ಕಾನದ ಕಟದ ಪಾಡ್ದನದಲ್ಲಿ

ಬಿಲ್ಲವರಂತೆಯೇ ಇಲ್ಲಿನ ಇನ್ನೊಂದು ಸಮುದಾಯವಾಗಿರುವ ಮನ್ಸರಿಗೆ ಸಂಬಂಧಿಸಿದ ಈ ಪಾಡ್ದನವು ಆ ವರ್ಗಕ್ಕೆ ಸೇರಿದ ಕಾನದ-ಕಟದರೆಂಬ ವೀರರ ಕಥೆಯಾಗಿದೆ. ಅವರ ಹುಟ್ಟು- ಬೆಳವಣಿಗೆ, ಸಾಧನೆಗಳನ್ನು ಈ ಪಾಡ್ಸನ ಹೇಳುತ್ತದೆ.

ಕಿಜನಗುತ್ತಿನ ಮೂಲಕ ಹೆಣ್ಣಾದ ಬೊಮ್ಮಿ ತನ್ನ ರಸ ವೀರಚಂದ್ರ ಬಲ್ಲಾಳನ ಅಣತಿಯಂತೆ ಸೊಪ್ಪು ಹೆರೆಯುವ ಗುಡ್ಡದಲ್ಲಿ ತನಗೆ ಸಿಕ್ಕಿದ ಮಗುವನ್ನು ಅರಸ ನೀಡಿದ ವೆಚ್ಚದಲ್ಲಿ ಸಾಕುತ್ತಾಳೆ. ಮುಂದೆ ಅವಳ ಕೈಯಿಂದ ಆ ಮಗುವನ್ನು ದೇಯಿ ಬೈದ್ಯೆದಿ ತಾನು ಸಾಕುತ್ತಾಳೆ. ಮುಂದೆ ಒಂದು ಸಲ ದೇಯಿ ಮತ್ತು ಬೊಳ್ಳೆ ಇಬ್ಬರೂ ಒಂದೇ ಸಮಯಕ್ಕೆ ಮುಟ್ಟಾಗುತ್ತಾರೆ. ನಾಲ್ಕನೆಯ ದಿನ ಇಬ್ಬರೂ ಮಂಜುರ್ಲಿ ಗುಂಡಿಯಲ್ಲಿ ಸ್ನಾನ ಮಾಡಿ ಮೇಲೆ ಬರುವಾಗ ದೇಯಿ ಗುಂಡಿಯಲ್ಲಿದ್ದ ಪೆರುಮಾಲು ಮೀನುಗಳಿಗೆ ಬೆಳ್ತಿಗೆ ಅಕ್ಕಿ ಎಸೆದು ತಾವು ಗರ್ಭಿಣಿಯರಾಗಲಿ ಎಂದು ಹರಕೆ ಮಾಡಿಕೊಳ್ಳುತ್ತಾಳೆ. ಅದರಂತೆ ಇಬ್ಬರೂ ಗರ್ಭವತಿಯರಾಗುತ್ತಾರೆ. ಗುರಿಯಾಗುತ್ತಾಳೆ. ಮುಂದೆ ಕಟ್ಟಾಡಿ ಅರಮನೆಯಲ್ಲಿ ನಡೆದ ಬೇರೆ ಬೇರೆ ಬಗೆಯ ಕಠಿಣ ಪರೀಕ್ಷೆಯಲ್ಲಿ ಗೆದ್ದು ಬರುವ ಬೊಳ್ಳೆಗೆ ವಿವಾಹವಾಗುತ್ತದೆ. ಮುಂದೆ ಕೋಟೆ-ಚೆನ್ನಯರಿಗೆ ಕಾನದ-ಕಟದರು ಮುಖಾಮುಖಿಯಾಗುತ್ತಾರೆ. ಎರಡೂ ಪಾಡ್ದನಗಳ ಕೆಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಇಲ್ಲೂ ಕೂಡಾ ಅರಸನು ಬೊಳ್ಳೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ. ಇದರಲ್ಲಿ ಬರುವ ದೇಯಿ ಬೈದ್ಯೆದಿ ಕೋಟಿ-ಚೆನ್ನಯರ ತಾಯಿಯೇ ಎಂಬುದರಲ್ಲಿ ಅನುಮಾನವಿಲ್ಲ. ಇಲ್ಲೂ ಕೂಡ ಕೆಳಸಮುದಾಯದ ಹೆಣ್ಣುಗಳ ಮೇಲೆ ಶೋಷಣೆ ನಡೆದಿರಬಹುದಾದ ಸೂಚನೆಯಿದೆ. ಜೊತೆಗೆ ದೇಯಿ, ಬೊಳ್ಳೆ, ಬೊಮ್ಮಿಯರು ಸಮಾಜಕ್ಕೆ ಸಡ್ಡು ಹೊಡೆದು ನಿಂತ ಪರಿ ಇವರ ದಿಟ್ಟತನದ ಜೀವನಕ್ರಮಕ್ಕೆ ಸಾಕ್ಷಿಯಾಗಿದೆ.

ಕೊರಗತನಿಯ ಪಾಡ್ದನದಲ್ಲಿ

ಕೊರಗ ತನಿಯ ತುಳುನಾಡಿನ ಬಂಟರು, ದಲಿತರು ಮತ್ತಿತರ ಸಮುದಾಯಗಳು ಆರಾಧಿಸುವ ದೈವ. ಎಲ್ಲ ಪಾಡ್ದನಗಳಂತೆ ಇದೂ ಜನಸಾಮಾನ್ಯನೊಬ್ಬ ಲೌಕಿಕ ನೆಲೆಯಿಂದ ಅಲೌಕಿಕ ನೆಲೆಗೆ ಸಾಗುವ ಕಥೆಯನ್ನು ಹೊಂದಿದೆ. ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುವ ಸಾಂಕ್ರಾಮಿಕ ರೋಗದಿಂದ ಕೊರಗ ಸಮುದಾಯದ ತನಿಯನ ತಂದೆ-ತಾಯಿ ಕಾಲವಶರಾಗುತ್ತಾರೆ. ತಬ್ಬಲಿ ಮಗುವನ್ನು ಅವನ ಸೋದರಮಾವ ಪೋಷಿಸುತ್ತಾನೆ. ಅವನ ಸಾವಿನ ಬಳಿಕ ಬಾಲಕ ಕೊರಗ ತನಿಯ ಆ ಸ್ಥಳ ಬಿಟ್ಟು ಬೇರೆಡೆಗೆ ಹೊರಡುತ್ತಾನೆ. ಒಂದೆಡೆ ಅಳುತ್ತಾ ಕುಳಿತ ಅವನನ್ನು ಕಳ್ಳಿನ ಕೊಡ ಹಿಡಿದು ಮಾರಾಟಕ್ಕೆ ಹೊರಟ ಬಿಲ್ಲವರ ಬೀರಕ್ಕ ಬೈದ್ಯೆದಿ ನೋಡುತ್ತಾಳೆ. ಕೊರಗ ತನಿಯನನ್ನು ದೈವತ್ವಕ್ಕೇರಿಸುವ ಈ ಪಾಡ್ದನವು ಆ ಸಲುವಾಗಿ ಸಹಜವಾಗಿಯೇ ಅವನನ್ನು ಓರ್ವ ರಾಜಕುಮಾನೋ, ಉತ್ತಮ ಕುಲದ, ಸಿರಿವಂತ ಸೇನವರ ಇಲ್ಲವೇ ಬಂಟರ ಮಗನೋ ಎಂಬಂತೆ ಅವನಲ್ಲಿ ತಾಜಸ್ಸು ಹೊರಹೊಮ್ಮುತ್ತಿತ್ತು ಎಂಬುದಾಗಿ ವರ್ಣಿಸುತ್ತದೆ. ಇದನ್ನು ಬೀರಕ್ಕ ಬೈದ್ಯೆದಿಯ ಮಾತುಗಳಲ್ಲಿ ಗಮನಿಸಬಹುದಾಗಿದೆ. ಇಷ್ಟೆಲ್ಲ ತೇಜಸ್ಸು ಇದ್ದರೂ ಅವನನ್ನು ಆಧರಿಸುವವಳು ತಲೆಗೆ ಮುಟ್ಟಾಳೆ ಇಲ್ಲದ, ಉಡಲು ಸರಿಯಾದ ಬಟ್ಟೆಯಿಲ್ಲದ ಬಿಲ್ಲವರ ಬಡ ಮಹಿಳೆಯೇ ಆಗಿದ್ದಾಳೆ. ತನ್ನ ಮೂಲದ ವೃತ್ತಿ ಮಾಡಲು ಕೊರಗತನಿಯ ಅವಳಲ್ಲಿ ಚಿಕ್ಕ ಕತ್ತಿಯನ್ನು ಕೇಳಿ ತೆಗೆದುಕೊಳ್ಳುತ್ತಾನೆ. ಅವಳು ಕಳ್ಳಿ ಮಡಕೆಯನ್ನು ತಲೆಯಲ್ಲಿ ಹೊರಲು ಆಗುವಂತೆ ಇರಿಸಿಕೊಂಡ ಬಟ್ಟೆಯನ್ನೇ ತುಂಡು ಮಾಡಿ ಕೊರಗ ತನಿಯನಗೆ ಉಡಲು ಕೊಡುತ್ತಾಳೆ. ತನ್ನ ಬುತ್ತಿಯ ಅನ್ನವನ್ನೇ ಅವನಿಗೆ ಉಣ್ಣಲು ನೀಡುತತಾಳೆ. ಇದು ಬಿಲ್ಲವ ಮಹಿಳೆಯರ ಸಹೃದಯತೆ ಮತ್ತು ಮೃದು ಮನಸ್ಸನ್ನು ಸೂಚಿಸುತ್ತದೆ. ಜೊತೆಗೆ ಜಾತಿಯ ಶ್ರೇಣೀಕರಣದಲ್ಲಿ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರೂ ಜಾತಿಯ ತಾರತಮ್ಯವನ್ನು ಮೀರಿದ ಪ್ರೀತಿ ತೋರುವ ಗುಣವನ್ನು ಬೀರಕ್ಕಳ ಪಾತ್ರವು ಸ್ಥಾಪಿಸಿದೆ.

ಅಲ್ಲಿಯವರೆಗೆ ಕೊಡಗಟ್ಟೆಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದ ಬೀರಕ್ಕ ಬೈದ್ಯೆದಿಯ ಕಳ್ಳು ಅಂದು ಒಂದಿಷ್ಟೂ ಮಾರಾಟವಾಗುವುದಿಲ್ಲ. ಆಗ ಅವಳು ಕಳ್ಳು ಮಾರಾಟವಾಗಿ ಹೋದರೆ ಕದಿರೆಯ ದೇವರ ರಾಜಾಂಗಣಕ್ಕೆ ಕಂಚಿನ ದೀಪ ಮಾಡಿಸುತ್ತೇನೆ ಎಂದು ಹರಕೆ ಹೊತ್ತು ಕೊಳ್ಳುತ್ತಾಳೆ. ಅದಾಗಲೇ ಅಲೌಕಿಕತೆಯನ್ನು ತಲುಪಿದ್ದ ಕೊರಗ ತನಿಯ ಅದನ್ನು ಕೇಳಿ ಹೊತ್ತ ಕೊಡದರಿಯಲ್ಲಿ ಹಳೆಯ ಬಟ್ಟೆಯನ್ನೇ ಇಡುವಂತೆ ಹೇಳುತ್ತಾನೆ. ಆಗ ಅವಳಲ್ಲಿದ್ದ ಕಳ್ಳೆಲ್ಲ ಮಾರಾಟವಾಗಿ ಹೋಗುತ್ತದೆ. ಈ ಪ್ರಸಂಗದಲ್ಲಿ ಅವಳು ಹರಕೆ ಹೇಳಿಕೊಳ್ಳುವ ಸಂದರ್ಭವು ಅಂದಿನ ಬಿಲ್ಲವ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನೂ, ಹಳೆಯ ಬಟ್ಟೆಯನ್ನೇ ಕೊಡದೆಇ ಇರಿಸುವ ಕಾರಣದಿಂದ ಕಳ್ಳು ಸಂಪೂರ್ಣ ಮಾರಾಟವಾಗುವ ಸಂದರ್ಭವು ಈ ವೃತ್ತಿಗಿರುವ ಪಾವಿತ್ಯ್ರವನ್ನೂ, ಹಳೆಯ ಬಟ್ಟೆ ಪರಂಪರೆಯ ಪ್ರತೀಕವಾಗಿ ಅದರ ರಕ್ಷಣೆಯ ಮಹತ್ವವನ್ನೂ ಸೂಚಿಸುತ್ತದೆ. ಜೊತೆಗೆ ಬಿಲ್ಲವ ಮಹಿಳೆಯರು ತಮ್ಮ ಕುಲವೃತ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದ ಬಗೆಯನ್ನು ತಿಳಿಸುತ್ತದೆ.

ಮೇಲಿನ ಪಾಡ್ದನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವುಗಳಲ್ಲಿ ಬರುವ ಹೆಣ್ಣು ಪಾತ್ರಗಳು ಪುರುಷ ಸೂಚಿತವಾದ ಸಾಂಪ್ರದಾಯಿಕ ನೆಲೆಯ ಪಾಲನೆ, ಪೋಷಣೆಯ ನಿರ್ವಹಣೆಯ ಹೊಣೆಗಾರಿಕೆಯನ್ನು ಹೊತ್ತವುಗಳಾಗಿಯೇ ಕಂಡುಬರುತ್ತವೆ ಹೊರತು ಆಡಳಿತಾತ್ಮಕ ನೆಲೆಯ ಯಾವುದೇ ಆಯಕಟ್ಟಿನ ಸ್ಥಾನವನ್ನು ಹೊಂದಿದವುಗಳಾಗಿ ಅಲ್ಲ. ಅಂದಿನ ಸಮಾಜರೂಢಿಗಳನ್ನು ಪಾಲಿಸುತ್ತಲೇ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿ ಬರುವ ಈ ಪಾತ್ರಗಳು ತಮ್ಮ ಮೇಲಾದ ಶೋಷಣೆಯನ್ನೂ ಸಹಜವೆಂಬಂತೆ ಸ್ವೀಕರಿಸುತ್ತಾರೆ. ಆದರೆ ಮಾನವೀಯ ಮೌಲ್ಯಗಳನ್ನು ಜೀವಂತವಾಗಿಡುತ್ತಾರೆ. ಹಾಗಾಗಿಯೇ ಸಮಾಜದ ಕೆಳಸ್ತರದ ಬಾಲಕ ಕೊತಗತನಿಯನಿಗೆ ಆಶ್ರಯ ಕೊಡುವ ಬೀರಕ್ಕ ಬೈದ್ಯೆದಿ, ತುಂಬು ಗರ್ಭಿಣಿಯಾಗಿಯೂ ವೈದ್ಯ ಮಾಡಿದ ಬಲ್ಲಾಳನ ಜೀವವುಳಿಸುವ ದೇಯಿ ಬೈದ್ಯೆದಿ ಇವರಿಬ್ಬರ ಪಾತ್ರಗಳೂ ಹೀಗೆ ಪರಂಪರೆಯ ರಕ್ಷಣೆ ಹಾಗೂ ಅದರ ಮುಂದುವರಿಕೆ ಈ ಎರಡೂ ಕಾರ್ಯಗಳನ್ನು ಉದಾತ್ತವಾಗಿ ನಿರ್ವಹಿಸುತ್ತವೆ. ಕೆಲವೊಮ್ಮೆ ಆ ಪಾತ್ರಗಳು ಅಲ್ಪಸ್ವಲ್ಪ ದಿಟ್ಟತನದ ಪ್ರದರ್ಶನ ಮಾಡಿದರೆ ಅದಕ್ಕೆ ಕಾರಣ ಆಯಾ ಸಂದರ್ಭಗಳೇ ಹೊರತು ಬೇರೇನಲ್ಲ. ನಿದರ್ಶನಕ್ಕೆ, ಕೊರಗತನಿಯನನ್ನು ಸಾಕುವಲ್ಲಿ ಬೀರಕ್ಕಳಿಗೆ ತೊಂದರೆಗಳಿಲ್ಲ. ಆತ ಕೆಳವರ್ಗಕ್ಕೆ ಸೇರಿದವನಾದುದರಿಂದ ಮತ್ತು ಬೀರಕ್ಕ ಕೂಡ ಕೆಳ ಸಮುದಾಯದ ಹೆಣ್ಣಾಗಿ, ಆರ್ಥಿಕವಾಗಿ ಸ್ಥಿತಿವಂತಳಲ್ಲದ ಕಾರಣಕ್ಕೆ ಅವಳ ನಿಲುವನ್ನು ಆಕ್ಷೇಪಿಸುವವರಿಲ್ಲ. ಅಂತೆಯೇ ದೇಯಿ ಬೈದ್ಯೆದಿ ಪೆರುಮಲೆ ಬಲ್ಲಾನ ಅರಮನೆಗೆ ಹೋಗುವ ಸಂದರ್ಭದಲ್ಲಿ ಸ್ವತಂತ್ರಳಾಗಿ ನಡೆದುಕೊಂಡಂತೆ ಕಾಣುವುದಾದರೂ, ಅಲ್ಲಿ ಅವಳ ಗಂಡ ಮತ್ತು ಅಣ್ಣನ ಬೆಂಗಾವಲಿನಲ್ಲಿ ಆಕೆ ಹೋಗುವುದು ಅವಳು ಅವರ ಅಧೀನಕ್ಕೆ ಒಳಪಟ್ಟಿರುವುದನ್ನು ಸೂಚಿಸುವಂತೆಯೇ, ಚಿಕಿತ್ಸೆ ಬೇಕಾಗಿರುವುದು ಅಧಿಕಾರದ ಉನ್ನತ ಸ್ತರದಲ್ಲಿರುವ ವ್ಯಕ್ತಿಗಾಗಿರುವುದರಿಂದ ಅದಕ್ಕೆ ಅವರ ಆಕ್ಷೇಪಗಳಿಲ್ಲದಿರಬಹುದು. ಪೆರುಮಲೆ ಬಲ್ಲಾಳನಿಗೂ ಅವಳ ತುರ್ತುಚಿಕಿತ್ಸೆಯ ಅಗತ್ಯವಿರುವುದರಿಂದ, ಅವಳ ಕುರಿತ ಅವನ ನಡವಳಿಕೆಯೂ ಮೃಧು ಧೋರಣೆಯದೇ ಆಗಿರುವುದು ಸಹಜ. ಆದರೆ ಮುಂದೆ ಆತ ತನ್ನ ಮಾತಿನಂತೆ ನಡೆಯದೆ ಹೋಗುವುದು ಸಂದಭಾನುಸಾರ ಶರಣಾಗಬೇಕಾಗುವ ಸನ್ನಿವೇಶವೇ ಹಾಗೆ ಮಾಡಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಹಾಗಿಲ್ಲದಿದ್ದರೆ, ಅವಳಿಂದ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಅಭ್ಯಂತರವಿಲ್ಲದಿದ್ದರೂ ಅವಳ ಕೈಯ ಆಹಾರ ಸ್ವೀಕರಿಸುವುದಕ್ಕೆ ಸಮ್ಮತಿಯಿಲ್ಲ. ಇದು ವಿರೋಧಾಭಾಸದ ಸಂಗತಿ. ಆಹಾರ-ವಿಹಾರದ ಮೂಲಕ ಹೆಣ್ಣು ಗಂಡನ್ನು ತನ್ನ ವಶ ಮಾಡಿಕೊಳ್ಳಬಹುದೆಂಬ ಪುರುಷನಿರ್ಮಿತ ಆಲೋಚನೆಯೇ ಇಂತಹ ವರ್ತನೆಯ ಹಿಂದಿದೆ. ಪಾಡ್ದನಗಳ ಪುರುಷ ಪಾತ್ರಗಳು ಮಾಮೂನಿನಂತೆ ವೀರ, ಅಧಿಕಾರದಂತಹ ಪುರುಷಗುಣಗಳನ್ನೇ ಪ್ರದರ್ಶಿಸುತ್ತವೆ. ಹೀಗಾಗಿ ಪಾಡ್ದನಗಳಲ್ಲಿ ಮೇಲ್ನೋಟಕ್ಕೆ ಬಿಲ್ಲವ ಹೆಣ್ಣು ಗೌರವಕ್ಕೆ ಪಾತ್ರಳಾಗಿದ್ದಳೆಂಬಂತೆ ಕಂಡರೂ ವಾಸ್ತವದಲ್ಲಿ ಹಾಗಿಲ್ಲ. ಸಂಸ್ಕೃತಿಯ ಕುರಿತ ಕಾಳಜಿ ಮಾತ್ರ ಅವಳಲ್ಲಿ ಹೇರಳವಾಗಿದೆ. ಅದರ ರಕ್ಷಣೆಗಾಗಿ ಅವಳ ಹೋರಾಟವೂ ನಿರಂತರವಾಗಿದೆ.

ತೀಯರ ಸ್ತ್ರೀಯರು

ತೀಯರಿಗೆ ಸಂಬಂಧಿಸಿದ ವಡಕ್ಕನ್‌ಪ್ಪಾಟ್ಟುಗಳಲ್ಲಿ ಇಳವನ್ನೂರ್ ಎಂಬ ಬೀಡಿನ ಕುಟುಂಬಕ್ಕೆ ಸೇರಿದ ಸ್ತ್ರೀಯರು ವೀರರಾಗಿದ್ದು, ಗಂಡಸರಂತೆ ಗರಡಿ ಸಾಧನೆ, ಆಯುಧ ವಿದ್ಯೆಯಲ್ಲಿ ‌ಪ್ರವೀಣರಾಗಿ ಕಾಣಿಸುತ್ತಾರೆ. ನಿದರ್ಶನಕ್ಕೆ, ಸೌಂದರ್ಯವತಿ ಉಣ್ಣಿಯಾರ್ಚ ಎಂಬಾಕೆ ತನ್ನ ಸಹೋದರನಂತೆಯೇ ಹದಿನೆಂಟು ವಿದ್ಯೆಗಳನ್ನು ಬಲ್ಲವಳಾಗಿದ್ದು, ಗರಡಿ  ಸಾಧನೆಯಲ್ಲಿ ವಿಜಯ ಗಳಿಸಿದ್ದಳು. ಮೇಲ್ವರ್ಗದ ಅಥವಾ ಸಮಾಜದ ಗಣ್ಯ ಅಧಿಕಾರಿಗಳ ಮನೆಯ ಮಹಿಳೆಯರಿಗೆ ಮಾತ್ರ ಈ ವಿದ್ಯೆ ಪಡೆಯುವ ಅವಕಾಶವಿತ್ತು.

ಆದರೆ ಅಸ್ಪೃಶ್ಯರೂ, ತೀರಾ ಹಿಂದುಳಿದ ಸಮುದಾಯದವರೂ ಆಗಿದ್ದ ತೀಯ ಸ್ತ್ರೀಯರ ಪರಿಸ್ಥಿತಿ ಎಷ್ಟೊಂದು ಹೀನಾಯವಾಗಿತ್ತೆಂದರೆ ಮೇಲ್ವರ್ಗದ ಜಮೀನಿನಲ್ಲಿ ಆಳುಗಳಾಗಿ ದುಡಿಯುತ್ತಿದ್ದ ಹೆಂಗಸರನ್ನು ತಮ್ಮನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಜಮೀನ್ದಾರರ ದೈಹಿಕ ಬಯಕೆಯ ಪೂರೈಕೆಗಾಗಿ ಬಳಕೆಯಾಗುತ್ತಿದ್ದು. ಅವರು ಧರಿಸಬೇಕಾದ ಬಟ್ಟೆಯ ಪ್ರಮಾಣವನ್ನು ಜಮೀನ್ದಾರರೇ ನಿರ್ಧರಿಸಿದ್ದರು. ಹೆಂಗಸರಿಗೆ ರವಿಕೆ ಧರಿಸುವ ಅವಕಾಶವಿರಲಿಲ್ಲ. ಸೊಂಟದಿಂದ ಮೇಲ್ಭಾಗದಲ್ಲಿ ಯಾವುದೇ ವಸ್ತು ಉಡುವಂತಿರಲಿಲ್ಲ. ಗಂಡಸರನ್ನೂ ಸೇರಿಸಿ ಹೆಂಗಸರೂ ಕೂಡ ಸೊಂಟದಿಂದ ಕೆಳಗೆ ಮೊಣಕಾಲವರೆಗೆ ಮಾತ್ರ ಸಣ್ಣ ತುಂಡು ವಸ್ತ್ರ ಧರಿಸಬೇಕಿತ್ತು. ಇದು ಗಂಡಸರಿಗೆ ಮುಜುಗರವನ್ನು ಉಂಟುಮಾಡದಿದ್ದರೂ ಹೆಂಗಸರು ಹಿಂಸೆಯನ್ನು ಅನುಭವಿಸಬೇಕಾಗುತ್ತಿತ್ತು. ಅದಕ್ಕೆ ಹೆಂಗಸರು ತಪ್ಪಿದಲ್ಲಿ ಮೇಲ್ವರ್ಗದವರು ಮೈಮೇಲೆ ಕೈಹಾಕಿ ಎಳೆದುಸ ಹಾಕುತ್ತಿದ್ದರು. ಸತ್ತ ಸೂತಕದ ಸಮಯದಲ್ಲಿ ಮಾತ್ರ ಅವರು ಸೊಂಟದಿಂದ ಮೇಲ್ಬಾಗದಲ್ಲಿ ಬಟ್ಟೆ ಧರಿಸಬಹುದಾಗಿತ್ತು. ಅವರ ಬದುಕಿನ ರೀತಿ ನೀರಿ ರಿವಾಜುಗಳನ್ನು ಹೊರಗಿನ ಒತ್ತಡಗಳೇ ನಿರ್ಧರಿಸುತ್ತಿದ್ದ ಕ್ರಮಕ್ಕೆ  ಇದು ಸಾಕ್ಷಿಯಾಗಿದೆ. ಹೀಗೆ ಅವರಿಗೆ ಉನ್ನತ ವರ್ಗದವರ ಮನೆಗಳಿಗೆ ಮತ್ತು ದೇವಾಲಯಗಳಿಗೆ ಪ್ರವೇಶವನ್ನು, ಉಡುಪಿನ ವಿಷಯದಲ್ಲಿ ಸ್ವಾತಂತ್ಯ್ರವನ್ನು, ಉತ್ತಮ ಆಹಾರವನ್ನು ನಿರಾಕರಿಸಲಾಗುತ್ತಿತ್ತು.

ಹಿಂದೆ ತೀಯರು ಶೀತ, ಜ್ವರ, ಕಫ, ಉಬ್ಬಸದಂತಹ ಕಾಯಿಲೆಗಳಿಗೆ ಅಡುಗೆಗೆ ಬಳಸುವ ಜೀನಸು ಪದಾರ್ಥ ಬಳಸಿ ಔಷಧ ತಯಾರಿಸುವುದರಲ್ಲಿ ನಿಷ್ಣಾತರಾಗಿದ್ದರು. ಮನೆಯಲ್ಲಿ ಭೂತಾರಾಧನೆಯ ಸಂದರ್ಭದಲ್ಲಿ ಅಡುಗೆಯನ್ನು ಮಡಿಯಲ್ಲಿ ಮಾಡಬೇಕಾಗಿದ್ದು, ಅದನ್ನು ಹರೆಯ ಕಳೆದ ಹೆಂಗಸರು ಮಾಡುವ ಕ್ರಮವಿತ್ತು. ಮದುವೆ ಮತ್ತು ಉತ್ತರಕ್ರಿಯೆಯ ಸಂದರ್ಭಗಳಲ್ಲಿನ ಅಡುಗೆ, ದೈವಸ್ಥಾನದ ಗುರಿಕಾರರಿಗೆ ಆಗಬೇಕಾದ ಮಡಿ ಅಡುಗೆ ಕೆಲವ ಗಂಡಸರದಾಗಿತ್ತು. ಹಿಂದೆ ತಮ್ಮ ದೈನಂದಿನ ಅಗತ್ಯಗಳಿಗಾಗಿ ಹಗ್ಗ ಮತ್ತು ಬುಟ್ಟಿಗಳನ್ನು ಹೆಣೆಯುವ, ನೇಯುವ, ಆಧುನಿಕ ಕಾಲಘಟ್ಟದಲ್ಲಿ ಅನಕ್ಷರಸ್ಥರು ಹಾಗೂ ಹಾಗೂ ಕಡಿಮೆ ಅಕ್ಷರಸ್ಥರಾದ ಮಹಿಳೆಯರು ಗೇರುಬೀಜ ಮತ್ತು ಹೆಂಚಿನ ಕಾರ್ಖಾನೆಗಳಲ್ಲಿ ಕೆಲವ ಮಾಡುತ್ತಿದ್ದಾರೆ. ಇಂದು ಉನ್ನತ ವಿದ್ಯೆಯನ್ನು ಪಡೆದ ಬಹಳಷ್ಟು ಮಂದಿ ತೀಯ ಮಹಿಳೆಯರು ಉತ್ತಮ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೈಧವ್ಯವಿಧುರತ್ವ

ಬಿಲ್ಲವ ಸಮುದಾಯವು ಮಾತೃಪ್ರಧಾನ ವ್ಯವಸ್ಥೆಯನ್ನು ಆಚರಿಸುತ್ತಿದ್ದರೂ, ಇವರ ಜಾತಿಯಲ್ಲಿ ವಿಧವೆಯ ಮುಖದರ್ಶನ ನಿಷಿದ್ಧವಾಗಿದೆ. ಅವರು ಯಾವುದೇ ಬಗೆಯ ಶುಭಕಾರ್ಯದಲ್ಲಿ ಮುಂದೆ ಬರುವಂತಿರಲಿಲ್ಲ. ವಿಧವೆಯರಿಗೆ ಬಹಳಷ್ಟು ಕಟ್ಟುಪಾಡುಗಳಿದ್ದು, ಎಲ್ಲ ಬಗೆಯ ನಿಬಂಧನೆಗಳು ಹೆಣ್ಣಿಗೆ ಮಾತ್ರ ಸೀಮಿತವಾಗಿರುವ ವೈದಿಕ ಸಂಪ್ರದಾಯವನ್ನು ಬಿಲ್ಲವರೂ ಅನುಸರಿಸಿರುವುದನ್ನು ಇದು ಸೂಚಿಸುತ್ತದೆ. ಇದರ ಜೊತೆಗೆ ಋತುಸೂತಕದಲ್ಲಿ ಕೂಡ ವೈದಿಕ ಸಂಪ್ರದಾಯದ ಪ್ರಭಾವ ಎದ್ದು ಕಾಣುತ್ತದೆ. ದೇಯಿ ಬೈದ್ಯೆದಿ ಮುತ್ತೈದೆಯಾಗಿದ್ದುದರಿಂದಲೇ ರಾಜದಂಡಿಗೆಯನ್ನು ಗೌರವಿಸುವ ದ್ಯೋತಕವಾಗಿ ಅದಕ್ಕೆ ತೆಂಗಿನಕಾಯಿಯನ್ನು ಕಾಣಿಕೆಯಾಗಿಡುತ್ತಾಳೆ.

ಪುರುಷರಿಗೆ ಸಂಬಂಧಿಸಿದಂತೆ, ಹಿಂದೆ ವಿಧುರರು ಎಂದೂ ಮೀಸೆಯನ್ನು ಇಡಬಾರದೆಂಬ ಒಂದೇ ಒಂದು ಕಟ್ಟುಪಾಡನ್ನು ಅನುಸರಿಸಬೇಕಾಗಿತ್ತು. ಆದರೆ ಅದು ಬಹಳ ಕಾಲ ಮುಂದುವರಿಯದೆ, ಹೆಂಡತಿ ಸತ್ತ ಹೊಸದರಲ್ಲಿ ಮಾತ್ರ ಮೀಸೆ ಕತ್ತರಿಸಿ, ಬಳಿಕ ಮತ್ತೆ ಅದನ್ನು ಹಾಗೆಯೇ ಉಳಿಸಿಕೊಳ್ಳುವ ಕ್ರಮ ಈಗ ರೂಢಿಯಲ್ಲಿದೆ.

ತೀಯರಲ್ಲಿ ವೈಧ್ಯವ್ಯವು ಹೆಂಗಸರನ್ನು ಅಷ್ಟಾಗಿ ಕಾಡಿದಂತೆ ಕಂಡುಬರುವುದಿಲ್ಲ. ಅವರಲ್ಲಿ ರೂಢಿಯಲ್ಲಿರುವ “ಪೊಡವ ಕೊಡ” ಸಂಪ್ರದಾಯವು ಹೆಣ್ಣು ಹೆಚ್ಚು ಮದುವೆಯಾದಷ್ಟೂ ಹೆಚ್ಚು ಗೌರವ ಕೊಡುವುದು ಇದಕ್ಕೆ ಆಧಾರವಾಗಿದೆ. ಆದರೆ ಶುಭಕಾರ್ಯಗಳ ವಿಧಿಗಳಲ್ಲಿ ವಿಧವೆ ಹೆಣ್ಣಿನ ಪಾಲ್ಗೊಳ್ಳುವಿಕೆಗೆ ನಿಷೇಧವಿತ್ತು. ಪೊಡವ ಕೊಡದ ಕಾರಣದಿಂದಾಗಿ ಈ ಬಗೆಯ ನಿಷೇಧವು ಪರಿಣಾಮಕಾರಿಯಲ್ಲ.

ಬಿಲ್ಲವರ ವೃತ್ತಿ ಪರಂಪರೆ

ಮೂರ್ತೆಗಾರಿಕೆಯು ಒಂದು ಬಗೆಯ ವಿಶಿಷ್ಟ ವೃತ್ತಿಪರಂಪರೆಯಾಗಿದೆ. ಇದು ಬಿಲ್ಲವ ಜನಾಂಗದ ಕುಲಕಸುಬಾಗಿದ್ದು, ಕೃಷಿ ಜಾತಿಬೇಧವಿಲ್ಲದ ವೃತ್ತಿ ಪರಂಪರೆಯಾಗಿತ್ತು. ಮೂರ್ತೆಗಾರಿಕೆಯನ್ನು ಅಸ್ಪೃಶ್ಯವೆಂಬಂತೆ ಕಾಣುತ್ತಿದ್ದುದು ಆ ವೃತ್ತಿಯನ್ನು ಕೆಳಮಟ್ಟಕ್ಕಿಳಿಸಿದ್ದರಿಂದ ಅವರು ಪಾರಂಪರಿಕ ವೈದ್ಯವೃತ್ತಿಯನ್ನೂ ಪ್ರತಿಷ್ಠೆಗಾಗಿ ತಮ್ಮದಾಗಿಸಿಕೊಂಡಿರಬೇಕು. ಕೃಷಿ ಕೆಲಸಗಳ ವಿವಿಧ ಹಂತಗಳಲ್ಲಿ, ಶೇಂದಿಯನ್ನು ಮರದಿಂದ ಇಳಿಸಿದ ಬಳಿಕ ಅದನ್ನು ವ್ಯಾಪಾರಕ್ಕೆ ಒಯ್ಯುವಲ್ಲಿ ಅಥವಾ ಓಲೆ ಬೆಲ್ಲದ ತಯಾರಿಕೆಯಲ್ಲಿ ಜನಸಾಮಾನ್ಯ ಮಹಿಳೆಯರ ಪಾತ್ರ ಗುರುತರವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕದ್ರಿ ದೇವಸ್ಥಾನದ ಪ್ರದೇಶದಲ್ಲಿ ಕೆಲವು ಶತಮಾನಗಳ ಹಿಂದೆ ಬಿಲ್ಲವ ಜಾತಿಯ ದೇವಿ ಬೈದ್ಯೆತಿ ಎನ್ನುವ ಹೊಂಗಸೋರ್ವಳು ಶೇಂದಿ ವ್ಯಾಪಾರದಿಂದಲೇ ಜೀವಿಸುತ್ತಿದ್ದಳೆಂಬ ವಿಚಾರವು ಇದಕ್ಕೆ ಪೂರಕವಾಗಿದೆ. ಇದು ಕೋಟಿ ಚೆನ್ನಯರ ತಾಯಿಯಾದ ದೇಯಿ ಬೈದ್ಯೆದಿಯ ವಿಚಾರವೇ ಆಗಿರಬಹುದು. ಆಕೆಯ ವೇತ್ತಿ ಅದಾಗಿದ್ದು, ವೈದ್ಯದಲ್ಲಿ ವಿಶೇಷ ನೈಪುಣ್ಯ ಸಾಧಿಸಿದ್ದಿರಬೇಕು.

ಕೃಷಿ ಕೆಲಸಗಳಾದ ನೇಜಿ ನೆಡುವುದು, ನಾಟಿ ಮಾಡುವುದು, ಕಳೆ ಕೀಳುವುದರಲ್ಲಿ ಗಂಡಸರಿಗೆ ಸಹಾಯಕರಾಗಿ ದುಡಿಯುವಂತೆ ಕಂಡರೂ ಅವರಿಗೆ ಸರಿಮಿಗಿಲೆನಿಸುವಂತಹ ದುಡಿಮೆ ಅಂದಿನ ಹೆಂಗಸರದಾಗಿತ್ತು, ಮಳೆಗಾಲಕ್ಕೆ ಮೊದಲು ಬೇಸಾಯವಿಲ್ಲದ ದಿನಗಳಲ್ಲಿ ಅಥವಾ ಸಾಗುವಳಿ ಮುಗಿದ ಬಳಿಕ ಎಲ್ಲರಿಗೂ ಮಲಗಲು ಬೇಕಾದ ಚಾಪೆಗಳನ್ನು ಮುಂಡುಕ ಗಿಡದ ಓಲೆಯಿಂದ ಹೆಣೆಯುವುದು, ಮನೆಯ ಅಗತ್ಯಗಳಿಗೆ ಬೇಕಾದ ಕುಕ್ಕೆ (ಬುಟ್ಟಿ)ಗಳನ್ನು ತಾಳೆಗರಿಗಳಿಂದ ಸಿದ್ಧಪಡಿಸುವುದು, ಬುಟ್ಟಿಗಳನ್ನು, ಕುಕ್ಕೆಗಳನ್ನು ಹೆಣೆಯುವುದು, ಹುರಿ ಹಗ್ಗ ತಯಾರಿಸುವುದು ಹೆಂಗಸರ ಕೆಲಸವಾಗಿದ್ದರೆ, ಮೀನು  ಹಿಡಿಯುವುದು, ಬೇಟೆಯಾಡುವುದು, ಮಣ್ಣು-ಗೊಬ್ಬರ ಹೊರಲು ಬೇಕಾದ ಗಟ್ಟಿ ಮುಟ್ಟಾದ ಬುಟ್ಟಿಗಳನ್ನು ಹೆಣೆಯುವುದು ಗಂಡಸರ ಕೆಲಸವಾಗಿತ್ತು. ಏತ ನೀರಾವರಿಯಲ್ಲಿ ಗಂಡಸರು ಮತ್ತು ಹೆಂಗಸರು ಇಬ್ಬರೂ ಸಮನಾಗಿ ಪಾಲ್ಗೊಳ್ಳುತ್ತಿದ್ದರು.

ಬೆಳೆಯ ಕಟಾವನ್ನು ಪ್ರಥಮವಾಗಿ ಮುತ್ತೈದೆಯಾದ ಮನೆಯೊಡತಿಯಿಂದ ಮಾಡಿಸುವ ಕ್ರಮ ರೂಢಿಯಲ್ಲಿತ್ತು. ಮಾತೃಮಾಲೀಯ ಕುಟುಂಬ ವ್ಯವಸ್ಥೆಯಲ್ಲಿ ಭೂಮಿ ಮತ್ತು ಅರದ ಉತ್ಪತ್ತಿಯ ಮೇಲೆ ಹೆಣ್ಣಿಗೆ ಇರುವ ಹಕ್ಕನ್ನು ಇದು ಮೇಲ್ನೋಟಕ್ಕೆ ತೋರುತ್ತದಾದರೂ ವಾಸ್ತವದಲ್ಲಿ ಇವುಗಳ ಅಧಿಕಾರ ಗಂಡಿನ ಕಯಲ್ಲೇ ಇರುತ್ತದೆ.

ಗದ್ದೆಯನ್ನು “ಉರ” ಮಾಡುವಾದ ಹಾಡುವ ಹಾಡಿಗೆ ಉರಲ್ ಅಥವಾ ಒರಲ್ ಎಂಬ ಹೆಸರಿತ್ತು. ಗಂಡಸರು ಗದ್ದೆ ಉಳುವಾಗ ಮತ್ತು ಹೆಂಗಸರು ನಾಡಿ ಮಾಡುವಾಗ ಒಬ್ಬರು, ಇಬ್ಬರು ಅಥವಾ ಎಲ್ಲರೂ ಸೇರಿ ಹೇಳುವ ಕಬಿತಗಳು, ಪಾಡ್ದನಗಳುಸ ಇವೆ. ಒಬ್ಬಳು ಹೇಳುವಾಗ ಅವಳಿಗೆ ಆಯಾಸವಾಗದ ಹಾಗೆ ಮತ್ತು ಅವಳಿಗೆ ಸಹಾಯಕವಾಗುವಂತೆ ಮತ್ತೊಬ್ಬಳು ಅವಳು ಹೇಳಿದುದನ್ನೇ ಮತ್ತೊಮ್ಮೆ ಹೇಳುವ ಪರಿಪಾಠ ಪಾಡ್ದನಗಳಲ್ಲಿ ಬಹಳಷ್ಟಿವೆ. ಎಲ್ಲಾ ಸಾಲುಗಳನ್ನು ಹೇಳದೆ, ನಿರ್ಣಾಯಕ ಸಾಲೊಂದನ್ನು ಗುಂಪಿನ ಎಲ್ಲರೂ ಕೂಡಿ ಪುನರುಚ್ಚರಿಸುವ ಕ್ರಮದಲ್ಲಿ ಇವುಗಳನ್ನು ಹಾಡಲಾಗುತ್ತಿತ್ತು.

ಅವರು ಮಾರ್ತೆಗಾರಿಕೆ ಮಾಡುತ್ತಿದ್ದ ತಾಳೆ ಮರದ ಗರಿಗಳು ಒರಟಾಗಿದ್ದು, ಅದರಿಂದ ಮಾಡಿದ ಚಾಪೆಯಲ್ಲಿ ಮಲಗಲು ಹಿತವಾಗುತ್ತಿರಲಿಲ್ಲ. ಹಾಗಾಗಿ ಆ ಚಾಪೆಗಳನ್ನು ಮಲಗಲು ಬಳಸದೆ, ಭತ್ತ ಹರಡಲು ಮತ್ತು ಮನೆಯ ಇತರ ಕೆಲಸಗಳಿಗೆ ಮಾತ್ರ ಉಪಯೋಗಿಸುತ್ತಿದ್ದರು. ಸಾಗುವಳಿ ಇಲ್ಲದ ಅಥವಾ ಮೂರ್ತೆ ತಿಳಿಯದ ಬಿಲ್ಲವರ ಹೆಂಗಸರು ಅವಲಕ್ಕಿ ಕುಟ್ಟುವುದು, ಗಾಣದಿಂದ ಎಣ್ಣೆ ತಯಾರಿಸುವುದು ಮೊದಲಾದ ಇತರ ವೃತ್ತಿಗಳನ್ನು ಮಾಡುತ್ತಿದ್ದರು.

ತೀಯರ ವೃತ್ತಿ ಪರಂಪರೆ

ಬಿಲ್ಲವರಂತೆ ತೀಯರಿಗೂ ಮೂರ್ತೆಗಾರಿಕೆ ದೈವದತ್ತವಾಗಿ ಬಂದ ವೃತ್ತಿಯೆಂದು ಅವರ ಸಮುದಾಯದ ಕುರಿತು ಇರುವ ಐತಿಹ್ಯಗಳು ಹೇಳುತ್ತವೆ. ಇದರೊಂದಿಗೆ ಬೇಸಾಯ, ನೇಕಾರಿಕೆ, ಹಗ್ಗ ಹೆಣೆಯುವುದು, ವೈದ್ಯ ನಡೆಸುವುದು ಮುಂತಾದವು ತೀಯರು ನಿರ್ವಹಿಸುತ್ತಿದ್ದ ವೃತ್ತಿಗಳಾಗಿವೆ.

ಬಿಲ್ಲವರ ಕೌಟುಂಬಿಕ ವ್ಯವಸ್ಥೆ

ಮೂರ್ತೆಗಾರಿಕೆಯೇ ಪ್ರಧಾನ ವೃತ್ತಿಯಾಗಿರುವ ಬಿಲ್ಲವರಲ್ಲಿ ವಿವಾಹದ ನಂತರ ಪತಿ ಸತ್ತಾಗ ಮಕ್ಕಳೊಡನೆ ಹೆಣ್ಣು ಅಣ್ಣ-ತಮ್ಮಂತಿರಿರುವ ತನ್ನ ತವರಿಗೆ ಬಂದು ಶಾಶ್ವತವಾಗಿ ಅಲ್ಲಿಯೇ ನೆಲೆಯೂರುತ್ತಿದ್ದಳು. ಅವಳ ಹಿರಿಯ ಮಗ ತನ್ನ ಸೋದರಮಾವನ ಬಳಿಕ ಕುಟುಂಬದ ಯಜಮಾನನಾಗುತ್ತಿದ್ದ. ಒಂದೊಮ್ಮೆ ಬಿಲ್ಲವರ ಗಂಡಸು ತನ್ನ ಹೆಂಡತಿ ಮಕ್ಕಳನ್ನು ಸಾಕಲು ಅಶಕ್ತನಾಗಿದ್ದಲ್ಲಿ ಅವನ ಸಾಯುವ ಮೊದಲು ಅವನ ಹೆಂಡತಿ ತನ್ನ ಮಕ್ಕಳ ಜೊತೆಗೆ ತವರಿಗೆ ಬರುತ್ತಿದ್ದಳು. ಹುಡುಗಿಯರಿಗೆ ಮದುವೆಯಾಗುವವರೆಗೆ ಅಲ್ಲಿಯೇ ಇರುತ್ತಿದ್ದರು. ಇದು ಹೆಣ್ಣಿಗಿದ್ದ ಮನೋಧಾರ್ಢ್ಯ ಹಾಗೂ ಸ್ವಾತಂತ್ಯ್ರವನ್ನು ಸೂಚಿಸುತ್ತದೆ. ವಿಧವೆಯರಿಗೆ ಮತ್ತು ವಿಚ್ಛೇದಿತರಿಗೆ ಮರುಮದುವೆಗೆ ಅವಕಾಶವಿತ್ತು. ಪ್ರಾಚೀನ ಕಾಲದಲ್ಲಿ ಮಾತೃಮಾಲೀಯ ಸಂಪ್ರದಾಯವನ್ನು ಬಿಲ್ಲವರು ತಮ್ಮ ಕುಟುಂಬ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದಿರಬೇಕೆಂಬುದು ಸಂಶೋಧಕ ಶ್ರೀ ಎಂ. ದೇಜಪ್ಪ ಅವರ ಅಭಿಪ್ರಾಯವಾಗಿದೆ. ಇದಕ್ಕೆ ತಕ್ಕಂತೆ ಉತ್ತರ ಕನ್ನಡದ ಕಡೆಯ ಬಿಲ್ಲವರಾದ ಹಳೆಪೈಕ ಹಾಗೂ ನಾಮಾಧಾರಿಗಳಲ್ಲಿ ಇಂದಿಗೂ ಸ್ಥಿರ-ಚರ ಸಂಪತ್ತಿನ ಒಡೆತನ ಪಿತೃಮೂಲದಿಂದಲೇ ಬರುತ್ತದೆ, ಮಾತೃಮೂಲದಿಂದ ಅಲ್ಲ.ಹಾಗಾಗಿ ಅವರಲ್ಲಿ ಹೆಣ್ಣಿಗೆ ಗಂಡ ಸತ್ತಾಗಲೂ, ಗಂಡನ ಮನೆಯಲ್ಲಿ ಕಡುಬಡತನವಿದ್ದರೂ ತವರುಮನೆಯಲ್ಲಿ ಅವಳುಸ ತನ್ನ ಹಕ್ಕನ್ನು ಹೇಳುವಂತಿಲ್ಲ. ಅವರಾಗಿಯೇ ಮಾನವೀಯ ಅನುಕಂಪದಿಂದ ಕೊಟ್ಟರೆ ಮಾತ್ರ ಸಿಗಬಹುದಾಗಿದೆ.

ಬೆಲ್ಚಡರೆಂಬ ಮಲೆಯಾಳಿ ಬಿಲ್ಲವರು ತುಳುನಾಡಿನ ಬಿಲ್ಲವರ ಹುಡುಗಿಯರನ್ನು ವಿವಾಹವಾಗುತ್ತಾರೆ. ಅವರಿಗೆ ತುಳುನಾಡಿನ ಬಿಲ್ಲವರು ತಮಗಿಂತ ಕೆಳಗೆ ಎಂಬ ಭಾವನೆ ಇದ್ದಿರಬಹುದು ಎಂಬುದು ಒಂದು ಊಹೆ. ಅದರ ಪ್ರಕಾರ ಅವರು ತಮ್ಮ ಕುಟುಂಬದ ಹೆಣ್ಣನ್ನು ತುಳುನಾಡಿನ ಬಿಲ್ಲವರ ಕುಟುಂಬಕ್ಕೆ ಮದುವೆ ಮಾಡುವುದಿಲ್ಲ. ತಮ್ಮ ಹೆಣ್ಣು ಬಿಲ್ಲವರ ಹೊಲಗದ್ದೆಗಳಲ್ಲಿ ದುಡಿಯಲಾರಳು ಎಂಬ ಭಯ ಅವರಲ್ಲಿತ್ತು. ಗಂಡಸರಿಗೆ ಅನೇಕ ಮದುವೆಗಳ ಅವಕಾಶವಿತ್ತು. ಅನೈತಿಕವಾಗಿ ಪುರುಷರೊಂದಿಗೆ ಸಂಬಂಧವಿರಿಸಿಕೊಂಡ ಹೆಣ್ಣಿಗೆ ಮರುಮದುವೆಯ ಅವಕಾಶವಿರಲಿಲ್ಲ.

ಬಿಲ್ಲವರ ಕೌಟುಂಬಿಕ ಯಾಜಮಾನ್ಯ

ದೈನಂದಿನ ಬಳಕೆಯ ಅಕ್ಕಿಯನ್ನು ಮನೆಯ ಯಜಮಾನನೇ ಅಟ್ಟದಿಂದ ತೆಗೆದುಕೊಡುವುದು, ಅದು ನಿಗದಿಪಡಿಸಿದ ದಿನಕ್ಕಿಂತ ಮೊದಲೇ ಮುಗಿದು ಹೋದರೆ ಯಜಮಾನ ತರುವವರೆಗೆ ಅಡುಗೆ ಮಾಡಲು ಇಲ್ಲದಿರುವುದು-ಇವೆಲ್ಲ ಸಂಗತಿಗಳು ಮಾತೃಪ್ರಧಾನವೆನಿಸಿಕೊಂಡ ಕುಟುಂಬದಲ್ಲಿ ಅಸ್ತಿತ್ವದಲ್ಲಿರುವ ಪಿತೃಯಾಜಮಾನ್ಯವನ್ನು ಸೂಚಿಸುತ್ತವೆ. ಅಧಿಕಾರ, ಭೂಮಿಯ ಒಡೆತನ, ಕುಟುಂಬದ ಹಕ್ಕು, ಸಾಮಾಜಿಕ ಸಂಸ್ಕಾರ, ಸಂಪ್ರದಾಯ, ಸ್ಥಾನಮಾನ, ಗೌರವ ಇತ್ಯಾದಿ ಮಾವನಿಂದ ಅಳಿಯ, ಸೊಸೆಯಂದಿರಿಗೆ ಪಾರಂಪರಿಕವಾಗಿ ಲಭಿಸುವುದಾದರೂ ವಾಸ್ತವದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಅದು ಪುರುಷಾಧೀನವಾಗಿಯೇ ಇರುತ್ತದೆ.

ಈ ಅಂಶಗಳಿಂದ ತಿಳಿದುಬರುವುದೇನೆಂದರೆ ಪಿತೃಮಾಲೀಯವಾಗಲೀ, ಮಾತೃಮಾಲೀಯವಾಗಲೀ ಕುಟುಂಬ ವ್ಯವಸ್ಥೆಯಲ್ಲಿ ಪುರುಷನೇ ಮುಖ್ಯ. ಒಂದೆಡೆ ತಂದೆ ಮುಖ್ಯನಾದರೆ, ಇನ್ನೊಂದೆಡೆ ಸೋದರಮಾವ ಮುಖ್ಯನಾಗುತ್ತಾನೆ. ಅವನ ಬಳಿಕ ಅವನ ಸಹೋದರಿಯ ಮಗನಿಗೆ ಅಂದರೆ ಸೋದರಳಿಯನಿಗೆ ಆಸ್ತಿಯ ಮೇಲೆ ಹಕ್ಕು ಬರುತ್ತದೆ. ಸಾವಿಗೆ ಸಂಬಂಧಿಸಿದಂತೆ, ತಾಯಿಯ ಸಾವಿನ ಸೂತಕವು ತಂದೆಯ ಸಾವಿನ ಸೂತಕಕ್ಕಿಂತ ಮುಖ್ಯವಾಗಿದೆ ಎಂಬುದು ರೂಢಿಗತವಾದ ಸಾಮಾಜಿಕ ಆಚರಣೆಯನ್ನು ಸೂಚಿಸುತ್ತದೆ.

ತೀಯರ ಕೌಟುಂಬಿಕ ವ್ಯವಸ್ಥೆ

ಬಿಲ್ಲವರಲ್ಲಿ “ಬಳಿ”ಗಳಿರುವಂತೆ ತೀಯರಲ್ಲಿ “ಇಲ್ಲಂ”ಗಳು ಇವೆ. ಇಂತಹ ಎಂಟು ಇಲ್ಲಂಗಳು ಸೇರಿ ಒಂದು ತರವಾಡು. ಇದರಲ್ಲಿ ಕುಟುಂಬದ ಹಿರಿಯ ವ್ಯಕ್ತಿ ಮುಖ್ಯಸ್ಥನಾಗಿರುತ್ತಾನೆ. ಅವನ ಮರಣಾನಂತರ ಅವನ ಸೋದರ ಹಿರಿಯ ಮಗ ಅಧಿಕಾರಕ್ಕೆ ಬರುತ್ತಾನೆ. ಈಸ ಪ್ರಕ್ರಿಯೆಗೆ “ತಾವಯಿ” ಎಂದು ಹೆಸರು. ಕುಟುಂಬದ ಆಸ್ತಿಯ ಹಕ್ಕು ಒಂದೇ ತಾಯಿಯ ಮಕ್ಕಳಲ್ಲಿ ಗಂಡು-ಹೆಣ್ಣು ಇಬ್ಬರಿಗೂ ಸಮಾನವಾಗಿರುತ್ತದೆ. ಅವರ ಅನಂತರದ ತಲೆಮಾರಿನಲ್ಲಿ ಮನೆಮಗಳ ಸಂತತಿಗೆ ಮಾತ್ರ ಹಕ್ಕು ಮುಂದುವರಿಯುತ್ತದೆ.

ತೀಯರ ಮಾತೃಮಾಲೀಯ ಕುಟುಂಬ ವ್ಯವಸ್ಥೆ

ತೀಯ ಸಮುದಾಯದವರಲ್ಲಿ ಆಸ್ತಿಯ ನಿರ್ವಹಣೆಯಲ್ಲಿ ಸ್ತ್ರೀಗೆ ಹೆಚ್ಚಿನಧಿಕಾರವಿದೆ. ಆಸ್ತಿಯ ಹಕ್ಕು ತಾಯಿಯಿಂದ ಮಗಳಿಗೆ ಬರುತ್ತದೆ. ಹಿರಿಯರ ಆಸ್ತಿಯಲ್ಲಿ ಸ್ತ್ರೀಗೆ ಮೊದಲ ಅಧಿಕಾರ ಸಲ್ಲುತ್ತದೆ. ಬಿಲ್ಲವರಲ್ಲಿ ಇರುವಂತೆಯೇ ತೀಯರಲ್ಲೂ ಒಂದೇ “ಬಳಿ”ಯಲ್ಲಿ ವಿವಾಹ ನಿಷಿದ್ಧವಾಗಿದೆ. ತೀಯರು ಮತ್ತು ಬಿಲ್ಲವರ ನಡುವಿನ ವ್ಯತ್ಯಾಸವೆಂದರೆ ತೀಯರ ಹೆಣ್ಣಿಗೆ ಸಂಸಾರದಲ್ಲಿ ಸಾಮರಸ್ಯವಿಲ್ಲ ಎನಿಸಿದಾಗ ತನ್ನ ತವರು ಮನೆಗೆ ಬರುವ ಸ್ವಾತಂತ್ಯ್ರ ಇತ್ತು. ತವರು ಮನೆಯ ಆಸ್ತಿಯಲ್ಲಿ ಪಾಲಿರುವ ಕಾರಣದಿಂದ ಅವಳಿಗೆ ಮರುಮದುವೆಯ ಸ್ವಾತಂತ್ಯ್ರ ಹೆಚ್ಚಿತ್ತು.

 

ಬಿಲ್ಲವರ ಜೀವನಾವರ್ತನ ಆಚರಣೆಗಳು

. ಮೈನೆರೆಯುವುದು

ಹೆಣ್ಣು ಮಕ್ಕಳು ಪ್ರಾಯಬುದ್ಧರಾದುದನ್ನು ದೈಹಿಕವಾಗಿ ಸೂಚಿಸುವ ದೈಹಿಕ ಪರಿವರ್ತನೆಯ ಒಂದು ಭಾಗವಾಗಿ ಮೈನೆರೆತ ಸಂದರ್ಭವನ್ನು ಒಂದು ವಿಶೇಷ ಸಂದರ್ಭವೆಂದು ತಿಳಿಯುವ ಕ್ರಮ ತುಖುನಾಡಿನ ಇತರ ಸಮುದಾಯಗಳಲ್ಲಿರುವಂತೆ ಬಿಲ್ಲವರಲ್ಲೂ ಇತ್ತು. ಹಾಗಾಗಿಇದಕ್ಕೆ ಸಂಬಂಧಿಸಿದಂತೆ ಅವರು ಹಲವಾರು ಆಚರಣೆಗಳನ್ನು ಕೈಗೊಳ್ಳುತ್ತಿದ್ದರು.

. ನೀರ್ಪಾವುನಿ

ಮೈನೆರೆತಾಗ ಹುಡುಗಿಗೆ ನೀರು ಮೀಯಿಸುವ ಶಾಸ್ತ್ರಕ್ಕೆ “ನೀರ್ಪಾವುನಿ” ಎಂದು ಕರೆಯಲಾಗುತ್ತದೆ. ಮುಟ್ಟಾದ ೧೩ನೇ ದಿನ (ವಿಷಮ ಸಂಖ್ಯೆಯ ದಿನ) ಮಡಿವಾಳತಿ ಹಾಗೂ ಗುರಿಕಾರರ ಮನೆಯ ಮುತ್ತೈದೆಯರು ನಾಲ್ಕು ಕಲಶಗಳ ನೀರನ್ನು ತಲೆಯ ಮೇಲೆ ಸುರಿಯುತ್ತಾರೆ. ಮಡಿವಾಳ್ತಿ ಹುಡುಗಿಯ ತಲೆಯ ಮೇಲೆ ಬಿಳಿಯ ವಸ್ತ್ರವೊಂದನ್ನು ಹಿಡಿಯುತ್ತಾಳೆ. ಈ ಸಂದರ್ಭದಲ್ಲಿ ಅವಳನ್ನು ಕುರುಂಟು ಮತ್ತು ಜೋಡಿಸಿದ ತೆಂಗಿನ ಕಾಯಿಗಳ ಮೇಲೆ ಕುಳ್ಳಿರಿಸುವುದು ಫಲವಂತಿಕೆಯ ಸಂಕೇತವೆಂದು ಕೇಳಲಾಗಿದೆ. ಈ ಆಚರಣೆಯಲ್ಲಿ ಗಂಡಸರು ಭಾವಹಿಸುವುದಿಲ್ಲ.

. ಕರಪತ್ತಾವುನಿ

೧೩ನೆಯ ದಿನದಂದು ಅವಳು ಅಡುಗೆಗೆ ಸಮರ್ಥಳು ಎಂಬುದನ್ನು ಸೂಚಿಸುವ ವಿಧಿಗಳನ್ನು ನೆರವೇರಿಸುವ ಆಚರಣೆಗೆ “ಕರಪತ್ತಾವುನಿ” ಎಂದು ಹೇಳಲಾಗುತ್ತದೆ. ಹೊರನೋಟಕ್ಕೆ ಇದು ಅವಳು ಅಡುಗೆಗೆ ಸಮರ್ಥಳು ಎಂಬುದನ್ನು ಸೂಚಿಸುತ್ತದಾದರೂ ವಾಸ್ತವದಲ್ಲಿ ಅದು ಹೆಣ್ಣನ್ನು ಗೃಹಕೃತ್ಯಗಳಿಗೆ ಸೀಮಿತಗೊಳಿಸಿ, ಅವಳು ದಾಂಪತ್ಯಕ್ಕೆ ತಯಾರಾದಳು ಎಂಬುದನ್ನು ತಿಳಿಸುವುದಾಗಿದೆ.

. ಮದ್ಮಲೆ ಮರ್ದ್‌

ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ತುಪ್ಪ ಮತ್ತು ಸಾಂಬಾರ ಪದಾರ್ಥಗಳ ಮಿಶ್ರಣದ ವಿಶೇಷ ಪೌಷ್ಠಿಕ ಆಹಾರಕ್ಕೆ “ಮದ್ಮಲೆ ಮರ್ದ್‌” ಎನ್ನುತ್ತಾರೆ. ಮೈನೆರೆದ ಹೆಣ್ಣು ಕಳಕೊಳ್ಳುವ ಶಕ್ತಿವರ್ಧನೆಗೆ ಮತ್ತು ಸುಪುಷ್ಟಳಾಗಲು ಇದನ್ನು ಕೊಡುತ್ತಾರೆ. ಮೈನೆರೆದೊಡನೆಯೇ ಅವಳನ್ನು ಮದ್ಮಲ್ ಎಂದು ಕರೆಯುವುದರ ಹಿಂದೆ ಇನ್ನು ಅವಳು ಮದುವೆಗೆ ತಯಾರಾದಳು, ಸಂತಾನೋತ್ಪತ್ತಿ ಕ್ರಿಯೆಯೇ ಅವಳ ಜೀವನದ ಧ್ಯೇಯ ಎಂದು ತಿಳಿಯುವ ಮನೋಭಾವ ಇದೆ. ಶಿಕ್ಷಣದ ಅವಕಾಶಗಳು, ಔದ್ಯೋಗಿಕ ಸಂದರ್ಭಗಳು ಹೆಣ್ಣಿಗೆ ಇಂದು ಮದುವೆ ಮತ್ತು ಸಂತಾನ ಬಳೆಸುವ ಪ್ರಕ್ರಿಯೆಯನ್ನೇ ಮುಖ್ಯವೆಂದು ತಿಳಿಯದಷ್ಟು ಬೆಳೆಸಿವೆ. ಹಾಗಾಗಿ ಇಂದು ಮೈನೆರೆಯುವಿಕೆಯನ್ನು ಒಂದು ಸಹಜ ನೈಸರ್ಗಿಕ ಕ್ರಿಯೆಯೆಂದು ತಿಳಿದುಕೊಳ್ಳಲಾಗುತ್ತಿದ್ದು, ಅದನ್ನು ಈಗ ಬಹಿರಂಗಗೊಳಿಸುವುದಿಲ್ಲ.

ಇತರ ಸಮುದಾಯಗಳಂತೆಯೇ ಬಿಲ್ಲವರು/ ತೀಯರೂ ಕೂಡ ಮೈನೆರೆದ ಹೆಣ್ಣಿಗೆ ನೀರು ಮೀಯಿಸುವ ಶಾಸ್ತ್ರದಿಂದ ಆರಂಭಿಸಿ, ಎಲ್ಲ ಆಚರಣೆಗಳಲ್ಲಿ ಹೆಣ್ಣನ್ನು ಫಲವಂತಿಕೆಯ ಸಂಕೇತವಾಗಿಯೇ ಭಾವಿಸುತ್ತಿದ್ದರು. ಇಡೀ ಪ್ರಕೃತಿಯನ್ನೇ ಹೆಣ್ಣಾಗಿ ಪರಿಭಾವಿಸುತ್ತಿದ್ದ ನೆಲೆಯಲ್ಲಿ ತಮ್ಮ ವೃತ್ತಿಗೆ ಪ್ರಾಕೃತಿಕ ಆಕರವಾದ ತಾಳೆಮರದಲ್ಲೂ ರಸ ಹೆಚ್ಚಾಗಿ ಸಿಗುವ ತಾಳೆಯನ್ನು “ಹೆಣ್ಣುತಾಳೆ” ಎಂದು ಕರೆಯುತ್ತಿದ್ದರು.

. ವೈವಾಹಿಕ

ಮದುವೆಯ ವಿಚಾರಕ್ಕೆ ಬಂದರೆ ಬಿಲ್ಲವರಲ್ಲಿ ಒಳಬಾಂಧವ್ಯಕ್ಕೆ ಒತ್ತು ಕೊಡುತ್ತಿದ್ದುದು ಹೆಚ್ಚಾಗಿ ಕಂಡು ಬರುತ್ತದೆ. ಬಹಳ ಹಿಂದೆ ಉತ್ತರ ಕನ್ನಡದ ಬಿಲ್ಲವರಲ್ಲಿ ಅಕ್ಕನ ಮಗಳನ್ನು ವಿವಾಹವಾಗುವ ರೂಢಿ ಇತ್ತು. ಆದರೆ ಇದು ಇತರೆಡೆಗಳ ಬಿಲ್ಲವರಲ್ಲಿ ಇಲ್ಲ.

ಬಿಲ್ಲವರು ಅಳಿಯ ಸಂತಾನ ಕಟ್ಟಿನ ಸಾಂಸಾರಿಕ ಕಟ್ಟುಪಾಡುಗಳನ್ನು ನಡೆಸಿಕೊಂಡು ಬಂದವರು. ಇವರಲ್ಲಿ ಹೆಣ್ಣಿನ ತಂದೆಯೇ ಮುಂದಾಗಿ ಗಂಡು ನೋಡಲು ಹೋಗುವ ಕ್ರಮವಿಲ್ಲ. ಬದಲಾಗಿ ಅವಳನ್ನು ಮದುವೆಯಾಗಬಯಸುವ ಗಂಡೇ ಹೆಣ್ಣಿನ ಮನೆಗೆ ಹೋಗಬೇಕು. ಮದುವೆಯ ಪ್ರಸ್ತಾಪ ಮಾಡಬೇಕು. ಗುಡುಗಿಗೆ ಹುಡುಗನೇ ಸಿಗದ ಸಂದರ್ಭದಲ್ಲೂ ಕೂಡ ಹುಡುಗಿಯ ತಂದೆ ತಾನಾಗಿಯೇ ಮುಂದೆ ಹೋಗುವಂತಿಲ್ಲ. ಇದು ಆ ಸಮುದಾಯದಲ್ಲಿ ಹೆಣ್ಣಿಗಿರುವ ಮಹತ್ವವನ್ನು ಸೂಚಿಸುತ್ತದೆ.

ದಕ್ಷಿಣಕನ್ನಡದ ಬಿಲ್ಲವರ ಹುಡುಗರು ತಮ್ಮ ಸಹೋದರಿಯ ಮಗಳನ್ನು ಅರ್ಥಾತ್ ತಮ್ಮ ಸೋದರಸೊಸೆಯನ್ನು ಮದುವೆಯಾಗುವ ಕ್ರಮವಿಲ್ಲ. ಅವಳು ಅವರಿಗೆ ಮಗಳ ಸಮಾನಳು. ಉತ್ತರ ಕನ್ನಡದ ಹಳೆಪೈಕದವರಲ್ಲಿ ಸಾಮಾನ್ಯವಾಗಿರುವ ಇಂತಹ ವಿವಾಹವು ಬಿಲ್ಲವರಲ್ಲಿ ಅನಿವಾರ್ಯವಾದಾಗ ಮಾತ್ರ ನಡೆದುದೂ ಇದೆ. ಇದಕ್ಕೆ ಸಂಬಂಧಿಸಿ, “ಅಕ್ಕನ ಮಗಳನ್ನು ಮದುವೆಯಾಗುವವನು ದಿಕ್ಕಿಲ್ಲದವನು” ಎಂಬ ನಾಣ್ಣುಡಿಯೂ ಅವರಲ್ಲಿದೆ. ವಿವಾಹದ ವಿಧಿವಿಧಾನಗಳಲ್ಲಿ ಹುಡುಗಿಯ ಸೋದರಮಾವನಿಗೆ ಪ್ರಮುಖ ಪಾತ್ರವಿರುತ್ತದೆ. ಹುಡುಗನಿಗೆ ತನ್ನ ತಾಯಿಯ ಅಣ್ಣನ ಅಥವಾ ತಮ್ಮನ (ಸೋದರಮಾವನ) ಮಗಳನ್ನು ಮದುವೆಯಾಗುವ ಹಕ್ಕು ಹುಟ್ಟಿನಿಂದ ತಾನಾಗಿಯೇ ಬಂದಿರುತ್ತದೆ.

ಬಿಲ್ಲವರು ಹಾಗೂ ತೀಯರ ಮದುವೆಯಲ್ಲಿ ಬಳಿಗಳ ಪರಿಶೀಲನೆ ಮುಖ್ಯವಾಗಿದ್ದು, ಸಮಾನ ಬಳಿಗಳಲ್ಲಿ ವಿವಾಹ ನಿಷೇಧವೆನಿಸಿದೆ. ವೈಜ್ಞಾನಿಕವಾಗಿಯೂ ರಕ್ತಸಂಬಂಧಿಗಳಲ್ಲಿಸ ವಿವಾಹ ನಿಷಿದ್ಧವಾಗಿದೆ. ಆದರೆ ಇದು ಹಿಂದಿನಿಂದಲೂ ಬಿಲ್ಲವರಂಥ ಹಲವು ಸಮುದಾಯಗಳಲ್ಲಿ ರೂಢಿಯಲ್ಲಿದ್ದುದು ಆರೋಗ್ಯಕರ ಸಂಗತಿಯಾಗಿದೆ. ಬಿಲ್ಲವರ ಬಳಿಗಳು ಪ್ರಾಣಿ, ಪಕ್ಷಿ, ಮರ, ವಸ್ತು ಇತ್ಯಾದಿಗಳನ್ನು ಪ್ರತಿನಿಧಿಸುತ್ತಿದ್ದು, ಅವು ಆದಿವಾಸಿ ಮಾನವರ ಕುಲಚಿಹ್ನೆಗಳಂತೆ ಕಾಣುತ್ತವೆ. ಬಿಲ್ಲವರು ತಮ್ಮ ಹೆಸರುಗಳನ್ನು ತಾಯಿಯ ಕಡೆಯ ಬಳಿಯಿಂದ ಗುರುತಿಸಿ ಕೊಂಡಿರುವುದು ಕಂಡು ಬರುತ್ತದೆ. ಇದು ಮಾತೃಮೂಲದ ಚಿಹ್ನೆಯಾಗಿ ಅಳಿಯ ಸಂತಾನ ಕಟ್ಟಿನ ಪ್ರಭಾವವನ್ನು ಸೂಚಿಸುತ್ತದೆ. ತೀಯರ ಬಳಿಯ ಹೆಸರುಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಇವೆ.