ವಿದ್ವಾನ್‌ ಬಿ.ಕೆ. ಪದ್ಮನಾಭರಾಯರು ೧೯೦೩ರ ಅನಂತ ಚತುರ್ದಶಿಯಂದು ಚಿತ್ರದುರ್ಗದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಬಂಗ್ಲೆ ಕೃಷ್ಣರಾವ್‌ ಪದ್ಮನಾಭರಾವ್‌, ಮೈಸೂರಿನಲ್ಲಿ ಖ್ಯಾತ ವಕೀಲರೆಂದು ಪ್ರಸಿದ್ಧರಾಗಿದ್ದ ಬಂಗ್ಲೆ ಕೃಷ್ಣರಾಯರ ಮತ್ತು ರಖುಮಾಬಾಯಿಯವರ ಏಕಮಾತ್ರ ಸುಪುತ್ರರು ಇವರು. ತಂದೆ ಕೃಷ್ಣರಾಯರು ಸುಸಂಸ್ಕೃತರು, ಶಿಸ್ತಿನ ಜೀವನಕ್ಕೆ ಹೆಸರಾದವರು. ಹೀಗೆ ಪದ್ಮನಾಭರಾಯರದು ಶ್ರೀಮಂತ ಮನೆತನ. ಅಲ್ಲದೆ ತಂದೆಯವರು ನಾಲ್ವಡಿ ಕೃಷ್ಣರಾಜ ಒಡೆಯರ ವಿಶ್ವಾಸ ಗಳಿಸಿದ್ದವರು.

ಪದ್ಮನಾಭರಾಯರು ಎಂಟ್ರೆನ್ಸ್‌ (Entrance) ಪರೀಕ್ಷೆಯವರೆವಿಗೂ ವ್ಯಾಸಂಗ ಮಾಡಿದ್ದರು. ಮೈಸೂರಿನ ಇನ್ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ (Institute of Music) ನಲ್ಲೂ ಅಧ್ಯಯನ ಮಾಡಿದ್ದರು. ಅಲ್ಲದೆ ಅರಮನೆಯ ಚಂದ್ರಶಾಲೆಯಲ್ಲಿ ಸಂಗೀತವನ್ನು ಕಲಿಯುವಲ್ಲಿ ಇವರಿಗೆ ವೀಣಾ ಶಿವರಾಮಯ್ಯನವರಿಂದಲೇ ಪ್ರಾರಂಭಿಕ ಶಿಕ್ಷಣ ದೊರೆತುದು ಮತ್ತು ಅನೇಕ ಕೃತಿಗಳನ್ನೂ ಶಿವರಾಮಯ್ಯನವರಿಂದ ಕಲಿತು ಶಿವರಾಮಯ್ಯನವರ ಹಿರಿಯ ಶಿಷ್ಯರಲ್ಲೊಬ್ಬರಾದರು. ಅನಂತರ ಮೈಸೂರು ಕೆ. ವಾಸುದೇವಾಚಾರ್ಯರಿಂದ ಪ್ರೌಢ ಶಿಕ್ಷಣವನ್ನು ಪಡೆದು ಆಚಾರ್ಯ ಪಟ್ಟ ಶಿಷ್ಯರೆನಿಸಿದ್ದರು. ಪದ್ಮನಾಭರಾಯರು ಪಡೆದಿದ್ದ ಚಂದ್ರಶಾಲೆಯ ಇತರ ಗುರುಗಳು ವೀಣಾ ಸುಬ್ಬಣ್ಣ, ಮುತ್ತಯ್ಯ ಭಾಗವತರ್, ಚಿಕ್ಕರಾಮರಾಯರು ಚೆನ್ನಕೇಶವಯ್ಯನವರು ಮತ್ತು ಸ್ವರಮೂರ್ತಿ ವಿ.ಎನ್‌.ರಾವ್‌ ಅವರುಗಳು ಪದ್ಮನಾಭರಾಯರ ಸಂಗೀತ ಸಹಪಾಠಿಗಳು. ಇವರುಗಳಲ್ಲಿ ಲಯಶುದ್ಧತೆ ಕಾಲ ಪ್ರಮಾಣದ ಖಚಿತತೆ ಎಷ್ಟಿತ್ತೆಂದರೆ, ಪದ್ಮನಾಭರಾಯರು ಚೆನ್ನಕೇಶವಯ್ಯನವರು ಒಂದು ರಚನೆಯನ್ನು ಬೇರೆ ಬೇರೆ ಕೊಠಡಿಗಳಲ್ಲಿ ಕುಳಿತು ಹಾಡಿಕೊಳ್ಳುತ್ತಿದ್ದರೂ ಕೃತಿಯ ಆರಂಭ, ಮುಕ್ತಾಯ ಒಂದೇ ವೇಳೆಗೆ ನಿಖರವಾಗಿ ಮುಗಿಯುತ್ತಿತ್ತೆಂದು ಅವರನ್ನು ಬಲ್ಲವರು ಹೇಳುವ ನುಡಿ.

ಕಲಾಸಾಧನೆ ಹಾಗೂ ನಿಸ್ವಾರ್ಥ ವಿದ್ಯಾದಾನ: ಬಾಲ್ಯದಿಂದಲೂ ಐಹಿಕ ಸುಖಗಳಿಗೆ ದೂರವಾಗೇ ಉಳಿದುಕೊಂಡ ಇವರಿಗೆ ಸಂಗೀತ ಪಾರಮಾರ್ಥಿಕದತ್ತಲೇ ಆಸಕ್ತಿ ಒಲವು ಹೆಚ್ಚಾಗಿತ್ತು.  ಲಕ್ಷ್ಮೀ ಸರಸ್ವತಿ ಇಬ್ಬರ ಕೃಪೆಯೂ ಇವರತ್ತಲಿದ್ದರೂ ಸಂಗೀತಕ್ಕಾಗಿ ತಮ್ಮ ಜೀವಿತವನ್ನು ಮುಡಿಪಾಗಿಟ್ಟು, ಜೀವಿತದಲ್ಲಿ ಕಡೆಯ ತನಕ ಸರಳತೆಗೇ ಆದ್ಯತೆ ನೀಡಿದ್ದರು. ಸಂಗೀತವೇ ಅವರ ಉಸಿರಾಗಿ, ಧಾರ್ಮಿಕತೆ, ಸಂಗೀತ ಕಲಾವಂತಿಕೆಗಳೇ ಅವರ ಕಲಾನೇತ್ರಗಳ ನೇರದೃಷ್ಟಿಯಾಗಿತ್ತೆಂದರೆ ಉತ್ಪ್ರೇಕ್ಷೆಯ ಮಾತಲ್ಲ.

ರಾಯರು ಶ್ರದ್ಧಾಭಕ್ತಿಯಿಂದ ಸತತ ಅಭ್ಯಾಸ ಮಾಡಿ ಸಂಗೀತದಲ್ಲಿ ವಿಶೇಷವಾದ ವಿದ್ವತ್ತು, ಪಾಂಡಿತ್ಯವನ್ನು ಗಳಿಸಿಕೊಂಡಿದ್ದರು. ಮೈಸೂರು ಆಕಾಶವಾಣಿ ಮತ್ತು ಮದ್ರಾಸ್‌ ಆಕಾಶವಾಣಿಯಿಂದ ಇವರ ಕಚೇರಿಗಳು ಅನೇಕ ಕಾಲ ಪ್ರಸಾರವಾಗುತ್ತಿತ್ತು. ಅಂತೆಯೇ ತಾವು ಕಲಿತಿದುದನ್ನು ಉದಾರವಾಗಿ ಶಿಷ್ಯರಿಗೆ ಪ್ರೀತಿಯಿಂದ ಕಲಿಸಿ ಅಪಾರ ಶಿಷ್ಯ ಸಂಪತ್ತು ಪಡೆದ ಹೆಗ್ಗಳಿಕೆ ಇವರದಾಗಿತ್ತು. ಯಾವ ಶಿಷ್ಯರಿಂದ ಚಿಕ್ಕ ಕಾಸನ್ನೂ ಶಿಷ್ಯಾಶುಲ್ಕವಾಗಿ ಪಡೆಯದಿದ್ದ ಶ್ರೇಷ್ಠ ವ್ಯಕ್ತಿತ್ವ. ಕಾಸು ಪಡೆಯದ ಮಾತ್ರಕ್ಕೇ ಪಾಠಕ್ರಮದ ಬಗ್ಗೆ ಚಕಾರ ಎತ್ತುವಂತಿರಲಿಲ್ಲ. ಶಿಸ್ತು-ನಿಯಮಗಳು ಎಲ್ಲ ಶಿಷ್ಯರಿಗೂ ಕಡ್ಡಾಯ. ಅವಶ್ಯಕವೆನಿಸಿದಾಗ ಶಿಷ್ಯರ, ಶಿಷ್ಯರ ಮನೆಯವರ ‘ಲಗ್ನ’ ಮುಂತಾದ ಕಾರ್ಯಾದಿಗಳಲ್ಲಿ ಅನೇಕ ತೆರನಾದ ಸಹಾಯ ಹಸ್ತ ನೀಡುತ್ತಿದದ ಮೃದು ಹೃದಯವಂತಿಕೆ. ಕಲಿಯಲು ಆಸೆಯಿಂದ ಬಂದ ಎಲ್ಲ ವಿದ್ಯಾರ್ಥಿಗಳೂ, ಬಡವ, ಬಲ್ಲಿದ ಭೇದವಿಲ್ಲದೆ ಆಸ್ಥೆಯಿಂದ ಶಿಕ್ಷಣ ನೀಡಿ ವಿದ್ವಾಂಸರನ್ನಾಗಿಸಿ, ಕಲೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಮಟ್ಟಕ್ಕೆ ಬೋಧಿಸುತ್ತಿದ್ದ ಸಹನಾಮಯಿ. ಜೀವನ ನಿರ್ವಹಣೆಗಾಗಿ ಅವರು ಸಂಗೀಥವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇರಲಿಲ್ಲ. ರಾಯರ ೫೫ನೇ ವರುಷದ ತನಕವೂ ಕೃಷ್ಣರಾವ್‌ ಅವರೇ ಸಂಸಾರಿಕ ಜವಾಬ್ದಾರಿ ವಹಿಸಿಕೊಂಡಿದ್ದುದು, ಇವರ ಸಂಗೀತ ಶಾರದೆಯ ಪೂಜೆ, ಧ್ಯಾನಕ್ಕೆ ಒಂದು ರೀತಿ ಪರವೇ ಆಗಿತ್ತು. ತಂಬೂರಿಯ ತಯಾರಿಕೆಗೆ ಪ್ರಸಿದ್ಧವಾಗಿದ್ದ ಮಾಗಡಿಯಿಂದ ಒಮ್ಮೆಲೇ ಅನೇಕ ತಂಬೂರಿಗಳನ್ನು ಶಿಷ್ಯರಿಗಾಗಿ ಮಾಡಿಸಿ, ಶಿಷ್ಯರಿಗೆ ಆಶೀರ್ವಾದ ಪೂರ್ವಕವಾಗಿ ಅಭ್ಯಾಸಕ್ಕೆ ನೀಡುತ್ತಿದ್ದರು. ಹೀಗೆ ಅಪಾರ ಶಿಷ್ಯಕೋಟಿ ಪಡೆದಿದ್ದ ರಾಯರು ಉತ್ತಮ ಮಟ್ಟದ ಶಿಷ್ಯ ಕುಸುಮಗಳನ್ನು ಸಂಗೀತ ಶಾರದೆಗೆ ಅರ್ಪಿಸಿದ್ದಾರೆ. ಅವರಲ್ಲಿ ಟಿ.ಆರ್. ಗೋಪಾಲನ್‌, ಪಾಲಘಾಟ್‌ ಸುಬ್ರಹ್ಮಣ್ಯ ಅಯ್ಯರ್, ಎಚ್‌.ಟಿ. ರಾಮಸ್ವಾಮಿ, ವೆಂಕಟರಾಂ, ಪಿ.ಎಸ್‌. ಕುಮಾರಸ್ವಾಮಿ ಹಾಗೂ ಮಹಿಳಾ ಶಿಷ್ಯರುಗಳಲ್ಲಿ ಎಸ್‌.ಬಿ. ಶ್ರೀರಂಗಮ್ಮ, ಎಸ್‌.ರಮಾ, ಆರ್. ತಾರ, ಪದ್ಮ (ಪದ್ಮ ಎಚ್‌.ಎಸ್‌.ಮೂರ್ತಿ), ವಸಂತ ರಾಮಾನುಜಂ, ಪಿ.ಎಸ್‌. ವಸಂತ ಮೊದಲಾದವರು ಪ್ರಮುಖರು. ಇವರ ಅನೇಕ ಶಿಷ್ಯರು ಉನ್ನತ ಹುದ್ದೆಗಳಲ್ಲೂ ವೇದಿಕೆಗಳಲ್ಲಿ ಹಿರಿಯ ಕಲಾವಿದರೆಂದು ಪ್ರಸಿದ್ಧರಾಗಿದ್ದಾರೆ. ಇದಕ್ಕೆ ಇವರ ಶಿಷ್ಯರು ಹೇಳಿರುವಂತೆ ಎರಡು ಪ್ರಮುಖ ಕಾರಣಗಳೆಂದರೆ  ೧. ಸಂಗೀತದ ಕಲಿಕೆಯಲ್ಲಿ ಶಿಷ್ಯರನ್ನು ಶಿಸ್ತಿಗೆ ಒಳಪಡಿಸುತ್ತಿದ್ದುದಲ್ಲದೆ, ಶಿಷ್ಯರ ನಡೆ ನುಡಿಗಳಲ್ಲೂ ಇದನ್ನೇ ಅನುಸರಿಸಲು ನೀಡುತ್ತಿದ್ದ ಕ್ರಮ. ದೈವಾನುಗ್ರಹದಿಂದ ಶಿಷ್ಯರೂ ಇವರಿಗೆ ವಿಧೇಯರಾಗಿರುತ್ತಿದ್ದುದೂ ವಿಶೇಷವೇ. ಸಂಗೀತದಲ್ಲಿ ರಾಗ, ಭಾವ, ತಾಳ(ಲಯ)ಗಳು ಪ್ರಮುಖವಾದ ಅಂಶಗಳು. ಅವುಗಳಿಗೆ ರಾಯರು ಬಹಳ ಮಹತ್ವವನ್ನು ಇತ್ತು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಹಾಗೆಯೇ ಶಿಷ್ಯರಿಗೂ ಕಡ್ಡಾಯವಾಗಿ ಇದನ್ನೇ ಅಭ್ಯಾಸ ಮಾಡಿಸುತ್ತಿದ್ದರು. ಪಾಠ ಮಾಡುವಾಗ ತಾವೇ ಖಂಜರಿಯನ್ನು ಹಿಡಿದು ನುಡಿಸುತ್ತಾ ಸಂಗೀತದಲ್ಲಿ ಲಯಕ್ಕಿರುವ ಬೆಸುಗೆ ಶಿಷ್ಯರಿಗೆ ಪರಿಚಯಿಸುತ್ತಿದ್ದರು. ಅಂತೆಯೇ ಹಾಡುವಾಗ ತಾಳಹಾಕುವ ಪರಿ, ತಾಳ ಹಾಕುವಾಗ ಪೆಟ್ಟು, ಬೆರಳುಗಳು ಇರಬೇಕಾದ ನಿರ್ದಿಷ್ಟ ಜಾಗ, ಬಾಯಿಬಿಡಬೇಕಾದ ರೀತಿ ಹಾಗೂ ಉಸಿರು ತೆಗೆದುಕೊಳ್ಳುವ ಕ್ರಮವನ್ನು ನಿರ್ದಿಷ್ಟವಾಗಿ ಶಿಷ್ಯರಿಗೆ ತಿಳಿಸುತ್ತಾ ತಿದ್ದುತ್ತಿದ್ದರು.

ರಾಯರು “ಸಂಗೀತವನ್ನು ದೈವ ಸಾಕ್ಷಾತ್ಕಾರಕ್ಕಾಗಿಯೇ” ಎಂದು ಭಾವಿಸಿದ್ದರಿಂದ ಇವರು ಹಾಡುವಗ ಒಮ್ಮೆಮ್ಮೆ ಕಣ್ಣೀರು ಉಕ್ಕಿ ಹರಿಯುತ್ತಿದ್ದುದನ್ನು ಕಂಡು ವಿಸ್ಮಿತರಾದ ಶಿಷ್ಯರಿದ್ದಾರೆ. ಹಾಡಿನ ರಚನೆಯ ಸಾಹಿತ್ಯರ್ಥ, ರಾಗ, ಭಾವವನ್ನು ವಿವರಿಸುವಾಗ ಅವರ ಮನಸ್ಸು ಅದರೊಳಗೆ ಕರಗಿ, ಶಿಷ್ಯರಿಗೂ ಆ ಭಾವದಲ್ಲೇ ಮಿಂದ ಅನುಭವವುಂಟು ಮಾಡುತ್ತಿದ್ದ ವಿಶೇಷ ಪರಿ ಇವರದಾಗಿತ್ತು. ಸರಳೆಯಿಂದ ಮೊದಲ್ಗೊಂಡು ಪ್ರೌಢಪಾಠವಾದ ರಾಗಾಲಾಪನೆ, ಸ್ವರಕಲ್ಪನೆ, ತಾಳ, ಪಲ್ಲವಿಯ ಪಾಠಗಳ ತನಕವೂ ಸ್ವತಃ ತಾವೇ ಪ್ರತಿಯೊಬ್ಬರಿಗೂ ಪಾಠ ಮಾಡುತ್ತಿದ್ದದು ವಿಶೇಷತೆ. ಒಂದು ದಿನವೂ ಬೇರೊಬ್ಬ ಶಿಷ್ಯರಿಂದ ಪಾಠ ಹೇಳಿಸಿದವರಲ್ಲ. ಅಂತೆಯೇ ಪ್ರತಿ ಶಿಷ್ಯರ ವಿನಿಕೆಯನ್ನೂ ಪೂರ್ಣವಾಗಿ ಕೇಳಿ ಅವಶ್ಯವಿದ್ದೆಡೆಯಲ್ಲೆಲ್ಲಾ, ಅಲ್ಲಲ್ಲೇ ತಿದ್ದಿ ಓರಣಗೊಳಿಸುತ್ತಿದ್ದ ತಾಳ್ಮೆ ಇವರದು. ಬೆಳಿಗ್ಗೆ ಎಂಟರಿಂದ ಸಾಮಾನ್ಯವಾಗಿ ಮಧ್ಯರಾತ್ರಿಯವರೆಗೆ ರಾಯರ ಮನೆಯಿಂದ ತಂಬೂರಿಯ ಝೇಂಕಾರ ಸಂಗೀತ ಪಾಠದ ಸುಧೆ ಅಲೆ ಅಲೆಯಾಗಿ ಹೊರ ಬರುತ್ತಿದ್ದುದು ಗಮನಾರ್ಹ. ಶಿಷ್ಯರನ್ನು ಸ್ವೀಕರಿಸುವಾಗ ಅವರನ್ನು ಪರೀಕ್ಷಿಸುತ್ತಿದ್ದರು. ಸಂಗೀತದಲ್ಲಿ ಆಸಕ್ತಿ, ಶ್ರದ್ಧೆ, ಉಳ್ಳ ವಿದ್ಯಾರ್ಥಿಗಳಿಗೆ ನಿರ್ವಂಚನೆಯಿಂದ ತಮ್ಮೆಲ್ಲ ಸಾಧನೆಯ ಸಂಪತ್ತನ್ನೂ ಸಂತೋಷವಾಗಿ ಧಾರೆಯೆರೆಯುತ್ತಿದ್ದರು. ಅವರ ಮನೆಯಲ್ಲಿ ಘನವಾದ ೭-೮ ತಂಬೂರಿಗಳಿದ್ದವು. ಶಿಷ್ಯರ ಅಭ್ಯಾಸಕ್ಕಾಗಿ ಕೆಲವು ಕೊಠಡಿಗಳಿದ್ದು, ಅನೇಕ ವೇಳೆ ಶಿಷ್ಯರ ಅಭ್ಯಾಸ ಸಾಧನೆಗಳೆಲ್ಲ ಗುರುಗಳ ಮನೆಯಲ್ಲೇ ಆಗುತ್ತಿತ್ತು. ಪಾಠ ಮಾಡುವಾಗ ವೇಳೆಯ, ಆಹಾರಾದಿಗಳ ಪರಿವೆಯಿಲ್ಲದೆ ಶಿಷ್ಯರೊಡನೆ ಕಲೆಯುತ್ತಿದ್ದರು. ಸ್ವರಗಳು ನಾಭಿಯಿಂದ ಪರಿಪೂರ್ಣವಾಗಿ ಹೊರಹೊಮ್ಮಿ, ತಾವು ಹೇಳಿಕೊಟ್ಟುದುದು ಶಿಷ್ಯರಿಗೆ ಚೆನ್ನಗಿ ಮನದಟ್ಟು ಮಾಡಿಸುವವರೆಗೂ ತಾವೂ ಅವರೊಡನೆ ಇದ್ದು ಗಮನಿಸಿಕೊಳ್ಳುತ್ತಿದ್ದ ಸಂಯಮಿ. ಕೆಲವು ಬಾರಿ ಪರೀಕ್ಷೆ ವೇಳೆಯಲ್ಲಿ ಶಿಷ್ಯರಿಗೆ ಹಾಲು, ಬಾದಾಮಿ, ಕಲ್ಲುಸಕ್ಕರೆಗಳನ್ನು ತರಿಸಿಕೊಟ್ಟು ಶಿಷ್ಯರ ಶಾರೀರದ ಬಗ್ಗೆ ಕಾಳಜಿ ವಹಿಸುತ್ತಿದ್ದರಂತೆ. ಇಷ್ಟೆಲ್ಲಾ ಶಿಷ್ಯರಿಗಾಗಿ ಮಾಡುತ್ತಿದ್ದ ಈ ಗುರು ಶಿಷ್ಯರಿಂದ ತನ್ನ ದಾನಕ್ಕೆ ಪ್ರತಿಯಾಗಿ ಬಯಸುತ್ತಿದುದಾದರೂ ಏನು? ಕೇವಲ ಕಲಿಕೆಯಲ್ಲಿ ಕಾತುರ, ಉತ್ಸಾಹ, ನಿಷ್ಠೆಗಳನ್ನು ಮಾತ್ರ.

ಸಂಗೀತ ಕೈಂಕರ್ಯ: ಲಕ್ಷ್ಯ-ಲಕ್ಷಣಗಳಲ್ಲಿ ಅಪಾರವಾಗಿ ಸಾಧನೆ ಮಾಡಿದ್ದ ರಾಯರು ಟಿ.ಚೌಡಯ್ಯನವರ ಪಿಟೀಲು ಹಾಗೂ ಟಿ.ಎಂ.ಪುಟ್ಟಸ್ವಾಮಯ್ಯ (ಮೂಗಯ್ಯ)ನವರ ಮೃದಂಗ ಜೋಡಿಯೊಂದಿಗೆ ನಡೆಸಿದ ಕಚೇರಿಗಳು ಅನೇಕ. ಸತತ ಸಾಧನೆ, ವಿದ್ಯಾದಾನ ಇವುಗಳೊಂದಿಗೆ, ಅನೇಕ ಸಂಗೀತ ಸಂಸ್ಥೆಗಳು, ಸಂಗೀತ ಉತ್ಸವಾದಿಗಳು, ಧಾರ್ಮಿಕ ಉತ್ಸವ, ಆರಾಧನೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶಾರದೆಯ ನಾದರಥ ಎಳೆಯುವಲ್ಲಿ ಕೈ ಜೋಡಿಸಿದ್ದವರು ರಾಯರು. ರಾಘವೇಂದ್ರಸ್ವಾಮಿಗಳಲ್ಲಿ ಅಚಲ ಭಕ್ತಿಯನ್ನು ಹೊಂದಿದ್ದ ರಾಯರು ಅನೇಕ ವೃಂದಾವನಗಳಿಗೆ ವಿವಿಧ ರೀತಿಯಲ್ಲಿ ಬಗೆಬಗೆಯ ಕಾಣಿಕೆಗಳಿತ್ತಿದ್ದರು. ಇವುಗಳಲ್ಲಿ ಮೈಸೂರು, ಮೂಗೂರು ಹಾಗೂ ಸೋಸಲೆ ಕ್ಷೇತ್ರಗಳು ಗಮನಾರ್ಹ. ಸೋಸಲೆಯ ಮಹಾಸಮಾರಾಧನೆಯಲ್ಲಿ ಸಂಪೂರ್ಣವಾಗಿ ಮೂರು ದಿನಗಳು ಇದ್ದು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದಲ್ಲದೆ ಅನೇಕ ವರ್ಷಗಳು ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು.

ವಾರ್ಷಿಕವಾಗಿ ತ್ಯಾಗರಾಜರ ಆರಾಧನೆ, ರಾಮೋತ್ಸವ, ಕೃಷ್ಣೋತ್ಸವಗಳನ್ನು ವಿಜೃಂಭಣೆಯಿಂದ ನಡೆಸುತ್ತಿದ್ದರು ಮತ್ತು ಪ್ರತಿ ಗುರುವಾರ, ಶನಿವಾರಗಳಂದು ಭಜನೆ ಕಾರ್ಯಕ್ರಮ ಪದ್ಧತಿಯನ್ನು ವಿಶೇಷವಾಗಿ ಹಮ್ಮಿಕೊಂಡಿದ್ದರು. ಭಜನೆ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಶಿಷ್ಯರು ಹಾಡುತ್ತಿದ್ದರು. ಭಜನೆ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಶಿಷ್ಯರು ಹಾಡುತ್ತಿದ್ದರು, ಒಮ್ಮೊಮ್ಮೆ ಅವರ ಮಿತ್ರಕಲಾವಿದರೂ ಹಾಡುತ್ತಿದ್ದುದುಂಟು. ಪಾಂಡಿತ್ಯ ದೃಷ್ಟಿಯಿಂದ ಅವರ ಭಜನೆ ಕಾರ್ಯಕ್ರಮದ ಪ್ರದರ್ಶನ ಕೇವಲ ಹೆಸರಿನ ರೀತಿ ಭಜನೆಯಾಗಿರದೆ ವಿದ್ವಾಂಸರ ಪಾಂಡಿತ್ಯಕ್ಕೆ ತಕ್ಕ ವೇದಿಕೆಯಾಗಿರುತ್ತಿತ್ತು. ಅಲ್ಲಿ ಹಾಡುವುದು, ನುಡಿಸುವುದೆಂದರೆ, “ಒಂದು ವಿಧದಲ್ಲಿ ರಸದೌತಣವಾದರೆ, ಮತ್ತೊಂದು ವಿಧದಲ್ಲಿ ನಾಡಿಮಿಡಿದು ನೋಡುವ ಪರೀಕ್ಷೆ” ಎಂಬಂತೆ ಕಲಾವಿದರ ಜವಾಬ್ದಾರಿಯ ದ್ಯೋತಕವಾಗಿರುತ್ತಿತ್ತೆಂಬುದು ಅನುಭವಿಗಳ ನುಡಿ. ಇದಕ್ಕಾಗಿ ಕೆಲವರು ವಿನೋದವಾಗಿ ಇದನ್ನು “ಪದ್ಮನಾಭರಾಯರ ಸಂಗೀತ ಅಕಾಡೆಮಿ” ಎಂದು ಹೆಮ್ಮೆಯಿಂದ ಹೇಳುತ್ತಿದ್ದದು, ರಾಯರಿಗೆ ಕಲೆಯಲ್ಲಿದ್ದ ನಿಷ್ಠೆಯ ಪ್ರತೀಕವಾಗಿದೆ. ಈ ಭಜನೆ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಸಿದ್ಧ ಹಿರಿಯ, ಕಿರಿಯ ಮಿತ್ರ ಕಲಾವಿದರುಗಳೇ ಅಲ್ಲದೆ ನೆರೆರಾಜ್ಯದಿಂದ ಬರುತ್ತಿದ್ದ ಪ್ರಸಿದ್ಧ ಕಲಾವಿದರುಗಳನೇಕರು-ಟೈಗರ್ ವರದಾಚಾರ್, ಅರಿಯಾಕ್ಕುಡಿ, ಶೆಮ್ಮಂಗುಡಿ, ಚೆಂಬೈ, ಮಧುರೆ ಮಣಿ ಅಯ್ಯರ್, ಜಿ.ಎನ್‌.ಬಿ., ಎಂ.ಡಿ. ರಾಮನಾಥನ್‌, ದಂಡಪಾಣಿ ದೇಶಿಕರ್‌ ಮೊದಲಾದವರುಗಳು ರಾಯರ ವಿಶ್ವಾಸ ಪೂರ್ವಕ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿ ತಮ್ಮ ಪಾಂಡಿತ್ಯ ಪೂರ್ಣ ಕಚೇರಿಗಳನ್ನು ನೀಡಿದ್ದಾರೆ.

ಇವರ ಈ ವಿಪರೀತವಾದ ಸಂಗೀತ ಹವ್ಯಾಸ (ಪಾಠ, ಕಚೇರಿ, ಭಜನೆ, ಉತ್ಸವಾದಿ)ಗಳ ಸಂಭ್ರಮಗಳು, ಮುಂತಾದುವು ತಂದೆಯವರ ಜೀವನ ಶಾಂತಿಗೆ ಅಷ್ಟಗಿ ಹೊಂದದ ಸಂದರ್ಭದಲ್ಲಿ ವಿನಯವಾಗಿ ತಮ್ಮ ಸಹೋದರಿಯರ ಮನೆಯಲ್ಲಿ ಅವರ ಮನೆಯವರ ನೆರವಿನಿಂದ ಸುಸೂತ್ರವಾಗಿ ನಿರ್ವಹಿಸುತ್ತಿದ್ದರು. ಅವರ ಮಾತಿಗೆ ಎದುರಾಡದೆ ರಾಯರು ಸರಳ ಜೀವನ, ಲೌಕಿಕದ ಆಕರ್ಷಣೆಗೆ ಬಾಗದ ರೀತಿ ನೀತಿ, ಪಾರಮಾರ್ಥಿಕ, ದೈವೀಕ ಹಾಗೂ ಸಂಗೀತಕ್ಕಾಗಿ ಮುಡಿಪಿಟ್ಟ ಈ ಕಲಾವಿದನಿಗೆ ದೊರತ ಬಾಳಸಂಗಾತಿ ಸ್ವಂತ ಸೋದರ ಸೊಸೆ (ಹಿರಿಯಕ್ಕನ ಮಗಳು ಶಕುಂತಲಾ ಬಾಯಿ) ಪತಿಯ ಜೀವನ ರೀತಿ ನೀತಿಗೆ ಉಸಿರೆತ್ತದೆ ಹೊಂದಿಕೊಂಡು ಬಾಳ್ವೆ ನಡೆಸಿದ ಸಹನಾಮಯಿ, ಛಾಯಾನುವರ್ತಿನಿ ಪತ್ನಿ ಕಮಲಾಬಾಯಿ (ಶಕುಂತಲಾ ಬಾಯಿ ತವರಿನ ಹೆಸರು) ಶಿಷ್ಯರ ಪಾಲಿಗಿಂತೀ ಮಹಾಮಾತೆ ಅನ್ನಪೂರ್ಣೇಶ್ವರಿ.

ಸಂಘ-ಸಂಸ್ಥೆಗಳಿಗೆ ಸಲ್ಲಿಸಿರುವ ಗಣನೀಯ ಸೇವೆ: (ಅ) ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಕಾರ್ಯದರ್ಶಿಗಳಾಗಿ ಅನೇಕ ವರ್ಷ ದುಡಿದರಲ್ಲದೆ ಎಂಟು ವಾರ್ಷಿಕ ಸಂಗೀತ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದವರು. ಸಮ್ಮೇಳನಾಧ್ಯಕ್ಷರಿಗೆ “ಗಾನಕಲಾ ಸಿಂಧು” ಬಿರುದು, ಖಿಲ್ಲತ್ತಿನ ಗೌರವಗಳು ಸಲ್ಲುತ್ತಿತ್ತು. ರಾಮಮಂದಿರದ ಮತ್ತೊಬ್ಬ ಕಾರ್ಯಕರ್ತರು ರಾಯರ ಮಿತ್ರರೂ ಆದ ಚೌಡಯ್ಯನವರು ಹಾಗೂ ಮತ್ತೆ ಕೆಲವರ ಅಗ್ರಹ ವಿಶ್ವಾಸ ಪೂರ್ವಕ ಒತ್ತಾಯಕ್ಕೆ ಮಣಿದು ೫ನೇ ಸಂಗೀತ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಪದವಿಗೆ ಒಪ್ಪಿ ದಕ್ಷತೆಯಿಂದ ನಿರ್ವಹಿಸಿದರು.

(ಆ) ಕಲಿಕೆಯು ಕೇವಲ ಶ್ರವ್ಯ ಮಟ್ಟದಲ್ಲೇ ಹರಿದರೆ ಸಾಲದು ಭವಿಷ್ಯತ್ತಿನಲ್ಲಿ ಭವ್ಯವಾಗಿ ಖಚಿತವಾದ ದಾಖಲಾತಿಯಾಗಿ ಉಳಿದು ಮುಂದಿನವರಿಗೆ ಸ್ಪಷ್ಟವಾಗಿ ತಲುಪಬೇಕೆಂಬ ಹಂಬಲದಿಂದ ವಾಸುದೇವಾಚಾರ್ಯರ ಅಧ್ಯಕ್ಷತೆಯಿಂದ ಮೂಡಿ ಬಂದ “ಕಲಾಭಿವರ್ಧಿನಿ ಸಭೆ” ರಾಯರ ಕಲ್ಪನೆಯ ಕೂಸು. ಈ ಸಭೆಯಿಂದ ಎರಡು ಅತ್ಯುತ್ತಮ ಗ್ರಂಥಗಳು ಪ್ರಕಟವಾಗಿದೆ.

೧. ಮೈಸೂರು ಸದಾಶಿವರಾಯರ ಕೃತಿಗಳು  ೨. ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರ ಕೃತಿಗಳು, ವಿದ್ವಾಂಸರಾದಿಯಾಗಿ, ರಸಿಕರಿಗೆ, ವಿದ್ಯಾರ್ಥಿಗಳಿಗೆ ಮೈಸೂರು ಸಂಗೀತದ ಸೌರಭವನ್ನು ಉಣಬಡಿಸಿದೆ.

ವಾಗ್ಗೇಯಕಾರರಾಗಿ ರಾಯರು: ಲಕ್ಷ್ಯ-ಲಕ್ಷಣಗಳಲ್ಲಿ ಆಳವಾದ ಪಾಂಡಿತ್ಯಪಡೆದಿದ್ದ ರಾಯರು ಸಂಗೀತ ಶಾರದೆಯ ಹಾಗೂ ಗುರುರಾಘವೇಂದ್ರರ ಅನುಗ್ರಹದಿಂದ ಉತ್ತಮ ವಾಗ್ಗೇಯಕಾರರಾಗಿ ಅನೇಕ ರಚನೆಗಳನ್ನು “ಪದ್ಮಜಾರ್ಚಿತ” ಅಂಕಿತದಿಂದ ರಚಿಸಿರುವರು. ಇವರಿಗೆ “ದೇವ ಗಾಂಧಾರಿ” ರಾಗ ಹಾಗೂ “ಕ್ಷೀರಸಾಗರ” ಕೃತಿಯಲ್ಲಿ ಬಹಳ ಪ್ರೀತಿಯಿತ್ತೆಂದೂ ಅಂತೆಯೇ ‘ಹುಸೇನಿ’ ರಾಗ ಮತ್ತೊಂದು ಪ್ರೀತಿ ಪಾತ್ರವಾದ ರಾಗವಾಗಿತ್ತೆಂದು ತಿಳಿದುಬರುತ್ತದೆ.

ಮದ್ರಾಸಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತಿದ್ದ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಸಂಗೀತ ಸಮ್ಮೇಳನಕ್ಕೆ ಪ್ರತಿ ವರ್ಷವೂ ತಪ್ಪದೆ ತಮ್ಮೊಂದಿಗೆ ೨-೩ ಶಿಷ್ಯರನ್ನು ಕರೆದುಕೊಂಡು ಹೋಗಿ ಹಿರಿಯ ವಿದ್ವಾಂಸರ ನಾದ ಸುಧೆಯನ್ನು ಸವಿದು ಶಿಷ್ಯರಿಗೂ ಆ ಸವಿಯನ್ನು ಸವಿಯುವ ಅವಕಾಶ ಕಲ್ಪಿಸಿಕೊಡುತ್ತಿದ್ದರು. ಹೀಗೆ ಹೋದಾಗಲೆಲ್ಲ ತಮ್ಮ ಗುರುಗಳಾದ ಆಚಾರ್ಯರ ದರ್ಶನಾಶೀರ್ವಾದ ಪಡೆಯದೆ ಹಿಂದಿರುಗುತ್ತಿರಲಿಲ್ಲ ಮತ್ತು ಗುರುಗಳ ಮನೆಯಲ್ಲಿ ಏನಾದರೂ ಪ್ರಸಾದ ರೂಪವಾಗಿ ಸ್ವೀಕರಿಸಬೇಕೆಂಬ ಇವರ ನಡೆ ಇವತ್ತಿಗೂ (ಕಡೆಯ ಪಕ್ಷ ಒಂದು ಲೋಟ ನೀರನ್ನಾದರೂ ಕೇಳಿ ಕುಡಿದು ಬರುತ್ತಿದ್ದರು) ಅನೇಕ ಶಿಷ್ಯರಿಗೆ ಮಾದರಿಯಾಗಿದೆ. ೧೯೬೩ರಲ್ಲಿ ಪದ್ಮನಾಭರಾಯರು ತಮ್ಮ ಕೃತಿಗಳನ್ನು ಮದ್ರಾಸಿನ ಅಕಾಡೆಮಿಯಲ್ಲಿ ಶಿಷ್ಯರೊಂದಿಗೆ ಪ್ರದರ್ಶಿಸಿದರು. ಅಲ್ಲಿನ ಜನರಿಂದ ಇವರ ಪ್ರದರ್ಶನ ಮೆಚ್ಚುಗೆ ಪಡೆಯಿತು. ಹಿರಿಯರು ನಡೆದ ಸನ್ನಡತೆಯಲ್ಲಿ ಕಿರಿಯರು ಹಾದಿ ಸವೆಸಿದರೆ ಶ್ರೇಯಸ್ಸು ಎಂಬುದು ಇವರ ಅಭಿಪ್ರಾಯ. ಅದರಿಂದ ಕಿರಿಯರ ನಡೆಯಲ್ಲಿ ಕೊಂಚ ವ್ಯತ್ಯಾಸ ಗಮನಿಸಿದರೂ ತಕ್ಷಣವೇ ತಿದ್ದುತ್ತಿದ್ದರು. ಇದಕ್ಕೆ ನಿದರ್ಶನ ಒಮ್ಮೆ ಇವರು ಶಿಷ್ಯರಿಗೆ ಪಾಠ ಮಾಡುತ್ತಿದ್ದಾಗ ಚೌಡಯ್ಯನವರು ಇವರ ಮನೆಗೆ ಬರಲು ತಾವೇ ಮೊದಲಿಗೆ ಎದ್ದು ನಿಂತು ಆತ್ಮೀಯರನ್ನು ಸ್ವಾಗತಿಸಿಕ ಅವರೊಡನೆ ನಮ್ರವಾಗಿ ಮಾತನಾಡುತ್ತಿದ್ದರೂ ಶಿಷ್ಯರು ಯಾರು ಏಳದಿದ್ದುದನ್ನು ಗಮನಿಸಿದ ರಾಯರು ಚೌಡಯ್ಯನವರನ್ನು ಬೀಳ್ಕೊಟ್ಟು ಹಿಂದಿರುಗಿ ಬಂದು ಶಿಷ್ಯರಿಗೆ ನೀಡಿದ ಮಾತುಗಳು ಇವು “ನಾಡಿಗೆ, ದೇಶಕ್ಕೇ ಹೆಸರು ತಂದಿರುವಂತಹ ಶ್ರೇಷ್ಠ ಕಲಾವಿದರು ಬಂದರೆ ನಾನೇ ಎದ್ದು (ಗೌರವ) ನಿಂತು ಬರಮಾಡಿಕೊಂಡರೆ, ನೀವೆಲ್ಲಾ ಕುಳಿತೇ ಇದ್ದಿರಲ್ಲಾ, ನಿಮಗೆ ಸ್ವಲ್ಪವಾದರೂ ದೊಡ್ಡವರಿಗೆ ಹೇಗೆ ಗೌರವ, ಮರ್ಯಾದೆ ತೋರಿಸಬೇಕೆಂಬುದೇ ಗೊತ್ತಿಲ್ಲವೇ” ಎಂದು ಸ್ವಲ್ಪ ಕಟುವಾಗಿಯೇ ಅಂದಾಗ ಶಿಷ್ಯರಿಗೆ ಜೀವನ ಪೂರ್ತಿ ಮರೆಯಲಾಗದ ಪಾಠ ಕಲಿಸಿತು.

(ಇ) ಪುರಂದರ ದಾಸರ ನಾಲ್ಕನೆಯ ಶತಮಾನೋತ್ಸವದ ಅಂಗವಾಗಿ ೧೯೬೪ರಲ್ಲಿ ದಾಸರ ಕೆಲವು ರಚನೆಗಳಿಗೆ ಸ್ವರಪ್ರಸ್ತಾರದೊಂದಿಗೆ ಅಚ್ಚು ಹಾಕಿಸಿ ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯದಲ್ಲಿ ಅವಿರತವಾಗಿ ದುಡಿದಿದ್ದಾರೆ.

(ಈ) ಮೈಸೂರು ಸರ್ಕಾರ ನಡೆಸುತ್ತಿದ್ದ ಸಂಗೀತ ಪರೀಕ್ಷಾ ಮಂಡಳಿಗೆ ಸದಸ್ಯರಾಗಿ, ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ರಾಯರು ಪಡೆದ ಸನ್ಮಾನ ಪ್ರಶಸ್ತಿಗಳು: ಕೀರ್ತಿ, ಯಶಸ್ವಿಗಾಗಿ ರಾಯರು ಹೆಣಗಾಡಲೇ ಇಲ್ಲವಾದರೂ, ಅವುಗಳಲ್ಲಿ ಕೆಲವು ಅವರನ್ನು ಅರಸಿ ಬಂದುವು.

‘ಸಂಗೀತ ಚೂಡಾಮಣಿ’- ೧೯೬೨ರಲ್ಲಿ ಸೋಸಲೆ ಮಠಾಧೀಶರಾಗಿದ್ದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ರಾಯರ ಸಂಗೀತವನ್ನು ಮೆಚ್ಚಿ ಅನುಗ್ರಹಿಸಿದ ಬಿರುದು. ಗಾನಕಲಾ ಸಿಂಧು”- ೧೯೬೨ರಲ್ಲಿ ಮೈಸೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯದ ಐದನೆಯ ಸಂಗೀತ ಸಮ್ಮೇಳನದ ಅಧ್ಯಕ್ಷ ಪದವಿಯಲ್ಲಿ ಹಿರಿಯರು ವಿದ್ವಾಂಸರು, ಗೌರವದಿಂದ ನೀಡಿದ ಬಿರುದು.

ಹೀಗೆ ಕಲೆಗಾಗಿ ಬಾಳಿ ಬದುಕಿದ ಬಂಗ್ಲೆ ಕೃಷ್ಣರಾವ್‌ ಪದ್ಮನಾಭರಾಯರು ೮ನೇ ಸೆಪ್ಟೆಂಬರ್‌ ೧೯೬೬ರ ಕೃಷ್ಣಾಷ್ಟಮಿಯಂದು ತಮ್ಮ ೬೩ನೇ ವಯಸ್ಸಿನಲ್ಲಿ ಕಲಾದೇವಿ ಚರಣಾರವಿಂದಲ್ಲಿ ಲೀನವಾದರು.

“ಶರಣರ ಗುಣ ಮರಣದಲ್ಲಿ” ಎಂಬುದೊಂದು ನುಡಿಮುತ್ತು. ಹಾಗೆಯೇ ಒಬ್ಬ ವ್ಯಕ್ತಿ ಬಾಳಿದ ರೀತಿ, ಬಂಧು, ಮಿತ್ರರಿಗೆ, ಕಿರಿಯರಿಗೆ ಆಪ್ಯಾಯಮಾನವಾಗಿತ್ತೆಂದರೆ ಇದಕ್ಕಿಂತ ಮತ್ತೇನೂ ಬಯಸಲು ಸಾಧ್ಯ. ರಾಯರು ನಿಧನರಾದರೂ ಅವರ ಪತ್ನಿ ಕಮಲಾಬಾಯಿಯವರು ಪತಿಯ ಆಸೆ, ತಪಸ್ಸನ್ನು ಸತ್ವಕ್ಕೆ ಕುಂದಾಗಬಾರದೆಂದು ಅವರಿದ್ದ ‘ಲಕ್ಷ್ಮೀಸದನ’ದಲ್ಲಿ ಭಜನ ಮಂದಿರದ ಅಲಂಕಾರಗಳನ್ನು ಹಾಗೆಯೇ ಕಾಪಾಡಿಕಲೊಂಡು ಶಿಷ್ಯಂದಿರನ್ನು ಕರೆಸಿ ಹಾಡಿಸಿ ತಂಬೂರಿಯ ಝೇಂಕಾರದ ಅಲೆಯನ್ನು ಮುಂದುವರೆಸಿದರು. ಸಂಗೀತ ಶಾಲೆಯನ್ನು ನೋಡಿಕೊಳ್ಳುವುದರೊಂದಿಗೆ ಉತ್ಸವಾದಿಗಳನ್ನು, ಶ್ರದ್ಧಾ, ಭಕ್ತಿಯಿಂದ ಆಚರಿಸಲು ಏರ್ಪಾಟು ಮಾಡುತ್ತಿದ್ದರು. ಗೋಕುಲಾಷ್ಟಮಿ ದಿನವನ್ನು ಪತಿಯ ಸ್ಮಾರಕ ದಿನವನ್ನಾಗಿಸಿ ವಿಶೇಷ ಭಕ್ತಿ ಶ್ರದ್ಧೆಯಿಂದ ದೇವತಾ ಕಾರ್ಯ, ನಾದ ನಮನಗಳನ್ನು ಸಲ್ಲಿಸಲು ಏರ್ಪಾಟು ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕಮಲಾಬಾಯಿಯವರೂ ನಿಧನರಾದರು.

೧೯೮೪ರಲ್ಲಿ ರಾಯರ ಕೃತಿಗಳನ್ನು ಸಂಪಾದಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯದಲ್ಲಿ ಕಮಲಾಬಾಯಿಯವರು ರಾಯರ ಶಿಷ್ಯರಿಗೆ, ಬಂಧು ಬಾಂಧವರಿಗೆ, ತನು, ಮನ, ಧನ ರೂಪದಲ್ಲಿ ಹೇರಳವಾಗಿ ನೆರವಾಗಿದ್ದಾರೆ.

“ಸಂಗೀತ ಚೂಡಾಮಣಿ” ಎಂಬ ಅಭಿದಾನದಿಂದ ಹೊರತಂದ ರಾಯರ ಕೃತಿಗಳ ಈ ಪುಸ್ತಕದಲ್ಲಿ ರಾಯರ ಜೀವನದ ಪೂರ್ಣ ವೃತ್ತಾಂತಗಳು, ಸಂಗೀತ ಶಿಕ್ಷಣ, ಸಾಧನೆಗಳು, ಇವರು ನೀಡಿರುವ ಸೇವೆಗಳ ವಿವರಗಳು ಪ್ರಕಟವಾಗಿದೆ. ಇವರದು ಒಟ್ಟು ೫೫ ರಚನೆಗಳು ಪ್ರಕಟವಾಗಿದೆ. ೧೩ ವರ್ಣ, ೧೬ ಕೃತಿ, ೨೩ ದೇವರನಾಮಗಳು ೩ ತಿಲ್ಲಾನಗಳನ್ನೊಳಗೊಂಡಿದೆ. ಈ ಪುಸ್ತಕಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳ ಅನುಗ್ರಹ ಲೇಖನ, ಆಪ್ತ ಕಲಾ ಮಿತ್ರರುಗಳ ಲೇಖನದಲ್ಲಿ ೧. ರಾಳ್ಳಪಲ್ಲಿಯ ‘ಮರೆಯಲಾಗದ ವ್ಯಕ್ತಿ” ೨. ರಾಮರತ್ನಂ-“ದೈವಾಂಶ ಸಂಭೂತ”, ೩. ಆರ್.ಎನ್‌. ದೊರೆಸ್ವಾಮಿ “ದಿವ್ಯ ಚೇತನ” ೪. ಟಿ.ಎಸ್‌. ತಾತಾಚಾರ್ಯ “ಸಂಗೀತಕ್ಕಾಗಿ ಜೀವಮುಡಿಪಾಗಿಟ್ಟ ಮಹಾನುಭಾವ”, ೫. ಡಿ. ಸುಬ್ಬರಾಮಯ್ಯ “ಕಲೆಗಾಗಿ ಕಲೆ” ಎಂಬಂತಿದ್ದ ಕಲೆಗಾರ ಮುಂತಾದ ನುಡಿಮುತ್ತುಗಳಿಂದ ಕೊಂಡಾಡಿದ್ದರೆ, ಶೀಷ್ಯವೃಂದವು ಮಾತಾ-ಪಿತೃಸ್ಥಾನದಲ್ಲಿ ಕಾಣುತ್ತಾ, ರಾಯರನ್ನು ಅವರ ಪತ್ನಿಯವರನ್ನು ಹೃತ್ಪೂರ್ವಕವಾಗಿ ಸ್ಮರಿಸಿದ್ದಾರೆ. ರಾಯರ ಪಾಠಕ್ರಮವನ್ನು ಅವರು ಶಿಷ್ಯರಲ್ಲಿ ತೋರುತ್ತಿದ್ದ ವಾತ್ಸಲ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.

ರಾಯರ ಆದರ್ಶಗಳು, ಕಲೆಗಿದ್ದ ನಿಷ್ಠೆಗಳು ಅವರ ಕುಟುಂಬದವರು ಗೌರವಿಸುತ್ತಿದ್ದರೆಂಬುದಕ್ಕೆ ನಿದರ್ಶನವಾಗಿ ಅವರ ಮರಣಾನಂತರ ರಾಯರು ಸಂಗ್ರಹಿಸಿದ್ದ ೨೨೦ಕ್ಕೂ ಹೆಚ್ಚಿನ ಅಮೂಲ್ಯವಾದ ಸಂಗೀತ ಗ್ರಂಥಗಳನ್ನು ಮುಂದಿನ ಪೀಳಿಗೆಯವರ ಕಲಿಕೆಗೆ ಅನುವಾಗಲೆಂದು ಅವರ ಕುಟುಂಬದವರು ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲೆಗಳ ವಿಭಾಗಕ್ಕೆ ರಾಯರ ಹೆಸರಿನಲ್ಲಿ ದಾನವಾಗಿ ನೀಡಿದ್ದಾರೆ.

ಹೀಗೆ ಕಲೆಗಾಗಿ ಬಾಳಿದ ಕಲಾವಿದನನ್ನು ಪಡೆದ ಕನ್ನಡ ನಾಡು ಹೆಮ್ಮೆಯ ನಾಡು.