ಕತ್ತಲು ತುಂಬಿದ ಕೋಣೆಯ ಒಳಗೆ
ನಾನೇ ಕಟ್ಟಿದ ಸೆರೆಮನೆಯೊಳಗೆ
ಒಬ್ಬನೆ ಕುಳಿತಿದ್ದೆ.
ನಾಲ್ಕು ಗೋಡೆಗಳ ಅಂತರದೊಳಗೆ
ನನ್ನೆದೆಯಳಲಿನ ಕೂಪದ ಒಳಗೆ
ಒಬ್ಬನೆ ಮುಳುಗಿದ್ದೆ.

ಇಂತಿರೆ, ಕೋಣೆಯ ಛಾವಣಿಯಿಂದ
ಸಗ್ಗದ ಸೂರ್ಯನ ಬಳಿಯಿಂದ
ಇಳಿದಿತ್ತೊಂದೇ ಬಿಸಿಲಿನ ಕೋಲ್
ಜಗದೆದೆಯಾಳವನಳೆಯುವವೋಲ್
ಸುಂದರ ದೀರ್ಘಾಕಾರದಲಿ
ತೇಜಃಪುಂಜಾಕಾರದಲಿ !

ಮರ್ತ್ಯದ ಮನೆಗೆ ಅಮರ್ತ್ಯದ ಹಾಲ್
ಇಳಿದಂತಿದ್ದಿತು ಬಿಸಿಲಿನ ಕೋಲ್
ದುಃಖದರಿದ್ರನ ನಿರ್ಬಲಮರ್ತ್ಯನ
ಉದ್ಧರಿಸುವವೋಲ್,
ಪರಮಾನಂದದ ಬೆಳಕಿನ ಬಾಳಿಗೆ
ಸಂಕೇತದವೋಲ್,
ಶೋಭಿಸಿತೆನಗದು ಚೆಲುವಾಗಿ
ನನ್ನೀ ಕೋಣೆಗೆ ಕಣ್ಣಾಗಿ !

ದಿಟ್ಟಿಸಿದೆನು ನಾ ಮೈಮರೆತು,
ಹಸುಳೆಯ ಮುಗ್ಧಕುತೂಹಲದಿ ;
ಕಂಡೆನು ನಾ ಅದರಂತರದಿ
ಸಾಸಿರ ಕಣಗಳ ಸಂತೆಯನು.

ಬಿಸಿಲಿನ ಕೋಲಿನ ಅಂತರದಲ್ಲಿ
ತಮವನು ಕಳೆದಾ ಹೊಂಬೆಳಗಲ್ಲಿ
ಅಗಣಿತ ಧೂಳ್‌ಕಣಗಳು ತೇಲಿ
ಒಂದರ ಮೇಲೊಂದು
ಜಗದಲಿ ಬಾಳುವ ಜೀವರ ಹೋಲಿ
ಒಂದರ ಹಿಂದೊಂದು
ಹಾರಾಡಿರೆ, ನಾ ಬೆರಗಾದೆ.
ನಿಂತಲ್ಲಿಯೆ ನಿಂತೆ
ಆ ಬಿಸಿಲಿನ ಕೋಲಂತೆ !