೧೯೩೦ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜನಿಸಿದ ಶ್ರೀ ಶಂಕರನಾರಾಯಣರಾವ್ ಅವರು, ತಮ್ಮ ಶಾಲಾ ದಿನಗಳಲ್ಲಿಯೇ ನೃತ್ಯ ಹಾಗೂ ನಾಟಕಗಳಲ್ಲಿ ಭಾಗವಹಿಸುತ್ತಾ ಈ ಕಲೆಯೆಡೆಗೆ ಆಸಕ್ತಿ ಬೆಳೆಸಿಕೊಂಡವರು. ಕಥಕ್ ನೃತ್ಯಪಟು ಲಕ್ಷ್ಮಣ ಕದಂ ಮತ್ತು ಸೋಹನ್ ಲಾಲ್ ಅವರಲ್ಲಿ ಕಥಕ್ ನೃತ್ಯಾಭ್ಯಾಸ, ರಾಜಾಮಣಿಚಂದ್ರ ಹಾಗೂ ನಟುವಾನರ್ ಶ್ರೀ ಎನ್. ಗುಂಡಪ್ಪ ಅವರಲ್ಲಿ ಭರತನಾಟ್ಯ ಹಾಗೂ ಪರಮೇಶ್ವರ ವಾರಿಯರ್ ಅವರಲ್ಲಿ ಕಥಕ್ಕಳಿ ಅಭ್ಯಾಸ ಮಾಡಿದ ಶ್ರೀಯುತರು ೧೯೫೪ರಲ್ಲಿ ತಮ್ಮದೇ ಆದ ಶ್ರೀ ಮಹಾಲಕ್ಷ್ಮೀ ನಾಟ್ಯ ಶಾಲೆಯನ್ನು ಪ್ರಾರಂಭಿಸಿದರು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಯುವ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿರುವ ಶ್ರೀ. ಶಂಕರನಾರಾಯಣರಾವ್ ಅವರು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಕಳೆದ ೪೫ ವರ್ಷಗಳಿಂದಲೂ ವೃತ್ತಿ ಕಲಾವಿದರಾಗಿ ಕಲಾಸೇವೆ ಮಾಡುತ್ತಾ ಬಂದಿರುವ ಶ್ರೀಯುತರಿಗೆ ೧೯೯೮-೯೯ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿವೆ.