೭-೧-೧೯೪೯ ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಚಂದ್ರಮೌಳಿಯವರ ತಾಯಿ ಸಂಗೀತ ವಿದುಷಿ ರಾಜಮ್ಮ ಕೇಶವಮೂರ್ತಿ. ಸಿ.ಕೆ. ಅಯ್ಯಾಮಣಿ ಅಯ್ಯರ್ ಅವರಲ್ಲಿ ಮೃದಂಗ ಶಿಕ್ಷಣವನ್ನು  ಆರಂಭಿಸಿದ ಶ್ರೀಯುತರು ಕೆ.ಎಸ್‌. ಗೋವಿಂದರಾವ್‌ ಅವರಲ್ಲಿ ಮುಂದುವರೆಸಿದರು. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಪಡೆದ ಅವಧಿಯಲ್ಲಿ ಪಾಲ್ಘಾಟ್‌ ರಘು ಅವರ ಮಾರ್ಗದರ್ಶನದಲ್ಲಿ ಸತತ ಸಾಧನೆ, ಪರಿಶ್ರಮಗಳಿಂದ ತಮ್ಮ ವಾದನದಲ್ಲಿ ಪರಿಣತಿ ಹೊಂದಿದರು. ಖಂಜರಿ ವಾದನದಲ್ಲೂ, ಕೊನಗೋಲು ಹೇಳುವುದರಲ್ಲೂ ನಿಷ್ಣಾತರು.

ರಾಜ್ಯದ ಹಾಗೂ ಹೊರ ರಾಜ್ಯಗಳ ಹಲವಾರು ಸಭೆ-ಸಂಸ್ಥೆಗಳಲ್ಲಿಯೂ ಉತ್ಸವಗಳಲ್ಲಿಯೂ, ಕ್ಷೇತ್ರದ ಹಿರಿಯ ಕಿರಿಯ ವಿದ್ವಾಂಸರನೇಕರಿಗೆ ಖಂಜರಿ – ಮೃದಂಗ ವಾದನಗಳಲ್ಲಿ ಸಹಕರಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಿಂದಲೂ ಇವರ ವಾದನ ಪ್ರಸಾರವಾಗುತ್ತಿರುತ್ತದೆ. ಟಿ.ಆರ್. ಮಹಾಲಿಂಗಂ, ಸಿ.ಎಂ. ಮಧುರಾನಾಥ್‌,ಆರ್. ರಾಮಕೃಷ್ಣನ್‌, ಶ್ರೀಮತಿ ವಿಜಯಾರಾವ್‌ ಮುಂತಾದವರೊಡನೆ ಕೆನಡಾ, ಯೂರೋಪ್‌ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ಅನೇಕ ನೃತ್ಯ ಪಟುಗಳಿಗೆ ತಮ್ಮ ಮೃದಂಗ ವಾದ್ಯದ ಸಹಕಾರ ನೀಡಿರುತ್ತಾರೆ.

ಕರ್ನಾಟಕ ಗಾನಕಲಾ ಪರಿಷತ್ತು, ಮಲ್ಲೇಶ್ವರಂ ಸಂಗೀತ ಸಭಾ, ಶ್ರೀ ತ್ಯಾಗರಾಜ ಗಾನಸಭಾ, ಶ್ರೀ ಪುರಂದರದಾಸರ ಆರಾಧನಾ ಸಮಿತಿ, ಅನನ್ಯ ಮುಂತಾದ ಸಂಗೀತ ಸಂಸ್ಥೆಗಳಲ್ಲಿ ವಿವಿಧ ಪದವಿಗಳನ್ನು ಹೊಂದಿ ಸೇವೆ ಸಲ್ಲಿಸಿರುತ್ತಾರೆ. ಮೂಕಾಂಭಿಕಾ ತಾಳ ವಾದ್ಯ ಸಂಗೀತ ಶಾಲೆ ಇವರ ಕಾರ್ಯಕ್ಷೇತ್ರ, ಲಯ ಮಿಲನ ತಾಳವಾದ್ಯ ತಂಡವನ್ನು ಸಂಘಟಿಸಿ ತನ್ಮೂಲಕ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ನಿರ್ದೇಶಿಸಿ ಪ್ರಸ್ತುತ ಪಡಿಸಿರುತ್ತಾರೆ.

‘ಶೃತಿಲಯ ಸಂವಾದಕ’, ‘ಲಯ ವಾದ್ಯ ರತ್ನ’, ‘ಲಯವಾದ್ಯ ನಿಪುಣ’, ‘ಕಲಾರಾಧನ ಶ್ರೀ’, ‘ಹರಿದಾಸ ಪ್ರಶಸ್ತಿ’ ಮುಂತಾದ ಹಲವಾರು ಸನ್ಮಾನಗಳೊಡನೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಇವರಿಗೆ ಲಭಿಸಿದೆ.