ಎಂಭತ್ತು ವರ್ಷಗಳ ವಯೋವೃದ್ಧರಾದ ಶ್ರೀ ಬಿ.ಡಿ. ಲಕ್ಷ್ಮಣ್‌ ಸಂಗೀತಗಾರರ ಮನೆತನದಿಂದ ಬಂದವರು. ತಂದೆ ಆಸ್ಥಾನ ವಿದ್ವಾನ್‌ ಗಾನವಿಶಾರದ ಡಾ.ಬಿ. ದೇವೇಂದ್ರಪ್ಪನವರು. ತಂದೆಯವರಿಂದಲೇ ಸಂಗೀತ ಶಿಕ್ಷಣ. ಅವರ ಜೊತೆಯಲ್ಲೇ ದೇಶಾದ್ಯಂತ ಸಹಗಾಯನ ಮಾಡುತ್ತಾ ಬಂದ ಲಕ್ಷ್ಮಣ್‌ ಅವರು ನಂತರ ತನಿಯಾಗಿಯೂ ಪ್ರಬುದ್ಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದರು. ಮೈಸೂರು ಅರಮನೆಯ ಕಾರ್ಯಕ್ರಮದಲ್ಲಿ ಆಸ್ಥಾನ ವಿದ್ವಾಂಸರುಗಳ ಜೊತೆ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಶ್ರೀಯುತರು ಪಡೆಯುತ್ತಿದ್ದರು.

ಕರ್ನಾಟಕ ಸಂಗೀತದಲ್ಲಿ ಆ ಕಾಲದಲ್ಲೇ ವಿದ್ವತ್‌ ಪದವಿ ಗಳಿಸಿದ್ದವರು ಲಕ್ಷ್ಮಣ್‌. ಹಾಡುಗಾರಿಕೆಯ ಜೊತೆಗೆ ವೀಣೆ, ಹಾರ್ಮೋನಿಯಂ, ಜಲತರಂಗ ಮತ್ತು ಪಿಟೀಲು ವಾದ್ಯಗಳಲ್ಲೂ ಶ್ರೀಯುತರಿಗೆ ಪರಿಶ್ರಮವಿದೆ. ನ್ಯಾಯಶಾಸ್ತ್ರದಲ್ಲೂ ಪದವಿ ಪಡೆದು ಮೈಸೂರು ಮತ್ತು ಬೆಂಗಳೂರುಗಳ ಮಹಾರಾಣಿ ಕಲಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಮುಖ್ಯಸ್ಥರಾಗಿ ಮತ್ತು ಪ್ರೊಫೆಸರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಸರ್ಕಾರ ನಡೆಸುವ ಸಂಗೀತ ಪರೀಕ್ಷೆಗಳ ಪರಿವೀಕ್ಷಕರಾಗಿ ಲಕ್ಷ್ಮಣ್ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಶ್ರೀಯುತರು ಬರೆದಿರುವ ‘ಕರ್ನಾಟಕ ಸಂಕೀತ ಶಾಸ್ತ್ರಸಾರ’ ಎಂಬ ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ್ದು ಇದು ಕರ್ನಾಟಕ ಸಂಗೀತಾಭ್ಯಾಸಿಗಳಿಗೆ ಆಕರ ಗ್ರಂಥ ಎಂದು ವಿದ್ವಾಂಸರುಗಳು ಅಭಿಪ್ರಾಯ ಪಟ್ಟಿದ್ದಾರೆ.

ಹಲವು ಸಂಗೀತ ಸಂಸ್ಥೆಗಳಿಂದ ‘ಗಾನ ವಿಶಾರದ’, ‘ಗಾಯಕ ಭೂಷಣ’, ‘ಸಂಗೀತ ಕಲಾ ವಿಚಕ್ಷಣ’ ಮುಂತಾದ ಗೌರವಗಳಿಂದ ಪುರಸ್ಕರಿಸಲ್ಪಟ್ಟಿರುವ ಹಿರಿಯ ವಿದ್ವಾಂಸರಾದ ಶ್ರೀ ಬಿ.ಡಿ. ಲಕ್ಷ್ಮಣ್‌ ಅವರಿಗೆ ೨೦೦೬-೦೭ ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.