ಸಂಗೀತ ಮನೆತನದ ಬೆಂಗಳೂರಿನಲ್ಲಿ ೨೬-೬-೧೯೨೩ ರಂದು ಜನ್ಮತಾಳಿದ ಕೃಷ್ಣಪ್ಪನವರ ಪ್ರಥಮ ಗುರುಗಳು ಹಿರಿಯ ಸೋದರರಾದ ಬಿ.ಎನ್‌. ಮುನಿಯಪ್ಪ ಮೊದಲು ನಾಗಸ್ವರ ವಾದನದಲ್ಲಿ ಶಿಕ್ಷಣ ಪಡೆದು ನಂತರ ಪಿಟೀಲು ವಿದ್ವಾಂಸರಾದ ಬಿ.ಎನ್‌. ಮೂರ್ತಿ ಮತ್ತು ರಾಮಕೃಷ್ಣ ಲಿಂಗಪ್ಪನವರಿಂದ ಕ್ಲಾರಿಯೊನೆಟ್‌ ವಾದ್ಯ ವಾದನದಲ್ಲಿ ತರಬೇತಿ ಪಡೆದರು. ಗುರುಗಳೊಡನೆ ಅನೇಕ ಸಭೆಗಳಲ್ಲಿ ಈ ವಾದ್ಯವನ್ನು ನುಡಿಸಿ ಒಳ್ಳೆಯ ಕೀರ್ತಿ ಸಂಪಾದಿಸಿದರು.

೧೯೪೧ರಲ್ಲಿ ಶ್ರೀ ರಾಮಕೃಷ್ಣ ಇಂಡಿಯನ್‌ ಆರ್ಕೆಸ್ಟ್ರಾವನ್ನೂ, ೧೯೮೭ರಲ್ಲಿ ಶ್ರೀ ನಾದಬ್ರಹ್ಮ ಸಂಗೀತ ವಾದ್ಯ ಮಂಡಲಿಯನ್ನು ಸಂಸ್ಥಾಪಿಸಿದ ಕೀರ್ತಿ ಇವರದು. ಈ ಮಂಡಲಿಯ ಶಾಖೆಗಳನ್ನು ರಾಜ್ಯದ ಇತರ ಸ್ಥಳಗಳಲ್ಲೂ ಸ್ಥಾಪಿಸಿದರು. ಬೆಂಗಳೂರು ಅರಮನೆಯಲ್ಲಿ ನಾಗಸ್ವರ ಕಲಾವಿದರ ದ್ವಿತೀಯ ಮಹಾ ಸಮ್ಮೇಳನವನ್ನು ನಡೆಸಿದ ಹಿರಿಮೆಯೂ ಇವರಿಗೆ ಸಲ್ಲುತ್ತದೆ. ರಾಜ್ಯದ ಎಲ್ಲೆಡೆ ವ್ಯಾಪಿಸಿರುವ ನಾಗಸ್ವರ ವಿದ್ವಾಂಸರನ್ನು ಸಂಘಟಿಸುವ ಮಹತ್ಪ್ರಯತ್ನವನ್ನು ಮಾಡಿರುವ ದಿಟ್ಟ ಕಲಾವಿದರು.

ಅನೇಕ ಕಛೇರಿಗಳನ್ನು ಮಾಡಿ ಕೀರ್ತಿ ಪಡೆದಿರುವ ಇವರನ್ನು ಮೈಸೂರು ದಿವಾನರಾಗಿದ್ದ ಆರ್ಕಾಟ್‌ ರಾಮಸ್ವಾಮಿ ಮೊದಲಿಯಾರ್ ರವರು. ಸೋವಿಯತ್‌ಸಾಂಸ್ಕೃತಿಕ ಇಲಾಖೆಯ ಪ್ರಧಾನರಾದ ಡಾ|| ಬಿ.ಎಸ್‌. ಸ್ಟಾಲೊನಿನ್‌ ಅವರೂ ಸನ್ಮಾನಿಸಿದ್ದಾರೆ. ಅನೇಕ ಸಭೆ-ಸಂಸ್ಥೆಗಳ ಗೌರವವನ್ನು ಸ್ವೀಕರಿಸಿರುವ ಇವರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ ಎಂದು ಪ್ರಶಸ್ತಿ ನೀಡಿ ಆದರಿಸಿದೆ.