ಬಿ.ಎಲ್.ರೈಸ್ ರವರ ಪೂರ್ಣ ಹೆಸರು ‘ಬೆಂಜಮಿನ್ ಲೂಯಿ ರೈಸ್, ೧೭-೭-೧೮೩೭ ರಂದು ಭಾರತದಲ್ಲಿ ಜನಿಸಿದ ಇವರು ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸಮಾಡಿ ೧೮೬೦ ರಲ್ಲಿ ಭಾರತಕ್ಕೆ ಬಂದು ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಐದು ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿದ್ದು ಅನಂತರ ಮೈಸೂರು ಮತ್ತು ಕೊಡಗು ಶಾಲಾ ಇನ್ಸ್‌ಪೆಕ್ಟರ್ ಆದರು. ೧೮೬೮ ರಲ್ಲಿ ವಿದ್ಯಾಭ್ಯಾಸದ ಇಲಾಖೆಯ ಮುಖ್ಯಾದಿಕಾರಿಗಳಾಗಿಯೂ, ೧೮೮೩ ರಲ್ಲಿ ಮೈಸೂರು ಸರ್ಕಾರದ ವಿದ್ಯಾ ಶಾಖೆಯ ಪ್ರಥಮ ಕಾರ್ಯದರ್ಶಿಯಾಗಿಯೂ ನೇಮಕ ಗೊಂಡರು.

ಕನ್ನಡದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದ್ದ ಇವರು ವಿದ್ಯಾಭ್ಯಾಸದ ಇಲಾಖೆಯಲ್ಲಿದ್ದ ಸಂಸ್ಥಾನದಲ್ಲೆಲ್ಲ ಸಂಚರಿಸುತ್ತಿದ್ದಾಗ ಉಂಟಾದ ಅಪಾರ ಅನುಭವದ ಫಲವಾಗಿ ಮೈಸೂರು ಗೆಜೆಟಿಯರ್ ನ ಎರಡು ಸಂಪುಟಗಳನ್ನು ೧೮೭೭-೭೮ ರಲ್ಲಿ ಪ್ರಕಟಿಸಿದರು. ಅಲ್ಲದೆ ಇವರು ಸ್ಥಳಪುರಾಣಗಳು,ಚಾರಿತ್ರಿಕ ವಿಷಯಗಳು, ಪುರಾತನ ಗ್ರಂಥಗಳು ಮೊದಲಾದವನ್ನು ಸಂಗ್ರಹಿಸುತ್ತ ಅಲ್ಲಲ್ಲಿ ದೊರೆಯುತ್ತಿದ್ದ ಶಾಸನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರು.

ಶಾಸನ ವಿಷಯಗಳನ್ನು ಆಗಾಗ ಪ್ರಕಟಿಸುತ್ತಿದ್ದರು. ೧೮೮೧ ರಲ್ಲಿ ಮೈಸೂರು ರಾಜ್ಯದಲ್ಲಿ ನಡೆದ ಮೊದಲನೆಯ ಖಾನೇಷುಮಾರಿಯ ಲೆಕ್ಕದ ವರದಿ ಮಾಡಿದರು. ಮೈಸೂರು ಸರ್ಕಾರ ೧೮೮೪ ರಲ್ಲಿ ಪ್ರಾಚ್ಯವಸ್ತು ಶಾಖೆಯನ್ನು ಆರಂಬಿಸಿದಾಗ ರೈಸ್ ಅವರು ತಮ್ಮ ಹುದ್ದೆಯ ಜೊತೆಗೆ ಈ ಶಾಖೆಯ ಅದಿಕಾರವನ್ನು ವಹಿಸಿಕೊಂಡರು. ಇವರು ಕೊಡಗಿನ ಶಾಸನಗಳನ್ನು ಸಂಗ್ರಹಿಸಿ ಒಂದು ಸಂಪುಟವನ್ನಾಗಿ ಇವರು ಪ್ರಕಟಿಸಿದುದು(೧೮೮೦) ಎಪಿಗ್ರಪಿಯ ಕರ್ನಾಟಿಕ ಮಾಲೆಗೆ ನಾಂದಿಯಾಯಿತು. ೧೮೯೦ ರಲ್ಲಿ ಇವರನ್ನು ಪುರಾತತ್ವ ಶಾಖೆಯ ಪೂರ್ಣಕಾಲದ ಅದಿಕಾರಿಯನ್ನಾಗಿ ನೇಮಿಸಲಾಯಿತು. ಮುಂದೆ ಹದಿನಾರು ವರ್ಷಗಳಕಾಲ ಪ್ರತಿಜಿಲ್ಲೆಯ ಹಳ್ಳಿ ಹಳ್ಳಿಗಳನ್ನೂ ಸುತ್ತಿ ಶಾಸನಗಳನ್ನು ಸಂಗ್ರಹಿಸಿ ಹನ್ನೆರಡು ಸಂಪುಟಗಳಲ್ಲಿ ಅವುಗಳನ್ನು ಪ್ರಕಟಿಸಿದರು. ಇವರು ಪ್ರಕಟಿಸಿದ ಶಾಸನಗಳ ಒಟ್ಟು ಸಂಖ್ಯೆ ೮,೮೬೯. ಈ ಶಾಸನಗಳಿಂದ ತಿಳಿದು ಬರುವ ರಾಜಕೀಯ ಇತಿಹಾಸವನ್ನು ಸಂಗ್ರಹವಾಗಿ ತಿಳಿಸುವ ‘ಔಪಥಣತಿ ಛಿಣಜಿ ಜಣಣತಿಟ ಙತಿಣಡಿ ಟಿಣಥಜತಿಟಿಣಿಥಿಟಿಣಣಥ‘. ಎಂಬ ಗ್ರಂಥಗಳನ್ನು ಇವರು ಹೊರತಂದರು. ಇವರು ಸಂಚಾರ ಮಾಡುತ್ತಿದ್ದಾಗ ಸಂಗ್ರಹಿಸಿದ ಸಹಸ್ರಾರು ಓಲೆಗರಿ, ಗ್ರಂಥಗಳಿಗಾಗಿ ಓರಿಯಂಟಲ್ ಲೈಬ್ರರಿ ಎಂಬ ಪ್ರಾಚ್ಯ ಗ್ರಂಥಭಂಡಾರ ಒಂದು ಆರಂಭವಾಯಿತು. ಪಂಪಭಾರತ, ಪಂಪರಾಮಾಯಣ, ಶಬ್ದಾನುಶಾಸನ, ಮುಂತಾದ ಮುಖ್ಯವಾದ ಕೆಲವು ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ ‘ಬಿಬ್ಲೋಥಿಕಾ ಕರ್ನಾಟಿಕ, ಗ್ರಂಥಮಾಲೆಯಲ್ಲಿ ಹೊರತಂದಿರುವುದಲ್ಲದೆ ಕನ್ನಡ ನಾಡಿನ ಚರಿತ್ರೆಗೆ ಸಂಭಂದಿಸಿದಂತೆ ನೂರಾರು ಲೇಖನಗಳನ್ನು ಹಲವು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ೧೯೦೬ ರ ವರೆಗೆ ಈ ದೇಶದ ಪುರಾತನ ಅಧ್ಯಯನ ರಂಗದಲ್ಲಿ ಅವಿಶ್ರಾಂತವಾಗಿ ದುಡಿದು ತಮ್ಮ ೭೦ ನೆಯ ವಯಸ್ಸಿನಲ್ಲಿ ನಿವೃತ್ತರಾಗಿ ತಾಯ್ನಾಡಿಗೆ ಮರಳಿ ಹ್ಯಾರೋ ಪಟ್ಟಣದಲ್ಲಿ ನೆಲೆಸಿದರು. ಅನಂತರ ೧೯೨೭ ರ ಜುಲೈ ತಿಂಗಳಲ್ಲಿ ತಮ್ಮ ೯೦ ನೆಯ ವಯಸ್ಸಿನಲ್ಲಿ ನಿಧನರಾದರು.