೆಗೆ ಕುಳಿತುಕೊಳ್ಳಬೇಕು. ಧಾರೆಯಾದ ಬಳಿಕ ವರನ ಎಡಗಡೆಗೆ ಕುಳ್ಳಿರಿಸಲಾಗುತ್ತದೆ. ಸಂಪ್ರದಾಯದ ನೆಲೆಯಲ್ಲಿ ಎಡ ಎನ್ನುವುದು ಕನಿಷ್ಠ, ಬಲಭಾಗ ಶ್ರೇಷ್ಠ ಎಂಬ ನಂಬಿಕೆ ಇದೆ. ಇಲ್ಲಿ ಮದುವೆಗೆ ಮುನ್ನ ಹೆಣ್ಣು ಗಂಡಿಗೆ ಸಂಬಂಧವಿಲ್ಲದವಳಾಗಿದ್ದು, ಅವಳ ಸ್ಥಾನ ಉತ್ತಮವಾಗಿರುವುದಕ್ಕೆ ಅವಳನ್ನು ಬಲಭಾಗದಲ್ಲಿ ಕುಳ್ಳಿರಿಸುವುದು ಸಾಕ್ಷಿಯಾಗಿದೆ. ಅನಂತರದಲ್ಲಿ ಅವಳನ್ನು ಕನ್ಯಾಧಾನ ಮಾಡಿ ಧಾರೆ ಎರದು ಅವನಿಗೆ ಕೊಟ್ಟ ಬಳಿಕ (ಮಂಗಲಸೂತ್ರ ಕಟ್ಟಿದ ಬಳಿಕ) ಅವನಿಗಿಂತ ಅನಂತರದವಳಾಗಿ ಸತಿಯ ಸ್ಥಾನಕ್ಕೆ ಅಂದರೆ ಅವನ ಎಡಭಾಗಕ್ಕೆ ವರ್ಗಾಯಿಸಲ್ಪಡುತ್ತಾಳೆ. ಅಂದರೆ ಅಲ್ಲಿಯತನಕ ಸ್ವತಂತ್ರವಾಗಿ ಇದ್ದ ಆಕೆಯ ಮೇಲೆ ಅವನಿಗೆ ಅಧಿಕಾರ ಬರುತ್ತದ. ಇದಕ್ಕೆ ವೈರುಧ್ಯದ ನೆಲೆಯಲ್ಲಿ ಬಿಲ್ಲವರಲ್ಲಿ ಇನ್ನೊಂದು ಸಂಪ್ರದಾಯವಿದೆ. ಅದರಂತೆ ಅವರಲ್ಲಿ ಕನ್ಯೆಯಾಗಿದ್ದವಳು ಮುತ್ತೈದೆಯಾದಾಗ ಪತಿಯಿಂದ ಹಣದ ರೂಪದ ಗೌರವವನ್ನು ಪಡೆಯುತ್ತಾಳೆ. ಅದರಂತೆ ಪತಿಯಿಂದ ಸಲ್ಲುವ ಈ ಗೌರವವನ್ನು ಐದು ವೀಳ್ಯದೆಲೆ ಮತ್ತು ಒಂದು ಅಡಿಕೆಯೊಂದಿಗೆ ಗಂಡಿನ ಮಾವ ಹೆಣ್ಣಿನ ಮಾವನ ಮೂಲಕ ಹೆಣ್ಣಿಗೆ ನೀಡುವ ಕ್ರಮವಿದೆ.

. ಧಾರೆಗೆ ಮತ್ತು ಸೇಸೆಗೆ ಪ್ರದಕ್ಷಿಣೆ

ಮದುವೆ ಮಂಟಪದಲ್ಲಿ ಮದುಮಗ ಮತ್ತು ಮದುಮಗಳು ಕುಳಿತುಕೊಳ್ಳುವ ಆಸನದ ಸುತ್ತ ಮತ್ತು ಧಾರೆಯ ಸುತ್ತ ಅವರ ಅಕ್ಕ-ಭಾವ ವರನನ್ನು ಕೈಹಿಡಿದು ಪ್ರದಕ್ಷಿಣೆ ಮಾಡಿಸುತ್ತಾರೆ. ಅನಂತರ ಸೇಸೆಯ ಸುತ್ತ ವಧುವಿನ ಅಕ್ಕ ಭಾವ ಅವಳನ್ನು ಪ್ರದಕ್ಷಿಣೆ ಮಾಡಿಸಬೇಕು. ಹೀಗೆ ಎರಡು ಬಾರಿ ಮಾಡಲಾಗುತ್ತಿದ್ದ ಈ ಪ್ರದಕ್ಷಿಣೆ ಬರುವ ಪದ್ಧತಿ ಈಗ ಧಾರೆಯ ಸಮಯದಲ್ಲಿ ಒಮ್ಮೆ ಮಾತ್ರ ಪ್ರದಕ್ಷಿಣೆ ಬರುವಲ್ಲಿಗೆ ಮಾರ್ಪಾಟಾಗಿದೆ. ಮುಂದೆ ಮದುವೆ ಮುಗಿದು ಚಪ್ಪರವಿಳಿಯುವ ಕಾರ್ಯಕ್ರಮದಲ್ಲಿ ಹೆಣ್ಣಿನ ತಮ್ಮ ಮದುಮಗನ ಕಾಲಿಗೆ ನೀರೆರೆಯಬೇಕು. ಗಂಡಿನ ತಂದಿ ಮದುಮಗಳ ಕಾಲಿಗೆ ನೀರೆರೆಯಬೇಕು. ಇದಕ್ಕೆ ಪ್ರತಿಯಾಗಿ ನೀರೆರೆದ ತಂಬಿಗೆಗೆ ಹಣ ಹಾಕಿ ಮದುಮಗ ಮತ್ತು ಮದುಮಗಳು ಅವರಿಗೆ ಮರ್ಯಾದೆ ಸಲ್ಲಿಸಬೇಕು. ಈ ಆಚರಣೆಯು ಹೊಸದಾಗಿ ಸಂಬಂಧ ಬೆಳೆಸುವ ಎರಡು ಕುಟುಂಬಗಳ ಸದಸ್ಯರ ನಡುವೆ ಸೌಹಾರ್ದದ ಬೆಸುಗೆಯನ್ನು ಏರ್ಪಡಿಸುವ ಸಲುವಾಗಿದೆ.

. ಕಂಚಿ ಏರುನಿ

ಮದುವೆಯಲ್ಲಿ ವಧೂವರರಿಗೆ ಉಡುಗೊರೆ ಕೊಡುವ ಕ್ರಮವಿತ್ತು. ಮದುವೆಗೆ ಬಂದವರು ಹಣ ಅಥವಾ ವಸ್ತು ರೂಪದ ಉಡುಗೊರೆಯನ್ನು ಹಾಕಲು ಅವರು ಕುಳಿತ ಆಸನಗಳ ಮುಂದೆ ಎರಡು ಕಂಚಿನ ಹರಿವಾಣಗಳನ್ನು ಇಡುತ್ತಿದ್ದರು. ಹೀಗೆ ಇಡುವ ಪ್ರಕ್ರಿಯೆಗೆ ಕಂಚಿ ಏರುನಿ ಎನ್ನುತ್ತಾರೆ. ಇದು ಮದುವೆಯಾಗಿ ಆದ ವೆಚ್ಚವನ್ನು ಕಿಂಚಿತ್ತಾದರೂ ಭರಿಸುವುದಕ್ಕೆ ಬಂಧು- ಮಿತ್ರರು ಸಹಾಯ ಮಾಡುವ ಕ್ರಮವಾಗಿದೆ.

. ಸುಟ್ಟುಗ ಮರ್ಯಾದೆ

ಇದು ಮದುವೆಯ ಬಳಿಕ ಮೊದಲ ಬಾರಿ ಗಂಡನಿಗೆ ಹೆಂಡತಿ ಅನ್ನವಿಕ್ಕುವ ಆಚರಣೆಯಾಗಿದೆ. ಅದಕ್ಕೆ ಪ್ರತಿಯಾಗಿ ಗಂಡ ತನ್ನ ಹೆಂಡತಿಯನ್ನು ಹಣ ಅಥವಾ ಚಿನ್ನದ ರೂಪದ ಬಳುವಳಿ ನೀಡುವ ಮೂಲಕ ಅವಳ ಕೆಲಸಕ್ಕೆ ಮರ್ಯಾದೆ ಸಲ್ಲಿಸುತ್ತಾನೆ.ಹೆಣ್ಣನ್ನು ಗೃಹಕೃತ್ಯಕ್ಕೆ ಸೀಮಿತಗೊಳಿಸುವಂತೆ ಕಂಡರೂ ಅಡುಗೆ ಕೆಲಸಕ್ಕೂ ಇರುವ ಮಹತ್ವವನ್ನು ಬಿಲ್ಲವರಲ್ಲಿ ಗ್ರಹಿಸಲಾಗಿತ್ತು ಎಂಬುದನ್ನು ಈ ಆಚರಣೆಯು ಸೂಚಿಸುತ್ತದೆ.

. ಪೊಣ್ಣ್‌ಒಚ್ಚಿದ್ ಕೊರ್ಪುನಿ (ಹೆಣ್ಣೊಪಿಸಿಕೊಡುವುದು)

ಮದುವೆಯ ಬಳಿಕ ಹೆಣ್ಣೆ ತನ್ನ ಗಂಡನ ಮನೆಯನ್ನು ಸೇರಬೇಕಾಗಿದ್ದು, ಅವಳ ಮನೆಯವರು ಅವಳನ್ನು ಇನ್ನು ಗಂಡಿನ ಮನೆಗೆ ಸೇರಿದವಳೆಂಬ ನೆಲೆಯಲ್ಲಿ ಈ ಹೆಣ್ಣೊಪ್ಪಿಸುವ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಾರೆ. ಎಲ್ಲ ಪ್ರಕ್ರಿಯೆಗಳು ಹೆಣ್ಣನ್ನು ಒಂದು ವಸ್ತುವೆಂಬಂತೆ ನೋಡುತ್ತವೆ. ಆದರೆ ಮದುವೆಯ ದಿನ ಮದುಮಗಳು ತನ್ನ ತವರಿಗೇ ಹೋಗಬೇಕೆಂಬ ಕ್ರಮ ಬಿಲ್ಲವರಲ್ಲಿದೆ. ಬಿಲ್ಲವರಲ್ಲಿ ಮೂಲದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿದ್ದ ಕಾರಣ ಈ ಆಚರಣೆ ರೂಢಿಯಲ್ಲಿದೆ. ಇದು ಆಕೆಯ ತವರಿಗಿರುವ ಪ್ರಾಮುಖ್ಯತೆಯನ್ನು ಸೂಚಿಸುವುದರ ಜೊತೆಗೆ ಒಮ್ಮೆಲೇ ಅಪರಿಚಿತ ವಾತಾವರಣ ಆಕೆಗೆ ಆತಂಕವನ್ನು ತರಬಹುದೆಂಬ ಎಚ್ಚರವನ್ನೂ ಸೂಚಿಸುತ್ತದೆ.

. ಮದ್ಮಲ್ ದೊಂಪದೆಪ್ಪೆರೆ ಬತ್ತ್‌ದ್‌ಪೋಪುನಿ ಅಥವಾ ದೊಂಪ ಜಪ್ಪುನಿ (ಮದುಮಗಳು ಚಪ್ಪರ ತೆಗೆಯಲು ಬಂದು ಹೋಗುವುದು)

ಇದು ಮದುವೆಯ ಕಾರ್ಯಕ್ರಮ ಮುಕ್ತಾಯಗೊಂಡುದನ್ನು ಹೇಳುವ ಆಚರಣೆಯಾಗಿದೆ. ಮದುವೆಯ ಅನಂತರದ ಮೂರನೇ ಅಥವಾ ಐದನೇ ದಿನದಲ್ಲಿ ಮದುಮಗಳು ಒಮ್ಮೆ ಹಗಲಿನಲ್ಲಿ ಗಂಡನ ಮನೆಗೆ ಬಂದು ಹೋಗಬೇಕು. ಆ ಬಳಿಕವೇ ಮದುವೆ ಮುಗಿಯಿತೆಂದು ತಿಳಿಯಲಾಗುತ್ತದೆ ಮತ್ತು ಹುಡುಗನ ಮನೆಯಲ್ಲಿ ಹಾಕಲಾದ ಚಪ್ಪರವನ್ನು ತೆಗೆಯಲಾಗುತ್ತದೆ. ಅಲ್ಲಿಗೆ ಮದುವೆಯ ಕಲಾಪಗಳು ಮುದಿಂತೆ ಎಂದು ಭಾವಿಸಲಾಗುತ್ತದೆ.

ಅಂ. ಮಾಮಿಸಿಕ ಅಥವಾ ತೊಡಮೆನೆ

ಮಾಮಿಸಿಕೆ ಅಥವಾ ತೊಡಮನೆ ಎಂಬುದುಸ ಮದುಮಗಳ ಮನೆಯಲ್ಲಿ ನಡೆಸುವ ಆಚರಣೆಯಾಗಿದೆ. ಮದುಮಗನ ಮನೆಯ ಚಪ್ಪರ ತೆಗೆದ ದಿನದಂದು ಒಂದು ದಿನವನ್ನು ನಿರ್ಧರಿಸಲಾಗುತ್ತದೆ. ಅಂದು ಹೆಣ್ಣಿನ ತವರುಮನೆಗೆ ಗಂಡು ಬರಬೇಕು. ಹಾಗೆ ಬಂದ ಮದುಮಗನಿಗೆ ಅಲ್ಲಿ ಸತ್ಕಾರ ನಡೆಯುತ್ತದೆ. ಮದುಮಗಳ ತಾಯಿ (ಹುಡುಗನ ಅತ್ತೆ) ಅಳಿಯನಿಗೆ ಹಣ ಅಥವಾ ಬಂಗಾರದ ಉಡುಗೊರೆ ನೀಡುವ ಕ್ರಮ ಇದೆ. ಈಗ ಮದುವೆಯ ದಿನದಂದೇ ಈ ಎಲ್ಲ ಕಾರ್ಯಕ್ರಮಗಳನ್ನೂ ಒಂದೇ ದಿನದಲ್ಲಿ ನಡೆಸಲಾಗುತ್ತದೆ.

ಅಃ. ಪ್ರಸ್ಥ

ವಧೂವರರ ಮೊದಲ ರಾತ್ರಿಗೆ ಕೊಠಡಿಯನ್ನು ಸಿದ್ಧಗೊಳಿಸುವ ಜವಾಬ್ದಾರಿ ಗಂಡಿನ ಸಹೋದರಿಯರದು. ಬೇರೆ ಮನೆಯಿಂದ ಮದುವೆಯಾಗಿ ಬಂದ ಹುಡುಗಿಗೆ ಅಪರಿಚಿತವಾದ ವಾತಾವರಣವನ್ನು ನಿಧಾನಕ್ಕೆ ಪರಿಚಯಿಸುವ, ಹೊಸ ಪರಿಸರದ ಮಂದಿಯನ್ನು ಆತ್ಮೀಯತೆಯ ತೆಕ್ಕೆಗೆ ತೆಗೆದುಕೊಳ್ಳುವ ನೆಲೆಯಲ್ಲಿ ಈ ಆಚರಣೆಗಳು ಸಹಾಯ ಮಾಡುತ್ತವೆ.

. ಸೀಮಂತ, ಬಾಣಂತಿತನ

ಮೊದಲ ಬಾರಿ ಗರ್ಭಿಣಿಯಾದ ಹೆಣ್ಣಿಗೆ ಗಂಡನ ಮನೆಯಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅಂದು ಅವಳ ತವರಿನವರು ಲಾಕಿ (ಹೆಣ್ಣು ಕೋಳಿ ಮರಿ)ಯನ್ನು ತರಬೇಕು. ಅವರ ಉಪಸ್ಥಿತಿಯಲ್ಲಿ ಆ ಕೋಳಿಮರಿಯನ್ನು ಬಸುರಿ ಹೆಣ್ಣು ಹಿಡಿದಿರಬೇಕು. ಬಳಿಕ ಒಂದಾದ ಮೇಲೊಂದರಂತೆ ಭಕ್ಷ್ಯಭೋಜ್ಯಗಳನ್ನು ಗಂಡನ ತಾಯಿ (ಅತ್ತೆ ಮುತ್ತೈದೆಯಾಗಿದ್ದರೆ) ಬಡಿಸಬೇಕು. ಇಲ್ಲದಿದ್ದರೆ ಅವಳ ಅಕ್ಕ-ತಂಗಿ ಅಥವಾ ಗಂದನ ಅಕ್ಕ-ತಂಗಿ ಬಡಿಸಬೇಕು. ಚೊಚ್ಚಲ ಹೆರಿಗೆ ತವರಿನಲ್ಲಿ ಆಗಬೇಕೆಂಬ ನಿಯಮವಿದ್ದು, ಅದರಂತೆ ಈ ಎಲ್ಲ ಆಚರಣೆಗಳ ಬಳಿಕ ಅವಳನ್ನು ತಾಯಿಯ ಮನೆಯವರು ತವರಿಗೆ ಹೆರಿಗೆಗಾಗಿ ಕರೆದೊಯ್ಯುತ್ತಾರೆ. ಮುಂದೆ ಮಗುವನ್ನು ಹೆಚ್ಚ ೧೬ನೇ ದಿನದಂದು ತವರಿನಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವ ಕಾರ್ಯಕ್ರಮದವರೆಗೂ ತವರಿಗೇ ಹೆಚ್ಚಿನ ಪ್ರಾಮುಖ್ಯ ಇದೆ. ಆಸ್ತಿಯ ಹಕ್ಕ ತಾಯಿಯ ತವರಿನಿಂದ ಬರುವುದು ಇದಕ್ಕೆ ಕಾರಣವಿರಬಹುದು. ಹೆತ್ತ ಹಾಗೂ ಸತ್ತ ಸೂತಕಗಳ ಆಚರಣೆ ಹೆಚ್ಚಾಗಿ ತಾಯಿಯ ಕಡೆಯಿಂದ ಕಂಡುಬರುತ್ತದೆ.

. ಶವಸಂಸ್ಕಾರ

ಹುಟ್ಟಿನಿಂದ ಆರಂಭಗೊಂಡು ಅಂತ್ಯದವರೆಗೂ ಎಲ್ಲ ಸಂಸ್ಕಾರಗಳನ್ನು ಸಾಂಪ್ರದಾಯಿಕವಾಗಿ ನೆರೆವೇರಿಸುವ ಬಿಲ್ಲವರಲ್ಲಿ ಬದುಕಿನ ಅಂತಿಮ ಸಂಸ್ಕಾರವಾಗಿರುವ ಶವಸಂಸ್ಕಾರದ ಕ್ರಮ ಮಾತ್ರ ಪುರುಷ-ಮಹಿಳೆ ಇಬ್ಬರಿಗೂ ಸಮಾನವಾಗಿದೆ. ಉತ್ತರಕ್ರಿಯೆಗೆ ಕೂಡಿರುವ ಹೆಂಗಸರೆಲ್ಲ ಮೃತವ್ಯಕ್ತಿಗೆ ದಃಖ ಸೂಚಿಸುವ ಸಲುವಾಗಿ ನೀರ್ನಿರೆಲ್‌ನ ಮುಂದೆ ಧೂಪೆಗ್ ಅರಿಪತ್ತುನು ಕ್ರಮದಂತೆ ಅಕ್ಕಿಕಾಳು ಹಾಕುವರು.

ಮೃತ ವ್ಯಕ್ತಿ ಹೆಂಗಸಾಗಿರಲಿ ಗಂಡಸಾಗಿರಲಿ ಮನೆಯಿಂದ ಹೊರಗೆ ನಡೆಯುವ ಶವಸಂಸ್ಕಾರದಲ್ಲಾಗಲೀ ಉತ್ತರಕ್ರಿಯೆಯಲ್ಲಾಗಲೀ ಹೆಂಗಸರು ಭಾಗವಹಿಸುವಂತಿಲ್ಲ. ಶವವನ್ನು ದಫನ ಅಥವಾ ದಹನ ಮಾಡಿದ ಸ್ಥಳದಲ್ಲಿ ಅಡಿಕೆಮರದ ಕಂಬ (ಗುರ್ಜಿ) ನೆಟ್ಟು ರಚಿಸಿದ ಚಪ್ಪರದಲ್ಲಿ ನರುಗುವ ದೂಫೆಗೆ ಅರಿಪತ್ತುನು ಕಾರ್ಯದಲ್ಲೂ ಭಾಗವಹಿಸುವುದಿಲ್ಲ.

ಉತ್ತರ ಕ್ರಿಯೆ ನಡೆದ ದಿನ ಸತ್ತವರನ್ನು ಹದಿನಾರರ ಜೊತೆಗೆ ಸೇರಿಸುವ “ಉಳಾಯಿ ಲೆಪ್ಪುನು”ಸ ಕ್ರಮ ಬ್ರಾಹ್ಮಣೇತರ ಸಮುದಾಯಗಳಲ್ಲಿ ಇರುವಂತೆ ಬಿಲ್ಲವರಲ್ಲಿಯೂ ಇದೆ. ಈ ಮೊದಲು ಗತಿಸಿದ ಹದಿನಾರು ಮಂದಿ ಹಿರಿಯರ ಸಾವಿನ ಸರಪಳಿಯಲ್ಲಿ ಈಗ ಸತ್ತ ವ್ಯಕ್ತಿಯನ್ನು ಸೇರಿಸುವಾಗ ಆ ಸರಪಳಿಯ ಮೊದಲ ಕೊಂಡಿ ಕಳಚಿ ಆತನ ಪ್ರೇತಾತ್ಮಕ್ಕೆ ಶಾಂತಿ ಲಭಿಸುತ್ತದೆ. ಈಗ ಮರಣಿಸಿದ ವ್ಯಕ್ತಿ ಹದಿನಾರನೆಯವ/ಳಾಗಿ ಆ ಕೊಂಡಿಯಲ್ಲಿ ಸೇರಿಕೊಳ್ಳುತ್ತಾರೆ ಎಂಬ ನಂಬಿಕೆ ಈ ಆಚರಣೆಯ ಹಿನ್ನೆಲೆಯಲ್ಲಿದೆ. ಅಂದು ರಾತ್ರಿ ಹದಿನಾರು ಎಲೆಗಳಿಗೆ ಮಾಂಸಾಹಾರ ಅಡುಗೆ ಮಾಡಿ ಬಡಿಸಿ ಸತ್ತವರ ಆತ್ಮಕಗಳನ್ನು ಒಳ ಕರೆಯುತ್ತಾರೆ. ಸತ್ತ ವ್ಯಕ್ತಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಈ ಆಚರಣೆಯನ್ನು ನಡೆಸಲಾಗುತ್ತದೆ.

 

ತೀಯರಸ ಜೀವನಾವರ್ತನ ಆಚರಣೆಗಳು

. ತಾಳಿಕಟ್ಟುಕಲ್ಯಾಣಮ್

ಹೆಣ್ಣೊಬ್ಬಳು ಮೈನೆರೆಯುವುದಕ್ಕೂ ಮೊದಲು ಈ ತಾಳಿಕಟ್ಟು ಕಲ್ಯಾಣಮ್ ಎನ್ನುವ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ದಾರಕ್ಕೆ ಸಣ್ಣ ಚಿನ್ನದ ಪದಕವನ್ನು ಸೇರಿಸಿ ಮಾಡಿದ ತಾಲಿಯನ್ನು ಮನೆಯ ಗಂಡುಮಗ ಅಥವಾ ಅದೇ ಜಾತಿಯ ಅಥವಾ ಉಚ್ಛ ಜಾತಿಯ ಯುವಕ ಕಟ್ಟುತ್ತಾನೆ. ಆದರೆ ಅವನಿಗೆ ಅವಳ ಮೇಲೆ ಯಾವುದೇ ಅಧಿಕಾರವಿರುವುದಿಲ್ಲ. ಅವಳು ಅಡುಗೆಗೆ, ಮದುವೆಗೆ ಆ ಮೂಲಕ ಸಂಸಾರ ನಿರ್ವಹಣೆಗೆ ಅರ್ಹಳು ಎಂದು ತೋರಿಸಿಕೊಡುವ ಆಚರಣೆಯಾಗಿದೆ. ಮೈನೆರೆಯುವುದಕ್ಕೂ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಆಗದಿದ್ದರೆ ಸಮುದಾಯದಿಂದ ಬಹಿಷ್ಕಾರಗೊಳ್ಳುವ ಭಯ ಇದ್ದುದು ಇಂತಹ ಆಚರಣೆಗೆ ಕಾರಣವಾಗಿದೆ.

ಮೂಪತ್ತಿ

ತೀಯರ ಒಂದು ನಿರ್ದಿಷ್ಟ ಬಳಿಯಾದ ಬಂಗೇರ ಬಳಿಗೆ ಸೇರಿದ ಕುಟುಂಬದ ಹಿರಿಯ ಮುತ್ತೈದೆ ಹೆಂಗಸನ್ನು ಮೂಪತ್ತಿ ಎಂದು ಕರೆಯುತ್ತಾರೆ. ತೀಯರ ಎಲ್ಲ ಬಗೆಯ ಸಂಸ್ಕಾರಗಳಲ್ಲಿ (ಶವ ಸಂಸ್ಕಾರವೂ ಸೇರಿದಂತೆ) ಅಗತ್ಯವಾಗಿ ಬೇಕಾದ ವ್ಯಕ್ತಿ ಈಕೆ. ಎಲ್ಲ ಶುಭಕಾರ್ಯಗಳೂ ಮೂಪತ್ತಿಯ ಉಪಸ್ಥಿತಿಯಲ್ಲೇ ನಡೆಯಬೇಕು. ಹೀಗಾಗಿ ಆಕೆಗೆ ವಿಶೇಷ ಗೌರವ ಸಲ್ಲುತ್ತದೆ. ಆಕೆ ವಿಧವೆಯಾದಲ್ಲಿ ಆಕೆಯ ಕುಟುಂಬದ ಇನ್ಯಾರಾದರೂ ಹಿರಿಯ ಸ್ತ್ರೀ ಅಥವಾ ಅದೇ ಬಳಿಯ ಬೇರೆ ಕುಟುಂಬದ ಹಿರಿಯ ಸ್ತ್ರೀ ಮುಂದೆ ಆ ಸ್ಥಾನಕ್ಕೆ ಬರುವುದು ಕ್ರಮ. ಗೃಹ ಪ್ರವೇಶದ ಸಂದರ್ಭದಲ್ಲಿ ಹೊಸ ಮನೆಗೆ ಪ್ರದಕ್ಷಿಣೆ ಬರುವಾಗ ಮೂಪತ್ತಿಯು ತೂಗುದೀಪ ಹಿಡಿದು ಮುಂದಾಳತ್ವ ವಹಿಸಬೇಕು. ವಿವಾಹದ ಕಾರ್ಯಕ್ರಮದಲ್ಲಿ ಮದುಮಗನ ದಿಬ್ಬಣ ಹೆಣ್ಣಿನ ಮನೆಗೆ ಬಂದ ಸಂದರ್ಭದಲ್ಲಿ ಮೂಪತ್ತಿಯು ಹರಿವಾಣ ಮತ್ತು ದೀಪವನ್ನು ಹಿಡಿದುಕೊಂಡು ಮಂಟಪಕ್ಕೆ ಪ್ರದಕ್ಷಿಣೆ ಬರುವ ಕ್ರಮ ಇದೆ. ನಂತರ ಮೂಪತ್ತಿ ಮತ್ತು ಒಂದಿಬ್ಬರು ಇತರ ಹೆಂಗಸರು ಸೇರಿ ಮದುಮಗಳು ಮತ್ತು ಮದುಮಗನಿಗೆ ಅಕ್ಷತೆ ಕಾಳನ್ನು ಹಾಕಿ ಆಶೀರ್ವದಿಸುತ್ತಾರೆ. ಇದಲ್ಲದೆ ಇವಳು ಮರಣದ ಸಂದರ್ಭದಲ್ಲಿ ಅವಶ್ಯವಾಗಿ ಬೇಕಾಗುವ ವ್ಯಕ್ತಿಯಾಗಿದ್ದು, ಶವ ಮೀಯಿಸಲು ನೀರು ಬಿಸಿ ಮಾಡುವುದು ಅವಳ ಕೆಲಸವಾಗಿದೆ. ಇದರ ಜೊತೆಗೆ ಅವಳು ಶವವನ್ನು ಮೀಯಿಸಲು ಬೇಕಾದ ದಾಸವಾಳ ಜಜ್ಜಿ ತೆಗೆದ ರಸ “ತಾಳಿ”, ಅರಿಶಿಣ ಎಣ್ಣೆ ಇತ್ಯಾದಿ ತಯಾರು ಮಾಡಿಡುತ್ತಾಳೆ. ಶವಸಂಸ್ಕಾರಕ್ಕೆ ಸಂಬಂಧಪಟ್ಟ ಕುಟುಂಬದ ಮಹಿಳೆಯರು ಪಾಲಿಸಬೇಕಾದ ನಿಯಮಗಳು ಮೂಪತ್ತಿಯ ಮುಂದಾಳ್ತನದಲ್ಲೇ ಆಚರಣೆಗೆ ಬರುತ್ತವೆ ಮತ್ತು ಆ ಜವಾಬ್ದಾರಿ ಅವಳದೇ ಆಗಿರುತ್ತದೆ.

. ತೆರಂಡ್‌ಕುಳಿ/ ತಲಕಾಣಿ/ ವಯಸರಿಕ್ಕ್‌ನ

ಇದು ಹೆಣ್ಣು ಮೊದಲ ಬಾರಿ ಋತುಮತಿಯಾದಾಗ ಮಾಡುವ ನಾಲ್ಕು ದಿನದ ಆಚರಣೆಯಾಗಿದೆ. ಇದನ್ನು ಹಿಂದಿನ ಕಾಲದಲ್ಲಿ ಕಾಸರಗೋಡಿನಿಂದ ದೂರದ ಪ್ರದೇಶಗಳಲ್ಲಿ ತೆರಂಡ್‌ಕುಳಿ ಎಂದು ಕರೆಯಲಾಗುತ್ತಿದ್ದು, ಕಾಸರಗೋಡಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಇದನ್ನು ಗ್ರಾಮೀಣರು ತಲಕಾಣಿ ಎಂದೂ, ಇತರರು ವಯಸರಿಕ್ಕ್‌ನ್‌ (ವಯಸ್‌ಅರಿಕ್ಕ್‌ನ್) ಎಂದೂ ಕರೆಯುತ್ತಿದ್ದರು.

ಈ ಆಚರಣೆಯಲ್ಲಿ ಮೈನೆರೆದ ಹುಡುಗಿಗೆ ಸ್ನಾನ ಮಾಡಿಸಿ ಒಂದು ಕೋಣೆಯಲ್ಲಿ ಕೂರಿಸುತ್ತಿದ್ದರು. ಅಲ್ಲಿ ಒಂದು ಕಾಲುದೀಪ ಇರಿಸಲಾಗುತ್ತಿತ್ತು.ಸ ಅದರ ಬಳಿ ಒಂದು ಕಂಚಿನ ಪಾತ್ರೆಯಲ್ಲಿ ಸಿಂಗಾರದ ಹೂವನ್ನಿಟ್ಟು “ಕೂ” ಎಂದು ಕೂಗಿ ಅವಳನ್ನು ದೀಪದ ಬಳಿ ಕೂರಿಸುತ್ತಿದ್ದರು. ವಣ್ಣಾತ್ತಿ ಎಂದು ಕರೆಯಲಾಗುವ ಮಡಿವಾಳತಿ ಬಂದು ಮೈನೆರೆದ ಹುಡುಗಿಗೆದ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಮಡಿ ಉಡಿಸಿ, ಹಲಗೆಯ ಮೇಲೆ ಕೂಡಿಸುತ್ತಿದ್ದಳು. ಅವಳು ನಾಲ್ಕು ದಿನಗಳವರೆಗೆ ಅಲ್ಲಿಂದ ಹೊರಗೆ ಬರುವಂತಿಲ್ಲ. ಆ ದಿನಗಳಲ್ಲಿ ಅವಳಿಗೆ ಆಹಾರ ಮತ್ತಿತರ ಅವಶ್ಯಕ ವಸ್ತುಗಳನ್ನು ಅಲ್ಲಿಗೇ ಒದಗಿಸುತ್ತಿದ್ದರು. ೫ನೇ ದಿನ ಪುನಃ ವಣ್ಣಾತ್ತಿ ಬಂದು ಅವಳಿಗೆ ಸ್ನಾನ ಮಾಡಿಸಿ ಮನೆಯೊಳಗೆ ಕರೆತರುತ್ತಾಳೆ. ಒಣಹುಲ್ಲಿನ ಸಿಂಬಿ ಮಾಡಿ ಅದರಲ್ಲಿ ನಾಲ್ಕು ಮಣ್ಣಿನ ಕಲಶ ಇರಿಸಲಾಗುತ್ತದೆ. ಆ ಕಲಶದ ಒಳಗೆ ಐದು ವೀಳ್ಯದೆಲೆ, ಐದು ಅಡಿಕೆ ಹಾಕುತ್ತಾರೆ. ಕಲಶದ ಬಳಿ ನಾಲ್ಕುಸ ತೆಂದಿನಕಾಯಿಗಳನ್ನು ಇರಿಸುತ್ತಾರೆ. ಅವಳ ಮನೆಯವರು ಇದರ ಸುತ್ತ ನಾಲ್ಕು ಅಥವಾ ಐದು ಅಥವಾ ಏಳು ಪ್ರದಕ್ಷಿಣೆ ಬರುತ್ತಾರೆ. ಮುಖ್ಯವಾಗಿ ಹಿಂಗಾರ ಮತ್ತು ಐದು ಬಗೆಯ ಹೂವನ್ನು ಹುಡುಗಿಗೆ ಮುಡಸಲಾಗುತ್ತದ. ಐದು ತೆಂಗಿನಕಾಯಿಗಳನ್ನು ಒಟ್ಟಿಗೆ ಅದರ ಮೇಲೆ ಹುಡುಗಿಯನ್ನು ಕೂಡಿಸುತ್ತಾರೆ. ಮೂಪತ್ತಿ ಅಲ್ಲಿ ಇರಿಸಿದ ನಾಲ್ಕು ಕಲಶಗಳ ನೀರನ್ನು ಅವಳ ತಲೆಯ ಮೇಲೆ ಸುರಿಸುತ್ತಾಳೆ. ಅನಂತರ ಇನ್ನೊಮ್ಮೆ ಅವಳಿಗೆ ಸರಿಯಾದ ಸ್ನಾನ ಮಾಡಿಸಲಾಗುತ್ತದೆ. ಬಳಿಕ ಕೊಟ್ಟ ಮಡಿಬಟ್ಟೆಯನ್ನು ಅವಳಿಗೆ ಉಡಿಸುತ್ತಾರೆ. ಅನಂತರ ಮನೆ ಪ್ರವೇಶ ಮಾಡಿಸುತ್ತಾರೆ. ಹುಡುಗಿಯನ್ನು ಕೂರಿಸಿದ ತೆಂಗಿನಕಾಯಿಗಳಲ್ಲಿ ಎರಡನ್ನು ವಣ್ಣಾತ್ತಿ ತೆಗೆದುಕೊಂಡು ಹೋಗುತ್ತಾಳೆ. ಉಳಿದ ಮೂರು ತೆಂಗಿನಕಾಯಿಗಳಲ್ಲಿ ಗಂಜಿಸ ಮಾಡಿ ಹುಡುಗಿಗೆ ಕುಡಿಸುತ್ತಾರೆ. ಇದಲ್ಲದೆ ಮೈನೆರೆದ ಹೆಣ್ಣಿಗೆ ಕೊಡುವ ಇತರ ಆಹಾರಗಳಲ್ಲಿ ಮೆಂತೆಯ ಗಂಜಿ, ಅಕ್ಕಿ ಮತ್ತು ಮೆಂತೆಯನ್ನು ಹುರಿದು ಪುಡಿ ಮಾಡಿ ಅದಕ್ಕೆ ತೆಂಗಿನಕಾಯಿ, ಬೆಲ್ಲ ಬೆರೆಸಿ ಮಾಡಿದ ಉಂಡೆ, ಅವಲಕ್ಕಿ ಇತ್ಯಾದಿ ಸೇರುತ್ತವೆ. ಜೊತೆಗೆ ಅವಳಿಗೆ ವಿಶೇಷ ಪೋಷಣೆ ಕೊಡುವ ಸಲುವಾಗಿ ಮತ್ತು ದೇಹ ಮತ್ತು ತಲೆಯನ್ನು ತಂಪಾಗಿರಿಸಲು ಮೆಂತೆಯನ್ನು ಅರೆದು ತಲೆಗೆ ಹಾಕಿ ಸ್ನಾನ ಮಾಡಿಸುತ್ತಾರೆ. ಅನಂತರ ಅವಳನ್ನು ಆಸನದಲ್ಲಿ ಕೂರಿಸಿ ಅಕ್ಷತೆ ಹಾಕುತ್ತಾರೆ. ಉಡುಗೊರೆ ಕೊಡುತ್ತಾರೆ. ಅತಿಥಿಗಳಿಗೆ ಔತಣ ಕೊಡುತ್ತಾರೆ. ಹನ್ನೊಂದು ಅಥವಾ ಹದಿಮೂರನೆಯ ದಿನದಂದು ಅವಳಿಗೆ ಹೊಸ ಸೀರೆಯನ್ನು ಉಡಿಸಿ, ಸೋದರತ್ತೆ ಅಥವಾ ಆಪ್ತರಾದ ಇತರ ಸಂಬಂಧಿಕರ ಮನೆಗೆ ಕರೆದೊಯ್ಯುತ್ತಾರೆ. ಈ ಬಗೆಯ ಆಚರಣೆ ಎಳೆಯ ಹುಡುಗಿಯರಲ್ಲಿ ಮುಟ್ಟಿನ ಕುರಿತಾದ ಭಯ ಮತ್ತು ಆತಂಕವನ್ನು ನಿವಾರಿಸುವುದರ ಜೊತೆಗೆ ಎಲ್ಲರೂ ಅವಳ ಜೊತೆಗಿದ್ದಾರೆ ಎಂಬ ಸುರಕ್ಷತೆಯ ಭಾವವನ್ನು ನೀಡುತ್ತದೆ. ಅಲ್ಲದೆ ತನ್ನ ದೇಹದಲ್ಲಿ ಆಗುವ ಮಾರ್ಪಾಟಿಗೆ ತಯಾರಾಗಲು ಮತ್ತು ಆ ಕುರಿತು ಒಂದು ಬಗೆಯ ಸಂಭ್ರಮವನ್ನೂ ಅವಳು ಅನುಭವಿಸುವಂತೆ ಮಾಡುತ್ತದೆ.

ಹಿಂದಿನ ಕಾಲದಲ್ಲಿ ಮುಟ್ಟಾದ ಹೆಂಗಸರಿಗೆ ಮನೆಯೊಳಗೆ ಪ್ರವೇಶವಿರಲಿಲ್ಲ. ಅವರಿಗೆಂದೇ ಕಟ್ಟಲಾದ ತೆಂಗಿನ ಸೋಗೆಯ ಒಂದು ಪುಟ್ಟ ಕೋಣೆಯಲ್ಲಿ ಅವರಿರಬೇಕಿತ್ತು. ಅಲ್ಲಿಗೆ ಬೇರೆ ಯಾರೂ ಪ್ರವೇಶ ಮಾಡುವ ಹಾಗಿರಲಿಲ್ಲ. ಇವರ ನೆರಳು ಬೇರೆಯವರ ಮೇಲೆ ಬೀಳಬಾರದಿತ್ತು. ಅವರ ಮಕ್ಕಳು ಅವರ ಬಳಿಗೆ ಮೈಮೇಲಿನ ಬಟ್ಟೆ ಕಳಚಿ ಬೆತ್ತಲೆಯಾಗಿ ಹೋಗಬೇಕಿತ್ತು. ಬೆತ್ತಲೆಯಾಗಿರುವವರನ್ನು ಮುಟ್ಟಿದರೆ ಅದರಲ್ಲಿ ಅಶುದ್ಧತೆ ಇಲ್ಲ ಎಂಬ ಭಾವನೆಯಿತ್ತು. ನಾಲ್ಕನೆಯ ದಿನ ಮುಟ್ಟಾದ ಸ್ತ್ರೀಯರು ಬೇರೆಯವರನ್ನು ಮುಟ್ಟಬಹುದಿತ್ತು. ಆದರೆ ಮನೆಯೊಳಗೆ ಪ್ರವೇಶಿಸುವಂತಿರಲಿಲ್ಲ. ಐದನೆಯ ದಿನ ತಾವಿದ್ದ ಕೊಟ್ಟಿಗೆಯನ್ನು ಸಗಣಿ ಹಾಕಿ ಸಾರಿಸಿ ಶುದ್ಧಗೊಳಿಸಿ ಬಳಿಕ ಸ್ನಾನ ಮಾಡಿ ಮನೆ ಪ್ರವೇಶಿಸಿ, ದೇವರ ದರ್ಶನ ಮಾಡುತ್ತಿದ್ದರು. ಪ್ರತ್ಯೇಕವಾದ ಮುಟ್ಟಿನ ಮನೆ ಇಲ್ಲದಿದ್ದ ಸಂದರ್ಭದಲ್ಲಿ ಮನೆಯ ಸ್ನಾನದ ಮನೆಯಲ್ಲೋ ಮನೆಯ ಹೊರಗಡೆಯ ಬೇರೆ ಸ್ಥಳದಲ್ಲೋ ಮಲಗಬೇಕು. ಹೆತ್ತಾಗ ಇರುವಂತೆ, ಮೊದಲ ಬಾರಿ ಮುಟ್ಟಾದಾಗಲೂ ಹದಿನೈದು ದಿನದ ಸೂತಕವಿದೆ. ವಣ್ಣಾತ್ತಿಯು ಮಾಟ್‌ತಂದು ಕೊಟ್ಟು ಶುದ್ದೀಕರಿಸಬೇಕು. ಆ ಬಳಿಕವೇ ಆ ಹೆಣ್ಣು ಮನೆಯೊಳಗೆ ಪ್ರವೇಶಿಸಲು ಅರ್ಹಳೆಂದು ತಿಳಿಯಲಾಗುತ್ತಿತ್ತು.

ಈಗಲೂ ಕೂಡ ಹೆಣ್ಣು ಮೈನೆರೆದಾಗ ಕೆಲವರು ಮಾತ್ರ ವಯಸರಿಕ್ಕ್‌ನ್ ಆಚರಣೆ ಮಾಡುತ್ತಿದ್ದಾರೆ ಮತ್ತು ಅದರಲ್ಲೂ ಮೊದಲಿನಷ್ಟು ಕಟ್ಟುಪಾಡುಗಳಿಲ್ಲ.

. ತೀಯರ ಮದುವೆಯ ವಿವಿಧ ಹಂತಗಳು

ಹೆಣ್ಣು ನೋಡುವುದು, ಕೂಟ ಊಟ, ನಿಶ್ಚಿತಾರ್ಥ, ಕಲ್ಯಾಣ ಮುಹೂರ್ತ, ವಿವಾಹ, ಮದುವೆ ಸಮ್ಮಾನ ಇವು ತೀಯರ ಮದುವೆಯ ವಿವಿಧ ಹಂತಗಳಾಗಿವೆ.

ಹೆಣ್ಣು ನೋಡುವುದು

ಬಿಲ್ಲವರಲ್ಲಿರುವಂತೆಯೇ ಮೊತ್ತಮೊದಲಾಗಿ ಹೆಣ್ಣು ಮತ್ತು ಗಂಡಿನ ಕುಟುಂಬದ ಹಿರಿಯರು ಬಳಿಯ ಬಗ್ಗೆ ಚಿಂತನೆ ನಡೆಸಿ, ವಿವಾಹ ನಿಗದಿಮಾಡುತ್ತಾರೆ. ಅನಂತರ ಕುಲ, ತರವಾಡಿನ ಬಗ್ಗೆ ವಿಚಾರಿಸಿ, ಹುಡುಗನ ಸೋದರಮಾವನನ್ನು ಒಳಗೊಂಡಂತೆ ಗಂಡಸರು ಮಾತ್ರ ಹುಡುಗಿಯನ್ನು ನೋಡಲು ಹೋಗುತ್ತಾರೆ. ಕೌಟುಂಬಿಕ ನೆಲೆಯಲ್ಲಿ ಸ್ತ್ರೀಯರಿಗೆ ಮಹತ್ವವಿದ್ದಂತೆ ಕಾಣಿಸಿದರೂ ಸಾಮಾಜಿಕ ಆಚರಣೆಗಳ ನೆಲೆಯಲ್ಲಿ ಅವುಗಳ ಜೊಳ್ಳುತದ್ದೀ ಸಂದರ್ಭದಲ್ಲಿ ಸ್ಪಷ್ಟವಾಗುತ್ತದೆ.

ನಿಶ್ಷಿತಾರ್ಥ

ಹುಡುಗಿ ಒಪ್ಪಿಗೆಯಾದಲ್ಲಿ ಎರಡು ಕಡೆಯವರೂ ಸೇರಿ ನಿಶ್ಚಯದ ದಿನವನ್ನು ನಿಗದಿಪಡಿಸುತ್ತಾರೆ. ಹುಡುಗಿಯ ಮನೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಾರೆ. ಆ ದಿನದಂದು ಮದುವೆಯ ದಿನ ಮತ್ತು ಮುಹೂರ್ತದ ಸಮಯವನ್ನು ನಿರ್ಧರಿಸುತ್ತಾರೆ. ಆ ಬಳಿಕ ಹುಡುಗಿಯ ಸಹೋದರ ಗುರುಹಿರಿಯರ ಸಮ್ಮುಖದಲ್ಲಿ ಒಂದು ಗಿಂಡಿಯಲ್ಲಿ ನೀರು ತುಂಬಿಕೊಂಡು, ಅಂಗಳದ ಮಧ್ಯೆ ಬಂದು ನಿಂತು ಎಲ್ಲರನ್ನೂ ಅವರಲ್ಲಿ ಊಟಕ್ಕೆ ಆಹ್ವಾನಿಸುತ್ತಾನೆ. ಅದಕ್ಕೆ ಹುಡುಗನ ಕಡೆಯ ಓರ್ವ ವ್ಯಕ್ತಿ ಎಲ್ಲ ಮಾತುಕತೆಯಾದ ಬಳಿಕ ನಾವೆಲ್ಲ ಊಟ ಮಾಡಬಹುದೆಂದು ಒಪ್ಪಿಗೆ ಸೂಚಿಸುತ್ತಾರೆ. ಇಬ್ಬರೂ ಸೇರಿ ಗಿಂಡಿ ನೀರಿನಲ್ಲಿ ಮುಖ ತೊಳೆದು ಪೂರ್ವ-ಪಶ್ಚಿಮಾಭಿಮುಖವಾಗಿ ಹಾಸಿದ ಒಂದು ಚಾಪೆಯ ಮೇಲೆ ಕುಳಿತುಕೊಳ್ಳುತ್ತಾರೆ (ಬಿಲ್ಲವರ ಚೌಕ ಸೇರುನಿ ಕಾರ್ಯಕ್ರಮದಂತೆ). ಅದರಲ್ಲಿ ಆಯಾಯ ಕಡೆಯವರು ಸೇರುತ್ತಾರೆ. ಬಳಿಕ ವಿಧಿವತ್ತಾಗಿ ನಿಶ್ಚಯದ ಮಾತುಕತೆಯಾಗುತ್ತದೆ.

ಮೋತಾಳ್ ಮಂಗಲ ಅಥವಾ ಕಲ್ಯಾಣಮುಹೂರ್ತ ಅಥವಾ ಚಪ್ಪರ ಮಂಗಲ ಮತ್ತು ವಿವಾಹ

ಹಿಂದಿನ ಕಾಲದಲ್ಲಿ ಹುಡುಗನ ಮನೆಯಲ್ಲಿ ಮದುವೆ ನಡೆಯುತ್ತಿತ್ತು. ಹಾಗಾಗಿ ಹೆಣ್ಣಿನ ದಿಬ್ಬಣ ಗಂಡಿನ ಮನೆಗೆ ಬರಬೇಕಿತ್ತು. ದಿಬ್ಬಣ ಬಂದ ಬಳಿಕ ಎರಡೂ ಕಡೆಯವರು ಪರಸ್ಪರ ಎದುರಾಗಿ ನಿಂತು ಕುಂಕುಮ, ಅಕ್ಕಿ, ಪನ್ನೀರು, ಸುಗಂಧದ್ರವ್ಯ, ಹೂವು ಮುಂತಾದ ಶುಭವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಅನಂತರ ಹುಡುಗನ ಸೋದರಿ ಮದುಮಗಳನ್ನು ಒಳಗೆ ಕರೆತರುತ್ತಿದ್ದಳು. ಮದುಮಗಳು ಉಟ್ಟುಬಂದ ದಿಬ್ಬಣ ಸೀರೆಯನ್ನು ತೆಗೆದು ಧಾರೆ ಸೀರೆ ಉಡಿಸುತ್ತಿದ್ದರು. ಮದುವೆಯ ಬಳಿಕ ಮದುಮಗಳು ಅವಳ ತವರುಮನೆಗೆ ಮದುಮಗ ತನ್ನ ಮನೆಗೆ ಹೋಗಿ ಮರುದಿನ ಅಥವಾ ನಿಗದಿತ ದಿನದಂದು ನಡೆಯುವ ಸಮ್ಮಾನದ ಬಳಿಕ ಅವಳನ್ನು ಗಂಡನ ಮನೆಗೆ ಕರೆತರುವ ಸಂಪ್ರದಾಯವಿತ್ತು. ದಕಷಿಣ ತಿರುವಾಂಕೂರಿನಲ್ಲಿ ವಧುದಕ್ಷಿಣೆ ರೂಢಿಯಲ್ಲಿತ್ತು. ಮದುವೆಯಾದ ಹೆಣ್ಣು ತನ್ನ ಅತ್ತೆ-ಮಾವ ಹೇಳಿದ ಹಾಗೆ ಕೇಳಬೇಕು. ಎಲ್ಲಿಗಾದರೂ ಹೋಗಬೇಕಾದರೆ ಅವರಲ್ಲಿ ಮುಂಚಿತವಾಗಿ ಕೇಳಿ ಅನುಮತಿ ಪಡೆಯಬೇಕಿತ್ತು. ಅಡುಗೆ ಕೆಲಸ ಸೊಸೆಯರಿಗಾದರೆ ಊಟ ಬಡಿಸುವ ಕೆಲಸ ಅತ್ತಯರದೇ ಆಗಿತ್ತು.

ಬಿಲ್ಲವರಲ್ಲಿ ಗುರಿಕಾರರಿರುವಂತೆ, ತೀಯರಲ್ಲಿ ಅಚ್ಚಮ್ಮಾರಿಗೆ ಪ್ರಾಸ್ತ್ಯ ಹೆಚ್ಚು. ಅಚ್ಚಮ್ಮಾರರು ಸಕಾಲದಲ್ಲಿ ಬಂದು, ಒಂದು ಜೊತೆ ಮಡಲನ್ನು ಕೈಯಲ್ಲಿ ಹಿಡಿದು ದೇವತಾ ಪ್ರಾರ್ಥನೆ ಮಾಡಿಕೊಂಡು ಚಪ್ಪರದ ಕನ್ನಿಮೂಲೆ (ನೈಋತ್ಯ ದಿಕ್ಕು)ಯಲ್ಲಿ ಮಹೂರ್ತದ ಮಡಲು ಇಟ್ಟು ಮದುವೆಯ ಚಪ್ಪರವನ್ನು ಹಾಕಲು ಅನುಮತಿ ನೀಡುವುದರಿಂದ ಆರಂಭಿಸಿ, ಮದುವೆಯ ಹೆಚ್ಚಿನ ಸಂದರ್ಭಗಳಲ್ಲಿ ಬಿಲ್ಲವರಲ್ಲಿ ಗುರಿಕಾರರು ಹೇಗೋ ಹಾಗೇ ತೀಯರಲ್ಲಿ ಇವರು ಮುಖ್ಯ ಪಾತ್ರವಹಿಸುತ್ತಾರೆ. ಚಪ್ಪರ ಹಾಕುವ ಕಾರ್ಯಕ್ಕೆ ಅಚ್ಚಮ್ಮಾರರು ಆರಂಭ ಮಾಡಿಲ್ಲದಿದ್ದ ಪಕ್ಷದಲ್ಲಿ ಹಾಗೆ ಹಾಕಿದ ಚಪ್ಪರದಲ್ಲಿ ನಡೆಯುವ ಮದುವೆಗೆ ಹಿಂದೆ ಯಾರೂ ಹೋಗದಿರುವಷ್ಟು ಅಚ್ಚಮ್ಮಾರರಿಗೆ ಪ್ರಾಮುಖ್ಯ ಇತ್ತು.

ತೀಯರ ಮದುವೆಯಲ್ಲಿ ಈಗ ಕೆಲವು ಬದಲಾವಣೆಗಳಾಗಿದೆ. ಅವರ ಮದುವೆಯ ದಿಬ್ಬಣದಲ್ಲಿ ಗಂಡಸರ ಸಂಖ್ಯೆ ಹೆಚ್ಚು. ಅವರು ಎಲ್ಲ ಕಾರ್ಯಗಳಿಗೂ (ಮರಣ ಸಂದರ್ಭವನ್ನು ಹೊರತುಪಡಿಸಿ) ಮುಂಡಾಸು ಧರಿಸುವುದು ಅಗತ್ಯವಾಗಿದೆ. ಚಪ್ಪರಕ್ಕೆ ಐದು ಸಲ ಪ್ರದಕ್ಷಿಣೆ ಬಂದ ಮೇಲೆ ಮದುಮಗನನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಕಾವುದೀಯನ್‌ನನ್ನು ಕರೆದು ಬಾಳ್‌ನ್ನು ಮುಖಕ್ಕೆ ತಾಗಿಸುತ್ತಾರೆ. ಬಳಿಕ ಮದುಮಗ ಚಪ್ಪರದ ಹೊರಗೆ ಹೋಗಿ ಸರಿಯಾಗಿ ಮುಖಕ್ಷೌರ ಮಾಡಿಕೊಂಡು ತಣ್ಣೀರಿನಿಂದ ಸ್ನಾನ ಮಾಡುತ್ತಾನೆ. ಸ್ನಾನ ಮಾಡಿ ಉಟ್ಟ ಒದ್ದೆ ಬಟ್ಟೆಯನ್ನು ಅಲ್ಲೇ ಬಿಟ್ಟು ಬರುತ್ತಾನೆ. ಅದು ಮರ್ಯಾದಕ್ಕಾರನ್‌ಗೆ ಸಲ್ಲ ತಕ್ಕ ವಸ್ತುವಾಗಿರುತ್ತದೆ. ಅನಂತರ ಮದುಮಗನ ಭಾವ (ಸಹೋದರಿಯ ಗಂಡ) ಅವನು ತಯಾರಾಗಲು ಸಹಾಯ ಮಾಡುತ್ತಾನೆ. ಬಳಿಕ ಮೂಪತ್ತಿ ತೂಗುದೀಪವನ್ನು ಹಿಡಿದು ಚಪ್ಪರ ಪ್ರದಕ್ಷಿಣೆ ಹೋಗುವಾಗ ಹಿಂದಿನಿಂದ ಮದುಮಗನನ್ನು ಅವನ ಭಾವ ಕೈಹಿಡಿದುಕೊಂಡು, ಅವರ ಹಿಂದೆ ಯುವಕರು ಸಾಲುಗಟ್ಟಿ ಚಪ್ಪರದಲ್ಲಿ ಹಾಸಿದ ಮಡಿ ಬಟ್ಟೆಯ ಮೇಲೆ ನಡೆದು ಚಪ್ಪರಕ್ಕೆ ಸುತ್ತು ಬರುತ್ತಾರೆ. ಬಳಿಕ ಕಂಚು ಇಟ್ಟು ಅಕ್ಷತೆ ಹಾಕುತ್ತಾರೆ. ಅನಂತರ ಹುಡುಗಿಯ ಮನೆಗೆ ಮದುಮಗನ ದಿಬ್ಬಣ ಹೊರಡುತ್ತದೆ. ಇದೇ ರೀತಿ ಗಂಡಿನ ದಿಬ್ಬಣ ಬಂದ-ಬಳಿಕ ಹೆಣ್ಣಿನ ಮನೆಯಲ್ಲೂ ಚಪ್ಪರ ಪ್ರದಕ್ಷಿಣೆ ಕಾರ್ಯಕ್ರಮವನ್ನು ನಡೆಸುತ್ತಾರೆ. ಅಲ್ಲಿ ಚಪ್ಪರಕ್ಕೆ ಪ್ರದಕ್ಷಿಣೆ ಬರುವಾಗ ಬಟ್ಟಲು ದೀಪ ಹಿಡಿದ ಮೂಪತ್ತಿಯ ಹಿಂದೆ ಮದುಮಗನ ಕೈ ಹಿಡಿದ ಅವನ ಭಾವ, ಅವನ ಹಿಂದೆ ಮದುಮಗ, ಮದುಮಗನ ಹಿಂದೆ ಮದುಮಗಳು, ಅವಳ ಹಿಂದೆ ಅವಳ ನಾದಿನಿ (ಮದುಮಗನ ಸಹೋದರಿ), ನಾದಿಯ ಹಿಂದೆ ಇತರ ಹೆಂಗಸರು ಸಾಲುಗಟ್ಟಿ ಹಾಸಿದ ಮಡಿವಸ್ತ್ರದ ಮೇಲೆ ಐದು ಅಥವಾ ಏಳು ಬಾರಿ ಪ್ರದಕ್ಷಿಣೆ ಬರುತ್ತಾರೆ. ದೀಪದ ಬಟ್ಟಲನ್ನು ಹಿಡಿದ ಮೂಪತ್ತಿಯು ಪೂರ್ವಕ್ಕೆ ಮುಖ ಮಾಡಿ ನಿಂತು, ದೀಪ ಮತ್ತು ಬಟ್ಟನ್ನು ಅಲ್ಲಿರುವ ಹಲಗೆಯ ಮೇಲೆ ಇರುತ್ತಾಳೆ. ಚಪ್ಪರದ ನಡುಗಂಬದ ಹತ್ತಿರಲ್ಲಿ ಇರಿಸಿದ ಆಸನದಲ್ಲಿ ಮದುಮಗನನ್ನು ಕೂರಿಸುತ್ತಾರೆ. ಅವನ ಎಡಭಾಗದಲ್ಲಿ ಮದುಮಗಳನ್ನು ನಿಲ್ಲಿಸುತ್ತಾರೆ. ಕೂರಿಸುವುದಿಲ್ಲ.

ಮದುವೆಯ ಒಂದು ಹಂತದಲ್ಲಿ ಚಪ್ಪರ ಪ್ರದಕ್ಷಿಣೆ ಬಂದ ಬಳಿಕ ಹುಡುಗಿಯ ಸೋದರಮಾವನು ಮದುಮಗನನ್ನು ಕೂರಿಸಿ, ಅವಳನ್ನು ನಿಲ್ಲಿಸಿ, ಅವರ ಹಿಂದೆ ತಾನು ನಿಂತು, “ಹೆಣ್ಣು ಕೊಟ್ಟು ಉಂಗುರ ಬದಲಿಸುತ್ತೇನೆ” ಎಂದು ಹೇಳಿ, ಮದುವಣಿಗರ ತಲೆಯ ಮಧ್ಯದಿಂದ ಉಂಗುರ ನೀಡುತ್ತಾರೆ. ಆಗ ಹುಡುಗನ ಸೋದರಮಾವನು “ಹೆಣ್ಣು ಸ್ವೀಕಾರ ಮಾಡಿ ಉಂಗುರ ಬದಲಿಸುತ್ತೇನೆ” ಎಂಬ ಮಾತುಗಳನ್ನು ಹೇಳಿ ಅದೇ ಉಂಗುರವನ್ನು ಮರಳಿ ಹುಡುಗಿಯ ಸೋದರಮಾವನಿಗೆ ಕೊಡುತ್ತಾರೆ. ಈ ಪ್ರಕ್ರಿಯೆಯನ್ನು ಮೂರು ಬಾರಿ ನಡೆಸುತ್ತಾರೆ.

ಇಂದಿನ ಮದುವೆಗಳಲ್ಲಿ ಮದುಮಗನ ಸೋದರಿ ಸೀರೆ, ರವಿಕೆ, ಹೂವು ಇತ್ಯಾದಿಗಳ ಹರಿವಾಣವನ್ನು ಮೊದಲು ಅಚ್ಚಮ್ಮಾರರ ಮುಂದೆ, ನಂತರ ಎಲ್ಲ ಹೆಂಗಸರ ಮುಂದೆ ಹಿಡಿದು ಬಳಿಕ ಹುಡುಗನ ತಾಯಿಯ ಕೈಗೆ ಕೊಡುತ್ತಾರೆ. ಆಕೆ ತನ್ನ ಸೊಸೆಯಾಗುವ ಮದುಮಗಳಿಗೆ ಅದನ್ನು ಕೊಡುತ್ತಾಳೆ. ಅವಳು ಅದನ್ನು ತೆಗೆದುಕೊಂಡು ಅತ್ತೆಯ ಕಾಲಿಗೆ ನಮಸ್ಕರಿಸುತ್ತಾಳೆ. ಅನಂತರ ಮದುಮಗಳನ್ನು ಹೂವು, ಆಭರಣ ಇತ್ಯಾದಿಗಳಿಂದ ಶೃಂಗಾರ ಮಾಡುತ್ತಾರೆ.

ಮದುವೆಯ ದಿನ ಮದುಮಗನು ತಲೆಗೆ ಮುಂಡಾಸನ್ನು ಅಗತ್ಯವಾಗಿ ಧರಿಸಬೇಕು. ಇದರ ಜೊತೆಗೆ ಅಂಗಿ, ಮುಂಡು ಹಾಕಿಕೊಳ್ಳಬೇಕು ಮದುಮಗಳು ಬಲಗೈಯಲ್ಲಿ ಗೆಜ್ಜೆಕತ್ತಿ, ಐದು ವೀಳ್ಯದೆಲೆ, ಒಂದು ಅಡಿಕೆ ಹಿಡಿದಿರುತ್ತಾಳೆ. ಮದುವೆಯಲ್ಲಿ ಉಂಗುರ ಬದಲಾವಣೆಯ ಪ್ರಕ್ರಿಯೆಯ ಬಳಿಕ ಮನೆಯ ಹಿರಿಯ ಹೆಂಗಸು ಮದುಮಗಳ ಕೈಯಿಂದ ಗೆಜ್ಜೆಕತ್ತಿಯನ್ನು ತೆಗೆದುಕೊಳ್ಳುತ್ತಾರೆ. ಮದುಮಗ ಅವಳ ಕೈನಿಂದ ವೀಳ್ಯದೆಲೆ, ಅಡಿಕೆ ಕಸಿದು ಓಡುತ್ತಾನೆ. ಅದಕ್ಕೆ “ಅಲೆತಣ್ಣಿ ಕುಡಿಸುವುದು” ಎನ್ನುತ್ತಾರೆ. ಮದುಮಕ್ಕಳಿಗೆ ಅಕ್ಷತೆ ಹಾಕುವಾಗ ಗಂಡಸರೆಲ್ಲ ಕಾಕಿ ಮುಗಿದು, ಅವರ ಸಮ್ಮತಿ ದೊರೆತ ಬಳಿಕ ಹೆಂಗಸರು ಮಂತ್ರಾಕ್ಷತೆ ಹಾಕಬೇಕು. ಇಲ್ಲವಾದಲ್ಲಿ ಅದು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿತವಾಗುತ್ತದೆ. ದೀಪದ ಬಟ್ಟಲು ಹಿಡಿದ ಮೂಪತ್ತಿಯ ಜೊತೆಯಲ್ಲಿ ನಿಂತ ಮದುಮಗಳು ಹಿಂದಕ್ಕೆ ತಿರುಹಿ ಗಂಡನನ್ನು ತನ್ನ ಹಿಂದೆ ನಿಲ್ಲಿಸಿಕೊಂಡು ತನ್ನ ಬಲಗೈಯಿಂದ ಅವನ ಬಲಗೈ ಹಿಡಿದು ಅವನನ್ನು ಮನೆಯೊಳಗೆ ಪ್ರವೇಶ ಮಾಡಿಸುತ್ತಾಳೆ. ಇದಕ್ಕೆ “ಕೈಹಿಡಿದ ಗಂಡ” ಎನ್ನುತ್ತಾರೆ. ಆಗ ಅವನಿಗೆ ಅವಳ ಮೇಲೆ, ಆ ಮನೆಯ ಮೇಲೆ ಹಕ್ಕು ಬರುತ್ತದೆ. ಮದುಮಗಳು ತನ್ನ ಕೈಯ್ಯ ವೀಳ್ಯವನ್ನು ಅವನಿಗೆ ಕೊಟ್ಟು ಅವನಿಂದ ಮರಳಿ ಸ್ವೀಕರಿಸುತ್ತಾಳೆ. ಮದುವೆಯ ಊಟದ ನಂತರ ವಧೂವರರು ವಧುವಿನ ತಾಯಿಯ ಮನೆಗೆ ಬಂದು ಹಾಲು ಕುಡಿದು ಹೋಗುವ ಸಂಪ್ರದಾಯವಿತ್ತು. ಮದುವೆಗೆ ನೆರೆದ ಸಮುದಾಯದ ಎಲ್ಲ ಗುರುಹಿರಿಯರಿಂದ ಮಾತೆಯರಿಂದ ಆಶೀರ್ವಾದ ಪಡೆದ ಬಳಿಕ ದಿಬ್ಬಣ ಗಂಡಿನ ಮನೆಗೆ ಹೋಗುತ್ತದೆ. ಮದುವೆಯಾಗಿ ಬಂದ ನಂತರ ಅಡುಗೆಮನೆ ಕೆಲವನ್ನು ಸೊಸೆಯರಿಗೆ ಬಿಟ್ಟು ಕೊಡುತ್ತಿದ್ದರು. ಆದರೆ ಎಲ್ಲರಿಗೂ ಊಟ ಬಡಿಸಿ ಕೊಡುವ ಅಧಿಕಾರ ಮಾತ್ರ ಅತ್ತೆಗೇ ಇತ್ತು.

ತೀಯರದೇ ಇನ್ನೊಂದು ಪಂಗಡವಾದ ಈಳವರ ಮದುವೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಅವರಲ್ಲಿ ಮದುವೆಯ ಹಿಂದಿನ ದಿ ವರನು ಹತ್ತಿರದ ಸಂಬಂದಿಕರ ಮನೆಗೆ ಐದು ಮಂದು ಹೆಂಗಸರ ಜೊತೆ ಹೋಗಿ ಅವರ ಮನೆಯಲ್ಲಿ ಏನಾದರೂ ತಿಂದರೆ ಅವರನ್ನು ಮದುವೆಗೆ ಆಹ್ವಾನಿಸಿದ ಹಾಗೆಯೇ ಎಂದರ್ಥ ಮದುಮಗ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಮದುವೆ ಮಂಟಪಕ್ಕೆ ಬಂದಾಗ ಖಡ್ಗವನ್ನು ತಂಡಾನ್ ತನ್ನ ಕೈಗೆ ತೆಗೆದಯಕೊಳ್ಳುತ್ತಾನೆ. ಮದುಮಗ ಮತ್ತು ಅವನೊಂದಿಗೆ ಬಂದ ಆತನ ಇಬ್ಬರು ಗೆಳೆಯರು ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಮದುಮಗಳಿಗೆ ಇದಕ್ಕೂ ಮೊದಲು “ತಾಳಿ ಕಟ್ಟು ಕಲ್ಯಾಣಂ” ಆಗದೆ ತಾಳಿ ಕಟ್ಟಿಲ್ಲದಿದ್ದರೆ ಆದ ವರನು ತನ್ನ ಸಹೋದರಿಯ ಸಹಾಯದಿಂದ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೆ. ಮದುವೆ ಮುಗಿದ ಬಳಿಕ ವಧುವನ್ನು ವರನ ಮನೆಗೆ ಕರೆತರಲಾಗುತ್ತದೆ. ಮದುವೆಗೆ ವರನು ತೊಟ್ಟಂತಹ ಉಡುಪನ್ನೇ ಅವನ ಗೆಳೆಯರೂ ತೊಡುತ್ತಾರೆ. ಆಗ ಮಾವನ ಮಗ (ಮದುಮಗಳ ಸಹೋದರ) ಇವರಲ್ಲಿ “ವರ” ಯಾರೆಂದು ಗುರುತಿಸುತ್ತಾನೆ. ವರನ ಮನೆಗೆ ಹೋದಾಗ ವಧು ಬಲಗಾಲಿಟ್ಟು ಮನೆಯನ್ನು ಪ್ರವೇಶ ಮಾಡುತ್ತಾಳೆ.

ಈವಳರಲ್ಲಿ ಮದುವೆಯ ಸಂದರ್ಭದಲ್ಲಿ ದೀಪ ಹೊತ್ತಿಸಿ, ಬಾಳೆ ಎಲೆಯಲ್ಲಿ ಅಕ್ಕಿಯನ್ನಿಡುತ್ತಾರೆ. ಹುಡುಗ ಕಚ್ಚೆ ಹಾಕುತ್ತಾನೆ. ಭುಜ, ಕೈಗಳಿಗೆ ಶಾಲು ಹೊದೆಯುತ್ತಾನೆ. ಚಕ್ರಮಾಲ ಸರವನ್ನು ಧರಿಸುತ್ತಾನೆ. ಬಲಗೈಗೆ ಬಳೆಯಂಥ ಆಭರಣ ಮತ್ತು ಬೆರಳಿಗೆ ಉಂಗುರವನ್ನು ಧರಿಸುತ್ತಾನೆ. ಈ ಆಭರಣಗಳನ್ನು ಬಿಟ್ಟು ಹುಡುಗನ ಗೆಳೆಯರು ಬೇರೆ ಬಗೆಯ ಬಂಗಾರವನ್ನು ತೊಡುತ್ತಾರೆ. (ಹೆಂಗಸರ ಕೈ ಬಳೆಗೆ ಕಡಗ ಎಂದೂ, ಗಂಡಸರ ಕೈ ಬಳೆಗೆ ವಳಿ ಎಂದೂ ಕರೆಯುತ್ತಾರೆ.) ತಂಡಾನ್ ಮದುಮಗನ ಕೈಯಲ್ಲಿ ಖಡ್ಗವನ್ನು ಕೊಡುತ್ತಾನೆ. ಗೆಳೆಯರಿಗೂ ಖಡ್ಗವನ್ನು ಕೊಡುತ್ತಾನೆ. ಇವರ ಜೊತೆಗೆ ಇಬ್ಬರು ನಾಯರುಗಳು ಬರುತ್ತಾರೆ. ತಂಡಾನ್‌ನ ಹೆಂಡತಿ ಮತ್ತು ಹಿರಿಯರೆಲ್ಲರೂ ಸೇರಿರುತ್ತಾರೆ. ಅಲ್ಲಿ ಕತ್ತಿವರಸೆಗಳೆಲ್ಲಾ ನಡೆಯುತ್ತವೆ. ಹುಡುಗಿಯ ಮನೆಯಲ್ಲಿ ತಂಡಾನ್‌ನ ಹೆಂಡತಿ ದೀಪವನ್ನು ಹಿಡಿಯುತ್ತಾಳೆ. ಎಲ್ಲರ ತಲೆಗೂ ಅಕ್ಷತೆಯನ್ನು ಹಾಕುತ್ತಾರೆ. ಬಳಿಕ ತಂಡಾನ್‌ನ ಹೆಂಡತಿ ಮತ್ತು ವರನ ಸಹೋದರಿ ವಧುವನ್ನು ಅಲಂಕರಿಸುತ್ತಾರೆ. ವಧುವಿನ ತಾಯಿ ಈ ವಿಶೇಷ ದಿನದಂದು ಮಾಡುವ ವಿಶೇಷ ಅನ್ನಕ್ಕೆ “ಐನಿ” ಎನ್ನುತ್ತಾರೆ. ನಾಯರ್ ಮುಖ್ಯಸ್ಥನಿಗೆ ಅಡಿಕೆ, ವೀಳ್ಯ ಕೊಟ್ಟು ಮರ್ಯಾದೆಯಿಂದ ನೋಡಿಕೊಳ್ಳುತ್ತಾರೆ. ಬದಲಾಗಿ, ನಾಯರ್ ಈತನಿಗೆ ಬಟ್ಟೆಯನ್ನು ಕೊಡುತ್ತಾನೆ.