೧೯೦೦ರಲ್ಲಿ ಅರಸಿಕೆರೆ ತಾಲ್ಲೂಕಿನ ಹಾಸನ ಜಿಲ್ಲೆಯ ಬಾಣಾವರದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಇವರಿಗೆ ಪ್ರದರ್ಶಕ ಕಲೆಗಳಲ್ಲಿ ಬಹಳ ಆಸಕ್ತಿ. ಹಾಗಾಗಿ ಇವರು ಕರ್ನಾಟಕ ಸಂಗೀತ ವಿದ್ವಾಂಸರು, ರಂಗಭೂಮಿಕ ಕಲಾವಿದರು ಹಾಗೂ ಚಲನ ಚಿತ್ರ ನಟರು ಆಗಿದ್ದರು. ರಾಜ ಐಯ್ಯಂಗಾರ್ಯರು ಚಿಕ್ಕ ವಯಸ್ಸಿನಲ್ಲೆ ತಮ್ಮ ತಂದೆ ಶ್ರೀನಿವಾಸ ರಂಗಾಚಾರ್ ರವರನ್ನು ಕಳೆದುಕೊಂಡರು. ಈ ಆಘಾತದಿಂದ ತಾಯಿಯವರು ಮಕ್ಕಳೊಂದಿಗೆ ತವರೂರಾದ ಹೊಳಲ್ಕೆರೆಗೆ ಬಂದು ನೆಲೆಸಿದರು. ಅಲ್ಲಿಯೇ ಮಕ್ಕಳಿಗೆ ವಿಧ್ಯಾಭ್ಯಾಸ ಮಾಡಿಸಿದರು. ರಾಜೈಯ್ಯಂಗಾರ್ಯರು ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಯ್ಯಂಗಾರ್ಯರಿಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿಕ ಆಸಕ್ತಿಕ ಇತ್ತು. ಇವರು ಸಂಗೀತ ಕಲಿಯಲು ಸಂದರ್ಭವು ತಾನೇ ತಾನಾಗಿ ಒದಗಿ ಬಂತು. ಒಮ್ಮೆ ಇವರು ತಮ್ಮ ಸೋದರ ಮಾವನರೊಂದಿಗೆ ದಸರಾ ನೋಡಲು ಮೈಸೂರಿಗೆ ಬಂಧರು. ಅಲ್ಲಿ ಇವರಿಗೆ ಸುಪ್ರಸಿದ್ಧ ನಾಟಕಕಾರರಾದ ಎ.ವಿ. ವರದಾಚಾರ್ ರವರ ಪರಿಚಯವಾಯಿತು. ವರದಾಚಾರ್ಯರ ನಾಟಕ ಕಂಪೆನಿ ಎಂದರೆ ಸಂಗೀತಕ್ಕೆ ಹೆಚ್ಚಿನ ಅವಕಾಶವಿದ್ದ ಕಂಪೆನಿ. ಜೊತೆಗೆ ಅಯ್ಯಂಗಾರ್ಯರಿಗೆ ಸಂಗೀತ ಕಲಿಯುವ ಗೀಳು ಬಹಳಷ್ಟಿತ್ತು. ಅದರಿಂದಾಗಿ ಅಯ್ಯಂಗಾರ್ಯರು ಕಂಪೆನಿಯಲ್ಲೇ ಉಳಿದುಕೊಂಡರು. ಸೋದರಮಾವನಿಂದ ಕಲಿತಿದ್ದ ಸಂಗೀತವನ್ನು ಮುಂದೆ ಮೈಸೂರಿನ ವರದಾಚಾರ್ಯರ ಕಂಪೆನಿಯಲ್ಲಿದ್ದ ಹಾರ್ಮೋನಿಯಂ ಶ್ಯಾಮರಾಯರಿಂದ ಸಂಗೀತದ ಕ್ರಮವಾದ ಪಾಠವಾಯಿತು. ಅಯ್ಯಂಗಾರ್ಯರದು  ಕಂಚಿನಂತಹ ಶಾರೀರ. ಕಂಪೆನಿಯಲ್ಲಿ ಇವರ ಸಂಗೀತಕ್ಕೆ ಬಹಳ ಪ್ರಾಶಸ್ತ್ಯವಿತ್ತು. ಹೀಗೆ ಇವರು ರಂಗನಟರಾದರು. ಕಾಲಕ್ರಮೇಣ ಇವರ ಕಂಠ ಮಾಧುರ್ಯವು ಹಸನಾಗಿ ಮನೋಧರ್ಮವು ವೃದ್ಧಿಯಾಯಿತು. ಆಚಾರ್ಯರ ಪ್ರೋತ್ಸಾಹದಿಂದ ಇವರು ಮೆಟ್ರಿಕ್ಯುಲೇಷನ್‌ವರೆಗೆ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ವಿದ್ಯಾಭ್ಯಾಸದ ಜೊತೆಗೆ ಹಲವು ವರ್ಷಗಳು ಶ್ಯಾಮರಾವ್‌ ಅವರಲ್ಲೇ ಸಂಗೀತಭ್ಯಾಸವನ್ನು ಮಾಡಿದರು. ಹಲವು ವರ್ಷಗಳ ನಂತರ ಕಂಪೆನಿಯನ್ನು ತ್ಯಜಿಸಿ ಬೆಂಗಳೂರಿಗೆ ಬಂದರು. ಅಲ್ಲಿ ಸಂಗೀತ ಶಾಲೆಯನ್ನು ಆರಂಭಿಸಿದರು. ಆದರೆ ಆ ಶಾಲೆ ಹೆಚ್ಚು ದಿನಗಳು ನಡೆಯಲಿಲ್ಲ. ಕ್ರಮೇಣ ಸಂಗೀತವನ್ನು ಇನ್ನೂ ಕಲಿಯಬೇಕೆಂಬ ಉತ್ಕಟೇಚ್ಛೆಯಿಂದ ಮದರಾಸಿಗೆ ತೆರಳಿದರು. ಅಲ್ಲಿ ಸಂಗೀತ ದಿಗ್ಗಜ ಟೈಗರ್‌ ವರದಾಚಾರ್ಯರ ತಮ್ಮ ವಿದ್ವಾನ್‌ ಕೆ.ವಿ. ಶ್ರೀನಿವಾಸೈಯ್ಯಂಗಾರ್ ಅವರಲ್ಲಿ ಸಂಗೀತ ಶಿಕ್ಷಣವನ್ನು ಮುಂದುವರೆಸಿದರು. ಬಹಳ ವರ್ಷಗಳ ಹಟ ಸಾಧನೆಯಿಂದ ಇವರ ಸಂಗೀತ ಟೈಗರ್‌ ಸಂಪ್ರದಾಯದ ಘನತೆಯನ್ನು ಸಾರುವಂತಿತ್ತು. ನಂತರ ಮದರಾಸಿನಲ್ಲಿಯೆ ಪ್ರಸಿದ್ಧ ಸಭೆಯಲ್ಲಿ ಇವರು ತಮ್ಮ ಪ್ರಥಮ ಸಂಗೀತ ಕಚೇರಿಯನ್ನು ನಡೆಸಿದರು. ಆ ಸಭೆಯಲ್ಲಿ ಟೈಗರ್ ರವರು ಉಪಸ್ಥಿತರಿದ್ದರು. ಕಚೇರಿಯ ನಂತರ ಟೈಗರ್ ವರದಾಚಾರ್ ರವರು ಇವರ ಸಂಗೀತವನ್ನು ಮೆಚ್ಚಿ ಹೊಗಳಿದರು. ಮುಂದೆ ಅನೇಕ ಕಡೆಗಳಲ್ಲಿ ಇವರು ಸಂಗೀತ ಕಚೇರಿಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದರು.

ಕಂಚಿನಂತಹ ಶಾರೀತ ಹೊಂದಿದ್ದ ಐಯ್ಯಂಗಾರ್ಯರು ೪ನೇ ಶ್ರುತಿಯಲ್ಲಿ ಹಾಡುತ್ತಿದ್ದರು. ಹಾಗೆ ಶಾರೀರದಷ್ಟೆ ಶುದ್ಧವಾಗಿ ಇವರ ಲಯ ಜ್ಞಾನವೂ ಇದ್ದಿತು. ಯಾವುದೇ ಕೃತಿಯಾಗಲಿ, ದೇವರನಾಮವಾಗಲಿ ಅವು ಭಾವಪೂರ್ಣವಾಗಿ ಹೊಮ್ಮುತ್ತಿದ್ದವು. ಇದಕ್ಕೆ ಸಾಕ್ಷಿಯಾಗಿ ಆಡಿಸಿದಳೆಶೋದೆ, ಕ್ಷೀರ ಸಾಗರ ಶಯನ, ಮನುಜ ಶರೀರವಿದೇನು ಸುಖ, ಕಂಡು ಕಂಡು, ಎಂಬ ರಚನೆಗಳ ಗ್ರಾಮಫೋನ್‌ ರೆಕಾರ್ಡ್‌‌ಗಳು ಕೊಲಂಬಿಯಾ, ಎಚ್‌.ಎಮ್‌.ವಿ. ಒಡಿಯಾನ್‌, ಕಂಪೆನಿಯಿಂದ ಹೊರಬಂದಿವೆ. ಇವು ಬಹಳ ಜನಪ್ರಿಯವಾಗಿ ದೇಶದಾದ್ಯಂತ ಹರಡಿ, ಬರ್ಮಾ, ಶ್ರೀಲಂಕಾ ದೇಶಗಳಲ್ಲೂ ಪ್ರಸಿದ್ಧವಾಗಿತ್ತು.

ಅಯ್ಯಂಗಾರ್ಯರು ಅತ್ಯಂತ ಶಿಸ್ತಿನ ಜೀವನ ನಡೆಸುತ್ತಿದ್ದರು. ಸಂಗೀತದಲ್ಲಿ ಬಹಳ ಶ್ರದ್ಧೆಯಿದ್ದುದರಿಂದ ತಮ್ಮ ಶಾರೀರವನ್ನು ಚೆನ್ನಾಗಿ ಪೋಷಿಸಿಕೊಂಡಿದ್ದರು. ಸಂಪ್ರದಾಯವಾದಿಗಳು. ಸಂಗೀತಗಾರರಾಗಬೇಕೆಂಬುವರು ಚಿಕ್ಕಂದಿನಿಂದಲೇ ಸಾಧನೆ ಮಾಡುತ್ತಾ ಬರಬೇಕು ಆಗಲೇ ಸಂಗೀತ ನಮ್ಮ ಹಿಡಿತಕ್ಕೆ ಸಿಕ್ಕುವುದು ಎಂಬ ಅಭಿಪ್ರಾಯವುಳ್ಳವರು. ಸಂಗೀತ ಕಚೇರಿಗಳು ಸಂಪ್ರದಾಯ ಬಿಟ್ಟು ಹೋಗಬಾರದು. ಆದುದರಿಂದ ಪೂರ್ವ ಸಿದ್ಧತೆ ಇಲ್ಲದೆ ಕಚೇರಿಯಲ್ಲಿ ಹಾಡಬಾರದು ಮತ್ತು ಪಕ್ಕವಾದ್ಯಗಾರರ ಸಾಮರ್ಥ್ಯ ಮತ್ತು ಮನೋಧರ್ಮವನ್ನು ಅರಿತು ಅದಕ್ಕೆ ಪೂರಕವಾಗಿ ನಮ್ಮ ಪ್ರತಿಭೆಯನ್ನು ಪ್ರಕಟಿಸಬೇಕು ಆಗಲೇ ಕಚೇರಿಗೆ ಮೆರುಗು ಬರುವುದು ಎಂಬುದು ಇವರ ವಾದ. ಅಲ್ಲದೆ ಇವರು ದಾಸರ ಪದಗಳನ್ನು ಜನಪ್ರಿಯಗೊಳಿಸಲು ವಿಶೇಷವಾದ ಶ್ರಮವಹಿಸಿದ್ದಾರೆ. ಇವರು ಯಾವುದೇ ಕಚೇರಿಗಾದರೂ ಪೂರ್ವಸಿದ್ಧತೆ ಇಲ್ಲದೆ ಹಾಡಿದವರಲ್ಲ. ಅಚ್ಚುಕಟ್ಟಾಗಿ ಎಲ್ಲವನ್ನು ಅಭ್ಯಸಿಸಿ ಸರಿಯಾಗಿ ಸಿದ್ಧತೆ ಮಾಡಿಕೊಂಡು ವಾಗ್ಗೇಯಕಾರರ ರಚನೆಗಳಿಗೆ ಲೋಪವಾಗದಂತೆ ತಮ್ಮ ಮನೋಧರ್ಮಕ್ಕನುಗುಣವಾಗಿ ಯಶಸ್ವಿಯಾಗಿ ಕಚೇರಿ ನಡೆಸುತ್ತಿದ್ದರು.

ಚಲನಚಿತ್ರದಲ್ಲಿ ನಟನೆ: ರಾಜೈಯ್ಯಂಗಾರ್ಯರು ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲದೆ ಚಲನಚಿತ್ರಗಳಲ್ಲಿ ನಟಿಸಿದ್ದರು. ಇವರು ತ್ರಿಭಾಷಾಕ ನಟರು. ಕನ್ನಡ ಭಾಷೆಯ ಪ್ರಸಿದ್ಧ ಚಲನಚಿತ್ರವಾಗಿದ್ದ ಹರಿಶ್ಚಂದ್ರದಲ್ಲಿ ಇವರು ನಾರದನ ಪಾತ್ರ ವಹಿಸಿದ್ದರು. ತಮಿಳಿನ ತುಳಸೀದಾಸ ಚಲನಚಿತ್ರದಲ್ಲಿ ತುಳಸೀದಾಸನ ಪಾತ್ರವನ್ನು, ತೆಲುಗು ಭಾಷೆಯ ಚಲನಚಿತ್ರವಾದ ತುಲಸಿ ಜಲಂಧರಲ್ಲಿ ಸಾಧುವಿನ ಪಾತ್ರವನ್ನು ವಹಿಸಿ ಉತ್ತಮ ನಟರೆಂದೆನಿಸಿಕೊಂಡಿದ್ದರು.

ಅನುಭವ: ಒಮ್ಮೆ ಭಾರತರತ್ನ ಎಂ.ಎಸ್‌. ಸುಬ್ಬಲಕ್ಷ್ಮಿಯವರು ತಮ್ಮ ಒಂದು ಸಂಗೀತ ಕಚೇರಿಯಲ್ಲಿ ಆಡಿಸಿದಳೆಶೋದೆ ಜಗದೋದ್ಧಾರನ ಎಂಬ ಪುರಂದರದಾಸರ ದೇವರನಾಮವನ್ನು ಹಾಡಿದರು. ಆಗತಾನೆ ಎಂ.ಎಸ್‌.ಎಸ್‌.ರವರಿಂದ ಪ್ರಚಾರವಾಗುತ್ತಿತ್ತು. ಕಚೇರಿ ಕೇಳಲು ಬಿ.ಎಸ್‌. ರಾಜ ಅಯ್ಯಂಗಾರ್ಯರವರು ಬಂದಿದ್ದಾರೆ. ಆದರೆ ಎಂ.ಎಸ್‌.ಎಸ್‌ರವರಿಗೆ ಈ ದೇವರ ನಾಮವು ತಿಳಿದಿರಲಿಲ್ಲ ಕಚೇರಿಯೆಲ್ಲಾ ಮುಗಿದು ಅಭಿಮಾನಿಗಳು ಎಂ.ಎಸ್‌.ಎಸ್‌.ರವರನ್ನು ಶ್ಲಾಘಿಸಿ ತೆರಳಿದ ನಂತರ, ಕೊನೆಯಲ್ಲಿ ಒಬ್ಬ ವಯೋವೃದ್ಧರು ಎಂ.ಎಸ್‌. ರವರ ಬಳಿ ಬಂದು ಅವರ ಹಾಡುಗಾರಿಕೆಯ ಶೈಲಿಯನ್ನು ಪ್ರಶಂಸಿಸಿ, ಕೊನೆಗೆ ಜಗದೋದ್ಧಾರನ ದೇವರನಾಮದ ಬಗ್ಗೆಯು ಮೆಚ್ಚುಗೆ ವ್ಯಕ್ತಪಡಿಸಿದರಂತೆ, ಒಡನೆ ಎಂ.ಎಸ್‌. ಸುಬ್ಬುಲಕ್ಷ್ಮಿಯವರು ವೇದಿಕೆಯಿಂದ ಇಳಿದು ಬಂದು ಐಯಂಗಾರ್ಯರಿಗೆ ನಮಸ್ಕರಿಸಿ ವಿನಯದಿಂದ ನೀವು ಹಾಡಿದ ದೇವರನಾಮವನ್ನು ನಾನು ಸರಿಯಾಗಿ ಹಾಡಿದೆನೆ ಎಂದು ಕೇಳಿದರಂತೆ. ಅದಕ್ಕೆ ಉತ್ತರವಾಗಿ ಅಯ್ಯಂಗಾರ್ಯರು ನಾನು ಆಡಿಸಿದಳೆಶೋದೆ ಹಾಡನ್ನು ಶೋತೃಗಳಿಗೆ ಪರಿಚಯಿಸಿದೆ. ಆದರೆ ಅದಕ್ಕೆ ನೀವು ಜೀವ ತುಂಬಿದಿರಿ ಎಂದು ಹೇಳಿದರಂತೆ. ಇದರಿಂದ ಅಯ್ಯಂಗಾರ್ಯರು ಎಷ್ಟು ವಿಶಾಲ ಹೃದಯಿಗಳು ಎಂದು ತಿಳಿಯುತ್ತದೆ.

ಮುಖ್ಯ ಸಂಗೀತ ಕಚೇರಿಗಳು: ರಾಜೈಯ್ಯಂಗಾರ್ಯರು ಸಾವಿರಾರು ಸಂಗೀತ ಕಚೇರಿಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಅದರಲ್ಲಿ ಮುಖ್ಯವಾದವು ೧೯೨೬ರಲ್ಲಿ ಮದರಾಸಿನ ಸಭೆಯಲ್ಲಿ ನಡೆದ ಇವರ ಪ್ರಥಮ ಕಚೇರಿ ೧೯೨೭ರಲ್ಲಿ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿನ ಕಚೇರಿ. ೧೯೨೮ರಲ್ಲಿ ಮೈಸೂರು ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಹಾಡಿದಾಗ ರಾಜರು ಮೆಚ್ಚಿ, ಇನ್ನೊಮ್ಮೆ ಕರೆಸಿ ಹಾಡಿಸಿ ಕೇಳಿದರು. ೧೯೩೨ರಲ್ಲಿ ಮದ್ರಾಸ್‌ನ ಮ್ಯೂಸಿಕ್‌ ಅಕಾಡೆಮಿಯಲ್ಲಿ. ೧೯೩೪ರಲ್ಲಿ ತಿರುವನಂತ ಪುರದ ಮಹಾರಾಜರ ಸಮ್ಮುಖದಲ್ಲಿ. ೧೯೩೬ರಲ್ಲಿ ಕರಾಚಿಯಲ್ಲಿ ಒಂದು ತಿಂಗಳು ಪ್ರವಾಸ ಕೈಗೊಂಡು ಸುತ್ತಮುತ್ತಲು ಹಲವಾರು ಸಂಗೀತ ಕಚೇರಿಗಳನ್ನು ನಡೆಸಿದರು. ೧೯೪೦ರಲ್ಲಿ ಬೊಬ್ಬಿಲಿ ಅರಮನೆಯಲ್ಲಿ. ಬರ್ಮಾದೇಶದ ಪ್ರವಾಸದಲ್ಲಿ ನಡೆಸಿದ ಸಂಗೀತ ಕಚೇರಿಗಳು.

ಆಕಾಶವಾಣಿಯಲ್ಲೂ ಹಾಡುತ್ತಿದ್ದರು, ಅಲ್ಲದೆ ಅನೇಕ ಸಂಗೀತ ಸಭೆಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ, ರಾಮೋತ್ಸವ, ಗಣೇಶೋತ್ಸವಗಳಲ್ಲೆಲ್ಲಾ ಸಂಗೀತ ಕಚೇರಿ ನೀಡಿದ್ದರು.

ಬಿರುದು/ಸನ್ಮಾನ/ಪ್ರಶಸ್ತಿಗಳು: ೧೯೨೭ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಆಶ್ರಯದಲ್ಲಿ ಏರ್ಪಾಟಾಗಿದ್ದ ಸಂಗೀತ ಸಭೆಯಲ್ಲಿ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು. ೧೯೨೮ ಮೈಸೂರಿನ ಪ್ರಭುಗಳು ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸನ್ಮಾನ. ೧೯೩೪ ತಿರುವನಂತಪುರದ ರಾಜರು ಸುವರ್ಣ ಪದಕ ನೀಡಿ ಗೌರವಿಸಿದರು. ಬರ್ಮಾದೇಶದ ಪ್ರವಾಸದಲ್ಲಿ ರಂಗೂನಿನ ಸಂಗೀತ ಪ್ರಿಯರಿಂದ ಇವರಿಗೆ ಬಂಗಾರದ ಪದಕದ ಗೌರವ. ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಾನಕಲಾನಿಧಿ ಬಿರುದು ನೀಡಿ ಗೌರವಿಸಿದರು. ೧೯೬೭ ಕರ್ನಾಟಕ ರಾಜ್ಯ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. ೧೯೭೦ ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್‌ ಬೆಂಗಳೂರು ಇದರ ವಿದ್ವಾಂಸರ ಪ್ರಥಮ ಸಂಗೀತ ಸಮ್ಮೇಳನಾಧ್ಯಕ್ಷರಾಗಿ ಗಾನಕಲಾ ಭೂಷಣ ಬಿರುದು.

ಸುಮಾರು ೮೦ ವರ್ಷಗಳವರೆಗೆ ತುಂಬು ಜೀವನ ನಡೆಸಿದ ಘನ ವಿದ್ವಾಂಸರಾದ ರಾಜೈಯ್ಯಂಗಾರ್ ಅವರು ೧೯೭೮, ಜುಲೈ ೪ ರಂದು ಸ್ವರ್ಗಸ್ಥರಾದರು.