ಬಿ. ಎಂ. ಶ್ರೀಕಂಠಯ್ಯ

ಹಲವು ವರ್ಷಗಳ ಹಿಂದಿನ ಮಾತು. ಮೈಸೂರು ಮಹಾರಾಜ ಕಾಲೇಜಿನ ಒಂದು ಕೊಠಡಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದಾರೆ. ಪ್ರಾಧ್ಯಾಪಕರು ತರಗತಿಗೆ ಇನ್ನೂ ಬಂದಿರಲಿಲ್ಲ. ವಿದ್ಯಾರ್ಥಿಗಳು ಕ್ಷಣ ಕ್ಷಣಕ್ಕೂ ಬಾಗಿಲ ಕಡೆ ನೋಡುತ್ತಿದ್ದಾರೆ. ಅಂದು ಅವರಿಗೆಲ್ಲ ಬಹಳ ಆತಂಕ. ಅದಕ್ಕೆ ಕಾರಣವಿಷ್ಟೆ: ಆ ಹಿಂದಿನ ದಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಂದ ಕನ್ನಡದಲ್ಲಿ ಒಂದು ಪ್ರಬಂಧ ಬರೆಸಿದ್ದರು; ಆ ಬರಹಗಳನ್ನೆಲ್ಲ ತೆಗೆದು ಕೊಂಡು, ಇವುಗಳನ್ನು ನೋಡಿ ನಾಳೆ ನಿಮಗೆ ಕೊಡುತ್ತೇನೆ: ಎಂದು ಹೇಳಿದ್ದರು.

ಪ್ರಾಧ್ಯಾಪಕರು ಬಂದರು ವಿದ್ಯಾರ್ಥಿಗಳಿಗೆ ಅವರವರ ಪ್ರಬಂಧಗಳನ್ನು ಹಿಂದಿರುಗಿಸಿದರು.

ಆದರೆ ಅವರು ಒಂದು ಪ್ರಬಂಧವನ್ನು ಮಾತ್ರ ಹಿಂದಿರುಗಿರಸಿರಲಿಲ್ಲ. ಅದನ್ನು ಕೈಗೆತ್ತಿಕೊಂಡು, ಅದನ್ನು ಬರೆದಿದ್ದ ವಿದ್ಯಾರ್ಥಿಯ ಹೆಸರನ್ನು ಕರೆದರು.

ಅಷ್ಟುಹೊತ್ತಿಗೆ ಆ ವಿದ್ಯಾರ್ಥಿ ಬಹಳ ಭಯಪಟ್ಟಿದ್ದ. ತನ್ನ ಪ್ರಬಂಧವನ್ನು ಮಾತ್ರ ಪ್ರಾಧ್ಯಾಪಕರು ಕೊಟ್ಟಿರಲಿಲ್ಲ. ಅದು ಚೆನ್ನಾಗಿಲ್ಲದಿರಬಹುದು; ತಪ್ಪುಗಳಿರಬಹುದು. ಪ್ರಾಧ್ಯಾಪಕರು ಏನನ್ನುವರೊ?

ಗುರುಗಳು ತಮ್ಮ ಕೈಯಲ್ಲಿದ್ದ ಪ್ರಬಂಧವನ್ನು ವಿದ್ಯಾರ್ಥಿ ಗಳಿಗೆ ತೋರಿಸುತ್ತ ಹೇಳಿದರು: “ನೋಡಿ, ನಿಮ್ಮ ಈ ಸ್ನೇಹಿತರು ಪ್ರಬಂಧವನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಒಳ್ಳೆಯ ಭಾಷೆ. ಒಂದು ತಪ್ಪೂ ಇಲ್ಲ.”

ಅಷ್ಟೇ ಅಲ್ಲ, ಅವರು ಮತ್ತೂ ಹೇಳಿದರು: “ಒಂದು ವೇಳೆ ನಾನೇ ಈ ಪ್ರಬಂಧವನ್ನು ಬರೆದಿದ್ದರೆ, ಇಷ್ಟೊಂದು ಚೆನ್ನಾಗಿ ಬರೆಯುತ್ತಿರಲಿಲ್ಲ.”

ಪ್ರಾಧ್ಯಾಪಕರ ಔದಾರ್ಯ ವಿದ್ಯಾರ್ಥಿಗಳನ್ನೆಲ್ಲ ಬೆರಗು ಗೊಳಿಸಿತು. ಅನಂತರದ ದಿನಗಳಲ್ಲಿ ಆ ವಿದ್ಯಾರ್ಥಿ ಕನ್ನಡದ ಒಬ್ಬ ಹೆಸರಾಂತ ಬರಹಗಾರನಾದ.

ವಿದ್ಯಾರ್ಥಿಗಳಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಹೀಗೆ ಗುರುತಿಸಿ, ಪ್ರೋತ್ಸಾಹ ಕೊಟ್ಟು, ಮಾರ್ಗದರ್ಶನ ಮಾಡು ತ್ತಿದ್ದುದು ಆ ಪ್ರಾಧ್ಯಾಪಕರ ಸ್ವಭಾವ. ಅವರ ಪ್ರೋತ್ಸಾಹ ಕನ್ನಡಕ್ಕೆ ಎಷ್ಟೋ ಮಂದಿ ಒಳ್ಳೆಯ ಬರಹಗಾರರನ್ನು  ಕೊಟ್ಟಿತು.

ಅವರೇ ಬಿ. ಎಂ. ಶ್ರೀಕಂಠಯ್ಯನವರು. ’ಶ್ರೀ’ ಎಂಬ ಕಾವ್ಯನಾಮದಿಂದ ಅವರು ಪ್ರಸಿದ್ಧರು.

’ಕನ್ನಡದ ಕಣ್ವ’

ಅವರನ್ನು ಕನ್ನಡ ಜನ ಅಭಿಮಾನದಿಂದ ’ಕನ್ನಡದ ಕಣ್ವ’ ಎಂದು ಕರೆದರು.

ಪುರಾಣದ ಕಥೆಯಲ್ಲಿ ಶಕುಂತಳೆ, ವಿಶ್ವಾಮಿತ್ರ-ಮೇನಕೆ ಯರ ಮಗಳು. ತಂದೆಯಾಯಿ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದರು. ಮಗುವನ್ನು ಪ್ರೀತಿಯಿಂದ ಬೆಳೆಸಿದವರು ಮಹರ್ಷಿ ಕಣ್ವರು. ಮಗು ಶಕುಂತಳೆಯಂತೆ ನೋಡಿಕೊಳ್ಳುವವರು ಇಲ್ಲದಿದ್ದಾಗ ಕನ್ನಡವನ್ನು ಬೆಳೆಸಿದವರು ’ಶ್ರೀ’ ಅವರು ಎಂದು ಜನ ಅವರಿಗೆ ಹೀಗೆ ಗೌರವ ತೋರಿಸಿದರು.

ಸುಮಾರು ಅರವತ್ತು ವರ್ಷಗಳ ಹಿಂದೆ ಕನ್ನಡ ನಾಡಿ ನಲ್ಲೂ ಕನ್ನಡವನ್ನು ಕೇಳುವವರಿರಲಿಲ್ಲ. ಸ್ವಲ್ಪ ಇಂಗ್ಲಿಷ್ ಬಲ್ಲವರಿಗೂ ತಪ್ಪು ಇಂಗ್ಲಿಷ್‌ನಲ್ಲಿ ಮಾತನಾಡುವುದೇ ಹೆಮ್ಮೆ, ಕನ್ನಡದಲ್ಲಿ ಮಾತನಾಡುವುದು ಹೀನಾಯ. ಅಚ್ಚ ಕನ್ನಡದ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳು ಕಲಿಯುತ್ತಿದ್ದುದು ಮರಾಠಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಹಲವು ವಿಷಯಗಳಲ್ಲಿ ಎಂ.ಎ. ತರಗತಿಗಳಿದ್ದವು; ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳಲ್ಲಿ ಎಂ.ಎ. ಓದಬಹುದಾಗಿತ್ತು. ಆದರೆ ಕನ್ನಡದಲ್ಲಿ ಎಂ.ಎ. ಮಾಡಲು ತರಗತಿಗಳೇ ಇರಲಿಲ್ಲ. ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಅಧ್ಯಾಪಕರಿಗಿಂತ ಕಡಿಮೆ ಸಂಬಳ.

’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತ ನಾಡುವುದು ಹಾಸ್ಯಕ್ಕೆ ವಸ್ತು.

ಇಂತಹ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ನಾಡಿನ ಮೂಲೆಮೂಲೆಗಳನ್ನೂ ಸುತ್ತಿ ದರು. ಕನ್ನಡದಲ್ಲಿ ಭಾಷಣ ಮಾಡಿದರು, ಬರೆದರು. ಇಂಗ್ಲಿಷ್ ಪ್ರೊಫೆಸರರೇ ಕನ್ನಡ ಬಳಸಿದ ಮೇಲೆ ಕನ್ನಡ ಕೆಲಸಕ್ಕೆ ಬಾರದ್ದಲ್ಲ ಎನ್ನಿಸಿತು ಬಹುಮಂದಿಗೆ!

ಬಾಲ್ಯ, ವಿದ್ಯಾಭ್ಯಾಸ

ಬಿ. ಎಂ. ಶ್ರೀಕಂಠಯ್ಯನವರ ಪೂರ್ಣ ಹೆಸರು ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಎಂದು. ತಂದೆ ಮೈಲಾರಯ್ಯ ನವರು; ತಾಯಿ ಭಾಗೀರಥಮ್ಮನವರು.

ಬೆಳ್ಳೂರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿ ನಲ್ಲಿರುವ ಒಂದು ಗ್ರಾಮ. ಇದೇ ಶ್ರೀಕಂಠಯ್ಯನವರ ತಂದೆ ಯವರ ಸ್ಥಳ. ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಅದಕ್ಕಾಗಿ ಅವರು ಬೆಳ್ಳೂರನ್ನು ಬಿಟ್ಟು ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದರು.

ಶ್ರೀಕಂಠಯ್ಯನವರು ಜನಿಸಿದ್ದು ೧೮೮೪ ರ ಜನವರಿ ಮೂರರಂದು; ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ. ಸಂಪಿಗೆ ತಾಯಿಯ ತವರೂರು.

ಶ್ರೀಕಂಠಯ್ಯನವರಿಗೆ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು.

ಸಂಪಿಗೆಯ ಗೌರಮ್ಮ-ಗಣಪತಿ ದೇವಸ್ಥಾನದಲ್ಲಿ ಶ್ರೀಕಂಠಯ್ಯನವರ ಅಕ್ಷರಾಭ್ಯಾಸ ಆರಂಭವಾಯಿತು. ಸೋದರ ಮಾವನೇ ಪ್ರಥಮ ಗುರು; ದೇವಸ್ಥಾನವೇ ಪ್ರಥಮ ಪಾಠಶಾಲೆ; ನಿಸರ್ಗರೂಪದ ದೇವರೇ ಪ್ರಥಮ ಸ್ಫೂರ್ತಿ. ಅನಂತರ ಅವರು ಸಂಪಿಗೆಯಿಂದ ಶ್ರೀರಂಗಪಟ್ಟಣಕ್ಕೆ ಬಂದರು.

ಶ್ರೀರಂಗಪಟ್ಟಣ ಐತಿಹಾಸಿಕ ಸ್ಥಳ; ಪ್ರಸಿದ್ಧ ಪುಣ್ಯ ಕ್ಷೇತ್ರ. ಊರಿನ ಒಂದು ಕಡೆ ಭವ್ಯವಾದ ಕೋಟೆ ಇದೆ. ಇನ್ನೊಂದು ಕಡೆ ಕಾವೇರಿ ನದಿ ಶಾಂತವಾಗಿ ಹರಿಯುತ್ತದೆ. ಊರಿನ ಒಳ ಗಡೆ ಶ್ರೀರಂಗನಾಥಸ್ವಾಮಿ ದೇವಸ್ಥಾ ಇದೆ. ಆಗಿಂದಾಗ್ಗೆ ನಡೆ ಯುವ ಜಾತ್ರೆ, ರಥೋತ್ಸವಗಳ ಸಂಭ್ರಮ. ಎತ್ತ ನೋಡಿದರೂ ಬತ್ತ, ಕಬ್ಬು ಬೆಳೆಗಳ ಹಚ್ಚ ಹಸಿರು ನೋಟ. ಇಂಥ ಪ್ರಶಾಂತ ವಾತಾರವರಣದಲ್ಲಿ ಶ್ರೀಕಂಠಯ್ಯನವರು ತಮ್ಮ ಬಾಲ್ಯ ಜೀವನ ವನ್ನು ಕಳೆದರು. ಅವರಿಗೆ ದೇವರಲ್ಲಿ ಬಹಳ ಭಕ್ತಿ; ಜಾತ್ರೆ, ರಥೋತ್ಸವಗಳಲ್ಲೂ ಶ್ರದ್ಧೆ, ಆಸಕ್ತಿ. ಆಟಪಾಠಗಳಲ್ಲೂ ಅವರು ಮುಂದು. ಗೆಳೆಯರೊಂದಿಗೆ ನದಿಯಲ್ಲಿ ಈಜುವುದು ಅವರ ಮೆಚ್ಚಿನ ಆಟಗಳಲ್ಲೊಂದಾಗಿತ್ತು. ಶ್ರೀರಂಗಪಟ್ಟಣದ ತರುಣರ ಗುಂಪಿಗೆ ಅವರೇ ನಾಯಕರು.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಶ್ರೀರಂಗ ಪಟ್ಟಣದಲ್ಲಿ ಆಯಿತು. ಅನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸ. ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯ ಗಳನ್ನು ವಿಶೇಷವಾಗಿ ಅಧ್ಯಯನ ಮಾಡಿ ೧೯೦೬ ರಲ್ಲಿ ಬಿ. ಎ. ಪದವಿ ಪಡೆದರು.

ನ್ಯಾಯಶಾಸ್ತ್ರದ ವಿದ್ಯಾರ್ಥಿಗೆ ಸಾಹಿತ್ಯದ ಚಿಂತೆ

ಸೆಂಟ್ರಲ್ ಕಾಲೇಜಿನಲ್ಲಿ ಜಾನ್ ಟೇಟ್ ಎಂಬ ಇಂಗ್ಲಿಷ್ ಪ್ರಾಧ್ಯಾಪಕರಿದ್ದರು. ಇಂಗ್ಲೆಂಡಿನವರಾದ ಅವರು ಶಿಸ್ತಿನ ಜೀವನಕ್ಕೆ ಹೆಸರಾಗಿದ್ದರು. ಜಾಣ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಬಲು ಪ್ರೀತಿ. ಅವರ ಪ್ರೀತಿಗೆ ಪಾತ್ರರಾಗಿದ್ದ ಕೆಲವೇ ವಿದ್ಯಾರ್ಥಿಗಳ ಪೈಕಿ ಶ್ರೀಕಂಠಯ್ಯನವರೂ ಒಬ್ಬರು. ಅವರ ಬಗ್ಗೆ ಶ್ರೀಕಂಠಯ್ಯನವರಿಗೆ ಬಹಳ ಭಕ್ತಿ, ಗೌರವ. ಅವರ ಪ್ರಭಾವ ದಿಂದಲೇ ಮುಂದೆ ಶ್ರೀಕಂಠಯ್ಯನವರು ಇಂಗ್ಲಿಷ್ ಸಾಹಿತ್ಯ ವನ್ನು ವಿಶೇಷವಾಗಿ ಓದಿದ್ದು.

ಚಿಕ್ಕದಂದಿನಲ್ಲಿಯೇ ಶ್ರೀಕಂಠಯ್ಯನವರು ಸಾಹಿತ್ಯದ ಸವಿಗೆ ಸೋತಿದ್ದರು; ಅದರ ಪ್ರಭಾವಕ್ಕೆ ಒಳಗಾಗಿದ್ದರು. ಇಂಗ್ಲಿಷಿನ ಅನೇಕ ಪ್ರಸಿದ್ದ ಪುಸ್ತಕಗಳನ್ನು ಓದಿ, ಆ ಸಾಹಿತ್ಯದ ಸೊಗಸನ್ನು ಸವಿದರು. ಸ್ವತಂತ್ರವಾಗಿ ಕನ್ನಡ ಸಾಹಿತ್ಯವನ್ನೂ ಶ್ರದ್ಧೆಯಿಂದ ಅಧ್ಯಯನ ಮಾಡಿದರು. ಇಂಗ್ಲಿಷಿನಲ್ಲಿರುವಂತೆ ಕನ್ನಡದಲ್ಲೂ ಒಳ್ಳೆಒಳ್ಳೆಯ ಪುಸ್ತಕಗಳು ಬರಬೇಕು; ಅದಕ್ಕಾಗಿ ಪ್ರಯತ್ನಿಸ ಬೇಕು ಎಂಬುದಾಗಿ ಅವರು ಆಲೋಚಿಸುತ್ತಿದ್ದರು.

ಶ್ರೀಕಂಠಯ್ಯನವರಿಗೆ ತಾವೂ ವಕೀಲರಾಗಬೇಕೆಂಬ ಆಸೆ. ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಲು ಮದರಾಸಿಗೆ ಹೋದರು.

ದೂರದ ಮದರಾಸಿನಲ್ಲಿ ಶ್ರೀಕಂಠಯ್ಯನವರು ನ್ಯಾಯ ಶಾಸ್ತ್ರವನ್ನು ವ್ಯಾಸಂಗ ಮಾಡುತ್ತಿದ್ದಾಗಲೂ ಕನ್ನಡದ ಅಭಿವೃದ್ಧಿ ಯನ್ನು ಕುರಿತು ಮತ್ತಷ್ಟು ಚಿಂತಿಸಿದರು. ಸಂಜೆ ಸಮುದ್ರ ತೀರಕ್ಕೆ ತಿರುಗಾಟಕ್ಕೆ ಹೋದಾಗ ಎತ್ತರದ ಮರಳು ದಿಬ್ಬದ ಮೇಲೆ ಕುಳಿತುಕೊಂಡು ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿ ಕುರಿತು ಆಲೋಚಿಸುತ್ತಿದ್ದರು. ಒಂದೊಂದು ಸಾರಿ ಜೊತೆಗೆ ಬರುತ್ತಿದ್ದ ಗೆಳೆಯರೊಂದಿಗೂ ಇದೇ ವಿಷಯದ ಮೇಲೆ ಚರ್ಚಿಸುತ್ತಿದ್ದರು. ಶ್ರೀಕಂಠಯ್ಯನವರಲ್ಲಿ ತಾಯಿನುಡಿಯ ಮೇಲಿನ ಮಮತೆ ಹೀಗೆ ಬಾಲ್ಯದಲ್ಲಿಯೇ ಮೊಳೆತು, ಅವರು ಬೆಳೆದಂತೆಲ್ಲಾ ಅದೂ ಬೆಳೆದು, ಅವರ ಬದುಕನ್ನು ಮುನ್ನಡೆಸಿದ ಮಹಾ ಚೈತನ್ಯವೇ ಆಯಿತು.

ಶ್ರೀಕಂಠಯ್ಯನವರು ಬಿ. ಎಲ್. ಪದವಿಯನ್ನು ೧೯೦೭ ರಲ್ಲಿ ಪಡೆದರು. ಅನಂತರ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನು ಸ್ನಾತಕೋತ್ತರ ಮಟ್ಟದಲ್ಲಿ ಓದಿ, ೧೯೦೯ ರಲ್ಲಿ ಎಂ. ಎ. ಪದವಿ ಪಡೆದರು.

ಓದುಬರಹಗಳನ್ನು ಶ್ರೀಕಂಠಯ್ಯನವರು ಒಂದು ತಪಸ್ಸಿ ನಂತೆ ಮಾಡಿದರು ಕೊನೆಯವರೆಗೂ.

ಅಧ್ಯಾಪಕ, ಆಚಾರ್ಯ

ಶ್ರೀಕಂಠಯ್ಯನವರಿಗೆ ಉಪಾಧ್ಯಾಯ ಕೆಲಸದಲ್ಲಿ ಆಸಕ್ತಿ ಬಂತು. ಅದೊಂದು ಪವಿತ್ರವಾದ ಕೆಲಸ ಎಂದು ಭಾವಿಸಿದ ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಲಾಯರ್ ಆಗಬೇಕೆಂದು ಬಯಸಿ ಅದಕ್ಕಾಗಿ ಬಿ. ಎಲ್. ಪದವಿ ಪಡೆದ ಶ್ರೀಕಂಠಯ್ಯನವರು ಅಧ್ಯಾಪಕರಾದುದು ಕನ್ನಡ ಸಾಹಿತ್ಯದ ಒಂದು ಭಾಗ್ಯವಾಯಿತು.

’ಅಲಂಕಾರ ಶಾಸ್ತ್ರದ ಟಿಪ್ಪಣಿ’ ಎಂಬ ಒಂದು ಸಣ್ಣ ಪುಸ್ತಕವನ್ನು ಇಂಗ್ಲಿಷಿನಲ್ಲಿ ಬರೆದು ಪ್ರಕಟಿಸಿದರು. ಅದೇ ಶ್ರೀಕಂಠಯ್ಯನವರ ಮೊದಲ ಪುಸ್ತಕ.

ಶ್ರೀಕಂಠಯ್ಯನವರು ಶ್ರದ್ಧಾವಂತರು; ಕಾರ್ಯಶೀಲರು. ಅಧ್ಯಾಪಕ ವೃತ್ತಿಯನ್ನು ಅವರು ಬಹಳ ಆಸಕ್ತಿಯಿಂದ ಮಾಡಿದರು. ಅವರು ಇಪ್ಪತ್ತು ವರ್ಷ ಪಾಠ ಹೇಳಿದ ಮೇಲೆ ಒಂದು ದಿನ ಅವರು ಕಾಲೇಜಿಗೆ ಹೊರಟರು. ಅವರ ಜೊತೆಗೆ ಸ್ನೇಹಿತರೊಬ್ಬರಿದ್ದರು. ದಾರಿಯುದ್ದಕ್ಕೂ ಕಾರಿನಲ್ಲಿ ಶ್ರೀಕಂಠಯ್ಯ ನವರು ಒಂದು ಪುಸ್ತಕವನ್ನು ತುಂಬಾ ಶ್ರದ್ಧೆಯಿಂದ ಓದುತ್ತಿದ್ದರಂತೆ. ಸ್ನೇಹಿತರು ಕೇಳಿದರು: ’ಅದೇನು, ಹೊಸದಾಗಿ ಬಂದ ಪುಸ್ತಕವೇ?”

 

ಇವತ್ತಿನ ಪಾಠದ ಭಾಗ ನೋಡಿಕೊಳ್ಳುತ್ತಿದ್ದೆ.’

“ಅಲ್ಲ,” ಶ್ರೀಕಂಠಯ್ಯನವರು ಹೇಳಿದರು, “ಇದು ’ಹ್ಯಾಮ್‌ಲೆಟ್’. ಇವತ್ತಿನ ಪಾಠದ ಭಾಗ ನೋಡಿಕೊಳ್ಳುತ್ತಿದ್ದೆ. ಇಲ್ಲದೆಹೋದರೆ ತರಗತಿಯಲ್ಲಿ ಕಾಲಿಡುವುದಕ್ಕೆ ನನಗೆ ಧೈರ್ಯ ಬರುವುದಿಲ್ಲ.”

ಷೇಕ್ಸ್ ಪಿಯರನ ’ಹ್ಯಾಮ್‌ಲೆಟ್’ ನಾಟಕವನ್ನು ಅವರು ಎಷ್ಟು ಬಾರಿ ಓದಿದ್ದರೋ! ಎಷ್ಟು ಬಾರಿ ಪಾಠ ಹೇಳಿದ್ದರೋ! ಆದರೂ ಪಾಠ ಹೇಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಅಷ್ಟು ಶ್ರದ್ಧೆ, ಪ್ರಾಮಾಣಿಕತೆ!

ಇಂಗ್ಲಿಷ್ ಕವನಗಳನ್ನು ಮನಮುಟ್ಟುವಂತೆ ಓದುವುದು, ಅವುಗಳ ಅರ್ಥವನ್ನು ಸ್ವಾರಸ್ಯವಾಗಿ ವಿವರಿಸುವುದು ಹೀಗೆ ಅವರು ಪಾಠ ಮಾಡುತ್ತಿದ್ದರು. ಸಾಹಿತ್ಯದಲ್ಲಿ ತಮಗಿದ್ದ ಶ್ರದ್ಧೆಯನ್ನು, ಒಲುಮೆಯನ್ನು, ಉತ್ಸಾಹವನ್ನು ವಿದ್ಯಾರ್ಥಿಗಳಲ್ಲೂ ತುಂಬುತ್ತಿದ್ದರು. ಅವರ ಬೋಧನ ಕ್ರಮಕ್ಕೆ ವಿದ್ಯಾರ್ಥಿಗಳು ಬಹುಬೇಗ ಒಲಿದರು.

ಶ್ರೀಕಂಠಯ್ಯನವರು ಶಿಸ್ತಿನ ಜೀವನವನ್ನು ರೂಢಿಸಿ ಕೊಂಡಿದ್ದರು. ಅವರದು ಗಂಭೀರ ಸ್ವಭಾವ. ಅವರು ಧರಿ ಸುತ್ತಿದ್ದ ಉಡುಪೂ ಅವರ ಸ್ವಭಾವಕ್ಕೆ ಮತ್ತಷ್ಟು ಮೆರಗನ್ನು ಕೊಡುತ್ತಿತ್ತು. ಷರಾಯಿ, ಮುಚ್ಚು ಕಾಲರಿನ ಕರೀ ಕೋಟು, ತಲೆಯ ಮೇಲೆ ಜರತಾರಿ ಪೇಟ. ಒಂದಿಷ್ಟೂ ಧೂಳಿಲ್ಲದ ಬೂಟ್ಸು. ಗಂಭೀರವಾ ನಡಿಗೆ; ಮುಖದಲ್ಲಿ ಮಂದಹಾಸ. ನೋಡುತ್ತಲೇ ಗೌರವನ್ನು ಮೂಡಿಸುವ ರೂಪ.

ಅಧ್ಯಾಪಕರಾಗಿ ಸೇರಿದ ಹೊಸದರಲ್ಲಿ ಶ್ರೀಕಂಠಯ್ಯನವರು ವಿದ್ಯಾರ್ಥಿಗಳೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ; ಅವ ರೊಂದಿಗೆ ಸಲಿಗೆಯಿಂದ ವ್ಯವಹರಿಸುತ್ತಿರಲಿಲ್ಲ. ಆದರೆ ತಮ್ಮ ವಿದ್ಯಾರ್ಥಿಗಳ ಅಭ್ಯುದಯವನ್ನು ಅವರು ಸದಾ ಹಾರೈಸು ತ್ತಿದ್ದರು. ವಿದ್ಯಾರ್ಥಿಗಳ ಬರವಣಿಗೆಗೆ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಹೀಗಾಗಿ ನೂರಾರು ವಿದ್ಯಾರ್ಥಿಗಳು ಅವರಿಂದ ಪ್ರಭಾವಿತರಾದರು.

ಶ್ರೀಕಂಠಯ್ಯನವರು ಇಂಗ್ಲಿಷ್ ಅಧ್ಯಾಪಕರಾಗಿ (೧೯೦೯-೧೯೧೪), ಉಪ ಪ್ರಾಧ್ಯಾಪಕರಾಗಿ (೧೯೧೯೪-೧೯೧೯) ಮತ್ತು ಪ್ರಾಧ್ಯಾಪಕರಾಗಿ (೧೯೧೯-೧೯೪೨) ಮೈಸೂರು ಮಹಾರಾಜ ಕಾಲೇಜು ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜುಗಳಲ್ಲಿ ಸುಮಾರು ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತಾವು ಕಷ್ಟ ಪಟ್ಟು ಸಂಪಾದಿಸಿದ ಜ್ಞಾನವನ್ನು ಸಾವಿರಾರು ವಿದ್ಯಾರ್ಥಿ ಗಳಿಗೆ ಧಾರಾಳವಾಗಿ ಹಂಚಿದರು. ಸದಾ ವಿದ್ಯಾರ್ಥಿಗಳ ಅಭ್ಯುದಯವನ್ನೇ ಹಾರೈಸಿ ’ಗುರು’ ಎಂದೂ ’ಆಚಾರ್ಯ’ ರೆಂದೂ ವಿದ್ಯಾರ್ಥಿಗಳ ಗೌರವ, ಕೃತಜ್ಞತೆಗಳಿಗೆ ಪಾತ್ರರಾದರು.

‘ಕನ್ನಡ ಮಾತು ತಲೆಯೆತ್ತುವ ಬಗೆ’

’ಕನ್ನಡನಾಡು’, ’ಕನ್ನಡ’–ಇವೇ ಶ್ರೀಕಂಠಯ್ಯನವರ ಆಲೋಚನೆಯ ವಿಷಯಗಳಾಗಿದ್ದವು. ’ಡಿಲ್ಲಿ ನನಗೆ ಬಲು ದೂರ. ಕನ್ನಡನಾಡಿನ ಹಳ್ಳಿಯೇ ನನಗೆ ಸಾಕೆಂದು ನನ್ನ ವಿದ್ಯಾಭ್ಯಾಸ ಮುಗಿಯುವುದರೊಳಗೆ ನಾನು ನಿರ್ಧರಿಸಿ ಕೊಂಡೆನು; ಎಂಬುದಾಗಿ ಅವರೇ ತಮ್ಮ ಒಂದು ಲೇಖನದಲ್ಲಿ ಹೇಳಿಕೊಂಡಿದ್ದಾರೆ. ಶ್ರೀಕಂಠಯ್ಯನವರು ಹೀಗೆ ತಮ್ಮ ಬದುಕಿನ ಗುರಿಯನ್ನು ಮೊದಲೇ ಸ್ಪಷ್ಟವಾಗಿ ನಿರ್ಧರಿಸಿಕೊಂಡರು. ಅನಂತರ ಆ ದಿಕ್ಕಿನಲ್ಲಿ ಅವರು ಒಂದೇ ಸಮನೆ ದುಡಿಯಲಾರಂಬಿಸಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸಭೆ ೧೯೧೧ ರಲ್ಲಿ ನಡೆಯಿತು. ಆ ಸಭೆಯಲ್ಲಿ ಶ್ರೀಕಂಠಯ್ಯನವರು ’ಕನ್ನಡ ಮಾತು ತಲೆಯೆತ್ತುವ ಬಗೆ, ಎಂಬ ಒಂದು ಉಪನ್ಯಾಸ ಮಾಡಿದರು. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಭಿವೃದ್ಧಿ ಪಡಿಸಲು ಮಾಡಬೇಕಾದ ಕೆಲಸಗಳೇನು ಎಂಬುದನ್ನು ಆ ಭಾಷಣದಲ್ಲಿ ಹೇಳಿದರು. ಅನಂತರ ’ಕನ್ನಡಕ್ಕೆ ಒಂದು ಕಟ್ಟು’ ಎಂಬ ತಮ್ಮ ಇನ್ನೊಂದು ಉಪನ್ಯಾಸದಲ್ಲಿ ಭಾಷೆಯ ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆ ಗಳನ್ನು ವಿವರಿಸಿದರು. ಈ ಎರಡೂ ಉಪನ್ಯಾಸಗಳು ಅನಂತರ ’ಕನ್ನಡ ಭಾಷೆಯ ವಿಚಾರಗಳು’ ಎಂಬ ಹೆಸರಿನಲ್ಲಿ ಪುಟ್ಟ ಪುಸ್ತಕವಾಗಿ ಪ್ರಕಟವಾದವು. ಶ್ರೀಕಂಠಯ್ಯನವರ ಕನ್ನಡ ಪ್ರೇಮ, ಅವರ ಪಾಂಡಿತ್ಯ ಮತ್ತು ಅವರ ಆಲೋಚನೆಯ ಖಚಿತತೆ ಮತ್ತು ಸೊಗಸು ನಾಡಿನವರಿಗೆ ಪರಿಚಯವಾದವು. ಅಲ್ಲಿಯವರೆಗೂ ಮರೆಯಾಗಿಯೇ ಇದ್ದ ಶ್ರೀಕಂಠಯ್ಯನವರ ಹೆಸರು ನಾಡಿನಲ್ಲಿ ಕೇಳಲಾರಂಭಿಸಿತು.

ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ

ಶ್ರೀಕಂಠಯ್ಯನವರು ಇಂಗ್ಲಿಷ್, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಪಂಡಿತರಾಗಿದ್ದರು. ಅಷ್ಟೇ ಅಲ್ಲ; ತಮಿಳು, ಗ್ರೀಕ್ ಭಾಷೆಗಳನ್ನೂ ಕಲಿತಿದ್ದರು. ಆ ಭಾಷೆಗಳ ಹಲವು ಒಳ್ಳೆಯ ಗ್ರಂಥಗಳನ್ನು ಓದಿ ಅವುಗಳಿಂದ ಪ್ರಭಾವಿತರಾಗಿದ್ದರು. ಬೇರೆ ಬೇರೆ ಭಾಷೆಗಳಲ್ಲಿರುವ ಒಳ್ಳೆಯ ವಿಷಯಗಳನ್ನು ತಿಳಿದು ಕೊಳ್ಳಬೇಕು; ಅಂಥ ವಿಷಯಗಳನ್ನು ಕನ್ನಡಕ್ಕೂ ತರಬೇಕು. ಹೀಗೆ ಮಾಡುವುದರಿಂದ ಕನ್ನಡ ಭಾಷೆ ಮತ್ತು ಸಾಹಿತ್ಯ ಹೊಸ ರೀತಿಯಲ್ಲಿ ಬೆಳೆಯುತ್ತದೆ, ಅಭಿವೃದ್ಧಿಯಾಗುತ್ತದೆ ಎಂಬುದುಅವರ ನಂಬಿಕೆ ಆಗಿತ್ತು. ಅದಕ್ಕನುಗುಣವಾಗಿ ಅವರು ಹಲವು ಕೃತಿಗಳನ್ನು ರಚಿಸಿದರು. ಅವೆಲ್ಲಾ ಕನ್ನಡದಲ್ಲಿ ಹೊಸ ಬಗೆಯ ಕೃತಿಗಳೇ ಆದವು. ಅಷ್ಟೇ ಅಲ್ಲ, ಹೊಸ ರೀತಿಯ ಬರವಣಿಗೆಗೆ ಆ ಕೃತಿಗಳು ಮಾರ್ಗದರ್ಶನ ಮಾಡಿದವು. ಇದರಿಂದ ಹಳೆಯದಾಗಿದ್ದ ಕನ್ನಡ ವೃಕ್ಷ ಹೊಸದಾಗಿ ಚಿಗುರಿ ಹೂ ಬಿಟ್ಟಿತು; ಹೊಸಹೊಸ ಫಲಗಳನ್ನು ಕೊಟ್ಟಿತು.

’ಇಂಗ್ಲಿಷ್ ಗೀತಗಳು’

ಇಂಗ್ಲಿಷ್‌ನ ಪ್ರಸಿದ್ಧ ಕವಿಗಳಾದ ಷೇಕ್ಸ್‌ಪಿಯರ್, ಬರ್ನ್ಸ್, ಷೆಲ್ಲಿ ಮುಂತಾದವರ ಕವನಗಳನ್ನು ಶ್ರೀಕಠಯ್ಯನವರು ಓದಿ ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲ, ಆ ಕವಿಗಳ ಹಲವು ಕವನ ಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದರು. ಹಲವು ಪತ್ರಿಕೆಗಳಲ್ಲಿ ಇವು ಪ್ರಕಟವಾದವು. ಹಾಗೆ ಪ್ರಕಟವಾದ ಹಲವು ಕವನಗಳು ’ಇಂಗ್ಲಿಷ್ ಗೀತಗಳು’ ಎಂಬ ಹೆಸರಿನಲ್ಲಿ ೧೯೨೧ ರಲ್ಲಿ ಸಣ್ಣ ಪುಸ್ತಕ ರೂಪದಲ್ಲಿ ಪ್ರಕಟವಾದವು. ಅನಂತರ ೬೩ ಕವನಗಳನ್ನು ಒಳಗೊಂಡ ’ಇಂಗ್ಲಿಷ್ ಗೀತಗಳು’ ಸಂಕಲನದ ಪರಿಷ್ಕೃತ ಆವೃತ್ತಿ ೧೯೨೬ ರಲ್ಲಿ ಪ್ರಕಟವಾಯಿತು.

’ಇಂಗ್ಲಿಷ್ ಗೀತಗಳು’ ಸಂಕಲನದಲ್ಲಿ ’ಮುದ್ದಿನ ಕುರಿಮರಿ’ ಎಂಬ ಒಂದು ಪದ್ಯ ಇದೆ. ಇದು ವರ್ಡ್ಸ್‌ವರ್ತ್ ಎಂಬ ಇಂಗ್ಲಿಷ್ ಕವಿಯ ’ದಿ ಪೆಟ್ ಲ್ಯಾಂಬ್’ ಎಂಬ ಕವನದ ಅನುವಾದ. ಈ ಪದ್ಯ ಪ್ರಾರಂಭವಾಗುವುದು ಹೀಗೆ:

ಹಿಡಿದು ಮಂಜು ಬೀಳುತ್ತಿತ್ತು, ಚುಕ್ಕಿ ಕಣ್ಣು ಮಿಟುಕುತ್ತಿತ್ತು;
“ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು;
ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು
ನೊರೆಯ ಬಿಳುಪು ಕುರಿಯ ಮರಿಯ ತಲೆಯ ತಡವುತ್ತಿದ್ದಳು.

ಮತ್ತೊಂದು ಪದ್ಯದ ಪ್ರಾರಂಭದ ಪಂಕ್ತಿಗಳು ಇವು:

ಕರುಣಾಳು, ಬಾ, ಬೆಳಕೆ,-
ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ;
ಕನಿಕರಿಸಿ;
ಕೈ ಹಿಡಿದು ನಡೆಸೆನ್ನನು.

ಎಷೊಂದು ಸುಂದರವಾಗಿವೆಯಲ್ಲವೆ ಈ ಪದ್ಯಗಳು! ಅಷ್ಟೇ ಅಲ್ಲ, ಸರಳವಾಗಿಯೂ ಇವೆ. ಭಾಷಾಂತರ ಎನಿಸುವುದೇ ಇಲ್ಲ. ಸ್ವತಂತ್ರ ಪದ್ಯಗಳಂತಿವೆ. ಕಾಳಗದ ಪದ, ಮಾದ-ಮಾದಿ, ಕನಕಾಂಗಿ, ಬಿಂಕದ ಸಿಂಗಾರಿ, ನನ್ನ ಮೇರಿ-ಮುಂತಾದ ಇನ್ನೂ ಇಂಥ ಅನೇಕ ಪದ್ಯಗಳು ಈ ಸಂಕಲನದಲ್ಲಿವೆ.

ಕನ್ನಡ ಕಾವ್ಯ ಚರಿತ್ರೆಯಲ್ಲಿ ’ಇಂಗ್ಲಿಷ್ ಗೀತಗಳು’ ಸಂಕಲನದ ಪ್ರಕಟಣೆ ಒಂದು ಮುಖ್ಯ ಘಟ್ಟ. ಆಗ್ಗೆ ಕನ್ನಡದಲ್ಲಿ ರಗಳೆ, ಷಟ್ಪದಿ, ಸಾಂಗತ್ಯ ಮುಂತಾದ ಹಳೆಯ ಛಂದಸ್ಸಿನಲ್ಲಿ ಕಾವ್ಯರಚನೆ ನಡೆಯುತ್ತಿತ್ತು. ಆ ರೀತಿ ಬಹಳ ಹಳೆಯದಾಗಿತ್ತು; ಅದೊಂದು ಸವೆದ ದಾರಿಯಾಗಿತ್ತು. ಶ್ರೀಕಂಠಯ್ಯನವರು ಆ ಜಾಡನ್ನು ಬಿಟ್ಟು ಹೊಸ ಹಾಡನ್ನು ಹೊಸ ಛಂದಸ್ಸಿನಲ್ಲಿ ಬರೆದರು. ರಾಜರಾಣಿಯರು, ಪುರಾಣಪ್ರಸಿದ್ಧರು, ದೇವತೆ ಗಳು-ಇವರ ವಿಷಯ ಈ ಕವನಗಳಲಿರಲಿಲ್ಲ. ಸಾಮಾನ್ಯ ಜನರಿಗೆ ಬರುವ ಅನುಭವಗಳು, ಅವರ ಆಸೆಗಳು, ಕನಸುಗಳು, ನಿರಾಸೆಗಳು, ಪ್ರಾರ್ಥನೆಗಳು-ಇವು ಈ ಕವನಗಳ ವಸ್ತು. ಸಾಮಾನ್ಯ ಓದುಗನಿಗೂ ’ಸಾಹಿತ್ಯ ನನಗೆ ತುಂಬ ಸಮೀಪವಾದ್ದದ್ದು’ ಎನ್ನಿಸಿತು. ಇದರಿಂದ ಕನ್ನಡ ಕಾರ್ಯ ಕ್ಷೇತ್ರದಲ್ಲಿ ಒಂದು ನವಯುಗವೇ ಆರಂಭವಾಯಿತು. ಅದೇ ಭಾವಗೀತೆಗಳ ಯುಗ. ಶ್ರೀ ಅವರು ಈ ಯುಗದ ಪ್ರವರ್ತಕರಾದರು.

 

‘ಶ್ರೀ’ ಅವರು, ಅವರ ಕೃತಿಗಳು.

’ಇಂಗ್ಲಿಷ್ ಗೀತಗಳು’ ಪ್ರಕಟವಾಗಿದ್ದೇ ತಡ, ಕನ್ನಡ ಕಾವ್ಯ ಪ್ರಪಂಚದಲ್ಲಿ ಸಂಭ್ರಮ ಉತ್ಸಾಹಗಳು ಉಂಟಾದವು. ಕಾವ್ಯ ರಚನೆ ಮಾಡುವವರಿಗೆಲ್ಲ ’ಇಂಗ್ಲಿಷ್ ಗೀತಗಳು’ ಆದರ್ಶ ವಾಯಿತು. ಅದರಿಂದ ಕನ್ನಡ ಕಾವ್ಯ ವೈವಿದ್ಯಮಯವಾಗಿ ಬೆಳೆಯಲು ಸಾಧ್ಯವಾಯಿತು.

ಗದಾಯುದ್ಧ ನಾಟಕಂ

ಕನ್ನಡದಲ್ಲಿ ನಾಟಕಗಳ ರಚನೆ ಆರಂಭವಾಗಿದ್ದು ಹದಿ ನೇಳನೆಯ ಶತಮಾನದಲ್ಲಿ. ಅನಂತರವೂ ನಾಟಕಗಳ ರಚನೆ ಬಹಳ ನಿಧಾನವಾಗಿ ನಡೆಯಿತು.

ಕನ್ನಡದಲ್ಲಿ ಒಳ್ಳೆಯ ನಾಟಕಗಳೂ ಬರಬೇಕು; ನಾಟಕ ಸಾಹಿತ್ಯವೂ ಬೆಳೆಯಬೇಕು ಎಂಬುದು ’ಶ್ರೀ’ ಅವರ ಹೊಂಗನಸುಗಳಲ್ಲಿ ಒಂದು.

’ಶ್ರೀ’ ಅವರು ಹಳೆಗನ್ನಡದಲ್ಲಿದ್ದ ಅನೇಕ ಕಾವ್ಯಗಳನ್ನು ಓದಿದ್ದರು; ವಿವರವಾಗಿ ಪರಿಶೀಲಿಸಿದ್ದರು. ಹಾಗೆ ಅವರು ಓದಿ ಪರಿಶೀಲಿಸಿದ್ದ ಕಾವ್ಯಗಳಲ್ಲಿ ’ಗದಾಯುದ್ಧ’ ಎಂಬುದೂ ಒಂದು. ಇದರ ಇನ್ನೊಂದು ಹೆಸರು ’ಸಾಹಸ ಭೀಮ ವಿಜಯಂ’. ಇದನ್ನು ಬರೆದವನು ರನ್ನ. ಕನ್ನಡದ ಪ್ರಾಚೀನ ಕವಿಗಳಲ್ಲಿ ಪ್ರಮುಖ. ಮಹಾಭಾರತದ ಭೀಮ ಮತ್ತು ದುರ್ಯೋಧನರಿಗೆ ನಡೆದ ಯುದ್ಧವೇ ಈ ಕಾವ್ಯದ ಕಥೆ. ಇದು ಕಾವ್ಯ ರೂಪದಲ್ಲಿದ್ದರೂ ನಾಟಕದ ಎಲ್ಲ ಲಕ್ಷಣಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿತ್ತು. ಇದನ್ನು ಕಂಡುಕೊಂಡ ಶ್ರೀ ಅವರು ಈ ಕಾವ್ಯವನ್ನು ನಾಟಕರೂಪಕ್ಕೆ ತಿರುಗಿಸಿದರು. ಅದೇ ’ಗದಾಯುದ್ಧ ನಾಟಕಂ’.

ಆದರೆ ಶ್ರೀ ಅವರು ತಮ್ಮ ’ಗದಾಯುದ್ಧ ನಾಟಕಂ’ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಕಥೆ ಮತ್ತು ಪಾತ್ರಗಳೆಲ್ಲ ಒಂದೆ. ಆದರೆ ರನ್ನನ ನಾಯಕ ಭೀಮ; ’ಗದಾ ಯುದ್ಧ ನಾಟಕಂ’ನ ನಾಯಕ ಭೀಮನಲ್ಲ; ದುರ್ಯೋಧನ. ನಾಯಕ ದುರ್ಯೋಧನ ಎದುರಾಳಿ ಭೀಮನ ಗದೆಯ ಹೊಡೆತದಿಂದ ರಣರಂಗದಲ್ಲಿ ಸಾಯುತ್ತಾನೆ. ಮಹಾರಾಜ ನಾಗಿದ್ದು, ಜನಬಲ ಮತ್ತು ಧನಬಲದಿಂದ ಮೆರೆದಿದ್ದ ದುರ್ಯೋಧನ ರಣರಂಗದಲ್ಲಿ ತನ್ನವರು ಯಾರೂ ಇಲ್ಲದೆ ಅನಾಥನಂತೆ ಸಾಯುತ್ತಾನೆ. ಇದೊಂದು ದುರಂತ ಸನ್ನಿವೇಶ. ಧೀರ ನಾಯಕನೊಬ್ಬನ ಅಂತ್ಯ ಹೀಗೆ ಆಗುವುದು ರುದ್ರ ನಾಟಕದ ಒಂದು ಮುಖ್ಯ ಲಕ್ಷಣ. ಹೀಗಾಗಿ ’ಗದಾಯುದ್ಧ ನಾಟಕಂ’ ಕನ್ನಡದ ಪ್ರಥಮ ರುದ್ರ ನಾಟಕವಾಯಿತು. ಶ್ರೀ ಅವರ ಹಲವು ಸಾಧನೆಗಳಲ್ಲಿ ಇದೂ ಒಂದು.

’ಗದಾಯುದ್ಧ ನಾಟಕಂ’ ಮೊದಲು ರಂಗಭೂಮಿಯ ಮೇಲೆ ೧೯೨೫ ರಲ್ಲಿ ಪ್ರದರ್ಶನವಾಯಿತು. ಅನಂತರ ೧೯೨೬ ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

’ಅಶ್ವತ್ಥಾಮನ್’

ನಮ್ಮ ದೇಶದಲ್ಲಿ ಪುರಾಣಪ್ರಸಿದ್ಧವಾದ ಅನೇಕ ಕಥೆ ಗಳಿವೆಯಲ್ಲವೇ? ಹಾಗೆಯೇ ಗ್ರೀಸ್ ದೇಶದಲ್ಲೂ ಪುರಾಣ ಪ್ರಸಿದ್ಧ ಕಥೆಗಳಿವೆ. ಗ್ರೀಸ್ ದೇಶದ ಅನೇಕ ನಾಟಕಗಳ ಕಥೆ ಪುರಾಣಪುರುಷರನ್ನು ಕುರಿತದ್ದು. ಅಂಥ ನಾಟಕಗಳಲ್ಲಿ ’ಏಜಾಕ್ಸ್’ ಎಂಬುದು ಒಂದು ಪ್ರಸಿದ್ಧ ನಾಟಕ. ಆ ನಾಟಕವನ್ನು ಬರೆದವನು ಸಾಫೋಕ್ಲೀಸ್; ಗ್ರೀಸ್ ದೇಶದ ಮಹಾ ನಾಟಕ ಕಾರರಲ್ಲಿ ಒಬ್ಬ. ಸುಮಾರು ೨,೪೦೦ ವರ್ಷಗಳ ಹಿಂದೆ ಇದ್ದ. ನಮ್ಮ ಮಹಾಭಾರತದಲ್ಲಿ ಬರುವ ಅನೇಕ ಸಂದರ್ಭಗಳು, ಘಟನೆಗಳು ಆ ನಾಟಕದಲ್ಲೂ ಬರುತ್ತವೆ. ಆ ನಾಟಕವನ್ನು ಓದಿ ಮೆಚ್ಚಿಕೊಂಡಿದ್ದ ’ಶ್ರೀ’ ಅವರು, ಅದನ್ನು ಆಧರಿಸಿಕೊಂಡು ’ಅಶ್ವತ್ಥಾಮನ್’ ನಾಟಕವನ್ನು ರಚಿಸಿದರು.

ಮಹಾಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಶ್ವತ್ಥಾಮ ಒಬ್ಬ. ಈತನನ್ನು ಕುರಿತದ್ದು ಈ ನಾಟಕದ ಕಥೆ.

ಅಶ್ವತ್ಥಾಮ ಪರಾಕ್ರಮಿ ಮತ್ತು ಪ್ರಾಮಾಣಿಕ. ಮಹಾ ಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಪಾಂಡವರ ಮೇಲೆ ಈತನಿಗೆ ಬಹಳ ಕೋಪವುಂಟಾಗುತ್ತದೆ. ಆ ಕೋಪದಲ್ಲಿಯೇ ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ, ನಿದ್ರೆಯಲ್ಲಿದ್ದ ಅನೇಕ ಪಶುಗಳು, ಮಕ್ಕಳು ಮತ್ತು ಹೆಂಗಸರನ್ನೂ ಕೊಂದು, ತನ್ನ ಮನೆಗೆ ಹೋಗುತ್ತಾನೆ. ಅನಂತರ ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸುತ್ತದೆ. ಇದೊಂದು ಪಾಪದ ಕೆಲಸ ಎಂದೂ ತಿಳಿಯುತ್ತಾನೆ. ಇದರಿಂದ ಅಶ್ವತ್ಥಾಮ ಬಹಳ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ’ಅಶ್ವತ್ಥಾಮನ್’ ನಾಟಕವೂ ಒಂದು ರುದ್ರನಾಟಕವೇ.

ಅಶ್ವತ್ಥಾಮನ ಆ ದುರಂತಕ್ಕೆ ಅವನ ವಿಧಿಯೇ ಕಾರಣ. ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಬಲಶಾಲಿಯಾಗಿರಲಿ ವಿಧಿ ನಿಯಮದಂತೆ ಅವನು ಬಾಳಬೇಕು; ಬದುಕಬೇಕು. ಅತಿ ಅಹಂಕಾರ ಪಡಬಾರದು. ಇಲ್ಲವವಾದರೆ ಅಶ್ವಥತ್ಥಾಮನಿಗೆ ಒದಗಿದಂಥ ದುರಂತ ತಪ್ಪುವುದಿಲ್ಲ ಎಂಬ ತತ್ವ ನಾಟಕದಲ್ಲಿ ರೂಪ ತಾಳಿದೆ.

’ಅಶ್ವತ್ಥಾಮನ್’ ನಾಟಕವೂ ಮೊದಲು ರಂಗಭೂಮಿಯ ಮೇಲೆ ಪ್ರದರ್ಶನಗೊಂಡು (೧೯೨೯), ಅನಂತರ ಪುಸ್ತಕರೂಪದಲ್ಲಿ ಪ್ರಕಟವಾಯಿತು (೧೯೩೦).

’ಅಶ್ವತ್ಥಾಮನ್’ ಮತ್ತು ’ಪಾರಸಿಕರು’ ನಾಟಕಗಳ ರಚನೆ ಯಲ್ಲಿ ’ಶ್ರೀ’ ಅವರು ಹೊಸ ತಂತ್ರಗಳನ್ನು ಬಳಸಿದ್ದಾರೆ. ಅಂಥವುಗಳಲ್ಲಿ ಮುಖ್ಯವಾದುದು ಮೇಳದವರ ಪಾತ್ರ. ಮೇಳ ದವರೆಂದರೆ ಹಾಡುವವರ ಗುಂಪು. ಇವರು ನಾಟಕದ ಕಥೆಗೂ ಸಂಬಂಧಿಸಿದವರು. ಗ್ರೀಕ್ ನಾಟಕಗಳಲ್ಲಿ ಈ ಮೇಳದವರಿಗೆ ತಕ್ಕಷ್ಟು ಪ್ರಾಧಾನ್ಯ. ಕಥೆಗೆ ಸಂಬಂಧಿಸಿದ ಗೀತೆಗಳನ್ನು ಹಾಡುತ್ತ ನಾಟಕವನ್ನು ಮುಂದುವರಿಸುವರೂ ಇವರೆ. ನಾಟಕದ ಒಂದೊಂದು ಪಾತ್ರಕ್ಕೂ ಸಂಬಂಧವನ್ನು ಕಲ್ಪಿಸುವರೂ ಇವರೆ. ಇಂಥ ತಂತ್ರ ಕನ್ನಡ ನಾಟಕಗಳ ರಚನೆಯಲ್ಲಿ ಇರಲಿಲ್ಲ. ’ಶ್ರೀ’ ಅವರು ಈ ತಂತ್ರವನ್ನು ಕನ್ನಡಕ್ಕೆ ತಂದರು. ಇದರಿಂದ ನಾಟಕ ರಚನೆಯಲ್ಲಿ ಒಂದು ಹೊಸ ದೃಷ್ಟಿ ಬೆಳೆಯಿತು.

ಕನ್ನಡ ಸಾಹಿತ್ಯಕ್ಕೆ ’ಶ್ರೀ’ ಅವರು ಹೀಗೆ ಹೊಸ ಆಯಾಮಗಳನ್ನು, ದೃಷ್ಟಿಗಳನ್ನು ಒದಗಿಸಿದರು. ಹೊಸ ದಾರಿಗಳನ್ನು ತೋರಿಸಿದರು. ಹೊಸ ಕಾಣಿಕೆಗಳನ್ನು ಕೊಟ್ಟರು. ಅವೆಲ್ಲಾ ಕನ್ನಡಿಗರಿಗೆ ಪ್ರಿಯವಾದವು.

’ಆನೆ ನಡೆದುದೆ ದಾರಿ’ ಎಂಬ ಗಾದೆ ಇದೆಯಲ್ಲ? ಹಾಗೆಯೆ ’ಶ್ರೀ’ ಅವರು ಆಯ್ಕೆಮಾಡಿದ ವಸ್ತು ರಚನೆಗಳೇ ಆ ಕಾಲದ ಬರಹಗಾರರಿಗೆ ಆದರ್ಶವಾದವು. ಅವರ ಅನೇಕ ಶಿಷ್ಯರು ಅವರು ತೋರಿಸಿದ ದಾರಿಯಲ್ಲಿ ನಡೆದು ಸಾರ್ಥಕ ವಾದ ಕೃತಿಗಳನ್ನು ರಚಿಸಿದರು. ಇದರಿಂದ ಹೊಸಗನ್ನಡ ಸಾಹಿತ್ಯ ಶ್ರೀಮಂತವಾಯಿತು.

ವಿಶ್ವವಿದ್ಯಾನಿಲಯದಲ್ಲಿ ಕನ್ನಡಕ್ಕೆ ಸ್ಥಾನ

ಆಗ ನಮ್ಮ ದೇಶ ಇನ್ನೂ ಸ್ವತಂತ್ರವಾಗಿರಲಿಲ್ಲ. ಇಂಗ್ಲಿಷರು ನಮ್ಮ ದೇಶವನ್ನು ಆಳುತ್ತಿದ್ದರು. ಶಾಲಾ ಕಾಲೇಜು ಗಳಲ್ಲಿ ಶಿಕ್ಷಣ ನಡೆಯುತ್ತಿದ್ದುದು ಇಂಗ್ಲಿಷಿನಲ್ಲಿ. ಸರ್ಕಾರದ ಆಡಳಿತ ನಡೆಯುತ್ತಿದ್ದುದು ಇಂಗ್ಲಿಷಿನಲ್ಲಿ. ಸಭೆ ಸಮಾರಂಭ ಗಳಲ್ಲಿ ಭಾಷಣಗಳಾಗುತ್ತಿದ್ದುದು ಇಂಗ್ಲಿಷಿನಲ್ಲಿ,  ಕನ್ನಡವನ್ನು ಕೇಳುವವರೇ ಇರಲಿಲ್ಲ.

ಇಂಥ ಪರಿಸ್ಥಿತಿಯಲ್ಲಿ ಕನ್ನಡದ ಸೇವೆಗೆ ಮುಡಿಪಾ ಪಾದರು ’ಶ್ರೀ’ ಅವರು.

ಶ್ರೀಕಂಠಯ್ಯನವರು ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ೧೯೨೬ ರಲ್ಲಿ ನೇಮಕಗೊಂಡು, ಮೂರು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. ಕನ್ನಡಕ್ಕೆ ಒದಗಿದ್ದ ದುರವಸ್ಥೆಯನ್ನು ಹೋಗಲಾಡಿಸಲು ತಮ್ಮ ಈ ಅಧಿ ಕಾರಾವಧಿಯಲ್ಲಿ ಅವರು ಬಹುವಾಗಿ ಪ್ರಯತ್ನಿಸಿದರು.

ಅದುವರೆಗೂ ಸ್ನಾತಕೋತ್ತರ ಮಟ್ಟದಲ್ಲಿ ಕನ್ನಡ ಅಧ್ಯಯನ ವಿಷಯವಾಗಿರಲಿಲ್ಲ. ಬ್ರಜೇಂದ್ರನಾಥ್ ಸೀಲ್ ಎಂಬುವರು ಆಗ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾ ಗಿದ್ದರು. ಬಂಗಾಳಿಯವರಾಗಿದ್ದ ಅವರಿಗೆ ದೇಶೀಯ ಭಾಷೆಗಳ ಬಗ್ಗೆ ಬಹಳ ಅಭಿಮಾನ ಇತ್ತು. ಶ್ರೀಕಂಠಯ್ಯನವರು ಕನ್ನಡದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ ವಿಷಯವನ್ನು ೧೯೨೭ ರಲ್ಲಿ ಅವರ ಮುಂದಿಟ್ಟಾಗ, ಅವರು ಅದಕ್ಕೆ ಸಂತೋಷ ದಿಂದ ಒಪ್ಪಿಗೆ ಕೊಟ್ಟರು. ಅಷ್ಟೇ ಅಲ್ಲ, ಶ್ರೀಕಂಠಯ್ಯನವರನ್ನೇ ಕನ್ನಡದ ಗೌರವ ಪ್ರಾಧ್ಯಾಪಕರನ್ನಾಗಿಯೂ ನೇಮಿಸಿದರು.

’ಶ್ರೀ’ ಅವರು ತಾವು ಹೊಸದಾಗಿ ಆರಂಭಿಸಿದ ಕನ್ನಡ ಇಲಾಖೆಗೆ ಭದ್ರವಾದ ಬುನಾದಿಯನ್ನು ಹಾಕಿದರು. ವಿದ್ಯಾರ್ಥಿ ಗಳಿಗೆ ಉತ್ಸಾಹದಿಂದ ಪಾಠ ಹೇಳಿ, ಬೋಧನೆಯಲ್ಲೂ ಒಂದು ಹೊಸ ರೀತಿಯನ್ನು ಬೆಳೆಸಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀ ಕಂಠಯ್ಯನವರು, ಕನ್ನಡ ತರಗತಿಗಳಿಗೂ ಪಾಠ ಹೇಳುತ್ತಾರೆಂದು ಕೇಳಿ ಅನೇಕ ವಿದ್ಯಾರ್ಥಿಗಳು ಕನ್ನಡ ಎಂ.ಎ. ತರಗತಿಗಳಿಗೆ ಸೇರಿಕೊಂಡರಂತೆ! ಅವರು ಪಾಠ ಮಾಡುತ್ತಿದ್ದ ರೀತಿ ಅಷ್ಟು ಜನಪ್ರಿಯವಾಗಿತ್ತು.

’ತಿಳಿವೇ ಬೆಳಕು’ ಎಂಬುದಾಗಿ ’ಶ್ರೀ’ ಅವರು ನಂಬಿದ್ದರು. ಕನ್ನಡಿಗರೆಲ್ಲಾ ವಿದ್ಯಾವಂತರಾಗಬೇಕು, ಬುದ್ಧಿವಂತರಾಗಬೇಕು ಎಂಬುದು ಅವರ ಹಾರೈಕೆಯಾಗಿತ್ತು. ಅವರು ರಿಜಿಸ್ಟ್ರಾರ್ ಪದವಿಯಲ್ಲಿದ್ದಾಗಲೆ ’ಮೈಸೂರು ವಿಶ್ವಿವಿದ್ಯಾನಿಲಯ ಕನ್ನಡ ಗ್ರಂಥಮಾಲೆ, ಎಂಬ ಹೆಸರಿನಲ್ಲಿ ಒಂದು ಗ್ರಂಥಮಾಲೆಯನ್ನು ಆರಂಭಿಸಿದರು. ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ ಮುಂತಾದ ವಿವಿಧ ವಿಷಯಗಳ ಮೇಲೆ ಕನ್ನಡದಲ್ಲಿ ವಿದ್ವಾಂಸರಿಂದ ಗ್ರಂಥಗಳನ್ನು ಬರೆಸಿ ಈ ಮಾಲೆಯಲ್ಲಿ ಪ್ರಕಟಿಸಿದರು. ಕನ್ನಡದ ಪ್ರಾಚೀನ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ, ಹರಿಹರ ಮುಂತಾದವರ ಕಾವ್ಯಗಳನ್ನು ಸಂಪಾದಿಸಿ, ಪರಿಷ್ಕರಿಸಿ ಪ್ರಕಟಿಸಲು ವ್ಯವಸ್ಥೆ ಮಾಡಿದರು. ’ಶ್ರೀ’ ಅವರು ಬರೆಯುವವರನ್ನು ಗುರುತಿಸಿ ಬರೆಸಿದ್ದು ಮಾತ್ರವಲ್ಲ; ತಾವೇ ಈ ಮಾಲೆಗೆ ’ಇಸ್ಲಾಂ ಸಂಸ್ಕೃತಿ’ ಎಂಬ ಪುಸ್ತಕವನ್ನು ಭಾಷಾಂತರಿಸಿಯೂ ಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ

ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ (ಸ್ಥಾಪನೆ: ೧೯೧೫). ನಾಡು-ನುಡಿಯ ಅಭಿವೃದ್ಧಿಗಾಗಿ ಶ್ರಮಿಸು ವುದೇ ಈ ಸಂಸ್ಥೆಯ ಗುರಿ. ಇದೊಂದು ರಾಜ್ಯಮಟ್ಟದ ಸಂಸ್ಥೆ. ’ಶ್ರೀ’ ಅವರು ೧೯೩೫ ರಿಂದ ೧೯೪೨ರ ವರೆಗೆ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಇವರ ಅಧಿಕಾರಾವಧಿಯಲ್ಲಿ ಪರಿಷತ್ತು ವಿವಿಧ ಚಟುವಟಿಕೆಗಳನ್ನು ನಡೆಸಿ, ಹಲವು ಮುನ್ನಡೆ ಗಳನ್ನು ಸಾಧಿಸಿತು.

ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕೆಲಸ ಕನ್ನಡ ಜನತೆಗೆ ತಿಳಿಯಬೇಕಲ್ಲವೆ? ಅದಕ್ಕಾಗಿ ’ಶ್ರೀ’ ಅವರು ’ಕನ್ನಡ ನುಡಿ’ ಪತ್ರಿಕೆಯನ್ನು ಪ್ರಾರಂಭಿಸಿದರು. ಆ ಪತ್ರಿಕೆಯ ಪ್ರಕಟಣೆ ಯಿಂದ ಪರಿಷತ್ತಿಗೂ ಜನತೆಗೂ ನಿಕಟವಾದ ಸ್ನೇಹಸಂಬಂಧ ಗಳು ಬೆಳೆಯಲು ಸಾಧ್ಯವಾಯಿತು. ಈ ಪತ್ರಿಕೆ ಈಗಲೂ ಪ್ರಕಟವಾಗುತ್ತಿದೆ.

ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಕ್ಕೂ ಮೀರಿದ ಇತಿಹಾಸವಿದೆ. ನಮ್ಮ ಸಾಹಿತ್ಯ ಬೆಳೆದುಬಂದ ಬಗೆಯನ್ನು ನಮ್ಮ ಜನ ತಿಳಿಯಬೇಕು ಎಂಬುದಾಗಿ ಭಾವಿಸಿದ ’ಶ್ರೀ’ ಅವರು, ಅದಕ್ಕಾಗಿ ’ಕನ್ನಡ ಬಾವುಟ’ ಕವನ ಸಂಕಲನವನ್ನು ಸಿದ್ಧಪಡಿಸಿ ಪ್ರಕಟಿಸಿದರು. ಇದು ಏಳನೆಯ ಶತಮಾನದ ಶಾಸನಗಳು, ಪೂರ್ವ ಸಾಹಿತ್ಯ, ನಾಡಪದಗಳು ಮತ್ತು ಹೊಸಗನ್ನಡ ಕಾವ್ಯ-ಇವುಗಳೆಲ್ಲದರ ಪರಿಚಯ ಮಾಡಿ ಕೊಡುತ್ತದೆ.

ನಮ್ಮ ನಾಡಿನ ಇತಿಹಾಸವನ್ನು ನಾವು ತಿಳಿಯ ಬೇಕಲ್ಲವೆ? ಅದಕ್ಕಾಗಿ ’ಶ್ರೀ’ ಅವರು ’ಕನ್ನಡ ನಾಡಿನ ಚರಿತ್ರೆ’ ಯನ್ನು ವಿದ್ವಾಂಸರುಗಳಿಂದ ಬರೆಸಿ, ಮೂರು ಸಂಪುಟಗಳಲ್ಲಿ ಪ್ರಕಟಿಸಿದರು.

ಪರಿಷತ್ತಿನ ಮೂಲಕ ಹೀಗೆ ಹಲವು ಬಗೆಯ ಚಟುವಟಿಕೆಗಳನ್ನು ನಡೆಸಿದ ’ಶ್ರೀ’ ಅವರು, ಪರಿಷತ್ತಿನ ಅಚ್ಚುಕೂಟಕ್ಕಾಗಿ ಐದು ಸಾವಿರ ರೂಪಾಯಿಗಳನ್ನು ದಾನವಾಗಿ ಕೊಟ್ಟರು. ಅದೇ ಈಗಿರುವ ’ಬಿ.ಎಂ.ಶ್ರೀಕಂಠಯ್ಯ ಅಚ್ಚುಕೂಟ’.

ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿಯ ರಕ್ಷಣೆಯ ಕೋಟೆಯಾಗಿರುವಂತೆ ’ಶ್ರೀ’ ಅವರು ನೋಡಿಕೊಂಡರು.

ಏಕೀಕರಣದ ಹಂಬಲ

ಆ ದಿನಗಳಲ್ಲಿ ಕರ್ನಾಟಕ ಒಂದುಗೂಡಿರಲಿಲ್ಲ. ನಾಡು ಹರಿದು ಹಂಚಿಹೋಗಿತ್ತು. ಮುಂಬಯಿ, ಮದರಾಸು, ಹೈದರಾ ಬಾದ್, ಕೊಡಗು, ಮೈಸೂರು, ಸಾಂಗಲಿ-ಹೀಗೆ ಹಲವು ಆಡಳಿತ ವಿಭಾಗಗಳಲ್ಲಿ ಕನ್ನಡಿಗರು ಹಂಚಿಹೋಗಿದ್ದರು. ಅದರಿಂದಾಗಿ ಅವರಲ್ಲಿ ಒಗ್ಗಟ್ಟಿರಲಿಲ್ಲ. ಹೀಗಾಗಿ ಕರ್ನಾಟಕ ರಾಜಕೀಯವಾಗಿಯೂ ಸಾಂಸ್ಕೃತಿಕವಾಗಿಯೂ ಒಂದಾಗಿರಲಿಲ್ಲ.

’ಹರಿದು ಹಂಚಿಹೋಗಿರುವ ಕನ್ನಡ ಭಾಗಗಳೆಲ್ಲ ಒಂದುಗೂಡಬೇಕು; ಕರ್ನಾಟಕವಾಗಬೇಕು. ಕನ್ನಡಿಗರೆಲ್ಲ ಒಗ್ಗಟ್ಟಾಗಬೇಕು; ಜಡತ್ವನವನ್ನು ಬಿಟ್ಟು ಜಾಗೃತರಾಗಬೇಕು. ಸಂಕುಚಿತ ಭಾವನೆಗಳನ್ನು, ಅಂಧ ಸಂಪ್ರದಾಯಗಳನ್ನು ಬಿಟ್ಟು, ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿಚಾರಶೀಲ ರಾಗಬೇಕು-’ ಇದು ’ಶ್ರೀ’ ಅವರ ಹಂಬಲವಾಗಿತ್ತು.

’ಕನ್ನಡ ತಾಯ್‌ನೋಟ’ ಎಂಬುದು ’ಶ್ರೀ’ ಅವರು ಬರೆದಿರುವ ಒಂದು ಕವನ. ಕನ್ನಡ ನಾಡಿನ ಭವ್ಯ ಪರಂಪರೆ ಯನ್ನು, ಶ್ರೀಮಂತಿಕೆಯನ್ನು ಆ ಪದ್ಯದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

’ಶ್ರೀ’ ಅವರು ಪ್ರಸಿದ್ಧ ವಾಗ್ಮಿಗಳಾಗಿದ್ದರು. ಪುಸ್ತಕ ಅಥವಾ ಟಿಪ್ಪಣಿಗಳ ಸಹಾಯವಿಲ್ಲದೆ ಅವರು ಗಂಟೆಗಟ್ಟಲೆ ಉಪನ್ಯಾಸ ಮಾಡುತ್ತಿದ್ದರು.

ಕನ್ನಡನಾಡಿನ ಯಾವ ಮೂಲೆಯಿಂದಲಾದರೂ ಭಾಷಣಕ್ಕೆ ಕರೆ ಬಂದರೆ ಸಾಕು, ಅವರು ಕೂಡಲೇ ಸಿದ್ಧ ರಾಗುತ್ತಿದ್ದರು. ಅದಕ್ಕಾಗಿ ಖರ್ಚುವೆಚ್ಚಗಳಿಗೂ ಅವರು ಯೋಚಿಸುತ್ತಿರಲಿಲ್ಲ. ಪ್ರಯಾಣದ ವ್ಯವಸ್ಥೆಯನ್ನು ಕುರಿತೂ ಚಿಂತಿಸುತ್ತಿರಲಿಲ್ಲ. ರೈಲುಗಾಡಿಯ ಮೂರನೆಯ ತರಗತಿ ಯಾದರೂ ಸರಿ; ಬಸ್ಸಿನ ಮೆತ್ತನೆಯ ಆಸನವಾದರೂ ಸರಿ; ಕೊನೆಗೆ ಎತ್ತಿನ ಗಾಡಿಯಾದರೂ ಸರಿಯೆ. ಎಲ್ಲಕ್ಕೂ ಅವರು ಸಿದ್ಧರಾಗಿರುತ್ತಿದ್ದರು.

’ಶ್ರೀ’ ಅವರು ಹೀಗೆ ಸತತವಾಗಿ ಹತ್ತಾರು ವರ್ಷಗಳ ಕಾಲ ನಾಡಿನ ಮೂಲೆಮೂಲೆಯನ್ನೂ ಸುತ್ತಿ, ಸುಳಿದರು. ಕನ್ನಡಿಗರಿಗೆ ಕನ್ನಡದ ಮಹಿಮೆಯನ್ನು, ಅವರ ಕರ್ತವ್ಯವನ್ನು ತಿಳಿಸಿಕೊಟ್ಟರು. ದೇಶದ ತುಂಬೆಲ್ಲಾ ನಾಡ ಪ್ರೇಮವನ್ನು ಹರಡಿ ದರು. ’ಕನ್ನಡನಾಡಿನ ಪ್ರತಿಯೊಂದು ಅಂಗುಲ ನೆಲವನ್ನೂ ನಾನು ಮುಟ್ಟಬೇಕು’ ಎಂಬುದು ಅವರ ಬಯಕೆಯಾಗಿತ್ತು. ’ಕನ್ನಡನಾಡಿನ ಪ್ರತಿಯೊಂದು ಹಳ್ಳಿಯೂ ಒಂದೊಂದು ತೀರ್ಥಕ್ಷೇತ್ರ’ ಎಂಬುದಾಗಿ ಅವರು ಭಾವಿಸಿದ್ದರು.

ಶ್ರೀಕಂಠಯ್ಯನವರ ಕಂಠಶ್ರೀ ಜನತೆಯನ್ನು ಎಬ್ಬಿಸಿತು. ನಾಡಿನಲ್ಲೆಲ್ಲಾ ಕರ್ನಾಟಕ ಸಂಘಗಳು ಆರಂಭಗೊಂಡವು. ಆ ಸಂಘಗಳ ಮೂಲಕ ಕನ್ನಡ ಚಟುವಟಿಕೆಗಳು ವ್ಯಾಪಕವಾಗಿ ನಡೆದವು.

ವ್ಯಕ್ತಿತ್ವ ಹಲವು ಮುಖಗಳು

ಶ್ರೀಕಂಠಯ್ಯನವರು ತಮ್ಮ ಜೀವನದಲ್ಲಿ ಬಗೆಬಗೆಯ ಕಷ್ಟ ಗಳಿಗೆ ಒಳಗಾಗಿದ್ದರು. ಆದರೆ ಅವರು ಕಷ್ಟಗಳಿಗೆ ಹೆದರಲಿಲ್ಲ; ನಷ್ಟಗಳಿಗೆ ಚಿಂತಿಸಲಿಲ್ಲ. ಅವುಗಳನ್ನೆಲ್ಲಾ ಅವರು ಧೈರ್ಯವಾಗಿ ಎದುರಿಸಿದರು.

ಶ್ರೀಕಂಠಯ್ಯನವರು ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ವಿವಾಹವಾಗಿದ್ದರು. ಅವರ ಪತ್ನಿಯ ಹೆಸರು ದೇವಮ್ಮ ಎಂದು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಶಾರದಮ್ಮ, ತಂಗಮ್ಮ. ಒಬ್ಬ ಮಗ, ತಮ್ಮಯ್ಯ. ಅವರ ಪತ್ನಿ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡರು. ಆಗ ’ಶ್ರೀ’ ಅವರಿಗೆ ಮೂವತ್ತು-ಮೂವತ್ತೊಂದು ವರ್ಷ. ಶ್ರೀ ಅವರ ಜೀವನದಲ್ಲಿ ಅದೊಂದು ದೊಡ್ಡ ನಷ್ಟ. ಆದರೆ ಅವರು ಅದನ್ನು ಧೈರ್ಯ ದಿಂದ ಎದುರಿಸಿದರು. ಪತ್ನಿ ತೀರಿಕೊಂಡ ಮಾರನೆಯ ದಿನವೂ ಅವರು ಕಾಲೇಜಿಗೆ ಹೋಗಿ ಎಂದಿನಂತೆ ಪಾಠ ಮಾಡಿದರು. ಏನೂ ಆಗಿಯೇ ಇಲ್ಲ ಎಂಬಂತೆ ನಡೆದು ಕೊಂಡರು.

ಅವರ ಮಗ ತಮ್ಮಯ್ಯ ಕಣ್ಣು ನೋವಿನಿಂದ ಚಿಕ್ಕ ವಯಸ್ಸಿನಲ್ಲಿಯೇ ಕುರುಡನಾದ. ಮಗಳು ಶಾರದಮ್ಮ ಚಿಕ್ಕವಯಸ್ಸಿನಲ್ಲೇ ವಿಧವೆಯಾದರು. ಈ ಎಲ್ಲ ದುಃಖಗಳನ್ನು ’ಶ್ರೀ’ ಅವರು ಅನುಭವಿಸಬೇಕಾಯಿತು. ಆದರೆ ಇದರಿಂದ ಅವರು ಕುಗ್ಗಲಿಲ್ಲ. ಜೀವನದಲ್ಲಿ ಶ್ರದ್ಧೆಯನ್ನು, ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಕರ್ತವ್ಯದಲ್ಲಿ ನಿರತರಾಗಿ ತಮ್ಮೆಲ್ಲ ಕಷ್ಟಗಳನ್ನು ಮರೆತುಬಿಡುತ್ತಿದ್ದರು.

’ಶ್ರೀ’ ಅವರು ಕಾರ್ಯನಿಷ್ಠರು. ಒಂದು ಸಂದರ್ಭದಲ್ಲಿ ಆದ ಸಣ್ಣ ಅಘಾತದಿಂದ ಅವರ ಬಲಭುಜದ ಮೂಳೆಗೆ ಪೆಟ್ಟಾ ಯಿತು. ಆ ಸುದ್ದಿ ಅವರು ಕೆಲಸ ಮಾಡುತ್ತಿದ್ದ ಕಾಲೇಜಿನ ಪ್ರಿನ್ಸಿಪಾಲರಿಗೂ ತಿಳಿಯಿತು. ಅವರು ’ಶ್ರೀ’ ಅವರನ್ನು ನೋಡಲು ಅವರ ಮನೆಗೆ ಬಂದರು. ಭುಜಕ್ಕೆ ಬ್ಯಾಂಡೇಜ್ ಕಟ್ಟಿಸಿಕೊಂಡು ಮಂಚದ ಮೇಲೆ ಮಲಗಿದ್ದ ’ಶ್ರೀ’ ಅವರನ್ನು ಕಂಡು ಪ್ರಿನ್ಸಿಪಾಲರು ಕೇಳಿದರು:

“ನಾಳೆಯಿಂದ ಕಾಲೇಜಿನಲ್ಲಿ ನೀವು ಮಾಡುತ್ತಿದ್ದ ಪಾಠ ಗಳ ವ್ಯವಸ್ಥೆ ಏನು?”

ಸೂಕ್ಷ್ಮಮತಿಗಳಾದ ’ಶ್ರೀ’ ಅವರು ಕೂಡಲೆ ಹೇಳಿದರು: “ಆ ಚಿಂತೆ ನಿಮಗೇಕೆ ಸ್ವಾಮಿ! ನನ್ನ ಪಾಠಗಳನ್ನು ನಾನೇ ಬಂದು ಮಾಡುತ್ತೇನೆ.”

ಅಷ್ಟೇ ಅಲ್ಲ, ಮಾರನೆಯ ದಿನ ಅವರು ಕಾಲೇಜಿಗೆ ಹೋಗಿ ಎಂದಿಂತೆ ಪಾಠ ಮಾಡಿದರು. ತಮ್ಮ ನೋವನ್ನು ಮರೆತುಬಿಟ್ಟರು.

’ಶ್ರೀ’ ಅವರ ಒಬ್ಬ ತಮ್ಮ ಶ್ರೀರಂಗಪಟ್ಟಣದಲ್ಲಿ ವಾಸಕ್ಕಾಗಿ ಒಂದು ಮನೆ ಕಟ್ಟಿಸಿದರು. ಅದಕ್ಕಾಗಿ ತಮ್ಮಲ್ಲಿದ್ದ ಹಣವನ್ನೆಲ್ಲ ಖರ್ಚು ಮಾಡಿದರು. ಆದರೂ ಕೊನೆಯಲ್ಲಿ ಒಂದು ಸಾವಿರ ರೂಪಾಯಿ ಕಡಿಮೆ ಆಯಿತು. ಅಷ್ಟು ಹಣವನ್ನು ಅವರು ಆ ಊರಿನ ಸಹಕಾರ ಸಂಘದಿಂದ ಸಾಲರೂಪದಲ್ಲಿ ತೆಗೆದು ಕೊಂಡರು. ಆ ವಿಷಯವನ್ನು ಅವರು ಯಾರಿಗೂ ತಿಳಿಸಲಿಲ್ಲ. ಆದರೆ ಆ ವಿಷಯ ’ಶ್ರೀ’ ಅವರಿಗೆ ಗೊತ್ತಾಯಿತು.

ಒಂದು ದಿನ ’ಶ್ರೀ’ ಅವರು ತಮ್ಮ ಒಬ್ಬ ಸ್ನೇಹಿತ ರೊಂದಿಗೆ ಶ್ರೀರಂಗಪಟ್ಟಣಕ್ಕೆ ಹೋದರು. ತಮ್ಮನ ಹೊಸ ಮನೆಯನ್ನು ನೋಡಿ ಸಂತೋಷಪಟ್ಟರು. ಅನಂತರ ಮೈಸೂರಿಗೆ ವಾಪಸು ಬರಲು, ತಮ್ಮನೊಂದಿಗೆ ಶ್ರೀರಂಗ ಪಟ್ಟಣದ ರೈಲ್ವೆ ಸ್ಟೇಷನ್ನಿಗೆ ಬಂದರು. ತಮ್ಮನ ಕೈಗೆ ಮುಚ್ಚಿದ್ದ ಒಂದು ಲಕೋಟೆ ಕೊಟ್ಟು, ಅದನ್ನು ಮನೆಯಲ್ಲಿ ತೆಗೆದು ನೋಡುವಂತೆ ಹೇಳಿ ರೈಲು ಹತ್ತಿದರು.

ಮನೆಗೆ ಬಂದ ’ಶ್ರೀ’ ಅವರ ತಮ್ಮ ಕುತೂಹಲದಿಂದ ಲಕೋಟೆ ಬಿಚ್ಚಿದರು. ಅದರಲ್ಲಿ ಅವರ ಹೆಸರಿಗೆ ಬರೆದಿದ್ದ ಒಂದು ಸಾವಿರ ರೂಪಾಯಿಗಳ ಚೆಕ್ ಇತ್ತು!

’ಶ್ರೀ’ ಅವರದು ಇಂಥ ಉದಾರ ಮನಸ್ಸು; ಬಹಳ ಸರಳ ಸ್ವಭಾವ. ಇತರರಿಗೆ ಸಹಾಯ ಮಾಡುವುದರಲ್ಲಿ ಅವರು ಸಂತೋಷವನ್ನು ಅನುಭವಿಸುತ್ತಿದ್ದರು.

’ಸಂಭಾವನೆ’

’ಶ್ರೀ’ ಅವರು ನಾಡು ನುಡಿಗಳ ಅಭಿವೃದ್ಧಿಗಾಗಿ ಸಲ್ಲಿಸಿದ ಸೇವೆಗೆ ಮನ್ನಣೆ ಎಂಬಂತೆ ಅವರಿಗೆ ಬಗೆಬಗೆಯ ಗೌರವ, ಪ್ರಶಸ್ತಿಗಳು ಲಭಿಸಿದವು.

ಕಲ್ಬುರ್ಗಿಯಲ್ಲಿ ೧೯೨೮ ರಲ್ಲಿ ೧೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ’ಶ್ರೀ’ ಅವರನ್ನು ಆ ಸಮ್ಮೇಳನದ ಅದ್ಯಕ್ಷರನ್ನಾಗಿ ಆರಿಸಿ ಗೌರವಿಸಲಾಯಿತು.

ಆಗಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ೧೯೩೮ ರಲ್ಲಿ ಅವರಿಗೆ ’ರಾಜಸೇವಾಸಕ್ತ’ ಎಂಬ ಬಿರುದನ್ನು, ಜೊತೆಗೆ ಚಿನ್ನದ ಪದಕವನ್ನು ನೀಡಿ  ಸನ್ಮಾನಿಸಿದರು. ಹಲವು ಧರ್ಮಗಳವರು, ಹಲವು ವಿದ್ವತ್ಸಂಸ್ಥೆ ಗಳವರು ’ಶ್ರೀ’ ಅವರನ್ನು ಗೌರವಿಸಿದರು.

’ಶ್ರೀ’ ಅವರಿಗೆ ೫೭ ವರ್ಷ ತುಂಬಿದಾಗ (೧೯೪೧) ಅವರ ಶಿಷ್ಯರು ಮತ್ತು ಸ್ನೇಹಿತರು ಒಂದು ಸನ್ಮಾನ ಸಮಾರಂಭವನ್ನು ನಡೆಸಿದರು. ನಾಡಿನ ವಿದ್ವಾಂಸರು ಬರೆದಿದ್ದ ಲೇಖನಗಳ ಸಂಪುಟ ’ಸಂಭಾವನೆ’ಯನ್ನು ಆ ಸಮಾರಂಭ ದಲ್ಲಿ ಅವರಿಗೆ ಅರ್ಪಿಸಲಾಯಿತು. ’ಶ್ರೀ’ ಅವರ ಹೆಸರು ಹೇಳಿ ಒಪ್ಪಿಸಿದ ಆ ಸಂಭಾವನೆ ಗ್ರಂಥವೇ ಕನ್ನಡದಲ್ಲಿ ಪ್ರಕಟವಾದ ಪ್ರಥಮ ಅಭಿನಂದನ ಗ್ರಂಥ. ಕನ್ನಡದಲ್ಲಿ ಆ ಬಗೆಯ ಗ್ರಂಥಗಳ ಪ್ರಕಟಣೆಗೆ ಅದು ನಾಂದಿಯಾಯಿತು.

ಹೀಗೆ ಬಗೆಬಗೆಯ ಗೌರವದ ಹೂಮಾಲೆಗಳು ’ಶ್ರೀ’ ಅವರ ಕೊರಳಿಗೆ ಬಿದ್ದವು. ಎಲ್ಲಕ್ಕೂ ಹೆಚ್ಚಾಗಿ ನಾಡ ಜನತೆಯ ಪ್ರೀತಿ-ವಿಶ್ವಾಸಗಳಿಗೆ ಅವರು ಪಾತ್ರರಾಗಿದ್ದರು.

’ಕರುಣಾಳು ಬಾ ಬೆಳಕೆ’

’ಶ್ರೀ’ ಅವರು ಕವಿಗಳಿಗೆ, ಕಲಾವಿದರಿಗೆ, ನಾಡು ನುಡಿ ಸೇವಕರಿಗೆ ಕರುಣಾಳು ಬೆಳಕಾಗಿದ್ದರು. ಅವರ ಅಕ್ಕರೆಯ ಆರೈಕೆಯಿಂದ ಹಲವು ಸಂಘಸಂಸ್ಥೆಗಳು ಅಭಿವೃದ್ಧಿಯಾದವು.

’ಶ್ರೀ’ ಅವರು ಕಂಡ ಕನಸಾದರೂ ಸಾಮಾನ್ಯವಾದುದಲ್ಲ. ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದುಗೂಡಬೇಕು; ಕನ್ನಡಿಗರೆಲ್ಲಾ ಒಗ್ಗಟ್ಟಾಗಬೇಕು; ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳು ಅಭಿವೃದ್ಧಿಯಾಗಬೇಕು-ಹೀಗೆ ಹಲವುಹನ್ನೊಂದು ಹೊಂಗನಸುಗಳನ್ನು ಅವರು ಕಂಡರು. ಅಷ್ಟೇ ಅಲ್ಲ, ಅವನ್ನು ನನಸಾಗಿಸಲು ತಮ್ಮ ಜೀವನದುದ್ದಕ್ಕೂ ಒಂದೇ ಸಮನೆ ದುಡಿದರು.

’ಶ್ರೀ’ ಅವರು ತಮಗೆ ೬೦ ವರ್ಷ ತುಂಬಿದಾಗ, ತಾವೇ ಬರೆದಿದ್ದ ಕವನಗಳ ಒಂದು ಸಂಕಲನವನ್ನು ಪ್ರಕಟಿಸಿ, ಅದನ್ನು ತಮ್ಮ ಬಂಧುಮಿತ್ರರಿಗೆ ಕಾಣಿಕೆಯಾಗಿ ಕೊಟ್ಟರು. ಆ ಸಂಕಲನಕ್ಕೆ ಅವರು ಇಟ್ಟ ಹೆಸರು ’ಹೊಂಗನಸುಗಳು’ ಎಂದೇ.

ಪ್ರಾಧ್ಯಾಪಕ ಹುದ್ದೆಯಿಂದ ಶ್ರೀಕಂಠಯ್ಯನವರು ೧೯೪೨ ರಲ್ಲಿ ನಿವೃತ್ತರಾದರು. ಅನಂತರ ಅವರು ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ (೧೯೪೨-೧೯೪೪) ಕಾರ್ಯ ನಿರ್ವಹಿಸಿದರು. ವಯಸ್ಕರ ಶಿಕ್ಷಣದಲ್ಲೂ ಆಸಕ್ತಿ ವಹಿಸಿದರು. ಅದೇ ಸಮಯದಲ್ಲಿ ಧಾರವಾಡದಲ್ಲಿ ಆರ್ಟ್ಸ್ ಕಾಲೇಜು ಎಂಬ ಒಂದು ಹೊಸ ಕಾಲೇಜು ಆರಂಭವಾಯಿತು. ’ಶ್ರೀ’ ಅವರು ಆ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡು ೧೯೪೪ ರಲ್ಲಿ ಧಾರವಾಡಕ್ಕೆ ತೆರಳಿದರು. ಆ ಹೊಸ ಕಾಲೇಜಿಗೆ ಭದ್ರವಾದ ಬುನಾದಿಯನ್ನು ಹಾಕುವುದರಲ್ಲಿ ಅವರು ತೊಡಗಿದ್ದಾಗಲೆ, ೧೯೪೬ ರ ಜನವರಿ ಐದರಂದು ಹೃದಯಾಘಾತದಿಂದ ತೀರಿಕೊಂಡರು. ಕನ್ನಡದ ಮಹಾಜ್ಯೋತಿಯೊಂದು ನಂದಿ ಹೋಯಿತು.

’ಸಿರಿಗನ್ನಡಂ ಗೆಲ್ಗೆ
ಕನ್ನಡ ತಾಯ್ ಬಾಳ್ಗೆ’

ಎಂಬುದಾಗಿ ’ಶ್ರೀ’ ಸದಾ ಹಾರೈಸುತ್ತಿದ್ದರು. ಕನ್ನಡ ನಾಡು -ನುಡಿಗಳ ಬಗ್ಗೆ ಅವರಿಗಿದ್ದ ಅಭಿಮಾನ ಬಹು ದೊಡ್ಡ ಮಟ್ಟದ್ದು. ’ಕನ್ನಡ ನಾಡಿಗೆ ಕನ್ನಡವೇ ಗತಿ; ಅನ್ಯಥಾ ಶರಣಂ ನಾಸ್ತಿ. ಇಂಗ್ಲಿಷ್ ಅಲ್ಲ, ಹಿಂದಿ ಅಲ್ಲ, ಕನ್ನಡ’ ಎಂದು ಧೈರ್ಯ ವಾಗಿ ಘೋಷಿಸಿದವರು. ನಾಡಿಗರಲ್ಲಿ ನಾಡು-ನುಡಿಗಳ ಪ್ರೇಮ ಬೆಳೆಯುವಂತೆ, ಅಭಿಮಾನ ಮೂಡುವಂತೆ ಮಾಡಿ ಧನ್ಯರಾದವರು.

 

 

ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ.’

 

‘ಶ್ರೀ’ ಅವರು ಒಬ್ಬ ವ್ಯಕ್ತಿ ಮಾತ್ರವಾಗಿರಲಿಲ್ಲ; ಒಂದು ಸಂಸ್ಥೆಯೇ ಆಗಿದ್ದರು. ಆದ್ದರಿಂದಲೆ ಅವರ ಪ್ರಭಾವ ಒಂದು ಸಂಸ್ಥೆಯ ಪ್ರಭಾವದಷ್ಟು ಪರಿಣಾಮಕಾರಿಯಾಗಿತ್ತು.

ಶ್ರೀಕಂಠಯ್ಯನವರು ಭೌತಿಕವಾಗಿ ಕಣ್ಮರೆಯಾಗಿದ್ದರೂ ಕನ್ನಡ ಇರುವ ತನಕ, ಅವರ ಕೃತಿಗಳ ಮೂಲಕ ಅವರ ವಾಣಿ, ಶ್ರೀವಾಣಿ ಕೇಳುತ್ತಲೇ ಇರುತ್ತದೆ.

ಅವರು ಹೇಳಿದ ಕೆಲವು ಮಾತುಗಳು:

’ಕಡೆಗೆ ಉಳಿಯುವುದು ಅಭಿಮಾನವಲ್ಲ, ಸತ್ಯ.’.

’ಅಂಧಶ್ರದ್ಧೆಯನ್ನು ಬಿಟ್ಟು ಸತ್ಯವನ್ನು ಹುಡುಕೋಣ. “ಆಚಾರ್ಯದೇವೋಭವ” ಎಂದೇ ನಾವು ಕುಳಿತುಕೊಳ್ಳ ಬೇಕಾದುದಿಲ್ಲ.’

’ಎತ್ತ ಕಡೆಯೂ ಕಣ್ಣು ಮುಚ್ಚಬಾರದು; ಎತ್ತ ಕಡೆಗೂ ಹೃದಯದ ಬಾಗಿಲನ್ನು ಕಿರಿಕಿರಿದು ಮಾಡುತ್ತ ಮುಚ್ಚಿಬಿಡ ಬಾರದು.’

’ವಿಶಭಾರತಿ ಶರಣು, ಕಿರುತೀರ್ಥವಲ್ತು.’