೨೧-೩-೧೯೩೧ ರಂದು ಬೆಂಗಳೂರಿನಲ್ಲಿ ಜನಿಸಿದ ಚಂದ್ರಕಲಾ ಅಸಾಧಾರಣ ಪ್ರತಿಭೆಯ ಪ್ರತೀಕವಾಗಿದ್ದರು. ವಿದ್ಯಾಸಾಗರ ಆರ್.ಆರ್. ಕೇಶವಮೂರ್ತಿಯವರಿಂದ ಶಿಕ್ಷಣ ಪಡೆದು ಉತ್ತಮ ಪಿಟೀಲು ವಾದಕರಾಗಿ ಅನೇಕಾನೇಕ ಕಾರ್ಯಕ್ರಮಗಳಿಗೆ ಪಿಟೀಲು ಸಹಕಾರ ನೀಡಿದರು. ತನಿ ವಾದಕಿಯಾಗಿಯೂ ಅನೇಕ ಕಛೇರಿಗಳನ್ನು ಮಾಡಿದರು. ಚಿಂತಲಪಲ್ಲಿ ಕೃಷ್ಣಮೂರ್ತಿ, ಎ. ಸುಬ್ಬರಾವ್‌, ಪಲ್ಲವಿ ಚಂದ್ರಪ್ಪ ಎಂ.ಎಸ್‌. ರಾಮಯ್ಯ ಮುಂತಾದವರ ಮಾರ್ಗದರ್ಶನದಲ್ಲಿ ಗಾಯನ ಶಾಸ್ತ್ರ ಭಾಗಗಳಲ್ಲಿಯೂ ಶಿಕ್ಷಣ ಪಡೆದಿದ್ದರು. ಹಲವಾರು ಸಂಘ-ಸಂಸ್ಥೆಗಳ ಕಾರ್ಯನಿರ್ವಾಹಕವಾಗಿ ಸಂಘಟಕರಾಗಿ ಕಾರ್ಯನಿರ್ವಹಿಸಿದುದರ ಜೊತೆಗೆ ಕಾರ್ಪೋರೇಷನ್‌ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದರು.

ರಾಜ್ಯ ಸಂಗೀತ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ, ಆಕಾಶವಾಣಿಯ ಆಡಿಷನ್‌ ಮಂಡಳಿಯ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು. ಇವರು ನೀಡಿದ ‘ಸಂಗೀತ ದರ್ಶನ’ – ಕರ್ನಾಟಕ ಸಂಗೀತದ ೭೬ ನಕ್ಷೆಗಳನ್ನು ಬಿಡಿಸಿ ತನ್ಮೂಲಕ ಬೋಧಿಸುವ ಪ್ರದರ್ಶನ ಪಂಡಿತ ಪಾಮರರೆಲ್ಲರ ಮೆಚ್ಚುಗೆ ಗಳಿಸಿತು. ಅನೇಕ ನೂತನ ರಾಗಗಳನ್ನು ರೂಪಿಸಿ, ಕವನಗಳನ್ನು ರಚಿಸಿ, ಹಲವಾರು ಬೋಧಪ್ರದ ಗ್ರಂಥಗಳನ್ನು ರಚಿಸಿ ಕಾದಂಬರಿಗಳು, ನಾಟಕಗಳು, ಶಿಶುಸಾಹಿತ್ಯ ಇತ್ಯಾದಿ ಸಾಹಿತ್ಯ ಲೋಕಕ್ಕೂ ಉಪಯುಕ್ತವಾಗುವಂತಹ ಕೃತಿಗಳನ್ನು ನೀಡಿ ಸಂಗೀತ-ಸಾಹಿತ್ಯ ಕ್ಷೇತ್ರಗಳೆರಡಕ್ಕೂ ಸೇವೆ ಸಲ್ಲಿಸಿದ ಹಿರಿಮೆ ಇವರದು. ಸ್ವರ ಲಿಪಿ ಪ್ರತಿಷ್ಠಾನವನ್ನು ಸ್ಥಾಪಿಸಿ ಅದರ ವತಿಯಿಂದ ವರ್ಷಂಪ್ರತಿ ಓರ್ವ ಮಹಿಳಾ ಸಂಗೀತ ಕಲಾವಿದೆಗೆ ‘ಸ್ವರ ಭೂಷಣಿ’ ಹಾಗೂ ಓರ್ವ ಮಹಿಳಾ ಸಾಹಿತಿಗೆ ‘ಲಿಪಿ ಪ್ರಜ್ಞೆ’ ಬಿರುದು ನೀಡಿ ಸನ್ಮಾನಿಸುತ್ತಿದ್ದರು.

ಕರ್ನಾಟಕ ಸರ್ಕಾರದ ಉತ್ತಮ ಶಿಕ್ಷಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಗೌರವ ಸನ್ಮಾನಗಳನ್ನು ಪಡೆದಿದ್ದ ಚಂದ್ರಕಲಾ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ಪಡೆದಿದ್ದರು.

ಅನಾರೋಗ್ಯದಿಂದ ಬಳಲಿದ್ದ ಚಂದ್ರಕಲಾ ಇಹವನ್ನು ತ್ಯಜಿಸಿದರಾದರೂ, ಇವರು ಲೇಖಸಿರುವ ‘ನಿಜಗುಣ ಸರಿತಾ’, ‘ಜಾನಪದ ಸ್ವರ ಸಂಪದ’, ‘ಝೇಂಕಾರಿ’, ‘ಭಾವಸ್ವರ ಸಂಕುಲ’, ಅಂಧ ಕಲಾವಿದರಾಗಿ ರೂಪಿಸಿ, ರಚಿಸಿದ ಮೂರು ಭಾಗಗಳ ‘ಭಾರತೀಯ ಸಂಗೀತ’ ಮುಂತಾದ ಪುಸ್ತಕಗಳು ಅವರ ಪ್ರತಿಭೆ ಪ್ರಾವೀಣ್ಯತೆಗಳ ಕುರುಹಾಗಿ ಉಳಿದಿವೆ.