ಜನನ : ೮-೮-೧೯೧೪ ರಂದು ಬೆಂಗಳೂರಿನಲ್ಲಿ

ಮನೆತನ : ಕೀರ್ತನಕಾರರ ಮನೆತನ. ತಂದೆ ಮುನಿಯಪ್ಪನವರು ಭಜನೆ ಮುನಿಯಪ್ಪನವರೆಂದೇ ಖ್ಯಾತಿ ಪಡೆದವರು. ತಾಯಿ ಪಾರ್ವತಮ್ಮ.

ಶಿಕ್ಷಣ : ಚಿಕ್ಕಂದಿನಿಂದಲೇ ನಾಟಕ ಕಲೆಯಲ್ಲಿ ಆಸಕ್ತಿ. ಎಳೆಯ ವಯಸ್ಸಿನಲ್ಲೇ ಗುಬ್ಬಿ ಕಂಪನಿ ಸೇರಿ ಬಾಲ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ ವಿದ್ವಾನ್ ಲಕ್ಷ್ಮೀನಾರಾಯಣ ಭಾಗವತದಲ್ಲಿ ಒಂದು ಕಾಂಡ ಅಮರ ಅಭ್ಯಾಸ. ಅನಂತರ ಹಾರ್ಮೋನಿಯಂ ಮಾಂತ್ರಿಕ ಅರುಣಾಚಲಪ್ಪನವರಲ್ಲಿ ಸಂಗೀತ ಶಿಕ್ಷಣ. ಮುಂದೆ ಮದರಾಸಿಗೆ ತೆರಳಿ ಅಲ್ಲಿ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆಯವರಲ್ಲಿ ಉನ್ನತ ಶಿಕ್ಷಣ. ಹಾರ್ಮೋನಿಯಂ ಬಿ. ಮುನಿಯಪ್ಪನವರಲ್ಲೂ ಕೆಲಕಾಲ ಸಂಗೀತ ಶಿಕ್ಷಣ ಪಡೆದುದೇ ಅಲ್ಲದೆ ಅನಂತಾಶ್ರಮದ ಹರಿಹರಾನಂದ ಭಾರತಿಯವರಲ್ಲಿ ಕೀರ್ತನ ಕಲೆಯಲ್ಲಿ ಮಾರ್ಗದರ್ಶನ. ಶಂಕರಾನಂದ ಭಾರತೀಯವರಿಂದಲೂ ಕಥಾ ಕೀರ್ಥನ ಶಿಕ್ಷಣ ಪಡೆದಿದ್ದಾರೆ.

ಕ್ಷೇತ್ರ ಸಾಧನೆ : ಅಜ್ಜಂಪುರದ ಶಂಕರಾನಂದ ಭಾರತಿಯವರ ಆಶ್ರಮದಲ್ಲೇ ಕೀರ್ತನ ಕಲಾರಂಗ ಪ್ರವೇಶ. ಸಂಗೀತದಲ್ಲೂ ಪಲ್ಲವಿ ಹಾಡುವಷ್ಟು ಸಾಮರ್ಥ್ಯ ಹೊಂದಿ ಕಚೇರಿಗಳನ್ನು ಮಾಡುತ್ತಿದ್ದರು. ನಾಟಕದಲ್ಲಿ ಒಬ್ಬ ನಾಯಕ ನಟರಾಗಿಯೂ ಮೆರೆದರು. ನಾಡಿನಾದ್ಯಂತ ಸಂಚರಿಸಿ ಹಲವಾರು ಸಂಘ – ಸಂಸ್ಥೆಗಳಲ್ಲಿ ಕಥಾಕೀರ್ತನಗಳನ್ನು ನಡೆಸಿದ್ದಾರೆ. ಗುರು ಸ್ಥಾನದಲ್ಲಿ ನಿಂತು ಅನೇಕ ಕೀರ್ತನ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ. ಸುಮಾರು ಐದು ದಶಕಗಳಿಗೂ ಮಿಕ್ಕಿ ಕಥಾ ಕೀರ್ತನಕಾರರಾಗಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಚೆನ್ನಪಟ್ಟಣದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಸತತವಾಗಿ ೧೦೧ ಕಾರ್ಯಕ್ರಮಗಳನ್ನು ಮಾಡಿ ವಜ್ರಮಹೋತ್ಸವ ನಡೆಸಿದ ಹೆಗ್ಗಳಿಕೆ ಇವರದು. ಈ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ, ಅನಕೃ, ಬಿ. ಶಿವಮೂರ್ತಿಶಾಸ್ತ್ರೀ, ಮುಂತಾದವರ ಪ್ರಶಂಸೆಗೆ ಪಾತ್ರರಾದರು. ಇಂದಿನ ಹಿರಿಯ ಕೀರ್ತನಕಾರರುಗಳಾದ ಬಿ.ಪಿ.ರಾಜಮ್ಮ, ಕನಕದಾಸ, ಪದ್ಮಕುಮಾರಿ ಮುಂತಾದವರನ್ನು ಕೀರ್ತನ ರಂಗಕ್ಕೆ ಪರಿಚಯಿಸಿ ಬೆಳಕಿಗೆ ಬರಲು ಕಾರಣರಾದವರು.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ, ಸಂಸ್ಥೆಗಳು, ಮಠ-ಮಾನ್ಯಗಳು ಇವರನ್ನು ಗೌರವಿಸಿ ಪುರಸ್ಕರಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೦-೯೧ ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀಯುತರು ಈಗ ಕೆಲವು ವರ್ಷಗಳ ಹಿಂದೆ ನಿಧನರಾದರು.