ಜನನ: ೧.೭.೧೯೪೬ ಬಳಲುಕೊಪ್ಪ. ಚಿಕ್ಕಮಗಳೂರು ಜಿಲ್ಲೆ.

ಮನೆತನ: ಕಲಾವಿದರ ಮನೆತನ. ತಂದೆ ಪಟೇಲ್ ಕೃಷ್ಣಯ್ಯನವರು ಯಕ್ಷಗಾನ ಕಲಾವಿದರು. ಪತಿ ಎಂ.ಎಲ್. ಸುಧಾಕರ್ ಸಹ ಕಲಾವಿದರು, ಕಲಾಸಕ್ತರು, ಮಗ ಸುನಿಲ್ ರಾವ್ ಚಿತ್ರನಟ.

ಗುರುಪರಂಪರೆ: ಮಂಜಪ್ಪ ಜೋಯಿಸರು ಹಾಗೂ ಎಂ. ಪ್ರಭಾಕರ್ ಅವರಲ್ಲಿ ಗಾಯನ ಶಿಕ್ಷಣ.

ಸಾಧನೆ: ಹರಿಹರಪುರದ ಮಠದ ಉತ್ಸವದಲ್ಲಿ ಮೊದಲ ಕಾರ್ಯಕ್ರಮ ಅನಂತರ ಶೃಂಗೇರಿ, ಕೊಪ್ಪ ಶಿವಮೊಗ್ಗಾಗಳಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿರುತ್ತಾರೆ. ಮುಂದೆ ಸುಗಮ ಸಂಗೀತ, ಭಕ್ತಿ ಸಂಗೀತದ ಕಡೆ ಒಲವು. ಆಕಾಶವಾಣಿ ದೂರದರ್ಶನಗಳಲ್ಲಿ ಭಕ್ತಿ ಸಂಗೀತ ಪ್ರಸಾರ. ಗಣೇಶೋತ್ಸವ, ರಾಜ್ಯೋತ್ಸವಗಳಲ್ಲಿ ರಾಜ್ಯದ ಉದ್ದಗಲಕ್ಕೂ ಇವರ ಕಾರ್ಯಕ್ರಮಗಳು ನಡೆದಿವೆ. ಇವರು ಹಾಡಿ ಬಿಡುಗಡೆ ಮಾಡಿರುವ ಭಕ್ತಿ ಗೀತೆ-ಭಾವಗೀತೆಗಳ ಧ್ವನಿಸುರಳಿಗಳು ಅಪಾರ ಜನಪ್ರಿಯತೆಗಳಿಸಿವೆ. ಚಲನಚಿತ್ರಗಳಲ್ಲೂ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಉಪಾಸನೆ ಚಿತ್ರದ ’ಸಂಪಿಗೆ ಮರದ ಹಸಿರೆಲೆ ನಡುವೆ’ ಗೀತೆ ಇವರಿಗೆ ಅಪಾರ ಯಶಸ್ಸು ತಂದು ಕೊಟ್ಟಿತು.

ಅಮೆರಿಕಾ ಕೆನಡಾಗಳಲ್ಲೂ ಸಂಚರಿಸಿ ಸುಗಮ ಸಂಗೀತದ ಮೂಲಕ ಕನ್ನಡ ಡಿಂಡಿಮವನ್ನು ಮೊಳಗಿಸಿದ ಹಿರಿಮೆ ಇವರದ್ದು. ತಮ್ಮದೇ ಆದ ಆರಾಧನಾ ಶಾಲೆಯ ಮೂಲಕ ಯುವ ಕಲಾವಿದರಿಗೆ ಶಿಕ್ಷಣ ನೀಡುತ್ತಿದ್ದಾರೆ.

ಪ್ರಶಸ್ತಿ-ಸನ್ಮಾನ: ಕನ್ನಡ ಕೋಗಿಲೆ, ಗಾನ ಪ್ರವೀಣೆ,ಗಾನ ಕೋಗಿಲೆ, ಸಂಗೀತ ಸರಸ್ವತಿ, ಮುಂತಾದ ಬಿರುದುಗಳೆ ಅಲ್ಲದೆ ೧೯೯೦-೯೧ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ೧೯೯೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ೧೯೯೪ರಲ್ಲಿ ಕೆಂಪೇಗೌಡ ಪ್ರಶಸ್ತಿ, ಮಂಗಳೂರಿನಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ನಡೆಸಿದ ಸಮ್ಮೇಳನಾಧ್ಯಕ್ಷತೆ ಗೌರವ.