ಸಂಗೀತಗಾರರ ಕುಟಂಬದಲ್ಲಿ ೧೯೩೭ ರಲ್ಲಿ ಜನಿಸಿದ ಶ್ರೀ ಬಿ.ಜಿ. ಶ್ರೀನಿವಾಸ್‌, ಅದ್ವಿತೀಯ ವೇಣು ವಿದ್ವಾಂಸರಾದ ಪದ್ಮಶ್ರೀ ಟಿ.ಆರ್. ಮಹಾಲಿಂಗಂ ಅವರಲ್ಲಿ ಸುಮಾರು ಎರಡು ದಶಕಗಳ ಸುದೀರ್ಘಾವಧಿಯ ಶಿಷ್ಯವೃತ್ತಿ ಮಾಡಿ ವಿದ್ಯೆಯನ್ನು ಸಿದ್ಧಿಸಿಕೊಂಡರು. ಇದೇ ಅವಧಿಯಲ್ಲಿ ವಿದುಷಿ ಡಿ.ಕೆ. ಪಟ್ಟಮ್ಮಾಳ್‌ ಮತ್ತು ವಿದ್ವಾನ್‌ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಸಂಗೀತದಿಂದ ಪ್ರೇರೇಪಿತರಾಗಿ ಆ ಪ್ರೇರಣೆಯನ್ನು ತಮ್ಮ ಸಂಗೀತ ಜ್ಞಾನವೃದ್ಧಿಗೆ ಬಳಸಿಕೊಂಡರು. ಭಾರತದಲ್ಲಿ ಧರ್ಮಸ್ಥಳ, ಮೇಲುಕೋಟೆ, ಶೃಂಗೇರಿ, ಶ್ರೀರಂಗಪಟ್ಟಣ, ಉಡುಪಿ, ತಿರುವಯ್ಯಾರ್, ತಂಜಾಪೂರು, ಕುಂಭಕೋಣಂ, ಬನವಾಸಿ, ಗುರುವಾಯೂರು ಮುಂತಾದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳೂ ಸೇರಿದಂತೆ, ಹಲವಾರು ಪ್ರಮುಖ ಸಂಗೀತೋತ್ಸವಗಳಲ್ಲದೆ, ಆಸ್ಟ್ರಿಯಾ, ಬೆಲ್ಜಿಯಂ, ಜರ್ಮನಿ, ಹಾಲೆಂಡ್‌, ಸ್ವಿಟ್ಜರ್ಲೆಂಡ್‌ ಮುಂತಾದ ವಿದೇಶೀ ನಗರಗಳಲ್ಲಿಯೂ ಶ್ರೀನಿವಾಸ್‌ ಅವರ ಕಾರ್ಯಕ್ರಮಗಳು ನಡೆದಿವೆ.

ಆಕಾಶವಾಣಿಯ ‘ಬಿ-ಬೈ’ ಶ್ರೇಣಿ ಕಲಾವಿದರಾದ ಶ್ರೀ ಬಿ.ಜಿ. ಶ್ರೀನಿವಾಸ ಅವರ ವೇಣುವಾದನ ಕಾರ್ಯಕ್ರಮಗಳು ಚಂದನವಾಹಿನಿ ಮತ್ತು ಉದಯ ಟಿ.ವಿ.ಗಳಲ್ಲೂ ಪ್ರಸಾರವಾಗಿರುವುದಲ್ಲದೆ, ಯುರೋಪಿನಲ್ಲಿ ಅವರು ನೀಡಿದ ಕಾರ್ಯಕ್ರಮವೊಂದು ಬಿ.ಬಿ.ಸಿ.ಯಲ್ಲೂ ಪ್ರಸಾರವಾಗಿದೆ. ಶ್ರೀಯುತರು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿಯ ಪರೀಕ್ಷಕರಾಗಿ ಕೂಡ ಸೇವೆ ಸಲ್ಲಿಸಿರುತ್ತಾರೆ.

ಶೃಂಗೇರಿ ಪೀಠ, ಅದಮಾರು ಮಠ, ಗಣಪತಿ ಸಚ್ಚಿದಾನಂದ ಆಶ್ರಮ, ಸೌಗಂಧಿಕಾ ರಾಮಕೃಷ್ಣ ಕಲಾಶಾಲೆ, ವಾಣಿ ಇನ್ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ ಮುಂತಾದ ಸಂಸ್ಥೆಗಳಿಂದ ಪುರಸ್ಕೃತರಾಗಿರುವ ಶ್ರೀಯುತರಿಗೆ ನಾದಸುಧಾಕರ, ವೇಣುಗಾನ ವಿದ್ವಾನ್‌, ವೇಣುಗಾನ ಕಲಾಶೇಖರ ಮುಂತಾದ ಬಿರುದುಗಳು ಸಂದಿವೆ. ಶ್ರೀ ಬಿ.ಜಿ. ಶ್ರೀನಿವಾಸ ಅವರ ಸಂಗೀತ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.