ಬಿಲ್ಲವರು ಮತ್ತು ತೀಯರು

ದಕ್ಷಿಣ ಕನ್ನಡದ ಮೂಲ್ಕಿ, ಮೂಡಬಿದ್ರೆ, ಬಜಪೆ, ಸೋಮೇಶ್ವರ, ಸುರತ್ಕಲ್, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಉಪ್ಪಿನಂಗಡಿ, ಪುತ್ತೂರು, ನೆಲ್ಯಾಡಿ, ಸುಳ್ಯ ಮತ್ತಿತರ ಪ್ರದೇಶಗಳಲ್ಲಿ, ಉಡುಪಿ ಜಿಲ್ಲೆಯ ಶಿರೂರು, ಗಂಗೊಳ್ಳಿ, ಕುಂದಾಪುರ, ಉಡುಪಿ, ಮಣಿಪಾಲ, ಹಿರಿಯಡ್ಕ, ಪೆರ್ಡೂರು, ಹೆಜಮಾಡಿ, ನಂದಿಕೂರು ಮೊದಲಾದ ಪ್ರದೇಶಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹೆಬ್ಬಾಳ, ಯಲ್ಲಾಪುರ, ಕಾರವಾರ, ಅಂಕೋಲಾ, ಕುಮಟಾ, ಚಂದಾವರ, ಹೊನ್ನಾವರ, ಸಿದ್ಧಾಪುರ, ಭಟ್ಕಳ ಮೊದಲಾದ ಕಡೆಗಳಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ಶುಂಠಿಕೊಪ್ಪ, ವಿರಾಜಪೇಟೆ, ಮಡಿಕೇರಿ, ಬಿಬಾಡಗ ಮೊದಲಾದೆಡೆಗಳಲ್ಲಿ ಮತ್ತು ಕಾಸರಗೋಡು ಜಿಲ್ಲೆಯ ಉಪ್ಪಳ, ಅರಿಕ್ಕಾಡಿ, ಪೆರಡಾಲ, ಬದಿಯಡ್ಕ, ಮುಳ್ಳೇರಿಯಾ, ಕೂಡ್ಲು, ಕಾಸರಗೋಡು, ಪಣಿಯಾಲ, ಕಾಂಞಂಗಾಡು, ಹೊಸದುರ್ಗ, ನೀಲೇಶ್ವರ ಮುಂತಾದ ಸ್ಥಳಗಳಲ್ಲಿ ನೆಲೆ ನಿಂತಿರುವ ಬಿಲ್ಲವ ಮತ್ತು ತೀಯ ಸಮುದಾಯದ ಮಂದಿ ಸಂಖ್ಯಾ ದೃಷ್ಟಿಯಿಂದ ಬಾಹುಳ್ಯವನ್ನು ಹೊಂದಿದವರು.

ಬಿಲ್ಲವ ಸಮುದಾಯವು ಮೇಲೆ ಹೇಳಿದ ಎಲ್ಲ ಪ್ರದೇಶಗಳಲ್ಲಿ ಬಹುಸಂಖ್ಯಾತವಾಗಿದ್ದರೂ ಹಿಂದುಳಿದ ವರ್ಗವೆಂದು ಪರಿಗಣಿತವಾಗಿದೆ. ಇಂದು ಗಣನೀಯ ಸಂಖ್ಯೆಯಲ್ಲಿ ವಿದ್ಯಾವಂತರನ್ನು, ಬುದ್ಧಿವಂತರನ್ನು ಹೊಂದಿದವರು ಈ ಸಮುದಾಯದ ಸಾಂಸ್ಕೃತಿಕ ಒಳನೋಟವನ್ನು ಇದೇ ಸಮುದಾಯದ ಮಹಿಳೆಯರ ಅಸ್ತಿತ್ವದ ನೆಲೆಯಿಂದ ಗ್ರಹಿಸುವುದು ಈ ಲೇಖನದ ಉದ್ದೇಶವಾಗಿದೆ. ಸಂಖ್ಯೆಯ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ಈ ಸಮುದಾಯವು ಹಿಂದುಳಿದ ಸಮುದಾಯವಾಗಿ ಉಳಿದು ಬೆಳೆದು ಬರಲು ಕಾರಣವಾದ ಸನ್ನಿವೇಶಗಳು, ಈ ಸಮುದಾಯದ ಪುರುಷರ ಸ್ಥಾನಮಾನವೇ ಕೆಳಮಟ್ಟದ್ದಾಗಿರುವಾಗ ಪುರುಷ ಪ್ರಧಾನತೆಯ ಸಂದರ್ಭದಲ್ಲಿ ಕೌಟುಂಬಿಕ ನೆಲೆಯಿಂದ ಆರ್ಥಿಕ-ಸಾಮಾಜಿಕ ನೆಲೆಯಿಂದ ಮತ್ತು ಒಟ್ಟಾರೆ ಪ್ರದೇಶದ ಸಂಸ್ಕೃತಿಯ ನೆಲೆಯಿಂದ ಮಹಿಳೆಯರ ಸ್ಥಿತಿಗತಿ ಹೇಗಿದ್ದಿರಬಹುದೆಂಬುದನ್ನು ಮುಖ್ಯವಾಗಿ ಗ್ರಹಿಸಲು ಪ್ರಯತ್ನಿಸಲಾಗಿದೆ.

ಬಿಲ್ಲವರು ಮತ್ತು ತೀಯರಿಗೆ ಸಂಬಂಧಿಸಿದಂತೆ ಈ ವರೆಗೆ ಹಲವು ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಡಾ. ವಾಮನ ನಂದಾವರ ಅವರ ಕೋಟಿ ಚೆನ್ನಯ: ಸಾಂಸ್ಕೃತಿಕ ಅಧ್ಯಯನ (ಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ: ೨೦೦೨), ಸಂಗೀತಾ ಎಂ. ಅವರ ದಕ್ಷಿಣ ಕನ್ನಡದ ತೀಯಾ ಜನಾಂಗ: ಒಂದು ಸಾಂಸ್ಕೃತಿಕ ಅಧ್ಯಯನ (ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ: ೨೦೦೪), ಎಂ. ದೇಜಪ್ಪ ದಲ್ಲೋಡಿ ಅವರ ದಕ್ಷಿಣ ಕನ್ನಡದ ಬಿಲ್ಲವರು: ಒಂದು ಸಾಂಸ್ಕೃತಿಕ ಅಧ್ಯಯನ  (ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ: ೨೦೦೪), ಬನ್ನಂಜೆ ಬಾಬು ಅಮೀನ್ ಅವರ ಬಿಲ್ಲವರು: ಒಂದು ಅಧ್ಯಯನ (೨೦೦೩), ಕೆ. ಕೃಷ್ಣಪ್ಪ ಪೂಜಾರಿ ಅವರ ತುಳುನಾಡಿನ ಬಿಲ್ಲವರು ಇವು ವಿವರಣಾತ್ಮಕ ನೆಲೆಯಲ್ಲಿ ಮುಖ್ಯವಾದವುಗಳಾಗಿವೆ. ಇವುಗಳಲ್ಲದೆ, ಹಲವು ಸಮುದಾಯಗಳ ಅಧ್ಯಯನದ ರೂಪದಲ್ಲಿ ಬಂದ ಲೇಖನಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾದ ನೆಲೆಯಲ್ಲಿ ಈ ಸಮುದಾಯದ ಕುರಿತು ಸಂಕ್ಷಿಪ್ತವಾಗಿ ಹೇಳುತ್ತವೆ. ಇವಲ್ಲದೆ, ದಕ್ಷಿಣ ಕನ್ನಡದ ಪಾಡ್ದನ, ಕಬಿತೆಗಳೇ ಮೊದಲಾದ ಮೌಖಿಕ ರೂಪದ ಸಾಹಿತ್ಯ ಪರಂಪರೆಯೂ ಕೂಡ ಇಲ್ಲಿನ ಸಮುದಾಯಗಳ ಪರಸ್ಪರ ಉಲ್ಲೇಖ ಮಾಡುತ್ತದೆ ಮತ್ತು ಅಧ್ಯಯನಕ್ಕೆ ಪ್ರಮುಖ ಆಕರಗಳಾಗಿ ಸಹಕಾರಿಯಾಗಿದೆ.

ದಕ್ಷಿಣ ಕನ್ನಡದಲ್ಲಿ ಬಿಲ್ಲವರನ್ನು ವೃತ್ತಿಯ ನೆಲೆಯಿಂದ ಬೈದ್ಯರು, ಪೂಜಾರಿಗಳೆಂದೂ ಕರೆಯಲಾಗುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ತೀಯ, ಬೆಲ್ಚಡ, ಮಲೆಯಾಳಿ ಬಿಲ್ಲವರೆಂದೂ, ಉತ್ತರ ಕನ್ನಡದಲ್ಲಿ ಪೈಕ, ಹಳೆಪೈಕ, ನಾಯಕರೆಂದೂ, ಕೇರಳದಲ್ಲಿ ಈಳವರೆಂದೂ, ಕರ್ನಾಟಕದ ಇತರೆಡೆಗಳಲ್ಲಿ ನಾಮಧಾರಿ, ದೇವರ ಮಕ್ಕಳು, ಧೀವರ, ಈಡಿಗ, ಶಾನ, ಗುರಿಕಾರ, ಗುತ್ತೇದಾರ, ಬೋಂಟ್ರ, ಬೋಂಟೆಗಾರ ಇತ್ಯಾದಿ ಪ್ರಾದೇಶಿಕ ಹೆಸರುಗಳಿಂದ ಕರೆಯಲಾಗುತ್ತಿದ್ದು, ಇವು ಬಿಲ್ಲವ ಬುಡಕಟ್ಟುಗಳೆಂದು ಸಂಶೋಧನ ಅಧ್ಯಯನಗಳು ಗುರುತಿಸಿವೆ. ಅಂತೆಯೇ ಇವುಗಳ ನಡುವೆ ಪ್ರಾದೇಶಿಕವಾದ ಬಹಳ ಸೂಕ್ಷ್ಮ ವೆನಿಸುವ ಭಿನ್ನತೆಗಳಿದ್ದು, ಬದುಕಿನ ಹೆಚ್ಚಿನ ಮಹತ್ವದ ವಿಚಾರಗಳಲ್ಲಿ ಸಮಾನತೆ ಇದೆ.

ದಕ್ಷಿಣಭಾರತದ ಹಲವಾರು ಕಡೆಗಳಲ್ಲಿ ಹಾಗೂ ಉತ್ತರಭಾರತದಲ್ಲೂ ಈ ಬುಡಕಟ್ಟಿನ ಜನರ ನೆಲೆ ಕಂಡುಬರುತತದೆ. ಬೇಟೆ ಹಾಗೂ ಪಶುಪಾಲನೆ ಜೀವನವೃತ್ತಿಯಾಗಿದ್ದ ಕಾಲದಲ್ಲಿ ಬೇಟೆಗಾರರಾಗಿ, ಕೃಷಿ ಜೀವನ ವೃತ್ತಿಯಾಗಿದ್ದ ಕಾಲದಲ್ಲಿ ಕೃಷಿಕರಾಗಿ, ಅನ್ಯಮಾರ್ಗವಿಲ್ಲದ ಸಂದರ್ಭದಲ್ಲಿ ಮೂರ್ತೆದಾರರಾಗಿ ಹಾಗೂ ನಾಟಿವೈದ್ಯರಾಗಿ ಬಾಲಿದವರು ಬಿಲ್ಲವರು. ರಾಜ್ಯಾಳ್ವಿಕೆಯಲ್ಲಿ ಬಿಲ್ಲುಗಳ ಸಂಖ್ಯೆಯ ಆಧಾರದಲ್ಲಿ ಲೆಕ್ಕದಲ್ಲಿಡುವ ಸಲುವಾಗಿ ಬಿಲ್ಲವರೆಂದು ಕರೆಯಲಾಗುತ್ತಿದ್ದ ಸಮುದಾಯವೇ ಕಾಸರಗೋಡು ಪರಿಸರದಲ್ಲಿ ತೀಯರೂ ಆಗಿದ್ದಾರೆ.

ಬಿಲ್ಲವರ ಮೂಲ

ತುಳುವಿನಲ್ಲಿ “ಬಿರುವೆರ್” ಎಂದು ಕರೆಯಲಾಗುವ ಬಿಲ್ಲವರನ್ನು ದಕ್ಷಿಣ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ಬಗೆಯ ಹೆಸರು ಮತ್ತು ಮೂಲಗಳಿಂದ ಗುರುತಿಸಲಾಗುತ್ತದೆ. ಮಾನವ ಜೀವನದ ಪ್ರಾಚೀನತೆಯ ಮೆಟ್ಟಲುಗಳನ್ನು ಗುರುತಿಸುವಾಗ ಬೇಟೆ ಮತ್ತು ಪಶುಪಾಲನೆಯು ಜೀವನ ವೃತ್ತಿಯಾಗಿದ್ದ ಕಾಲದಲ್ಲಿ ಬಿಲ್ಲವ ಜನಸಾಮಾನ್ಯರು ಬಿಲ್ಲುಗಳಿಂದ ಬೇಟೆಯಾಡುವ ಬೇಟೆಗಾರರಾಗಿ, ಅನಿವಾರ್ಯ ಪ್ರಸಂಗದಲ್ಲಿ ತಾಳೆ, ತೆಂಗು, ಬೈನೆ, ಈಚಲು ಮೊದಲಾದ ಮರಗಳಿಂದ ರಸ ಇಳಿಸುವ ಕಾಯಕದಲ್ಲಿ ತೊಡಗಿದ ಮೂರ್ತೆದಾರರಾಗಿ, ಜೊತೆಗೆ ನಾಟಿವೈದ್ಯರಾಗಿ, ಮುಂದೆ ಕೃಷಿಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಕೃಷಿಕರಾಗಿ ಬದುಕಿದ ಸಮುದಾಯದವರು.

ಚಾರಿಚಿತ್ರಿಕ ಸಂದರ್ಭಗಳಲ್ಲಿ ಬಿಲ್ಲವರು ತುಂಡರಸರ ಆಪ್ತ ಮಂತ್ರಿಗಳಾಗಿ, ಸೇನಾನಿಗಳಾಗಿ, ದಳವಾಯಿಗಳಾಗಿ, ಯೋಧರಾಗಿ, ಬಿಲ್ಲಾಳುಗಳಾಗಿ ಪ್ರಾಮುಖ್ಯ ಪಡೆದಿರುವುದು ಕಂಡುಬರುತ್ತದೆ. ಕೋಟಿ-ಚೆನ್ನಯ್ಯ, ಕಾಂತಾಬಾರೆ-ಬೂದಾಬಾರೆಯರೆಂಬ ಐತಿಹಾಸಿಕ ವೀರರು, ಮಲ್ಲಯ ಬುದ್ಧಿವಂತ ಎಂಬ ಮಂತ್ರಿ, ಸಾಯನ ಬೈದ್ಯನೆಂಬ ವೈದ್ಯ ಇದೇ ನೆಲೆಯಲ್ಲಿ ನಮಗೆ ಕಾಣಿಸಿಕೊಳ್ಳುತ್ತಾರೆ.

ಬಿಲ್ಲವರ ಪುರುಷನನ್ನು “ಬಿರುವೆ” ಎಂದು ಕರೆಯುವಲ್ಲಿ ಬಿಲ್ಲವರ ಸ್ತ್ರೀಯನ್ನು “ಬಿರುವೆದಿ” ಎಂದೂ, ಬಿಲ್ಲವ ಗಂಡಸನ್ನು “ಬೈದ್ಯ” ಎಂದು ಕರೆಯಲಾಗುವಲ್ಲಿ ಬಿಲ್ಲವ ಮಹಿಳೆಯನ್ನು “ಬೈದ್ಯತಿ” ಎಂದೂ ಕರೆಯಲಾಗುತ್ತದೆ. ಭಾಷೆಯ ಬೆಳವಣಿಗೆಯ ಹಂತಗಳಲ್ಲಿ ಈಗಾಗಲೇ ಗುರುತಿಸಿರುವಂತೆ ಪುರುಷ ಪ್ರಧಾನ ನೆಲೆಯಿಂದ ರೂಪುಗೊಂಡು ನಡೆದಿರುವ ಭಾಷಾಪ್ರಕ್ರಿಯೆಯಲ್ಲಿನ ಪದರಚನೆ, ವಾಕ್ಯರಚನೆಗಳಂತೆ, ಇಲ್ಲಿ ಗಂಡಸಿನ ಉಪನಾಮಕ್ಕೆ ಅನುಸಾರವಾಗಿ ಮಹಿಳೆಯ ಉಪನಾಮವಿರುವುದನ್ನು ಗಮನಿಸಬೇಕು. ಈ ಪದಗಳು ಇಲ್ಲಿನ ಸ್ಥಳೀಯ ಜನಸಾಮಾನ್ಯರ ಭಾಷೆಯಾಗಿರುವ ತುಳುವಿನಲ್ಲಿವೆ. ಇಲ್ಲಿನ ಭೂತಾರಾಧನೆಗಳಲ್ಲಿ ಪಾಲ್ಗೊಳ್ಳುವ ಬಿಲ್ಲವ ಸಮುದಾಯಕ್ಕೆ ಸೇರಿದ ವ್ಯಕ್ತಿಗಳೆಲ್ಲರೂ ಬೈದ್ಯರೇ ಆಗಿದ್ದಾರೆ ಅಥವಾ ಅದರಲ್ಲಿ ಭಾಗವಹಿಸಿದ ಬಿಲ್ಲವ ಸಮುದಾಯದ ಎಲ್ಲರನ್ನೂ ಬೈದ್ಯರೆಂಬ ಉಪನಾಮದಿಂದಲೇ ಕರೆಯಲಾಗಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ಕೌಟುಂಬಿಕವಾಗಿ ಮಾತೃಮೂಲೀಯ ಕುಂಟುಂಬ ವ್ಯವಸ್ಥೆಯನ್ನು ಹೊಂದಿರುವ ಬಿಲ್ಲವರಲ್ಲಿ ಆಸ್ತಿಯ ಹಕ್ಕಿನ ಬದಲಾವಣೆಯ ಸಂದರ್ಭವನ್ನು ಮತ್ತು ವಿವಾಹ ಮೊದಲಾದ ಸಂಸ್ಕಾರಗಳಿಗೆ ಸಂಬಂಧಪಟ್ಟ ಸಂದರ್ಭಗಳನ್ನು ಹೊರತುಪಡಿಸಿದರೆ ಉಳಿದಂತೆ ಹೆಂಗಸರಿಗೆ ಅಂತಹ ಪ್ರಾಮುಖ್ಯವೇನೂ ಕಂಡುಬರುವುದಿಲ್ಲ. ಉಳಿದ ಬ್ರಾಹ್ಮಣೇತರ ಸಮುದಾಯಗಳಲ್ಲಿ ಇರುವಂತೆಯೇ ಬಿಲ್ಲವರದೂ ಶ್ರಮಮೂಲದ ಜೀವನವಾಗಿದ್ದು, ಸಹಜವಾಗಿಯೇ ಮಹಿಳೆಯರೂ ಇದರಲ್ಲಿ ಪಾಲುದಾರರು.

ಪೌರಾಣಿಕ/ ಐತಿಹಾಸಿಕ ಹಿನ್ನೆಲೆ

ಯಾವುದೇ ರಾಜವಂಶದವರಾಗಲೀ, ಯಾವುದೇ ಸಮುದಾಯಕ್ಕೆ ಸೇರಿದ ಮಂದಿಯಾಗಲೀ ತಮ್ಮ ಮೂಲಕ ಕುರಿತು ಅವರದೇ ಆದ ಪೌರಾಣಿಕ ಹಿನ್ನೆಲೆಯ ಐತಿಹ್ಯಗಳನ್ನು ಹೊಂದಿರುತ್ತಾರೆ. ಸಮಾಜದ ಇತರ ಸಮುದಾಯಗಳು ತಮ್ಮ ವಂಶವನ್ನಾಗಲೀ, ಜಾತಿ/ಸಮುದಾಯಗಳನ್ನಾಗಲೀ ಉನ್ನತವಾದ ದೃಷ್ಟಿಯಿಂದ ನೋಡುವಂತೆ ಮಾಡುವ ಆಲೋಚನೆ ಈ ಐತಿಹ್ಯಗಳ ಸೃಷ್ಟಿಯ ಹಿಂದೆ ಕೆಲಸ ಮಾಡುತ್ತದೆ. ಅಂತೆಯೇ ಬಿಲ್ಲವರ ಉಪನಾಮಗಳಿಗೆ ಸಂಬಂಧಿಸಿಯೂ ಐತಿಹ್ಯಗಳು ಇವೆ. ಇವೆಲ್ಲವುಗಳಲ್ಲಿ ಸ್ತ್ರೀ ಪ್ರಧಾನವಾದ ಕಥೆಯನ್ನು ಹೊಂದಿರುವ ಐತಿಹ್ಯಗಳನ್ನು ಮಾತ್ರ ಇಲ್ಲಿ ಬಳಸಿಕೊಂಡು ವಿಶ್ಲೇಷಣೆ ಒಳಪಡಿಸಲಾಗಿದೆ.

ತೀಯರ ಕುರಿತಾದ ಐತಿಹ್ಯ

ಕೊಳದಲ್ಲಿ ಸ್ನಾನ ಮಾಡುತ್ತಿದ್ದ ಏಳು ಮಂದಿ ದೇವತಾ ಸ್ತ್ರೀಯರಿಗೆ ಮನಸೋತ ಶಿವನಿಂದ ಏಳುಮಂದಿ ಪುತ್ರರು ಜನಿಸಿದರು. ಅವರನ್ನು ಶಿವನು ಪಾರ್ವತಿಗೆ ತಂದೊಪ್ಪಿಸಿದಾಗ ಅವಳು ತನ್ನದೇ ಮಕ್ಕಳಂತೆ ನೋಡಿಕೊಂಡಳು. ಇವರೆಲ್ಲ ಕೈಲಾಸ ಪರ್ವತದಿಂದ ಶಕ್ತಿಯ ಅರ್ಚನೆಗಾಗಿ ಶೇಂದಿ ತರಲು ನಿಯೋಜಿತರಾಗಿ, ಅದನ್ನು ಬಂಗಾರದ ಪಾತ್ರೆಯಲ್ಲಿ ತರುತ್ತಿದ್ದರು. ಒಮ್ಮೆ ಪಾರ್ವತಿ ಇವರೆಲ್ಲರನ್ನು ಒಟ್ಟಾಗಿ ಆಲಿಂಗಿಸಿಕೊಂಡಾಗ ಅವರೆಲ್ಲ ಏಕದೇಯಿಯಾದ ಸೌನಿಕ (ಶೌಂಡಿಕೆ)ನೆಂಬ ವ್ಯಕ್ತಿಯಾಗಿ ಬದಲಾದರು. ಇವನೇ ಪ್ರಥಮ ತೀಯ. ಇಲ್ಲಿ ಪಾರ್ವತಿಯು ಆ ಮಕ್ಕಳನ್ನು ಆಲಂಗಿಸುವ ಪ್ರಸಂಗವು ತೀಯರ ಸಮುದಾಯದಲ್ಲಿ ಮಾತೃಮೂಲೀಯ ಕುಟುಂಬ ವ್ಯವಸ್ಥೆಯನ್ನು ಸಮರ್ಥಿಸುವ ಪ್ರತಿಮೆ ಎನ್ನಬಹುದೇನೋ!

ತೀಯರಿಗೆ ವೈದ್ಯವು ಜೀವನ ವೃತ್ತಿಯಲ್ಲ. ಅವರು ಮೂರ್ತೆದಾರರು, ಕೃಷಿಕರು, ಯೋಧರು, ಸಂಘಂ ಕಾಲದಲ್ಲಿ ಕೊಟ್ಟವೈ ಎಂಬ ದೇವಿಗೆ ದೈವಾರಾಧನೆಯ ಮುಖ್ಯ ಅಂಗವಾಗಿ ಕಳ್ಳನ್ನು ಸಮರ್ಪಿಸಲಾಗುತ್ತಿದ್ದುದು ತೀಯರು ತಮ್ಮ ಮೂರ್ತೆಗಾರಿಕೆಯ ವೃತ್ತಿಗೆ ಕೊಟ್ಟ ಪಾವಿತ್ಯ್ರಕ್ಕೆ ಸಾಕ್ಷಿಯಾಗಿದೆ.

ಬೈದ್ಯ ವೃತ್ತಿಗೆ ಸಂಬಂಧಿಸಿದ ಐತಿಹ್ಯ

ತೀರ್ಥಯಾತ್ರೆ ಮಾಡುತ್ತಿದ್ದ ವೇಳೆಯಲ್ಲಿ ಗಾಲವ ಮುನಿಯ ನೀರಡಿಕೆಯನ್ನು ನೀಗಿದ ವೀರಭದ್ರಳೆಂಬ ಬಿಲ್ಲವ (ಬೈದ್ಯ) ಹುಡುಗಿಗೆ, ಅದಕ್ಕೆ ಪ್ರತಿಯಾಗಿ ಪುತ್ರವತಿಯಾಗುವಂತೆ ಮುನಿ ಹರಸಿದ ಫಲವಾಗಿ ಅವಿವಾಹಿತೆಯಾದ ಅವಳಿಗೆ ಧನ್ವಂತರಿ ಎಂಬ ಮಗನ ಜನನವಾಗುತ್ತದೆ. ಇವನೇ ಪ್ರಥಮ ಬೈದ್ಯನೆಂಬುದಾಗಿ ಈ ಐತಿಹ್ಯವು ಹೇಳುತ್ತದೆ. ಈ ಕಥೆಯನ್ನು ವಾಸ್ತವದ ನೆಲೆಯಿಂದ ವಿಶ್ಲೇಷಿಸುವುದಾದರೆ, ಉನ್ನತ ವರ್ಗದ ಬ್ರಾಹ್ಮಣನೊರ್ವ ಅವಿವಾಹಿತೆಯಾದ ಬಿಲ್ಲವ ಕನ್ಯೆ ವೀರಭದ್ರೆಯನ್ನು ಲೈಂಗಿಕವಾಗಿ ಬಳಸಿಕೊಂಡ ಫಲವಾಗಿ ಮಗಿವಿನ ಜನನವಾಗಿ, ಈ ಪ್ರಸಂಗಕ್ಕೆ ನೈತಿಕ ನೆಲೆಗಟ್ಟನ್ನು ತಂದುಕೊಡುವ ಸಲುವಾಗಿ ಇಂತಹ ಕಥೆಯೊಂದನ್ನು ರೂಪಿಸಿರಬಹುದು. ಇದು ಸಮಾಜದ ಉನ್ನತ ವರ್ಗದ ಮಂದಿ ಕೆಳವರ್ಗದ ಮಹಿಳೆಯರನ್ನು ಶೋಷಿಸುತ್ತಿದ್ದ ಒಂದು ಸಾಮಾನ್ಯ ರೀತಿಯಾಗಿದೆ. ಅಲ್ಲದೆ ಇಲ್ಲಿ ಪುತ್ರವತಿಯಾಗುವಂತೆ ಹರಸಲಾಗಿದೆಯೇ ಹೊರತು ಪುತ್ರಿವತಿಯಾಗುವಂತೆ ಅಲ್ಲ. ಇಂತಹ ಹಲವು ಕಥೆಗಳನ್ನು ನಮ್ಮ ಪುರಾಣಗಳು ಒಳಗೊಂಡಿದ್ದು, ಅವುಗಳ ಹಿನ್ನೆಲೆಯಲ್ಲೆಲ್ಲ ಇಂತಹ ಸ್ತ್ರೀಶೋಷಣೆಯ ಪ್ರಸಂಗಗಳನ್ನೇ ನಾವು ಕಲ್ಪಿಸಿಕೊಳ್ಳಬಹುದಾಗಿದೆ. ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಿಸಿ, ರಾಜವಂಶಗಳಿಗೆ ಸಂಬಂಧಿಸಿ, ಸಮುದಾಯಗಳಿಗೆ ಸಂಬಂಧಿಸಿ, ಕುಟಿಲ ರಾಜಕೀಯ ತಂತ್ರಗಳು, ಅನ್ಯಾಯ, ಅನಾಚಾರವನ್ನು ಮುಚ್ಚಿಡುವ ಉಪಾಯವಾಗಿ ಕೆಲವು ಐತಿಹ್ಯಗಳು ಕೆಲಸ ಮಾಡಿವೆ. ಪುರುಷರ ಇಂತಹ ಅನೈತಿಕ ನಡವಳಿಕೆಗೆ ಸಾಮಾಜಿಕ ಒಪ್ಪಿಗೆ ಹಾಗೂ ಮಾನ್ಯತೆಯನ್ನು ದೊರಕಿಸುವ ಸಲುವಾಗಿ ಪುರಾಣ ಕಥೆಗಳ ಹಲವು ಪ್ರಸಂಗಗಳು, ಉಪಕಥೆಗಳು ಇಂತಹ ಐತಿಹ್ಯಗಳನ್ನು ವ್ಯವಸ್ಥಿತವಾಗಿ ಸೃಷ್ಟಿಸಿವೆ. ಇಂತಹ ಸಂದರ್ಭದಲ್ಲಿ ಈ ಕಥೆಗಳು ವೈದಿಕ ಸಂಪ್ರದಾಯದ ಭಟ್ಟಂಗಿತನವನ್ನು ಪ್ರದರ್ಶಿಸುತ್ತವೆಯೇ ಹೊರತು ಶೋಷಿತ ವರ್ಗದ ನೋವನ್ನಲ್ಲ.

ತೀಯರ ಮೂಲದ ಕುರಿತು

ಚಿರಯ್ಕಲ್ ರಾಜವಂಶಕ್ಕೆ ಸೇರಿದ ವೀರನೊಬ್ಬನಿಂದ ತೀಯ ಜನಾಂಗದ ಹೆಣ್ಣಿನಲ್ಲಿ ಹುಟ್ಟಿದ ತೀಯರು ಮಲಬಾರಿನ ಮನ್ನನ್ನಾರ್ ರಾಜವಂಶದವರು ಎಂಬುದನ್ನು ಒಂದು ಐತಿಹಾಸಿಕ ದಾಖಲೆಯಲ್ಲಿ ಉಲ್ಲೇಖಿಸಿದರೆ, ಇನ್ನೊಂದರಲ್ಲಿ, ವಿಧವೆಯಾದ ನಂಬೂದಿರಿ ಹೆಣ್ಣೊಬ್ಬಳನ್ನು ಪರಶುರಾಮರು ತೀಯಾನೊಬ್ಬನಿಗೆ ವಿವಾಹ ಮಾಡಿಕೊಟ್ಟು ಎರುವಶಿ ಎಂಬಲ್ಲಿ ಕೋಟೆಯನ್ನು ಕಟ್ಟಿ ನೆಲೆ ನಿಲ್ಲಿಸಿದರು ಎಂದು ಉಲ್ಲೇಖಿಸಲಾಗಿದೆ. ಈ ಎರಡು ಕಥೆಗಳನ್ನು ಗಮನಿಸಿದಾಗ ಒಂದು ಬಹುಮುಖ್ಯವಾದ ಅಂಶ ನಮ್ಮ ಗಮನಸೆಳೆಯುತ್ತದೆ. ಅದೇನೆಂದರೆ, ಮೊದಲ ಕಥೆಯಲ್ಲಿ ಹೆಣ್ಣು ತೀಯ ಜನಾಂಗಕ್ಕೆ ಸೇರಿದರೆ, ಎರಡನೆಯ ಕಥೆಯಲ್ಲಿ ಗಂಡು ತೀಯ ಜನಾಂಗದವನಾಗಿದ್ದಾರೆ. ಅಂದರೆ, ಮೊದಲ ಕಥೆಗೆ ಪ್ರತಿಯಾಗಿ ಮತ್ತು ಪೂರಕವಾಗಿ ಎಂಬಂತೆ ಎರಡನೆಯ ಕಥೆ ಹುಟ್ಟಿಕೊಂಡಿದೆ ಎನಿಸುತ್ತದೆ. ಒಂದು ಕಾಲದಲ್ಲಿ ತೀಯರನ್ನು ಅಸ್ಪೃಶ್ಯರೆಂಬಂತೆ ಕಾಣುತ್ತಿದ್ದ ಸನ್ನಿವೇಶದಲ್ಲಿ ಅವರನ್ನು ರಾಜವಂಶದವರೆಂದು ಸ್ಥಾಪಿಸುವ ನೆಲೆಯಲ್ಲಿ ಮೊದಲ ಕಥೆ ಕೆಲಸ ಮಾಡಿದರೆ, ಇನ್ನೊಂದು ಕಥೆ ತೀಯನೊಬ್ಬ ಉತ್ತಮ ಕುಲದ ಹೆಣ್ಣನ್ನು ವಿವಾಹವಾಗಿ ಕೋಟೆ ಕಟ್ಟಿ ನೆಲೆಯಾಗುವುದು ಕೂಡ ಅವರನ್ನು ರಾಜರೆಂದು ಸ್ಥಾಪಿಸುವ ಜೊತೆಗೆ ಅವರನ್ನು ಶ್ರೇಣೀಕೃತ ವ್ಯವಸ್ಥೆಯನ್ನು ಉತ್ತಮ ಕುಲಕ್ಕೆ ಸೇರಿಸುವ ಪ್ರಯತ್ವನ್ನೂ ಪೌರಾಣಿಕ ಪಾತ್ರವಾದ ಪರಶುರಾಮದ ಸಹಾಯದಿಂದ ಮಾಡುತ್ತದೆ.* ಮೊದಲ ಕಥೆಯಲ್ಲಿ ಕೆಳವರ್ಗವೆಂದು ಪರಿಗಣಿತವಾಗಿದ್ದ ತೀಯ ಜನಾಂಗಕ್ಕೆ ಸೇರಿದ ಹೆಣ್ಣು ತನಗಿಂತ ಉತ್ತಮ ಕುಲದ ಗಂಡನ್ನು ವಿವಾಹವಾದರೆ, ಎರಡನೆಯ ಕಥೆಯಲ್ಲಿ ಹೆಣ್ಣು ಸಾಮಾಜಿಕವಾಗಿ ಉತ್ತಮ ಕುಲವಾದ ನಂಬೂದಿರಿ ಮನೆತನಕ್ಕೆ ಸೇರಿದ ವಿಧವೆಯಾಗಿದ್ದು, ಸಾಮಾಜಿಕವಾಗಿ ಕೆಳವರ್ಗದ ತೀಯ ಪುರುಷನನ್ನು ವಿವಾಹವಾಗಿದ್ದಾಳೆ ಎಂಬುದನ್ನೂ ಗಮನಿಸಬೇಕು. ಒಂದೆಡೆಯಲ್ಲಿ ಹೆಣ್ಣನ್ನು ಕುಲದ ನೆಲೆಯಿಂದ ಗಂಡಿಗಿಂತ ಕಡಿಮೆಯೆಂಬಂತೆ ಅಳೆದರೆ, ಇನ್ನೊಂದೆಡೆ ಅವಳನ್ನು ಸಾಮಾಜಿಕ ಗ್ರಹೀತವಾದ ಕನ್ಯತ್ವದ ನೆಲೆಯಿಂದ ಕೆಳಗಾದ ವಿಧವೆಯಾಗಿಸಿ ಇವೆರಡು ಸಂದರ್ಭಗಳನ್ನು ಸಮಾನವಾಗಿ ತೂಗಲು ಪ್ರಯತ್ನಿಸಲಾಗಿದೆ.

ಸಾಮಾಜಿಕ ಸ್ಥಾನಮಾನ

ಸಮಷ್ಟಿಯಿಂದ ಹಿಂದೂಗಳೇ ಆಗಿದ್ದ ಬ್ರಾಹ್ಮಣ, ಜೈನ, ಸಾರಸ್ವತ, ಗೌಡ ಸಾರಸ್ವತ, ಬಂಟ, ಮೊಗವೀರ, ಗಾಣಿಗ, ಕಲಾಲ, ಕುಡಬಿ, ಅಗಸ, ಮರಾಠಿ, ವಿಶ್ವಕರ್ಮ ಮೊದಲಾದ ಸಮುದಾಯದವರ ಜೊತೆಗೆ ಬಿಲ್ಲರಿಗೆ ಸಾಮಾಜಿಕ ಜೀವನದಲ್ಲಿ ಬಹಳಷ್ಟು ಅಂತರಗಳಿದ್ದವು. ಸಮಾಜದ ಮೇಲ್ವರ್ಗದ ಸಮುದಾಯವೆಂದು ಪರಿಗಣಿತರಾಗಿದ್ದ ಬ್ರಾಹ್ಮಣರು, ಜೈನರು, ಕೆಲವೆಡೆ ಬಂಟರೂ ಕೂಡ ಬಿಲ್ಲವರನ್ನು ತಮ್ಮಿಂದ ದೂರವಿಡುತ್ತಿದ್ದರು, ಅಸ್ಪೃಶ್ಯರಂತೆ ನೋಡುತ್ತಿದ್ದರು. ಅವರ ಮನೆ, ಮಠಗಳ ಒಳಗೆ ಬಿಲ್ಲವರಿಗೆ ಪ್ರವೇಶವಿರಲಿಲ್ಲ. ಶೂದ್ರ ವರ್ಗಕ್ಕೆ ಸೇರಿದ ಇತರ ಕೆಲವು ಜಾತಿಗಳ ಮಂದಿ ಕೂಡ ಬಿಲ್ಲವರ ಮನೆಯಲ್ಲಿ ಆಹಾರ ಸ್ವೀಕರಿಸುತ್ತಿರಲಿಲ್ಲ. ಇದು ಇಂದು ಪಟ್ಟಣ ಪ್ರದೇಶಗಳಲ್ಲಿ ಕಡಿಮೆಯಾಗಿರಬಹುದಾದರೂ ಹಳ್ಳಿಗಳಲ್ಲಿ ಹಲವಾರು ವಿಧಿನಿಷೇಧಗಳು ಜೀವಂತವಾಗಿದ್ದುಮ ಆಚರಣೆಯಲ್ಲಿವೆ.

ಬಂಟರು, ಬಿಲ್ಲವರು ಮತ್ತು ಮೊಗವೀರರಲ್ಲಿ ಸರಿಸುಮಾರು ಸಮಾನವಾದ ಮಾತೃಮಾಲೀಯ ಕುಟುಂಬ ವ್ಯವಸ್ಥೆ ಇತ್ತು ಎಂಬ ಕಾರಣಕ್ಕೆ ಅವರು ಪರಸ್ಪರರು ಅಕ್ಕ- ತಂಗಿಯರ ಮಕ್ಕಳು ಎಂಬುದಾಗಿ ಪಾಡ್ದನಗಳು ಉಲ್ಲೇಖಿಸುತ್ತವೆ. ಅಂದರೆ ಅವರ ತಾಯಂದಿರು ಒಂದೇ ತಾಯಿಯ ಮಕ್ಕಳು ಎಂಬುದನ್ನು ಇರು ಸೂಚಿಸುತ್ತದೆ. ಈ ವಿಚಾರದಲ್ಲಿ ಜನಪದರಲ್ಲಿ ನಂಬಿಕೆಯನ್ನು ಮೂಡಿಸುವ ಮತ್ತು ಸಮರ್ಥನೆಯನ್ನು ಒದಗಿಸುವ ಪ್ರಯತ್ನವಾಗಿ ಇಂತಹ ಪಾಡ್ದನಗಳ ಸೃಷ್ಟಿಯಾಗಿರಬಹುದು. ಇದರಲ್ಲಿ ಅವರನ್ನು ಅಕ್ಕ-ತಂಗಿಯರ ಮಕ್ಕಳು ಎಂದು

ಹೇಳಿರುವುದು ಗಮನಾರ್ಹ ಅಂಶವಾಗಿದೆ. ಇದು ಸಂಬಂಧದಲ್ಲಿ ಆತ್ಮೀಯತೆಯನ್ನು, ಸೌಹಾರ್ದತೆಯನ್ನು ತಂದುಕೊಡುವ ನೆಲೆಯಲ್ಲಿ ಹಾಗೂ ವೃತ್ತಿ ಹಂಚಿಕೆಯ ಪ್ರಕ್ರಿಯೆಯನ್ನು ಹೇಳುತ್ತ, ಆಯಾಯ ಜಾತಿಯವರಿಗೆ ದೊರಕಿದ ಭೌಗೋಳಿಕ ಪಾಲುದಾರಿಕೆ, ಅವರ ವೃತ್ತಿಯ ಕ್ಷೇತ್ರ ಮತ್ತು ಅವರ ಸಾಮರ್ಥ್ಯವನ್ನು ಇವು ಸೂಚಿಸುತ್ತಿವೆ ಇದಕ್ಕೆ ಅನುಗುಣವಾಗಿ ಆಯಾಯ ವೃತ್ತಿಗೆ ಸಾಮಾಜಿಕವಾಗಿ ಒಂದು ಸ್ಥಾನಮಾನವನ್ನು ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಎನಿಸುತ್ತದೆ. ಆ ಪಾಡ್ದನಗಳು ಹೀಗಿವೆ:

೧. ಮಲ್ಲ ಮಲ್ಲ ಒಕ್ಕೆಲಾಕುಲು ಪಟ್ಟನೇರೆ ಮೆಗ್ದಿ ಬಾಲೆಲೊ ಮಡಲೇರೆ ಪಲ್ದಿ ಬಾಲೆಲೊ
(ದೊಡ್ಡ ದೊಡ್ಡ ಬಂಟರು ಮೊಗವೀರರ ತಂಗಿಯ ಮಕ್ಕಳು, ಬಿಲ್ಲವರ ಅಕ್ಕನ ಮಕ್ಕಳು)

೨. ಆಜಿ ಮುಲ ಕಾಂಗ್ ತುತ್ಯೇರ್, ಮೂಜಿ ಮೂಲ ಮುನ್ನಿ ಬಿಡಿಯೇರ್
(ಆರು ಮೊಳ ಕಪ್ಪು ವಸ್ತ್ರ ಉಟ್ಟರು, ಮೂರು ಮೊಳ ದಾರ ಬಿಟ್ಟರು)

೩. ಕಡಲೇರ್ ಮಡಲೇರ್ ಪಾಲ್ ಪಾಲ್ ಕೇಂಡೆರ್ ಪಾಲ್ ಮಲ್ತೊಂಡೇರ್
(ಮೊಗವೀರರು ಮತ್ತು ಬಿಲ್ಲವರು ಪಾಲು ಪಾಲು ಕೇಳಿದರು, ಪಾಲು ಮಾಡಿಕೊಂಡರು)

೪. ಒಡಿದಾಂತಿ ಉಪ್ಪು ನೀರ ಕಡಲ ಕಂಡ ಮರಕಲೇರ್ ಪಾಲ್ ದೆತ್ತೇರ್
(ಹುಣಿ ಇಲ್ಲದ ಉಪ್ಪು ನೀರಿನ ಕಡಲೆಂಬ ಗದ್ದೆಯನ್ನು ಮೊಗವೀರರು ಪಾಲು ಪಡೆದರು)

೫. ಚಪ್ಪೆ ನೀರ ನೆಲದ ಕಂಡ ಬಾಗರೇರ್ ಪಾಲ್ ದೆತ್ತೇರ್
(ಸಪ್ಪೆ ನೀರಿನ ನೆಲದ ಗದ್ದೆಯನ್ನು ಬಂಟರು ಪಾಲು ಪಡೆದರು)

೬. ಕೆರೆತ ಬರಿತ ಚೀಪೆ ನೀರ ಮರನ ಕಲ ಬೆಂದೆರ್ ಮಾಡಲೆರಡೊ
(ಕೆರೆ ಬದಿಯ ಸಿಹಿ ನೀರಿನ ಮರಗಳ ಕೆಲಸ ಮಾಡಿದರು ಬಿಲ್ಲವರು)

೭. ಕಾಟು ಕಟ್ಟ್ಯೇರ್ ಕರ್ಬಾಸ್ ದೆತ್ತೇರ್, ಅಜಿ ಜೋಡು ಎರು ಕಟ್ಟ್ಯೇರ್, ಮೂಜಿ ಜೋಡು ಬೋರಿ ದೆತ್ತೈರ್
(ಕೋಣ ಕಟ್ಟಿದರು, ಹೋರಿ ತೆಗೆದುಕೊಂಡರು, ಆರು ಜೊತೆ ಕೋಣಗಳನ್ನು ಕಟ್ಟಿದರು, ಮೂರು ಜೊತೆ ಎತ್ತುಗಳನ್ನು ತೆಗೆದುಕೊಂಡರು)

ವೈದ್ಯ ವೃತ್ತಿಯನ್ನು ಮಾಡುತ್ತಿದ್ದ ಬಿಲ್ಲವರು ತಮ್ಮ ಕಲಸಕ್ಕೆ ಪ್ರತಿಫಲವಾಗಿ ಹಣದ ರೂಪದ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದರು. ಬದಲಾಗಿ, ಅದು ಚಿಕಿತ್ಸೆ ಪಡೆದವರಿಂದ ಊಟ-ಉಪಹಾರದ ಉಪಚಾರ ಮತ್ತು ಚಿಕ್ಕಪುಟ್ಟ ಉಡುಗೊರೆಗಳನ್ನು ಪಡೆಯುತ್ತಿದ್ದುದಕ್ಕೆ ಮಾತ್ರ ಸೀಮಿತವಾಗಿತ್ತು. ರೋಗನಿಧಾನಕ್ಕೆ ಸಂಬಂಧಿಸಿದ ಔಷಧಿ ತಯಾರಿಗೆ ಪ್ರಾಕೃತಿಕವಾದ ಸಸ್ಯಗಳು, ಕಂದಮೂಲಗಳನ್ನು ಬಳಸಿಕೊಳ್ಳುತ್ತಿದ್ದುದು ಮತ್ತು ತಮ್ಮ ಕಾರ್ಯವನ್ನು ದೇವರಿಗೆ ತಾವು ಮಾಡುವ ಸೇವೆ ಎಂದು ಪರಿಭಾವಿಸುತ್ತಿದ್ದುದು ಇದಕ್ಕೆ ಕಾರಣವಾಗಿದೆ. ಬಿಲ್ಲವರ ಪ್ರಥಮ ಮಹಿಳಾ ವೈದ್ಯೆಯಾಗಿ ಕೋಟಿ-ಚೆನ್ನಯರ ಕಥೆಯಲ್ಲಿ ಬರುವ ದೇಯಿ ವೈದ್ಯೆದಿಯು, ಪೆರುಮಲೆ ಬಲ್ಲಾಳನಿಗೆ ತಾನು ಮಾಡಿದ ಔಷಧೋಪಚಾರಕ್ಕೆ ಪ್ರತಿಯಾಗಿ ಉಡುಗೊರೆ ಮತ್ತು ಊಟೋಪಚಾರವನ್ನು ಮಾತ್ರ ಸ್ವೀಕರಿಸುತ್ತಾಳೆ ಎಂಬ ಸಂಗತಿ ಇದಕ್ಕೆ ನಿರ್ದಶನವಾಗಿದೆ.

ಕೋಟಿ ಚೆನ್ನಯರ ಕಾಲದಲ್ಲಿ ಬಿಲ್ಲವರನ್ನು ಅಸ್ಪೃಶ್ಯರಂತೆ ಕಾಣುತ್ತಿರಲಿಲ್ಲ. ಅಸ್ಪೃಶ್ಯತೆಯ ಆಚರಣೆ ಗಂಭೀರವಾಗಿರುತ್ತಿದ್ದಲ್ಲಿ ಪೆರುಮಲೆ ಬಲ್ಲಾಳನು ಗಾಯಗೊಂಡಾಗ ಅವನಿಗೆ ಸ್ತ್ರೀವೈದ್ಯ ದೇಯಿ ವೈದ್ಯೆದಿ ಚಿಕಿತ್ಸೆ ನೀಡಲಾಗುತ್ತಿರಲಿಲ್ಲ, ಅವನನ್ನು ಸ್ಪರ್ಶಿಸಿ ಔಷಧವನ್ನು ಲೇಪಿಸುವಂತಿರಲಿಲ್ಲ. ಹಾಗೆಯೇ ಜೈನಳಾಗಿದ್ದ ಫುಲ್ಲ ಪೆರ್ಗಡ್ತಿ ದಾರಿಯಲ್ಲಿ ತನಗೆದುರಾದ ಬಿಲ್ಲವ ಬಾಲಕಿ ಆಚಿಬಾಲೆಯನ್ನು, ದೇವ ಬಲ್ಲಾಳಲು ಕಾಂತಾಬಾರೆ-ಬೂದಾಬಾರೆಯರನ್ನು ಸ್ವೀಕರಿಸುತ್ತಿರಲಿಲ್ಲ ಎಂಬ ವಾದವಿದೆ. ಆದರೆ ಕೋಟಿ-ಚೆನ್ನಯರ ಪಾಡ್ದನವು ಬಿಲ್ಲವ ಸಮುದಾಯದ ಹಿರಿಮೆಯನ್ನು ಎತ್ತಿ ತೋರಿಸಲೆಂದೇ ಇರುವ ಪ್ರಾತಿನಿಧಿಕವಾದ ಪಾಡ್ದನವಾಗಿದೆ. ಇದು ಅವರ ಸ್ಥಾನಮಾನದ ಕುರಿತು ಹಲವು ವಿಷಮ ಅಂಶಗಳನ್ನು ಬೆಳಕಿಗೆ ಬರದಂತೆ ಮುಚ್ಚಿಟ್ಟಿರುವ ಸಾಧ್ಯತೆಗಳಿವೆ. ಇದರಲ್ಲಿ ಬರುವಂತೆ, ಅರಮನೆಯ ಆಳುಗಳಿಗೆ ದೇಯಿ ಬೈದ್ಯೆದಿ ಅಡುಗೆಗೆ ಸಾಮಗ್ರಿಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದು, ಅವರಿಗೆ ಕುಡಿಯಲು ಹಾಲು ಕೊಡುವುದು, ಇಂತಹ ಸಂದರ್ಭಗಳೆಲ್ಲ ಅವರು ಹೊರಗಿನವರಲ್ಲಿ ಆಹಾರ ತೆಗೆದುಕೊಳ್ಳುವ ಕ್ರಮವಿರಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿವೆ. ಅಂದಿನ ಸಮಾಜದಲ್ಲಿ ಇದ್ದ ಜಾತಿ/ ವರ್ಗ/ ಲಿಂಗಭೇದವನ್ನು ಇಡೀ ಕಥೆಯು ಒಳಗೊಂಡಿದೆ.

ಮಂಗಳೂರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಬಿಲ್ಲವ ಜಾತಿಯ ದೇವಿ ಬೈದ್ಯೆತಿ ಕಂಚಿನ ದೀಪಸ್ತಂಭವನ್ನು, ಪೊಳಲಿ ರಾಜರಾಜೇಶ್ಚರಿ ದೇವಾಲಯಕ್ಕೆ ಕಂಚಿನ ಹೊದಿಕೆಯ ದೀಪಸ್ತಂಭವನ್ನು ಪೊಳಲಿ ಸಾವಿರ ಸೀಮೆಯ ಬಿಲ್ಲವ ಸಮುದಾದವರು ಕೊಡುಗೆಗಾಗಿ ನೀಡಿದ್ದು (೧೬.೦೩.೧೯೫೮) ಮತ್ತು ಅಲ್ಲಿಯ ತನಕ ಬಿಲ್ಲವರಿಗೆ ಪ್ರವೇಶವಿರದಿದ್ದ ದೇವಾಲಯಕ್ಕೆ ಆ ಬಳಿಕ ಮುಕ್ತ ಪ್ರವೇಶ ಕಲ್ಪಿಸಲಾಯಿತು ಎಂಬ ಅಂಶ ಇಲ್ಲಿ ಮುಖ್ಯವಾಗುತ್ತದೆ. ಆರ್ಥಿಕವಾಗಿ ಅಥವಾ ಅಧಿಕಾರದ ನೆಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಯಾವುದೇ ತಾತಿ, ವರ್ಗದ ಮಂದಿ ಕ್ರಮೇಣ ಸಮಾಜದ ಮುಖ್ಯ ವಾಹಿಸಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಸಂಗತಿ ಇಲ್ಲಿ ಅನ್ವಯವಾಗುತ್ತದೆ.

ಬಿಲ್ಲವ ಹಾಗೂ ತೀಯ ಮಹಿಳೆಯರ ಉಡುಗೆತೊಡುಗೆಗಳು

ಬಿಲ್ಲವ ಮಹಿಳೆಯರು ನಿತ್ಯಕ್ಕೆ ಮತ್ತು ವಿಶೇಷ ದಿನಗಳಲ್ಲೂ ಸೀರೆ-ಕುಪ್ಪಸದ ಉಡುಪು ಧರಿಸುತ್ತಿದ್ದರೆ, ತೀಯ ಮಹಿಳೆಯರು ಪಟ್ಟೆಗಳಿರುವ ಬಣ್ಣದ ಬಟ್ಟೆಗಳನ್ನು ಸೊಂಟದ ಕಳಭಾಗದಲ್ಲಿ ಮಾತ್ರ ಧರಿಸುತ್ತಿದ್ದರು. ಸೊಂಟದ ಮೇಲ್ಬಾಗದಲ್ಲಿ ಯಾವುದೇ ಉಡುಪನ್ನು ಧರಿಸುವಂತಿರಲಿಲ್ಲ. ಮುಜುಗರಕ್ಕೊಳಗಾಗುತ್ತಿದ್ದ ಹೆಂಗಸರು ಕಾಲಕ್ರಮೇಣ ಎದೆ ಮುಚ್ಚುವಂತಹ ಉಡುಪು ಧರಿಸುವ ಧೈರ್ಯ ತೋರಿದಾಗ, ಮೇಲ್ವರ್ಗದ ಜಮೀನ್ದಾರೀ ಗಂಡಸರು ಮೂಮೇಲೆ ಕೈ ಹಾಕಿ ಅದನ್ನು ಎಳೆದು ಹಾಕುತ್ತಿದ್ದರು. ಮುಂದೆ ಸುಧೀರ್ಘ ಕಾಲದ ಬಳಿಕ ಈ ಕ್ರಮ ಹೋಗಿ ಅವರೂ ಮೈಮುಚ್ಚುವಂತೆ ಬಟ್ಟೆ ಹಾಕಿಕೊಳ್ಳಲು ಆರಂಭವಾಯಿತು. ಇವರು ನಿತ್ಯಕ್ಕೆ ಕುಪ್ಪಸದೊಂದಿಗೆ ಲುಂಗಿಯನ್ನು (ಪ್ರಾದೇಶಿಕವಾಗಿ ಮಲೆಯಾಳದ ಉಡುಪಿನ ಶೈಲಿಯ ಪ್ರಭಾವ) ಮತ್ತು ವಿಶೇಷ ದಿನಗಳಲ್ಲಿ ಮಾತ್ರ ಸೀರೆ-ಕುಪ್ಪಸ ಧರಿಸುವ ಕ್ರಮವಿದೆ.

ತಲೆಯ ಮಧ್ಯೆ ಬವುತಲ (ಬೈತಲೆ) ತೆಗೆದು ತಲೆ ಬಾಚುವ ತೀಯ ಮಹಿಳೆಯರು ಕಿವಿಕೆ ಕುಡಕ, ಗಿಳಿಂಡೆವಾಲ, ಬುಗುಡಿ ಸರಪಳಿ, ಮುತ್ತಿನ ಕೊಪ್ಪ, ಸರಪಳಿ, ಜೋಡುವ ಸರಪಳಿ, ತಾರ್ ಮತ್ತು ಲವಂಗದ ಕಡ್ಡಿ ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರೆ, ಮೂಗಿಗೆ ಮೂಗುತಿ ಮತ್ತು ಬುಲಾಕು ಧರಿಸುತ್ತಿದ್ದರು. ವೃದ್ದ ಹೆಂಗಸರು ಕಿವಿಗೆ ವಾಲ (ಕಿವಿಯೋಲೆ) ಧರಿಸುತ್ತಿದ್ದರು. ಕೈಯ ತೋಳಿಗೆ ದಂಡಮಣಿಯನ್ನು ತೊಡುತ್ತಿದ್ದರು. ಕೈಗೆ ಕಡಗ ತೊಡುತ್ತಿದ್ದು, ಬರಿಕೈಯಲ್ಲಿ ಇರುವಂತಿರಲಿಲ್ಲ. ಒಂದಾದರೂ ಬಳೆ ತೊಡಬೇಕಿತ್ತು. ತಲೆಯ ನಡುಭಾಗದಲ್ಲಿ ಸೊಡಿ ಕಟ್ಟಿ, ಅದಕ್ಕೆ ತಿರುಪುಂಡೆ, ಕೇದಗೆ, ಗುಲಾಬಿ, ಸೇವಂತಿಗೆ, ಜಡಪಲ, ಸುಣ್ಣಮಲ್ಲಿಗೆಯ ಮೊಗ್ಗು ಮೊದಲಾದ ಹೂವುಗಳನ್ನು ಧರಿಸುತ್ತಿದ್ದರು. ನೆತ್ತಿಗೆ ತಲೆ ಸಿಂಗಾರ (ಮುಂದಲೆ), ಸೊಂಟಕ್ಕೆ ಸೊಂಟಪಟ್ಟಿ, ಕಾಲಿಗೆ ಕಾಲ್‌ಸರಪಳಿ, ಕೈಗೆ ವಂಕಿ, ಪಾಳ್, ಒತ್ತು, ಒಡ್ಡಿ, ಉಂಗಿಲ (ಉಂಗುರ), ಕಾಲಿನ ಎರಡನೆಯ ಬೆರಳಿಗೆ ಕಾಲುಂಗುರ, ಮೂರನೆಯ ಬೆರಳಿಗೆ ಲಿಂಬಾ ಧರಿಸುತ್ತಿದ್ದರು. ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಹಿಂದೆ ಅವರಲ್ಲಿ ವಿವಾಹಿತ ಸ್ತ್ರೀಯರು ಕರಿಮಣಿ ಧರಿಸುವ ಕ್ರಮವಿರಲಿಲ್ಲ. ಕ್ರಮೇಣ ಆಚಾರ ವಿಚಾರಗಳಲ್ಲಿ ಹಲವು ಬದಲಾವಣೆಗಳಾದಂತೆ, ಹಳದಿ ದಾರಕ್ಕೆ ತಾಳಿ ಎಂದು ಕರೆಯುವ ಎಲೆಯಾಕಾರದ ಚಿನ್ನದ ಪದಕವನ್ನು ಸೇರಿಸಿ ಮಾಡಿದ ಮಂಗಲಸೂತ್ರವನ್ನು ಧರಿಸುವ ಕ್ರಮ ಬಂತು. ಸಿರಿವಂತರು ತಮ್ಮ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಅವರ ಜನಾಂಗವು ಮುಚ್ಚುವಂತಹ ಚಿನ್ನದ ಚಿಕ್ಕಿಯನ್ನು ಮಾಡಿಸಿ ಹಾಕುತ್ತಿದ್ದರು.

ಬಿಲ್ಲವರ ಮಹಿಳೆಯರ ಸ್ಥಿತಿಗತಿ

ಸಂಬಂಧಿಸಿದ ಸಾಹಿತ್ಯದಲ್ಲೂ ಕೂಡ ಬಿಲ್ಲವ ಮಹಿಳೆಯರೇ ಆಗಲಿ ತೀಯ ಮಹಿಳೆಯರೇ ಆಗಲೀ ಅವರೆಲ್ಲರೂ ಸಾಂಪ್ರದಾಯಿಕವಾದ ಸ್ತ್ರೀಸಂಬಂಧಿ ಮೌಲ್ಯಗಳ ಪ್ರತಿನಿಧಿಗಳಾಗಿ, ಸಮಾಜದಲ್ಲಿ ರೂಢಿಗತವಾಗಿರುವ ಮುತ್ತೈದೆತನದ ನಿಯಮಗಳನ್ನು ಪಾಲನೆ ಮಾಡುವ ಸಿದ್ಧ ಮಾದರಿಯ ಹೆಣ್ಣುಗಳಾಗಿ ಚಿತ್ರಿತರಾಗಿದ್ದಾರೆ.

 

ಸಾಹಿತ್ಯದಲ್ಲಿ ಮಹಿಳೆಯ ಪ್ರತಿನಿಧೀಕರಣ (ಪಾಡ್ದನಗಳಲ್ಲಿ)

ಕೋಟಿಚೆನ್ನಯ ಪಾಡ್ದನದ ಮೂಲಕ ಅನಾವರಣಗೊಳ್ಳುವ ದೇಯಿ ಬೈದ್ಯೆತಿ:

ಪಿಜನಾಕ ಹಾಗೂ ಓಪೆತ್ತಿ ಮರ್ಮರ್ ಬ್ರಾಹ್ಮಣ ದಂಪತಿಗಳು. ದೇವಿ ಬೈದ್ಯೆತಿಯ ಪಾಲಕರು. ಕೀಂಜವ ಪಕ್ಷಿ ದಂಪತಿಗಳ ಮೊಟ್ಟೆ ಲಿಂಬೆಯಾಗಿ ಪರಿವರ್ತನೆಯಾಗಿ ಅದರಿಂದ ಸುವರ್ಣ ಕೇದಿಗೆ ಅಥವಾ ದೇವಿ ಬೈದ್ಯೆತಿಯ ಜನನವಾಯಿತೆಂಬ ಉಲ್ಲೇಖವು ಅವಳ ಜನನಕ್ಕೆ ಮೇಲರಿಮೆಯನ್ನು ಕೊಡುವುದಾಗಿದೆ. (ಬಿಲ್ಲವರ ಸಮುದಾಯದ ವೀರರೆಂದು ಖ್ಯಾತರಾದ ಕೋಟಿ-ಚೆನ್ನಯರ ಜನನಕ್ಕೆ ಕಾರಣಳಾಗುವ ಆಕೆಯನ್ನು ಹೀಗೆ ಚಿತ್ರಿಸಲಾಗಿದೆ). ಮಕ್ಕಳಿಲ್ಲದ ಓಪೆತ್ತಿ ಮರ್ಮರ್ ಅವಳನ್ನು ಸಾಕಿದವರೆಂದು ಪಾಡ್ದನಗಳು ಹೇಳುತ್ತವೆ. ಮದುವೆಗೆ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರ ಪಾವಿತ್ಯ್ರವನ್ನು  ಕಾಪಾಡುವ ರೀತಿ ಇದು. ಆ ಮೂಲಕ ತಮಗೊದಗಬಹುದಾದ ಸಾಮಾಜಿಕ ಅಪಮಾನಗಳಿಂದ ಪಾರಾಗಲು ಅಂದಿನ ಪುರುಷಪ್ರಧಾನ ಸಮಾಜವು ಮಾಡಿದ ಕಟ್ಟುಪಾಡಿದು. ಹೀಗೆ ಮಾಡಿದ ಬೇರೆ ಉಲ್ಲೇಖಗಳು ಸಿಗದಾದರೂ ಗಂಡು ತಾನು ಮದುವೆಯಾಗುವ ಹೆಣ್ಣಿನ ಚಾರಿತ್ಯ್ರವನ್ನು ಶಂಕಿಸಲು ಆಸ್ಪದ ಕೊಡದಿರಲು ಹೀಗೆ ಮಾಡುತ್ತಿದ್ದಿರಬೇಕೆಂಬ ಪುರುಷಪ್ರಧಾನ ನೆಲೆಯದ್ದೇ ಆದ ವಾದವೂ ಇದೆ. ಮದುವೆಗಿಂತ ಮೊದಲಿನ ಪ್ರತಿ ಋತುಸ್ರಾವವು ನಿರರ್ಥಕವಾಯಿತೆಂದು ಭಾವಿಸಿ, ಅದಕ್ಕೆ ಪ್ರಾಯಶ್ಚಿತ ರೂಪದಲ್ಲಿ ಪ್ರತಿಋತುಸ್ರಾವಕ್ಕೆ ಒಂದೊಂದು ಗೋವನ್ನು ದಾನರೂಪದಲ್ಲಿ ನೀಡಬೇಕಾಗಿತ್ತು. ಅಂದು ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ ಅವರು ಈ ಉಪಾಯವನ್ನು ಕಂಡುಕೊಂಡಿರಬೇಕು. ಅಂತಹ ಸಂಪ್ರದಾಯವೊಂದು ಇಲ್ಲದಿದ್ದ ಪಕ್ಷದ್ಲಲ್ಲಿ ಅದರ ಉಲ್ಲೇಖ ಕಾಣಸಿಗುತ್ತಲೇ ಇರಲಿಲ್ಲ ಎನ್ನಬಹುದು.

ಹೀಗೆ ಕಾಡುಪಾಲಾದ ಸುವರ್ಣ ಕೇದಿಗೆ ತನ್ನ ಹಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಲು ಸಾಯನಬೈದ್ಯನನ್ನು ಕೇಳಿಕೊಂಡಾಗ, ಆತ ತನ್ನ ದಣಿ ಎಲ್ಲೂರಬ್ಬೆಯಲ್ಲಿ ಕೇಳಿ ಬಿಚ್ಚುವೆನೆಂದು ಹೇಳುತ್ತಾನೆ. ತನ್ನ ಒಡತಿಯಲ್ಲಿ ವಿಷಯ ತಿಳಿಸಿದಾಗ ಅವರು ಅವಳನ್ನು ರಕ್ಷಿಸುವಂತೆ ಅವನಿಗೆ ತಿಳಿಸಿ ಅವಳಿಗೆ ದೇಯಿ ಬೈದ್ಯೆದಿ ಎಂದು ಹೆಸರಿಡುತ್ತಾರೆ (ಸಾಯನ ಬೈದ್ಯನಿಗೆ ಸಿಕ್ಕಿದ್ದರಿಂದ ಆ ಸಂದರ್ಭದಲ್ಲಿ ತಕ್ಷಣಕ್ಕೆ ಅವನೇ ಅವಳ ಪೋಷಕನಾಗಲಿ ಎಂಬ ಆಲೋಚನೆ ಹೊಳೆದುದರಿಂದ ಎಲ್ಲೂರಬ್ಬೆ ಆಕೆಗೆ ಅವನ ಉಪನಾಮವನ್ನೇ ಇಟ್ಟಿರಬೇಕು) ಎ. ಮ್ಯಾನರ್ ಅವರ ಪಾಡ್ದನೊಳು ಕೃತಿಯ ದೇಯಿ ಬೈದ್ಯೆದಿ ಪಾಡ್ದನದಲ್ಲಿ ಪೆರುಮಲೆ ಬಲ್ಲಾಳನಲ್ಲಿ ಕೇಳುತ್ತಾನೆಂದಿದೆ. ಬಲ್ಲಾಳನು ಅವಳಿಗೆ ಹೆಸರಿಟ್ಟಿರುವಂತೆ ಕಾಣಿಸುವುದಿಲ್ಲ. ಬೇರೆ ಬೇರೆ ಪಾಡ್ದನಗಳಲ್ಲಿ ಇದೇ ಕಥೆ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಹೊಂದಿದೆ.

ದೇಯಿ ಬ್ರಾಹ್ಮಣನಾದ ಪಿಜನಾಕನಿಗೆ ಬಿಲ್ಲವ ಹೆಣ್ಣಿನಲ್ಲಿ ಜನಿಸಿದವಳಿರಬಹುದು, ಮಕ್ಕಳಿಲ್ಲದ ಕಾರಣಕ್ಕೆ ಅವಳನ್ನು ತಮ್ಮ ಮಗಳಾಗಿ ಆತನ ಹೆಂಡತಿಯೂ ಸ್ವೀಕರಿಸಲು ಒಪ್ಪಿರಬಹುದು, ಮುಂದೆ ಮೈನೆರೆಯುವ ಮೊದಲೇ ವಿವಾಹವಾಗಬೇಕಿದ್ದ ಆಗಿನ ಕಾಲದ ಸಂಪ್ರದಾಯದಂತೆ ಆಗದಿದ್ದ ಕಾರಣ ಅವಳನ್ನು ಕಟ್ಟು ಕಟ್ಟಿ ಕಾಡಿನಲ್ಲಿ ಬೈನೆ ಮರದಡಿಯಲ್ಲಿ ಬಿಟ್ಟಿರಬೇಕು. ಬ್ರಾಹ್ಮಣ ಪಿಜನಾಕನಿಗೆ ಗಂಡಸಾದ ಕಾರಣಕ್ಕೆ ಮತ್ತು ಆತನ ಪತ್ನಿ ಓಪೆತ್ತಿ ಮರ್ಮರ್‌ಳಿಗೆ ಸುವರ್ಣ ಕೇದಿಗೆ ತಾನು ಹೆಚ್ಚ ಮಗಳಲ್ಲದ ಕಾರಣಕ್ಕೆ ಅಂಥ ವ್ಯಾಮೋಹವೇನೂ ಇದ್ದಿರಲಾರದು. ಬೈನೆ ಮರವನ್ನೇರಿದ ವ್ಯಕ್ತಿ (ಸಾಯನ ಬೈದ್ಯ) ಯನ್ನು ಕಂಡೇ ಆತ ಮರದಿಂದ ಇಳಿಯುವ ವೇಳೆಗೆ ಅವಳನ್ನು ಕಂಡು ಅವನಾದರೂ ರಕ್ಷಿಸಿಯಾನು ಎಂಬ ಆಲೋಚನೆಯಿಂದ ಆ ಮರದಡಿಯಲ್ಲಿ ಬಿಟ್ಟಿರಬಹುದು ಅಥವಾ ಅವಳನ್ನು ಸಾಯನನ ತಂದೆ – ತಾಯಿಯರಿಂದ ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಗಳು ದತ್ತು ತೆಗೆದುಕೊಂಡಿರಬಹುದು. ಹಾಗಾಗಿ ಅವಳು ಸಾಯನ ಬೈದ್ಯನ ಸ್ವಂತ ತಂಗಿ ಎಂದೆಲ್ಲಾ ಸ್ಥಾಪಿಸುವ ವಾದಗಳು ಇವೆಯಾದರೂ ಅದನ್ನು  ಸತ್ಯವೆಂದು ದೃಢವಾಗಿ ನಂಬುವಂತಿಲ್ಲ. ಊಜೆಯ ಮೇರೆಗೆ ಕಟ್ಟಿದ ಕಥೆ ಅದು.

ದೇಯಿ ಬೈದ್ಯೆದಿಯ ತಂದೆ-ತಾಯಿ ಹಾಗೂ ಒಡಹುಟ್ಟಿದವರ ಕುರಿತು ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಹೇಳಲಾಗುವ ಇನ್ನೊಂದು ಬಗೆಯ ವಿವರವೆಂದರೆ, ಬಿಲ್ಲವ ದಂಪತಿಗಳಿಗೆ ಹುಟ್ಟಿದ ದೇಯಿಗೆ ಸಾಯನನೆಂಬ ಅಣ್ಣ, ದೇವಿ ಎಂಬ ಅಕ್ಕ ಇದ್ದರು. ಸಹೋದರಿಯಾದ ದೇವಿ ಅಕಾಲದಲ್ಲಿ ಕಾಲವಶಳಾಗುತ್ತಾಳೆ. ದೇಯಿ ಬೈದ್ಯೆದಿಯ ಮಕ್ಕಳಾದ ಕೋಟಿ-ಚೆನ್ನಯರ ಸಹೋದರಿಯೆಂದು ಉಲ್ಲೇಖಿತಳಾದ ಕಿನ್ನಿದಾರು ಅವರ ಮಗಳೇ ಆಗಿರಬೇಕು.

ಬಿಲ್ಲವ ದಂಪತಿಗಳು

ಸಾಯನ ಬೈದ್ಯ

ದೇವಿ- ಪತಿ

ದೇಯಿ ಬೈದ್ಯೆದಿ -ಕಾಂತಣ್ಣ ಬೈದ್ಯ

ಕಿನ್ನಿದಾರು (ಮಗಳು)

ಕೋಟಿ-ಚೆನ್ನಯ್ಯ

 

ದೇಯಿ ಬೈದ್ಯೆದಿಯ ಹೆರಿಗೆ ನೋವಿಸ ಸಂದರ್ಭದಲ್ಲಿ ಅವಳು ತನ್ನ ಮರಣವು ಸನ್ನಿಹಿತವಾಗಿದೆ ಎಂದು ಮುಂಚಿತವಾಗಿ ತಿಳಿದುಕೊಂಡವಳಂತೆ ವರ್ತಿಸುವುದು ಅವಳಿಗೆ ದೈವಿಕವಾದ ಶ್ರೇಷ್ಠತೆಯನ್ನೂ ಅವಳಿಗೆ ಹುಟ್ಟುವ ಮಕ್ಕಳಾದ ಕೋಟಿ-ಚೆನ್ನಯರನ್ನು ಅಲೌಕಿಕ ವೀರರೆಂಬಂತೆ ಚಿತ್ರಿಸಲು ಪೂರ್ವ ತಯಾರಿಯನ್ನೂ ಮಾಡಿಕೊಳ್ಳುವುದಾಗಿದೆ. ಮುಖ್ಖು ತಾಗಿ ತನ್ನ ಕಾಲಿಗೆ ಆದ ಗಾಯಕ್ಕೆ ಚಿಕಿತ್ಸೆ ಕೊಡಿಸಲು ದೇಯಿ ಬೈದ್ಯೆತಿಯನ್ನು ಅರಮನೆಗೆ ಕರೆಸುವ ಪೆರುಮಲೆ ಬಲ್ಲಾಳನು ತುಂಬು ಗರ್ಭಿಣಿಯಾದ ಅವಳಿಗಾಗಿ ರಾಜದಂಡಿಗೆಯನ್ನು ಕಳುಹಿಸುತ್ತಾನೆ. ಆದರೆ ಅವಳು ರಾಜ ರಾಣಿಯರು ಕುಳಿತುಕೊಳ್ಳುವ ದಂಡಿಗೆಯನ್ನು ಬಿಲ್ಲವ ಹೆಣ್ಣಾದ ತಾನು ಏರಲಾರೆನೆಂದು ನಿರಾಕರಿಸುತ್ತಾಳೆ. ಹಾಗೊಮ್ಮೆ ಏರಿದರೆ ಜನ ಏನೆಂದಾರು? ಅವಿವೇಕಿ, ಗಂಡುಬೀರಿ ಎಂದು ದೂಷಿಸಲಾರರೇ? ಅರಸನ ಮನೆಯಲ್ಲಿ ತನ್ನ ಹೆರಿಗೆಯಾಗುವುದಕ್ಕೆ ಒಪ್ಪದ ಅವಳು ತನ್ನ ಹೆಸರು ಅವರದರೊಂದಿಗೆ ಥಳಕು ಹಾಕಿಕೊಂಡು ಕೆಟ್ಟೀತು ಎಂಬುದು ಹಿಂಜರಿಯುವಲ್ಲಿ ಆಕೆಯ ಸಾಂಪ್ರದಾಯಿಕ ನೆಲೆಯಲ್ಲಿ ತನ್ನ ಹೆಣ್ತನದ ಘನತೆ, ಗೌರವಗಳಿಗೆ ಕುಂದು ಎಂದು ಭಾವಿಸಿದ್ದಾಳೆ. ಸಾಂಸಾರಿಕ ನೆಲೆಯಲ್ಲಿ ಸಂಬಂಧಪಡದಿದ್ದರೂ, ವ್ಯಕ್ತಿಯೋರ್ವಸ ಸಾಮಾಜಿಕ ನೆಲೆಯಲ್ಲಿ ಉನ್ನತ ಸ್ಥಾನಮಾನದಲ್ಲಿದ್ದರೆ, ಅವರೊಂದಿಗೆ ಗೌರವಯುತವಾಗಿ ವ್ಯವಹರಿಸಬೇಕೆಂಬ ಎಚ್ಚರ ಮತ್ತು ಸಂಸ್ಕಾರ ದೇಯಿ ಬೈದ್ಯದಿಯಲ್ಲಿ ಅಂತರ್ಗವಾಗಿದೆ. ಇದು ಪೆರುಮಲೆ ಬಲ್ಲಾಳನ ಕಡೆಯಿಂದ ಬಂದ ರಾಜಪ್ರತಿನಿಧಿಯನ್ನು ಆಧರಿಸುವಲ್ಲಿ ಮತ್ತು ಅನಂತರದಲ್ಲಿ ದೇಯಿ ಬೈದ್ಯದಿ ಅರಮನೆಗೆ ಹೋಗುವ ವೇಳೆಯಲ್ಲಿ ಪಾಲಿಸುವ ಸಾಂಪ್ರದಾಯಿಕ ನಡವಳಿಕೆಯಲ್ಲಿ ವ್ಯಕ್ತವಾಗಿದೆ. ತೆಂಗಿನಕಾಯಿ ಮತ್ತು ಸೌತೆಕಾಯಿಯೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಅದನ್ನು ಗೌರವಿಸಿದ ಆಕೆ ಮುದ್ದಿನ ಕಟ್ಟನ್ನು ಅದರಲ್ಲಿರಿಸಿ ಪಡುಮಲೆಗೆ ಹೊಡುವಾಗ ಮುಂದಿನಿಂದ ರಾಜಸತ್ತಿಗೆ ಹೋಗಬೇಕೆಂದೂ ಅದರ ಹಿಂದೆ ದಂಡಿಗೆ ಇರಬೇಕೆಂದೂ ಅದರ ಹಿಂದಿನಿಂದ ಗಂಡ ಕಾಂತಣ್ಣ ಅವರ ಹಿಂದೆ ತಾನು ತನ್ನ ಹಿಂದೆ ಅಣ್ಣ ಸಾಯನ ಬೈದ್ಯ ಬರಬೇಕೆಂದು ಹೇಳುವುದು ಇದಕ್ಕೆ ಒಂದು ನಿದರ್ಶನವಾಗಿದೆ.ಸ ಹರಯದ ಹೆಣ್ಣೊಬ್ಬಳು ಪರಕೀಯರಲ್ಲಿಗೆ ಹೋಗುವಾಗ ತನ್ನವರ ರಕ್ಷಣೆಲ್ಲಿ ಹೋಗಬೇಕೆಂಬ ಆಲೋಚನೆ ಅಂದಿನವರಲ್ಲಿ ಇದ್ದುದನ್ನು ಅವಳ ಈ ನಡವಳಿಕೆ ತಿಳಿಸುತ್ತದೆ.

ಕೋಟೆ-ಚೆನ್ನಯ, ಕಾಂತಾಬಾರೆ-ಬೂದಾಬಾರೆ, ಕಾನದ-ಕಟದ, ಕೋಡ್ದಬ್ಬು, ಕೊರಗತನಿಯ ಮೊದಲಾದ ವೀರರ ಹುಟ್ಟಿನ ಹಿಂದೆ ಒಡೆಯನ ಅಂಗಳದಲ್ಲಿ ದುಡಿಯುವ ಕೆಳವರ್ಗದ ಹೆಣ್ಣುಗಳ ಮೇಲೆ ನಡೆದಿರಬಹುದಾದ ಲೈಂಗಿಕ ಶೋಷಣೆಯನ್ನು ಮುಚ್ಚಲು ಅವರ ಹುಟ್ಟಿಗೆ “ಹೊಳೆನೀರು” ಕಾರಣ “ಬಾವಿ ನೀರು” ಕಾರಣವೆಂಬ ಅವಾಸ್ತವಿಕ ನೆಪಗಳನ್ನು ಬಳಸಿಕೊಳ್ಳಲಾಗಿದೆ. ಅಷ್ಟೊಂದು ಗೌರವಪೂರ್ವಕವಾಗಿ ಕರೆತರಲಾದ ದೇಯಿ ಬೈದ್ಯೆದಿಯ ಮಕ್ಕಳಾದ ಕೋಟಿ-ಚೆನ್ನಯರು ತಮ್ಮ ತಾಯಿಗೆ ಅರಸನಿಂದ ಸಲ್ಲಬೇಕಾದ ಸೇಜವನ್ನು ಕೇಳಿದಾಗ ಅರಸನು “ನನ್ನೆರಡು ಉದ್ಯಾನವನಗಳಲ್ಲಿ ಒಂದನ್ನು ಕೇಳಿದ ನೀವು ಮುಂದೆ ನನ್ನ ರಾಣಿಯರಲ್ಲಿ ಒಬ್ಬಳನ್ನು ಕೇಳಬಹುದು” ಎನ್ನುವ ಮಾತು ಸಂಬಂಧಕ್ಕೆ ಬೆಲೆ ಕೊಡದೆ, ಹಣ್ಣನ್ನು ಭೋಗದ ವಸ್ತುವಿನಂತೆ ನೋಡುತ್ತಿದ್ದ ರೀತಿಗೆ ಉದಾಹರಣೆಯಾಗಿದೆ. ಕೋಟಿ-ಚೆನ್ನಯರನ್ನು ಅವರ ತಾಯಿಯ ಮರಣಾನಂತರ ಸಾಕಿ ಬೆಳೆಸಿದ ಪೆರುಮಲೆ ಬಲ್ಲಾಳನ ರಾಣಿಯರ ಕುರಿತು, ಕೋಟಿ-ಚೆನ್ನಯ ಮತ್ತು ರಾಣಿಯರ ನಡುವಿನ ತಾಯಿ-ಮಕ್ಕಳ ಸಂಬಂಧವನ್ನು ಲಘುವಾದ ಮಾತುಗಳಿಂತ ಕೀಳುಮಟ್ಟಕ್ಕೆ ಇಳಿಸುವ ಪೆರುಮಲೆ ಬಲ್ಲಾಳನು ರಾಜಸತ್ತೆಯ, ಆ ಮೂಲಕ ಪುರುಷಪ್ರಧಾನ ಆಲೋಚನೆಗಳ ಪ್ರತೀಕವಾಗಿದ್ದಾನೆ.