ತಾತ ಬಿ.ಎಸ್‌. ರಾಮಯ್ಯ, ದೊಡ್ಡಪ್ಪಗಾನ ವಿಶಾರದ ಬಿ. ದೇವೇಂದ್ರಪ್ಪ, ಚಿಕ್ಕಪ್ಪ ಬಿ. ಕೃಷ್ಣಪ್ಪ ಹಾಗೂ ತಂದೆ ಬಿ. ಶೇಷಪ್ಪ – ಇಂತಹ ಭವ್ಯ ಸಂಗೀತ ಪರಂಪರೆ ಇರುವ ಮನೆತನದಲ್ಲಿ ೨-೯-೧೯೩೫ ರಂದು ಜನಿಸಿದ ಬಿ.ಎಸ್‌. ವಿಜಯರಾಘವನ್‌ಸಹಜವಾಗಿಯೇ ಸಂಗೀತಾಸಕ್ತಿ ಅಭಿರುಚಿಗಳನ್ನು ಹೊಂದಿದರಾದರು. ಇವರ ಸಂಗೀತಾಭ್ಯಾಸ ಮನೆಯ ಹಿರಿಯರುಗಳಿಂದಲೇ ನಡೆಯಿತು. ತಾತನವರಿಂದ ಅವಧಾನ ಕಲೆಯಲ್ಲೂ ಸಾಧನೆಗೆ ದಾರಿ ಹಾಕಿಸಿಕೊಂಡರು. ಪಂಚತಾಳೇಶ್ವರಿ ಮತ್ತು ಸಪ್ತತಾಳೇಶ್ವರಿಗಳೆಂಬ ತಾಳಗಳಲ್ಲಿ ಪಲ್ಲವಿ ನಿರೂಪಿಸುವ ಸಾಮರ್ಥ್ಯ ಪಡೆದರು. ದೊಡ್ಡಪ್ಪನವರಿಂದ ವೀಣೆ, ಗೋಟುವಾದ್ಯ, ಜಲತರಂಗ್‌ ಹಾಗೂ ಪಿಟೀಲು ವಾದ್ಯಗಳ ವಾದನದಲ್ಲೂ ಶಿಕ್ಷಣ ಹೊಂದಿ ಪರಿಣತಿ ಪಡೆದರು. ಇದೆಲ್ಲದರ ಜೊತೆಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರೂ ಆದರು.

ಕನ್ನಡದ ರಚನೆಗಳನ್ನು ಸಾಹಿತ್ಯ ಶುದ್ಧಿಯಿಂದ ಹಾಡುವುದು ಇವರ ವೈಶಿಷ್ಟ್ಯ. ಸುಗಮ ಸಂಗೀತದಲ್ಲೂ ಪರಿಶ್ರಮವಿರುವ ಇವರು ವರಕವಿಗಳೆನಿಸಿದ ಕುವೆಂಪು, ದ.ರಾ. ಬೇಂದ್ರೆ ಅವರುಗಳ ಭಾವಗೀತೆ – ಕವನಗಳನ್ನು ಆಕಾಶವಾಣಿ ಕೇಂದ್ರಗಳ ಮೂಲಕ ಜನಸಮುದಾಯಕ್ಕೆ ಸಂವಹನ ಮಾಡಿದ್ದಾರೆ. ನಾಡಿನ ಹೆಸರಾಂತ ಸಭೆಗಳಲ್ಲಿ ಕಛೇರಿ ನೀಡಿರುತ್ತಾರೆ.

ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಹರಿದಾಸರ ಪದಗಳಿಗೆ ವರ್ಣಮಟ್ಟು ಹಾಕಿದ್ದಾರೆ. ಸುಳಾದಿಗಳ ಬಗ್ಗೆಯೂ ಇವರು ಮಾಡಿರುವ ಸಂಶೋಧನೆ ಗಮನಾರ್ಹ. ಮೈಸೂರು ವಿಶ್ವವಿದ್ಯಾಲಯ ಲಲಿತಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೪ರ ರಾಜ್ಯೋತ್ಸವ ಪ್ರಶಸ್ತಿ, ೧೯೯೩ರ ಸಾಲಿನ ‘ಕರ್ನಾಟಕ ಕಲಾ ತಿಲಕ’, ಮೈಸೂರು ಮಾರುತಿ ಸೇವಾ ಸಮಾಜದಿಂದ ‘ಗಾನ ಕಲಾನಿಪುಣ’, ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ ‘ಗಾನ ಕಲಾ ಭೂಷಣ’ ಇತ್ಯಾದಿ ಪ್ರಶಸ್ತಿಗಳಿಂದ ಸತ್ಕೃತರಾಗಿರುವ ಶ್ರೀಯುತರು ಇಂದಿಗೂ ಶಿಷ್ಯರಿಗೆ ತರಬೇತಿ ನೀಡುತ್ತಾ ತಮ್ಮ ಸಂಗೀತ ಸೇವೆಯನ್ನು ನಡೆಸುತ್ತಿದ್ದಾರೆ.