ಸಂಗೀತಕ್ಕೆ ಹೆಸರಾದ ಮನೆತನದಲ್ಲಿ ೧-೭-೧೯೧೯ ರಂದು ಜನಿಸಿದ ಕೃಷ್ಣಪ್ಪನವರ ತಂದೆ ಬಿ. ಎಸ್‌. ರಾಮಯ್ಯ. ಡಾ|| ಬಿ. ದೇವೇಂದ್ರಪ್ಪ ಮತ್ತು ಬಿ. ಶೇಷಪ್ಪ ಹಿರಿಯ ಸೋದರರು. ತಂದೆ-ಸೋದರರಿಂದಲೇ ಸಂಗೀತದಲ್ಲಿ ಉತ್ತಮ ಶಿಕ್ಷಣ ಪಡೆದು ವಿದ್ವಾಂಸರಾದರು.

ಶಿವಮೊಗ್ಗ ಜಿಲ್ಲೆಯ ನ್ಯಾಮತಿಯಲ್ಲಿ ಜನಿಸಿದ್ದ ಕೃಷ್ಣಪ್ಪ ಸೋದರ ಶೇಷಪ್ಪನವರೊಡನೆ ಶಿವಮೊಗ್ಗೆಯಲ್ಲಿ ಕಛೇರಿ ನೀಡಿದಾಗ ಅಲ್ಲಿನ ಶ್ರೋತೃ ವೃಂದ ಇವರನ್ನು ‘ಶಿವಮೊಗ್ಗ ಸೋದರ’ರೆಂದೇ ಆದರಿಸಿದರು. ಹಿರಿಯ ಸೋದರ ಬಿ. ದೇವೇಂದ್ರಪ್ಪನವರೊಡನೆಯೂ ತಮಿಳುನಾಡು, ಆಂಧ್ರ ಪ್ರದೇಶಗಳ ಹಲವೆಡೆ ಯುಗಳ ಗಾಯನ ಮಾಡಿರುತ್ತಾರೆ. ಮೈಸೂರು ವಿಶ್ವವಿದ್ಯಾಲಯಲಕ್ಕೆ ಸೇರಿದ ಮಹಾರಾಣಿ ಕಾಲೇಜಿನಲ್ಲೂ, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲೂ ಅಧ್ಯಾಪಕರಾಗಿ ಕಾಲು ಶತಮಾನಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿರುತ್ತಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ಸ್ನಾತಕೋತ್ತರ ಪದವಿಯ ತರಗತಿಗಳಿಗೂ ಹಲವಾರು ವರ್ಷಗಳು ಪಾಠ ಮಾಡಿದ್ದಾರೆ. ಕರ್ನಾಟಕ ಹಾಗೂ ಕೇರಳ ವಿಶ್ವವಿದ್ಯಾಲಯಗಳ ಸಂಗೀತ ಪರೀಕ್ಷಾ ಮಂಡಲಿಗಳ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಗಾಯನ ಆಕಾಶವಾಣಿಯ ಮೂಲಕ ಪ್ರಸಾರವಾಗಿದೆ.

ಮೈಸೂರಿನ ಹನುಮಜ್ಜಂತಿಯ ‘ಗಾನ ಕಲಾರತ್ನ’, ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’, ‘ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಸನ್ಮಾನಗಳನ್ನು , ಅನೇಕ ಸಂಘ-ಸಂಸ್ಥೆಗಳಿಂದ ಗೌರವವನ್ನೂ ಶ್ರೀಯುತರು ಪಡೆದಿರುತ್ತಾರೆ. ಕೃಷ್ಣಪ್ಪನವರು ಕಛೇರಿ ನೀಡದ ಸಂಸ್ಥೆಯೇ ಇಲ್ಲವೆನ್ನಬಹುದು.

ನಮ್ಮ ನಾಡಿನ ಹಿರಿಯ ವಿದ್ವನ್ಮಣಿಗಳ ಸಾಲಿಗೆ ಸೇರುವ ಕೃಷ್ಣಪ್ಪನವರು ತಮ್ಮ ಮನೆತನದ ಹಾಗೂ ಪರಂಪರೆಯ ಧವಳ ಕೀರ್ತಿಯನ್ನು ಮೆರೆಸಿ ಕೀರ್ತಿಶೇಷರಾಗಿದ್ದಾರೆ.