“ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ನನ್ನ ಲೇಖನಿಯನ್ನು ಕೆಳಗಿಡುವುದೇ ಇಲ್ಲ”

ಭಾರತವು ಇಂಗ್ಲಿಷರ ಮುಷ್ಠಿಯಲ್ಲಿ ಸಿಕ್ಕಿ ತನ್ನ ಆತ್ಮಗೌರವ ಮತ್ತು ಸ್ವಾತಂತ್ರ್ಯಗಳಿಗಾಗಿ ಹೊರಾಡುತ್ತಿದ್ದಾಗ ಧೀರ ಪತ್ರಿಕೋದ್ಯಮಿಯೊಬ್ಬ ಈ ಮಾತುಗಳನ್ನು ಬರೆದ.

ಸ್ವಾರಸ್ಯದ ಸಂಗತಿ ಎಂದರೆ ಈ ಪತ್ರಿಕೋದ್ಯಮಿ ಭಾರತೀಯನಲ್ಲ. ಬ್ರಿಟನ್ನಿನ್ನಲ್ಲಿ ಹುಟ್ಟಿ, ಬೆಳೆದು, ಭಾರತಕ್ಕೆ ಬಂದ ಇಂಗ್ಲಿಷರವನು.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಅಪೂರ್ವ ಘಟನೆಗಳ ಆಗರ. ದೇಶದ ಸ್ವಾತಂತ್ರ್ಯಕ್ಕಾಗಿ ಭಾರತೀಯರು ಭಾರೀ ಅಹಿಂಸಾತ್ಮಕ ಹೊರಾಟವನ್ನೇ ನಡೆಸಿದರು. ನಿಜ. ಆದರೆ ಅದಕ್ಕೆ ಪೂರಕವಾಗಿ ಅನೇಕ ಮಂದಿ ವಿದೇಶಿಯರ ಅನುಕಂಪವೂ ಸೇರಿತ್ತು. ಕೆಲವರು ಪರೋಕ್ಷವಾಗಿ ಆಂದೋಲನಕ್ಕೆ  ಸಹಾಯ ಮಾಡಿದರೆ, ಕೆಲವರು ಪ್ರತ್ಯಕ್ಷವಾಗಿಯೇ ಅದರಲ್ಲಿ ಭಾಗವಹಿಸಿದ್ದು ಅಭೂತಪೂರ್ವ.

"ಭಾರತಕ್ಕೆ ಸ್ವಾತಂತ್ರ ದೊರೆಯುವವರೆಗೆ ಲೇಖನಿಯನ್ನು ಕೆಳಗಿಡುವುದೇ ಇಲ್ಲ"

ಅತ್ಯಂತ ರೋಮಾಂಚನಕಾರಿ ಸಂಗತಿ ಎಂದರೆ ಭಾರತ ಸ್ವಾತಂತ್ರ ಚಳವಳಿಗೆ ಅಂಕುರವಿಟ್ಟ ಸಂಸ್ಥೆಯಾದ “ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು” ಸ್ಥಾಪಿಸಿದನು. ಅಪ್ಪಟ ಬ್ರಿಟಿಷ್ ರಾಷ್ಟ್ರದವನಾದ ಅಲಾನ್ ಅಕ್ಟೇವಿಯೋ ಹ್ಯೂಮ್. ಇವರ ಪಥದಲ್ಲೇ ನಡೆದ ಬ್ರಿಟಿಷ್ ಮಹನೀಯರು ಹೆನ್ರಿ ಕಾಟನ್, ವೆಡ್ಡರ್ ಬರ್ನ್ ಮತ್ತಿತ್ತರರು. ಹೋಮ್‌ರೂಲ್ ಚಳುವಳಿಯ ಸ್ಥಾಪಕಿ ಡಾ|| ಅನಿಬೆಸೆಂಟ ಅವರು ಭಾರತದಲ್ಲಿ ನಡೆಸಿದ ಸಾರ್ವಜನಿಕ ಸೇವೆಯನ್ನು ಮರೆಯುವಂತಿಲ್ಲ. ಈ ಐರಿಷ್ ಮಹಿಳೆ ಭಾರತದ ಮೊದಲ ರಾಷ್ಟ್ರೀಯ ಪತ್ರಿಕೋದ್ಯಮಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಕೀರ್ತಿಗೆ ಪಾತ್ರರಾದರು.

ಇಂತಹ ಅತಿರಥ ಮಹಾರಥರ ಸಾಲಿಗೆ ಸೇರಿದ ಮತ್ತೊಬ್ಬ ಬ್ರಿಟಿಷ್ ಪ್ರಜೆ ಬೆಮಜಮಿನ್ ಗೈ ಹಾರ್ನಿಮನ್. ನ್ಯಾಯ ನಿಷ್ಠುರವಾದಿಯಾದ ಇವರನ್ನು ಭಾರತ ಕೈ ಬೀಸಿ ಕರೆಯಿತು. ಯಾವುದೋ ಆಕರ್ಷಣೆಯ ಸೆಳೆತಕ್ಕೆ ಸಿಕ್ಕಿದಂತೆ ಅವು ಭಾರತಕ್ಕೆ ಬಂದರು. ತಮ್ಮವರೇ ಆದ ಆಡಳಿತಗಾರರು ಭಾರತದಲ್ಲಿ ಪ್ರಜಾತಂತ್ರದ ಗೋರಿಯನ್ನು ತೋಡುತ್ತಾ ವಸಾಹತು ವಾದವನ್ನು ಘೋಷಿಸುತ್ತಿರುವುದನ್ನು ಕಂಡು ಅವರಿಗೆ ಯಾತನೆ ಆಯಿತು. ಉನ್ನತ ಆದರ್ಶಗಳನ್ನು  ಹೇಳುವ, ಇಂಗ್ಲಂಡಿನಲ್ಲಿ ಪೂಜಿಸುವ ಜನರೇ ಇಲ್ಲಿ ಅತಿರೇಕಗಳನ್ನು ನಡೆಸುವುದನ್ನು ನೋಡಿ ಮಮ್ಮಲ ಮರುಗಿದರು.

ಆದರ್ಶ  ಬೆಳೆಸುವ ಪರಿಸರ – ಪ್ರಾರಂಭದ ವಿದ್ಯಾಭ್ಯಾಸ

ಬೆಂಜಮಿನ್ ಗೈ ಹಾರ್ನಿಮನ್ ಹುಟ್ಟಿದ್ದು ಇಂಗ್ಲಂಡಿನಲ್ಲಿ ೧೮೭೩ರ ಜುಲೈ ೧೭ರಂದು. ತಂದೆ ವಿಲಿಯಮ್ ಗೈ ಹಾರ್ನಿಮನ್. ಅವರು ಬ್ರಿಟಿಷ್ ನೌಕಾದಳದಲ್ಲಿ ಒಬ್ಬ ಉನ್ನತ ಅಧಿಕಾರಿ. ತಾಯಿ ಸಾರಾ ಎಸ್ತರ್. ಆಕೆಯೂ ಉತ್ತಮ ಕುಟುಂಬದಿಂದ ಬಂದವರೇ. ಆಕೆಯ ತಂದೆ ಥಾಮಸ್ ಫಾಸ್ಟರ್. ಗ್ರೀಕ್ ನೌಕಾದಳದಲ್ಲಿ ಮುಖ್ಯ ಇಂಜನೀಯರ್. ಇಂತಹ ಕೌಟುಂಬಿಕ ಪರಿಸರದಲ್ಲಿ ಬೆಳೆದ ಹಾರ್ನಿಮನ್ ಉನ್ನತ ಆದರ್ಶಗಳನ್ನು ಬೆಳೆಸಿಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಮನೆಯ ವಾತಾವರಣಕ್ಕೆ ತಕ್ಕಂತೆ ಅವರನ್ನು ತಂದೆ ತಾಯಿಗಳು ಸೈನ್ಯಾಧಿಕಾರಿಯನ್ನಾಗಿ ಮಾಡಲು ಅಪೇಕ್ಷಿಸಿದರು. ಕಲಿಕೆಗೆ ಆರಂಭ ಮನೆಯಲ್ಲಿಯೇ. ತಾಯಿ ಸಾರಾ ಮೊದಲ ಗುರು. ಆಕೆಯಿಂದಲೇ ಇವರಿಗೆ ಮೊದಲ ವಿದ್ಯಾಭ್ಯಾಸ. ಹಾರ್ನಿಮನ್ನರಿಗೆ ಆಕೆ ಇಂಗ್ಲಿಷ್, ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳನ್ನು ಗಣಿತ ಹಾಗೂ ಸಂಗೀತವನ್ನು ಕಲಿಸಿದಳು.

ಅನಂತರದ ವಿದ್ಯಾಭ್ಯಾಸ ಪೋರ್ಟ್ಸ್‌ಮತ್ ಗ್ರಾಮರ್ ಶಾಲೆಯಲ್ಲಿ ಮುಂದುವರೆಯಿತು. ಇದಾದ ಮೇಲೆ ಕ್ವೀನ್ಸ್ ಸರ್ವಿಸ್ ಹೌಸಿನಲ್ಲಿ. ಅಂತಿಮವಾಗಿ  ವೂಲ್‌ವಿಚ್‌ನ ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ತರಬೇತಿ ಪಡೆದರು.

ಕೈಗೆ ಬಂದೂಕಲ್ಲ, ಲೇಖನಿ.

ತಂದೆ ತಾಯಿಯರು  ನೆನೆಸಿದ್ದೇ ಒಂದು. ಆದದ್ದೇ ಮತ್ತೊಂದು. ಸೈನ್ಯಾಧಿಕಾರಿ ಆಗುವುದಕ್ಕಿಂತ ಲೇಖನಿ ಬೀಸುವ ಪತ್ರಿಕೋದ್ಯಮವೇ ಅವರಿಗೆ ಬಹಳ ಪ್ರಿಯವೆನಿಸಿತು. ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ ಪತ್ರಿಕಾ ಕ್ಷೇತ್ರವನ್ನು ಪ್ರವೇಶಿಸಿದರು. ಪತ್ಕರ್ತನಾಗಿ ಅದರ ಮೊದಲ ಅನುಭವ ಪೋರ್ಟ್ಸಮತ್ ನಗರದ ಸದರ್ನ್ “ಡೈಲಿ ಮೇಲ್” ಪತ್ರಿಕೆಯಲ್ಲಿ ವರದಿಗಾರನಾಗಿ ಪತ್ರಿಕಾ ವೃತ್ತಿ ಆರಂಭಿಸಿದ ಅವರು ೧೮೯೭ರಲ್ಲಿ ಆ ಪತ್ರಿಕೆಯ ಸಹಾಯಕ ಸಂಪಾದಕನ ಹುದ್ದೆಯವರೆಗೂ ಏರಿದರು. ವಿಶಾಲ ಅನುಭವವನ್ನು ಪಡೆದರು. ೧೯೦೦ರಲ್ಲಿ ಲಂಡನ್ ನಗರದ “ಮಾರ್ನಿಂಗ್ ಲೀಡರ್” ಪತ್ರಿಕೆಯ ಸಹಾಯಕ ಸಂಪಾದಕರಾದರು.

ಹಾರ್ನಿಮನ್ ಅವರ ಪತ್ರಿಕಾ ಸಾಹಸ ಇಷ್ಟಕ್ಕೇ ಮುಗಿಯಲಿಲ್ಲ. ಲಂಡನ್ ನಗರದ ಹಲವು ಹನ್ನೊಂದು ಪ್ರಖ್ಯಾತ ಪತ್ರಿಕೆಗಳಲ್ಲೂ ಕೆಲಸ ಮಾಡಿ ಹೆಸರು ಗಳಿಸಿದರು. ಅವುಗಳಲ್ಲೂ ಪ್ರಮುಖವಾಗಿ- “ಡೈಲಿ ಎಕ್ಸ್‌ಪ್ರೆಸ್, ಮತ್ತು ಡೈಲಿ ಕ್ರಾನಿಕಲ್”. ಅವರು ದುಡಿದ ಮತ್ತೊಂದು ಸುವಿಖ್ಯಾತ ಪತ್ರಿಕೆ “ಮ್ಯಾಂಚೆಸ್ಟರ್” “ಗಾರ್ಡಿಯನ್” ಹೆಸರಾಂತ ಪತ್ರಕರ್ತ ಸಿ.ಪಿ. ಸ್ಕಾಟ್ ಅವರ ಕೈ ಕೆಳಗೆ ಕೆಲಸ ಮಾಡಿದ ಹೆಮ್ಮೆ ಇವರದು. ಹೀಗೆ  ಅವರ ಪತ್ರಿಕಾ ಸಾಧನೆಗಳ ಪಟ್ಟಿ ಬೆಳೆಯಿತು. ಹಾನಿಮನ್ನರ ವಿಚಾರಧಾರೆ ಸೀಮಿತವಾದುದಲ್ಲ. ಇಡೀ ವಿಶ್ವಸಮುದಾಯವನ್ನೇ ಒಂದು ಎಂದು  ಅವರು ಭಾವಿಸಿದ್ದರು. ಮಾನವ ಜನಾಂಗವೇ ಒಂದು ಮತ್ತು ಎಲ್ಲರಿಗೂ ಸ್ವಾತಂತ್ರ ದೊರಕಬೇಕು ಎನ್ನುವುದು ಅವರ ಅಭಿಲಾಷೆ ಆಗಿತ್ತು. ಅದಕ್ಕಾಗಿ ತಮ್ಮ ಪೂರ್ಣ ಜೀವನವನ್ನೇ ಸವೆಸಿದರು. ಹೋರಾಟದಲ್ಲಿಯೇ ಸವೆದರು. ಇಂಗ್ಲಂಡಿನ ಪ್ರಜಾಪ್ರಭುತ್ವದ ಪರಂಪರೆ ಭಾರತದಲ್ಲೂ ನೆಲೆಯೂರಬೇಕೆಂಬ ಹೆಬ್ಬಯಕೆ ಅವರನ್ನು ಭಾರತಕ್ಕೆ ಎಳೆದು ತಂದಿತು.

ಭಾರತಕ್ಕೆ ಬಂದರು, ಭಾರತೀಯರಾದರು

ಬೆಂಜಮಿನ್ ಹಾರ್ನಿಮನ್ ಭಾರತಕ್ಕೆ ಬಂದದ್ದು ೧೯೦೬ರಲ್ಲಿ.  ಭಾರತಕ್ಕೆ ಹೋಗಬೇಕೆಂಬ ದಿನ ನಿತ್ಯವೂ ಬೆಳೆಯುತ್ತಿದ್ದ ಹಂಬಲ ಪೂರೈಸಿತು. ಕಲ್ಕತ್ತೆಯ ಪ್ರಸಿದ್ಧ ಪತ್ರಿಕೆ “ಸ್ಟೇಟ್ಸ್‌ಮನ್” ತನ್ನ ಪತ್ರಿಕಾ ವೃಂದವನ್ನು ಸೇರಲು ಹಾರ್ನಿಮನ್‌ರನ್ನು ಕೈಬೀಸಿ ಕರೆಯಿತು. ಅವರು ಅದನ್ನು ಹರ್ಷದಿಂದ ಸ್ವೀಕರಿಸಿದರು. “ಸ್ಟೇಟ್ಸ್‌ಮನ್” ಪತ್ರಿಕೆಯ ಸಹಾಯಕ ಸಂಪಾದಕರಾಗಿ ಭಾರತದಲ್ಲಿ ತಮ್ಮ ಪತ್ರಿಕಾ ವ್ಯವಸಾಯವನ್ನು ಆರಂಭಿಸಿದರು. ಆಗ ಭಾರತದಲ್ಲಿ ರಾಷ್ಟ್ರೀಯ ಸ್ವಾತಂತ್ರ ಸಂಗ್ರಾಮದ ಕಾವು ದಿನೇ ದಿನೇ ಏರುತ್ತಲಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಹೂಡಿದ್ದ ಈ ಆಂದೋಲನ ಇಡೀ ಭಾರತೀಯ ಜನಾಂಗವನ್ನೇ ವ್ಯಾಪಿಸಿತು. ಆದರೆ, ಹೇಗಾದರೂ ಮಾಡಿ ಈ ವಸಾಹತುವನ್ನು ಉಳಿಸಿಕೊಳ್ಳಬೇಕೆಂದು ಬ್ರಿಟಿಷ್ ಸರಕಾರದ ಹಂಬಲವು ಭಾರತೀಯರ ಸ್ವಾತಂತ್ರಕ್ಕೆ ಅಡ್ಡಿಯಾಗುತ್ತಿತ್ತು.

ಯಾವುದೇ ವಿಚಾರವನ್ನು ಪೂರ್ವಾಪರ ಯೋಚಿಸದೆ, ಆಳವಾಗಿ ಅಬ್ಯಾಸ ಮಾಡದೆ ಒಪ್ಪಿಕೊಳ್ಳುವುದು ಹಾರ್ನಿಮನ್ ಅವರ ಜಾಯಮಾನವಲ್ಲ. ಮಹಾತ್ಮಾ ಗಾಂಧಿಯವರ ತತ್ವಗಳನ್ನು, ಅಭಿಪ್ರಾಯಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದರು. ಅಹಿಂಸಾತ್ಮಕ ಆಂದೋಲನ ಅವರಿಗೆ ಮೆಚ್ಚಿಗೆ ಆಯಿತು. ಭಾರತೀಯರ ಬೇಡಿಕೆಯಲ್ಲಿ ನ್ಯಾಯವಿದೆ ಎಂಬುದನ್ನು ಅರಿತರು. ಗಾಂಧಿಜಿಯವರ ಸರಳತೆ ಅವರಿಗೆ ತುಂಬಾ ಹಿಡಿಸಿತು. ತಾವು ಇಂಗ್ಲಿಷ್‌ನವನೆಂಬ ಶ್ರೇಷ್ಠತೆಯ ಅಹಂಕಾರ ಅವರಲ್ಲಿ ಲವಲೇಶವು ಇರಲಿಲ್ಲ. ತಮ್ಮವರ ವಸಾಹತು ಪಾದವನ್ನು ತಿರಸ್ಕಾರ ಪೂರ್ಣ ದೃಷ್ಟಿಯಿಂದ ನೋಡಿದರು. ತಮ್ಮವರ ವಿರುದ್ಧವೇ ಸೆಣಸಿದರು. ಅದಕ್ಕಾಗಿ ಭಾರತೀಯರೊಡನೆ ಹೆಗಲುಕೊಟ್ಟು ನಿಂತರು. ಭಾರತೀಯರಂತೆಯೇ ಉಡುಪು ಧರಿಸಿದರು. ಧೋತಿ, ಷರಟು, ಹಾಕಿಕೊಂಡು ಬರಿಗಾಲಿನಲ್ಲಿ ನಡೆದರು. ಇದು ಅವರ ಮೇಲೆ ಗಾಂಧಿಜಿ ಬೀರಿದ ಪ್ರಭಾವವಾಗಿತ್ತು.

ತಮ್ಮ ತಾಯಿ ನಾಡಿನ ಅಪರಾಧವನ್ನು ಸರಿಪಡಿಸಬೇಕು

ಪತ್ರಿಕಾವೃತ್ತಿಯಲ್ಲಿ ಜಿವನ ಭದ್ರತೆ ಕಡಿಮೆ. ಮಾಲೀಕರು ತಮ್ಮಿಚ್ಛೆಯಂತೆ ಪತ್ರಕರ್ತರನ್ನು ಬದಲಿಸುತ್ತಾರೆ. ತಮ್ಮ ಅಭಿಪ್ರಾಯಕ್ಕೆ ಓಗೊಡದವರನ್ನು ಉದ್ಯೋಗದಿಮದ ಕಿತ್ತು ಹಾಕುತ್ತಾರೆ. ಇದನ್ನು ಅರಿತಿದ್ದರೂ ಹಾರ್ನಿಮನ್ ಪತ್ರಿಕೋದ್ಯಮವನ್ನೇ ತಮ್ಮ ಉದ್ಯೋಗ ಕ್ಷೇತ್ರವನ್ನಾಗಿ ಆರಿಸಿಕೋಂಡರು. ಪತ್ರಿಕಾ ಮಾದ್ಯಮದ ಮೂಲಕವೇ ತಮ್ಮ ತಾಯಿನಾಡಾದ ಬ್ರಿಟನ್ ಮಾಡಿರುವ ಅಪರಾಧವನ್ನು ಸರಿಪಡಿಸಬೇಕು ಎಂದು ಸಂಕಲ್ಪ ತೊಟ್ಟರು. ಅವರನ್ನು ಹಣ, ಅಧಿಕಾರದ ಯಾವ ಆಸೆ, ಆಮಿಷಗಳೂ ತಡೆಯಲಿಲ್ಲ. ಯಾವ ಹೆದರಿಕೆಗೆ ಅಂಜಲಿಲ್ಲ. ದಂಡನೆಯ ಕರಿ ನೆರಳು ಅವರನ್ನು ಕಂಡು ಹಿಮ್ಮೆಟ್ಟಿತು. ತಮ್ಮ ಉದ್ದೇಶ ಸಾಧನೆಗೆ ಅಡ್ಡ ಬಂದ ಯಾವುದಕ್ಕೂ ಬೀಳಾಗಲಿಲ್ಲ. ಅವರ ಬರಹದ್ದೇ ವಿಶಿಷ್ಟ ಶೈಲಿ. ಭಾರತೀಯ ದಂಡಸಂಹಿತೆ (ಇಂಡಿಯನ್ ಪೀನಲ್ ಕೋಡ್) ಮತ್ತು ರಾಜ್ಯದ್ರೋಹ ಕಾನೂನಿನ ಮೇಲೆ ಅಧಿಕಾರಯುತ ಪರಿಶ್ರಮ ಪಡೆದಿದ್ದರು.

ಭಾರತೀಯರ ಔದಾರ್ಯ ಅವರನ್ನು ಸೆರೆಹಿಡಿಯಿತು. ಹಾರ್ನಿಮನ್ ಈ ದೇಶದ ಜನರ ನಾಡಿಯನ್ನು ಮಿಡಿದರು. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡರು. ೧೮೫೭ರಲ್ಲಿ ನಡೆದ ಮೊದಲ ಸ್ವಾತಂತ್ರ ಸಮಗ್ರಾಮ ಏಕೆ ವಿಫಲವಾಯಿತು, ಅದಕ್ಕೆ ಕಾರಣಗಳು ಏನು ಎಂಬುದನ್ನು ಅರಿತು. ಭಾರತ ಅವರ ಜೀವನಕ್ರಮವನ್ನೇ ಬದಲಾಯಿಸಿತು. ಈ ನೆಲದ ಮೇಲೆ ಕಾಲಿಟ್ಟಾಗ ಅವರಿಗೆ ಕೇವಲ ೩೩ ವರ್ಷ ವಯಸ್ಸು. ಇಂಗ್ಲಂಡಿನಲ್ಲಿ ಪತ್ರಕರ್ತರಾಗಿದ್ದಾಗಲೇ ಮಾನವ ಹಕ್ಕುಗಳ ರಕ್ಷಣೆಗಾಗಿ ತಮ್ಮ ಲೇಖನಿಯಿಂದ ಆಳರಸರ ಮೇಲೆ ಅವಿರತ ಪ್ರಹಾರ ನಡೆಸಿದ್ದರು. ಮಾನವ ಸಂಬಂಧದ ಮಹತ್ವವನ್ನು ಇತರರಿಗೆ ತಿಳಿಸಲು ಹೆಣಗಾಡಿದ್ದರು. ಅವರ ಎತ್ತರದ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಭಾರತ ಸೂಕ್ತ ಚೇತನವನ್ನು ನೀಡಿತು.

ರಾಷ್ಟ್ರೀಯವಾದಿಗಳ ಸಂಪರ್ಕ ಹಾರ್ನಿಮನ್ ಅವರ ನಂಬಿಕೆಗಳನ್ನು ಇನ್ನಷ್ಟು ಬಲಪಡಿಸಿತು. ಭಾರತೀಯ ನಾಯಕರ ಉನ್ನತ ವಿಚಾರಗಳು ಅವರನ್ನು ಪ್ರಭಾವಿತಗೊಳಿಸಿದವು. ಭಾರತೀಯರ ಸಮಸ್ಯೆಗಳು ಮತ್ತು ಸ್ವಾತಂತ್ರ ಚಳವಳಿ ಮುಂತಾದವುಗಳನ್ನು ಕುರಿತು ರಾಷ್ಟ್ರೀಯ ನೇತಾರರಾದ ಸಿ.ಆರ್. ದಾಸ್, ಫಿರೋಜ್ ಷಾ ಮೆಹ್ತಾ ಮತ್ತಿತರರೊಡನೆ ವಿಶದವಾಗಿ ಚರ್ಚಿಸಿದರು. ನೈತಿಕಮೌಲ್ಯಗಳ ಸಾಕಾರಮೂರ್ತಿಗಳಂತೆ ಇದ್ದ ಈ ನಾಯಕರ ಗೆಳೆತನದಿಮದ ಅವರ ನಂಬಿಕೆಗಳು ಇನ್ನಷ್ಟು ಉಜ್ವಲವಾದವು.

ಸರ್. ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ, ಸರ್ ದೀನ್ ಷಾ ವಾಚಾ ಮತ್ತು ಡಾಕ್ಟರ್ ದಾದಾಭಾಯಿ ನವರೋಜಿ ಜನತೆಯ ಮನಸ್ಸನ್ನು ಸೂರೆಗೊಂಡಿದ್ದ ಭಾರತೀಯ ನಾಯಕರಾಗಿದ್ದರು. ಇವರ ವರ್ಚಸ್ಸು ಮುಂಬಯಿ ನಗರದಲ್ಲಿ ಅಗಾಧವಾಗಿದ್ದು, ರಾಷ್ಟ್ರೀಯ ಚಳವಳಿ  ನೇತೃತ್ವ ವಹಿಸಿದ್ದರು. ಅವರಲ್ಲಿ ಫಿರೋಜ್ ಷಾ ಮೆಹ್ತಾ ಅಗ್ರಗಣ್ಯ ಧುರೀಣರಾಗಿದ್ದರು.

“ಬಾಂಬೆ ಕ್ರಾನಿಕಿಲ್”ನ ಸಂಪಾದಕರು

ಆಗ ಮುಂಬಯಿ ನಗರದಲ್ಲಿದ್ದ ಇಂಗ್ಲಿಷ್ ದಿನಪತ್ರಿಕೆಗಳಾದ “ಟೈಮ್ಸ್ ಆಫ್ ಇಂಡಿಯಾ”, “ಬಾಂಬೆ ಗೆಜೆಟ್” ಮತ್ತು “ಅಡ್ವೋಕೇಟ್ ಆಫ್ ಇಂಡಿಯಾ” ಬ್ರಿಟಿಷ್ ಮಾಲಿಕತ್ವದಲ್ಲಿ ಇದ್ದವು. ಇವು ಫಿರೋಜ್ ಷಾ ಮೆಹ್ತಾ ಅವರನ್ನು ಕಟುವಾಗಿ ಟೀಕಿಸುತ್ತಿದ್ದವು.  ಅವುಗಳ ನೀತಿ ಸದಾ ಅವರ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸುವುದೇ ಆಗಿತ್ತು. ತಮ್ಮ ಅಭಿಪ್ರಾಯಗಳನ್ನು ದೇಶಬಾಂಧವರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕಾದರೆ ತಮ್ಮದೇ ಆದ ಪತ್ರಿಕೆಯೊಂದರ ಅಗತ್ಯವಿದೆ ಎನ್ನವುದನ್ನು ಅವರು ಕಂಡುಕೊಂಡರು. ಅವರ ಈ ಯೋಜನೆಯ ಫಲವಾಗಿ ಮುಂಬಯಿ ನಗರದಿಂದ ೧೯೧೩ರ ಮಾರ್ಚ್ ಮೂರರಂದು “ಬಾಂಬೆ ಕ್ರಾನಿಕಲ್” ಎಂಬ ಇಂಗ್ಲಿಷ್ ದೈನಿಕ ಹೊರಟಿತು. ಪತ್ರಿಕೆ ಆರಂಭಿಸುವ ಮುನ್ನ ಅದಕ್ಕೆ ಸರಿಯಾದ ಸಂಪಾದಕರನ್ನು ಫಿರೋಜ್ ಷಾ ಮೆಹ್ತಾ ಹುಡುಕುತ್ತಿದ್ದರು. ಅವರ ದೃಷ್ಟಿ ಮೊಟ್ಟಮೊದಲು ಬಿದ್ದದು “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆಯಲ್ಲಿ ಕೆಲಸಮಾಡಿ ಹೆಸರು ಪಡೆದಿದ್ದ ಇಂಗ್ಲಿಷ್ ಪತ್ರಕರ್ತ ಪ್ಯಾಟ್ ಲೊವೆಟ್ ಅವರ ಮೇಲೆ. ಆದರೆ ಕಲ್ಕತ್ತ ನಗರದ ಪತ್ರಿಕೋದ್ಯಮದಲ್ಲಿ ಸೇರಿಹೋಗಿದ್ದ ಲೊವೆಟ್ ಕಲ್ಕತ್ತೆಯಿಂದ ಮುಂಬಯಿಗೆ ಬರಲು ಒಪ್ಪಲಿಲ್ಲ. ಅನಂತರ ಮೆಹ್ತಾ ಅಲಹಾಬಾದಿನಲ್ಲಿ “ಲೀಡರ್” ಪತ್ರಿಕೆಯ ಸಂಪಾದಕರಾಗಿದ್ದ ಸಿ. ವೈ. ಚಿಂತಾಮಣಿ ಅವರನ್ನು ಆಹ್ವಾನಿಸಿದರು. ಚಿಂತಾಮಣಿ ಸಹ ಬರಲಾಗಲಿಲ್ಲ.

ಅಂತಿಮವಾಗಿ ಫಿರೋಜ್ ಷಾ ಮೆಹ್ತಾ ಬೆಂಜಮಿನ್ ಹಾರ್ನಿಮನ್ ಅವರನ್ನು “ಬಾಂಬೆ ಕ್ರಾನಿಕಲ್” ಪತ್ರಿಕೆಯ ಸಂಪಾದಕರಾಗಲು ಕೇಳಿಕೊಂಡರು. ಹಾರ್ನೀಮನ್ ಒಪ್ಪಿಕೊಂಡು ಕಲ್ಕತ್ತೆಯಿಂದ ಮುಂಬಯಿಗೆ ಬಂದರು. ಹೀಗೆ ಅವರ ರಾಷ್ಟ್ರೀಯ ವಾದಿ ಪತ್ರಿಕೋದ್ಯಮ ಆರಂಭವಾಯಿತು. ಪತ್ರಿಕೆ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನೊಡನೆ ತಾನೂ ಒಂದೆನ್ನುವಂತೆ  ನಡೆದುಕೊಂಡಿತು. ಮೊದಲನೆಯ ದಿನವೇ “ಬಾಂಬೆ ಕ್ರಾನಿಕಲ್” ಮುಂಬಯಿ ನಗರದ ಜನತೆಯನ್ನು ಆಶ್ಚರ್ಯಗೊಳಿಸಿತು. ಆಗಿನ ಇತರ ಪತ್ರಿಕೆಗಳ ಬೆಲೆ ನಾಲ್ಕು ಆಣೆ ಆಗಿದ್ದರೆ, ಇದರ ಬೆಲೆ ಕೇವಲ ಒಂದು ಆಣೆ. ಆದರೆ ಇತರ ಪತ್ರಿಕೆಗಳಷ್ಟೇ ಸುದ್ದಿ ವಿಷಯಗಳು ಇರುತ್ತಿದ್ದವು. ಈ ಕಡಿಮೆ ದರ ಸಹ “ಬಾಂಬೆ ಕ್ರಾನಿಕಲ್” ಬಹುಬೇಗ ಜನ್ರಿಯವಾಗಲು ಕಾರಣವಾಯಿತು.

ರಾಷ್ಟ್ರೀಯ ವಾದಿಗಳಿಗೆ ಬೆಂಬಲ

ಪತ್ರಿಕೆಯ ನಿರ್ದೇಶಕರ ಮಂಡಳಿಯಲ್ಲಿ ಒಂದಲ್ಲ ಒಂದು ಬಾರಿ ನಿರ್ದೆಶಕರಾಗಿದ್ದವರು ಆಗಿನ ಕಾಲದಲ್ಲಿ ಧುರೀಣರಾಗಿದ್ದ ಉಮರ್ ಸೋಬಾನಿ, ಮಹಮದ್ ಅಲಿಜಿನ್ನಾ, ಮೋತಿಲಾಲ್ ನೆಹರು, ಚಿಮನ್ ಲಾಲ್ ಸೆಟಲ್‌ವಾಡ್, ಕೆ.ಎಫ್. ನಾರಿಮನ್, ಫಿರೋಜ್ ಷಾ ಮೆಹ್ತಾ ತಮ್ಮ ಪತ್ರಿಕೆಯ ಸಂಪಾದಕರಾಗಿದ್ದ ಹಾರ್ನಿಮನ್ ಅವರಿಗೆ ಪರಮಾವಧಿ ಸಂಪಾದಕೀಯ ಸ್ವಾತಂತ್ರ್ಯ ನೀಡಿದ್ದರು. ದೈನಂದಿನ ಪತ್ರಿಕಾ ವಿಷಯಗಳಲ್ಲಿ ಅವರು ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಇದರಿಂದ ಹಾರ್ನಿಮನ್ ಅವರಿಗೆ ತುಂಬಾ ಅನುಕೂಲವಾಯಿತು. ಇವರಿಬ್ಬರ ನಡುವೆ ಘರ್ಷಣೆಗೆ ಅವಕಾಶವೇ ಇರಲಿಲ್ಲ. ಏಕೆಂದರೆ ಇಬ್ಬರ ನಂಬಿಕೆ, ಧ್ಯೇಯ ಮತ್ತು ತತ್ವಗಳು ಒಂದೇ ಆಗಿದ್ದವು. ಈ ಅವಕಾಶವನ್ನು ಹಾರ್ನಿಮನ್ ಪೂರ್ಣವಾಗಿ ಬಳಸಿಕೊಂಡರು. ಪತ್ರಿಕೆಯಲ್ಲಿನ ತಮ್ಮ ಬರಹಗಳಿಂದ ಇಂಗ್ಲಂಡಿನ ತಮ್ಮ ದೇಶಬಾಂಧವರ ಗಮನವನ್ನು ಭಾರತದ ಸ್ವಾತಂತ್ರ್ಯದತ್ತ  ಹೊರಳಿಸಬಹುದು ಎಂದು ಅವರು ಭಾವಿಸಿದ್ದರು. ರಾಷ್ಟ್ರೀಯವಾದಿಗಳ ಚಟುವಟಿಕೆಗಳಿಗೆ ಈ ಪತ್ರಿಕೆಯಲ್ಲಿ ಸತತವಾಗಿ ಪ್ರಚಾರ ದೊರಕಿತು.

ಹಾರ್ನಿಕನ್ ಅವರ ಲೇಖನ ನಾಮ “ಅಟ್ರೋಪಸ್” ಈ ಹೆಸರಿನಲ್ಲಿ ಅವರು ಪ್ರತಿದಿನವೂ ಲೇಖನಗಳನ್ನು ಬರೆಯುತ್ತಿದ್ದರು. “ಬಾಂಬೆ ಕ್ರಾನಿಕಲ್” ಚುಚ್ಚುವ ಸಂಪಾದಕೀಯಗಳ ಮುಖಾಂತರ ಭಾರತದಲ್ಲಿನ ಬ್ರಿಟಿಷ್ ಆಡಳಿತಗಾರರ ಬರ್ಬರ ಕೃತ್ಯಗಳ ಮೇಲೆ ಬೆಳಕು ಚೆಲ್ಲಿದರು. ಡಾಕ್ಟರ್ ಆನಿಬೆಸೆಂಟ್ ಹೋಮ್ ರೂಲ್ ಚಳವಳಿಯನ್ನು ಆರಂಭಿಸಿದಾಗ ಅದನ್ನು ಸ್ವಾಗತಿಸಿದರು.  ತಿಕ್ ಮತ್ತು ಗಾಂಧಿಜಿಯವರಿಗೂ ಬೆಂಬಲವಿತ್ತರು. ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇರವಾಗಿ ಭಾಗವಹಿಸಿದ್ದರು. ಬರಿಗಾಲಿನಲ್ಲಿ ನಡೆಯುತ್ತಿದ್ದುದರಿಂದ ಅವರನ್ನು “ಬರಿಗಾಲು ಸಂಫಾದಕ” ಎಂದು ಜನರು ಪ್ರಿತಿಯಿಂದ ಕರೆಯುತ್ತಿದ್ದರು.

ಬ್ರಿಟಿಷರ ಕಣ್ಣು ಕೆಂಪಗಾಯಿತು.

ತಮ್ಮವರ ವಿರುದ್ಧವೇ ಹಾರ್ನಿಮನ್ ಲೇಖನ ಯುದ್ಧ ಆರಂಭಿಸಿದ್ದು ಬ್ರಿಟಿಷರಿಗೆ ವಿಚಿತ್ರವೆನಿಸಿತು. ಅವರನ್ನು ಒಬ್ಬ ಕನಸುಗಾರನೆಂದು ಆಡಳಿತಗಾರರು ಜರಿದರು. ತಿರಸ್ಕಾರ ಪೂರ್ಣ ದೃಷ್ಟಿಯಿಂದ ಕಂಡರು. ಇದಾವುದೂ ಹಾರ್ನಿಮನ್ ಅವರನ್ನು ಕದಲಿಸಲಿಲ್ಲ. ಅವರ ವಿರುದ್ಧ ಬ್ರಿಟಿಷ್ ಆಡಳಿತದ ಅಪಪ್ರಚಾರದ ಸಮರ ಆರಂಭವಾಯಿತು.

ಪಂಜಾಬಿನ ಘೋರ ಅನ್ಯಾಯಕ್ಕೆ ಪ್ರತಿಭಟನೆ

ಸುತ್ತಲೂ ಭ್ರಮೆಯ ಕೋಟೆ ಕಟ್ಟಿಕೊಂಡಿದ್ದ ಅಧಿಕಾರಿಗಳಿಗೆ ಹಾರ್ನಿಮನ್‌ರ ಮಾತುಗಳು ರುಚಿಸಲಿಲ್ಲ. ಸರಕಾರ “ರೌಲತ್ ಶಾಸನ” ಎಂಬ ಕಾಯಿದೆಯನ್ನು ಮಾಡಿತು.  ಇದರ ಪ್ರಕಾರ ಯಾರಾದರೂ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಸರಕಾರಕ್ಕೆ ಅನುಮಾನ ಬಂದರೆ ಅವರನ್ನು ಬಂಧಿಸಿ ವಿಚಾರಣೆ ಇಲ್ಲದೆಯೇ ಸೆರೆಮನೆಯಲ್ಲಿ ಇಡಬಹುದಾಗಿತ್ತು. ಸರಕಾರ ಯಾರ ಮೇಲಾದರೂ ಮೊಕದ್ದಮೆ ಹೂಡಿದರೆ ವಿಚಾರಣೆಗೆ ಒಳಗಾದವನು ತನ್ನ ಪರವಾಗಿ ವಕೀಲರನ್ನು ನೇಮಿಸಿಕೊಳ್ಳುವಂತಿಲ್ಲ. ಈ ಶಾಸನದಿಂದ ಭಾರತದಲ್ಲಿ ಪ್ರಜಾಸತ್ತೆಯ ಕೊಲೆ ಎಂದು ಹಾರ್ನಿಮನ್ ತಮ್ಮ ಲೇಖನಿಯ ಮೂಲಕ ಗುಡುಗಿದಾಗ ಸರಕಾರದ ಪಿತ್ತ ನೆತ್ತಿಗೇರಿತು. ಈ ಕರಾಳ ಶಾಸನವನ್ನು ವಿರೋಧಿಸಿ ಮುಂಬಯಿ ನಗರದ ಚೌಪಾಟಿ ಮೈದಾನದಲ್ಲಿ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಲಕ್ಷಾಂತರ ಮಂದಿ ಸಭೆ ಸೇರಿ ಪ್ರತಿಭಟನೆ ವ್ಯಕ್ತಪಡಿಸಿದಾಗ ಹಾರ್ನೀಮನ್ ಕೂಡಾ ಅವರಲ್ಲಿ ಪಾಲುಗೊಂಡರು. ಇದಕ್ಕಾಗಿ ಬ್ರಿಟಿಷರು ಅವರನ್ನು ಖಂಡಿಸಿದರು. ದೇಶದ್ರೋಹಿ ಎಂದು ಕರೆದರು.

ಕೆಲವು ದಿನಗಳಲ್ಲೇ ಬ್ರಿಟಿಷ್ ಅಸಹನೆಯ ಲಾವಾರಸ ಹೊರಕ್ಕೆ ಉಕ್ಕಿತು. ೧೯೧೯ರ ಏಪ್ರಿಲ್ ೧೩ ರಂದು ಪಂಜಾಬಿನಲ್ಲಿ ಅಮೃತಸರದ ಚಿನ್ನದ ದೇವಾಲಯದ ಬಳಿ ಇದ್ದ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಮಕ್ಕಳು, ಮಹಿಳೆಯರು, ಮತ್ತು ಪುರುಷರು ಎನ್ನದೆ ದಟ್ಟ ಜನ ಸಂದಣಿ ಸೇರಿತ್ತು. ಬ್ರಿಟಿಷ್ ಆಡಳಿತದ ವಿರುದ್ಧ ರಾಷ್ಟ್ರೀಯ ಪ್ರತಿಭಟನೆ ಮುಗಿಲೆತ್ತರಕ್ಕೆ ಮುಟ್ಟಿತ್ತು. ಇದನ್ನು ಕಂಡ ಬ್ರಿಟಿಷ್ ಸೈನ್ಯಾಧಿಕಾರಿ ಜನರಲ್ ಓಡ್ವಯರ್ ಕೆರಳಿದ. ಗೋಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಈ ಮೈದಾನಕ್ಕೆ ತನ್ನ ಸೈನಿಕರೊಡನೆ ಲಗ್ಗೆ ಹಾಕಿದ. ತನ್ನ ರೋಷವನ್ನು ಗುಂಡು ಹಾಕಿ ಸಹಸ್ರಾರು ಮಂದು ಮುಗ್ಧ ಜನರನ್ನು ಹತ್ಯೆ ಮಾಡುವುದರ ಮೂಲಕ ಪ್ರದರ್ಶಿಸಿದ. ದುಷ್ಟ ರೀತಿಯಲ್ಲಿ ನಿರಪರಾಧಿ ಜನರನ್ನು ಹತ್ಯೆಗೈದ. ಇಡೀ ದೇಶವೇ ರಾಕ್ಷಸ ಕೃತ್ಯದ ವಿರುದ್ಧ ರೊಚ್ಚಿಗೆದ್ದಿತು. ಭಾರತದಾದ್ಯಂತ ಪ್ರತಿಭಟನೆಯ ಪ್ರದರ್ಶನಗಳು ನಡೆದವು.

ಈ ಕರಾಳ ಘಟನೆಯಿಂದ ಹಾರ್ನಿಮನ್ ಮನನೊಂದರು. ಅವರ ದುಃಖ, ಕೋಪ, ತಾಪ ಲೇಖನಿಯಿಂದ ಒಂದೇ ಸಮನೆ ಪ್ರವಹಿಸಿತು. ಪಂಜಾಬಿನಲ್ಲಿ ವಿಧಿಸಿದ ಮಾರ್ಷಲ್‌ಲಾ ಆಡಳಿತವನ್ನು ಜಾರಿಗೆ ತಂದಾಗ ಅದನ್ನು ಕಟು ಶಬ್ದಗಳಲ್ಲಿ ಟೀಕಿಸಿದವರು. ಬ್ರಿಟಿಷರು  ಹೃದಯ ಶೋಧನೆ ಮಾಡಿಕೊಳ್ಳಬೇಕು ಎಂದು ಕರೆಕೊಟ್ಟರು. ಸರಕಾರ ಅವರ ಲೇಖನಗಳನ್ನು, ಬರಹಗಳನ್ನು ಓದಿತು. ಕೋಪಿತಗೊಂಡ ಅಧಿಕಾರಿವೃಂದ ಸತ್ಯದ ಧ್ವನಿಯನ್ನು ಅದುಮಿಡಲು ನಿರ್ಧರಿಸಿತು.

 

ಪೊಲೀಸರ ಆಗಮನ

ಪಂಜಾಬಿನ ಸೈನಿಕ ಆಡಳಿತವನ್ನು ಬ್ರಿಟಿಷ್ ಸರಕಾರ ಹೊರಿಸಿತು. ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ ಮೊದಲು ಸರಕಾರಿ ಅಧಿಕಾರಿಗೆ ಒಪ್ಪಿಸಬೇಕು. ಅವನು ಒಪ್ಪಿದ್ದಕ್ಕೆ ಮಾತ್ರ ಪ್ರಕಟಿಸಬೇಕು ಎಂದು ಸರಕಾರ ಆಜ್ಞೆ ಮಾಡಿತು. ಹಾರ್ನಿಮನ್‌ರು “ಬಾಂಬೆ ಕ್ರಾನಿಕಲ್” ನ ಸಂಪಾದಕರು. ಅವರು ಸುದ್ದಿಗಳನ್ನು ಸರಕಾರಿ ಅಧಿಕಾರಿಗೆ ಕಳುಹಿಸುತ್ತಿದ್ದರು. ಅಧಿಕಾರಿ ಅನೇಕ ಪದಗಳನ್ನೂ, ವಾಕ್ಯಗಳನ್ನೂ ಹೊಡೆದು ಹಾಕಿ ಹಿಂತಿರುಗಿಸುತ್ತಿದ್ದ. ಹಾರ್ನಿಮನ್ ಅವರು ಅಧಿಕಾರಿ ತೆಗೆದು ಹಾಕಿದ ಶಬ್ದಗಳ ಮತ್ತು ವಾಕ್ಯಗಳ ಸ್ಥಳಗಳನ್ನು ಖಾಲಿ ಬಿಟ್ಟು ಅಚ್ಚು ಮಾಡುತ್ತಿದ್ದರು. ಓದುವವರಿಗೂ ಇದರಿಂದ, ಇಲ್ಲಿ ಜನರಿಗೆ ತಿಳಿಯಬಾರದೆಂದು ಸರಕಾರ ತೆಗೆದು ಹಾಕಿದ್ದ ಸುದ್ದಿ ಇತ್ತು ಎಂದು ತಿಳಿಯುತ್ತಿತ್ತು. ಅವರು ಅಲ್ಲಿ ಏನಿದ್ದಿರಬಹುದು ಎಂದು ಊಹಿಸಲು ಪ್ರಯತ್ನಿಸುತ್ತಿದ್ದರು. ಇದೇ ಒಂದು ಸ್ವಾರಸ್ಯಕರವಾದ ಸಂಗತಿಯಾಗಿ ಹೋಯಿತು!

ಭಾರತೀಯರ ಚಳವಳಿಯ ಯೋಧ

ಇದೇ ಬಗೆಯ ಬರಹಗಳಿಗಾಗಿ ೧೯೧೭ರಲ್ಲಿ ಮದರಾಸಿನಲ್ಲಿ ಸರಕಾರ ಅನಿಬೆಸೆಂಟ್ ಅವರನ್ನು ಬಂಧಿಸಿದಾಗ ಅವರ “ನ್ಯೂ ಇಂಡಿಯಾ” ಪತ್ರಿಕೆ ಸಂಕಷ್ಟಕ್ಕೆ ಒಳಗಾಯಿತು. ಪತ್ರಿಕೆಯಿಂದ ಭಾರೀ ಮೊತ್ತದ ಭದ್ರತಾ ಠೇವಣಿಯನ್ನು ವಸೂಲು ಮಾಡಲಾಯಿತು. ಇದರಿಂದ ಹಾರ್ನಿಮನ್ ಎಷ್ಟು ನಿಕಟವಾಗಿ ಭಾರತೀಯರ ಚಲವಲಿಯಲ್ಲಿ ಸೇರಿಹೋಗಿದ್ದರೆಂಬುದು ಅರಿವಾಗುತ್ತದೆ. ಇದೇ ರೀತಿಯಾಗಿ ಬಂಗಾಳದ ವಿಭಜನೆಯಾದಾಗ ಅದನ್ನು ಬಂಗಾಳಿಯರೊಡನೆ ಸೇರಿ ಹಾರ್ನಿಮನ್ ವಿರೋಧಿಸಿದರು.

ಹೀಗೆ ಹಾರ್ನಿಮನ್ ಅವರ ರಾಜಕೀಯ ಹಾಗೂ ಪತ್ರಿಕಾ ಚಟುವಟಿಕೆಗಳು ತೀಕ್ಷ್ಣವಾದಂತೆ ಸರಕಾರ ತನ್ನ ಮನಸ್ಸನ್ನು ಗಟ್ಟಿಮಾಡಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಭಾರತದ ರಕ್ಷಣಾ ಕಾಯಿದೆ ಅನ್ವಯ ಹಾರ್ನಿಮನ್ನರನ್ನು ಗಡಿಪಾರು ಮಾಡುವ ಆಜ್ಞೆ ಸಿದ್ಧವಾಯಿತು.

ಸರಕಾರ ದೇಶದಿಂದ ಹೊರಕ್ಕೆ ಹಾಕಿತು

ಅಂದು ೧೯೧೯ರ ಏಪ್ರೀಲ್ ೨೬ರ ಮಧ್ಯಾಹ್ನ ಮೂರು ಗಂಟೆ. ಸತತ ಪರಿಶ್ರಮದಿಂದ ಹಾರ್ನಿಮನ್ ಅವರಿಗೆ ದೇಹಾಲಸ್ಯವಾಗಿತ್ತು. ಮಧ್ಯಾಹ್ನದ ಊಟವಾದ ನಂತರ ಎದುರಿಗಿದ್ದ ವೊರ್ಲಿ ಸಮುದ್ರ ತೀರವನ್ನು ವೀಕ್ಷಿಸುತ್ತ ಹಾರ್ನಿಮನ್ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ ಪೊಲೀಸರ ಆಗಮನವಾಯಿತು. ಗಡಿಪಾರಿನ ಆಜ್ಞೆಯನ್ನು ಅವರ ಕೈಗಿಡಲಾಯಿತು. ಯಾವ ಸ್ನೇಹಿತರನ್ನೂ ಭೇಟಿ ಮಾಡಿ ಈ ವಿಚಾರವನ್ನು ತಿಳಿಸಲೂ ಅವಕಾಶ ನೀಡದೆ ನೇರವಾಗಿ ಅವರನ್ನು ಬಂದರಿನಿಂದ ಕರೆದೊಯ್ಯಲಾಯಿತು. ಏಪ್ರಿಲ್ ೨೭ರಂದು ಹಾರ್ನಿಮನ್ ಅವರನ್ನು ಹೊತ್ತ ಎಸ್. ಎಸ್. ಟಕಾಡ ಹಡಗು ಮುಂಬಯಿ ಸಮುದ್ರ ತೀರವನ್ನು ಬಿಟ್ಟಿತು.

ಬೆಂಜಮಿನ್ ಹಾರ್ನಿಮನ್ ಅವರನ್ನು ಗಡಿಪಾರು ಮಾಡಿದ ಸುದ್ದಿ ಮಿಂಚಿನಂತೆ ಮುಂಬಯಿಯಲ್ಲಿ ಹರಡಿತು. ತೀವ್ರವಾದ ಸಾರ್ವಜನಿಕ ಪ್ರತಿಕ್ರಿಯೆ ದೇಶದಾದ್ಯಂತ ಮೊಳಗಿತು. ಸ್ವಾತಂತ್ರ್ಯ ಚಳವಳಿಯ ಪ್ರಖರತೆ ಮತ್ತಷ್ಟು ಹೆಚ್ಚಿತು. ಈ ಗಡಿಪಾರಿನ ನ್ಯಾಯ ಬದ್ಧತೆಯನ್ನು ೧೯೧೯ರ ಮೇ ೨೨ರಂದು ಬ್ರಿಟಿಷ್ ಪಾರ್ಲಿಮೆಂಟಿನ ಕೆಳಮನೆಯಾದ ಕಾಮನ್ಸ್  ಸಭೆಯಲ್ಲಿ ಪ್ರಶ್ನಿಸಲಾಯಿತು. ಬ್ರಿಟಿಷ್ ಸರಕಾರದ ನಿಲುವನ್ನು ಸಮರ್ಥಿಸುತ್ತ ವಿದೇಶಮಂತ್ರಿ ಮಾಂಟೆಗ್ಯು ಹೀಗೆ ಹೇಳಿದ –

“ನಾವು ಇಲ್ಲಿಗೆ ಹಾರ್ನೀಮನ್ನರ ಬಗ್ಗೆ ಸಹನೆಯಿಂದಲೇ ಇದ್ದೇವೆ. ರಾಜಕೀಯದ ವೈಪರೀತ್ಯ ನಂಬಿಕೆಗಳಲ್ಲಿ ಮಧ್ಯೆ ಪ್ರವೇಶಿಸುವ ಇಚ್ಛೆ ನಮಗಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉತ್ತಮವಾದ ಉದಾಹರಣೆ ಮತ್ತೊಂದು ಯಾವುದೇ ಸಂದರ್ಭದಲ್ಲೂ ಇಲ್ಲ. ಆದರೆ ಈ ಮಹಾಶಯ ಗಲಭೆಗಳು ನಡೆಯುತ್ತಿದ್ದಾಗ ಮತ್ತಷ್ಟು ಕಿಚ್ಚೆಬ್ಬಿಸಲು ಪತ್ರಿಕೆಯನ್ನು ಬಳಸಿದ. ಮತ್ತು ದೆಹಲಿಯಲ್ಲಿ ರಸ್ತೆಗಳಲ್ಲಿ ಬ್ರಿಟಿಷ್ ಸೈನಿಕರು ಮೆತ್ತನೆಯ ಗುಂಡುಗಳನ್ನು ಬಳಸುತ್ತಿದ್ದಾರೆ ಎಮದು ಆಪಾದಿಸಲು ಪತ್ರಿಕೆಯ ಅಂಕಣವನ್ನು  ತೆರೆದಿಟ್ಟಾಗ ಹಾಗೂ ಮುಂಬಯಿಯಲ್ಲಿ ಇರುವ ಬ್ರಿಟಿಷ್ ಸೈನಿಕರಲ್ಲಿ ವಿರೋಧಿಭಾವನೆ ಮತ್ತು ಅವಿಧೇಯತೆಯನ್ನು ಪ್ರಚೋದಿಸುವ ದೃಷ್ಟಿಯಿಂದ ಆತನ ಪತ್ರಿಕೆಯ ಪ್ರತಿಗಳನ್ನ ಉಚಿತವಾಗಿ ಹಂಚಿದಾಗ, ಆತ ಭಾರತವನ್ನು ಬಿಡಲು ಇದೇ ಸೂಕ್ತ ಸಮಯವೆಂದು ನಾನು ಹೇಳುತ್ತೇನೆ”.

ಆಗ ಕರ್ನಲ್ ವೆಡ್ಜ್ ವುಡ್ ಕೇಳಿದರು : “ಅವರನ್ನು ವಿಚಾರಣೆಗೆ ಏಕೆ ಗುರಿಪಡಿಸಬಾರದು?”

ಮಾಂಟೆಗ್ಯು ಹೀಗೆ ಸ್ಪಷ್ಟೀಕರಣ ನೀಡಿದ:

“ಸಾಧಾರಣ ಪರಿಸ್ಥಿತಿಯಲ್ಲಿ  ಅವರನ್ನು ವಿಚಾರಣೆಗೆ ಗುರಿಪಡಿಸಬಹುದಾಗಿತ್ತು. ಮತ್ತು ನ್ಯಾಯಾಲಯಗಳ ಮುಂದೆ ತರಬಹುದಾದಂತಹ ಬಲವಾದ ಸಾಕ್ಷಾಧಾರವೂ ಇದೆ. ಗಲಭೆಗಳು ನಡೆಯುತ್ತಿದ್ದವು. ಹಾಗೂ ಪರಿಸ್ಥಿತಿಯನ್ನು ಸರಿಪಡಿಸಲು ಸೂಕ್ತವಾದ ಶೀಘ್ರ ಕ್ರಮ ಅಗತ್ಯವಿತ್ತು. ಅಲ್ಲದೆ, ಅವರೊಬ್ಬ ಇಂಗ್ಲಿಷ್ ಪ್ರಜೆ. ಈ ವಿಚಾರದಲ್ಲಿ ಯಾರೊಬ್ಬರೂ ಜನಾಂಗಭೇದ ನಿತಿಯ ಸಲಹೆ ಮಾಡುವುದಿಲ್ಲ ಎಂದು ಆಶಿಸುತ್ತೇನೆ. ಇದೇ ಪರಿಸ್ಥಿತಿಯಲ್ಲಿ ಭಾರತೀಯನೊಬ್ಬನನ್ನು ಗಡೀಪಾರು ಮಾಲಾಗುತ್ತಿತ್ತು. ಇಂಗ್ಲಿಷ್ ಪ್ರಜೆಯೊಬ್ಬನ ಮೇಲಿನ ಜವಾಬ್ದಾರಿ ಖಂಡಿತವಾಗಿಯೂ  ಇನ್ನೂ ಹೆಚ್ಚಿನದು. ಹಾರ್ನಿಮನ್ ಅವರು ಕೆಲವು ಘಟನೆಗಳಿಗೆ ಕಾರಣರು ಎಮದು ನಾವು ಭಾವಿಸಿದ್ದೇವೆ.ಅವರು ಅದಕ್ಕೆ ಕಾರಣರಾಗಿದ್ದಲ್ಲಿ ಅವರ ಈ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ”.

ಸೋಲನ್ನು ಅರಿಯದ ಹಾರ್ನಿಮನ್ನರು

ಈ ರೀತಿ ಭಾರತದಲ್ಲಿ ನಡೆಯುವ ಗಲಭೆಗಳಿಗೆ ಹಾರ್ನಿಮನ್ ಅವರೇ ಕಾರಣ ಎಂಬ ಕಾಲ್ಪನಿಕ ಆಪಾದನೆಯನ್ನು ಅವರ ಮೇಲೆ ಹೊರಿಸಲಾಯಿತು. ಅವರ ಬ್ರಿಟಿಷ್ ನೀತಿಯ ಟೀಕೆಯೇ ಇದಕ್ಕೆ ಹಿನ್ನೆಲೆಯಾಗಿದ್ದರಿಂದ  ಈ ಆಪಾದನೆಗಳಿಗೆ ಹಾರ್ನಿಮನ್ “ಮಾಂಚೆಸ್ಟರ್ ಗಾರ್ಡಿಯನ್” ಪತ್ರಿಕೆಯ ಮೂಲಕ ಜುಲೈ ೧೧ರಂದು ಸರಿಯಾದ ಉತ್ತರ ನೀಡಿದರು. ಮಾಂಟೆಗ್ಯೂ ಅವರ ಅಸ್ಪಷ್ಟ, ಕಲ್ಪಿತ ಹಾಗೂ ಸುಳ್ಳು ಆರೋಪಗಳನ್ನು ಬಯಲಿಗೆ ಎಳೆದರು. ಅಹಿಂಸಾತ್ಮಕ ಚಳವಳಿ ಹಾಗೂ ಸತ್ಯಾಗ್ರಹದ ಉದ್ದೇಶಗಳನ್ನು ಅವಿವರವಾಗಿ ಸ್ಪಷ್ಟೀಕರಿಸಿದರು. ಮುಗ್ಧ ಹಾಗೂ ನಿರಪರಾಧಿ ಜನರ ಗುಂಪುಗಳ ಮೇಲೆ ಬಾಂಬುಗಳನ್ನು ಎಸೆಯುವುದು ಮತ್ತು ಗುಂಡಿನ ಮಳೆಗರೆಯುವುದು, ಕೊಲ್ಲುವುದು ಇವನ್ನೆಲ್ಲಾ ಖಂಡಿಸಿದರು. ಬ್ರಿಟಿಷ್ ಸರಕಾರದ ಇಂತಹ ಕ್ರಮಗಳನ್ನು ಟೀಕಿಸುವುದು ಸೂಕ್ತವಾಗಿದೆ ಎಂದರು.

ಹಾರ್ನಿಮನ್ನರನ್ನು ಗಡಿಪಾರು ಮಾಡಿದ ಮೇಲೆ ಬಾಂಬೆ ಕ್ರಾನಿಕಲ್ ಪತ್ರಿಕೆಯ ಸಾರಥ್ಯವನ್ನು ವಹಿಸಿಕೊಂಡವರು ಮಾರ್ಮಡ್ಯೂಕ್ ಪಿಕ್‌ಥಾಲ್. ಸೈಯ್ಯದ ಅಬ್ದುಲ್ಲಾಬ್ರೆಲ್ಲಿ ಸಹ ಸಂಪಾದಕರಾಗಿ ಸಹಕಾರ ನೀಡಿದರು. ಭಾರತೀಯ ಪತ್ರಿಕೆಗಳ ಮೇಲೆ ಪೂರ್ವ ಪರಿಶೀಲನೆಯನ್ನು (ಸೆನ್ಸಾರ್ ಷಿಫ್) ವಿಧಿಸಲಾಯಿತು. ಪತ್ರಿಕೆಗಳು ಇದನ್ನು ವಿರೋಧಿಸಿದವು. ಸ್ವಲ್ಪ ಕಾಲಾನಂತರ ಪೂರ್ವ ಪರಿಶೀಲನೆಯನ್ನು ಸರಕಾರ ಹಿಂತೆಗೆದುಕೊಂಡಿತು. ಈ ಕಾಲದಲ್ಲೇ ಅಂದರೆ ಸುಮಾರು ಒಮದು ತಿಂಗಳು ಬಾಂಬೆ ಕ್ರಾನಿಕಲ್ ತನ್ನ ಪ್ರಕಟಣೆಯನ್ನು ನಿಲ್ಲಿಸಿತು. ಪೂರ್ವಪರಿಶೀಲನೆ ರದ್ದಾದ ಮೇಲೆ ಪತ್ರಿಕೆ ಪ್ರಕಟಣೆಯನ್ನು ಆರಂಭಿಸಿತು. ಆದರೆ ಅದರಿಂದ ೫೦೦೦ ರೂಪಾಯಿಗಳನ್ನು ಭದ್ರತಾ ಠೇವಣಿಗಳನ್ನು ಕೇಳಲಾಯಿತು.ಆನಂತರ ಸರಕಾರ ಅದನ್ನು ೧೦,೦೦೦ ರೂಪಾಯಿಗೆ ಏರಿಸಿತು.

ಮುಂಬಯಿಯಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ೧೯೧೯ರ ಜೂನ್ ೨೫ ರಂದು ನಡೆದ ಭಾರೀ ಸಭೆಯು ಹಾರ್ನಿಮನ್ ರ ಮೇಲಿನ ಗಡಿಪಾರು ಆಜ್ಞೆಯನ್ನು ಸರಕಾರ ಹಿಂತೆಗೆದುಕೊಳ್ಳಬೇಕು ಎಂಬ ಠರಾವನ್ನು ಅಂಗೀಕರಿಸಿತು. ದೀನ್ ಷಾಪೆಟಿಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ನಿರ್ಣಯವೊಂದನ್ನು ಸ್ವೀಕರಿಸಿತು. ಯಾವುದೇ ಕಾನೂನು ಭಂಗದ ಸಾಕ್ಷ್ಯವಾಗಲಿ ಇಲ್ಲದೆ ಹಾರ್ನಿಮನ್ ಅವರನ್ನು ದೇಶದ ಹೊರಗೆ ಕಳುಹಿಸಲಾಗಿದೆ. ಪ್ರತಿಯೊಬ್ಬ ಪುರುಷನಿಗೆ ಅಥವಾ ಮಹಿಳೆಗೆ ಆಗಲಿ ಬಹಿರಂಗ ವಿಚಾರಣೆಯ ಮತ್ತು ಅದರಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಅವಕಾಶ ಇರಬೇಕು. ಇಂತಹ ವಿಚಾರಣೆಯಲ್ಲಿ ತಪ್ಪು ಎಸಗಿದವರಿಗೆ ತಕ್ಕ ಶಿಕ್ಷೆ ವಿಧಿಸುವುದನ್ನು ಯಾವ ಬುದ್ಧಿವಂತ ಮನುಷ್ಯನೂ ವಿರೋಧಿಸಲಾರ ಎಂದು ಹೇಳಲಾಯಿತು. ಇವೆಲ್ಲ ಮನವಿಗಳು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಆಯಿತು. ಅಧಿಕಾರಿಗಳು ಅದಕ್ಕೆ ತಕ್ಕಂತೆ ಕವಡೆಯಷ್ಟೂ ಬೆಲೆ ಕೊಡಲಿಲ್ಲ.

ಮತ್ತೆ ಸರಕಾರದ ಅಕ್ರೋಶ

ತಮ್ಮ ಹಿಂದಿನದನ್ನು  ಮೆಲುಕು ಹಾಕುತ್ತಾ ಅಥವಾ ಸಿಕ್ಕಿದ ಗೌರವವನ್ನು ನೆನೆಯುತ್ತಾ ಹಾರ್ನಿಮನ್ ಸುಮ್ಮನೆ ಕೂರಲಿಲ್ಲ. ೧೯೨೧ರಲ್ಲಿ “ಕ್ಯಾಥೋಲಿಕ್ ಹೆರಾಲ್ಡ್” ಪತ್ರಿಕೆಯಲ್ಲಿ ಭಾರತಕ್ಕೆ ಸ್ವಾತಂತ್ರ ನೀಡಬೇಕಾದ ಅಗತ್ಯವನ್ನು ಅವರು ಲೇಖನಮ,ಆಲೆ ಒಂದರಲ್ಲಿ ಪ್ರಬಲವಾಗಿ ಪ್ರತಿರೋಧಿಸಿದರು. ಈ ಲೇಖನಮಾಲೆಯನ್ನು ಪ್ರಕಟಿಸುವ ಮುನ್ನ “ಕ್ಯಾಥೋಲಿಕ್ ಹೆರಾಲ್ಡ್” ಪತ್ರಿಕೆ ಅವರನ್ನು ಓದುಗರಿಗೆ ಪರಿಚಯಿಸುತ್ತ ಬಿ.ಜಿ. ಹಾರ್ನಿಮನ್ ಅವರನ್ನು ಭಾರತದ ರಾಷ್ಟ್ರೀಯ ಚಳವಳಿಯ ಮನ್ನಣೆ ಪಡೆದ ನಾಯಕ ಎಂದು ಹೇಳಿತು.

ಬ್ರಿಟಿಷ್ ಸರ್ಕಾರಕ್ಕೆ ಈ ಲೇಖನಮಾಲೆ ನುಂಗಲಾರದ ತುತ್ತಾಗಿತ್ತು.  ಅದರ ಸಹನೆಯ ಮೇರೆ ಮೀರಿತು. ಲೇಖನಗಳಲ್ಲಿ ಹಾರ್ನಿಮನ್ ಭಾರತೀಯರು ನಡಸುತ್ತಿದ್ದ ಸಂಘರ್ಷ್‌ಕ್ಕೆ ಕಾರಣಗಳನ್ನು ಓದುಗರಿಗೆ ಸ್ಪಷ್ಟವಾಗಿ ವಿಮರ್ಶಿಸಿ ತಿಳಿಸಿದ್ದರು. ನ್ಯಾಯಬದ್ಧವಾದ ಅಹಿಂಸಾತ್ಮಕ ಚಲವಲಿಯನ್ನು ಹೇಗೆ ಹಿಂಸಾತ್ಮಕ ಚಳವಳಿಯನ್ನಾಗಿಸಿ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರು. ಬ್ರಿಟಿಷರು ತಮ್ಮ ದೇಶದಲ್ಲಿ ಒಪ್ಪಿಕೊಂಡಿರುವ ವಾಕ್ ಸ್ವಾತಂತ್ರ್ಯದ ತತ್ವವನ್ನು ಭಾರತದಲ್ಲಿ ಹೇಗೆ ದಮನ ಮಾಡಲಾಗುತ್ತಿದೆ ಎಂಬುದನ್ನು ಅವರು ನಿರೂಪಿಸಿದರು.

ಬ್ರಿಟಿಷ್ ಸರ್ಕಾರ ಕೂಡಲೇ ಜಾಗೃತವಾಯಿತು. “ಕ್ಯಾಥೋಲಿಕ್ ಹೆರಾಲ್ಡ್” ಪತ್ರಿಕೆಯ ಪ್ರತಿಗಳು ಭಾರತಕ್ಕೆ ರವಾನೆ ಆಗುವುದನ್ನು ನಿಷೇಧಿಸಿತು. ಸರಕಾರ ಚಾಪೆಯ ಕೆಳಗೆ ನುಗ್ಗಿದರೆ ಹಾರ್ನಿಮನ್ ರಂಗೋಲಿಯ ಕೆಳಗೆ ನುಸುಳಿದರು. ಭಾರತದಲ್ಲಿದ್ದ ಸ್ನೇಹಿತರಿಗೆ ವೈಯಕ್ತಿಕ ಪತ್ರಗಳನ್ನು ಬರೆದು ಲೇಖನಗಳನ್ನು ಅವುಗಳ ಜೊತೆಯಲ್ಲಿ ಕಳುಹಿಸಿದರು. ಹೀಗೆ, ಆಗ “ಬಾಂಬೆ ಕ್ರಾನಿಕಲ್” ಪತ್ರಿಕೆಯ ಸಂಪಾದಕರಾಗಿದ್ದ ಮಾರ್ಮಡ್ಯೂಕ್ ಪಿಕ್‌ಥಾಲ್ ಅವರ ಲೇಖನಗಳು ತಲುಪಿದವು. ಅವನ್ನು ಪತ್ರಿಕೆಯಲ್ಲಿ ಪೂರ್ಣವಾಗಿ ಪುನರ್ ಮುದ್ರಿಸಲಾಯಿತು. ಇದು ಸರಕಾರಕ್ಕೆ ತಲೆನೋವನ್ನುಂಟು ಮಾಡಿತು. “ಬಾಂಬೆ ಕ್ರಾನಿಕಲ್”ನ ಮೇಲೆ ಕ್ರಮ ಕೈಗೊಳ್ಳಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಅಧಿಕಾರಿಗಳು ತೀವ್ರ ಚರ್ಚೆ ನಡೆಸಿದರು. ಕೊನೆಗೆ ಸಾರ್ವಜನಿಕರ ಭಾವನೆಗಳನ್ನು ಮತ್ತಷ್ಟು ಕೆರಳಿಸುವ ಯಾವುದೇ ಕ್ರಮ ತೆಗೆದುಕೊಳ್ಳುವುದು ಭೇಡ ಎಂದು ಪತ್ರಿಕೆಯನ್ನು ಶಿಕ್ಷಿಸುವ ಯೋಜನೆಯನ್ನು ಕೈ ಬಿಡಲಾಯಿತು.

ಕಾಂಗ್ರೆಸ್ಸಿನೊಡನೆ ಇದ್ದು ಅವರ ಆಂದೋಲನವನ್ನು ಬೆಂಬಲಿಸಿದ್ದಕ್ಕಾಗಿ “ಬಾಂಬೆ ಕ್ರಾನಿಕಲ್” ಪತ್ರಿಕೆಯು ಆರ್ಥೀಕವಾಗಿ ಭಾರೀ ನಷ್ಟವನ್ನು ಅನುಭವಿಸಬೇಕಾಯಿತು. ಸರಕಾರ ೧೯೩೦ರಲ್ಲಿ ಪತ್ರಿಕಾ ಸುಗ್ರಿವಾಜ್ಞೆಯನ್ನು ಹೊರಡಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಪತ್ರಿಕೆಗಳು ಪ್ರಕಟಿಸದಂತೆ ನಿಷೇಧಿಸಿತು. ಆದರೆ ಬಿ. ಜಿ. ಹಾರ್ನೀಮನ್‌ರ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ “ಬಾಂಬೆ ಕ್ರಾನಿಕಲ್” ಸರಕಾರದ ಆಗ್ರಹಕ್ಕೆ ಈಡಾಯಿತು. ಮುದ್ರಕರು ಮತ್ತು ಪ್ರಕಾಶರಿಂದ ೩೦೦೦ ರುಪಾಯಿ ಠೇವಣಿ ಕೇಳಲಾಯಿತು. ಸ್ವಲ್ಪ ಸಮಯದ ನಂತರ ಅದನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತು. ಕರ್ನಾಟಕದ ಧಾರವಾಡದಲ್ಲಿ ಸರಕಾರ ನಡೆಸಿದ ಗೋಲಿಬಾರಿನ ಹತ್ಯೆಗಳನ್ನು ಪತ್ರಿಕೆ ಖಂಡಿಸಿತು. ಇನ್ನೊಮ್ಮೆ ತೊಂದರೆಗೆ ಸಿಲುಕಿತು. ಆಗ “ಬಾಂಬೆ ಕ್ರಾನಿಕಲ್” ಪತ್ರಿಕೆಯನ್ನು ಎಂ. ಎಚ್. ಬೆಳಗಾಂವಾಲಾ ಕೊಂಡುಕೊಂಡು ಅದನ್ನು ಲಿಮಿಟೆಡ್ ಕಂಪನಿಯನ್ನಾಗಿ ಪರಿವರ್ತಿಇಸಿದರು. ಪತ್ರಿಕೆ ೧೯೩೩ರಲ್ಲಿ ಎಂ.ಎನ್. ಕಾಮಾ ಅವರ ಕೈ ಸೇರಿತು.

ಮತ್ತೇ ಭಾರತಕ್ಕೆ

ಇಂಗ್ಲಂಡಿನಲ್ಲಿ ಇದ್ದಾಗ ಸಹ ಹಾರ್ನಿಮನ್ ಅವರು ಗಾಂಧಿಜಿ ಮತ್ತು ಇತರ ಭಾರತೀಯ ನಾಯಕರೊಡನೆ ಸತತವಾಗಿ ಸಂಪರ್ಕ ಇರಿಸಿಕೊಂಡಿದ್ದರು. ಗಡಿಪಾರು ಆಜ್ಞೆಯನ್ನು ಸರಕಾರ ಹಿಂತೆಗೆದುಕೊಳ್ಳದೆ ಇದ್ದರೂ ಹಾರ್ನಿಮನ್ ೧೯೨೬ರಲ್ಲಿ ಭಾರತಕ್ಕೆ ಮರಳಿದರು. “ಬಾಂಬೆ ಕ್ರಾನಿಕಲ್” ಸಂಪಾದಕತ್ವವನ್ನು ಮತ್ತೆ ವಹಿಸಿಕೊಂಡರು. ಆಗ ಮೋತಿಲಾಲ್ ನೆಹರು ತಮ್ಮ ಆಸಕ್ತಿಯನ್ನು ತೋರಿಸಿದರು. ಸರಕಾರ ಹಾರ್ನಿಮನ್ ವಾಪಸಾದುದನ್ನು ಕಂಡರೂ ಕಾಣದಮತೆ ತೆಪ್ಪಗೆ ಇತ್ತು. ಹೀಗಾಗಿ ಇದರ ಅಕ್ರಮ ಗಡಿಪಾರು ಆಜ್ಞೆ ತಂತಾನೇ ಮುರಿದುಬಿತ್ತು. ಮುಂದಿನ ಇಪ್ಪತ್ತು ವರ್ಷಗಳ ಕಾಲ ಹಾರ್ನಿಮನ್ ಭಾರತ ರಾಷ್ಟ್ರೀಯ ಆಂದೋಲನದಲ್ಲಿ ಮುಳುಗಿ ಹೋದರು. ಸತ್ವಶಾಲಿ ಸಂಪಾದಕರಾಗಿದ್ದ ಅವರು ಗಾಂಧಿಜಿಯವರ ಆದರ್ಶ ತತ್ವಗಳನ್ನು ಪ್ರಚಾರ ಮಾಡಿ ಭಾರತದ ಸ್ವಾತಂತ್ರ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದರು. ಅದರೊಡನೆ ಸರಕಾರಯಾವುದೇ ರೀತಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡುವುದನ್ನು ತಮ್ಮ ಕಾವಲುಗಣ್ಣುಗಳಿಂದ ಕಂಡು ಹಿಡಿದು ಅದನ್ನು ಖಂಡಿಸುತ್ತಿದ್ದರು.

“ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆ ಬ್ರಿಟಿಷರ ಪಕ್ಷ ವಹಿಸಿದ್ದಕ್ಕಾಗಿ ಅದನ್ನು ಹಾರ್ನಿಮನ್ “ಬೋರಬಂದರಿನ ಮುದುಕು” ಎಂದು ಲೇವಡಿ ಮಾಡಿದರು.  ಮಾಂಟೆಗ್ಯೂ ಚೆಲ್ಮ್ಸ್  ಫರ್ಡ್ ಸುಧಾರಣೆಗಳನ್ನು ತೀವ್ರವಾಗಿ ಟೀಕಿಸದರು. ಮೊದಲನೆಯ ದುಂಡು ಮೇಜಿನ ಪರಿಷತ್ತು ೧೭೩೦ರಲ್ಲಿ ಲಂಡನಿನಲ್ಲಿ ಸೇರಿದಾಗ ಅದನ್ನು ವರದಿ ಮಾಡಲು “ಬಾಂಬೆ ಕ್ರಾನಿಕಲ್” ತನ್ನ ಪ್ರತಿನಿಧಿಯನ್ನು ಕಳುಹಿಸಿತ್ತು. ಗೋಪಾಲಕೃಷ್ಣ ಗೋಖಲೆ, ಹಾರ್ನಿಮನ್ ಅವರು ತಮಗೆ  ನೀಡಿದ ಸಹಾಯವನ್ನು ಸ್ಮರಿಸಿದರು. ಮಹಾತ್ಮಾ ಗಾಂಧಿ ಅವರ ಬಗ್ಗೆ ಹೀಗೆ ಹೇಳಿದರು “ಶ್ರೀ ಹಾರ್ನಿಮನ್ ಧೈರ್ಯಶಾಲಿ ಹಾಗೂ ಉದಾರವಾದಿ ಇಂಗ್ಲಿಷ್ ಪ್ರಜೆ. ಅವರು ನಮಗೆ ನೀಡಿರುವ ಮಂತ್ರ ಸ್ವಾತಂತ್ರ್ಯ”. ಅಲಹಾಬಾದಿನ ಲೀಡರ್ ಪತ್ರಿಕೆ ೧೯೩೩ರಲ್ಲಿ ಶ್ರೀ ಹಾರ್ನಿಮನ್ ವೃತ್ತಿಯ ಏರುಪೇರುಗಳನ್ನು ಧೀಮಂತಿಕೆಯಿಂದ ಅನುಭವಿಸಿದ ಪ್ರಯತ್ನಶೀಲ ಹಾಗೂ ಎಂದಿಗೂ ಕುಂದದ ಉತ್ಸಾಹದ ಪತ್ರಕರ್ತ ಮತ್ತು ಅನುಭವಿ ಕಲಾಕಾಲ” ಎಂದು ಬರೆಯಿತು. ಶಂಕರ್ಸ್ ವೀಕ್ಲಿ “ಭಾರತಕ್ಕೆ ಇಂಗ್ಲೆಂಡ್ ನೀಡಿದ ಅತ್ಯಂತ ಭಾರೀ ಹಾಗೂ ನಿಜವಾದ ಕಾಣಿಕೆ” ಎಂದು ಹಾರ್ನಿಮನ್ ಅವರನ್ನು ಪ್ರಶಂಸಿಸಿತು.

ಬೇರೆಯವರು ಪತ್ರಿಕೆಗಳನ್ನು ಹೊರಡಿಸುವುದನ್ನು ಹಾರ್ನಿಮನ್ ಪ್ರೋತ್ಸಾಹಿಸುತ್ತಿದ್ದರು. ಮೊತಿಲಾಲ್ ನೆಹರು “ಇಂಡಿಪೆಂಡೆಂಟ್” ಎಂಬ ಪತ್ರಿಕೆಯನ್ನು ಆರಂಭಿಸಿದಾಗ ಅದರ ಮೇಲ್ವಿಚಾರಣೆಯನ್ನು ನೋಡಿಕೊಂಡರು. “ಬಾಂಬೆ ಕ್ರಾನಿಕಲ್” ಪತ್ರಿಕೆಗೆ ಪೂರಕವಾಗಿ ಹಾರ್ನಿಮನ್ ಅವರ ನೇತೃತ್ವದಲ್ಲಿ “ಬಾಂಬೆ ಸೆಂಟಿನೆಲ್” ಎಂಬ ಸಂಜೆ ಪತ್ರಿಕೆ ಹೊರಟಿತು. ಎರಡೂ ಪತ್ರಿಕೆಗಳೂ ಒಟ್ಟಿಗೆ ೧೯೫೯ರಲ್ಲಿ  ಮುಚ್ಚಿಹೋದವು.

ಕಡೆಯ ದಿನಗಳು

ಬಿ.ಜಿ.ಹಾರ್ನಿಮನ್ ಅವರು ಭಾರತಕ್ಕೆ ಸಲ್ಲಿಸಿದ ಸೇವೆಯ ನೆನಪಿಗೆ ಮುಂಬಯಿ ನಗರದ ಮಹಾಜನತೆ ೩೫,೦೦೦ ರೂಪಾಯಿ ಕಾಣಿಕೆಯನ್ನು ಅರ್ಪಿಸಿತು. ಆದರೆ ಕೊಡುಗೈ ದಾನಿಯಾದ ಅವರು ತಮ್ಮ ಕೊನೆಯ ದಿನಗಳನ್ನು ಬಡತನದಲ್ಲಿ ಕಳೆದು ಅನಾಥರಂತೆ ಮೃತಪಟ್ಟರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಮುಡುಪಾಗಿಟ್ಟರೂ ಅವರ ಕಷ್ಟಕಾಲದಲ್ಲಿ ಅವರನ್ನು ತೀರಾ ಹತ್ತಿರದಿಂದ ಅರಿತಿದ್ದ ಅನೇಕ ಮಂದಿ ಸ್ನೇಹಿತರೂ ನೆರವಿಗೆ ಬರದೆ ಇದ್ದುದು ವಿಧಿಯ ಅಣಕ. ತೀವ್ರವಾದ ಡಯೋರಿಯಾ ಕಾಯಿಲೆಯಿಂದ ಸ್ವಲ್ಪಕಾಲ ಅಸ್ವಸ್ಥರಾದ ಹಾರ್ನಿಮನ್ ಮರೀನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆಗ ಅವರ ಬಳಿ ಔಷಧೋಪಚಾರಕ್ಕಾಗಿಯೂ ಕೆಲವೇ ರೂಪಾಯಿಗಳೂ ಇರಲಿಲ್ಲ ಎಂಬುದು ಈ ರಾಷ್ಟ್ರದ ಉನ್ನತ ಪರಂಪರೆಗೆ ಕಳಂಕ ತರುವಂತಹ ಸಂಗತಿಯಾಗಿದೆ. ಹಾರ್ನಿಮನ್ ೧೯೪೮ರ ಅಕ್ಟೋಬರ್ ೧೬ ರಂದು ನಿಧನರಾದಾಗ ಅವರಿಗೆ ೭೫ ವರ್ಷ ವಯಸ್ಸು. ಸುದ್ದಿ ಕೇಳಿದ ಮುಂಬಯಿ ನಗರದ ಮೇಲೆ ದುಃಖದ ಕಾರ್ಮೋಡಗಳು ಆವರಿಸಿದವು.

ವ್ಯಕ್ತಿತ್ವ

ಹಾರ್ನಿಮನ್ನರದು ಬಹು ಚೈತನ್ಯ ಧೀರ ವ್ಯಕ್ತಿತ್ವ. ನ್ಯಾಯಾಲಯವಾಗಲಿ ಸರಕಾರದವರಾಗಲಿ, ಮಂತ್ರಿಯಾಗಲಿ ತಪ್ಪು ಮಾಡಿದುದನ್ನು ಕಂಡರೆ ನಿರ್ಭಯವಾಗಿ ಅದನ್ನು ಹೊರಗೆಳೆಯುತ್ತಿದ್ದರು. ಆದರೆ ಸಾಮಾನ್ಯವಾಗಿ ಯಾವ ಶಾಸನದ ಪ್ರಕಾರವೂ ತಮ್ಮದು ತಪ್ಪು ಎನ್ನಲು ಸಾಧ್ಯವಾಗದ ಹಾಗೆ ಬುದ್ಧಿವಂತಿಕೆಯಿಂದ ಬರೆಯುತ್ತಿದ್ದರು. ನ್ಯಾಯಾಲಯದಲ್ಲಿ ಸರಕಾರ ಅವರ ವಿರುದ್ಧ ಮೊಕದ್ದಮೆ ಹೂಡಿದಾಗ ಅವರು ವಕೀಲರನ್ನು ನೇಮಿಸಿಕೊಳ್ಳುತ್ತಿರಲಿಲ್ಲ. ತಾವೇ ತಮ್ಮ ಪರ ವಾದ ಮಾಡುತ್ತಿದ್ದರು. ತಮ್ಮ ಸಹೋದ್ಯೋಗಿಗಳೊಡನೆ ಬಹು ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಕಿರಿಯ ಸಹೋದ್ಯೋಗಿಗಳಿಗೆ ತುಂಬಾ ಸಂತೋಷದಿಂದ ಮಾರ್ಗದರ್ಶನ ಮಾಡುತ್ತಿದ್ದರು. ತಮ್ಮ ಸಹೋದ್ಯೋಗಿಗಳಿಗಾಗಿ ಖರ್ಚು ಮಾಡುತ್ತಿದ್ದರು. ತಮಗೆ ಹಣ ಬೇಕಾದಾಗ ಅಷ್ಟೇ ಸಲಿಗೆಯಿಂದ ಕೇಳುತ್ತಿದ್ದರು. ಹಣವನ್ನು ಖರ್ಚು ಮಾಡುವುದರಲ್ಲಿ ಅವರದು ಬಹು ಧಾರಾಳ; ಇದರಿಂದಾಗಿ ಅನೇಕ ಮಂದಿ ಸಾಲಕ್ಕಾಗಿ, ಊಟ ತಿಂಡಿಗಳಿಗಾಗಿ ಅವರನ್ನು ಸುತ್ತುವರೆದಿರುತ್ತಿದ್ದರು. ಇತರರಿಗೆ ಸಹಾಯ ಮಾಡುವುದರಲ್ಲಿ ಮತ್ತು ತಮ್ಮ ಧಾರಾಳವಾದ ಖರ್ಚಿನಿಂದ ಅವರು ಮತ್ತೆ ಮತ್ತೆ ಸಾಲ ಮಾಡಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು.

ಬೆಂಜಮನ್ ಹಾರ್ನಿಮನ್ ಮಾನವೀಯ ಅನುಕಂಪದ ಸಾಕಾರಮೂರ್ತಿ ಆಗಿದ್ದರು. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಕಾಳಜಿ. ಇಡೀ ದೇಶವೇ ಇನ್‌ಫ್ಲುಯೆಂಜಾ ರೋಗಕ್ಕೆ ತುತ್ತಾದಾಗ ಮುಂಬಯಿಯ ಕೊಳಚೆ ಪ್ರದೇಶಗಳಲ್ಲಿ ರೋಗಕ್ಕೆ  ತುತ್ತಾದವರ ನೆರವಿಗೆ ಪರಿಹಾರ ಕಾರ್ಯಗಳನ್ನು ಸಂಘಟಿಸಿದರು. ಅದರಿಂದ ಅವರನ್ನು ಮುಂಬಯಿ ನಗರದ ಜನತೆ “ಬಿ.ಜಿ. ಚಿಕ್ಕಪ್ಪ” ಎಂಬ ಪ್ರೀತಿಯ ಅಡ್ಡ ಹೆಸರಿನಿಂದ ಕರೆಯಿತು. ಜೊತೆಗೆ ಹಾರ್ನಿಮನ್ ಅಧಿಕಾರಿಗಳನ್ನು ಪೂಜಿಸುವುದನ್ನು ವಿರೋಧಿಸುತ್ತಿದ್ದರು. ಲಾರ್ಡ್ ವೆಲಿಂಗ್‌ಡನ್ ಭಾರತೀಯರ ದೃಷ್ಟಿಯಲ್ಲಿ ಅತ್ಯಂತ ಹೆಚ್ಚು ದ್ವೇಷಿಸಲ್ಪಟ್ಟ ವೈಸರಾಯ್. ಆತನಿಗೆ ಕೆಲವು ಚೇಲಾಗಳು ಸ್ಮಾರಕವೊಂದನ್ನು ನಿರ್ಮಿಸಲು ಹೊರಟಾಗ ಅದನ್ನು ಹಾರ್ನಿಮನ್ ಪ್ರಬಲವಾಗಿ  ಖಂಡಿಸಿದರು.

ಶಿಷ್ಯರು, ಮೆಚ್ಚಿದವರು, ಎಲ್ಲರ ಕೃತಜ್ಞತೆ

ಪತ್ರಿಕೋದ್ಯಮ ಶಿಕ್ಷಣದಲ್ಲಿ ಹಾರ್ನಿಮನ್ ಅವರಿಗೆ ಅಪಾರ ನಂಬಿಕೆ. ಹೆಸರಾಂತ ಹೋರಾಟಗಾರರಾದ ದಿವಾನ್ ಚಮನ್‌ಲಾಲ್, ಡಾಕ್ಟರ್ ಸೈಯ್ಯದ ಹುಸೇನ್, ಸೈಯ್ಯದ್ ಅಬ್ದುಲ್ಲಾ ಬ್ರೆಲ್ವಿ, ಆರ್.ಕೆ. ಪ್ರಭು, ಎನ್.ಪಿ. ತ್ಯಾಗರಾಜನ್, ಎ, ಸುಬ್ಬರಾವ್, ಕೆ. ರಾಮರಾವ್ ಮುಂತಾದವರೆಲ್ಲ ಇವರ ಪತ್ರಿಕಾ ಗರಡಿಯಲ್ಲಿ ತಯಾರಾದವರೇ. ಯಾರನ್ನೂ ಬೇಕಾದರೂ ಪತ್ರಕರ್ತನನ್ನಾಗಿ ಮಾಡಬಲ್ಲೆ ಎಂದು ಆತ್ಮ ವಿಶ್ವಾಸದಿಂದ ಸವಾಲು ಹಾಕುತ್ತಿದ್ದರು. ಕೆ. ರಾಮರಾಯರು ತಮ್ಮ ಒಂದು ಪುಸ್ತಕದಲ್ಲಿ ಹೇಳುತ್ತಾರೆ- “ಹಾರ್ನಿಮನ್ ಬಹು ದೊಡ್ಡ ಉಪಸಂಪಾದಕನ ಅಥವಾ ವರದಿಗಾರನ ದಾರಿಯನ್ನೇ ಬೆಳಗುವಂತಹ ಸೂಚನೆಗಳನ್ನು ಕೊಡುತ್ತಿದ್ದರು. ತಮ್ಮ ಕೊಠಡಿಯಲ್ಲಿ ಕುಳಿತೇ ಅವರು ಮುಂಬಯಿಯ ರಾಜಕೀಯ ಆಗುಹೋಗುಗಳನ್ನೆಲ್ಲ ಯೋಗ್ಯವಾದದ್ದು, ಅಯೋಗ್ಯವಾದದ್ದು ಎಂದು ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದರು.” ಅವರೇ ಹೇಳುತ್ತಾರೆ “ಹಾರ್ನಿಮನ್ ರೇ ಪತ್ರಿಕೋದ್ಯಮದ ಒಂದು ಶಾಲೆಯಂತಿದ್ದರು ಎಂದು” ಅವರು ಬ್ರಿಟಿಷ್ ಬ್ರಿಟಿಷ್ ಸರಕಾರದಲ್ಲಿ ಮಂತ್ರಿಯಾಗಿದ್ದ ಮಾಂಟೆಗ್ಯೂ ಎಂಬಾತನ ನೀತಿಯನ್ನು ಕಟುವಾಗಿ ಆಕ್ಷೇಪಿಸುತ್ತಿದ್ದರು. ಅವರ ದಸ್ತಗಿರಿ ಆದಾಗ, ಸರ್ಕಾರ ಅವರನ್ನು ಬಂಧಿಸಿದ್ದು ಸರಿ ಎಂದು ಇಂಗ್ಲಂಡಿನ ಪಾರ್ಲಿಮೆಂಟಿನಲ್ಲಿ ವಾದ ಮಾಡಿದವನು ಮಾಂಟೆಗ್ಯೂ. ಇದೇ ಮಾಂಟೆಗ್ಯೂ “ಭಾರತದಲ್ಲೆಲ್ಲಾ ಶ್ರೇಷ್ಠ ರೀತಿಯಲ್ಲಿ ಸಂಪಾದಿತವಾಗುವ ಪತ್ರಿಕೆ ಬಾಂಬೆ ಕ್ರಾನಿಕಲ್ ಎಂದು ಒಮ್ಮೆ ಹೇಳಿದ. ಅವರ ಸ್ಮರಣೆಗಾಗಿ ಮುಂಬಯಿಯಲ್ಲಿ ಹಾರ್ನಿಮನ್ ಪತ್ರಿಕೋದ್ಯಮ ಕಾಲೇಜನ್ನು ಸ್ಥಾಪಿಸಲಾಗಿದೆ. ಅದರ ಸ್ಥಾಪಕರು ಪಿ.ಜಿ. ರಾವ್. ಅಮೆರಿಕೆಯಲ್ಲಿ ಹಲವು ವರ್ಷಗಳ ಕಾಲ ಇದ್ದು, ಅಲ್ಲಿನ ಪತ್ರಿಕಾ ಶಿಕ್ಷಣ ವಿಧಾನವನ್ನು ಅರಿತಿದ್ದ ರಾವ್ ಭಾರತದಲ್ಲಿಯೂ ಪತ್ರಿಕೋದ್ಯಮಿಗಳನ್ನು ರೂಪಿಸಲು ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದರು. ಅವರಿಗೆ ಬೆನ್ನು ತಟ್ಟಿ ಉತ್ತೇಜನ ನೀಡಿದವರು ಡಾ. ಎನ್.ಎಸ್. ಹರ್ಡಿಕರ್ ಮತ್ತು ಡಾ. ತಾರಕಾನಾಥ್ ದಾಸ್.

ಪಿ.ಜಿ. ರಾವ್ ೧೯೩೬ರಲ್ಲಿ ಮೊದಲ ಬಾರಿಗೆ ಹಾರ್ನಿಮನರನ್ನು ಭೇಟಿ ಮಾಡಿತಮ್ಮ ಈ ಉದ್ದೇಶವನ್ನು ವಿವರಿಸಿದರು. ಆ ಕಾಲದಲ್ಲಿ ಭಾರತದಲ್ಲೆಲ್ಲೂ ಪತ್ರಿಕಾ ಶಿಕ್ಷನ ಸಂಸ್ಥೆ ಇರಲಿಲ್ಲ. ಕೂಡಲೇ ಹಾರ್ನಿಮನ್ ತಮ್ಮ ಬೆಂಬಲ ಸೂಚಿಸಿದರು. ಹೀಗೆ ಅಮೆರಿಕನ್ ಕಾಲೇಜ್ ಆಫ್ ಜರ್ನಲಿಸಂ ಎಂಬ ಅಭಿದಾನದಿಂದ ಸಂಸ್ಥೆ ಆರಂಭವಾಯಿತು. ಇದಕ್ಕೆ “ಫ್ರೀ ಪ್ರೆಸ್ ಜರ್ನಲ್” ಪತ್ರಿಕೆಯ ಸ್ಥಾಪಕ ಎಸ್. ಸದಾನಂದ, ಜನ್ಮ ಭೂಮಿ ಪತ್ರಿಕಾ ಗುಂಪಿನ ಸ್ಥಾಪಕ ಅಮೃತ್ ಲಾಲ್ ಸೇಠ್, ಬಾಂಬೆ ಕ್ರಾನಿಕಲ್ ಗುಂಪಿನ ಎಂ. ಎನ್. ಕಾಮಾ ಅವರ ಆಶಿರ್ವಾದವೂ ಇತ್ತು. ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಜಿ. ಎಂ. ಕುಮಾರಪ್ಪ ಸಂಸ್ಥೆಯನ್ನು ಉದ್ಘಾಟಿಸಿದರು. ಸ್ವತಃ ಹಾರ್ನೀಮನ್ ಅವರು ಒಂದು ಉಪನ್ಯಾಸಮಾಲಿಕೆಯ ಪ್ರಾರಂಭೊತ್ಸವವನ್ನು ನೆರವೇರಿಸಿದರು.

 

ಬಿ. ಜಿ. ಚಿಕ್ಕಪ್ಪ

ಹಾರ್ನಿಮನ್  ಅವರ ಪತ್ರಿಕಾ ಸೇವೆಯ ಚಿನ್ನದ ಹಬ್ಬದ ನೆನಪಿಗೆ ೧೯೪೪ರಲ್ಲಿ ಮುಂಬಯಿ ಜನತೆ ಅನೇಕ ಸಮಾರಂಭಗಳನ್ನು ನಡೆಸಿ ಸತ್ಕರಿಸಿತು. ಆಗಲೇ ಅವರಿಗೆ ೩೫,೦೦೦ ರೂಪಾಯಿಗಳ ನಿಧಿಯನ್ನು ಸಮರ್ಪಿಸಿದ್ದು.  ಆಗ ಅಮೆರಿಕನ್ ಕಾಲೇಜು ಆಫ್ ಜರ್ನಲಿಸಮ್ ಸಹ ಅವರನ್ನು ಸನ್ಮಾನಿಸಿತು. ಇದರ ಸ್ಮರಣಾರ್ಥವಾಗಿ ಸಂಸ್ಥೆಯ ಹೆಸರನ್ನು ಹಾರ್ನಿಮನ್ ಕಾಲೆಜ್‌ ಆಫ್ ಜರ್ನಲಿಸಮ್ ಎಂದು ಬದಲಾಯಿಸಲಾಯಿತು. ಇಲ್ಲಿಯವರೆಗೆ ಈ ಸಂಸ್ಥೆ ಪತ್ರಿಕೋದ್ಯಮದಲ್ಲೇ ೩೦೦೦ ಕ್ಕೂ ಹೆಚ್ಚಿನ ಶಿಕ್ಷಣಾರ್ಥಿಗಳನ್ನು ತರಬೇತುಗೊಳಿಸಿದೆ.

ಹಾರ್ನಿಮನ್ ಅವರ ಸೇವೆಯ ನೆನಪಿಗೆ ಅವರ “ಬಾಂಬೆ ಕ್ರಾನಿಕಲ್” ಪತ್ರಿಕೆಯ ಕಚೇರಿ ಇದ್ದ ಸ್ಥಳಕ್ಕೆ ಮುಂಬಯಿ ನಗರ ಪಾಲಿಕೆ “ಹಾರ್ನಿಮನ್ ವೃತ್ತ” ಎಂಬ ಹೆಸರಿಟ್ಟು ಗೌರವ ಸೂಚಿಸಿತು.

ಧೀರ ವಿಚಾರವಾದಿ ವಿಶ್ವಮಾನವ

ಹಾರ್ನಿಮನ್ನರು ಹುಟ್ಟಿದ್ದು ಇಂಗ್ಲಂಡಿನಲ್ಲಿ. ಭಾರತವನ್ನು ಆಳುತ್ತಿದ್ದ ದೇಶದಲ್ಲಿ. ನಿಜವಾಗಿ ಅವರು ವಿಶ್ವಮಾನವರು. ಒಂದು ದೇಶಕ್ಕೆ ಸೇರಿದವರಲ್ಲ. ಎಲ್ಲೆಡೆಯಲ್ಲಿ ಅವರು ವಿರೋಧಿಸಿದ್ದು ಅನ್ಯಾಯವನ್ನು. ಕ್ರೌರ್ಯವನ್ನು, ಮನುಷ್ಯರೆಲ್ಲ ಒಂದೇ. ಅನ್ಯಾಯ ಯಾವ ದೇಶದಲ್ಲೇ ನಡೆಯಲಿ, ಯಾರಿಂದಲೇ ನಡೆಯಲಿ ಅದು ಅನ್ಯಾಯವೇ. ಇಂತಹ ವಿಶಾಲವಾದ  ದೃಷ್ಟಿಯನ್ನು ಇಟ್ಟುಕೊಂಡು, ಲೇಖನಿಯನ್ನೇ ಖಡ್ಗವನ್ನಾಗಿ ಮಾಡಿಕೊಂಡು ಹೋರಾಡಿದ ಧೀರರು ಅವರು. ಒಮ್ಮೆ ಬ್ರಿಟಿಷ್ ಸರಕಾರದ ತೀರ್ಮಾನಕ್ಕೆ ವಿರುದ್ಧವಾಗಿ ಭಾರತದ ಜನ ಚಳವಳಿಯನ್ನು ಪ್ರಾರಂಭಿಸಿದರು. ಹಾರ್ನಿಮನ್ನರು ಇದಕ್ಕೆ ಬೆಂಬಲ ನೀಡಿದರು.

ಬೆಂಜಮಿನ್ ಗೈ ಹಾರ್ನಿಮನ್ ಭಾರತದ  ಪತ್ರಿಕಾಕ್ಷೇತ್ರ ಮತ್ತು ರಾಜಕೀಯ ಹೋರಾಟದಲ್ಲಿ ನೇರಪಾತ್ರ ವಹಿಸಿದ ಮಹಾನ್ ಆದರ್ಶವಾದಿ. ವಿದೇಶಿಯನಾದರೂ ಭಾರತೀಯನಾದ ಅಸಮಾನ ವಿಚಾರವಾದಿ.