“ಜಗದೋದ್ದಾರನಾ” ರಾಜಅಯ್ಯಂಗಾರ್ ಅವರ ಜೇಷ್ಠಪುತ್ರ ಶ್ರೀ. ಬಿ.ಆರ್. ಶ್ರೀನಿವಾಸನ್ ೧೯೨೪ರಲ್ಲಿ ಮೈಸೂರಿನಲ್ಲಿ ಹುಟ್ಟಿದವರು. ಸಂಗೀತದ ವಾತಾವರಣದಲ್ಲಿ ಬೆಳೆದು ಬಂದ ಶ್ರೀನಿವಾಸನ್ ತಂದೆಯ ಮೂಲಕ ಕರ್ನಾಟಕ ಸಂಗೀತ ಹಾಗು ಪಂಡಿತ ಹಿ.ವಿ. ಭಾವೆಯವರ ಮೂಲಕ ಹಿಂದುಸ್ಥಾನಿ  ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಪಿಟೀಲು ವಾದನವನ್ನು ಖ್ಯಾತ ವಿದ್ವಾನ್ ಶಂಕರಪ್ಪನವರ ಬಳಿ ಕಲಿತರು. ನಂತರ ಪಿಟೀಲಿನೊಂದಿಗೇ ಇವರು ಆತ್ಮೀಯತೆ ಬೆಳೆಸಿಕೊಂಡರು.

ಶ್ರೀನಿವಾಸನ್ ಮೂಲತಃ ಸಂಕೋಚ ಪ್ರವೃತ್ತಿಯವರಾದರೂ ಅಪಾರ ಆತ್ಮವಿಶ್ವಾಸವುಳ್ಳವರು. ತಮ್ಮ ಕಲಾಪ್ರದರ್ಶನಗಳಲ್ಲಿ ವಿದ್ವಾಂಸರಿಂದ ’ಭೇಷ್’ ಎನಿಸಿಕೊಂಡವರು. ಕಳೆದ ೫ ದಶಕಗಳಿಂದ ನಾಡಿನ ವಿವಿಧ ಸಂಗೀತ ವೇದಿಕೆಗಳಲ್ಲಿ ಶ್ರೀನಿವಾಸನ್ ಪರಿಚಿತರಾಗಿರುವುದಲ್ಲದೆ ವಿದೇಶಗಳಲ್ಲಿ ತಮ್ಮ ಪಿಟಿಲುವಾದನದ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ಕಲಾವಿದ ಶ್ರೀನಿವಾಸನ್ ಅವರ ಸ್ವರ ಸಂಯೋಜನೆ ಮೃದು ಮಾಧುರಕ್ಕೆ ಹೆಸರುವಾಸಿ. ಇವರು ಅನೇಕ ಸಂಗೀತ-ನೃತ್ಯ ಕಲಾತಂಡಗಳ ಪ್ರದರ್ಶನಗಳಿಗೆ ಮಾರ್ಗದರ್ಶಕರಾಗಿಯೂ ಇದ್ದಾರೆ. ನೃತ್ಯ ಸಂಗೀತಕ್ಕೆ ವಾದ್ಯಗಾರರ ತೀವ್ರ ಕೊರತೆ ಇದ್ದ ಕಾಲದಲ್ಲಿ ಶ್ರೀನಿವಾಸನ್ ನೃತ್ಯಮೇಳ ಸೇರಿ ಅಗತ್ಯವಾದ ಸಹಕಾರ ನೀಡಿ ನೃತ್ಯ ಕಲೆ ಬೆಳೆಯಲು ಕಾರಣಕರ್ತರಾಗಿದ್ದಾರೆ.

೬೫ವಯಸ್ಸಿನ ಶ್ರೀನಿವಾಸನ್ ಅವರ ಮೂರ್ತಿ ನೋಡಲು ಚಿಕ್ಕದಾದರೂ ಕೀರ್ತಿ ದೊಡ್ಡದು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೮-೮೯ನೇ ಸಾಲಿನ ಪ್ರಶಸ್ತಿಯನ್ನು ಈ ಅಪರೂಪದ ಕಲಾವಿದರಿಗೆ ಕರ್ನಾಟಕ ಕಲಾ ತಿಲಕ’ ಬಿರುದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.