Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬಿ.ಜಿ. ಮೋಹನ್‌ದಾಸ್

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯ ಅನ್ವರ್ಥಕವಾಗಿರುವವರು ಬಿ.ಜಿ.ಮೋಹನ್‌ದಾಸ್. ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆಯ ಕನ್ನಡಿಗ.
ದಕ್ಷಿಣ ಕನ್ನಡದ ಅಪ್ಪಟ ಕನ್ನಡಾಭಿಮಾನಿ ಮೋಹನ್‌ದಾಸ್, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬಿಜೂರು ಹುಟ್ಟೂರು. ಹುಟ್ಟಿನಿಂದಲೇ ಕನ್ನಡವೆಂದರೆ ಪಂಚಪ್ರಾಣ. ಮಣಿಪಾಲದಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಅಲ್ಪಕಾಲದ ಸೇವೆ. ಜೇಸಿಸ್ ಸಂಸ್ಥೆಯಲ್ಲಿ ಪ್ರಧಾನಕಾರ್ಯದರ್ಶಿಯಾಗಿ ಸಂಘಟನಾನುಭವ ಗಳಿಕೆ. ಆನಂತರ ಬದುಕು ಅರಸಿ ದುಬೈಗೆ, ಪರದೇಶದಲ್ಲಿ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ದೃಢಸಂಕಲ್ಪ, ಕೊಲ್ಲಿಯಲ್ಲಿ ಕನ್ನಡಿಗರನ್ನು ಸಂಘಟಿಸಿ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಮತ್ತಿತರ ಚಟುವಟಿಕೆಗಳನ್ನು ಕೈಗೊಂಡು ಹೊರನಾಡ ಕನ್ನಡಿಗರ ಧ್ವನಿಯಾದವರು. ೧೯೮೫ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ೮೯ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರು, ಗಲ್ಫ್ ವಾರ್ತೆ ಡಾಟ್ ಕಾಂ, ಗಲ್ಫ್ ಕನ್ನಡಿಗ ಅಂತರ್ಜಾಲ ಸುದ್ದಿಪತ್ರಿಕೆಯ ಮೂಲಕ ಕೊಲ್ಲಿ ರಾಷ್ಟ್ರದ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಸ್ತುತ್ಯಾರ್ಹ ಕಾರ್ಯ. ವಿದೇಶಿ ನೆಲದಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಸಾರ್ಥಕ ಸೇವೆ. ಪ್ರತಿಷ್ಠಿತ ಮಯೂರ ಪ್ರಶಸ್ತಿ, ಮಣಿಪಾಲ ವಿವಿಯ ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಗೌರವಕ್ಕೆ ಪಾತ್ರವಾಗಿರುವ ಮೋಹನದಾಸ್ರ ಕನ್ನಡಸೇವೆ ಸರ್ವಕಾಲಕ್ಕೂ ಮಾದರಿಯೇ.