ಭರತನಾಟ್ಯದ ಶಾಸ್ತ್ರೀಯ ಸ್ವರೂಪವನ್ನು ಮೈಗೂಡಿಸಿಕೊಂಡು ನೃತ್ಯಕಲೆಯ ಅಭ್ಯುದಯಕ್ಕಾಗಿ ವಿಶಿಷ್ಠ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದೆ ಶ್ರೀಮತಿ ವಸಂತಲಕ್ಷ್ಮಿಯವರು ತಮ್ಮ ’ವಿಶ್ರೃತ ಟ್ರಸ್ಟ್‌’ ಮೂಲಕ ಹಲವಾರು ಯುವಕ ಕಲಾವಿದರನ್ನು ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.

ಸುಪ್ರಸಿದ್ದ ನೃತ್ಯ ಗುರು ಶ್ರೀ ಹೆಚ್. ಆರ್. ಕೇಶವಮೂರ್ತಿಯವರ ಮಗಳಾಗಿ ೧೯೪೬ರಲ್ಲಿ ಜನಿಸಿದ ಇವರು ತಂದೆಯವರಿಂದಲೇ ಶಿಕ್ಷಣವನ್ನು ಪಡೆದು ಕರ್ನಾಟಕ ಸರ್ಕಾರದ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ನಂತರ ಕೇಂದ್ರ ಸರ್ಕಾರದ ಶಿಷ್ಯ ವೇತನ ಪಡೆದು ಮದ್ರಾಸಿನ ಪ್ರಖ್ಯಾತ ಆಡ್ಯಾರ್ ಕಲಾಕ್ಷೇತ್ರದ ಶ್ರೀಮತಿ ರುಕ್ಮಿಣಿ ದೇವಿ ಅರುಂಡೇಲ್ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಭಾರತದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ವಸಂತಲಕ್ಷ್ಮಿಯವರು ಯೂರೋಪ್, ಜರ್ಮನಿ, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲೂ ಪ್ರದರ್ಶನಗಳು ಮತ್ತು ಕಾರ್ಯಾಗಾರಗಳ ಮೂಲಕ ಕಲೆಯನ್ನು ಪ್ರಚಾರಗೊಳಿಸಿದ್ದಾರೆ.

ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್‌  ಕೌನ್ಸಿಲ್‌ಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ವಸಂತಲಕ್ಷ್ಮಿಯವರು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನದ ಕಲಾ ವಿಭಾಗದಲ್ಲಿ ನೃತ್ಯ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಕನ್ನಡ ಕಾವ್ಯದಲ್ಲಿ ನೃತ್ಯ ಕಲೆಯ ಕುರುಹುಗಳು ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ’ಫೆಲೋಷಿಪ್’ ಪಡೆದಿರುವ ಇವರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯು ತನ್ನ ೧೯೯೭-೯೮ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.