ಗಮಕ ಕಲೆಯು ಅತ್ಯಂತ ಪ್ರಾಚೀನ ಹಾಗೂ ಕರ್ನಾಟಕದ ವಿಶೇಷ ಕಲೆ. ಹೃದಯಂಗಮವಾದಕ ಕಲೆ. ಹಿಂದಿನ ಅನೇಕ ಕವಿಗಳ ಹಿರಿಮೆ, ಗತಕಾಲದ ವೈಭವಗಳನ್ನು ಅವರಿಗಿರುವ ಅನುಭವ, ಜ್ಞಾನ ಮತ್ತು ಶಬ್ದ ಭಂಡಾರ ಇವುಗಳ ಸತ್ಯ ಚಿತ್ರಣವನ್ನು ಆಸಕ್ತ ಮಹಾಜನರ ಸಮ್ಮುಖಕ್ಕೆ ಒಯ್ಯುವವರು ಗಮಕಿಗಳು ಎಂಬುವುದನ್ನು ಮರೆಯುವಂತಿಲ್ಲ. ಈ ಪ್ರಾಚೀನ ಕಲೆ ಆತ್ಮಾನಂದವನ್ನುಂಟು ಮಾಡುತ್ತದೆ. ನೃತ್ಯ ಕಲೆಯು ದೃಶ್ಯ ರೂಪಕವಾಗಿದ್ದು, ವೇಷಭೂಷಣಗಳಿಂದ, ಮುಖಭಾವಗಳಿಂದ, ನವರಸಾಭಿನಯಗಳಿಂದ ನೇತ್ರಾನಂದವನ್ನುಂಟು ಮಾಡಿದರೆ, ಗಮಕ ಕಲೆಯಿಂದ ಗಮಕಿಯು ರಸಾನುಭವಕ್ಕೆ ತಕ್ಕಂತೆ ರಾಗಗಳನ್ನು ಬಳಸಿ, ಸಾಹಿತ್ಯಾನುಭವದೊಡನೆ ನವರಸಭರಿತವಾದ ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿದಾಗ ಶ್ರವ್ಯ ಕಾವ್ಯದಲ್ಲೂ ದೃಶ್ಯಕಾವ್ಯದ ಅನುಭವ ಉಂಟಾಗುವುದರಲ್ಲಿ ಸಂದೇಹವಿಲ್ಲ. ಗಮಕ ಕಾರ್ಯಕ್ರಮಗಳನ್ನು ನೀಡುವಾಗ ಸಹೃದಯರ ಹೃದಯ ತುಂಬಿದ ಉದ್ಗಾರ ಹಾಗೂ ಆನಂದಭಾಷ್ಪಸ್ಫುರಿಸುತ್ತದೆ. ಇಂತಹ ಒಂದು ಪರಿಣತಿಗೆ ಗಮಕ ವಿದ್ವಾನ್‌ ಬಿ.ಎಸ್‌.ಎಸ್‌. ಕೌಶಿಕ್‌ರವರ ಹೆಸರು ಉಲ್ಲೇಖನೀಯ. ಈ ಕಲೆ ಪಂಡಿತ ಪಾಮರ ರಂಜಿನಿ. ಬಡವರೂ ಸಹ ಈ ಕಲೆಯನ್ನು ಸುಲಭವಾಗಿ ಅಭ್ಯಾಸ ಮಾಡುವುದು ಸಾಧ್ಯ. ಏಕೆಂದರೆ “ಸಾಹಿತ್ಯವೇ ತಂದೆ, ಶ್ರುತಿಯೇ ತಾಯಿ” ಎಂಬಂತೆ ಶ್ರುತಿಯೊಂದಿದ್ದರೆ ಸಾಕು. ಪೂರ್ವ ಸಂಸ್ಕಾರ ಬಲವಿದ್ದು, ಉತ್ತಮ ಗುರುವಿನ ಮಾರ್ಗದರ್ಶನದಿಂದ ಸಭೆಯಲ್ಲಿ ಹಾಡುವ ಶಕ್ತಿಯನ್ನು ಸಂಪಾದಿಸಬಹುದು. ಇಂತಹ ಸುಸಂಸ್ಕೃತ ಕಲೆಯಲ್ಲಿ ಅಪೂರ್ವ ಪ್ರೌಢಿಮೆಕ ಹೊಂದಿರುವ ಗಮಕ ಗಂಧರ್ವರು ಬಿ.ಎಸ್‌.ಎಸ್‌. ಕೌಶಿಕ್‌ ಅವರು.

ಹಾಸನ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಹೇಮಗಿರಿ ಕುಪ್ಪಹಳ್ಳಿಯಲ್ಲಿ ಕ್ರಿ.ಶ. ೧೯೧೬ರಲ್ಲಿ ಜನನ. ಜನ್ಮನಾಮ ಸುಬ್ಬಯ್ಯ ಎಂದು. ಸ್ಮಾರ್ತವರ್ಗದಲ್ಲಿ ಕೌಶಿಕ ಸಂಕೇತಿ ಉಪಶಾಖೆಯವರು. ಇವರ ತಂದೆಯವರು ಸಂಸ್ಕಾರ ಬಲದಿಂಧ ಭಾರತ ರಾಮಾಯಣ ಕಾವ್ಯಗಳನ್ನು ಆ ಕಾಲದಲ್ಲೇ ರಾಗ ರಂಜಿತವಾಗಿ ಹಾಡುತ್ತಿದ್ದರಂತೆ. ಇವರ ತಾಯಿ ಸುಬ್ಬಮ್ಮನವರು ಅಕ್ಷರ ಕಲಿಯದಿದ್ದರೂ ಸಹ ಕಾಶಿ ಮಹಾತ್ಮ್ಯೆ, ಶ್ರೀನಿವಾಸ ಕಲ್ಯಾಣ, ರಾಮಾಯಣ, ಪ್ರಹ್ಲಾದ ಚರಿತ್ರೆ ಹಲವು ದೊಡ್ಡ ಹಾಡುಗಳನ್ನು ಮತ್ತು ದೇವರ ನಾಮಗಳನ್ನು ಸುಶ್ರಾವ್ಯವಾಗಿ ಗಂಟೆಗಟ್ಟಲೆ ನಿರಂತರವಾಗಿ ಹಾಡಬಲ್ಲವರಾಗಿದ್ದರಂತೆ. ಬಾಲ್ಯದಲ್ಲಿ ತಾಯಿ ತಂದೆಯವರೊಡಗೂಡಿ ಅರಕಲಗೂಡು ತಾಲ್ಲೂಕು ಬಸವಪಟ್ಟಣದಲ್ಲಿ ವಾಸ ಮಾಡುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಬಡತನದಲ್ಲೇ ತಾಯಿಯ ಆರೈಕೆಯಲ್ಲಿ ಬೆಳೆದರು. ಇವರ ಬಾಲ್ಯದಲ್ಲಿ ಶಾಲಾ ದಿನಗಳಲ್ಲಿ ನಡೆದ ಒಂದು ಘಟನೆ ಹೀಗಿದೆ. ಪ್ರೈಮರಿ ಶಾಲೆಯಲ್ಲಿ ಉಪಾಧ್ಯಾಯರು ಪಾಠ ಮಾಡುತ್ತಿದ್ದ ಸಂದರ್ಭ. “ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಲ್ಲಿ ಕಾಫಿ ಕುಡಿಯದೆ ಇರುವವರಿದ್ದರೆ ಕೈಯೆತ್ತಿ” ಎಂದರಂತೆ. ಆಗ ಇವರು ಕೈಯೆತ್ತಿದರಂತೆ. ( ಆ ತನಕ ಕಾಫಿ ಕುಡಿಯುತ್ತಿದ್ದರೋ ಇಲ್ಲವೋ ಗೊತ್ತಿಲ್ಲ) ಆದರೆ, ಅಂದಿನಿಂದ ಇಂದಿನವರೆಗೂ ಸಹ ಒಂಧು ಹನಿ ಕಾಫಿಯನ್ನು ಬಾಯಿಗೆ ಬಿಟ್ಟಿಲ್ಲವೆಂದರೆ, ಆಡಿದ ಮಾತಿನಂತೆ ನಡೆಯುವ ಇವರ ಪ್ರಾಮಾಣಿಕತೆಗೆ ಕನ್ನಡಿಯಾಗಿದೆ. ಹಿಂದಿನಿಂದಲೂ ಇಂದಿಗೂ ಅವರದು ದಿಟ್ಟ, ನೇರ ನಡೆ-ನುಡಿ, ಧೀಮಂತ ವ್ಯಕ್ತಿತ್ವ. ಸ್ವಲ್ಪ ಬೆಳೆದು ದೊಡ್ಡವರಾದ ಮೇಲೆ ಸಹಪಾಠಿಗಳೊಡನೆ ಸೇರಿ ಶ್ರೀರಾಮ ನವಮಿಯಲ್ಲಿ ರಾಮೋತ್ಸವಗಳಲ್ಲಿ ಬೀದಿ ಬೀದಿಗಳಲ್ಲಿ ಸುಶ್ರಾವ್ಯವಾಗಿ ರಾಮಭಜನೆಯನ್ನು ಮಾಡುತ್ತಿದ್ದರು.

೧೯೩೪ರಲ್ಲಿ ಪ್ರೌಢ ಶಿಕ್ಷಣಕ್ಕಾಗಿ ಹಳ್ಳಿಯನ್ನು ತೊರೆದು ಮೈಸೂರನ್ನು ಸೇರಿದರು. ಅವರು ವಾಸ ಮಾಡುತ್ತಿದ್ದ ಮನೆ ಈಗ ರಾಮಮಂದಿರವಾಗಿ ಕಂಗೊಳಿಸುತ್ತಿದೆ.

ಮೈಸೂರಿನ ಗಂಧದ ಕೋಠಿ ಸುಬ್ಬರಾಯರ ಪುತ್ರಿ ಶ್ರೀಮತಿ ಜಯಲಕ್ಷ್ಮಿಯವರೊಂದಿಗೆ ವಿವಾಹವಾದ ನಂತರ ಲಲಿತ ಕಲೆಗಳ ಕಡೆಗೆ ಮನಸ್ಸು ಹರಿಯಿತು. ಜೊತೆಗೆ ನಾಟಕ ಹಾಗೂ ಚಿತ್ರರಂಗಕ್ಕೆ ಧುಮುಕಿ ಸುಬ್ಬಯ್ಯನವರು ಕೌಶಿಕರಾದರು.

೧೯೩೯ ರಿಂದ ೧೯೪೬ರ ವರೆಗೆ ಬೆಳಗೊಳದ ಎಂ.ಸಿ.ಎಂ. ಕಾರ್ಖಾನೆಯಲ್ಲಿ ಕಾರ್ಮಿಕ ವೃತ್ತಿಯಲ್ಲಿದ್ದು, ೧೯೪೬ರಲ್ಲಿ ಆ ಕೆಲಸವನ್ನು ಬಿಟ್ಟು ಮೈಸೂರಿಗೆ ಬಂದು ನೆಲಸಿದರು. ಖ್ಯಾತ ನಟರಾಗಿದ್ದ ಡಿಕ್ಕಿ ಮಾಧವರಾವ್‌, ಸಿ.ಎಸ್‌. ಅಶ್ವಥ್‌, ಪಂಡರೀಬಾಯಿ, ಹುಣಸೂರು ಕೃಷ್ಣಮೂರ್ತಿ ಇವರುಗಳೊಡನೆ ಆದರ್ಶ ನಾಟಕ ಮಂಡಳಿಯನ್ನು ಸೇರಿದರು. ಕೆಲವು ಚಲನಚಿತ್ರಗಳಲ್ಲಿಯೂ ಸಹನಟರಾಗಿ ಅಭಿನಯಿಸಿದರು. ಆದರೆ, ಚಿತ್ರರಂಗದ ವಾತಾವರಣ ಒಗ್ಗದೆ ಅದಕ್ಕೆ ಶರಣು ಹೊಡೆದರು.

ಆ ತರುವಾಯದಲ್ಲೇ ಸ್ನೇಹಿತರಿಗೆ ಸಹಾಯ ಮಾಡಲು ಹೋಗಿ ಕಾಲು ಮುರಿದುಕೊಂಡು ಬಹಳ ಬವಣೆಪಟ್ಟರು. ಜಮೀನು ಮಾರಿ ಬಂದ ಹಣವನ್ನು ಬಂಡವಾಳ ಹೂಡಿ ಒಂದು ಅಂಗಡಿಯನ್ನು ಇಟ್ಟಿದ್ದರು. ಪರಿಚಯಸ್ಥರು, ಅತಿಥಿಗಳು, ಯಾರಾದರೂ ಬಂದರೆ ಸಾಕು ಬಾಳೆಗೊನೆಯಿಂದ ಹಣ್ಣುಗಳನ್ನು ಕಿತ್ತು ಕಿತ್ತು ಕೊಡುತ್ತಿದ್ದರು. ಒಟ್ಟಿನಲ್ಲಿ ಆದಾಯಕ್ಕಿಂತ ನಷ್ಟವೇ ಜಾಸ್ತಿಯಾಗಿ ಅಂಗಡಿಯನ್ನು ಮುಚ್ಚಬೇಕಾಯಿತು. ಅಷ್ಟು ಹೊತ್ತಿಗೆ ಸಂಸಾರ ಸಾಕಷ್ಟು ದೊಡ್ಡದಾಗಿ ಬೆಳೆದಿತ್ತು. ಅದೇ ಸಮಯದಲ್ಲಿ ಪ್ರೊ.ವಿ.ಕೆ. ದೊರೆಸ್ವಾಮಿ, (ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರು ಹಾಗೂ ಗಣಿತ ಶಾಸ್ತ್ರಜ್ಞರು) ಅವರ ಶಿಫಾರಸ್ಸಿನಿಂಧ ಶಾರದಾವಿಲಾಸ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ನೌಕರಿಗೆ ಸೇರಿದರು. ಆರ್ಥಿಕವಾಗಿ ತೊಂದರೆಯಲ್ಲಿದ್ದ ಸಂಸಾರಕ್ಕೆ ಇದರಿಂದ ತುಂಬಾ ಅನುಕೂಲವಾಯಿತು.

ಮೊದಲೇ ಜ್ಞಾನದಾಹಿಗಳಾಗಿದ್ದ ಇವರಿಗೆ ಗ್ರಂಥಪಾಲಕರ ಹುದ್ದೆಯಿಂಧ ಜ್ಞಾನರ್ಜನೆಗೆ ಸಹಾಯಕವಾಯಿತು.

ಪ್ರತಿ ವರ್ಷ ಮೈಸೂರು ದಸರಾ ವಸ್ತುಪ್ರದರ್ಶನ ಸಮಿತಿಯವರು ಭಾವಗೀತೆ, ದೇವರನಾಮ, ಗಮಕ ಗಾಯನ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು, ಭಾವಗೀತೆ, ದೇವರನಾಮಗಳಲ್ಲಿ ಬಹುಮಾನ ಗಿಟ್ಟಿಸುತ್ತಿದ್ದರು. ಒಂದು ಬಾರಿ ಕಾವ್ಯಗಾಯನ ಸ್ಪರ್ಧೆಗೂ  ಸೇರಿಕೊಂಡು ಬಿಟ್ಟರು. ಸ್ಪರ್ಧಾ ಭಾಗವನ್ನು ಕಲಿಯಲು ಯಾರ ಬಳಿ ಹೋಗಬೇಕೆಂಬ ಜಿಜ್ಞಾಸೆಯಲ್ಲಿದ್ದಾಗ ನೆನಪಾದವರು ಗಮಕ ಭಗೀರಥರೆಂದೇ ಖ್ಯಾತಿವೆತ್ತಿದ್ದ ಕೃಷ್ಣಗಿರಿ ಕೃಷ್ಣರಾಯರು. ಅವರ ಬಳಿ ಸ್ಪರ್ಧೆಯಲ್ಲಿ ವಾಚನ ಮಾಡುವ ಭಾಗವನ್ನು ಹೇಳಿಸಿಕೊಂಡರು. ಕೃಷ್ಣರಾಯರ ಆಶೀರ್ವಾದ ಹಾಗೂ ಉತ್ತೇಜನದಿಂದ ಪ್ರಥಮ ಬಹುಮಾನ ಇವರಿಗೇ ದಕ್ಕಿತು. ಅದೇ ಇವರ ಗಮಕ ಕಲಾ ಜೀವನಕ್ಕೆ ನಾಂದಿಯಾಯಿತು. ಗಮಕ ಕಲೆಯನ್ನು ಆಳವಾಗಿ ಅಭ್ಯಾಸ ಮಾಡಿ ಗುರುಗಳ ಆಶೀರ್ವಾದಕ್ಕೆ ಪಾತ್ರರಾದರು. ಸದರಿ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ತೀರ್ಪುಗಾರರಾಗಿದ್ದ ಆಸ್ಥಾನ ವಿದ್ವಾನ್‌ ದೇವೇಂದ್ರಪ್ಪನವರ ಮೆಚ್ಚುಗೆಗೆ ಪಾತ್ರರಾದರು.

ಖ್ಯಾತ ವ್ಯಾಖ್ಯಾನಕಾರರಾಗಿದ್ದ ಕೆ. ವೆಂಕಟಸುಬ್ಬಯ್ಯನವರು ತಮ್ಮ ವ್ಯಾಖ್ಯಾನದೊಂದಿಗೆ ಇವರನ್ನು ನಿತ್ಯ ಪುರಾಣದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ, ಮೈಸೂರಿನ ಕುಂಜಿಟಿಗರಕ ರಾಮಮಂದಿರದಲ್ಲಿ ಪ್ರಥಮ ಬಾರಿಗೆ ಸಮಗ್ರ ಭಾರತವಾಚನಕ್ಕೆ ಪ್ರಾರಂಭಿಸಿದರು. ಹೀಗೆ ಪ್ರಾರಂಭವಾದ ಗಮಕ ವಾಹಿನಿ ಹಳ್ಳಿ ಹಳ್ಳಿಗಳಲ್ಲಿಯೂ ಪ್ರವಹಿಸತೊಡಗಿತು. ಅಮೋಘ ಕಂಠಸಿರಿ ಪ್ರತಿಧ್ವನಿಸಿತು. ಇವರಿಬ್ಬರ ಗಮಕ-ವ್ಯಾಖ್ಯಾನ ಜೋಡಿ “ಗಮಕ ಸಹೋದರರು” ಎಂಬ ಕೀರ್ತಿಗೆ ಪಾತ್ರವಾಯಿತು. ದೇವಸ್ಥಾನಗಳಲ್ಲಿ ಪ್ರತಿ ನಿತ್ಯ ಹಲವಾರು ಕಾವ್ಯಗಳ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳು ಪ್ರಾರಂಭವಾದವು.

೧೯೫೪ರಲ್ಲಿ ಶ್ರೀ ವಾಲ್ಮೀಕಿ ಗಮಕ ಪಾಠಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಗಮಕ ಕಲೆಯಲ್ಲಿ ಅಭಿಮಾನವನ್ನು ಹುಟ್ಟುವಂತೆ ಶ್ರಮಿಸಿದರು. ಅಷ್ಟೇ ಅಲ್ಲ. ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ವಿದ್ಯಾರ್ಥಿಗಳು ಕಲಿತು ಹಾಡುವವರೆಗೂ ಬಿಡುತ್ತಿರಲಿಲ್ಲ. ಹೆಸರಿಗೆ ತಕ್ಕಂತೆ ಸ್ವಭಾವದಲ್ಲೂ ಮುಂಗೋಪಿಗಳಾಗಿದ್ದು, ಶಿಷ್ಯರುಗಳು “ಮೇಷ್ಟ್ರ”ನ್ನು ಕಂಡೆ ಅತೀವ ಭಯ ಭಕ್ತಿಯಿಂದ ಅಭ್ಯಾಸ ಮಾಡುತ್ತಿದ್ದುದನ್ನು ನಾನು ಕಂಡಿದ್ದೇನೆ. ಅಲ್ಪಪ್ರಾಣ ಮಹಾಪ್ರಾಣಗಳ ಉಚ್ಚಾರಣೆಯಲ್ಲಿ ಏನಾದರೂ ತಪ್ಪಾದರೆ, ಅವರ ಸಿಟ್ಟು ನೆತ್ತಿಗೇರುತ್ತಿತ್ತು. ಜೊತೆಯಲ್ಲೆ ಮಹಾರಾಣಿ ಹೈಸ್ಕೂಲಿನಲ್ಲೂ ಗಮಕ ತರಗತಿಯನ್ನು ನಡೆಸುತ್ತಿದ್ದರು.

ಶ್ರೀ ವಾಲ್ಮೀಕಿ ಗಮಕ ಪಾಠಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಸಿಷ್ಯರಿಂದ ಕಾವ್ಯವಾಚನ ಮಾಡಿಸುತ್ತಿದ್ದರು. ಮುಂದೆ ಇನ್ನೂ ಹೆಚ್ಚಿನ ಸ್ಫೂರ್ತಿಯಿಂಧ ತಮ್ಮ ಶಿಷ್ಯರಿಗೇ ವೇಷಭೂಷಣಗಳನ್ನು ತೊಡಿಸಿ ರಂಗಮಂಟಪದಲ್ಲಿ ಅವರಿಂದಲೇ ಹಾಡಿಸಿ, ಮೊದಲಬಾರಿಗೆ ‘ಕುಂತೀಕರ್ಣ’ ಎಂಬ ಗಮಕ ರೂಪಕದ ಪ್ರದರ್ಶನ ನೀಡಿದರು. ಈ ರೀತಿಯ ಗಮಕ ರೂಪಕವು ಮೈಸೂರಿನಲ್ಲಿ ಬಹಳ ಪ್ರಶಂಸೆಗೆ ಪಾತ್ರವಾಯಿತು. ಇದರಿಂದ ಸ್ಫೂರ್ತಿಗೊಂಡು ಖ್ಯಾತ ಕವಿ ನಾರಣಪ್ಪ ವಿರಚಿತ ಮಹಾಭಾರತ ಪದ್ಯ ಕಾವ್ಯವನ್ನಧರಿಸಿ ‘ಕೃಷ್ಣಸಾರಥ್ಯ’ ಕೃಷ್ಣ ಸಂಧಾನ, ಕುಂತೀಕರ್ಣ, ಹರಿಶ್ಚಂದ್ರ ಕಾವ್ಯ ಆಧಾರಿತ, ವಿಶ್ವೇಶ್ವರ ಸಾಕ್ಷಾತ್ಕಾರ, ಜೈಮಿನಿ ಭಾರತ ಆಧಾರಿತ ‘ಭಕ್ತ ಸುಧನ್ವ’ ಪ್ರಸಂಗಗಳನ್ನೊಳಗೊಂಡ “ಗಮಕ ರೂಪಕ ಪಂಚಕ”ವನ್ನು ಅಚ್ಚುಹಾಕಿಸಿದರು. ಇವುಗಳ ಪೈಕಿ “ಕುಂತೀ-ಕರ್ಣ” ಅತ್ಯಂತ ಯಶಸ್ವಿಯಾಗಿ ಅನೇಕ ಪ್ರದರ್ಶನಗಳನ್ನು ಕಂಡಿತು. ರಾಮೋತ್ಸವ, ಗಣೇಶೋತ್ಸವ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನ ಕಂಡು ಅಮೋಘ ಪ್ರಶಂಸೆಗೆ ಪಾತ್ರವಾಯಿತು. ಈ ಗಮಕ ಗೇಯ ರೂಪಕಗಳಿಗೆ ತಮ್ಮ ಶಿಷ್ಯ ವೃಂದದವರಲ್ಲಿ ಮಹಿಳಾ ಶಿಷ್ಯರನ್ನೇ ತಯಾರು ಮಾಡಿದ್ದರು. ಅವರ ಪೈಕಿ ಪ್ರಮುಖವಾಗಿ ಸಂಗೀತ ವಿದುಷಿಯರಾದ ಜಿ.ಆರ್. ಜಯ, ಸರೋಜ ವಾಸುದೇವರಾವ್‌, ಕೆ. ಸುಧಾಮಣಿ, ರತ್ನಮಾಲಾಪ್ರಕಾಶ್‌, ಮಾಲತೀಶರ್ಮ, ಜಾಹ್ನವಿ ಜಯಪ್ರಕಾಶ್‌, ರುಕ್ಮಿಣಿ ಪುಷ್ಪವನಂ, ಜಿ.ಎನ್‌. ನಾಗಮಣಿ ಶ್ರೀನಾಥ್‌, ಸುಕನ್ಯಾ ಪ್ರಭಾಕರ್, ಪಿ. ರಮಾ, ಆರ್. ಚಂದ್ರಿಕ, ಶ್ರೀಮತಿ ಜಯರಾಮ್‌ ಮುಂತಾದವರು ಭಾಗವಹಿಸಿದ್ದಾರೆ. ಇತ್ತೀಚಿಗೆ ಕೆಲವು ರೂಪಕಗಳಲ್ಲಿ ಚಕ್ರವರ್ತಿ ಹಾಗೂ ಶ್ರೀ ಪರಮಶಿವನ್‌ ಇವರುಗಳೂ ಭಾಗವಹಿಸಿರುತ್ತಾರೆ. ಕರ್ನಾಟಕದಾದ್ಯಂತ ‘ಕುಂತೀಕರ್ಣ’ ಗಮಕ ರೂಪಕ ಜಯಭೇರಿ ಬಾರಿಸಿದೆ. ಸಹೃದಯರ ಕಣ್ಣಿನಲ್ಲಿ ಆನಂದ ಭಾಷ್ಪವನ್ನು ಹರಿಸಿದೆ. ಮೈಸೂರಿನ ದಾಸಪ್ರಕಾಶ್‌ ಹೋಟೆಲ್‌ ಮಾಲೀಕರಾಗಿದ್ದ ಕುತ್ತೆತ್ತೂರು ಸೀತಾರಾಮರಾಯರು ಮದರಾಸಿನಲ್ಲಿ ಅಂತರರಾಷ್ಟ್ರೀಯ ಖ್ಯಾತ ನಾಟ್ಯಗಾರ್ತಿ ರುಕ್ಮಿಣಿ ಅರುಂಡೇಲರವರ ಸಮ್ಮುಖದಲ್ಲಿ ಈ ಗಮಕ ಗೇಯ ನಾಟಕವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಟ್ಟು ಅವರ ಮೆಚ್ಚುಗೆಗೆ ಪಾತ್ರರಾದರು. ಮದರಾಸಿನ ‘ಸಂಪ್ರದಾಯ’ ಎನ್ನುವ ಸಂಸ್ಥೆಯವರು ಈ ರೂಪಕವನ್ನು ಏರ್ಪಡಿಸಿದ್ದು, ಪೂರ್ಣ ರೂಪಕದ ಧ್ವನಿ ಮುದ್ರಣ ಮಾಡಿಕೊಂಡಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ೫೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಗೌರವಾಧ್ಯಕ್ಷರಾಗಿದ್ದ ಜಿ.ಪಿ. ರಾಜರತ್ನಂರವರ ಸಮ್ಮುಖದಲ್ಲಿ ಪ್ರದಶ್ನ ನೀಡಿ ಅಧ್ಯಕ್ಷರ ಮೆಚ್ಚುಗೆ ಗಳಿಸಿತು.

ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಕೆಂಗಲ್‌ ಹನುಮಂತಯ್ಯನವರು ತಮ್ಮ ಅಧಿಕರದ ಅವಧಿಯಲ್ಲಿ ಗದುಗಿನ ನಾರಾಣಪ್ಪ ವಿರಚಿತ ಹತ್ತು ಪರ್ವಗಳ ಮಹಾಭಾರತವನ್ನು ಕೇವಲ ಎರಡು ರೂಪಾಯಿಗಳಿಗೂ, ಜೈಮಿನಿ ಭಾರತವನ್ನು ರೂ. ೧.೦೦ರಂತೆ ಹರಿಶ್ಚಂದ್ರ ಕಾವ್ಯವನ್ನು ಹನ್ನೆರಡಾಣೆಗೂ ದೊರಕುವಂತೆ ಪ್ರಕಟಣೆ ಹೊರಡಿಸಿ ವಿತರಿಸಿದುದನ್ನು ಕನ್ನಡಿಗರೆಲ್ಲ ಮುಖ್ಯವಾಗಿ ಗಮಕಿಗಳೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಾದ ವಿಷಯ. ಅಷ್ಟೇ ಅಲ್ಲದೆ ತಾವು ಸಂಚಾರ ಮಾಡುತ್ತಿದ್ದ ಸ್ಥಳಗಳಿಗೆಲ್ಲ ನಮ್ಮ ತಂದೆಯವರನ್ನು ಜೊತೆಯಲ್ಲಿ ಕರದೊಯ್ದು ವಾಚನ ಮಾಡಿಸುತ್ತಿದ್ದರು. ಅವರ ಕಾಲದಲ್ಲಿ ಸ್ಥಾಪಿತವಾದ ಸಂಸ್ಕೃತಿ ಪ್ರಸಾರ ಇಲಾಖೆ ನೂರಾರು ಗಮಕಿಗಳಿಗೆ, ಗಮಕ ಕಲಾ ಪ್ರಚಾರಕ್ಕೆ ವರದಾನವಾಗಿತ್ತು. ಕೆ. ಹನುಮಂತಯ್ಯನವರ ಹೆಸರನ್ನು ನೆನೆಸಿಕೊಳ್ಳುವುದು ಪ್ರತಿಯೊಬ್ಬ ಗಮಕಿಯ ಕರ್ತವ್ಯ .

ಪ್ರೊ|| ಡಿ. ಜವರೇಗೌಡರು, ಪ್ರೊ|| ಹಾ.ಮಾ. ನಾಯಕ್‌ರವರುಗಳ ಕೋರಿಕೆಯಂತೆ ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಗಮಕ ತರಗತಿಯ ಪ್ರಾರಂಭವಾಗಿದ್ದು, ಅಲ್ಲಿ ಇವರು ಗ್ರಂಥಪಾಲಕರ ವೃತ್ತಿಯೊಂದಿಗೆ ಗಮಕ ಅಧ್ಯಾಪಕ ವೃತ್ತಿಯನ್ನೂ ನಿರ್ವಹಿಸಿದರು.

ನಿತ್ಯವಾಚನದ ಸಂದರ್ಭದಲ್ಲಿ ತಾವೇ ವಾಚನ ವ್ಯಾಖ್ಯಾನಗಳೆರಡನ್ನೂ ತಮ್ಮ ಅನುಭವದಿಂದ ಪ್ರಾರಂಭಿಸಿದರು.

ಸಾಲಿಗ್ರಾಮ ಶ್ರೀಕಂಠಶಾಸ್ತ್ರಿಗಳು ಬರೆದ ವಿಘ್ನೇಶ್ವರ ವ್ರತಕಥಾ, ಲಲಿತ ಎಂಬುವವರು ರಚಿಸಿರುವ ಸ್ವರ್ಣಗೌರಿ ವ್ರತ ಕಥೆ, ಅಸೂರಿ ರಾಮಸ್ವಾಮಿ ಅಯ್ಯಂಗಾರರು ರಚಿಸಿರುವ ಶ್ರೀನಿವಾಸ ವಿಲಾಸ ಹಾಗೂ ಗೋಕರ್ಣ ಮಹಾತ್ಮೆ ಎಂಬ ಪದ್ಯ ಕಾವ್ಯಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಚ್ಚುಹಾಕಿಸಿದರು.

ಮೈಸೂರಿನ ಅರಸರಾಗಿದ್ದ ಜಯಚಾಮರಾಜೇಂಧ್ರ ಒಡೆಯರ ಪತ್ನಿ  ಶ್ರೀಮತಿ ತ್ರಿಪುರ ಸುಂದರಮ್ಮಣ್ಣಿಯವರ ಸಮ್ಮುಖದಲ್ಲಿ ಮಹಾಭಾರತ ವಾಚನಕ್ಕೆ ಅವಕಾಶ ದೊರಕಿತ್ತು. ಹೇಗೆಂದರೆ, ಮಹಾರಾಣಿಯವರು ಪಂಡಿತ ಬೂಕಿನಕೆರೆಕ ಚೆನ್ನಕೇಶವಯ್ಯನವರಲ್ಲಿ ಸಂಸ್ಕೃತ ಕಲಿಯುತ್ತಿದ್ದ ಸಂದರ್ಭದಲ್ಲಿ ಕುಮಾರವ್ಯಾಸ ಭಾರತ ಹೊಸದಾಗಿ ಅಚ್ಚುಕಂಡಿತ್ತು . ಮಹಾರಾಣಿಯವರು ಈ ಕಾವ್ಯವನ್ನು ಚೆನ್ನಾಗಿ ಹಾಡುವವರಿಂದ ಕೇಳುವ ಆಸೆಯನ್ನು ಗುರುಗಳಲ್ಲಿ ವ್ಯಕ್ತಪಡಿಸಿದ್ದರು. ಲಪಂಡಿತ ಚೆನ್ನಕೇಶವಯ್ಯನವರು ಬಹಳ ದಿನಗಳಿಂದ ಕೌಶಿಕರನ್ನ ಬಲ್ಲವರಾಗಿದ್ದರು. ಹಾಗೂ ಅವರ ಗಮಕ ಗಾಯನವನ್ನು ಕೇಳಿ ಮೆಚ್ಚಿದವರಾದ್ದರಿಂದ ಅವರ ಹೆಸರನ್ನು ಸೂಚಿಸಿ, ಅರಮನೆಯಲ್ಲಿ ಕಾವ್ಯ ವಾಚನವನ್ನು ಪ್ರಾರಂಭಿಸಿದರು. ಇವರ ಜೊತೆ ವ್ಯಾಖ್ಯಾನ ಮಾಡಿದವರು ಶ್ರೀನಿವಾಸ ಅಯ್ಯಂಗಾರರು. ಶ್ರುತಿ ಮೀಟುವುದಕ್ಕಾಗಿ ತಮ್ಮ ಹೆಣ್ಣು ಮಕ್ಕಳಲ್ಲಿ ಒಬ್ಬೊಬ್ಬರು ಒಂದೊಂದು ದಿನ ಹೋಗುತ್ತಿದ್ದರು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಂಟು ಅಡಿ ಎತ್ತರದ ಭವ್ಯವಾದ ಶ್ರೀನಿವಾಸದೇವರ ಚಿತ್ರ ಇತ್ತು. ಕಾರ್ಯಕ್ರಮ ಕೇಳಲು ಅರಮನೆಯ ಸಿಬ್ಬಂದಿಯವರೆಲ್ಲ ಸೇರುತ್ತಿದ್ದರು. ಪ್ರತಿ ತಿಂಗಳೂ ಪರ್ವ ಪರ್ವಕ್ಕೂ ಅತಿ ವಿಜೃಂಭಣೆಯಿಂದ ಮಂಗಳವನ್ನು ನಡೆಸುತ್ತಿದ್ದರು. ದಶಪರ್ವದ ಮಂಗಳದ ಕೊನೆಯ ದಿನ ಜಯಚಾಮರಾಜ ಒಡೆಯರ್ ರವರೆ ಭಾಗವಹಿಸಿದ್ದರು. ಮಂಗಳದ ದಿನ ತಂದೆಯವರಿಗೆ ಜೋಡಿ ಶಾಲು, ನವರತ್ನದುಂಗುರ ತಾಯಿಯವರಿಗೆ, ನಮ್ಮ ಅಕ್ಕ ತಂಗಿಯರಿಗೆಲ್ಲರಿಗೂ ಪಟ್ಟೆ ಸೀರೆ ಬಳುವಳಿಯಾಗಿ ನೀಡಿದ್ದರು. ಇದೇ ಸಂದರ್ಭದಲ್ಲಿ ನನ್ನ ತಂಗಿಯರಿಬ್ಬರಿಗೆ ಮದುವೆ ನಿಶ್ಚಯವಾಯಿತು. ಪೂರ್ಣಯ್ಯನವರ ಛತ್ರವನ್ನು  ಮದುವೆಗಾಗಿ ಬಿಟ್ಟುಕೊಟ್ಟು ಎರಡು ಧಾರೆ ಸೀರೆಗಳನ್ನು  ಬಳುವಳಿಯಾಗಿ ನೀಡಿದ್ದರು. ಹೀಗೆ ಮಹಾರಾಜರಿಂದ ಸನ್ಮಾನಿತರಾಗಿದ್ದರು. ರಸ ಋಷಿ ಕೆ.ವಿ.ಪುಟ್ಟಪ್ಪನವರ ಮನೆಗೆ ತೆರಳಿ ರಾಮಯಣದರ್ಶನವನ್ನು ಅವರ ಮುಂದೆಯೇ ಗಾಯನ ಮಾಡಿದ್ದರು. ಮೈಸೂರು ನಗರದ ಹಲವಾರು ಮೊಹಲ್ಲಗಳಲ್ಲಿರುವ ಎಲ್ಲಾ ಸುಪ್ರಸಿದ್ಧ ದೇವಾಲಯಗಳಲ್ಲೂ ಗಮಕ ವಾಚನ ವ್ಯಾಖ್ಯಾನಗಳೆರಡನ್ನು ನಿರ್ವಹಿಸಿಕೊಂಡು , ಎಲ್ಲಾ ಕಾವ್ಯಗಳ ಮಂಗಳ ಮಾಡಿ ಮಹಾಜನತೆಯ ಮನ್ನಣೆಗೆ ಪಾತ್ರರಾದರು. ಅಂದಾಜಿನಲ್ಲಿ ಹೇಳುವುದಾದರೆ ಸುಮಾರು ೧೫,೦೦೦ಕ್ಕೂ ಮೇಲ್ಪಟ್ಟು ಕಾರ್ಯಕ್ರಮಗಳನ್ನು  ನೀಡಿದ್ದಾರೆ. ಈಗಲೂ ನೀಡುತ್ತಿದ್ದಾರೆ.

ಅನೇಕ ಬಾರಿ ಹೊರ ರಾಜ್ಯಗಳಲ್ಲೂ ಗಮಕ ಕಾರ್ಯಕ್ರಮಗಳನ್ನು ನೀಡಿರುವುದು ಹೆಮ್ಮೆಯ ವಿಷಯ. ೧೯೯೬ರಲ್ಲಿ ಜಂಷಡ್‌ಪುರದಲ್ಲಿದ್ದ ಪ್ರಭಂಜನಾಚಾರ್ಯರು ರಾಜ್ಯದ ಎಲ್ಲೆಡೆಯಲ್ಲಿಯೂ ಇರುವ ಕನ್ನಡ ಸಂಘಗಳ ಆಶ್ರಯದಲ್ಲಿ ಇವರ ಗಮಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಿದ್ದರು. ಅವುಗಳಲ್ಲಿ ಪ್ರಮುಖವಾಗಿ ಕಲ್ಕತ್ತಾ, ಜಂಷಡ್‌ಪುರ, ಕಾಶಿ, ಬೊಂಬಾಯಿ ಮುಂತಾದವು ಸೇರಿವೆ. ೧೯೭೬ರಲ್ಲಿ ಗ್ರಂಥಪಾಲನ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಕುಟುಂಬ ಸಮೇತ ಬೆಂಗಳೂರನ್ನು ಸೇರಿದರು.

೧೯೮೦ ರಿಂಧ ೧೯೮೬ರ ತನಕ ಶ್ರೀರಂಗಪಟ್ಟಣದ ಮಹಾಜನಗಳ ಕೋರಿಕೆ ಮೇರೆಗೆ ಸೀತಾರಾಮರ ದೇವಾಲಯದಲ್ಲಿ ನಿತ್ಯ ಪುರಾಣ ಪ್ರವಚನ ಪ್ರಾರಂಭವಾಯಿತು. ರಂಗನಾಥನ ಸನ್ನಿಧಿ, ಕಾವೇರಿ ತೀರ ಅವರಿಗೆ ಹಿತವಾಗಿತ್ತು.

ಎಂದೂ ಸ್ವಂತ ಮನೆ, ನಿವೇಶನ ಹೊಂದುವ ಆಸಕ್ತಿ ತೋರದ ಇವರು ಶ್ರೀರಂಗಪಟ್ಟಣದಲ್ಲಿ ದೇವಾಲಯದ ಬಳಿ ಒಂದು ನಿವೇಶನ ಖರೀದಿಸಿ ಮನೆ ಕಟ್ಟುವ ಪ್ರಯತ್ನವನ್ನೇನೋ ಮಾಡಿದರು. ಅದು ಕೈಗೂಡಲಿಲ್ಲ. ಆದರೆ, ಅನೇಕ ಪದ್ಯ ಕಾವ್ಯಗಳನ್ನು ಶ್ರೀರಂಗಪಟ್ಟಣದಲ್ಲಿದ್ದಾಗ ರಚಿಸಲು ಸಾಧ್ಯವಾಯಿತು. ಮೈಸೂರಿನ ದತ್ತಾಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, ಶ್ರೀ ಗುರುದತ್ತ ಚರಿತ್ರೆ, ಶ್ರೀದೇವಿ ಭಾಗವತ, ಶ್ರೀ ಚಕ್ರಾರ್ಚನೆ ಈ ಪದ್ಯ ಕಾವ್ಯಗಳ ರಚನೆಗೆ ಪ್ರೇರೇಪಿಸಿದರು. ಕಾವ್ಯಗಳನ್ನು ರಚಿಸಿದ ನಂತರ ಆಶ್ರಮದ ವತಿಯಿಂದ ಅಚ್ಚುಹಾಕಿಸಿದರು. ಆ ಸಮಯದಲ್ಲಿ ಕೆಲವು ದಿನ ಆಶ್ರಮದಲ್ಲೇ ಇದ್ದಾಗ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರ ಅವತಾರ ಮಹಿಮಾವಲಂಬ ಶೀರ್ಷಿಕೆಯ ಪದ್ಯ ಕಾವ್ಯವನ್ನು ರಚನೆ ಮಾಡಿದರು. ಈ ಕಾವ್ಯವನ್ನೂ ಸಹ ಅಚ್ಚು ಹಾಕಿಸಿದರು.

೧೯೯೯ ರಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು, ಹಾಸನ ಜಿಲ್ಲೆಯ ಕಲಾವಿದರುಗಳಿಗೆ ಬಸವಾಪಟ್ಟಣದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದ್ದ ಸಂದರ್ಭದಲ್ಲಿ, ಅದೇ ಜಿಲ್ಲೆಯವರಾಗಿದ್ದ ಕೌಶಿಕರಿಗೂ ಹಾಗೂ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರ ಮಗಳು ವಸಂತಲಕ್ಷ್ಮಿ ಇಬ್ಬರಿಗೂ ಒಟ್ಟಿಗೆ ಸನ್ಮಾನ ಮಾಡಿದ್ದುದು ಒಂದು ವಿಶೇಷ.

ಕೌಶಿಕರ ಗಮಕ ಕಲಾ ಸೇವೆಯನ್ನು ಗುರುತಿಸಿ, ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ಬಿರುದು ಬಾವಲಿಗಳನ್ನು ನೀಡಿ ಗೌರವಿಸಿವೆ.

೧೯೭೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದರು.

ಬೆಂಗಳೂರಿನಲ್ಲಿ ನಡೆದ ಎರಡನೆಯ ಅಖಿಲ ಕರ್ನಾಟಕ ಗಮಕ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಗಮಕ ರತ್ನಾಕರ ಎಂಬ ಪ್ರಶಸ್ತಿಗೆ ಭಾಜನರಾದರು. ಕವಿಗಳಾದ ಅಸೂರಿ ರಾಮಸ್ವಾಮಯ್ಯಂಗಾರರು ಗಮಕ ಕವಿತಾ ವನಜ ಭಾಸ್ಕರ ಎಂಬ ಬಿರುದು ನೀಡಿ ಗೌರವಿಸಿದರು.

ಮೈಸೂರಿನ ರೇಣುಕೇಶ್ವರ ದೇವಾಲಯದಲ್ಲಿ ಗಮಕ ಕೋಕಿಲ ಎಂಬ ಬಿರುದನ್ನು ಜಯಂತಿ ಸಂದರ್ಭದಲ್ಲಿ ನೀಡಿದರು.

೨೦೦೨ನೇ ಇಸವಿಯಲ್ಲಿ ಹಾಸನದ ಸೀತಾರಾಮಾಂಜನೇಯ ದೇವಾಲಯದಲ್ಲಿ ಇವರೇ ರಚಿಸಿದ ‘ಅಷ್ಟಾದಶಪರ್ವ ಸಂಗ್ರಹ-ದ್ರೌಪದಿ ಪ್ರತಾಪ’ ಎಂಬ ಕಾವ್ಯವನ್ನು ಹೆಸರಾಂತ ಗಮಕಿಗಳಿಂದ ೧೦ ದಿನಗಳವರೆಗೆ ಗಮಕ ವಾಚನ ವ್ಯಾಖ್ಯಾನಗಳನ್ನು ಏರ್ಪಡಿಸಿ, ಮಂಗಳವನ್ನು ಇವರ ಸಮ್ಮುಖದಲ್ಲೇ ನೆರವೇರಿಸಿ ಸೇವೆ ಸಲ್ಲಿಸುತ್ತಿರುವ ಕಲಾವಿದರುಗಳನ್ನು  ಗುರುತಿಸಿ ಸನ್ಮಾನಿಸುವ ಸಂಪ್ರದಾಯ. ಉದಾಹರಣೆಗೆ ಒಂದು ಬಾರಿ ಬೀದಿಯಲ್ಲಿ ಓಲಗ ಊದುತ್ತಾ ಒಬ್ಬ ವ್ಯಕ್ತಿ ಬಸವನೊಡನೆ ಬರುತ್ತಿದ್ದ. ಬಹಳ ಚೆನ್ನಾಗಿ ಊದುತ್ತಿದ್ದುದನ್ನು ಕೇಳಿ, ಕೂಡಲೇ ಸಂತೋಷಪಟ್ಟು ೫೦.೦೦ ರೂ.ಗಳನ್ನು ತೆಗೆದುಕೊಟ್ಟಿದ್ದರು. ಸಾಮಾನ್ಯವಾಗಿ ಕಲಾವಿದರಿಗೆ ತಮ್ಮ ಕಲೆಯನ್ನು ಬೇರೆಯವರು ಗುರುತಿಸಿ ತಮಗೇ ಸನ್ಮಾನ ಮಾಡಲೆಂಬ ಆಶಯ ಇರುತ್ತದೆ. ಆದರೆ ಇವರು ಇದಕ್ಕೆ ಹೊರತಾದವರು. ಸಂಪಾದಿಸಿದ ಬಹುಪಾಲು ಹಣವನ್ನು ಹಿಂದಿನಿಂದಲೂ ಬೇರೆಯವರಿಗೆ ಸನ್ಮಾನಕ್ಕಾಗಿಯೇ ಮೀಸಲಿಡುತ್ತಿದ್ದರು. ೧೯೬೦ನೇ ಇಸವಿಯಿಂದಲೂ ಪ್ರಾರಂಭಿಸಿ, ಹೆಸರಾಂತ ಕಲಾವಿದರಾಗಿದ್ದ ವೀಣಾರಾಜಾರಾವ್‌, ವೀಣೆ ಕೇಶವಮೂರ್ತಿ, ಡಿ.ಕೆ. ಪಟ್ಟಮ್ಮಾಳ್‌, ಶೇಷಾದ್ರಿಗವಾಯಿ, ಹಾರ್ಮೋನಿಯಂ ಅರುಣಾಚಲಪ್ಪ, ಎಂ.ಎಸ್‌. ಸುಬ್ಬುಲಕ್ಷ್ಮಿ ಮುಂತಾದವರುಗಳಿಗೆ ಸನ್ಮಾನ ಮಾಡಿದ್ದಾರೆ. ಇತ್ತೀಚೆಗೆ ದಿ. ೨೧.೭.೨೦೦೧ರಂದು ಹಾಸನ ಜಿಲ್ಲೆಯ ವೇದಗ್ರಾಮ ಅಗ್ರಹಾರದಲ್ಲಿ ಅನೇಕ ಸಂಗೀತಕಾರರು, ವೇದವಿದರು, ಗಮಕಿಗಳು, ಸಮಾಜ ಸೇವಕರು, ಹೀಗೆ ಸುಮಾರು ೨೫ ಜನಗಳಿಗೆ ಸನ್ಮಾನಿಸಿದ್ದು, ಅವರ ವಿಶಾಲ ಮನೋಭಾವನೆ ವ್ಯಕ್ತವಾಗುತ್ತದೆ. ಅನಂತರ ೧೩.೧೨.೨೦೦೧ರಂದು ಮತ್ತೆ ಬೆಂಗಳೂರಿನ ನರಸಿಂಹರಾಜ ಕಾಲೋನಿಯ ರಾಮಮಂದಿರದಲ್ಲಿ ಸುಮಾರು ನಲವತ್ತು ಜನಗಳಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ಮಾಡಿದ್ದು ಅವಿಸ್ಮರಣೀಯ.

ಸನ್ಮಾನದ ದಿನದಂದು ಬಂದವರೆಲ್ಲರಿಗೂ ಭೂರಿಭೋಜನದ ವ್ಯವಸ್ಥೆ, ಸನ್ಮಾನಿತರಿಗೆ ನೆನಪಿನ ಕಾಣಿಕೆ, ಶಾಲು ಹೊದಿಸಿದ್ದು, ಕಣ್ಣಿಗೆ ಹಬ್ಬವಾಗಿ ಪರಿಣಮಿಸಿತ್ತು. “ಕೊಟ್ಟಿದ್ದು ತನಗೆ, ಇಟ್ಟಿದ್ದು ಪರರಿಗೆ” ಎಂದು ನಂಬಿರುವ ಕೌಶಿಕರು ತಮ್ಮ ಮನಸ್ಸಿಗೆ ಬಂದ ವಿಚಾರವನ್ನು  ಕಾರ್ಯಗತಗೊಳಿಸದೆ ಬಿಡುವವರಲ್ಲ. ನಲವತ್ತು ವರ್ಷಗಳಿಂದ ಸುಮರು ೨೫೦ಕ್ಕೂ ಮಿಕ್ಕಿ ಕಲಾವಿದರುಗಳಿಗೆ ಸನ್ಮಾನ ಮಾಡಿದ್ದಾರೆ.

ಅರ್ಧ ಶತಮಾನಕ್ಕೂ ಮೇಲ್ಪಟ್ಟು ಗಮಕ ಕಲಾ ಪ್ರಚಾರ ಮಾಡುತ್ತಾ ಬಂದಿದ್ದು, ನೂರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಗಮಕ ವಿದುಷಿ ಗೌರಮ್ಮ ನಾಗರಾಜ್‌ರವರು ಇವರ ಹಿರಿಯ ಶಿಷ್ಯೆ. ಇವರೂ ಸಹ ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ಹೀಗೆ ಶಿಷ್ಯರು-ಪ್ರಶಿಷ್ಯರ ಪರಂಪರೆ ಬೆಳೆಯುತ್ತಾ ಬಂದಿದೆ. ಇನ್ನು ತಮ್ಮ ಕುಟುಂಬವೂ ಗಮಕಕ ಕುಟುಂಬವೆಂದರೆ ತಪ್ಪಾಗಲಾರದು. ಇವರಿಗೆ ಐವರು ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳು, ಹಿರಯ ಮಗಳಾದ ವಸಂತಲಕ್ಷ್ಮೀ ಸೀತಾರಾಮಯ್ಯ  ಮೈಸೂರಿನಲ್ಲಿ ಸತ್ಯವತಿ ಕೇಶವಮೂರ್ತಿ, ಪದ್ಮಿನಿ ರಾಮಮೂರ್ತಿ ಇವರುಗಳು ಬೆಂಗಳೂರಿನಲ್ಲೂ, ರುಕ್ಮಿಣಿ ನಾಗೇಂದ್ರ ಹಾಸನದಲ್ಲಿಯೂ ಗಮಕ ತರಗತಿಗಳನ್ನು ನಡೆಸುತ್ತಾ, ಪ್ರಸಿದ್ಧ ಗಮಕಿಗಳಾಗಿದ್ದಾರೆ. ಕಿರಿಯ ಮಗ ಎಂ.ಡಿ. ಕೌಶಿಕ್‌ಕ ಚಲನಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾನೆ. ಕುಂತೀಕರ್ಣ ಗಮಕ ರೂಪಕವನ್ನು ಪೂರ್ಣವಾಗಿ ಚಿತ್ರೀಕರಣ ಮಾಡಿ ದೂರದರ್ಶನದಲ್ಲಿ ಪ್ರಸಾರ ಮಾಡಿಸಿದ್ದಾನೆ.

ಕೌಶಿಕರು ತಮ್ಮ ೮೬ ವರ್ಷದ ಪ್ರಾಯದಲ್ಲೂ ಉತ್ಸಾಹದಲ್ಲಿ ಯುವಕರನ್ನು ಮೀರಿಸುವಂತಿದ್ದಾರೆ. ಈಗಲೂ ಗಮಕ ಪ್ರಸಾರ ಮಾಡುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಎಂ.ಜಿ.ಎ. ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಶ್ರೀಮಾನ್‌ ಪಾಂಡುರಂಗರವರು ಪ್ರಾರಂಭಿಸಿರುವ “ಮಹಾಕವಿ ಲಕ್ಷ್ಮೀಶ ಸಂಸ್ಕೃತ ವೇದಿಕೆಯ” ಆಶ್ರಯದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಇವರಿಂದ ಗಮಕ ಶಿಕ್ಷಣ ತರಬೇತಿ ಕೊಡಿಸಲು ಕಳೆದ ಎರಡು ವರ್ಷಗಳಿಂದ ವ್ಯವಸ್ಥೆ ಮಾಡಿದ್ದರು.

ಶ್ರೀಮಾನ್‌ ಕೆಂಗಲ್‌ ಹನುಮಂತಯ್ಯನವರು ಬದುಕಿದ್ದಾಗ, ಕೊನೆಯ ದಿನಗಳಲ್ಲಿ ಅವರ ಕೋರಿಕೆಯ ಮೇರೆಗೆ ಅವರ ಮನೆಗೆ ಹೋಗಿ ಗಮಕ ಗಾಯನ ಮಾಡುತ್ತಿದ್ದರಂತೆ. ಕೆಂಗಲ್‌ ಹನುಮಂತಯ್ಯನವರಲ್ಲಿ ಇವರಿಗಿದ್ದ ಗೌರವಕ್ಕೆ ಕುರುಹಾಗಿ ಅವರ ಹೆಸರಿನಲ್ಲಿ ಗಮಕ ಕಲಾಪರಿಷತ್ತಿನಲ್ಲಿ ರೂ. ೫,೦೦೦.೦೦ಗ ಳ ದತ್ತಿ ನಿಧಿಯನ್ನಿಟ್ಟು ಪ್ರತಿ ವರ್ಷ ಗಮಕ ಕಾರ್ಯಕ್ರಮ ನಡೆಯುವಂತೆ ಮಾಡಿದ್ದಾರೆ.

ಭಾಮಿನಿ ಹಾಗೂ ವಾರ್ಧಕ ಷಟ್ಪದಿಗಳಲ್ಲಿ ೪೦ ಕ್ಕೂ ಹೆಚ್ಚು ಕಾವ್ಯಗಳನ್ನು ರಚಿಸಿ ‘ಕವಿ-ಗಮಕಿ-ವಾದಸಿ-ವಾಗ್ಮಿ’ ಎಲ್ಲವೂ ಒಬ್ಬರೇ ಆಗಿ ವಿಶೇಷ ಕೀರ್ತಿಗೆ ಪಾತ್ರರಾಗಿದ್ದಾರೆ. ಶ್ರೀ ಗುರುರಾಘವೇಂದ್ರ ಮಹಿಮಾದರ್ಶ, ಅಂಡಾಳ್‌ದೇವಿ ಮಹಿಮಾದರ್ಶ, ಹರಿದಾಸ ಕುಲತಿಲಕ ಪುರುಂದರದಾಸ ಮಹಿಮದರ್ಶ, ತ್ಯಾಗರಾಜ ಮಹಿಮಾದರ್ಶ ಮುಂತಾದ ಕಾವ್ಯಗಳನ್ನು ಸ್ವಂತ ವೆಚ್ಚದಲ್ಲಿ ಅಚ್ಚು ಹಾಕಿಸಿ ಕಲಾವಿದರಿಗೆ ಉದಾರವಾಗಿ ನೀಡಿದ್ದಾರೆ. ಜೈನ ಸಂಪ್ರದಾಯಕ್ಕೆಕ ಸಂಬಂಧಿಸಿದಂತೆ ‘ಅನಂತನೋಂಪಿ’ ಎಂಬ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಇನ್ನು ಅಚ್ಚು ಕಂಡಿಲ್ಲ.

ಇಂದಿನ ರಾಜಕೀಯ ನೀತಿ, ಸಮಾಜದ ಏರು-ಪೇರುಗಳನ್ನು ತೋರಿಸುವ ನೂರಾರು ತ್ರಿಪದಿಗಳನ್ನು ರಚನೆ ಮಾಡಿದ್ದಾರೆ. ಮತ್ತೊಂದು ಕಾವ್ಯ ಮಧ್ವಾಚಾರ್ಯ ಮಹಿಮಾದರ್ಶ ಈ ಕಾವ್ಯಗಳು ಸಹ ಪ್ರಕಟಣೆಗೆ ಸಿದ್ಧವಾಗಿದ್ದು, ಇನ್ನು ಅಚ್ಚು ಹಾಕಿಸಲು ದಾನಿಗಳು ಮುಂದೆ ಬರಬೇಕಾಗಿದೆ. ಈಗಲೂ ಸಹ ಯಾವಾಗಲೂ ಕಾವ್ಯ ಪದ್ಯಗಳ ರಚನೆಯಲ್ಲಿಯೇ ತೊಡಗಿರುತ್ತಾರೆ. ಆಶುಕವಿಗಳೂ ಸಹ ಆಗಿದ್ದು, ಆಯಾ ಸಂದರ್ಭಕ್ಕೆ ತಕ್ಕಂತೆ ಷಟ್ಪದಿಯಲ್ಲಿ ಪದ್ಯವನ್ನು ಸ್ಥಳದಲ್ಲೇ ರಚಿಸಿ ಹಾಡಬಲ್ಲ ಸಾಮರ್ಥ್ಯ ಹೊಂದಿದ್ದು, ಈ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ ಎಂಬತ್ತಾರರ ನಿತ್ಯೋತ್ಸಾಹೀಕ ಸುಬ್ಬಯ್ಯ ಕೌಶಿಕ್‌ ಅವರು.