ಇದಲ್ಲದೆ ‘ಮಾತುಂಗಾ’ದಲ್ಲಿನ ಮೈಸೂರು ಅಸೋಸಿಯೇಷನ್‌ಹಾಗೂ ಒಂದೆರಡು ಕಾಲೇಜಿನ ಕನ್ನಡ ಸಂಘಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಇವರದು. ಇವರ ಜೊತೆ ಜಯವಂತಿ ದೇವಿ ಶ್ಯಾಮಲ ಹಾರಾಡಿ, ಅರ್ಚನಾ ಕೋಡಿಕಲ್‌, ಮಾಲತಿ ಬಾಜೀಕರ್ ಎಲ್ಲ ಸಭಾ ಕಾರ್ಯಕ್ರಮಗಳಲ್ಲೂ ಹಾಡುತ್ತಿದ್ದರು. ‘ಎಕ್ಕುಂಡಿ’ಯವರ ಬೇಲಿಸೋ ಏನು ಮೋಸವಾಯಿತೋ ಸುಲ್ತಾನನ್‌ದೌಲಕ್‌ಯಾರ ಪಾಲಿಗಾಯಿತೋ ಎನ್ನುವ ಒಂದು ಪರಂಪರೆಯ ಹಾಡು ಜನರರ ಮೆಚ್ಚಿಗೆಗಳಿಸಿದ್ದವು.

ಹಿಂದೆ ಚಲನಚಿತ್ರ ಮಂದಿರಗಳಲ್ಲಿ, ಚಲನಚಿತ್ರಗಳು ಆರಂಭವಾಗುವ ಮೊದಲು ಹಾಗೂ ಚಲನಚಿತ್ರದ ನಡುವೆ ಜಾಹೀರಾತುಗಳನ್ನು ತೋರಿಸುತ್ತಿದ್ದರು. ಸೋಪು, ಟೂತ್‌ಪೇಸ್ಟ್‌, ಕ್ರೀಮ್‌ಇತ್ಯಾದಿಗಳ ಜಾಹೀರಾತುಗಳು ಅವು. ಜಾಹೀರಾತುಗಳ ಚುಟುಕು ಹಾಡುಗಳಿಗೆ ಸಂಗೀತದ ಕವಚದೊಂದಿಗೆ ಅಲಂಕರಿಸಿ ಹಾಡುತ್ತಿದ್ದರು. ರಾಮನಾಥ. ಅಲ್ಲದೆ ಅನ್ಯಕಲಾವಿದರಿಂದಲೂ ಹಾಡಿಸುತ್ತಿದ್ದರು. ಅದು ಕನ್ನಡವಲ್ಲದೆ ಹಿಂದಿ, ಮರಾಠಿ, ತಮಿಳು ಭಾಷೆಗಳಲ್ಲೂ ಹಾಡಿ, ಹಾಡಿಸುತ್ತಿದ್ದರು. ‘ಲೈಫ್‌ಬಾಯ್‌ಎಲ್ಲಿದೆ ಅಲ್ಲಿದೆ ಆರೋಗ್ಯ’ ಎಂಬ ಜಾಹೀರಾತು ಗೀತೆ ಮೂಡಿ ಬಂದದ್ದೇ ರಾಮನಾಥ್ ರವರ ಸಿರಿಕಂಠದಿಂದ.

ರಾಮನಾಥ್‌ರವರು  ಬಹಳ ತಾಳ್ಮೆಯಿಂದ ಹಾಡುಗಳನ್ನು  ಕಲಿಸುತ್ತಿದ್ದರು. ಯಾವ ಕಲಾವಿದರಿಗಾದರೂ, ಅವರು ಹೇಳಿದ ಕಡೆ ಬರಲು ತೊಂದರೆ ಇದ್ದಲ್ಲಿ ಕಲಾವಿದರ ಮನೆಗೆ ಹೋಗಿ ಕಲಿಸುತ್ತಿದ್ದರು. ರಾಮನಾಥ್‌ರವರು ತುಂಬ ಹಾಸ್ಯಪ್ರಿಯರಾಗಿದ್ದರು. ಕಾರ್ಯಕ್ರಮಗಳ ಸಂಧರ್ಭದಲ್ಲಿ ಅಥವಾ ಧ್ವನಿಮುದ್ರಣದ ಸಂದರ್ಭದಲ್ಲಿ ಹೆಚ್ಚು  ಮಾತನಾಡದೆ ಮಕಿತಭಾಷಿಯಾಗಿರುತ್ತಿದ್ದರು. ಅವರ ಲಕ್ಷ್ಯವೆಲ್ಲ ಕಾರ್ಯಕ್ರಮ, ಧ್ವನಿಮುದ್ರಣ, ಅದರ ಗುಣಮಟ್ಟ ಇವುಗಳ  ಕಡೆಗೆ ಕೇಂದ್ರಿಕೃತವಾಗಿರುತ್ತಿತ್ತು. ಹಾಗಾಗಿ ಗಂಭೀರವಾಗಿ ಬಿಡುತ್ತಿದ್ದರು.

ಮೈಸೂರಿನಲ್ಲಿ ಅನೇಕ ಕಡೆ ಗಮಕವಾಚನ ಕಾರ್ಯಕ್ರಮಗಳನ್ನು  ನೀಡಿದ್ದಾರೆ. ಕನ್ನಡ ಭಾವಗೀತೆಗಳನ್ನೂ ಹಾಡಿದ್ದಾರೆ. ಇವರು ಚಲನಚಿತ್ರ ರಂಗವನ್ನು ಪ್ರವೇಶಿಸಿದ್ದುಂಟು. ಎಂ.ಎಸ್‌. ಸತ್ಯುರವರು ನಿರ್ದೇಶಿಸಿದ ಚಿತೆಗೂ ಚಿಂತೆ ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕರಾಗಿರುವ ಹೆಗ್ಗಳಿಕೆ ಇವರದು.

ಗಮಕಿಯಾಗಿ, ಭಾವಗೀತಾ (ಸುಗಮಸಂಗೀತ) ಗಾಯಕರಾಗಿ, ಸಂಗೀತ ಸಂಯೋಜಕರಾಗಿ, ಚಲನಚಿತ್ರ ಹಿನ್ನೆಲೆಗಾಯಕರಾಗಿ, ಕನ್ನಡಾಭಿಮಾನಿಯಾಗಿ ಹೊರನಾಡಿನಲ್ಲಿದ್ದೂ ಕನ್ನಡದ ಬಾವುಟವನ್ನು ಮುಗಿಲೆತ್ತರಕ್ಕೇರಿಸಿದ ಈ ಸಿರಿಕಂಠದ ರಾಮನಾಥರು ಪ್ರಾತಃ ಸ್ಮರಣೀಯರು.