ಯಾವುದೇ ಒಂದು ವ್ಯಕ್ತಿಯ ನೆನಪು ಸದಾಕಾಲ ಸಮಾಜದಲ್ಲಿ ಉಳಿಯುವಂತಹುದು ಎಂದರೆ, ಆ ವ್ಯಕ್ತಿ ಯಾವುದಾದರೂ ರಂಗದಲ್ಲಿ ತನ್ನ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿರುವುದು ನಿಶ್ಚಯ. ಅಂತಲೇ ಅಂತಹ ವ್ಯಕ್ತಿಗಳ ನೆನಪು ವರುಷ ವರುಷಗಳುರುಳಿದರೂ, ಜನರ ಎದೆಯಲ್ಲಿ ಹಚ್ಚಹಸುರಾಗಿ ನಿಂತು ಬಿಡುತ್ತದೆ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ಬರುವ ಒಂದು ಹೆಸರು ದಿವಂಗತ ಬಿ.ಜಿ. ರಾಮನಾಥರವರದು.

ಐವತ್ತರ ದಶಕದಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ರಾಷ್ಟ್ರಕವಿ ಕುವೆಂಪುರವರ “ದೂರಾ ಬಹುದೂರ, ಹೋಗುವ ಬಾರಾ” ಹಾಗೂ ರಂ.ಶ್ರೀ. ಮುಗಳಿಯವರ ‘ಬಂದಾರ ತಂದಾರ ಮಂದಾರ ಹೂವಾ’ ಹಾಡುಗಳನ್ನು ಕೇಳದವರೇ ಇರಲಿಕ್ಕಿಲ್ಲ. ಹೆಚ್‌.ಎಮ್‌.ವಿ. ಯಲ್ಲಿ ಧನಿತಟ್ಟೆಯಾಗಿದ್ದ ಬಿ.ಜಿ. ರಾಮನಾಥರು ಹಾಡಿದ ಈ ಹಾಡುಗಳು ಕೇಳುಗರಿಗೆ ಮೋಡಿ ಮಾಡಿತ್ತು. ಕನ್ನಡ ಭಾವಗೀತೆಗಳನ್ನು ಬೆಳಕಿಗೆ ತರಲು ಶ್ರಮಿಸಿದ ಮೊಟ್ಟ ಮೊದಲಿಗರ ಸಾಲಿನಲ್ಲಿ ಬಿ.ಜಿ.ರಾಮನಾಥ್‌ರವರು  ಪ್ರಮುಖರಾಗಿ ನಿಲ್ಲುತ್ತಾರೆ. ಕಾರಣ ಆಗಷ್ಟೇ ಜನಪ್ರಿಯವಾಗುತ್ತಿದ್ದ ಹೊಸಶೈಲಿಯ ಭಾವಗೀತಾ ಕೈಂಕರ್ಯದಲ್ಲಿ ಒಂದು ಸಾಹಸ ಗಾಥೆಯಾಗಿಯೇ ಬೆಳೆದವರು ಕಲಾವಿದ ರಾಮನಾಥ್‌ರವರು.

ಕರ್ನಾಟಕದವರೇ ಆದ ರಾಮನಾಥರು ಹೊರನಾಡ ಕನ್ನಡಿಗರಾಗಿ ಮುಂಬಯಿಯಲ್ಲಿ ಇದ್ದು ಕನ್ನಡಕ್ಕಾಗಿ ದುಡಿದ ಮಹಾನ್‌ಕನ್ನಡಾಭಿಮಾನಿ. ಕೇಂದ್ರ ಸರಕಾರದ ವಾಕ್ಚಿತ್ರ, ಸಾಕ್ಷ್ಯಚಿತ್ರ ವಿಭಾಗದಲ್ಲಿ ಕನ್ನಡ ವಿವರಣಾಧಿಕಾರ ಹಾಗೂ ಉದ್ಘೋಷಕರಾಗಿದ್ದ ರಾಮನಾಥ್‌ಮುಂಬಯಿಯಲ್ಲೇ ಹೆಚ್ಚುಕಾಲವಿದ್ದವರು. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ರಾಮನಾಥ್‌ರವರು ಹೊರನಾಡಿನಲ್ಲಿದ್ದೂ ಕನ್ನಡವನ್ನೇ ಉಸಿರಾಗಿಸಿಕೊಂಡವರು.

ಮುಂಬಯಿ ಆಕಾಶವಾಣಿಗೂ ರಾಮನಾಥರಿಗೂ ಒಂದು ವಿಧವದ ಅವಿನಾಭಾವ ಬೆಳೆದಿತ್ತು. ಅದಕ್ಕಾಗಿ ಅವರು ದುಡಿದು, ಜಯಗಳಿಸಿದವರು. ಮುಂಬಯಿ ಆಕಾಶವಾಣಿ ಅಲ್ಲಿನ ಕನ್ನಡಿಗರಿಗಾಗಿ ವಾರಕ್ಕೊಂದು ಬಾರಿ ಕನ್ನಡ ಕಾರ್ಯಕ್ರಮಗಳನ್ನು  ಪ್ರಸಾರ ಮಾಡುತ್ತಿತ್ತು. ಅನಿವಾರ್ಯವಾಗಿ ಅಲ್ಲಿ ಆಗ ಆಕಾಶವಾಣಿಯ ಕನ್ನಡ ವಿಭಾಗದಲ್ಲಿ ಎನ್‌.ಕೆ. ಕುಲಕರ್ಣಿ ಹಾಗೂ ಕುಂದಾ ನಾಡಕರ್ಣಿ (ಈಗ ಕುಂದಾರೇಗೆ) ಇದ್ದರು. ಅವರಿಗೆ ಕನ್ನಡ ಭಾಷೆಯ ಬಗ್ಗೆ ಉತ್ಸಾಹವಿದ್ದರೂ ಆಕಾಶವಾಣಿಯ ನಿಲಯದ ಕಲಾವಿದರಿಗಾಗಲೀ, ಅಧಿಕಾರಿ ವರ್ಗಕ್ಕಾಗಲೀ ಕನ್ನಡ ಭಾಷೆಯ ಬಗ್ಗೆ ಒಂದು ವಿಧದ ತಾತ್ಸಾರ ಭಾವನೆ ಇದ್ದಿತೆಂದು ಹೇಳಬಹುದು. ರಾಮನಾಥರರು ಒಳ್ಳೆಯ ಭಾವಗೀತಾ ಗಾಯಕರೂ, ಗಮಕವಾಚನಕಾರರೂ, ಸಂಗೀತ ಸಂಯೋಜಕರೂ ಆಗಿದ್ದವರು. ಅಷ್ಟೇ ಹಠವಾದಿಯೂ ಆಗಿದ್ದರು. ಹಾಗಾಗಿ ಆಕಾಶವಾಣಿಯಲ್ಲಿ ಕನ್ನಡದ ಕಾರ್ಯಕ್ರಮದ ಧ್ವನಿಮುದ್ರಣಕ್ಕಾಗಿ ಕೊಠಡಿಯಿಂದ ಕೊಠಡಿಗೆ ಓಡಾಡುವುದು, ವಾದ್ಯಸಂಗೀತಗಾರರನ್ನು ಸೇರಿಸಿ ಅವರಿಗೆ ಹಿಮ್ಮೇಳದ ಸಂಗೀತವನ್ನು ಕಲಿಸಿ ಹಾಡುಗಳನ್ನು  ಧ್ವನಿ ಮುದ್ರಿಸುವಷ್ಟರಲ್ಲಿ ಪಡಬಾರದ ಕಷ್ಟಗಳನ್ನನುಭವಿಸಿದವರು. ಆದರೂ ಪಟ್ಟುಬಿಡದೆ ಸಾಧಿಸಿದ ಛಲವಾದಿ. ಅದರಿಂದಲೇ ಅವರಿಗೆ ಕನ್ನಡದ ಬಗ್ಗೆ ಎಷ್ಟೊಂದು ಅಭಿಮಾನವಿತ್ತೆಂದು ತಿಳಿಯಬಹುದು. ಅವರಿಗೆ ಕನ್ನಡ ಸಾಹಿತ್ಯದ ಬಗೆಗೂ ಅಪಾರ ತಿಳುವಳಿಕೆ ಇತ್ತು. ಅಲ್ಲದೆ ‘ಆಕಾಶವಾಣಿ’ಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು  ಹುಡುಕಿ ತೆಗೆದು ರಾಗ ಸಂಯೋಜನೆಮಾಡಿ ಕಲಾವಿದರಿಗೆ ಕಲಿಸಿ, ಧ್ವನಿ ಮುದ್ರಿಸಿ ‘ಆಕಾಶವಾಣಿ’ ಮುಂಬಯಿ ಕೇಂದ್ರದಿಂದ ಪ್ರಸಾರ ಮಾಡಿಸುತ್ತಿದ್ದರು. ದಸರಾ ಬಂತು ಅಂದ್ರೆ ‘ಇದೋ ನೋಡು, ನಾಡಿನಲ್ಲಿ ಎಲ್ಲೆಲ್ಲೂ ಹೊಸತನ’ ಕೃಷ್ಣಜನ್ಮಾಷ್ಟಮಿ ಎಂದರೆ ಪು.ತಿ.ನ. ರವರ ಗೋಕುಲ ನಿರ್ಗಮನದ ಗೀತೆಗಳು. ಭಾರತ ಚೀನಾ ಯುದ್ಧದ ಸಮಯ ಅರವಿಂದ ನಾಡಕರ್ಣಿಯವರ ಆ ಹಿಮಾದ್ರಿಯ ಧವಲ ಶೃಂಗವು ರಕ್ತರಂಜಿತವಾಯಿತೆ?’ ಇತ್ಯಾದಿಗಳನ್ನು ಹಾಡಿಸಿದ ಕೀರ್ತಿ ರಾಮನಾಥ್‌ರವರದು. ಕಿವರ ನಿರ್ದೇಶನದಲ್ಲಿ ಹೆಸರಾಂತ ಗಾಯಕ/ಗಾಯಕಿಯರು ಹಾಡಿದ್ದಾರೆ. ಜಯವಂತಿದೇವಿ ಹಿರೇಬೆಟ್‌, ಮಾಲತಿಬಂಜೀಕರ್, ಡಾ. ಪ್ರಭಾ ಅತ್ರೆ, ಕೃಷ್ಣಾ ಕಳ್ಳೆ, ಎಂ.ಎ. ಜಯರಾಮರಾವ್‌, ಅರ್ಚನಾ ಕೋಡಿಕಲ್‌, ಶ್ಯಾಮಲ ಹಾಲಾಡಿ ಇವರೆಲ್ಲಾ ರಾಮನಾಥ್‌ರವರ ನಿರ್ದೇಶನದಲ್ಲಿ ಹಾಡಿದ್ದಾರೆ. ಇವರು ‘ಆಕಾಶವಾಣಿ’ಯ ವತಿಯಿಂದ ಅನೇಕ ಸಂಗೀತ ರೂಪಕಗಳನ್ನು ರಚಿಸಿ, ಪ್ರಸಾರ ಮಾಡಿದ್ದಾರೆ. ಅದರಲ್ಲಿ ‘ಪ್ರೇಮಾರಾಧನೆ’ ಎಂಬ ರೂಪಕ ಬಹಳ ಜನಪ್ರಿಯವಾಯಿತು.