ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಚಿತ್ರದುರ್ಗದ ಮದಕರಿ ನಾಯಕರ ವಂಶಸ್ಥರಾದ ಬಿ. ದೇವೇಂದ್ರಪ್ಪನವರು ಐದು ವರ್ಷದ ಬಾಲಕನಾದಾಗಿನಿಂದಲೂ ಸಂಗೀತದಲ್ಲಿ ಆಸಕ್ತಿ ಅಭಿರುಚಿಗಳನ್ನು ಪ್ರದರ್ಶಿಸಿದರು. ತತ್ಫಲವಾಗಿ ಸಂಗೀತ ಶಾಸ್ತ್ರ ಪ್ರವೀಣರಾಗಿದ್ದ ತಂದೆ ಶ್ರೀ ಬಿ.ಎಸ್‌.ರಾಮಯ್ಯನವರು ಗಾಯನ-ವಾದನಗಳೆರಡರಲ್ಲೂ ಪುತ್ರನಿಗೆ ಶಿಕ್ಷಣವಿತ್ತು ಹದಿನೈದು ವರ್ಷದ ಯುವಕನಾಗಿರುವಾಗಲೇ ಕಛೇರಿ ಮಾಡುವ ಸಾಮರ್ಥ್ಯವನ್ನು ಅವರಿಗೆ ದೊರಕಿಸಿಕೊಟ್ಟರು.

ಸಂಗೀತದಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿಯೂ ರಾಜಾಶ್ರಯವನ್ನು ಹೊಂದಲು ದೇವೇಂದ್ರಪ್ಪ ಮೈಸೂರಿಗೆ ಬಂದು ಬಿಡಾರಂ ಕೃಷ್ಣಪ್ಪನವರಲ್ಲಿ ಗಾಯನವನ್ನು, ವೀಣೆ ಶೇಷಣ್ಣ-ಸುಬ್ಬಣ್ಣನವರಲ್ಲಿ ವಾದ್ಯ ವಾದನವನ್ನೂ ಪರಿಶ್ರಮದಿಂದ ಸಾಧಿಸಿದರು. ೧೯೨೨ರಲ್ಲಿ ಮೈಸೂರು ಆಸ್ಥಾನ ವಿದ್ವಾಂಸರಾದರು. ಕರ್ನಾಟಕ ಪದ್ಧತಿಯಂತೆಯೇ ಹಿಂದೂಸ್ಥಾನಿ ಪದ್ಧತಿಯ ಸಂಗೀತದಲ್ಲೂ ಸಾಧನೆ ಮಾಡಿದ್ದರು. ಜೊತೆಗೆ ವೀಣೆ, ಜಲತರಂಗ್‌, ಪಿಟೀಲು, ಗೋಟುವಾದ್ಯ, ದಿಲ್‌ರುಬಾ ಇತ್ಯಾದಿ ವಾದ್ಯಗಳನ್ನು ನುಡಿಸುವುದರಲ್ಲೂ ಸಾಕಷ್ಟು ಪರಿಣತಿ ಪಡೆದಿದ್ದರು.

೧೯೪೬ರಲ್ಲಿ ಮೈಸೂರು ಅರಸರಿಂದ ‘ಗಾನ ವಿಶಾರದ’ ಬಿರುದು ಪಡೆದುದರ ಜೊತೆಗೆ ದೇಶದ ಹಲವೆಡೆ ಕಛೇರಿ ನಡೆಸಿ ಪುರಸ್ಕೃತರಾದರು. ಸಾಂಸ್ಕೃತಿಕ ನಿಯೋಗ ಒಂದರ ಸದಸ್ಯರಾಗಿ ೧೯೫೩ರಲ್ಲಿ ಚೀನಾ ದೇಶದ ಪ್ರವಾಸ ಮಾಡಿದ ಇವರಿಗೆ ೫೪-೫೫ರಲ್ಲಿ ಕೇಂದ್ರ ನಾಟಕ ಅಕಾಡೆಮಿಯ ಆಶ್ರಯದಲ್ಲಿ ಮತ್ತು ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮದಲ್ಲೂ ಕಛೇರಿ ಮಾಡುವ ಅವಕಾಶ ಲಭಿಸಿತು.

ದೇವೇಂದ್ರಪ್ಪ ಕನ್ನಡದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಹಲವಾರು ದಾಸ ಪದಗಳಿಗೂ ವಚನಗಳಿಗೂ, ವರ್ಣಮಟ್ಟು ರಚಿಸಿದ್ದಾರೆ. ತಮ್ಮ ಮಾರುತಿ ಕಲಾ ಶಾಲೆಯ ಮೂಲಕ ಹಲವಾರು ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿ ನಂದದ ನಂದಾದೀಪವನ್ನು ಬೆಳಗಿಸಿದ್ದಾರೆ. ಮಾರುತಿಯ ಆರಾಧಕರಾಗಿದ್ದ ಇವರು ಹನುಮಜ್ಜಯಂತ್ಯುತ್ಸವವನ್ನು ಬಹು ಆದ್ದೂರಿಯಿಂದ ನಡೆಸುತ್ತ ಸುಪ್ರಸಿದ್ಧ ಕಲಾವಿದರ ಸಂಗೀತ ಕಛೇರಿಗಳನ್ನು  ಏರ್ಪಡಿಸುವ ಮೂಲಕ ರಸಿಕರಿಗೆ ನಾದ ಗರಿಗೆಯ ಮಜ್ಜನವನ್ನೇ ದೊರಕಿಸುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸಂಗೀತ ನಾಟಕ ಅಕಾಡೆಮಿಗಳಿಂದ ಪುರಸ್ಕೃತರಾಗಿದ್ದ ಈ ನಾದತಪಸ್ವಿ ೬-೬-೧೯೮೬ ರಂದು ಇಹವನ್ನು ತ್ಯಜಿಸಿದರು.