ಸ್ವಚ್ಚ ಬಿಳಿಯ ಗೆಡ್ಡೆ. ಮುಟ್ಟಿದರೆ ಸಾಕು ಕೈಯೆಲ್ಲ ವಾಸನೆ. ನೋಡಲು ಒಂದೇ ಗೆಡ್ಡೆಯಾದರೂ ಒಳಗೆ ಹತ್ತಾರು ಹಿಲಕು. ಈಗ ತಿಳೀತಾ? ಇದೆಲ್ಲ ಯಾವುದರ ಬಗ್ಗೆ ಅಂತ. ನಿಮ್ಮ ಊಹೆ ಸರಿಯಾಗಿಯೇ ಇದೆ. ಅದೇ ಬೆಳ್ಳುಳ್ಳಿ. ಸಂಸ್ಕೃತದಲ್ಲಿ ‘ಲಸೂನ’ ಇಂಗ್ಲೀಷಿನಲ್ಲಿ ‘ಗಾರ್ಲಿಕ್’ ಎಂದೆಲ್ಲ ಕರೆಸಿಕೊಳ್ಳುವ ಈ ಗೆಡ್ಡೆ ಆಹಾರದಲ್ಲಿ, ಔಷಧದಲ್ಲಿ, ಮಸಾಲೆಯಾಗಿ, ಸಂಬಾರವಾಗಿ ಉಪಯುಕ್ತ. ಕೆಲವರಿಗಂತೂ ಬೆಳ್ಳುಳ್ಳಿ ಇಲ್ಲದೆ ಅಡಿಗೆ ಮಾಡುವುದೇ ದುಸ್ತರ. ಇಂತಹ ಬಹು ಉಪಯೋಗಿ ಗೆಡ್ಡೆ  ಬೆಳೆಯುವುದು ಸುಲಭ. ಅತಿ ಮುಖ್ಯ ಸಂಬಾರಗಳಲ್ಲೊಂದಾದ ಬೆಳ್ಳುಳ್ಳಿ

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಹು ಬೇಡಿಕೆಯುಳ್ಳದ್ದು. ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗಾಗಿ ಮಾಡುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು.

ಪ್ರಪಂಚದಾದ್ಯಂತ ಇಷ್ಟ ಪಡುವ ಈ ಸುವಾಸಿತ ಸಂಬಾರದ ಸಸ್ಯ ಶಾಸ್ತ್ರೀಯ ಹೆಸರು ‘ಅಲ್ಲಿಯಂ ಸಟೈವಮ್ ಎಲ್.’   ಚೈನ ದಲ್ಲಿ ಹೆಚ್ಚು ಬೆಳೆಯಲ್ಪಡುತ್ತದೆ. ಕೆಲವು ದೇಶಗಳು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ನಮ್ಮ ದೇಶದ ಉತ್ಪಾದನೆ,ಮತ್ತು ಬೆಳೆಯುವ ಪ್ರದೇಶವನ್ನು ಗಮನಿಸಿದಾಗ ಮಧ್ಯ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಶೇ. ೩೫ ರಷ್ಟು ವಿಸ್ತೀರ್ಣದಲ್ಲಿ ಬೆಳ್ಳುಳ್ಳಿ ಬೆಳೆಯುತ್ತಾರೆ.  ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮತ್ತು ಕರ್ನಾಟಕ ಸಹ ಬೆಳ್ಳುಳ್ಳಿ ಬೆಳೆಯುವ ರಾಜ್ಯಗಳು.

ಎಲ್ಲ ದೇಶದ ಅಡಿಗೆಗಳಲ್ಲಿ ಇದರ ಉಪಯೋಗವಾದರೂ, ಮಾಡುವ ವಿಧಾನಗಳಿಂದಾಗಿ ಇದರ ವಾಸನೆಯಲ್ಲಿ ವ್ಯತ್ಯಾಸವಾಗುತ್ತದೆ. ಟೊಮೆಟೊ, ಈರುಳ್ಳಿ, ಶುಂಠಿಯೊಂದಿಗೆ ಒಂದು ರುಚಿಯಾದರೆ, ಗಾರ್ಲಿಕ್ ಬ್ರೆಡ್, ಟೋಸ್ಟ್ ಗಳ ರುಚಿಯೇ ಬೇರೆ. ವಗ್ಗರಣೆಗೆ ಬೆಳ್ಳುಳ್ಳಿ ಇಲ್ಲದಿದ್ದರೆ ಊಟವೇ ಅಪೂರ್ಣ ಎಂಬುದು ಹಲವರ ಅನಿಸಿಕೆ.

ಬೆಳ್ಳುಳ್ಳಿಯ ಒಳಗೆ ಹಲವಾರು ಎಸಳುಗಳಿರುತ್ತವೆ. ಚೆನ್ನಾಗಿ ಬಲಿತ ಗೆಡ್ಡೆಯ ಎಸಳುಗಳಲ್ಲಿ ಹಸಿರು ಮೊಳಕೆ ಕಾಣಿಸಿಕೊಂಡಾಗ ನಾಟಿಗೆ ಸೂಕ್ತ ಸಮಯ ಎಂದರ್ಥ. ತಂಪಾದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೀರು ಬಸಿದು ಹೋಗುವ ,  ಹೆಚ್ಚು ಸಾವಯವ ಪದಾರ್ಥವಿರುವ, ಫಲವತ್ತಾದ  ಮಣ್ಣು ಈ ಬೆಳೆಗೆ ತುಂಬ ಸೂಕ್ತ. ಹೆಚ್ಚು ಮಳೆ ಬರುವ ಪ್ರದೇಶ ಈ ಬೆಳೆಗೆ ಸೂಕ್ತವಲ್ಲ.

೧೫ಸೆಂ.ಮೀ. ಅಂತರದ ಸಾಲುಗಳು, ೮ಸೆಂ.ಮೀ. ಗೆ ಒಂದು ಹಿಲುಕಿನಂತೆ ನಾಟಿ ಮಾಡಬೇಕು. ಸಣ್ಣ ಸಣ್ಣ ಪಾತಿಗಳನ್ನು ಮಾಡುವುದು ಸೂಕ್ತ. ನೆಟ್ಟ ೪-೫ ವಾರಗಳ ನಂತರ ಮೇಲು ಗೊಬ್ಬರವಾಗಿ ಕಾಂಪೋಸ್ಟ್ ಕೊಡಬೇಕು. ೫-೬ದಿನಗಳಿಗೊಮ್ಮೆ ಅಥವ ವಾತಾವರಣಕ್ಕನುಗುಣವಾಗಿ ನೀರು ಕೊಡುವುದೊಳ್ಳೆಯದು. ಗೆಡ್ಡೆ ಬಲಿಯುವ ಸಮಯದಲ್ಲಿ  ಒಣ ವಾತಾವರಣವಿದ್ದರೆ ಇಳುವರಿ ಹೆಚ್ಚುವುದೆಂದು ತಿಳಿದು ಬಂದಿದೆ.

ಸ್ಥಳೀಯ ತಳಿಗಳು ಗಾತ್ರದಲ್ಲಿ ಸಣ್ಣಗಿದ್ದು, ೧೫-೨೦ ಎಸಳುಗಳಿರುತ್ತವೆ. ರಾಷ್ಟ್ರೀಯ ತೋಟಗಾರಿಕಾ ಸಂಸ್ಥೆ ಅಭಿವೃದ್ಧಿ ಪಡಿಸಿದ  ಸುಧಾರಿತ ತಳಿಯ ಗೆಡ್ಡೆಗಳು ಗಾತ್ರದಲ್ಲಿ ದಪ್ಪಗಿದ್ದು, ಅಚ್ಚ ಬಿಳಿ ಬಣ್ಣ ಹೊಂದಿರುತ್ತವೆ. ಬಹುತೇಕ ರಫ್ತು ಮಾರುಕಟ್ಟೆಗಾಗಿ ಬೆಳೆಯುವ ಈ ಬಿಳಿ ಬೆಳ್ಳುಳ್ಳಿ ಚಳಿಗಾಲಕ್ಕೆ ಸೂಕ್ತವಾದ ಬೆಳೆ.

ನುಸಿ ಹಾಗೂ ಶಿಲೀಂದ್ರ ರೋಗಗಳು ಈ ಬೆಳೆಯನ್ನು ಕಾಡುವುದುಂಟು. ಇದಕ್ಕೆ ಸಸ್ಯಜನ್ಯ ಕೀಟನಾಶಕಗಳನ್ನು ಸಿಂಪಡಿಸ ಬಹುದು. ೫-೬ ತಿಂಗಳಲ್ಲಿ ಗೆಡ್ಡೆಗಳು ಬಲಿತು ಕೊಯಿಲಿಗೆ ಸಿದ್ಧವಾಗುತ್ತವೆ. ಗಿಡದ ಎಲೆ ಕಾಂಡ ಒಣಗಿ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯಿಲಿಗೆ ಸೂಕ್ತ ಸಮಯ. ಕೊಯಿಲು ಮಾಡಿದ ಗೆಡ್ಡೆಗಳನ್ನು ಗಿಡದೊಂದಿಗೆ ಕಟ್ಟಿ ನೇತು ಹಾಕುವದು  ವಾಡಿಕೆ. ಒಣ ವಾತಾವರಣದಲ್ಲಿ ಹೆಚ್ಚು ಕಾಲ ಇರುತ್ತದೆ. ಮೊಳಕೆ ಬರದಂತೆ ನೋಡಿಕೊಳ್ಳ ಬೇಕು. ತುದಿಯ ಭಾಗವನ್ನು ಕತ್ತರಿಸದೇ ಇದ್ದರೆ ಹೆಚ್ಚು ಸಮಯ ಇಡ ಬಹುದು.

ಡೇಲಿಯ ಹೂವಿನ ಗಿಡಗಳ ಪಾತಿಯಲ್ಲಿ ಬೆಳ್ಳುಳ್ಳಿ ಗಿಡ ಹಾಕಿದರೆ ಹೂವಿನ ಗಿಡ ಆರೋಗ್ಯವಾಗಿ ಬೆಳೆಯುತ್ತವೆ. ಹಾಗಾಗಿ ಇದನ್ನು ಬಲೆ ಬೆಳೆ(ಟ್ರಾಪ್ ಕ್ರಾಪ್)ಯ ಗುಂಪಿಗೂ ಸೇರಿಸ ಬಹುದು.

ಬೆಳ್ಳುಳ್ಳಿ ಕಶಾಯ ಇತರೆ ಸಸ್ಯಗಳಿಗೆ ಬರುವ ರೋಗಗಳಿಗೆ ರಾಮಬಾಣ. ಬೆಳ್ಳುಳ್ಳಿ ಹಸಿರು ಮೆಣಸಿನಕಾಯಿ ಸೇರಿಸಿ ಮಾಡುವ  ಔಷಧಿ ಸಾವಯವ ಕೃಷಿಯಲ್ಲಿ ಹೆಸರು ಪಡೆದಿದೆ. ಗಿಡಗಳಲ್ಲಿ ಎಲೆಗಳು ಕೆಂಪಾದಾಗ, (ಲೀಫ್ ಬ್ಲೈಟ್) ಕಪ್ಪು ಮಸಿ ಮೆತ್ತಿಕೊಂಡಾಗ(ಶೂಟೀ ಮೌಲ್ಡ್)ಮತ್ತು ಶಿಲೀಂದ್ರ ರೋಗ ಬಂದಾಗ ಬೆಳ್ಳುಳ್ಳಿ ಕಶಾಯ ಸಿಂಪಡಣೆಯಿಂದ ಪರಿಹಾರ ದೊರೆಯುತ್ತದೆ.

ಪ್ರೋಟೀನ್, ವಿಟಮಿನ್ ಎ.ಬಿ ಸಿ ಸೇರಿದಂತೆ ಹಲವು ಪೌಷ್ಟಿಕಾಂಶ ಗಳಿವೆ.  ಮನೆ ಮದ್ದಿನಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಹಾಲು ಹೆಚ್ಚಾಗುವುದು ಕಂಡು ಬಂದಿದೆ. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಸಾಧಾರಣವಾಗಿ ಬರುವ ಕಾಲು ನೋವು ಕಮ್ಮಿಯಾಗುತ್ತದೆ. ಆಂಟಿಸೆಪ್ಟಿಕ್ ಆಗಿ ಉಪಯುಕ್ತ. ಕೊಲೆಸ್ಟರೋಲ್ ಜಾಸ್ತಿಯಾಗಿದ್ದಾಗ ಬೆಳ್ಳುಳ್ಳಿಯುಕ್ತ ಮಾತ್ರೆಗಳ ಸೇವನೆ ಹಿತಕರ. ಬೆಳ್ಳುಳ್ಳಿಯ ನಾಲಕ್ಕು ಹಿಲಕು, ಎಂಟರಿಂದ ಹತ್ತು ದ್ರಾಕ್ಷಿ ಹಾಲಿನಲ್ಲಿ ಕುದಿಸಿ ಮಾಡಿದ ಕಶಾಯ ಆರೋಗ್ಯಕ್ಕೆ ಒಳ್ಳೆಯದು.ಆಯುರ್ವೇದದ ‘ಲಸೂನಾದಿ ವಟಿ’ ‘ಅಸಿಡಿಟಿ’ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಒಳ್ಳೆಯದು. ವಾತ ಸಂಬಂಧಿ ಕೀಲುನೋವು, ವಯಸ್ಸಾದಾಗ ಬರುವ ಸಂಧಿವಾತಗಳಿಗೂ ಬೆಳ್ಳುಳ್ಳಿ ಸೇವನೆ ಹಿತಕರ. ಚಳಿಗಾಲದಲ್ಲಿ ಕಾಲು ಸೇದುವುದು ಸಾಮಾನ್ಯ. ಎರೆಡು ಹಿಲುಕು ಬೆಳ್ಳುಳ್ಳಿ ಒಂದು ಬಾರಿ ಜಜ್ಜಿ ಹೆಬ್ಬೆರೆಳಿನ ತಳಭಾಗದಲ್ಲಿಟ್ಟು ಒಂದು ಬಟ್ಟೆ ಕಟ್ಟಿದರೆ ಕಾಲು ಸೇದು ಕಮ್ಮಿ ಆಗುತ್ತದೆ. ಬೆಳ್ಳುಳ್ಳಿ ಉಪಯೋಗಿಸಿ ತಯಾರಿಸಿದ ಹಲವು ಔಷಧಗಳು, ರಸಾಯನಗಳು ಮಾರುಕಟ್ಟೆಯಲ್ಲಿವೆ. ಆದರೆ ಅವನ್ನು ಸೇವಿಸುವ ಮೊದಲು  ವೈದ್ಯರ ಸೂಕ್ತ ಮಾರ್ಗದರ್ಶನ ಅಗತ್ಯ.

ಭಾರತವಲ್ಲದೆ ಇತರೆ ರಾಷ್ಟ್ರಗಳಲ್ಲೂ ಬೆಳ್ಳುಳ್ಳಿಯ ಬಳಕೆ ಇದೆ. ಆದರೆ ಇದರಲ್ಲಿರುವ ವಾಸನೆಯಿಂದಾಗಿ ಕೆಲವರು ಬಳಸಲು ಹಿಂದೆಗೆಯುತ್ತಾರೆ. ಇದರ ವಾಸನೆಯನ್ನು ಪ್ರತ್ಯೇಕಿಸಿ ‘ಕ್ಯಾಪ್ಸ್ಯ್ಸೂಲ್’ ಆಗಿ ಪರಿವರ್ತಿಸಿ ಆರೋಗ್ಯವರ್ಧಕ ಆಹಾರವಾಗಿ ಉಪಯೋಗಿಸುವಂತೆ ಮಾಡಿದ್ದಾರೆ. ಜಾಪಾನ್ ನಲ್ಲಿ ಬೆಳ್ಳುಳ್ಳಿಯ ಬಳಕೆ ಜಾಸ್ತಿ. ಇದನ್ನು ಆಲೀವ್ ಆಯಿಲ್ ಜೊತೆ ತೆಗೆದುಕೊಳ್ಳುವುದು ಒಳ್ಳೆಯದೆಂದು ಅವರ ಅಭಿಪ್ರಾಯ.

ಅಡಿಗೆಯಲ್ಲಿ ಮಸಾಲೆಯಾಗಿ, ಔಷಧಿಯಾಗಿ, ಕೀಟ ನಾಶಕವಾಗಿ ಉಪಯೋಗಿಸಲ್ಪಡುವ ಬೆಳ್ಳುಳ್ಳಿ ಬೆಳೆಯುವುದೂ ಸುಲಭ, ಬಳಸುವುದೂ ಸುಲಭ. ಹಿತ್ತಿಲಿನ ಬೇರೆ ಗಿಡಗಳಿಗೂ ರಕ್ಷಣೆ. ಇನ್ನೂ ಏನು ಯೋಚಿಸುತ್ತಿದ್ದೀರಿ? ಬೆಳ್ಳುಳ್ಳಿ ಮೊಳಕೆ ಬಂದಿದೆಯೋ ನೋಡಿ.