‘ಜಗದೋದ್ಧಾರನ ಆಡಿಸಿದಳೆಶೋದೆ’ ಎಂಬ ದಾಸರ ಪದದಿಂದ ಕನ್ನಡ ಜನಮನದ ಅಭಿಮಾನ ಗದ್ದುಗೆಯಲ್ಲಿ ಭದ್ರಸ್ಥಾನ ಪಡೆದಿದ್ದ ರಾಜಯ್ಯಂಗಾರರು ಹಿಂದಿನ ಪೀಳಿಗೆಯ ಉತ್ತಮ ಸಂಗೀತಗಾರರಾಗಿ ವಿಜೃಂಭಿಸಿದವರು.

೧೯೦೧ರಲ್ಲಿ ಹಾಸನ ಜಿಲ್ಲೆಯ ಬಾಣಾವರದಲ್ಲಿ ಜನಿಸಿದ ರಾಜಯ್ಯಂಗಾರರು ಬಾಲ್ಯದಲ್ಲಿಯೇ ಪಿತೃವಿಯೋಗವನ್ನು ಅನುಭವಿಸಿ ಜನನಿಯ ವಾತ್ಸಲ್ಯದ ಮಡಿಲಲ್ಲಿ ಬೆಳೆದವರು. ನಾಟಕ ಶಿರೋಮಣಿ ವರದಾಚಾರ್ಯರ ನಾಟಕ ಕಂಪೆನಿ ಸೇರಿ ಅಲ್ಲಿ ಸಂಗೀತ-ಅಭಿನಯಗಳಲ್ಲಿ ಶಿಕ್ಷಣ ಪಡೆದರು. ಮುಂದೆ ಮದರಾಸಿನಲ್ಲಿ ಟೈಗರ್ ವರದಾಚಾರ್ಯರ ಸೋದರ ಕೆ.ಎ. ಶ್ರೀನಿವಾಸ ಐಯ್ಯಂಗಾರರಲ್ಲಿ ಉನ್ನತ ಶಿಕ್ಷಣ ಪಡೆದು ಸಂಗೀತಗಾರರ ಪಂಕ್ತಿಯಲ್ಲಿ ಅಗ್ರಸ್ಥಾನ ಗಳಿಸಿದರು. ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಛೇರಿಗಳನ್ನು ನಡೆಸಿ ಜನಮನ್ನಣೆ ಪಡೆದರು. ಮದರಾಸಿನ ಕರ್ನಾಟಕ ಸಾಹಿತ್ಯ ಪರಿಷತ್  ‘ಗಾನ ಕಲಾನಿಧಿ’ ಪ್ರಶಸ್ತಿ ನೀಡಿ ಗೌರವಿಸಿತು.

ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಐದು ಚಲನಚಿತ್ರಗಳಲ್ಲೂ ನಟಿಸಿ ಆ ಕ್ಷೇತ್ರದಲ್ಲೂ ಪರಿಚಿತರಾಗಿದ್ದರು. ಅವರ ಪುತ್ರ ಪುತ್ರಿಯರೆಲ್ಲರೂ ಸಂಗೀತ ಕಲೆಯ ವಿವಿಧ ಪ್ರಕಾರಗಳಲ್ಲಿ ನಿರತರಾಗಿ ತಂದೆಯ ಕೀರ್ತಿಯನ್ನು ಜೀವಂತವಾಗಿರಿಸಿದ್ದಾರೆ.

ಶ್ರೀಯುತರ ಧ್ವನಿಮುದ್ರಿಕೆಗಳು ಇಂದಿಗೂ ಆಕಾಶವಾಣಿಯ ಮೂಲಕ ಪ್ರಸಾರವಾಗುತ್ತಿರುವುದು ಅವರ ಜನಪ್ರಿಯತೆಯ ಸಂಕೇತ.

ಸಂಗೀತ-ನಾಟಕ ಅಕಾಡೆಮಿಯಿಂದ ೧೯೬೬-೬೭ರಲ್ಲಿ ರಾಜ್ಯ ತುಂಬು ಕಂಠದ ರಾಜಯ್ಯಂಗಾರ್ ಅವರು ‘ಗಾನ ಕಲಾ ಭೂಷಣ’ರೂ ಆಗಿದ್ದು ೪-೦೭-೧೯೭೮ರಂದು ಮಾತೆ ವಾಗ್ದೇವಿಯ ಚರಣಗಳಲ್ಲಿ ಐಕ್ಯತೆ ಪಡೆದರು.