ಶಾಲೆಯಲ್ಲಿ ಓದುತ್ತಿದ್ದ ಅಣ್ಣ ಮತ್ತು ತಮ್ಮ ತಂದೆಯನ್ನು ನೋಡಲು ಹೊರಟರು. ಮಾಸುರ್ ಎಂಬ ರೈಲು ನಿಲ್ದಾಣದಲ್ಲಿ ಇಳಿದರು. ಒಂದು ಗಾಡಿಯನ್ನು ಗೊತ್ತುಮಾಡಿಕೊಂಡರು ಹೊರಟರು. ಸ್ವಲ್ಪ ದೂರ ಹೋಗುವ ಹೊತ್ತಿಗೆ ಗಾಡಿಯವನಿಗೆ ಅವರು ಮಹರ್ ಜಾತಿಗೆ ಸೇರಿದವರು ಎಂದು ತಿಳಿಯಿತು. ಅವನು ಗಾಡಿಯನ್ನು ನಿಲ್ಲಿಸಿ, ನೊಗವನ್ನು ಎತ್ತಿ ಅವರನ್ನು ಕೆಳಕ್ಕೆ ಬೀಳಿಸಿದ. ಬಾಯಿಗೆ ಬಂದಂತೆ ಬಯ್ದ.

ಮಧ್ಯಾಹ್ನದ ಹೊತ್ತು ಹುಡುಗರಿಗೆ ಬಾಯಾರಿಕೆ ಎಲ್ಲಿ ಬೇಡಿದರೂ ಯಾರೂ ನೀರು ಕೊಡಲೊಲ್ಲರು. ಗಂಟೆಗಂಟೆಗಳು ಕಳೆದರೂ ಯಾರೂ ನೀರು ಕೊಡಲಿಲ್ಲ. ಕೆರೆ, ಬಾವಿಗಳ ಹತ್ತಿರ ಅವರನ್ನು ಬಿಡಲಿಲ್ಲ.

ತಮ್ಮನ ಹೆಸರು ಭೀಮರಾವ್‌ ಅಂಬೇಡಕರ್.

ಇನ್ನೊಂದು ದಿನ. ಭೀಮನಿಗೆ ತಡೆಯಲಾರದಷ್ಟು ಬಾಯಾರಿಕೆಯಾಯಿತು. ಹುಡುಗ ಬಾವಿಯೊಂದರಿಂದ ನೀರು ಕುಡಿದ. ಯಾರೋ ನೋಡಿದರು. ಕೆಲವರು ಸೇರಿ ಹುಡುಗನನ್ನು ಚಚ್ಚಿದರು.

ಹುಡುಗ ಕೂದಲು ಕತ್ತರಿಸಿಕೊಳ್ಳಬೇಕಾಯಿತು. ಎಮ್ಮೆಯ ಮೈಯ ಕೂದಲನ್ನು ಕತ್ತರಿಸುವ ಕ್ಷೌರಿಕನೂ ಈ ಹುಡುಗನ ಕೂದಲನ್ನು ಮುಟ್ಟಲೊಲ್ಲ.

ಒಂದು ದಿನ ಹುಡುಗ ಶಾಲೆಗೆ ಹೋಗುತ್ತಿದ್ದ. ವಿಪರೀತ ಮಳೆ ಬಂದಿತು. ರಸ್ತೆಯ ಪಕ್ಕದಲ್ಲಿಯೆ ಒಂದು ಮನೆಯ ಜಗುಲಿಯ ಮೇಲೆ ನಿಂತ. ಮನೆಯ ಯಜಮಾನಿ ಬಂದು ನೋಡಿದಳು. ಕೆಂಡವಾದಳು. ಎಳೆಯ ಹುಡುಗನನ್ನು ಕೆಳಕ್ಕೆ ನೂಕಿದಳು. ಹುಡುಗ ಕೆಸರಿನಲ್ಲಿ ಬಿದ್ದ. ಪುಸ್ತಕಗಳೆಲ್ಲ ನೀರಿನಲ್ಲಿ ಬಿದ್ದವು.

ಹೀಗೆ ಹುಡುಗನ ಎಳೆಯ ಮನಸ್ಸಿನ ಮೇಲೆ ಒಂದಾದ ಮೇಲೊಂದು ಬರೆಗಳು ಬಿದ್ದುವು. ಮನಸ್ಸು ಕಹಿಯ ಅಗ್ನಿಪರ್ವತವಾಯಿತು.

ಹುಡುಗನನ್ನು ಇತರರು ಹೀಗೆ ಹೀನಾಯವಾಗಿ ಕಾಣಲು ಕಾರಣವೇನು?

ಹುಡುಗ ಯಾವ ಪಾಪವನ್ನೂ ಮಾಡಿರಲಿಲ್ಲ. ಆದರೆ ಅವನು ಹುಟ್ಟಿದ್ದು ಮಹರ್ ಎಂಬ ಜಾತಿಯಲ್ಲಿ. ಈ ಜಾತಿ ಕೀಳು, ಇದರಲ್ಲಿ ಹುಟ್ಟಿದವರನ್ನು ಇತರ ಜಾತಿಯವರು ಮುಟ್ಟಬಾರದು ಎಂದು ಇತರ ಹಿಂದುಗಳಲ್ಲಿ ಬಹು ಮಂದಿಯ ನಂಬಿಕೆ.ಮಹರ್ ಜಾತಿಯವರ ಹಾಗೆಯೇ ಭಾರತದಲ್ಲಿ ಇತರ ಹಲವು ಜಾತಿಗಳವರೂ ‘ಅಸ್ಪೃಶ್ಯರು-ಮುಟ್ಟಬಾರದು’-ಎನ್ನಿಸಿಕೊಂಡು ನೂರಾರು ವರ್ಷಗಳ ಕಾಲ ಅನ್ಯಾಯಕ್ಕೆ ತುತ್ತಾದರು.

ಗಾಡಿಯವನು ಮೂಕಿಯನ್ನು ಎತ್ತಿ ಹುಡುಗರನ್ನು ಕೆಳಕ್ಕೆ ಬೀಳಿಸಿದ.

ಅನ್ಯಾಯತಿದ್ದುವ ಪ್ರಯತ್ನ

 

ವೇದಗಳ ಕಾಲದಲ್ಲಿ ಜಾತಿ ಪದ್ಧತಿ ಇರಲಿಲ್ಲ, ‘ಅಸ್ಪೃಶ್ಯತೆ’ ಇರಲಿಲ್ಲ. ಇದು ಹಿಂದು ಸಮಾಜದಲ್ಲಿ ಯಾವಾಗ, ಹೇಗೆ ಸೇರಿತು? ಖಚಿತವಾಗಿ ತಿಳಿಯದು.

ಈ ಅನ್ಯಾಯವನ್ನು ತೊಡೆದುಹಾಕಲು ಯಾರೂ ಪ್ರಯತ್ನಿಸಲಿಲ್ಲವೆ?

ಗೌತಮ ಬುದ್ಧನು ಹಲವರು ‘ಅಸ್ಪೃಶ್ಯರನ್ನು ತನ್ನ ಮತಕ್ಕೆ ಸೇರಿಸಿಕೊಂಡ. ರಾಮಾನುಜಾಚಾರ್ಯರು, ಬಸವೇಶ್ವರರು, ಚಕ್ರಧರ, ರಮಾನಂದ, ಕಬೀರ್, ಚೈತನ್ಯ, ಏಕನಾಥ, ತುಕಾರಾಂ, ರಾಜಾ ರಾಮಮೋಹನ ರಾಯ್‌ ಮೊದಲಾದ ಹಿರಿಯರು ಭಗವಂತಹ ಮಕ್ಕಳಲ್ಲಿ ಮೇಲು-ಕೀಳುಗಳಿಲ್ಲ ಎಂದು ಉಪದೇಶಿಸಿದರು. ಮಹಾತ್ಮ ಫೂಲೆ ಎಂಬುವರೂ ಅವರ ಹೆಂಡತಿಯೂ ‘ಅಸ್ಪೃರ್ಶಯರ’ ವಿದ್ಯಾಭ್ಯಾಸಕ್ಕೆ ಮುಡಿಪಾಗಿ ದುಡಿದರು. ಬರೋಡದ ಮಹಾರಾಜ ಸಯಾಜಿರಾವ್‌ ಗಾಯಕವಾಡರು ೧೮೮೩ ರಲ್ಲಿಯೇ ‘ಅಸ್ಪೃಶ್ಯ’ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. ಹೀಗೆ ‘ಅಸ್ಪೃಶ್ಯತೆ’ಯನ್ನು ತೊಡೆದುಹಾಕಲು ನೂರಾರು ವರ್ಷಗಳಿಂದ ಹಿಂದು ಸಮಾಜಕ್ಕೆ ಸೇರಿದ ವಿಚಾರವಂತೆ ಹಿರಿಯರು ಪ್ರಯತ್ನಿಸುತ್ತ ಬಂದಿದ್ದಾರೆ.

ಭಾರತಕ್ಕೆ ಸ್ವಾತಂತ್ಯ್ರ ಬರುವ ಮೊದಲೂ, ಬಂದ ನಂತರವೂ ಈ ಎಲ್ಲ ಹಿರಿಯರಂತಯೇ, ಅಂಬೇಡ್ಕರ್ ಸಹ ಅಸ್ಪೃಶ್ಯರ ಉದ್ದಾರವಾಗಬೇಕೆಂದು ಬಹಳಷ್ಟು ಕಷ್ಟಪಟ್ಟು ದುಡಿದಿದ್ದಾರೆ.

ಹಿಂದು ಸಮಾಜದಲ್ಲಿ ನುಸುಳಿಕೊಂಡು ಬಂದಿರುವ ಜಾತಿಭೇದಗಳಿಂದ ನೊಂದು ಅವುಗಳ ವಿರುದ್ಧ ಹೋರಾಡಿ, ಅಂಬೇಡಕರರು ಕೊನೆಗೆ, ಸ್ವತಂತ್ರ ಭಾರತದ ಮೊದಲನೆಯ ಕಾನೂನು ಮಂತ್ರಿಯಾದರು. ರಾಜ್ಯಾಂಗದಲ್ಲಿ ಅಸ್ಪೃಶ್ಯತೆಯನ್ನು ಅಳಿಸಿಹಾಕಲು ವಿಧಿಯನ್ನು ಸೇರಿಸಿ, ಅಸ್ಪೃಶ್ಯತೆಯನ್ನು ಕೊನೆಗಾಣಿಸಲು ಅಗತ್ಯ ವಾತಾವರಣವನ್ನು ನಿರ್ಮಿಸಿದ ಕೀರ್ತಿಶಾಲಿ ಡಾಕ್ಟರ್ ಅಂಬೇಡಕರ್.

ಎಳೆತನದ ವರ್ಷಗಳು

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಆಂಬವಾಡೆ ಎಂಬ ಒಂದು ಗ್ರಾಮ. ಆ ಗ್ರಾಮದ ರಾಮ್‌ಜಿ ಸಕ್‌ಪಾಲ್‌ ಎಂಬುವರ ಮಗ ಭೀಮರಾವ್‌. ಈತ ತಂದೆ ತಾಯಿಗೆ ಹದಿನಾಲ್ಕನೆಯ ಮಗುವಾಗಿ ಜನಿಸಿದರು.

ರಾಮ್‌ಜಿ ಕಬೀರರ ಭಕ್ತಿಪಂಥಕ್ಕೆ ಸೇರಿದವರು. ಜಾತಿ ಮತ ಭೇದಗಳಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಜಾತಿ ಪಂಥಗಳ ವ್ಯತ್ಯಾಸ ಮುಖ್ಯವಲ್ಲ, ಹರಿಭಜನೆ ಮಾಡುವವರೆಲ್ಲ ದೇವರಿಗೆ ಸೇರಿದವರು ಎಂಬುದು ಅವರ ನಂಬಿಕೆ.

ಅಂಬೇಡಕರ್ ಹುಟ್ಟಿದ್ದು ೧೮೯೧ ನೆಯ ಇಸವಿ ಏಪ್ರಿಲ್‌ ೧೪ ರಂದು. ಮೊದಲು ಅವರ ಹೆಸರು ಭೀಮರಾವ್‌ ಅಂಬವಾಡೇಕರ್ ಎಂದು.

ಅಂಬೇಡಕರರ ಜನನದ ಬಗ್ಗೆ ಒಂದು ಕಥೆಯನ್ನು ಹೇಳುತ್ತಾರೆ.

ರಾಮ್‌ಜಿ ಸಕ್‌ಪಾಲರ ಮಾವ ಸನ್ಯಾಸಿಗಳಾಗಿದ್ದರು. ಅವರು ಒಮ್ಮೆ ರಾಮ್‌ಜಿಗೆ, ‘ನಿನಗೊಬ್ಬ ಗಂಡು ಮಗ ಹುಟ್ಟುತ್ತಾನೆ. ಆತ ಲೋಕಪ್ರಸಿದ್ಧನಾಗುತ್ತಾನೆ” ಎಂದು ಹೇಳಿ ಹರಸಿದರಂತೆ. ಇದಾದನಂತರ ಭೀಮ ಅಂಬವಾಡೇಕರ್ ಹುಟ್ಟಿದರು. ಅವರಿನ್ನೂ ಐದು ವರ್ಷದ ಮಗುವಾಗಿದ್ದಾಗಲೇ ಅವರ ತಾಯಿ ಮೃತರಾದರು.

ಅಸ್ಪಶ್ಯತೆಯ ಬಿಸಿ

ಶಾಲೆಯಲ್ಲಿದ್ದಾಗಲೇ ಅವರಿಗೆ ಅಸ್ಪೃಶ್ಯತೆಯ ಬಿಸಿ ತಗುಲಿತು. ಶಾಲೆಯಲ್ಲಿ ಅವರು ಇತರ ವಿದ್ಯಾರ್ಥಿಗಳ ಜೊತೆ ಕುಳಿತುಕೊಳ್ಳುವಂತಿಲ್ಲ. ಕುಡಿಯುವ ನೀರನ್ನು ಯಾರಾದರೂ ಮೇಲಿಂದ ಸುರಿದರೆ, ಬಾಯಿಗೆ ಅಡ್ಡವಾಗಿ ಕೈ ಹಿಡಿದು ಕುಡಿಯಬೇಕಾಗಿತ್ತು.

ಇದೆಲ್ಲ ಏಕೆ ಎಂಬುದು ಆ ಬಾಲಕನಿಗೆ ಅರ್ಥವೇ ಆಗುತ್ತಿರಲಿಲ್ಲ.

ತನಗಾದ ಅಪಮಾನ, ಹಿಂಸೆ ಭೀಮನ ಎಳೆಯ ಮನಸ್ಸಿನ ಮೇಲೆ ಬಹು ಆಳವಾದ ಪರಿಣಾಮಗಳನ್ನು ಮಾಡಿದವು. ಹಿಂದು ಧರ್ಮಕ್ಕೆ ಅಂಟಿರುವ ಅಸ್ಪೃಶ್ಯತೆಯ ಕೊಳೆಯನ್ನು ತೊಳೆಯಬೇಕು ಎಂದು ಭೀಮ ತೀರ್ಮಾನಿಸಿದ.

ಹೋರಾಟದ ಪ್ರವೃತ್ತಿ ಅವರ ವಂಶಕ್ಕೇ ಬಂದಿದ್ದು. ಮಹರ್ಗಳದು ಸಿಪಾಯಿಗಳ ರಕ್ತ. ತಂದೆ ಸಕ್‌ಪಾಲ್‌ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸಿದವರೇ.

ಬಾಲ್ಯದಿಂದಲೇ ಭೀಮನದು ಉಕ್ಕಿನ ಮನಸ್ಸು. ಒಮ್ಮೆ ಭಾರಿ ಮಳೆ ಬರುತ್ತಿತ್ತು. ಹುಡುಗ ಭೀಮ ಶಾಲೆಗೆ ಹೋಗುತ್ತೇನೆ ಎಂದ. “ಈ ಮಳೆಯಲ್ಲಿ ಹೋದ ಹಾಗೆಯೇ ಇದೆ. ಬರಿಯ ಬಾಯಿ ಮಾತು” ಎಂದರು ಜೊತೆಯವರು. ಆದರೆ ಪಟಪಟನೆ ರಾಚುತ್ತಿದ್ದ ಮಳೆಯಲ್ಲಿಯೇ ಛತ್ರಿ ಇಲ್ಲದೆ ನಡೆದು ಶಾಲೆಗೆ ಹೋದ ಹುಡುಗ!

ಅಂಬವಾಡೇಕರ್ ಅಂಬೇಡಕರ್ ಆಯಿತು

ಭೀಮ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಒಬ್ಬ ಆದರ್ಶ ಉಪಾಧ್ಯಾಯರು ಹುಡುಗನ ಚುರುಕು ಬುದ್ಧಿಯನ್ನು ಮೆಚ್ಚಿಕೊಂಡಿದ್ದರು. ಅವರ ಮನೆತನದ ಹೆಸರು ಅಂಬೇಡಕರ್. ಭೀಮನ ಮೇಲೆ ಅವರ ಪ್ರೀತಿ ಎಷ್ಟಿತ್ತೆಂದರೆ ಅವರು ಭೀಮನ ಹೆಸರಿನಲ್ಲಿ ಅಂಬವಾಡೇಕರ್ ಎಂದಿದ್ದುದನ್ನು ಅಂಬೇಡಕರ್ ಎಂದು ಮಾರ್ಪಡಿಸಿಬಿಟ್ಟರು.

ಭೀಮನ ತಂದೆ ಎರಡನೆ ಮದುವೆಯಾದ ಮೇಲೆ ಅವನ ಮನಸ್ಸೇ ಬದಲಾಗಿ ಹೋಯಿತು. ಸ್ವತಂತ್ರವಾಗಿ ಬಾಳಬೇಕು, ಅದಕ್ಕೆ ಇರುವುದು ಒಂದೇ ಮಾರ್ಗ-ಚೆನ್ನಾಗಿ ಓದುವುದು ಎಂದು ಹುಡುಗ ತೀರ್ಮಾನಿಸಿದ.

ಮುಂಬಯಿಗೆ ಹೋಗಬೇಕೆಂಬ ವಿಚಾರ ತಲೆಯಲ್ಲಿ ಸುಳಿಯಿತು. ರೈಲಿಗೆ ದುಡ್ಡು ಬೇಕಲ್ಲವೇ? ಮೂರು ರಾತ್ರಿ ಸೋದರತ್ತೆಯ ಹಣದ ಚೀಲವನ್ನು ಪ್ರಯತ್ನಿಸಿ ಕದ್ದ. ಅದರಲ್ಲಿ ಸಿಕ್ಕಿದ್ದು ಆರು ಕಾಸು! (ಮೂರು ಪೈಸೆ)

ಮರುದಿನದ ಹೊತ್ತಿಗೆ ಹುಡುಗನಿಗೆ ತಾನು ಮಾಡಿದ ಕೆಲಸಕ್ಕೆ ತುಂಬ ನಾಚಿಕೆಯಾಯಿತು, ಬೇಸರವಾಯಿತು. ಎಷ್ಟೇ ಕಷ್ಟ ಬರಲಿ, ಸ್ವತಂತ್ರವಾಗಿ ಕೆಲಸ ಮಾಡಿ ನನ್ನ ಕಾಲ ಮೇಲೆ ನಾನು ನಿಲ್ಲುತ್ತೇನೆ ಎಂದು ತೀರ್ಮಾನಿಸಿದ.

ಎಳೆಯ ಭೀಮನಿಗೆ ಎಷ್ಟು ಪುಸ್ತಕ ಓದಿದರೂ ತೃಪ್ತಿ ಇಲ್ಲ. ಭೀಮನ ತಂದೆ ಸಾಲ ಮಾಡಿಯಾದರೂ ಮಗನ ಪುಸ್ತಕ ದಾಹ ಇಂಗಿಸುತ್ತಿದ್ದರು.

ಪ್ರೌಢಶಾಲೆ

ಅಂಬೇಡಕರ್ ಮುಂಬಯಿಯ ಎಲ್ಫಿನ್‌ಸ್ಟನ್‌ ಹೈಸ್ಕೂಲಿಗೆ ಸೇರಿದರು.

ತೀರ ಬಡವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಅವರ ವಾಸ. ಅದೂ ಇಡೀ ಸಂಸಾರಕ್ಕೆ ಒಂದೇ ಕೊಠಡಿ. ಅದೇ ಅಡಿಗೆ ಮನೆ, ಮಲಗುವ ಕೊಠಡಿ, ಓದುವ ಕೋಣೆ. ಇಬ್ಬರು ಮಲಗುವುದಕ್ಕೂ ಸ್ಥಳವಿಲ್ಲ.

ಹುಡುಗ ಅಂಬೇಡಕರ್ ಬೇಗನೆ ಮಲಗುವನು. ತಲೆಯ ಹತ್ತಿರ ಬೀಸುವ ಕಲ್ಲು, ಕಾಲ ಬಳಿ ಒಂದು ಮೇಕೆ. ತಂದೆ ರಾತ್ರಿ ಎರಡು ಗಂಟೆಯವರೆಗೆ ಎದ್ದಿರುವರು. ಅನಂತರ ಅವರು ಮಲಗುವರು, ಹುಡುಗ ಎದ್ದು, ಚಿಮಣಿಯೂ ಇಲ್ಲದ ಸೀಮೆಯ ಎಣ್ಣೆ ದೀಪದ ಬೆಳಕಿನಲ್ಲಿ ಓದಿಕೊಳ್ಳುವನು.

ಇಡೀ ಜೀವಮಾನ ಮರೆಯಲಾರದ ಈ ಗಾಯ ಅವರ ಮನಸ್ಸಿನ ಮೇಲೆ ಆಯಿತು ಈ ಶಾಲೆಯಲ್ಲಿ. ಸಂಸ್ಕೃತ ಕಲಿಯಬೇಕು ಎಂದು ಭೀಮನ ಆಸೆ. ಶಾಲೆಯ ಇತರ ಹುಡುಗರು ಸಂಸ್ಕೃತ ಕಲಿಯಬಹುದಾಗಿತ್ತು. ಆದರೆ ಮಹರ್ ಜಾತಿಯವನಾದ ಈ ಹುಡುಗ ಅದನ್ನು ಓದಕೂಡದು ಎಂದು ಅಪ್ಪಣೆಯಾಯಿತು! ಆದರೆ ಬೇರೆ ದೇಶದಲ್ಲಿ ಹುಟ್ಟಿದವರು, ಹಿಂದುಗಳೇ ಅಲ್ಲದವರು ವೇದಗಳನ್ನು ಓದಲು ಅಡ್ಡಿ ಇರಲಿಲ್ಲ. ಈ ಅನ್ಯಾಯದಿಂದ ಹುಡುಗನ ಮನಸ್ಸು ಮತ್ತಷ್ಟು ಕಹಿ ಬೆಳೆಸಿಕೊಂಡಿತು.

ಮುಂದೆ ಅಂಬೇಡಕರ್ ಸಂಸ್ಕೃತ ಕಲಿಯದೆ ಬಿಡಲಿಲ್ಲ.

ಒಂದು ಘಟ್ಟ ಮುಗಿಯಿತು

ಅಂಬೇಡಕರ್ ಮೆಟ್ಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆಗ ಅವರಿಗೆ ಹದಿನೇಳು ವರ್ಷ. ಆ ವರ್ಷವೇ ಅವರ ವಿವಾಹವು ರಮಾಬಾಯಿಯವರೊಂದಿಗೆ ನಡೆಯಿತು. ಅವರ ಮದುವೆ ನಡೆದದ್ದು ಮುಂಬೈನ ಬೈಕುಲ ಮಾರ್ಕೆಟ್ಟಿನ ಒಂದು ಷೆಡ್ಡಿನಲ್ಲಿ.

ವಿವಾಹದ ನಂತರ ಅಂಬೇಡಕರ್ ಎಲ್ಫಿನ್‌ಸ್ಟನ್‌ ಕಾಲೇಜಿನಲ್ಲಿ ಇಂಟರ್ ಮೀಡಿಯಟ್‌ ಪರೀಕ್ಷೆಯನ್ನು ಮುಗಿಸಿದರು. ೧೯೧೨ ರಲ್ಲಿ ಅವರು ಬಿ.ಎ. ಪದವೀಧರರಾದರು.

೧೯೧೩ ರಲ್ಲಿ ಅಂಬೇಡಕರರ ತಂದೆಯವರು ಮೃತರಾದರು. ಅಂಬೇಡಕರ್ ಆಗ ಬರೋಡ ಮಹಾರಾಜರ ಬಳಿ ಕೆಲಸದಲ್ಲಿದ್ದರು.

ಜೀವನದ ಹೋರಾಟದ ಪ್ರಥಮ ಅಂಕ ಮುಗಿದಿತ್ತು. ಈಗ ದ್ವಿತೀಯ ಹಂತ ಆರಂಭವಾಗಿತ್ತು.

ಅಮೆರಿಕದಲ್ಲಿ

ಬರೋಡ ಮಹಾರಾಜರು ಭೀಮರಾವ್‌ ಅಂಬೇಡಕರರನ್ನು ಅಮೆರಿಕಕ್ಕೆ ಕಳಿಹಿಸಿದರು.

ಅಮೆರಿಕದಲ್ಲಿ ಅಂಬೇಡಕರರಿಗೆ ಹೊಸ ಜೀವನದ ಅನುಭವವಾಯಿತು. ಅಲ್ಲಿ ಅಸ್ಪೃಶ್ಯತೆಯೆ ಇರಲಿಲ್ಲ. ಈ ವಾತಾವರಣದಲ್ಲಿ ಅವರು ತಮ್ಮ ಗೆಳೆಯರೊಬ್ಬರಿಗೆ ಬರೆದ ಪತ್ರದಲ್ಲಿ ಮಹಾಕವಿ ಷೇಕ್ಸ್‌ಪಿಯರನ ಕೆಲವು ಪಂಕ್ತಿಗಳನ್ನು ನೆನಪಿಗೆ ತಂದುಕೊಂಡರು- “ಮನುಷ್ಯರ ಜೀವನದಲ್ಲಿ ಒಮ್ಮೆಮ್ಮೆ ಅಬ್ಬರದ ಅಲೆ ಬರುತ್ತದೆ; ಆ ಅವಕಾಶವನ್ನು ಉಪಯೋಗಿಸಿಕೊಂಡರೆ ಅದೃಷ್ಟದತ್ತ ಕೊಂಡೊಯ್ಯುತ್ತದೆ.”

ಅಮೆರಿಕದಲ್ಲಿ ಪ್ರೌಢ ಪ್ರಬಂಧಗಳನ್ನು ಬರೆದು ಅಂಬೇಡಕರರು ಎಂ.ಎ. ಪದವಿಯನ್ನೂ ಪಿ.ಎಚ್‌.ಡಿ. ಪದವಿಯನ್ನೂ ಗಳಿಸಿದರು.

೨೧.೮.೧೯೧೭ ರಂದು ಅವರು ಪುನಃ ಭಾರತಕ್ಕೆ ವಾಪಸ್ಸಾದರು.

ಅಂಬೇಡಕರರ ಶಿಕ್ಷಣದ ವರ್ಷಗಳಲ್ಲಿ ಗಮನಿಸಬೇಕಾದ ಒಂದು ವಿಷಯವಿದೆ. ಭಾರತದಲ್ಲಿಯೆ ಇಂಗ್ಲಿಷ್‌ ಮತ್ತು ಪರ್ಷಿಯನ್‌ ಭಾಷೆಗಳನ್ನು ಅಭ್ಯಾಸ ಮಾಡಿದರು. ಅಮೆರಿಕದಲ್ಲಿ ರಾಜನೀತಿಶಾಸ್ತ್ರ, ನೀತಿಶಾಸ್ತ್ರ, ಮಾನವ ಸಮಾಜಶಾಸ್ತ್ರ, ಅರ್ಥಶಾಸ್ತ್ರ-ಹೀಗೆ ಹಲವು ವಿಷಯಗಳನ್ನು ಅಭ್ಯಾಸ ಮಾಡಿದರು. ಡಾಕ್ಟರೇಟ್‌ ಪಡೆದರು. ಆಗಲೆ ಅಂಬೇಡಕರರಿಗೆ ಕ್ರಾಂತಿಯ ಮನೋಭಾವ ಇತ್ತು. ಕೆಳ ಜಾತಿಯವರು ಎನ್ನಿಸಿಕೊಂಡವರಿಗೆ ಆಗುತ್ತಿದ್ದ ಅನ್ಯಾಯವನ್ನು ತೊಡೆದುಹಾಕಿ ಸಮಾಜದಲ್ಲಿ ಕ್ರಾಂತಿಯನ್ನು ಮಾಡಬೇಕೆಂದು ವಜ್ರಸಂಕಲ್ಪ ಮಾಡಿದ್ದರು. ಆದರೆ ತುಂಬಾ ಮುಖ್ಯವಾಗಿ-ಕ್ರಾಂತಿಕಾರರಾಗುವ ಮುನ್ನ ಅಂಬೇಡ್ಕರ್ ತಮ್ಮ ಜ್ಞಾನವನ್ನು ಬೆಳೆಸಿಕೊಂಡರು. ಇದರಿಂದ ಅವರ ಯೋಚನೆಗಳು ಬರಿಯ ಬುರುಗಾಗದೆ ಸತ್ವಪೂರ್ಣವಾಗಿದ್ದವು. ಮುಂದೆ ಅವರು ಸ್ವತಂತ್ರ ಭಾರತದ ರಾಜ್ಯಾಂಗವನ್ನು ನಿರ್ಮಿಸುವುದರಲ್ಲಿ ಮಹತ್ವಪೂರ್ಣ ಪಾತ್ರವಹಿಸಲು ಇದರಿಂದ ಸಾಧ್ಯವಾಯಿತು.

ಮತ್ತೆ ಅನ್ಯಾಯ, ಅಪಮಾನ

ಅಂಬೇಡಕರರು ಡಾಕ್ಟರೇಟ್‌ ಪಡೆದಿದ್ದರೇನು, ದೊಡ್ಡ ಅಧಿಕಾರದಲ್ಲಿದ್ದರೇನು, ಭಾರತದಲ್ಲಿ ಕಾಲಿಟ್ಟುದೇ ತಡ, ಅಸ್ಪೃಶ್ಯತೆಯ ಬಿಸಿ ಅವರನ್ನು ಬಿಡಲಿಲ್ಲ. ಅಂಬೇಡಕರರು ಬರೋಡ ತಲುಪಿದಾಗ ಅವರನ್ನು ಸ್ವಾಗತಿಸಲು ಯಾರೂ ಬಂದಿರಲಿಲ್ಲ. ಮೇಲಾಗಿ ಕಚೇರಿಯಲ್ಲಿದ್ದ ಜವಾನ ಕೂಡ ಅವರ ಕೈಗೆ ಫೈಲುಗಳನ್ನು ಕೊಡದೆ ದೂರದಿಂದ ಎಸೆಯುತ್ತಿದ್ದ. ಕಚೇರಿಯಲ್ಲಿ ಅವರಿಗೆ ಕುಡಿಯಲು ನೀರು ಕೊಡುತ್ತಿರಲಿಲ್ಲ. ಅವರಿಗೆ ಅಲ್ಲಿ ಇಳಿದುಕೊಳ್ಳಲೂ ಯಾರೂ ಸ್ಥಳ ಕೊಡಲಿಲ್ಲ. ಮಹಾರಾಜರಿಗೇ ಹೇಳಿಕೊಂಡವರೂ ಫಲವಾಗಲಿಲ್ಲ. ಪಾರ್ಸಿ, ಮುಸಲ್ಮಾನರು ಕೂಡ ಅವರನ್ನು ಮುಟ್ಟಿಕೊಳ್ಳುವುದಕ್ಕೆ ತಯಾರಿರಲಿಲ್ಲ.

ಈ ಎಲ್ಲ ಘಟನೆಗಳಿಂದಾಗಿ ಅಂಬೇಡಕರರ ಹೃದಯದಲ್ಲಿ ಹಿಂದುಗಳ ಬಗ್ಗೆ ಕ್ರೋಧದ ಅಗ್ನಿ ಬೆಳೆಯಿತು. ಕೆಲವೇ ದಿನಗಳಲ್ಲಿ ಅವರು ಮುಂಬಯಿಗೆ ಹಿಂತಿರುಗಿದರು.

೧೯೨೦ ರಲ್ಲಿ ಅಂಬೇಡಕರರು ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದರು. ಲಂಡನಿನ ಪ್ರಾಚೀನ ವಸ್ತುಸಂಗ್ರಹಾಲಯ ಬೆಳಿಗ್ಗೆ ಎಂಟಕ್ಕೆ ತೆರೆಯುವ ಹೊತ್ತಿಗೆ ಅಲ್ಲಿರುತ್ತಿದ್ದರಂತೆ. ಐದು ಗಂಟೆಯವರೆಗೆ ಓದುತ್ತಿದ್ದರಂತೆ. ಲಂಡನಿನಲ್ಲಿ ಅಸ್ನೋದ್‌ಕರ್ ಎಂಬ ವಿದ್ಯಾರ್ಥಿಯ ಪರಿಚಯವಾಯಿತು. ಅವನು ಬಹು ಶ್ರೀಮಂತ ಮನೆಯವನು, ಓದು ಬೇಕಿಲ್ಲ. ಅವನಿಗೆ ಅಂಬೇಡಕರರು ಹೇಳಿದರು: “ನಿನ್ನ ಮನೆಯವರು ಆಸ್ತಿ ಮಾಡಿಟ್ಟಿರಬಹುದು. ಆದರೆ ಮನುಷ್ಯನಾಗಿ ಹುಟ್ಟಿ ನೀನೇನು ಸಾಧಿಸುತ್ತಿ, ಯೋಚಿಸು. ಬೇಕೆಂದಾಗ ಜ್ಞಾನೇಶ್ವರಿ ಬರುವುದಿಲ್ಲ. ಅವಳು ಬಂದಾಗ ನಾವು ಅವಳ ಅನುಗ್ರಹ ಪಡೆಯಬೇಕು.”

೧೯೨೨ ರಲ್ಲಿ ಅಂಬೇಡಕರರು ‘ಬ್ಯಾರಿಸ್ಟರ್’ ಎಂಬ ಪದವಿ ಪಡೆದು, ಮರುವರ್ಷ ಭಾರತಕ್ಕೆ ಮರಳಿ ಬಂದರು.

ಮೂಕ ನಾಯಕ

ಅಸ್ಪೃಶ್ಯರು ಅನುಭವಿಸುವ ಹಿಂಸೆಯನ್ನು ಪ್ರಕಟಿಸಿ ಪ್ರಚಾರ ಮಾಡಲು, ಸಮಾನ ಹಕ್ಕುಗಳಿಗೆ ಹೋರಾಟ ಮಾಡಲು ‘ಮೂಕ ನಾಯಕ’ ಎಂಬ ಪತ್ರಿಕೆಯೊಂದು ಪ್ರಾರಂಭವಾಯಿತು. ಅಂಬೇಡಕರ್ ಅದನ್ನು ಪ್ರಾರಂಭಿಸಿದವರು. ಅವರು ಪತ್ರಿಕೆಯ ಮೊದಲ ಸಂಚಿಕೆಯಲ್ಲಿ, “ಹಿಂದು ಸಮಾಜವು ವಿವಿಧ ಹಂತಗಳ ಒಂದು ಗೋಪುರದಂತಿದೆ. ಅದಕ್ಕೆ ಏಣಿಯಾಗಲಿ, ಹೊರಕ್ಕೆ ಹೋಗಲು ಬಾಗಿಲಾಗಲಿ ಇಲ್ಲ…. ಯಾವ ಸಮಾಜ ನಿರ್ಜೀವ ವಸ್ತುಗಳಲ್ಲೂ ಭಗವಂತನಿದ್ದಾನೆಂದು ನಂಬುತ್ತದೋ ಅದೇ ಸಮಾಜ, ತನ್ನಲ್ಲಿಯೇ ಒಂದು ಭಾಗವಾದ ಜನರನ್ನು ಮುಟ್ಟಬಾರದವರು ಎನ್ನುತ್ತದೆ” ಎಂದು ಬರೆದರು.

ಈ ಹೊತ್ತಿಗೆ ಹಿಂದು ಸಮಾಜ ಅಸ್ಪೃಶ್ಯತೆ ಎಂದರೆ ಅನ್ಯಾಯ ಎಂಬುದನ್ನು ತಿಳಿದುಕೊಳ್ಳುವ ಸೂಚನೆಗಳು ಕಂಡುಬಂದವು.

ಕೊಲ್ಲಾಪುರದ ಸಾಹು ಮಹಾರಾಜರು ಅಸ್ಪೃಶ್ಯರೆನಿಸಿಕೊಂಡ ಹಲವು ಹುಡುಗರಿಗೆ ಉಚಿತ ವಿದ್ಯಾಭ್ಯಾಸ ಮತ್ತು ಕೆಲಸಗಳನ್ನು ಕೊಡಿಸಿದರು.

೧೯೨೪ ರಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ವೀರ ಸಾವರಕರ್ ರೂ ಅಸ್ಪೃಶ್ಯತೆ ವಿರುದ್ಧ ಹೋರಾಟ ಆರಂಭಿಸಿದರು. ಗಾಂಧೀಜಿಯವರೂ ಅಸ್ಪೃಶ್ಯತೆಯನ್ನು ಅಳಿಸಲು ಕಾರ್ಯರಂಗಕ್ಕೆ ಇಳಿದಿದ್ದರು.

ಚೌದರ್ ಕೆರೆ

ಅಂಬೇಡಕರರು ಅಸ್ಪೃಶ್ಯತೆಯ ಅಪಮಾನವನ್ನೂ ಅನ್ಯಾಯವನ್ನೂ ಸ್ವತಃ ಅನುಭವಿಸಿದ್ದರು. ಅಸ್ಪೃಶ್ಯರಿಗೆ ಇತರರು ‘ಅಯ್ಯೋ ಪಾಪ’ ಎನ್ನುವುದು ಅವರಿಗೆ ಬೇಕಿರಲಿಲ್ಲ. ಅವರ ದೃಷ್ಟಿಯಲ್ಲಿ ಅಸ್ಪೃಶ್ಯರ ಉದ್ಧಾರ ಇತರರಿಂದ ಸಾಧ್ಯವಿಲ್ಲ. ನ್ಯಾಯ ಇತರರಿಂದ ದೊರೆಯದು. ಅನ್ಯಾಯಕ್ಕೆ ಸಿಕ್ಕವರೇ ಹೋರಾಟಗಳ ಮೂಲಕ ನ್ಯಾಯವನ್ನು ಪಡೆಯಬೇಕು.

ಅಸ್ಪೃಶ್ಯರು ಎನ್ನಿಸಿಕೊಂಡವರು ಶತಮಾನಗಳಿಂದ ತಮ್ಮತನವನ್ನು ಕಳೆದುಕೊಂಡಿದ್ದಾರೆ. ಇಂಥವರನ್ನು ಭಾಷಣಗಳಿಂದ, ಘೋಷಣೆಗಳಿಂದ ಬಡಿದೆಬ್ಬಿಸಲು ಸಾಧ್ಯವಿಲ್ಲ ಎಂದು ಅಂಬೇಡಕರರಿಗೆ ತಿಳಿದಿತ್ತು. ಅವರು ಹಿಂದುಗಳ ಮೂಢನಂಬಿಕೆಗಳ ವಿರುದ್ಧ ಬಂಡಾಯ ಏಳಲು ತೀರ್ಮಾನಿಸಿದರು. ಇದರ ಪರಿಣಾಮವಾಗಿ ನಡೆದದ್ದು ಚೌದರ್ ಕೆರೆ ಸತ್ಯಾಗ್ರಹ.

ಮುಂಬಯಿಯ ಶಾಸನಸಭೆ ಆಗಲೇ ಒಂದು ನಿರ್ಣಯ ಮಾಡಿತ್ತು. ಅದರಂತೆ ಸರ್ಕಾರ ಸಾರ್ವಜನಿಕ ಕೆರೆ ಬಾವಿಗಳನ್ನು ಎಲ್ಲರೂ ಬಳಸಲು ಒಪ್ಪಿತ್ತು. ಈ ನಿರ್ಣಯದ ಆಧಾರದ ಮೇಲೆ ಕೊಲಾಬ ಜಿಲ್ಲೆಯ ಮಹದ್‌ ಪುರಸಭೆಯು ಅಲ್ಲಿನ ಚೌದರ್ ಕೆರೆಯನ್ನು ಅಸ್ಪೃಶ್ಯರೂ ಬಳಸಬಹುದೆಂದು ತೀರ್ಮಾನಿಸಿದ್ದಿತು. ಆದರೆ ಅದನ್ನು ಆಚರಣೆಗೆ ತಂದಿರಲಿಲ್ಲ.

ಈ ಕೆರೆಯ ನೀರನ್ನು ಬಳಸಿ ಸಮಾನತೆಯ ಧ್ವಜ ಹಾರಿಸಲು ಅಂಬೇಡಕರರು ತೀರ್ಮಾನಿಸಿದರು.

ಗೊತ್ತು ಮಾಡಿದ್ದ ದಿನ ಅಂಬೇಡಕರರೇ ಮೊದಲು ಕೆರೆಯ ನೀರನ್ನು ಮುಟ್ಟಿದರು. ಅನೇಕರು ನೀರನ್ನು ಕುಡಿದರು. ಆವರೆಗೆ ಆ ಕೆರೆಯ ಹತ್ತಿರ ಸುಳಿಯಲೂ ಅವಕಾಶವಿಲ್ಲದ ಕಡೆ, ಪ್ರಕೃತಿ ಸೃಷ್ಟಿಸಿದ ನೀರು ಪ್ರಕೃತಿಯ ಮಕ್ಕಳಾದ ಎಲ್ಲರಿಗೂ ಸೇರಿದ್ದು ಎಂದು ಸಾಧಿಸಿದರು.

ಆದರೆ ಎರಡು ಗಂಟೆಗಳನಂತರ ಯಾರೋ ಒಂದು ವದಂತಿಯನ್ನು ಹಬ್ಬಿಸಿದರು-ಅಂಬೇಡಕರರ ಕಡೆಯವರು ವೀರೇಶ್ವರನ ದೇವಾಲಯಕ್ಕೂ ಪ್ರವೇಶ ಮಾಡುತ್ತಾರೆ ಎಂದು. ಇತರ ಹಿಂದುಗಳು ಇವರ ಮೇಲೆ ಬಿದ್ದು ದಾಳಿ ಮಾಡಿದರು. ಈ ದಾಳಿಯಲ್ಲಿ ಅಂಬೇಡಕರರೂ ಗಾಯಗೊಂಡರು.

ಈ ಘಟನೆ ಭಾರತದ ಸಾಮಾಜಿಕ ಜೀವನದಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಅನೇಕ ತಿಳಿದ ಹಿಂದುಗಳು ಈ ಕೃತ್ಯಗಳನ್ನು ಖಂಡಿಸಿದರು. ಮತ್ತು ಅಸ್ಪೃಶ್ಯರು ಕೆರೆ ಬಾವಿಗಳಿಂದ ನೀರನ್ನು ಪಡೆಯುವುದರಲ್ಲಿ ಅಪರಾಧವೇನೂ ಇಲ್ಲ ಎಂದು ಹೇಳಲಾರಂಭಿಸಿದರು.

ಸ್ವತಂತ್ರ ಭಾರತದ ಮೊದಲನೆಯ ಕಾನೂನು ಮಂತ್ರಿಗಳಾಗಿ ಅಂಬೇಡ್ಕರರು ಪ್ರಮಾಣವಚನ ಸ್ವೀಕರಿಸಿದರು.

ನ್ಯಾಯ ಬೇಡುವ ಹಿಂದುಗಳೇ ನ್ಯಾಯ ಕೊಡಬೇಡವೆ?

ಅಸ್ಪೃಶ್ಯರು ಹಿಂದುಗಳು. ಆದ್ದರಿಂದ ಅವರಿಗೆ ದೇವಸ್ಥಾನದ ಬಾಗಿಲುಗಳನ್ನು ತೆರೆದಿಡಬೇಕು. ಮುಸ್ಲಿಮರನ್ನೂ ಕ್ರಿಶ್ಚಿಯನ್ನರನ್ನೂ ಹಿಂದುಗಲು ಮುಟ್ಟಬಹುದಾದರೆ ಹಿಂದುಗಳೇ ಆಗಿ, ಹಿಂದು ದೇವತೆಗಳನ್ನೂ ಪೂಜಿಸುವ ಜನರನ್ನು ಮುಟ್ಟಬಾರದೇಕೆ? ಇದು ಅಂಬೇಡಕರರ ವಾದದ ಸರಣಿ. ಅಸ್ಪೃಶ್ಯತೆಗೆ ಬೆಂಬಲ ಕೊಡುವವರನ್ನೂ ಆಚರಿಸುವವರನ್ನೂ ಶಿಕ್ಷಿಸಬೇಕು ಎಂದು ಅವರು ಕರೆ ಇತ್ತರು.

ಅಸ್ಪೃಶ್ಯರು ಸಮಾನತೆಗೆ ಇನ್ನೂ ಸಿದ್ಧವಾಗಿಲ್ಲ ಎಂದು ಕೆಲವರು ವಾದ ಹೂಡಿದರು. ಆ ಸಮಯದಲ್ಲಿ “ಬ್ರಿಟಿಷರಿಂದ ಸ್ವತಂತ್ರರಾಗಬೇಕು, ಪ್ರಜಾಪ್ರಭುತ್ವಬೇಕು ಎಂದು ಹಿಂದುಗಳು ಕೇಳುತ್ತಾರೆ; ಹಿಂದುಳಿದ ವರ್ಗದ ಜನರ ಸರ್ವ ಸ್ವಾತಂತ್ಯ್ರಗಳನ್ನೂ ತುಳಿದಿಟ್ಟಿರುವ ಜನರು ಹೇಗೆ ಪ್ರಜಾಪ್ರಭುತ್ವವನ್ನು ಬಯಸಬಹುದು? ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾತು ಇವರಿಗೆ ಸಲ್ಲದು? ಎಂದು ಅಂಬೇಡಕರರು ಗರ್ಜಿಸಿದರು.

೧೯೨೭ ರಲ್ಲಿ ಒಂದು ಸಮ್ಮೇಳನ ನಡೆಯಿತು. “ಹಿಂದು ಧರ್ಮದಲ್ಲಿ ಯಾವುದೇ ವರ್ಣಭೇದವಿರಕೂಡದು. ದೇವಸ್ಥಾನಗಳಲ್ಲಿ ಅರ್ಚಕರ ಕೆಲಸವನ್ನು ಎಲ್ಲ ವರ್ಣದವರೂ ಮಾಡಲು ಅವಕಾಶವಿರಬೇಕು” ಎಂದು ಸಮ್ಮೇಳನ ಒಂದು ನಿರ್ಣಯವನ್ನು ಮಾಡಿತು.

ಚೌದರ್ ಕೆರೆಯ ವಿಷಯ ನ್ಯಾಯಾಲಯಕ್ಕೆ ಹೋಯಿತು. ಕೆರೆಗಳು ಸಾರ್ವಜನಿಕ ಆಸ್ತಿ ಎಂದು ನ್ಯಾಯಾಲಯ ತೀರ್ಮಾನಿಸಿತು.

ಕಾರ್ಯರೂಪದಲ್ಲಿ

ನೂರಾರು ವರ್ಷಗಳಿಂದ ಅನ್ಯಾಯಕ್ಕೆ ತುತ್ತಾದ ಅಸ್ಪೃಶ್ಯರಿಗೆ ನ್ಯಾಯ ದೊರೆಯಬೇಕು. ಇದಕ್ಕಾಗಿ ಅಂಬೇಡಕರರು ಕೆಲವು ಸ್ಪಷ್ಟ ಹೆಜ್ಜೆಗಳನ್ನು ಸೂಚಿಸಿದರು. ಹಿಂದುಗಳಲ್ಲಿ ಯಾವ ಗುಂಪಿನವರಿಗೇ ಆಗಲಿ ದೇವಸ್ಥಾನ ಪ್ರವೇಶಕ್ಕೆ ಅಡ್ಡಿ ಇರಬಾರದು. ಶಾಸನ ಸಭೆಗಳಲ್ಲಿ ಅಸ್ಪೃಶ್ಯರೆನ್ನಿಸಿಕೊಂಡವರ ಪ್ರತಿನಿಧಿಗಳು ಹೆಚ್ಚು ಜನ ಇರಬೇಕು. ಈ ಪ್ರತಿನಿಧಿಗಲನ್ನು ಸರ್ಕಾರ ಆರಿಸಿ ನೇಮಿಸಬಾರದು. ಜನರೇ ಚುನಾಯಿಸುವಂತೆ ಇರಬೇಕು. ಸೈನ್ಯದಲ್ಲಿ ಮತ್ತು ಪೊಲೀಸು ಇಲಾಖೆಯಲ್ಲಿ ಇವರಿಗೆ ಹೆಚ್ಚು ಹೆಚ್ಚಾಗಿ ಕೆಲಸಗಳನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು.

ನಿರ್ಭಯ, ದೃಢ ಮನಸ್ಸು

ಹಿಂದು ಸಮಾಜದಲ್ಲಿ ಕಷ್ಟಪಟ್ಟವರಿಗೆ ನ್ಯಾಯ ದೊರೆಯಲೇಬೇಕು. ಇದು ಅಂಬೇಡಕರರ ವಜ್ರಸಂಕಲ್ಪ. ಇದಕ್ಕಾಗಿ ಅವರು ಯಾರನ್ನಾದರೂ ಎದುರಿಸಲು ಸಿದ್ಧವಾಗಿದ್ದರು.

ಭಾರತದ ಸಮಸ್ಯೆಗಳನ್ನು ಚರ್ಚೆ ಮಾಡುವ ಸಲುವಾಗಿ ಬ್ರಿಟಿಷ್‌ ಸರ್ಕಾರ ಭಾರತದ ಹಲವರು ನಾಯಕರ ಸಭೆ ಕರೆಯಿತು. ಈ ಸಭೆಗಳು ಲಂಡನ್ನಿನಲ್ಲಿ ನಡೆದವು. ‘ದುಂಡುಮೇಜಿನ ಪರಿಷತ್ತುಗಳು’ ಎಂದು ಈ ಸಭೆಗಳನ್ನು ಕರೆಯುತ್ತಾರೆ. ಗಾಂಧೀಜಿಯವರೂ ಇವುಗಳಲ್ಲಿ ಭಾಗವಹಿಸಿದರು. ದುಂಡುಮೇಜಿನ ಪರಿಷತ್ತಿನಲ್ಲಿ ಅಂಬೇಡಕರರು ಸರ್ಕಾರದ ಬಗ್ಗೆ ಕಟು ಟೀಕೆ ಮಾಡಿದರು. ಬ್ರಿಟಿಷ್‌ ಆಡಳಿತ ಹಿಂದುಳಿದ ವರ್ಗದವರಿಗೆ ಸಾಮಾಜಿಕ ಸಮಾನತೆಯನ್ನು ಒದಗಿಸಲಿಲ್ಲ. ಇತರ ಹಿಂದುಗಳು ಅನುಸರಿಸಿದ ಧೋರಣೆಯನ್ನೇ ಬ್ರಿಟಿಷರೂ ಅನುಸರಿಸಿದರು ಎಂದು ಹೇಳಿದರು.

ಅಸ್ಪೃಶ್ಯರನ್ನು ‘ಹರಿಜನರು’ ಎಂಬ ಹೊಸ ಹೆಸರಿನಿಂದ ಗಾಂಧೀಜಿ ಕರೆಯಲು ಪ್ರಾರಂಭಿಸಿದ್ದ ಕಾಲ ಅದು. ಲಕ್ಷಾಂತರ ಮಂದಿ ಭಕ್ತಿಯಿಂದ ಅವರ ಹೆಜ್ಜೆಯಲ್ಲಿ ಹೆಜ್ಜೆ ಇಡುತ್ತಿದ್ದ ಕಾಲ. ಆದರೆ ಅಸ್ಪೃಶ್ಯರಿಗೆ ಹೇಗೆ ನ್ಯಾಯ ದೊರಕಿಸಬೇಕು ಎನ್ನುವ ವಿಷಯದಲ್ಲಿ ಅಂಬೇಡಕರರು ಗಾಂಧೀಜಿಯ ಅಭಿಪ್ರಾಯಗಳನ್ನು ಬಹಿರಂಗವಾಗಿ ವಿರೋಧಿಸಿದರು, ತಮಗೆ ಸರಿ ಎಂದು ಕಂಡ ಅಭಿಪ್ರಾಯವನ್ನು ಸಮರ್ಥಿಸಿದರು.

೧೯೩೧ ರಲ್ಲಿ ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಅಂಬೇಡಕರರು ಹರಿಜನರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ಪಡೆಯಲು ಪಟ್ಟು ಹಿಡಿದರು. ಇದರಿಂದ ಹರಿಜನರು ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ತಮ್ಮ ಪ್ರತಿನಿಧಿಗಳನ್ನು ಆರಿಸಬಹುದಾಗಿತ್ತು.

ಮಹಾತ್ಮರ ಉಪವಾಸ

ಪ್ರತ್ಯೇಕ ಮತದಾನ ಹರಿಜನರನ್ನು ಹಿಂದುಗಳಿಂದ ಬೇರ್ಪಡಿಸುತ್ತದೆ ಎನ್ನಿಸಿತು ಗಾಂಧೀಜಿಯವರಿಗೆ. ಹಿಂದು ಸಮಾಜ ಒಡೆಯುವುದೆಂಬ ಯೋಚನೆಯೇ ತುಂಬ ನೋವನ್ನು ಉಂಟುಮಾಡಿತು. ಪ್ರತ್ಯೇಕ ಮತದಾನದ ವಿರುದ್ಧ ಅವರು ಉಪವಾಸವನ್ನು ಪ್ರಾರಂಭಿಸಿದರು. ಸಾಯುವವರೆಗೂ ಅಗತ್ಯವಾದರೆ ಉಪವಾಸ ಮಾಡುತ್ತೇನೆ ಎಂದರು.

ಮಹಾತ್ಮರು ಉಪವಾಸ ಮಾಡುತ್ತಾರೆ ಎಂದು ದೇಶದಲ್ಲಿ ಕಳವಳ.

ಗಾಂಧೀಜಿಯವರನ್ನು ಉಳಿಸಲು ಅಂಬೇಡಕರರ ಬಳಿಗೆ ಅನೇಕ ಕಾಂಗ್ರೆಸ್‌ ನಾಯಕರು ಹೊರಟರು.

ಮುಸ್ಲಿಮರು, ಕ್ರಿಶ್ಚಿಯನರು, ಸಿಖ್ಖರು ಪ್ರತ್ಯೇಕ ಮತದಾನ ಹಕ್ಕುಗಳನ್ನು ಪಡೆದಿದ್ದಾರೆ. ಅದರ ವಿರುದ್ಧ ಗಾಂಧೀಜಿ ಉಪವಾಸ ಮಾಡಲಿಲ್ಲ, ಹರಿಜನರಿಗೆ ಪ್ರತ್ಯೇಕ ಮತದಾನ ಬೇಡ ಎಂದು ಏಕೆ ಉಪವಾಸ ಮಾಡಬೇಕಲು ಎಂದು ಅಂಬೇಡಕರ್ ಪ್ರಶ್ನಿಸಿದರು. “ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನದ ಹಕ್ಕು ಕೊಡಲು ನಿಮಗೆ ಒಪ್ಪಿಗೆ ಇಲ್ಲವಾದರೆ ಅವರಿಗೆ ಬೇರೆ ಪರಿಹಾರವೇನು? ಗಾಂಧಿಯವರನ್ನು ಉಳಿಸುವುದು ಅಗತ್ಯ, ಆದರೆ ಅದಕ್ಕೋಸ್ಕರ ನಾನು ಹಿಂದುಳಿದ ವರ್ಗಗಳ ಹಿತವನ್ನು ಬಿಟ್ಟುಕೊಡಲಾರೆ” ಎಂದರು. “ಬ್ರಿಟಿಷರು ಕೊಟ್ಟಿರುವುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಅಸ್ಪೃಶ್ಯರಿಗಾಗಿ ಕಾದಿರಿಸಿದರೆ, ನಾನು ಪ್ರತ್ಯೇಕ ಮತದಾನ ಬೇಡಿಕೆಯನ್ನು ಕೈ ಬಿಡುತ್ತೇನೆ” ಎಂದು ತಿಳಿಸಿದರು.

ಕಡೆಗೆ ಸಂಧಾನಕ್ಕಾಗಿ ಹೋಗಿದ್ದ ನಾಯಕರಿಗೂ ಅಂಬೇಡಕರರಿಗೂ ಒಪ್ಪಂದವಾಯಿತು. ಶಾಸನಸಭೆಗಳ ಸ್ಥಾನಗಳಲ್ಲಿ ನೂರರಲ್ಲಿ ಹತ್ತರಷ್ಟನ್ನು ಹರಿಜನರಿಗೆ ಕಾದಿರಿಸಲು ತೀರ್ಮಾನವಾಯಿತು. ಅಂಬೇಡಕರರು ಪ್ರತ್ಯೇಕ ಮತದಾನದ ಕೋರಿಕೆಯನ್ನು ಕೈ ಬಿಟ್ಟರು. ಗಾಂಧೀಜಿಯವರೂ ತಮ್ಮ ಉಪವಾಸ ಮುಕ್ತಾಯಗೊಳಿಸಿದರು.

ಪೂನಾ ಒಪ್ಪಂದವೆಂದು ಪ್ರಸಿದ್ಧವಾದ ಈ ಒಪ್ಪಂದ ಹಿಂದುಳಿದ ವರ್ಗದ ಹೋರಾಟದ ಮತ್ತೊಂದು ಘಟ್ಟ.

ಧರ್ಮ ಬೇಕು ಜಾತೀಯತೆ ಹೋಗಬೇಕು

ಅಸ್ಪೃರ್ಶಯತೆ ಜಾತೀಯತೆಯ ಒಂದು ಕೊಂಬೆ, ಜಾತೀಯತೆ ಅಳಿಸಿಹೋಗುವವರೆಗೆ ಅಸ್ಪೃಶ್ಯತೆ ಹೋಗುವುದಿಲ್ಲ ಎಂಬ ದೃಢ ನಂಬಿಕೆ ಅಂಬೇಡಕರ್ ಅವರದು. ಜಾತೀಯತೆ ಅಳಿಸಲು ರಾಜಕೀಯ ಅಧಿಕಾರ ಅತ್ಯವಶ್ಯಕ ಎಂಬುದು ಅವರ ವಾದ. ಮಾನವನಿಗೆ ಧರ್ಮ ಅಗತ್ಯ ಎಂದು ಅವರು ನಂಬಿದ್ದರು. ಆದರೆ ಧರ್ಮದ ಹೆಸರಿನಲ್ಲಿ ಕೆಲವರನ್ನು ಪಶುವಿನಂತೆ ಕಾಣುವ ಪ್ರವೃತ್ತಿ ವಿರುದ್ಧ ಅವರು ಸಿಡಿದೆದ್ದರು. ಎಷ್ಟೋ ಮಂದಿ ಅವರನ್ನು ಟೀಕಿಸಿದರು. ಹಲವು ಪತ್ರಿಕೆಗಳೂ ಆಕ್ಷೇಪಿಸಿದುವು. ಅವರ ಜೀವಕ್ಕೇ ಅಪಾಯ ಉಂಟಾದ ಸನ್ನಿವೇಶಗಳೂ ಉಂಟು. ಜಾತೀಯತೆಯಿಂದ ಬಹು ಪ್ರತಿಭಾನ್ವಿತನೂ ಮುಂದಕ್ಕೆ ಬರುವಂತಿಲ್ಲ, ಅವನ ಜಾತಿಯನ್ನೇ ಮುಂದು ಮಾಡಿ, ಅವನನ್ನು ನಿಸ್ತೇಜನನ್ನಾಗಿ ಮಾಡುತ್ತಾರೆ ಎಂಬುದು ಅಂಬೇಡಕರರ ಅನುಭವಕ್ಕೆ ಬಂದಿತ್ತು. ಅವರ ಹೋರಾಟ ಈ ಜಾತೀಯತೆಯ ವಿರುದ್ಧ ಸಾಗಿತ್ತು. ನ್ಯಾಯ ಪಡೆಯುವುದು ಎಷ್ಟು ಕಷ್ಟ, ನಮ್ಮ ಜನರ ಮನಸ್ಸು ಎಷ್ಟೊಂದು ಸಂಕುಚಿತ ಎಂಬುದನ್ನು ಕಂಡು ಅವರಿಗೆ ಬಹು ಬೇಸರವಾಗಿತ್ತು. ಹಿಂದು ಧರ್ಮವನ್ನು ಬಿಡುವುದೇ ಉತ್ತಮ ಎಂದೂ ಹೇಳಿದರು.

ಇವರ ಪ್ರಕಟನೆಯನ್ನು ಕೇಳಿ ಮುಸ್ಲಿಂ ಮತ್ತು ಕ್ರೈಸ್ತ ಗುರುಗಳು – ಮತ ಪ್ರಚಾರಕರು ಅಂಬೇಡಕರರನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಅವರನ್ನು ಭೇಟಿ ಮಾಡಿ, ಮತಾಂತರಗೊಂಡ ಅಸ್ಪೃಶ್ಯರಿಗೆ ತಮ್ಮ ಧರ್ಮದಲ್ಲಿ ಸಮಾನ ಸ್ಥಾನಮಾನಗಳನ್ನು ಕೊಡುತ್ತೇವೆ ಎಂದು ಭರವಸೆ ಕೊಟ್ಟರು.

ಸಂವಿಧಾನ ಶಿಲ್ಪಿ

ಇಂದು ಅಂಬೇಡಕರರ ಹೆಸರು ಭಾರತದ ಇತಿಹಾಸದಲ್ಲಿ ಉಳಿದಿರುವುದು ಮುಖ್ಯವಾಗಿ ಅವರು ಭಾರತದ ರಾಜ್ಯಾಂಗ ರಚನೆಯಲ್ಲಿ ನಿರ್ವಹಿಸಿದ ಪಾತ್ರದಿಂದ. ಭಾರತೀಯರಿಗೆ ಪರಕೀಯರ ಆಡಳಿತದಿಂದ ೧೯೪೭ ಆಗಸ್ಟ್‌ ೧೫ ರಂದು ಮುಕ್ತಿ ದೊರೆಯಿತು.

ಅಂಬೇಡಕರರು ಸ್ವತಂತ್ರ ಭಾರತದ ಮೊದಲನೆಯ ಕಾನೂನು ಮಂತ್ರಿಗಳಾದರು. ಇಡೀ ಭಾರತ ಅವರ ನೇಮಕವನ್ನು ಮುಕ್ತ ಕಂಠದಿಂದ ಸ್ವಾಗತಿಸಿತು. ಮಂತ್ರಿಗಳಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು.

ದೇಶಕ್ಕೆ ಸ್ವಾತಂತ್ಯ್ರವೇನೂ ಬಂದಿತು. ಕೋಟ್ಯಂತರ ಜನರಿರುವ ಈ ವಿಶಾಲವಾದ ದೇಶದ ಆಡಳಿತ ಹೇಗೆ ನಡೆಯಬೇಕು ಎಂಬುದು ತೀರ್ಮಾನವಾಗಬೇಕಾಗಿತ್ತು. ದೇಶದಲ್ಲಿ ಚುನಾವಣೆಗಳು ಹೇಗೆ ನಡೆಯಬೇಕು, ಜನರ ಹಕ್ಕುಗಳೇನು, ಶಾಸನಗಳನ್ನು ಹೇಗೆ ಮಾಡಬೇಕು, ಸರ್ಕಾರ ಹೇಗೆ ನಡೆಯಬೇಕು, ನ್ಯಾಯಾಲಯಗಳು ಹೇಗೆ ಕೆಲಸ ಮಾಡಬೇಕು – ಇಂತಹ ಬಹು ಮುಖ್ಯವಾದ ವಿಷಯಗಳೆಲ್ಲ ತೀರ್ಮಾನವಗಿ ನಿಯಮಗಳಾಗಬೇಕಾಗಿತ್ತು. ಈ ನಿಯಮಗಳೆಲ್ಲ ಸೇರಿ ‘ರಾಜ್ಯಾಂಗ ಘಟನೆ’ ಅಥವಾ ‘ಸಂವಿಧಾನ’ ಎಂದು ಹೆಸರು.

ಇದನ್ನು ಸಿದ್ಧಗೊಳಿಸುವುದು ಬಹು ಕಷ್ಟದ ಕೆಲಸ. ಇದನ್ನು ಸಿದ್ಧಮಾಡುವವರಿಗೆ ಹಲವು ದೇಶಗಳ ಸಂವಿಧಾನಗಳ ಅಭ್ಯಾಸ, ಕಾನೂನಿನ ಆಳವಾದ ಜ್ಞಾನ, ಭಾರತದ ಚರಿತ್ರೆ ಮತ್ತು ಸಮಾಜಗಳ ಪರಿಚಯ, ಹಲವು ಅಭಿಪ್ರಾಯಗಳನ್ನು ತೂಗಿ ನೋಡುವ ತಾಳ್ಮೆ ಮತ್ತು ವಿವೇಕ ಇವೆಲ್ಲ ಅಗತ್ಯವಾಗಿತ್ತು.

೧೯೪೭ ರ ಆಗಸ್ಟ್‌ ೨೯ ರಂದು ಭಾರತದ ರಾಜ್ಯಾಂಗ ಸಿದ್ಧಗೊಳಿಸಲು ಒಂದು ಸಮಿತಿ ರಚಿತವಾಯಿತು. ಅಧ್ಯಕ್ಷರಾಗಿ ಅಂಬೇಡಕರ್ ಆಯ್ಕೆಯಾದರು. ಸಮಿತಿಯ ಒಬ್ಬ ಸದಸ್ಯರಾಗಿದ್ದ ಶ್ರೀ ಟಿ.ಟಿ. ಕೃಷ್ಣಮಾಚಾರಿಯವರೇ ಹೀಗೆ ಹೇಳಿದ್ದಾರೆ:

“ರಾಜ್ಯಾಂಗ ರಚಿಸಲು ಏಳು ಜನರ ಸಮಿತಿ ರಚಿಸಿದರೂ ಒಬ್ಬರು ರಾಜಿನಾಮೆ ಇತ್ತರು. ಅವರ ಬದಲು ಮತ್ತೊಬ್ಬರನ್ನು ನೇಮಿಸಲಾಯಿತು. ಮತ್ತೊಬ್ಬರು ಮೃತರಾದರು. ಆದರೆ ಅವರ ಜಾಗಕ್ಕೆ ಯಾರನ್ನೂ ನೇಮಿಸಲಿಲ್ಲ. ಒಬ್ಬರು ಬಹುಮಟ್ಟಿಗೆ ಸರ್ಕಾರದ ಕೆಲಸಗಳಲ್ಲಿ ನಿರತರಾಗಿದ್ದರು. ಅನಾರೋಗ್ಯದ ಕಾರಣದಿಂದ ಇಬ್ಬರು ದೆಹಲಿಯಿಂದ ದೂರ ಇದ್ದರು. ಪರಿಣಾಮವಾಗಿ ಡಾ|| ಅಂಬೇಡಕರರೊಬ್ಬರೇ ರಾಜ್ಯಾಂಗದ ಕರಡು ಪ್ರತಿ ತಯಾರಿಸುವ ಭಾರ ಹೊರಬೇಕಾಯಿತು. ಅವರು ಮಾಡಿದ ಕೆಲಸ ಮೆಚ್ಚುವಂತಿದೆ.”

ಡಾ|| ಅಂಬೇಡಕರರು ೧೯೪೮ನೆಯ ನವೆಂಬರ್ ನಾಲ್ಕರಂದು ರಾಜ್ಯಾಂಗದ ಕರಡುಪ್ರತಿಯನ್ನು ರಾಜ್ಯಾಂಗ ರಚನಾ ಸಭೆಯಲ್ಲಿ ಮಂಡಿಸಿದರು.

ರಾಜ್ಯಾಂಗದ ವಿವಿಧ ವಿಧಿಗಳ ಬಗ್ಗೆ ಎದ್ದ ವಿವಾದಗಳಿಗೆಲ್ಲಾ ಅವರು ಸೂಕ್ತ ಉತ್ತರಗಳನ್ನು ಕೊಟ್ಟರು.

ಅಸ್ಪೃಶ್ಯತೆಯನ್ನು ಅಳಿಸಿಹಾಕುವ ನಿಯಮ ೧೯೪೮ ನೆಯ ನವೆಂಬರ್ ೨೯ ರಂದು ಅನುಮೋದಿತವಾಯಿತು. ಅಂಬೇಡಕರರ ಹೋರಾಟಕ್ಕೆ ಅವರ ಜೀವಿತಕಾಲದಲ್ಲೇ ಪ್ರತಿಫಲ ದೊರೆಯಿತು. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.

ಭಾರತದ ಸಂವಿಧಾನದ ಮೇಲೆ ನಡೆದ ಚರ್ಚೆಗೆ ಉತ್ತರ ಕೊಡುತ್ತ ಡಾಕ್ಟರ್ ಅಂಬೇಡಕರರು ಹೇಳಿದ ಮಾತುಗಳು ನಾವು ನೆನಪಿಡಬೇಕಾದಂತಹವು:

“ಭಾರತ ತನ್ನ ಸ್ವಾತಂತ್ಯ್ರವನ್ನು ತನ್ನ ಪ್ರಜೆಗಳ ದೇಶದ್ರೋಹದಿಂದಲೇ ಕಳೆದುಕೊಂಡಿದೆ. ಸಿಂಧ್‌ನ ರಾಜದಾಹಿರ್ ಮಹಮದ್‌ -ಬಿನ್‌-ಖಾಸಿಮನಿಗೆ ಸೋತ. ಸಿಂಧ್‌ನ ಸೈನ್ಯಾಧಿಕಾರಿಗಳು ಖಾನನ ಕಡೆಯವರಿಂದ ಲಂಚಪಡೆದು ರಾಜನ ಪರ ಯುದ್ಧ ಮಾಡದಿದ್ದುದೇ ಇದಕ್ಕೆ ಕಾರಣ. ಪೃಥ್ವೀರಾಜನ ವಿರುದ್ಧ ಹೋರಾಡಲು ಮಹಮದ್‌ ಘೋರಿಯನ್ನು ಕರೆಸಿದ್ದು ಭಾರತದ ರಾಜಾಜಯಚಂದ. ಶಿವಾಜಿ ಹಿಂದುಗಳ ಬಿಡುಗಡೆಗಾಗಿ ಹೋರಾಡುತ್ತಿದ್ದಾಗ, ಇತರ ಮರಾಠಿ ನಾಯಕರು ಮತ್ತು ರಜಪೂತರು ಮೊಗಲರ ಪರ ಹೋರಾಡುತ್ತಿದ್ದರು. ಸಿಖ್ಖರು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ ಅವರ ಮುಖಂಡ ತೆಪ್ಪಗಿದ್ದ… ಮತ್ತೆ ಇಂತಹ ಪರಿಸ್ಥಿತಿ ಬಾರದಂತೆ, ಭಾರತದ ಸ್ವಾತಂತ್ಯ್ರ ರಕ್ಷಣೆಗೆ ಎಲ್ಲರೂ ತಮ್ಮ ದೇಹದಲ್ಲಿ ಕೊನೆಯ ತೊಟ್ಟು ರಕ್ತವಿರುವವರೆಗೆ ಹೋರಾಡುವ ಪಣ ತೊಡಬೇಕು.”

ಭಾರತದ ಸಂವಿಧಾನದ ಕರಡನ್ನು ೧೯೪೯ ನೆಯ ನವೆಂಬರ್ ೨೬ ರಂದು ಸಭೆ ಒಪ್ಪಿತು.

ಅಸ್ಪೃಶ್ಯನೆಂದು ದೂರ ತಳ್ಳಿದ್ದ – ಅವನು ಮುಟ್ಟಿದ ನೀರು ಮೈಲಿಗೆ ಎನ್ನಿಸಿಕೊಂಡ – ಮಹರ್ ಕುಲದ ಡಾ|| ಅಂಬೇಡಕರ್ ತಮ್ಮ ಪ್ರತಿಭೆಯಿಂದ, ವಿದ್ಯೆಯಿಂದ, ಛಲದಿಂದ ಭಾರತದ ಸಂವಿಧಾನ ರಚಿಸಿ ರೂಪಿಸಿ ಸಂವಿಧಾನ ಶಿಲ್ಪಿ ಎನ್ನಿಸಿಕೊಂಡರು.

ಅಂಬೇಡಕರರ ಹೆಂಡತಿ ರಮಾಬಾಯಿ ಹಿಂದೆಯೇ ತೀರಿಕೊಂಡಿದ್ದರು. ಅಂಬೇಡಕರರು ಕೆಲವು ವರ್ಷಗಳ ನಂತರ ತಮ್ಮ ಶುಷ್ರೂಷೆ ಮಾಡುತ್ತಿದ್ದ ಡಾ|| ಶಾರದಾ ಕಬೀರ್ ಎಂಬುವರನ್ನು ಮದುವೆಯಾದರು.

೧೯೫೧ ರಲ್ಲಿ ಅಂಬೇಡಕರರು ಕಾನೂನು ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟರು.

ಮಂತ್ರಿ ಪದವಿ ಬಿಟ್ಟ ನಂತರ

೧೯೫೨ ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿಯ ಕೈಯಿಂದ ಸೋಲನ್ನು ಅನುಭವಿಸಬೇಕಾಯಿತು. ಅವರ ಸೋಲಿನಿಂದ ಇಡೀ ದೇಶ ಚಕಿತಗೊಂಡಿತು.

ಕೆಲವು ದಿನಗಳನಂತರ ಅವರು ರಾಜ್ಯಸಭೆಗೆ ಚುನಾಯಿತರಾದರು. ಸರ್ಕಾರ ಹರಿಜನರಿಗೆ ನ್ಯಾಯ ದೊರಕಿಸಿಲ್ಲ ಎಂದು ಅವರಿಗೆ ತೋರಿದಾಗಲೆಲ್ಲ ನಿರ್ಭಯವಾಗಿ, ಸ್ಪಷ್ಟವಾಗಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದರು. ೧೯೫೩ ರಲ್ಲಿ ಸರ್ಕಾರ ಪಾರ್ಲಿಮೆಂಟಿನ ಮುಂದೆ ಒಂದು ಮಸೂದೆಯನ್ನು ಮಂಡಿಸಿತು. ಇದರ ಪ್ರಕಾರ ಅಸ್ಪೃಶ್ಯತೆಯನ್ನು ಆಚರಿಸುವವರಿಗೆ ಸೆರೆಮನೆ ವಾಸ, ಜುಲ್ಮಾನೆ, ಕೆಲಸದಿಂದ ತೆಗೆಯುವುದು, ಅವರ ವೃತ್ತಿಗೆ ಕೊಟ್ಟ ‘ಅಪ್ಪಣೆಪತ್ರ’ವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಇಂತಹ ಶಿಕ್ಷೆಗಳನ್ನು ವಿಧಿಸುವಂತಾಯಿತು.

ಬುದ್ಧ ಗುರುವಿನ ಮಾರ್ಗಕ್ಕೆ

ಅನಂತರ ಅವರ ಮನಸ್ಸು ಬುದ್ಧನ ಕಡೆಗೆ ಮತ್ತೆ ಹರಿದಿತ್ತು. ಶಾಂತಿಯನ್ನೂ ನ್ಯಾಯವನ್ನೂ ಬಯಸುತ್ತಿತ್ತು. ೧೯೫೦ ರಲ್ಲಿ ಸಿಂಹಳದ ಬೌದ್ಧ ಸಮ್ಮೇಳನಕ್ಕೆ ಹೋಗಿ ಬಂದರು.

ಅವರ ಮನಸ್ಸಿನ ಕಹಿ ಹೆಚ್ಚುತ್ತಲೇ ಇತ್ತು. ಆದರೂ ಅವರು ಕ್ರೈಸ್ತರ ಮತ್ತು ಮುಸ್ಲಿಮರ ಮತಕ್ಕೆ ಸೇರಲು ಸಿದ್ಧರಿರಲಿಲ್ಲ. ಆ ಮತಗಳಲ್ಲೂ ಭೇದದ ವಿಷವನ್ನು ಅವರು ಕಂಡಿದ್ದರು.

ಕಡೆಗೆ ಅಂಬೇಡಕರರು ಬೌದ್ಧಮತಕ್ಕೆ ಸೇರಲು ತೀರ್ಮಾನಿಸಿದರು.

ಇದು ಅವರ ಜೀವನದಲ್ಲಿ ಬಹು ದೊಡ್ಡ ನಿರ್ಣಯ, ಬಹು ಯೋಚಿಸಿ ಕೈಗೊಂಡ ನಿರ್ಣಯ.

ಬೌದ್ಧಮತವನ್ನು ಅವರು ಆರಿಸಿಕೊಂಡರೇಕೆ?

ಅವರ ಮಿತ್ರರಾಗಿದ್ದ ದತ್ತೋಪಂತ ಠೇಂಗಡಿಯವರಿಗೆ ಅಂಬೇಡಕರರು ಹೇಳಿದರು:

“ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ. ನಮ್ಮ ಜನರ ಮೇಲೆ ನಾಲ್ಕೂ ಕಡೆಗಳಿಂದ ಬೇರೆ ದೇಶಗಳ ವಿಚಾರಗಳ ದಾಳಿ ನಡೆಯುತ್ತಿದೆ. ಇದರಿಂದ ನಮ್ಮ ಜನಕ್ಕೆ ದಿಕ್ಕು ತೋರದೆ ಹೋಗಬಹುದು. ಈ ದೇಶದಲ್ಲಿ ಕಷ್ಟಪಡುತ್ತಿರುವವರನ್ನು,ಈ ದೇಶದ ಮೂಲ ಜೀವನಪ್ರವಾಹದಿಂದ ಬೇರ್ಪಡಿಸಿ ಬೇರೆ ದೇಶಗಳ ಕಡೆಗೆ ಎಳೆದುಕೊಳ್ಳುವ ಪ್ರಯತ್ನ ತೀವ್ರವಾಗಿ ನಡೆಯುತ್ತಿದೆ, ದಿನದಿನಕ್ಕೆ ಇದು ವೇಗವಾಗುತ್ತಿದೆ… ನನ್ನ ಜೊತೆಗೆ ಕೆಲಸ ಮಾಡುವ ಹಲವರೂ ಅಸ್ಪೃಶ್ಯತೆ, ಬಡತನ, ಅಸಮಾನತೆ ಇವುಗಳಿಂದ ಬೇಸತ್ತು ಈ ಪ್ರವಾಹದಲ್ಲಿ ಕೊಚ್ಚಿಹೋಗಲು ತಯಾರಿದ್ದಾರೆ. ಇನ್ನು ಇತರರ ಪಾಡೇನು? ರಾಷ್ಟ್ರದ ಮೂಲಧಾರೆಯಿಂದ ಅವರು ಪ್ರತ್ಯೇಕವಾಗಿರುವ ಹಾಗೆ ಅವರಿಗೆ ಯಾವುದಾದರೂ ದಾರಿಯನ್ನು ತೋರಿಸಬೇಕಾಗಿದೆ. ಜೊತೆಗೆ ನಮ್ಮ ಆರ್ಥಿಕ ಮತ್ತು ರಾಜಕೀಯ ಜೀವನದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಬೇಕಾಗಿದೆ. ಆದ್ದರಿಂದಲೇ ನಾನು ಬೌದ್ಧಮತ ಸೇರುವ ನಿಶ್ಚಯ ಮಾಡಿದ್ದೇನೆ.”

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಧಾರೆಯಂತೆ ನಡೆದುಕೊಂಡು ಬಂದಿರುವ ಜೀವನರೀತಿ ಒಂದಿದೆ, ಬೌದ್ಧ ಮತ ಅದಕ್ಕೆ ವಿರುದ್ಧವಲ್ಲ. ಹಿಂದುಳಿದವರು ತಮಗಾದ ಅನ್ಯಾಯಕ್ಕೆ ಪ್ರತಿಭಟಿಸಬೇಕು, ಅದನ್ನು ತೊಡೆದುಹಾಕಬೇಕು. ಅಸ್ಪೃಶ್ಯತೆ ಹಿಂದು ಸಮಾಜದ ಸಮಸ್ಯೆ. ಇದನ್ನು ಪರಿಹರಿಸಲು ಭಾರತದ ಸಂಸ್ಕೃತಿ, ಇತಿಹಾಸಗಳಿಗೆ ಕುಂದುಬಾರದ ಮಾರ್ಗವನ್ನು ಅನುಸರಿಸಬೇಕು – ಇದು ಅವರ ನಿರ್ಣಯದ ಆಸ್ತಿಭಾರ.

ಆರ್ಯರು ಬೇರ ಪ್ರದೇಶದಿಂದ ಬಂದರು, ಇಲ್ಲಿ ಇದ್ದ ‘ದಸ್ಯು’ಗಳನ್ನು (ದ್ರಾವಿಡರನ್ನು) ಗೆದ್ದರು ಎಂಬ ಅಭಿಪ್ರಾಯವನ್ನು ಅವರು ಒಪ್ಪುತ್ತಿರಲಿಲ್ಲ. ಇದಕ್ಕೆ ವೇದಗಳಲ್ಲಿ ‘ಆರ್ಯ’ ಎನ್ನುವ ಪದ ೩೩-೩೪ ಬಾರಿ ಬರುತ್ತದೆ, ‘ದೊಡ್ಡವರು’ ಎಂಬ ಅರ್ಥದಲ್ಲಿ ಗುಣವಾಚಕವಾಗಿ ಬಳಕೆಯಾಗಿದೆ, ಮಹಾಭಾರತದಲ್ಲಿ’ ಎಲ್ಲ ವರ್ಣಗಳಲ್ಲಿಯೂ ಎಲ್ಲ ಆಶ್ರಮಗಳಲ್ಲಿಯೂ ದಸ್ಯುಗಳನ್ನು ಕಾಣಬಹುದು’ ಎಂದು ಹೇಳಿದೆ – ಹೀಗೆ ಅವರು ತಮ್ಮ ಅಭಿಪ್ರಾಯವನ್ನು ಸಮರ್ಥಿಸುತ್ತಿದ್ದರು.

೧೯೫೬ ರ ಅಕ್ಟೋಬರ್ ೧೪ ರಂದು ನಾಗಪುರದಲ್ಲಿ ನಡೆದ ಒಂದು ಬೃಹತ್‌ ಸಮಾರಂಭದಲ್ಲಿ ಅಂಬೇಡಕರರು ತಮ್ಮ ಪತ್ನಿಯೊಡನೆ ಬೌದ್ಧ ಮತಕ್ಕೆ ಸೇರಿದರು.

ಸಾರ್ಥಕ ಬಾಳು

ಅಂಬೇಡಕರ ಇಡೀ ಜೀವನ ಅಸ್ಪೃಶ್ಯರೆನ್ನಿಸಿಕೊಂಡವರಿಗೆ ನ್ಯಾಯವನ್ನೂ ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಯಿತು. ‘ಅಸ್ಪೃಶ್ಯರ ಹಿತವನ್ನು ಸಾಧಿಸುವವರೆಗೆ ದೇವರು ನನ್ನನ್ನು ಉಳಿಸಿರುವನು’ ಎಂದು ಎಷ್ಟೋ ಬಾರಿ ಅವರು ಹೇಳಿದ್ದರು. ಭಾರತದಲ್ಲಿ ಅಸ್ಪೃಶ್ಯತೆ ಅಪರಾಧ ಎಂದು ಕಾನೂನು ಆಗುವುದನ್ನು ಕಣ್ಣಾರೆ ಕಂಡರು. ಅಸ್ಪೃಶ್ಯರಿಗೆ ರಾಜಕೀಯ ಸಮಾನತೆ ದೊರೆತಿತ್ತು , ಸಾಮಾಜಿಕ ಸಮಾನತೆ ದೊರೆಯಬೇಕು ಎಂಬ ಅರಿವು ದೇಶದಲ್ಲಿ ಬೆಳೆಯುತ್ತಿತ್ತು.

೧೯೫೧ ರಿಂದಲೇ ಅಂಬೇಡಕರರ ಆರೋಗ್ಯ ಕೆಡುತ್ತ ಬಂದಿತ್ತು. ಆದರೆ ಕೆಲಸ ಇರುವಾಗ ಕಾಯಿಲೆಗೆ ನಾನು ಮಣಿಯುವುದಿಲ್ಲ ಎಂದು ಕೆಲಸ ಮಾಡುತ್ತಲೇ ಬಂದರು.

ಅಂಬೇಡ್ಕರ್ ಬರಿಯ ಹೋರಾಟಗಾರರಷ್ಟೇ ಅಲ್ಲ; ವಿಚಾರವಾದಿಗಳೂ ಆಗಿದ್ದರು. ತಮ್ಮ ವಿಚಾರದ ಬಲದಿಂದಲೇ ಅವರು ತುಂಬಾ ದೊಡ್ಡನಾಯಕರಾಗಿದ್ದರು.

ಅಂಬೇಡಕರರಿಗೆ ಪುಸ್ತಕಗಳೆಂದರೆ ಪ್ರಾಣ. ಅದಕ್ಕಾಗಿ ಅವರು ತಮ್ಮ ಮನೆ ‘ರಾಜಗೃಹ’ದಲ್ಲಿ ಒಂದು ಪ್ರತ್ಯೇಕ ವಿಭಾಗವನ್ನೇ ಕಟ್ಟಿಸಿದ್ದರು. ಅವರಿಗೆ ಕಣ್ಣಿನ ಬೇನೆ ಬಂದಾಗ, ‘ಪುಸ್ತಕಗಳನ್ನು ಓದುವಂತಿಲ್ಲವಲ್ಲ’ ಎಂದು ದುಃಖಪಟ್ಟರು. ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿಂದ ಅನೇಕ ಪುಸ್ತಕಗಳನ್ನು ಕೊಂಡು ಶೇಖರಿಸುತ್ತಿದ್ದರು. ಒಮ್ಮೆ ಅವರು ನ್ಯೂಯಾರ್ಕ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಕೊಂಡರು. ‘ಅಸ್ಪೃಶ್ಯರು’, ‘ಬುದ್ಧ ಮತ್ತು ಅವನ ತತ್ವಗಳು’, ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’, ಬುದ್ಧ ಮತ್ತು ಕಾರ್ಲ್‌ಮಾರ್ಕ್ಸ್’, ‘ಹಿಂದು ಮತದ ಒಗಟು’ – ಹೀಗೆ ಅವರೇ ಎಷ್ಟೋ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳು, ಅಂಬೇಡಕರರು ಎಷ್ಟು ಪುಸ್ತಕಗಳನ್ನು ಓದಿ ವಿಷಯಸಂಗ್ರಹ ಮಾಡಿದರು ಎಂಬುದಕ್ಕೂ ಅವರ ಸ್ವತಂತ್ರ ಯೋಚನಾ ಶಕ್ತಿಗೂ ಸಾಕ್ಷಿ.

ರೋಷ, ಛಲ, ರಚನಾತ್ಮಕ ದುಡಿಮೆ, ಕರುಣೆ

ರೋಷ, ಛಲ ಇವು ಅಂಬೇಡಕರ ಜೀವನದಲ್ಲಿ ಎದ್ದು ಕಾಣುವ ಮುಖ್ಯ ಗುಣಗಳು ಎಂದು ತೋರಬಹುದು. ಒಂದು ದೃಷ್ಟಿಯಲ್ಲಿ ಇದು ನಿಜ. ಇತರ ಹಿಂದುಗಳು ಅಸ್ಪೃಶ್ಯರೆಂದು ಹೆಸರಿಟ್ಟು ಕೆಲವರಿಗೆ ಅನ್ಯಾಯ ಮಾಡಿದ್ದರು. ಇದು ನೂರಾರು ವರ್ಷಗಳಿಂದ ನಡೆದು ಬಂದಿತ್ತು; ದುರ್ಬಲರಾಗಿದ್ದರೆ ಕಷ್ಟ ತಪ್ಪಿದ್ದಲ್ಲ ಎಂದು ಅಂಬೇಡಕರರು ತಮ್ಮ ವರನ್ನು ಶಕ್ತಗೊಳಿಸಲು ಹೆಣಗಿದರು. ಅವರೇ ಒಮ್ಮೆ ಹೇಳಿದರು: “ಬಲಿ ಕೊಡುವುದು ಸಿಂಹಗಳನ್ನಲ್ಲ. ಆಡುಗಳನ್ನು.” ಅನ್ಯಾಯ ಮಾಡಿದವರ ಮೇಲೆ ಸಿಡಿಲಿನಂತೆ ಎರಗಿದರು. “ಅನ್ಯಾಯವನ್ನು ಸರಿಪಡಿಸುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು. ಬ್ರಿಟಿಷ್‌ ಸರ್ಕಾರವನ್ನು ಎದುರಿಸಿದರು. ಹಿಂದಿನ ಪದ್ಧತಿಗೆ ಕಟ್ಟುಬಿದ್ದ ಹಿಂದುಗಳನ್ನು ಎದುರಿಸಿದರು, ಗಾಂಧೀಜಿಯನ್ನೂ ವಿರೋಧಿಸಿದರು, ಸ್ವತಂತ್ರ ಭಾರತದ ಸರ್ಕಾರವನ್ನು ಟೀಕಿಸಿದರು. ತಮ್ಮ ಜೀವಕ್ಕೆ ಅಪಾಯವಾದುದನ್ನೂ ಲಕ್ಷಿಸದೆ ಅಸ್ಪೃಶ್ಯರಿಗೆ ನ್ಯಾಯ ದೊರಕಿಸಿಕೊಟ್ಟರು.

ಅವರ ಪರ್ವತದಂತಹ ವ್ಯಕ್ತಿತ್ವದ ಇನ್ನೊಂದು ಮುಖವನ್ನೂ ನಾವು ಗಮನಿಸಬೇಕು. ಅವರು ಒಳ್ಳೆಯ ವಿದ್ವಾಂಸರಾಗಿದ್ದರು. ಹುಡುಗರಾಗಿದ್ದಾಗ ಸಂಸ್ಕೃತ ಕಲಿಯಕೂಡದು ಎಂದು ಶಾಲೆಯಲ್ಲಿ ನಿರ್ಬಂಧಕ್ಕೆ ಸಿಕ್ಕರೂ ದೊಡ್ಡವರಾದನಂತರ ಸಂಸ್ಕೃತ ಕಲಿತರು. ಪೀಪಲ್ಸ್‌ ಎಜ್ಯುಕೇಷನ್‌ ಸೊಸೈಟಿ” ಎಂಬ ಸಂಸ್ಥೆಯ ಅಧ್ಯಕ್ಷರಾಗಿ ಹಲವು ಶಾಲೆ ಕಾಲೇಜುಗಳನ್ನು ನಡೆಸಿ ಹಿಂದುಳಿದ ವರ್ಗದವರ ವಿದ್ಯಾಭ್ಯಾಸಕ್ಕೆ ದಾರಿ ಮಾಡಿದರು. ಔರಂಗಬಾದನಲ್ಲಿ ಕೆಲವು ದಿನಗಳು ಅವರು ಇದ್ದರು; ಅಲ್ಲಿನ ಕಾಲೇಜಿನ ಕಾಂಪೌಂಡ್‌ ಬರಿದಾಗಿದ್ದುದನ್ನು ಕಂಡರು. ತಮ್ಮನ್ನು ಭೇಟಿಮಾಡಲು ಬರುವವರು ಒಂದು ಸಸಿಯನ್ನು ನೆಟ್ಟು ಬಂದರೆ ಮಾತ್ರ ತಾವು ಅವರನ್ನು ಕಾಣುವುದಾಗಿ ಹೇಳಿದರು. ಅವರು ಅಲ್ಲಿದ್ದ ಕೆಲವು ದಿನಗಳಲ್ಲಿ ಒಂದು ನೂರಕ್ಕೂ ಹೆಚ್ಚು ಸಸಿಗಳಿಗೆ ಕಾಂಪೌಂಡು ತಯಾರಾಯಿತು.

ಅಂಬೇಡಕರರ ರೋಷದ ಮೂಲ ಕರುಣೆ. ಕಡೆಗೆ ಅವರು ಕರುಣಾಸಾಗರನಾದ ಬುದ್ಧನತ್ತ ತಿರುಗಿದ್ದು ಆಶ್ಚರ್ಯವಲ್ಲ. ಮನುಷ್ಯರಾಗಿ ಹುಟ್ಟಿದರೂ, ಮನುಷ್ಯರಿಗೆ ಸಲ್ಲಬೇಕಾದ ಮರ್ಯಾದೆ – ನ್ಯಾಯಗಳಿಲ್ಲದೆ, ಪ್ರಾಣಿಗಳಿಗೂ ಕೇಡಾಗಿ ಬದುಕಬೇಕಾದವರನ್ನು ಕಂಡು ಅವರ ಹೃದಯ ಕರಗಿತು. ಆದುದರಿಂದಲೇ ಅಸ್ಪೃಶ್ಯತೆಯನ್ನು ವಿರೋಧಿಸಿದರು. ಆದರೆ ಮನುಷ್ಯನಿಗೆ ಧರ್ಮ ಎನ್ನುವುದೊಂದು ಬೇಕು ಎಂದು ಅವರಿಗೆ ಎನ್ನಿಸಿತು. “ಅನ್ನವಷ್ಟೆ ಸಾಲದು ಮನುಷ್ಯನಿಗೆ. ಅವನಿಗೆ ಮನಸ್ಸು ಎಂಬುದಿದೆ, ಅದಕ್ಕೂ ಆಹಾರ ಬೇಕು. ಧರ್ಮ ಮನುಷ್ಯನಲ್ಲಿ ಭರವಸೆಯನ್ನು ಬೆಳೆಸುತ್ತದೆ ಮತ್ತು ಅವನನ್ನು ಕಾರ್ಯತತ್ಪರನನ್ನಾಗಿ ಮಾಡುತ್ತದೆ”. ಎಂದರು. ಅವರ ಅನುಯಾಯಿಗಳಲ್ಲಿ ಒಬ್ಬ ಮುದುಕ. ಒಮ್ಮೆ ಅವರ ಬಳಿಗೆ ಹೋದ. ತಾನು ದೇವರಿಗೆ ಹರಕೆ ಹೊತ್ತಿದ್ದೇನೆ, ಅದನ್ನು ನಡೆಸಿಕೊಡಲು ಅಪ್ಪಣೆ ಕೊಡಿ ಎಂದು ಬೇಡಿದ. ಅಂಬೇಡಕರರು ನಸುನಕ್ಕು, “ನನಗೆ ದೇವರಲ್ಲಿ ನಂಬಿಕೆ ಇಲ್ಲ ಅಂತ ಯಾರು ಹೇಳಿದರು ನಿನಗೆ? ಹೋಗು, ನಿನ್ನ ಮನಸ್ಸಿನಂತೆಯೇ ಮಾಡು” ಎಂದರು. ಒಂದು ದಿನ ಬೆಳಗಿನ ಜಾವ ಎರಡು ಗಂಟೆಗೆ ಮುದುಕಿಯೊಬ್ಬಳು ಅವರ ಮನೆಯ ಬಾಗಿಲನನು ತಟ್ಟಿದಳು. “ತುಂಬಾ ಕಾಯಿಲೆ ಇರುವ ನನ್ನ ಗಂಡನನ್ನು ಆಸ್ಪತ್ರೆಗೆ ಸೇರಿಸಲು ಹನ್ನೆರಡು ಗಂಟೆಗಳ ಕಾಲ ಪ್ರಯತ್ನಿಸಿದೆ, ಆಸ್ಪತ್ರೆಯಲ್ಲಿ ಸ್ಥಳ ಇಲ್ಲ ಎಂದುಬಿಟ್ಟರು” ಎಂದು ಗೋಳಿಟ್ಟಳು. ಅಂಬೇಡಕರರು ತಾವೇ ಅವಳೊಡನೆ ಹೋಗಿ ಅವಳ ಗಂಡನನ್ನು ಆಸ್ಪತ್ರೆಗೆ ಸೇರಿಸಿದರು.

ಅಂಬೇಡಕರರು ಪ್ರಿನ್ಸಿಪಾಲ್‌ ಪದವಿಗೆ ರಾಜಿನಾಮೆ ಕೊಟ್ಟಾಗ ಹುಡುಗನೊಬ್ಬ ಅವರ ಬಳಿ ಬಂದು ಅಳುತ್ತ ನಿಂತ . ಅವನೊಬ್ಬ ಬ್ರಾಹ್ಮಣ ಹುಡುಗ. ತೀರ ಬಡವ. ಎರಡು ವರ್ಷ ಆತನಿಗೆ ವಿದ್ಯಾರ್ಥಿ ವೇತನ ದೊರೆತಿತ್ತು. ಕಡೆಯ ವರ್ಷ ಸಿಕ್ಕುವುದೋ ಇಲ್ಲವೋ ಎಂದು ಆತನಿಗೆ ಕಳವಳ. ಅಂಬೇಡಕರರಿಗೆ ಅವನ ಕಷ್ಟದ ಕಥೆಯನ್ನು ಕೇಳಿ ಸಂಕಟವಾಯಿತು. ಸಮಾಧಾನ ಹೇಳಿದರು. ತಮ್ಮ ಜೊತೆಗೇ ಕೂರಿಸಿಕೊಂಡು ಊಟ ಮಾಡಿದರು. ಆತನಿಗೆ ಐವತ್ತು ರೂಪಾಯಿಗಳನ್ನು ಕೊಟ್ಟರು . “ನಿನಗೆ ಮತ್ತೆ ತೊಂದರೆಯಾದರೆ ಬಂದು ಹೇಳು” ಎಂದು ಬೆನ್ನು ತಟ್ಟಿ ಕಳುಹಿಸಿದರು.

ಅಂಬೇಡಕರರ ಆರೋಗ್ಯವೇ ಕೆಟ್ಟುಹೋಗಿದ್ದಾಗ ಒಂದು ರಾತ್ರಿ ಅವರು ಕೋಲೂರಿಕೊಂಡು, ಜೊತೆಗೆ ಒಬ್ಬನನ್ನು ಕರೆದುಕೊಂಡು, ಕಾಯಿಲೆ ಇದ್ದ ತಮ್ಮ ಮಾಲಿಯನ್ನು ನೋಡಲು ಹೋದರು. ತಾನು ಸತ್ತರೆ ಹೆಂಡತಿಯ ಗತಿ ಏನು ಎಂದು ಕಳವಳದಲ್ಲಿದ್ದ ಮಾಲಿಗೆ ಸಮಾಧಾನ ಮಾಡಿದರು. “ಅಳಬೇಡ, ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕಲ್ಲ? ನಾನೂ ಒಂದು ದಿನ ಸಾಯುವವನೇ. ಧೈರ್ಯ ತಂದುಕೊ. ಔಷಧಿ ಕಳುಹಿಸುತ್ತೇನೆ. ಕುಡಿ, ಸರಿಹೋಗುತ್ತಿ” ಎಂದು ಸಮಾಧಾನ ಹೇಳಿದರು. ಔಷಧಿ ಕಳುಹಿಸಿದರು.

‘ಅಳಬೇಡ, ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕಲ್ಲ? ಧೈರ್ಯ ತಂದುಕೊ.’

ಮರುದಿನವೇ ಮಲಗಿ ನಿದ್ರೆ ಮಾಡುತ್ತಿದ್ದಂತೆ ಅಂಬೇಡಕರರು ೧೯೫೬ನೆಯ ಡಿಸೆಂಬರ್ ಆರರಂದು ತೀರಿಕೊಂಡರು. ಲಕ್ಷಾಂತರ ಜನ ಅವರ ನಿಧನಕ್ಕಾಗಿ ತಮ್ಮ ದುಃಖವನ್ನು ಗೌರವವನ್ನು ತೋರಿಸಿದರು. ಅವರ ಅಂತಿಮ ಯಾತ್ರೆಯಲ್ಲಿ ಐದು ಲಕ್ಷ ಜನ ಭಾಗವಹಿಸಿದ್ದರು.

ಭಾರತರತ್ನ

ತೀರ ಕೆಳಮಟ್ಟಕ್ಕೆ ಸೇರಿದ್ದು ಎಂದು ಗಣಿಸಿದ್ದ ಮಹರ್ ಜಾತಿಯಲ್ಲಿ ಹುಟ್ಟಿದರು ಅಂಬೇಡಕರರು; ಇವರಿಗೆ ಕುಡಿಯಲು ನೀರು ಕೊಡುವುದು ಪಾಪ, ಇವರು ಗಾಡಿಯಲ್ಲಿ ಕುಳಿತರೆ ಮೈಲಿಗೆ ಎಂದು ಜನರು ನಡೆದುಕೊಂಡರು. ಇದೇ ವ್ಯಕ್ತಿ ಇಡೀ ನಾಡಿಗೆ ಸಂವಿಧಾನವನ್ನು ರಚಿಸಿದರು. ಅವರ ಇಡೀ ಬಾಳೇ ಹೋರಾಟವಾಯಿತು. ಅವರನ್ನು ಎಲ್ಲರೂ ಪ್ರೀತಿ-ಗೌರವಗಳಿಂದ ‘ಬಾಬಾಸಾಹೇಬ್‌’ ಎಂದು ಕರೆಯುತ್ತಿದ್ದುದು ಆಶ್ಚರ್ಯವಲ್ಲ. ಸಮಾನತೆಗಾಗಿ, ನ್ಯಾಯಕ್ಕಾಗಿ, ಮಾನವೀಯತೆಗಾಗಿ ಹೋರಾಡಿ ಭಾರತರತ್ನ ಎಂದೆನಿಸಿಕೊಂಡವರು ಡಾಕ್ಟರ್ ಭೀಮರಾವ್‌ ಅಂಬೇಡಕರ್