೧೯೨೮ರಲ್ಲಿ ಜನಿಸಿದ ಶ್ರೀ ಶೇಷಾಧ್ರಿಯವರ ತಂದೆ  ಶ್ರೀ ಬಿ.ಎಸ್. ರಾಜಯ್ಯಂಗಾರ್ಯರು ನಟರಾಗೂ, “ಗಾನ ಕಲಾ ಭೂಷಣಾ” ರಾಗೂ ಖ್ಯಾತರು. ಶ್ರೀ ಸಿ.ಕೆ. ಅಯ್ಯಾಮಣಿಯವರಲ್ಲಿ ಲಯವಾದ್ಯ ಪಾಠವನ್ನು ಪ್ರಾರಂಭಿಸಿ ಶ್ರೀ ನರಸಿಂಹಯ್ಯ, ಶ್ರೀ ಪಾಲಕ್ಕಾಡು ಕುಂಜಮಣಿ ಅವರಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಶ್ರೀ ಹೆಚ್. ಪುಟ್ಟಾಚಾರ್ಯರಿಂದ ಮಾರ್ಗದರ್ಶನವೂ ಅವರಿಗೆ ದೊರಕಿತು. ಪ್ರಧಾನವಾಗಿ ನೃತ್ಯ ಮೇಳಗಳ ಅವಿಭಾಜ್ಯ ಅಂಗವಾಗಿ, ರಾಜ್ಯ, ರಾಷ್ಟ್ರದ ಹೆಸರಾಂತ ನೃತ್ಯ ಕಲಾವಿದರಿಗೆ ಮೃದಂಗ ನುಡಿಸಿ, ಜನಪ್ರಿಯರಾಗಿದ್ದಾರೆ. ಶ್ರೀಮತಿ ಇಂದ್ರಾಣಿ ರೆಹಮಾನ್‌ರ ತಂಡದೊಂದಿಗೆ ಯೂರೋಪ್, ಅಮೆರಿಕ, ಇಂಗ್ಲೆಂಡ್, ಇರಾನ್, ಅಫ್ಘಾನಿಸ್ಥಾನ, ರಷ್ಯಾ ಮುಂತಾದ ದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ, ತಮ್ಮ ಕೈ ಚಳಕ ತೋರಿದ್ದಾರೆ. ಅನೇಕ ಭರತನಾಟ್ಯ ರಚನೆಗಳನ್ನು ರಚಿಸಿದ್ದಾರೆ. ನಾಟ್ಯವಲ್ಲದೆ ಸುಗಮ ಸಂಗೀತ ಕಾರ್ಯಕ್ರಮಗಳಿಗೆ ತಬಲ ಸಾಥಿಯನ್ನೂ ನೀಡಿದ್ದಾರೆ. ರಂಗಭೂಮಿ-ಚಲನಚಿತ್ರಗಳಲ್ಲಿ ಅಭಿನಯಿಸಿದ ಅನುಭವವೂ ಅವರಿಗೆ ಉಂಟು. ಈ ಪರಿಣತಿ ಅನುಭವಗಳನ್ನು ಗುರ್ತಿಸಿ “ಶಾಂತಲಾ ಪ್ರಶಸ್ತಿ” ಯೂ ಇವರಿಗೆ ಸಂದಿದೆ. ಈ ಹಿರಿಯ ಲಯ ವಾದ್ಯಕಾರರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೧-೯೨ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.