ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತಿನಲ್ಲೂ ಹಲವು ವಾದ್ಯಗಳಲ್ಲಿ ಪರಿಣತಿ ಪಡೆದವರೆಂಬ ದಾಖಲೆಯನ್ನೇ ನಿರ್ಮಿಸಿದ್ದ ಡಾ|| ಬಿ. ದೇವೇಂದ್ರಪ್ಪನವರ ಸುಪುತ್ರರಾಗಿ ೧೦-೪-೧೯೨೪ ರಲ್ಲಿ ಮೈಸೂರಿನಲ್ಲಿ ಜನಿಸಿದವರು ವೇಣುಗೋಪಾಲ್‌. ಇಡೀ ಮನೆತನವೇ ಸಂಗೀತಮಯವಾಗಿದ್ದುದು ವೇಣುಗೋಪಾಲ್‌ ಅವರಲ್ಲಿ ಸಹಜವಾಗಿಯೇ ಸಂಗೀತಾಸಕ್ತಿ ಮೂಡಿಸಿ ಬೆಳೆಸಿತು. ತಂದೆಯವರ ಮಾರ್ಗದರ್ಶನದಲ್ಲಿ ಜಲತರಂಗ್‌ ವಾದನದಲ್ಲಿ ಪ್ರಾವೀಣ್ಯತೆ ಪಡೆದು ಮೈಸೂರು ಆಕಾಶವಾಣಿಯಲ್ಲಿ ಜಲತರಂಗ ಕಲಾವಿದರಾಗಿ ಮೂವತ್ತೆಂಟು ವರ್ಷಗಳು ಸೇವೆ ಸಲ್ಲಿಸಿದರು. ಉದ್ಘೋಷಕರಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದು.

ತಂದೆ ಹಾಗೂ ಚಿಕ್ಕಪ್ಪಂದಿರ ಶಿಕ್ಷಣದಲ್ಲಿ ಗಾಯನದಲ್ಲೂ ಸಾಮರ್ಥ್ಯ ಪಡೆದರಾದರೂ ವಿಖ್ಯಾತರಾದದ್ದು ಜಲತರಂಗ್‌ ವಾದನದಿಂದಲೇ. ನಾಡಿನ ಹಾಗೂ ನೆರೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ಇವರ ಕಾರ್ಯಕ್ರಮ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

‘ನಾದ ಕೋಕಿಲ’, ‘ಜಲತರಂಗ ವಾದನ ಪ್ರವೀಣ’ ‘ಜಲತರಂಗ ನಾದಯೋಗಿ’, ‘ಜಲತರಂಗ ಚಕ್ರವರ್ತಿ’ ಮುಂತಾದ ಹಲವಾರು ಗೌರವಗಳಿಗೆ ಪಾತ್ರರಾದ ಇವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಸಂದಿತು.

ಸಾರ್ಥಕ ಜೀವನಾ ನಂತರ ಶ್ರೀಯುತರು ಕಾಲಗತಿಯನ್ನು ಹೊಂದಿದರು. ಇವರ ನಿಧನದಿಂದ ಕ್ಷೇತ್ರವು ಒಬ್ಬ ವಿಶಿಷ್ಟ  ಕಲಾವಿದನನ್ನು ಕಳೆದುಕೊಂಡಿತು.