೧೯೫೭ರಲ್ಲಿ ಜನಿಸಿದ ಕನ್ನಡಿಗ ಚಂದ್ರಶೇಖರ್ ಸಣ್ಣ ವಯಸ್ಸಿನಿಂದಲೇ ತಮ್ಮ ಆಗಾಧ ಪ್ರತಿಭೆಯಿಂದ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರುವವರು. ಅವರ ತಂದೆ ಬಿ.ಎಸ್‌. ಕೃಷ್ಣಮೂರ್ತಿಯವರು ತಮ್ಮ ಪುತ್ರನಿಗೆ ಗಾಯನ ಹಾಗೂ ಪಿಟೀಲು ವಾದನದಲ್ಲಿ ತರಬೇತಿ ನೀಡಿದರು. ೧೯೮೦ರ ದಶಕದಲ್ಲಿ ಭಾರತೀಯ ವಿದ್ಯಾ ಭವನದ ಲಂಡನ್ನಿನ ಶಾಖೆಯಲ್ಲಿ ಪಿಟೀಲು ಶಿಕ್ಷಕರಾಗಿ ಸೇವೆಯಲ್ಲಿ ನಿರತರಾದ ಚಂದ್ರಶೇಖರ್ ಸಹೃದಯ ಸರಳ ವ್ಯಕ್ತಿ.

ತಮ್ಮ ಕ್ರಮಬದ್ಧವಾದ ಶಾಸ್ತ್ರೀಯ ಚೌಕಟ್ಟಿಗೆ ಇತರ ಪಾಶ್ಚಾತ್ಯ ಸಂಗೀತೋಪಕರಣಗಳನ್ನೂ ಸೇರಿಸಿ ಲೆಕ್ಕವಿಲ್ಲದಷ್ಟು ಉತ್ತಮ ಸಂಯೋಜನೆಗಳನ್ನು ಮಾಡಿರುವ ಅತ್ಯಂತ ಕ್ರಿಯಾಶೀಲರು. ಭಾರತ-ಲಂಡನ್‌ ನಡುವಿನ ಸಾಂಸ್ಕೃತಿಕ ರಾಯಭಾರಿಯೆನ್ನುವಷ್ಟು ಹಿರಿದಾದುದು ಅವರ ಕೊಡುಗೆ.

ಭಾರತದಲ್ಲಿ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇವರ ಸಂಗೀತ ಸಂಯೋಜನೆಯ ವೇದಿಕೆ ಕಾರ್ಯಕ್ರಮಗಳು ದೃಶ್ಯವಾಗಿಯೂ ಶ್ರವ್ಯವಾಗಿಯೂ ಧ್ವನಿಸುರುಳಿಗಳಾಗಿ ಹೊರ ಬಂದಿವೆ. ಎಲ್ಲರೊಡನೆಯೂ ಸಹಜವಾಗಿ ಉತ್ತಮ ವ್ಯಕ್ತಿಗತ ಸಂಪಕರ್ಲವಿರಿಸಿಕೊಳ್ಳುವ ಸ್ನೇಹ ಶೀಲ. ಭಾರತದಿಂದ ಅದರಲ್ಲೂ ಕರ್ನಾಟಕದಿಂದ ಪ್ರವಾಸ ಹೋದ ಕಲಾವಿದರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಿ ಅವರ ಯಶಸ್ಸಿಗೆ ಕಾರಣರಾಗುವಂತಹ ಸಜ್ಜನಿಕೆ ತುಂಬಿದ ಚಂದ್ರಶೇಖರ್ ೨೦೦೦-೨೦೦೧ ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾರೆ.